Tag: villagers

  • ಆನೆಗೊಂದಿ ಉತ್ಸವಕ್ಕೆ ರಂಗವಲ್ಲಿಯ ಮೆರುಗು -ಜಾತಿ, ಧರ್ಮ, ಭಾಷೆಗಳ ಎಲ್ಲೆ ಮೀರಿದ ಸಂಭ್ರಮ

    ಆನೆಗೊಂದಿ ಉತ್ಸವಕ್ಕೆ ರಂಗವಲ್ಲಿಯ ಮೆರುಗು -ಜಾತಿ, ಧರ್ಮ, ಭಾಷೆಗಳ ಎಲ್ಲೆ ಮೀರಿದ ಸಂಭ್ರಮ

    ಕೊಪ್ಪಳ: ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಸುತ್ತಲಿನ ಗ್ರಾಮಸ್ಥರು ರಂಗವಲ್ಲಿಯ ಮೆರುಗು ನೀಡಿ ಸಂತಸ ವ್ಯಕ್ತಪಡಿಸಿದ್ದು, ಜಾತಿ, ಧರ್ಮ, ಭಾಷೆ ಮತ್ತಿತರ ಗಡಿಗಳ ಎಲ್ಲೆ ಮೀರಿ ಭಾವೈಕ್ಯತೆ ಮೆರೆದಿದ್ದಾರೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಮತ್ತು ಸಾಣಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಮುಖ್ಯ ಬೀದಿಯುದ್ದಕ್ಕೂ ಬಣ್ಣಬಣ್ಣದ ರಂಗೋಲಿಗಳು ರಾರಾಜಿಸುತ್ತಿವೆ. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ, ಸಾರಿಸಿ ಸಿಂಗರಿಸಲಾಗಿದೆ. ಪ್ಲಾಸ್ಟಿಕ್ ಫ್ಲೆಕ್ಸ್, ವಿನೈಲ್ ಬಳಕೆ ಕಡಿಮೆ ಮಾಡಿ ಮಾವಿನ ತೋರಣ, ಬಾಳೆ ಕಂಬಗಳಿಂದ ಗ್ರಾಮಸ್ಥರು ತಮ್ಮ ಊರುಗಳನ್ನು ಅಲಂಕರಿಸಿಕೊಂಡಿರುವುದು ವಿಶೇಷವಾಗಿದೆ.

    ಜಾತಿ, ಧರ್ಮ, ಭಾಷೆ ಮತ್ತಿತರ ಗಡಿಗಳ ಎಲ್ಲೆ ಮೀರಿ ಹಿಂದೂ-ಮುಸ್ಲಿಂ-ಕ್ರೈಸ್ತ ಕುಟುಂಬಗಳು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಭಾವೈಕ್ಯತೆ ಮೆರೆಯುತ್ತಿರುವ ದೃಶ್ಯಗಳನ್ನು ವಿದೇಶಿ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಆನೆಗೊಂದಿ ಮಾರ್ಗದುದ್ದಕ್ಕೂ ಕಂಡು ಬಂದಿದೆ.

    ಆನೆಗೊಂದಿ ಉತ್ಸವ ನಮ್ಮ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ, ಉತ್ಸವದ ಯಶಸ್ಸಿಗೆ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ ಎಂದು ಸಾಣಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ನರಸಿಂಹಪ್ಪ ಹೇಳಿದರು.

  • 20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

    20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

    ಬೆಂಗಳೂರು: ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾರಪ್ಪನಪಾಳ್ಯದಲ್ಲಿ ಯೋಧನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಹೇಳಿಕೆಗೆ ನಿವೃತ್ತ ಯೋಧ ಎಂ.ಎ ವೆಂಕಟೇಶರಿಗೆ ಊರಿನ ಗ್ರಾಮಸ್ಥರು ಅದ್ಧೂರಿ ಸನ್ಮಾನ ನಡೆಸಿದರು.

    20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ಅವರು ಹುಟ್ಟಿನಿಂದಲೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರೌಢ ಶಿಕ್ಷಣದವರೆಗೆ ಗ್ರಾಮೀಣ ಪ್ರದೇಶವಾದ ಮಾರಪ್ಪನ ಪಾಳ್ಯಗ್ರಾಮದಲ್ಲಿ ಮುಗಿಸಿ, ನಂತರ ಸೇನೆಗೆ ಸೇರಿದ್ದರು.

