Tag: villagers

  • ಗುಡ್ಡಕ್ಕೆ ಆಕಸ್ಮಿಕ ಬೆಂಕಿ – ಅಂಗವಿಕಲ ರೈತ ಸಜೀವ ದಹನ

    ಗುಡ್ಡಕ್ಕೆ ಆಕಸ್ಮಿಕ ಬೆಂಕಿ – ಅಂಗವಿಕಲ ರೈತ ಸಜೀವ ದಹನ

    ದಾವಣಗೆರೆ: ಗುಡ್ಡದಲ್ಲಿ ದನಗಳ ಮೇಯಿಸಲು ಹೋಗಿದ್ದ ರೈತರೊಬ್ಬರು ಗುಡ್ಡಕ್ಕೆ ಬಿದ್ದಿದ್ದ ಆಕಸ್ಮಿಕ ಬೆಂಕಿಯಲ್ಲಿ ಸಿಲುಕಿ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ.

    ಕಂಚುಗಾರಹಳ್ಳಿ ಗ್ರಾಮದ ಮಾತು ಬಾರದ ಹಾಗೂ ಅಂಗವಿಕಲ ರೈತ ಚಂದ್ರಪ್ಪ(55) ಮೃತ ದುರ್ದೈವಿ. ದನಗಳ ಮೇಯಿಸಲು ಗುಡ್ಡಕ್ಕೆ ಹೋದಾಗ ಬೆಂಕಿ ತಗುಲಿ ರೈತ ಸಾವನ್ನಪ್ಪಿದ್ದಾರೆ. ಪ್ರತಿದಿನ ಚಂದ್ರಪ್ಪ ದನಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗುತ್ತಿದ್ದರು. ಎಂದಿನಂತೆ ಸೋಮವಾರ ಕೂಡ ಚಂದ್ರಪ್ಪ ದನಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದರು. ಆದರೆ ಇದೇ ವೇಳೆ ಗುಡಕ್ಕೆ ಬೆಂಕಿ ಬಿದ್ದಿದ್ದು, ಸುತ್ತ ಮುತ್ತಲು ಯಾರು ಇಲ್ಲದ ಕಾರಣ ಹಾಗೂ ಮೂಕನಾಗಿರುವುದರಿಂದ ಕೂಗಲು ಆಗದೆ ರೈತ ಬೆಂಕಿಗೆ ಬಲಿಯಾಗಿದ್ದಾರೆ.

    ಇದೇ ಸಮಯದಲ್ಲಿ ಜಮೀನು ನೋಡುವುದಕ್ಕೆ ಹೋಗುತ್ತಿದ್ದ ಸ್ಥಳೀಯರು ಬೆಂಕಿಯಲ್ಲಿ ರೈತ ಚಂದ್ರಪ್ಪನ ಮೂಕ ವೇದನೆಯ ಕಿರುಚಾಟ ಗಮನಿಸಿದ್ದಾರೆ. ನಂತರ ಸ್ಥಳೀಯರು ಬಂದು ಬೆಂಕಿಯಲ್ಲಿ ಸುಟ್ಟು ಇನ್ನೂ ಸ್ವಲ್ಪ ಉಸಿರಾಡುತ್ತಿದ್ದ ಚಂದ್ರಪ್ಪರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ರೈತ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

    ದಾವಣಗೆರೆ ಜಿಲ್ಲೆಯ ಸೂಳೆಕೆರೆ ಗುಡ್ಡ, ಬಸವಾಪಟ್ಟಣ ದುರ್ಗನಗುಡ್ಡ, ದಾಗಿನಕಟ್ಟೆ ಚಿಕ್ಕುಡದಮ್ಮನ ಗುಡ್ಡ, ಮರಬನಹಳ್ಳಿ ಬಸವನಗುಡ್ಡಗಳಲ್ಲಿ ಕಾಡಿಚ್ಚು ಮತ್ತು ಕೆಲ ಕಿಡಿಗೇಡಿಗಳು ಬೀಡಿ, ಸಿಗರೇಟ್ ಸೇದಿ ಪೊದೆ, ಬಳ್ಳಿ ಗಿಡಗಳ ಮೇಲೆ ಎಸೆಯುವುದರಿಂದ ಕಾಡು ನಾಶವಾಗುತ್ತಿದೆ. ಜೊತೆಗೆ ವನ್ಯ ಜೀವ ಸಂಕುಲ ನಾಶವಾಗುತ್ತಿದೆ. ಹೀಗೆ ಹೊತ್ತಿಕೊಂಡ ಬೆಂಕಿ ಇದೀಗ ಚಂದ್ರಪ್ಪರನ್ನು ಬಳಿ ಪಡೆದಿದ್ದು, ತಪ್ಪಿತಸ್ಥರನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಡಿವೈಎಸ್‌ಪಿ ಪ್ರಶಾಂತ್ ಮನುಗೋಳಿ, ವೃತ್ತ ನಿರೀಕ್ಷಕ ಆರ್. ಆರ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೌಕಾಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯನೆಂದು ರೋಗಿಗಳಿಗೆ ವಂಚನೆ ಆರೋಪ

    ನೌಕಾಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯನೆಂದು ರೋಗಿಗಳಿಗೆ ವಂಚನೆ ಆರೋಪ