    ವೆಂಕಟೇಶ್ ಅವರು ಸುಮಾರು 20 ವರ್ಷ ವಿವಿಧ ಪ್ರದೇಶಗಳಾದ ಪಂಜಾಬ್, ಅಸ್ಸಾಂ, ಜಮ್ಮು- ಕಾಶ್ಮೀರ ಇನ್ನೀತರಡೆ ಸೇವೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದರು. ವೆಂಕಟೇಶ್ ಅವರಿಗೆ ಅದ್ಧೂರಿ ಸ್ವಾಗತದ ಮೂಲಕ ಎರಡು ಕಿಲೋಮೀಟರ್ ತೆರೆದ ಜೀಪಿನಲ್ಲಿ ನಿವೃತ್ತಿ ನಂತರ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

    ಗ್ರಾಮದ ದಾರಿಯುದ್ಧಕ್ಕೂ ರಾಷ್ಟ್ರೀಯ ಭಾವೈಕ್ಯತೆ ಗೀತೆಗಳನ್ನು ಹಾಕಿಕೊಂಡು, ಹೂವಿನ ಮೂಲಕ ಪುಷ್ಪಾರ್ಚನೆ ಮಾಡಿ ಯೋಧನಿಗೆ ಸ್ವಾಗತಿಸಲಾಯಿತು. ಊರಿನಲ್ಲಿ ಬೃಹತ್ ಆದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದೇಶ ಕಾಯುವ ಯೋಧನಿಗೆ, ಅದ್ಧೂರಿ ಸ್ವಾಗತವನ್ನು ಕಡಗ ಮತ್ತು ಶಾಲು ಹೊದಿಸಿ ಭವ್ಯ ಸ್ವಾಗತ ನೀಡಲಾಯಿತು.

  • ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಚಿಕ್ಕೋಡಿ/ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಹಿರಣ್ಯಕೇಶಿ ನದಿ ತೀರದ ಜನರಿಗೆ ಇದೀಗ ಮೊಸಳೆ ಕಾಟ ಎದುರಾಗಿದೆ.

    ಕಳೆದ ಹಲವು ದಿನಗಳಿಂದ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುರಣಿ ಗ್ರಾಮದ ಜನರಿಗೆ ಮೊಸಳೆ ಕಾಣಿಸಿಕೊಂಡಿದ್ದು, ಕೋಚರಿ ಬ್ಯಾರೇಜ್‍ನಿಂದ ಹೊಳೆಮ್ಮ ದೇವಿ ದೇವಸ್ಥಾನದ ವರೆಗಿನ ಬ್ಯಾರೇಜ್ ವರೆಗೆ ಮೊಸಳೆಗಳು ಇವೆ ಎನ್ನಲಾಗಿದೆ.

    ಹೀಗಾಗಿ ನದಿ ತೀರದಲ್ಲಿ ಜಾನುವಾರುಗಳನ್ನು ತೊಳೆಯುವುದು ಹಾಗೂ ಬಟ್ಟೆಗಳನ್ನು ತೊಳೆಯಬೇಡಿ ಎಂದು ನೋಟಿಸ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಸಲಾಗಿದೆ. ಅಲ್ಲದೆ ವಿಶೇಷವಾಗಿ ಮೀನುಗಾರರು ನದಿಗೆ ಇಳೆಯದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

    ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿನ ವಿಷ ಜಂತುಗಳು ಜಮೀನು ಹಾಗೂ ಗ್ರಾಮಗಳಿಗೆ ನುಗ್ಗಿದ್ದವು. ಪ್ರವಾಹ ತಗ್ಗಿ ಹಲವು ದಿನಗಳ ನಂತರ ಇದೀಗ ಹಿರಣ್ಯಕೇಶಿ ನದಿಯ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

  • ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದೇಶ ಸೇವೆ ಮಾಡಿ ನಿವೃತ್ತಿಯಾದ ಯೋಧರಿಗೆ ಬೆಣ್ಣೆನಗರಿಯಲ್ಲಿ ಅದ್ಧೂರಿ ಸ್ವಾಗತ

    ದಾವಣಗೆರೆ: ಕಳೆದ 20 ವರ್ಷಗಳಿಂದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರಿಗೆ ನಿವೃತ್ತ ಯೋಧರ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕೋರಲಾಯಿತು.

    ಸಾಸಲು ಗ್ರಾಮದ ಜಯಣ್ಣ, ಕೆಟಿಜೆ ನಗರದ ಸುಶೀಲ್ ಕುಮಾರ್, ತುರ್ಚುಘಟ್ಟದ ಶ್ರೀನಿವಾಸ್ ನಿವೃತ್ತಿ ಯೋಧರು. ಇಪ್ಪತ್ತುವರೆ ವರ್ಷಗಳ ಕಾಲ ಜಮ್ಮು-ಕಾಶ್ಮೀರ, ಹಿಮಾಚಲಪ್ರದೇಶ, ಹರ್ಯಾಣ, ಮೇಘಾಲಯ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿದ್ದ ಯೋಧರು ಇಂದು ನಿವೃತ್ತಿಯಾಗಿ ತವರಿಗೆ ಆಗಮಿಸಿದರು.

    ನಿವೃತ್ತಿಯಾಗಿ ತವರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯೋಧರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಎತ್ತಿ ತಿಲಕವಿಟ್ಟು ಸಿಹಿ ಹಂಚಿದರು. ಅಲ್ಲದೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಮಟೆ ಬಾರಿಸಿಕೊಂಡು ಅದ್ಧೂರಿಯಾಗಿ ಸ್ವಾಗತ ಕೋರಿ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿದರು.

    ದೇಶಕ್ಕಾಗಿ ಕೆಲಸ ಮಾಡಿದ್ದು ನಮಗೆ ತುಂಬಾ ಹೆಮ್ಮೆಯಿದೆ. ಚಿಕ್ಕ ವಯಸ್ಸಿನಿಂದಲೂ ಸಾಕಷ್ಟು ಆಸೆಯನ್ನು ಇಟ್ಟುಕೊಂಡಿದ್ದೆವು. ಶಾಲೆಯಲ್ಲಿ ಶಿಕ್ಷಕರು ದೇಶಾಭಿಮಾನವನ್ನು ತುಂಬಿದ್ದಕ್ಕೆ ನಾವು ಇಂದು ಯೋಧರಾಗಿದ್ದೇವೆ. ಅವಕಾಶ ಸಿಕ್ಕರೆ ಮತ್ತೆ ದೇಶ ಸೇವೆಗೆ ಹೋಗುತ್ತೇವೆ. ಅಲ್ಲದೆ ಯುವಕರನ್ನು ದೇಶ ಸೇವೆ ಮಾಡಲು ತರಬೇತಿ ನೀಡುತ್ತೇವೆ ಎಂದು ಹೆಮ್ಮೆಯಿಂದ ನಿವೃತ್ತ ಯೋಧರು ಹೇಳಿಕೊಂಡರು.

  • ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮಸ್ಥರಿಂದ ದೇಹದಾನ

    ಗ್ರಾಮದಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಗ್ರಾಮಸ್ಥರಿಂದ ದೇಹದಾನ

    ಕಲಬುರಗಿ: ಶವ ಹೂಳಲು ಸ್ಥಳವಿಲ್ಲದ ಕಾರಣ ಮೃತ ವೃದ್ಧೆಯ ದೇಹವನ್ನು ದೇಹದಾನ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ.

    75 ವರ್ಷದ ಸುಭದ್ರಮ್ಮ ಗುರುವಾರ ರಾತ್ರಿ ಸಾವನಪ್ಪಿದ್ದಾರೆ. ಆದರೆ ಮೃತರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಜಮೀನಿಲ್ಲ. ಹೀಗಾಗಿ ಕಲಬುರಗಿ ಎಂಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ಸುಭದ್ರಮ್ಮ ದೇಹವನ್ನು ದಾನ ಮಾಡಿದ್ದಾರೆ.

    ಮೂರು ಸಾವಿರ ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಶವ ಹೂಳಲು ಕೇವಲ 20 ಗುಂಟೆ ಜಮೀನಿದೆ. ಹೀಗಾಗಿ ಯಾರಾದಾದರೂ ಶವ ಹೂಳಬೇಕು ಎಂದರೆ ಬೇರೆಯವರ ಶವ ತೆಗೆದೆ ಹೂಳುವ ಪರಿಸ್ಥಿತಿಯಿದೆ. ಇದನ್ನು ಅರಿತ ಆ ಗ್ರಾಮದ 40ಕ್ಕೂ ಹೆಚ್ಚು ಜನ ಈಗಾಗಲೇ ದೇಹದಾನ ಮಾಡಿದ್ದಾರೆ.

    ಇನ್ನು ದುರಂತ ಎಂದರೆ ಸಮಾಜಕಲ್ಯಾಣ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದ ಜನರಿಗೆ ಈ ಪರಿಸ್ಥಿತಿ ಬಂದಿದೆ. ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ಈ ಕುರಿತು ವರದಿ ಪ್ರಸಾರ ಮಾಡಿದ್ದಾಗ ಜಮೀನು ಖರೀದಿಗೆ ಹಣ ಬಿಡುಗಡೆಯಾಗಿದೆ.

    ಆದರೆ ಇಲ್ಲಿನ ಜನಪ್ರತಿನಿಧಿ ಹಾಗು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರಗೆ ಸ್ಮಶಾನಕ್ಕಾಗಿ ಜಮೀನು ಖರೀದಿ ಮಾಡಿಲ್ಲ. ಪರಿಣಾಮ ಜಮೀನು ಹೊಂದಿದವರು ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರು ಹೀಗೆ ದೇಹದಾನ ಮಾಡಲು ಮುಂದಾಗಿದ್ದಾರೆ.

  • ಪಬ್ಲಿಕ್ ಟಿವಿ ಸುದ್ದಿಗೆ ಫಲಶ್ರುತಿ – ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿದ ಅಧಿಕಾರಿಗಳು

    ಪಬ್ಲಿಕ್ ಟಿವಿ ಸುದ್ದಿಗೆ ಫಲಶ್ರುತಿ – ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿದ ಅಧಿಕಾರಿಗಳು

    ಮಡಿಕೇರಿ: ಗುರುವಾರ ಪಬ್ಲಿಕ್ ಟಿವಿ ವೆಬ್‍ನಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆಯಲ್ಲಿ ಉಪಯೋಗಕ್ಕೆ ಬಾರದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹ ಎಂದು ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸರಿಪಡಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮುಂದಾಗಿದ್ದಾರೆ.

    ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿಂದಲೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಗುರುವಾರ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ವರದಿಯಾಗಿತ್ತು. ಅಲ್ಲದೆ ಕೊಡಗಿನ ಅನೇಕ ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚೆ ಆಗಿತ್ತು.  ಇದನ್ನೂ ಓದಿ: ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಈ ವರದಿಯಿಂದ ಎಚ್ಚೇತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುತ್ತಿದ್ದಾರೆ. ಏನೇ ಆಗಲಿ ಈ ವ್ಯಾಪ್ತಿಯ ಗ್ರಾಹಕರು ಕಾರ್ಡನ್ನು ಗ್ರಾಮ ಪಂಚಾಯಿತಿಗೆ ಹಿಂತಿರುಗಿಸಲು ನಿರ್ಧರಿಸಿದರು. ಆದರೆ ಗುರುವಾರ ವರದಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಲು ಮುಂದಾಗಿದ್ದಾರೆ.

    ಸದ್ಯ ಪಬ್ಲಿಕ್ ಟಿವಿ ವರದಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಾಫಿನಾಡ ಗುಪ್ತಶೆಟ್ಟಿ ಹಳ್ಳಿಗೆ ದಿ.ಮಧುಕರ್ ಶೆಟ್ಟಿ ಪತ್ನಿ ಭೇಟಿ

    ಕಾಫಿನಾಡ ಗುಪ್ತಶೆಟ್ಟಿ ಹಳ್ಳಿಗೆ ದಿ.ಮಧುಕರ್ ಶೆಟ್ಟಿ ಪತ್ನಿ ಭೇಟಿ

    – ಮಧುಕರ್ ಶೆಟ್ಟಿ ನೆನೆದು ಭಾವುಕರಾದ ಗ್ರಾಮಸ್ಥರು

    ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪತ್ನಿ ಸುವರ್ಣ ಭೇಟಿ ನೀಡಿ ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿ, ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪತಿ ನೆನೆದು ಕಣ್ಣೀರು ಹಾಕಿದರು.

    ಸರಿಯಾದ ರಸ್ತೆಯೂ ಇಲ್ಲದ ಕುಗ್ರಾಮಕ್ಕೆ ಬಂದು ಹಳ್ಳಿಗರೊಂದಿಗೆ ಬೆರತು ಮಾತನಾಡಿದ್ದರು. ಹೀಗಾಗಿ ನಮಗೆ ಮಧುಕರ್ ಶೆಟ್ಟಿಯೇ ದೇವರು ಎಂದು ಗ್ರಾಮಸ್ಥರು ಸುವರ್ಣ ಅವರ ಬಳಿ ಹೇಳಿಕೊಂಡರು. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ

    ಅಮೆರಿಕದಲ್ಲಿ ಪ್ರೊಫೆಸರ್ ಆಗಿರುವ ಮಧುಕರ್ ಶೆಟ್ಟಿ ಪತ್ನಿ ಸುವರ್ಣ ಅವರು ಕುಗ್ರಾಮಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿ, ಅವರ ಕಷ್ಟ-ಸುಖಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಆಲ್ದೂರು ಪಿಎಸ್‍ಐ ಸುನೀತಾ ಕೂಡ ಮಧುಕರ್ ಶೆಟ್ಟಿಯವರನ್ನು ನೆನೆದು ಕಣ್ಣೀರು ಹಾಕಿದರು. ಮಧುಕರ್ ಶೆಟ್ಟಿ ಪತ್ನಿ ಸುವರ್ಣ, ಮಗಳು ಸೌಮ್ಯ ಹಾಗೂ ಸಹೋದರ ಭೇಟಿ ನೀಡಿದ್ದರು. ದಿಢೀರ್ ಹಳ್ಳಿಗೆ ಭೇಟಿ ನೀಡಿ ಬಡಜನರ ಕಷ್ಟ ಆಲಿಸಿದ ಸುವರ್ಣ ಅವರನ್ನು ಕಂಡು ಗ್ರಾಮಸ್ಥರು ಸಂತಸಗೊಂಡರು. ಇದನ್ನೂ ಓದಿ: ಬೊಂಬೆನಾಡಿನಿಂದ ವೃತ್ತಿ ಆರಂಭಿಸಿದ್ದರು ಮಧುಕರ್ ಶೆಟ್ಟಿ

    ಗ್ರಾಮದಲ್ಲಿರುವ 32 ಕುಟುಂಬಗಳು 2006ರಲ್ಲಿ ಸಾರಗೋಡು ಮೀಸಲು ಅರಣ್ಯದಿಂದ ಸ್ಥಳಾಂತರಗೊಂಡವರು. ನಮಗೆ ಇಲ್ಲಿ ಜಾಗ ಕೊಡಿಸಿದ್ದೇ ಮಧುಕರ್ ಶೆಟ್ಟಿ. ಹಾಗಾಗಿ ಅಂದು ಚಿಕ್ಕಮಗಳೂರಲ್ಲಿ ಎಸ್ಪಿಯಾಗಿದ್ದ ಮಧುಕರ್ ಶೆಟ್ಟಿ ಹಾಗೂ ಡಿಸಿ ಹರ್ಷಗುಪ್ತ ಹೆಸರನ್ನು ಸೇರಿಸಿ ಗ್ರಾಮಕ್ಕೆ ಗುಪ್ತಶೆಟ್ಟಿಹಳ್ಳಿ ಎಂದು ನಾಮಕರಣ ಮಾಡಿದೆವು. ಅಂದಿನಿಂದ ಇದು ಗುಪ್ತಶೆಟ್ಟಿಹಳ್ಳಿಯಾಗಿದೆ. ಮಧುಕರ್ ಶೆಟ್ಟಿ ವರ್ಗಾವಣೆಯಾದ ನಂತರ ಈ ಊರು ಸರ್ಕಾರದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಬದುಕಿರುವಾಗ್ಲೇ ಸತ್ತಿರುವ ಅಧಿಕಾರಿಗಳ ಮಧ್ಯೆ ಸತ್ತ ಮೇಲೂ ಬದುಕಿರೋರಲ್ಲಿ ಮಧುಕರ್ ಶೆಟ್ಟಿ ಸಹ ಒಬ್ಬರು. ಈ ಕುಗ್ರಾಮದ ಮನೆ-ಮನದಲ್ಲಿ ಮಧುಕರ್ ಶೆಟ್ಟಿ ಹೆಸರು ಎಂದೆಂದಿಗೂ ಅಜರಾಮರ. ಮಧುಕರ್ ಶೆಟ್ಟಿ ಸಾವನ್ನಪ್ಪಿದ್ದ ದಿನ ಊರಿನ ಜನರೆಲ್ಲ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಎಂದು ಗ್ರಾಮಸ್ಥರು ಭಾವನೆಗಳನ್ನು ಹಂಚಿಕೊಂಡರು.

  • ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಕೂಡಿಗೆಯಲ್ಲಿ ನೀರಿನ ಘಟಕವಿದ್ರೂ ಪ್ರಯೋಜನವಿಲ್ಲ – ಮೂರು ತಿಂಗಳಿಂದ ಜನರ ಪರದಾಟ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳುಗಳಿಂದ ಶುದ್ಧ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಶುದ್ಧ ನೀರಿನ ಘಟಕ ಮೂರು ತಿಂಗಳುಗಳಿಂದ ಸ್ಥಗಿತಗೊಂಡಿದೆ.

    ಈ ವ್ಯಾಪ್ತಿಯ ಗ್ರಾಮಸ್ಥರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತಾ ಬಂದಿದ್ದರೂ ಯಾರೂ ಇದನ್ನು ಸರಿಪಡಿಸಲು ಮುಂದಾಗಿಲ್ಲ. ಸಮಸ್ಯೆ ಹೇಳಿದರೆ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಿದ್ದಾರೆ ಎಂದು ಕೂಡಿಗೆ ಗ್ರಾಮಸ್ಥರು ಆರೋಪಿಸಿದರು. ಇದನ್ನೂ ಓದಿ: ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಇದೇ ಸಂದರ್ಭದಲ್ಲಿ ಮಾತನಾಡಿದ ಕೂಡಿಗೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ಕೆ.ಎಸ್ ಕಾಂತರಾಜ್ ಅವರು, ಕಳೆದ ಎರಡು ವರ್ಷಗಳ ಹಿಂದೆ ಕೂಡಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿದೆ. ಆದರೆ ಇಲ್ಲಿಯ ಜನರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಗ್ರಾಮ ಪಂಚಾಯ್ತಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರನ್ನು ಪಡೆಯಲು ಕಾರ್ಡನ್ನು ವಿತರಿಸಲಾಯಿತು. ಆದರೆ ಸಮರ್ಪಕವಾಗಿ ನೀರು ದೊರಕದ ಕಾರಣ ಗ್ರಾಮಸ್ಥರು ಕಾರ್ಡನ್ನು ಗ್ರಾಮ ಪಂಚಾಯ್ತಿಗೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

    ಮಳೆಗಾಲ ಪ್ರಾರಂಭವಾದರೂ ಮಳೆಯಾಗದ ಕಾರಣ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯುವ ನೀರಿನ ಘಟಕದಿಂದ ಕಾರ್ಡನ್ನು 300 ರೂ. ಕೊಟ್ಟು ಗ್ರಾಮ ಪಂಚಾಯ್ತಿಯಲ್ಲಿ ತೆಗೆದುಕೊಂಡಿದ್ದಾರೆ. ಆದರೆ ಜನರಿಗೆ ಯಾವುದೇ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಇಷ್ಟಾದರೂ ಕೂಡಿಗೆ ಗ್ರಾಮ ಪಂಚಾಯ್ತಿ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವ ರೀತಿಯಲ್ಲಿ ಆದಷ್ಟು ಬೇಗನೆ ಸರಿಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

  • ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

    ಕೊಪ್ಪಳ: ಇಡೀ ಗ್ರಾಮಕ್ಕೆ ಇರುವ ಏಕೈಕ ರುದ್ರಭೂಮಿಯಲ್ಲಿಯೇ ಸರ್ಕಾರಿ ಕಟ್ಟಡವೊಂದು ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದು ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡಬೇಕೆಂಬ ಆತಂಕದಲ್ಲಿ ತಾಲೂಕಿನ ಹಗೇದಾಳ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

    ಪಕ್ಕದ ಚೆಳ್ಳೂರು ಗ್ರಾಮಕ್ಕೆ ಮಂಜೂರಾದ ಪಶು ಆಸ್ಪತ್ರೆ ಹಗೇದಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಗ್ರಾಮದಲ್ಲಿರುವ ಏಕೈಕ ಸ್ಮಶಾನವನ್ನು ಅತಿಕ್ರಮಣವಾಗಿ ಸರ್ಕಾರವೇ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಕೊಪ್ಪಳದ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮಸ್ಥರು ಅಧಿಕಾರಿಗಳ ದೌರ್ಜನ್ಯ ವಿರೋಧಿಸಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

    ಹಗೇದಾಳ ಗ್ರಾಮ ಸ್ಮಶಾನ ಭೂಮಿಯಲ್ಲಿ ಇದೀಗ ತಲೆ ಎತ್ತುತ್ತಿರುವ ಕಟ್ಟಡ ಪಶು ಆಸ್ಪತ್ರೆ ಎಂದು ಹೇಳಲಾಗಿದೆ. ಹಗೇದಾಳ ಗ್ರಾಮಕ್ಕೆ ಯಾವುದೇ ಸರ್ಕಾರಿ ಯೋಜನೆ ಮಂಜೂರಾಗಿಲ್ಲ. ಚೆಳ್ಳೂರು ಗ್ರಾಮಕ್ಕೆ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 38 ಲಕ್ಷ ರೂ. ಅನುದಾನ ನೀಡಿದೆ. ಕಳೆದ ನವೆಂಬರ್‍ನಲ್ಲಿ ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ್ ದಢೇಸ್ಗೂರು ಸೇರಿದಂತೆ ಅಧಿಕಾರಿಗಳು ಎಲ್ಲರೂ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

    ಒಂದು ಊರಿನ ಯೋಜನೆಯನ್ನು ಅಧಿಕಾರಿಗಳು ಮತ್ತೊಂದೂರಿನಲ್ಲಿ ಅನುಷ್ಠಾನ ಮಾಡುತ್ತಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈಗ ಕಟ್ಟುತ್ತಿರುವ ಕಟ್ಟಡ ಹಗೇದಾಳದಲ್ಲಿ ಇರುವುದರಿಂದ ಚೆಳ್ಳೂರು ಗ್ರಾಮಕ್ಕೆ ಈ ಆಸ್ಪತ್ರೆ ಅತೀ ದೂರವಾಗುತ್ತಿದೆ. ಹಗೇದಾಳ ಗ್ರಾಮದ ಸರ್ವೇ ನಂ.71/1ರಲ್ಲಿ 3 ಎಕರೆ 22 ಗುಂಟೆ ಭೂಮಿ ಸ್ಮಶಾನಕ್ಕೆ ಸೇರಿದೆ. ಸುತ್ತಲಿನ ಪ್ರದೇಶ ಒತ್ತುವರಿಯಾಗಿದ್ದು ಇರುವ ಸ್ವಲ್ಪ ಭೂಮಿಯಲ್ಲಿಯೇ ಗ್ರಾಮಸ್ಥರ ಅಂತ್ಯ ಸಂಸ್ಕಾರಗಳು ನಡೆಯುತ್ತವೆ. ಇಂಥ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಭೂಸೇನಾ ನಿಗಮದ ಅಧಿಕಾರಿಗಳೇ ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟುವುದು ಯಾವ ನ್ಯಾಯ ಎಂದು ಗ್ರಾಮಸ್ಥರ ಪ್ರಶ್ನೆ.

    ನಮ್ಮೂರಿನ ಸುಡುಗಾಡಿಯಲ್ಲಿ ಭೂ ಸೇನೆ ನಿಗಮದ ಎಂಜಿನಿಯರ್ ಚಿಂಚೊಳ್ಳಿಕರ್ ಮತ್ತು ದೇವರಾಜ್ ದೌರ್ಜನ್ಯದಿಂದ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಬಾರಿ ಮಾತನಾಡಿದರೂ ಸರಿಯಾಗಿ ಉತ್ತರಿಸುತ್ತಿಲ್ಲ. ಸರ್ಕಾರಿ ಕೆಲಸ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕಬೇಕಾಗುತ್ತೆ. ಹೋಗಿ ಎಂಎಲ್‍ಎ ನಾ ಕೇಳ್ರಿ ಎಂದು ಅವಾಜ್ ಹಾಕ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಂದಾಯ ಅಧಿಕಾರಿಗಳು ಹೇಳೋದು ಏನು?
    ಹಗೇದಾಳ ಗ್ರಾಮದ ಸ್ಮಶಾನಕ್ಕಾಗಿ ಉಪಯೋಗಿಸುತ್ತಿರುವ ಜಮೀನಿನಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿಲ್ಲ ಎಂದು ಕಾರಟಗಿ ತಹಶೀಲ್ದಾರ್ ದೃಢೀಕರಿಸಿದ್ದಾರೆ. ಅಲ್ಲದೇ ಹಗೇದಾಳ ಗ್ರಾಮದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಯಾವುದೇ ಸರ್ಕಾರಿ ಜಮೀನನ್ನು ಮಂಜೂರಿ ಮಾಡಿಲ್ಲವೆಂದು ತಮ್ಮ ಹಿಂಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.

    ಈ ಎಲ್ಲ ವಿರೋಧದ ನಡುವೆ ಚೆಳ್ಳೂರು ಪಶು ಆಸ್ಪತ್ರೆಯ ವೈದ್ಯರು ಈ ನಿರ್ಮಾಣ ಹಂತದ ಕಟ್ಟಡ ಅವೈಜ್ಞಾನದಿಂದ ಕೂಡಿದೆ ಎಂದು ಹಿರಿಯ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ. ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡುತ್ತಿದ್ದು, ಜಾನುವಾರುಗಳ ಚಿಕಿತ್ಸೆಗೆ ಮುಂದೆ ತೊಂದರೆಯಾಗಲಿದೆ. ಇದರ ಜೊತಗೆ ಪಶು ಆಸ್ಪತ್ರೆಗೆ ಇರಬೇಕಾದ ಎಲ್ಲ ಮಾನದಂಡಗಳನ್ನು ಇಲ್ಲಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

  • ‘ನಮ್ಮ ಮನೆಗೆ ಮರಳಿ ಬಾ’ – ಪತ್ನಿ ಜೊತೆ ಮಾತುಕತೆ ವೇಳೆ ಪತಿ, ಕುಟುಂಬಸ್ಥರಿಗೆ ಗ್ರಾಮಸ್ಥರಿಂದ ಥಳಿತ

    ‘ನಮ್ಮ ಮನೆಗೆ ಮರಳಿ ಬಾ’ – ಪತ್ನಿ ಜೊತೆ ಮಾತುಕತೆ ವೇಳೆ ಪತಿ, ಕುಟುಂಬಸ್ಥರಿಗೆ ಗ್ರಾಮಸ್ಥರಿಂದ ಥಳಿತ

    ವಿಜಯಪುರ: ಜಗಳವಾಡಿ ತವರು ಮನೆಗೆ ಹೋಗಿದ್ದ ಪತ್ನಿಯನ್ನ ಕರೆತರಲು ತೆರಳಿದ್ದ ಪತಿ ಹಾಗೂ ಆತನ ಕುಟುಂಬಸ್ಥರನ್ನ ಗ್ರಾಮಸ್ಥರು ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದ ಕಮಲವ್ವ ವಡ್ಡರ ಹಾಗೂ ನಿಡಗುಂದಿ ತಾಲೂಕಿನ ಬಿದ್ನಾಳ ಗ್ರಾಮದ ಅಶೋಕ ವಡ್ಡರ ವಿವಾಹವಾಗಿತ್ತು. ಆದರೆ ಇಬ್ಬರು ಪರಸ್ಪರ ಜಗಳವಾಡಿ ಕಮಲವ್ವ ತನ್ನ ತವರು ಮನೆಗೆ ಹೋಗಿದ್ದಳು. ಕಮಲವ್ವನಿಗೆ ಬುದ್ಧಿ ಹೇಳಿ ಕರೆತರಲೆಂದು ಪತಿ ಅಶೋಕ ಹಾಗೂ ಆತನ ಕುಟುಂಬಸ್ಥರು ಆಲಕೊಪ್ಪ ಗ್ರಾಮಕ್ಕೆ ಹೋಗಿದ್ದರು.

    ಆಗ ಇಬ್ಬರ ಕುಟುಂಬಸ್ಥರು ಸಂಧಾನ ಮಾತುಕತೆ ಮಾಡುವಾಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಕೈ ಕೈಮಿಲಾಯಿಸುವ ಹಂತಕ್ಕೆ ಜಗಳ ತಲುಪಿದ್ದು, ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಅಶೋಕ ಕುಟುಂಬಸ್ಥರನ್ನ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಈ ಹಲ್ಲೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 10 ಜನರಿಗೆ ಗಾಯಗಳಾಗಿದೆ. ಹಲ್ಲೆ ವೇಳೆ ಅಶೋಕ ಪರಾರಿಯಾಗಿದ್ದು, ಗಾಯಾಳುಗಳನ್ನ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ 6 ಜನರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆದಿದ್ದಾರೆ.