    – ಗ್ರಾಮಸ್ಥರ ವಿಶ್ವಾಸ ಗಳಿಸಿ ವಂಚನೆ

    ಮಡಿಕೇರಿ: ತಾನು ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯ ಎಂದು ಕಳೆದ 2 ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಾ, ಅವರ ಜೀವದೊಂದಿಗೆ ನಕಲಿ ವೈದ್ಯನೋರ್ವ ಆಟವಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಕಲಿ ವೈದ್ಯ ಕೃಷ್ಣ ರೋಗಿಗಳಿಗೆ ಮೋಸ ಮಾಡುತ್ತಿದ್ದಾನೆ. ಈ ಬಗ್ಗೆ ಕೃಷ್ಣನನ್ನೇ ಪ್ರಶ್ನಿಸಿದರೆ, ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್. ಅಲ್ಲಿಯೂ ನಾನೇ ಎಲ್ಲಾ ಕೆಲಸ ಮಾಡುತ್ತಿದ್ದೆ. ಅಷ್ಟಕ್ಕೂ ನಾನು ಕುವೆಂಪು ಯುನಿವರ್ಸಿಟಿಯಲ್ಲಿ ಸೈಕೋಥೆರಪಿ ವಿಷಯದಲ್ಲಿ ಎಂಎಸ್ ಮಾಡಿದ್ದೇನೆ. ಅದರ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತಾನೆ ಈ ನಕಲಿ ವೈದ್ಯ. ಕೃಷ್ಣ ಕ್ಲಿನಿಕ್ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅನುಮತಿ ತೆಗೆದುಕೊಂಡಿಲ್ಲ. ಬದಲಿಗೆ ಪಂಚಾಯ್ತಿಯಿಂದ ಅನುಮತಿ ಪಡೆದು ಕ್ಲಿನಿಕ್ ನಡೆಸುತ್ತಿದ್ದಾನೆ ಎನ್ನಲಾಗಿದೆ.

    ವಿಪರ್ಯಾಸವೆಂದರೆ ಮಡಿಕೇರಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲೇ ಈ ವೈದ್ಯ ಎರಡು ವರ್ಷಗಳಿಂದ ಹೀಗೆ ಚಿಕಿತ್ಸೆ ಕೊಡುತ್ತಿದ್ದರೂ ಈ ವಿಷಯ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಈ ನಕಲಿ ವೈದ್ಯ ಊರಿನವರ ಬಾರೀ ವಿಶ್ವಾಸ ಗಳಿಸಿದ್ದಾನೆ. ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಬಂದ ಮಾಧ್ಯಮದವರನ್ನು ಊರಿನ ಜನರು ಸುತ್ತುವರಿದು, ಇವರು ಇಲ್ಲಿನ ಸುತ್ತಮುತ್ತಲ ನಾಲ್ಕಾರು ಹಳ್ಳಿಗಳಿಗೆ ಇರುವ ಒಬ್ಬರೇ ವೈದ್ಯರು. ಹಗಲು ರಾತ್ರಿ ಎನ್ನದೆ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸವಾಯ್ತು ಎಂದರೆ ಮನೆಗೆ ಬಂದು ಚಿಕಿತ್ಸೆ ಕೊಡ್ತಾರೆ. ಹಾಗಿರುವಾಗ ಇವರ ಕ್ಲಿನಿಕ್ ಬಾಗಿಲು ಮುಚ್ಚಿಸೋಕೆ ಬಂದಿದ್ದೀರಾ? ಅದಕ್ಕೆ ನಾವು ಅವಕಾಶ ಕೊಡೋದಿಲ್ಲ. ಒಂದು ವೇಳೆ ಅವರಿಗೆ ಅನುಮತಿ ಇಲ್ಲಾ ಅಂದರೆ ಅಧಿಕಾರಿಗಳು ಅನುಮತಿ ಕೊಡ್ಲಿ ಅಷ್ಟೇ ಅಂತ ನಕಲಿ ವೈದ್ಯನ ಪರ ನಿಂತಿದ್ದಾರೆ.

    ಕೆಲವರು ಯಾವುದೇ ದಾಖಲೆ ಇಲ್ಲದೆ, ವೈದ್ಯ ವೃತ್ತಿ ಮಾಡುತ್ತಿದ್ದಾನೆ. ಯಾರಿಗಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತ ಒತ್ತಾಯಿಸಿದರು. ಭಾರತೀಯ ನೌಕಾ ಸೇನೆಯ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದ ಎನ್ನೋದನ್ನೇ ಬಳಸಿಕೊಂಡು ವೈದ್ಯ ವೃತ್ತಿ ಮಾಡುತ್ತಾ. ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಈ ವೈದ್ಯರ ಅಸಲಿಯತ್ತು ಏನು ಎನ್ನೋದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕಿದೆ.

  • ಗಾಬರಿಯಿಂದ ರಾತ್ರಿ ಪೂರ್ತಿ ಮರವೇರಿ ಕುಳಿತ ಕರಡಿ

    ಗಾಬರಿಯಿಂದ ರಾತ್ರಿ ಪೂರ್ತಿ ಮರವೇರಿ ಕುಳಿತ ಕರಡಿ

    ಚಿತ್ರದುರ್ಗ: ಆಹಾರವನ್ನು ಅರಸಿ ನಾಡಿಗೆ ಬಂದಿದ್ದ ಕರಡಿಯೊಂದು ಜನರಿಂದ ಗಾಬರಿಗೊಳಗಾಗಿ ಮರವೇರಿ ಕುಳಿತ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ನಡೆದಿದೆ.

    ಕರಡಿಯನ್ನು ಮರದಿಂದ ಕೆಳಗಿಳಿಸಲು ಕೋಲಿನಿಂದ ತಿವಿದು, ಬೆಂಕಿಯಿಟ್ಟು ಅರಣ್ಯಾಧಿಕಾರಿಗಳು ಅವೈಜ್ಞಾನಿಕವಾಗಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಗಿದೆ. ಭಾನುವಾರ ಮಧ್ಯಾಹ್ನ ಭರಮಸಾಗರದ ಅಜಾದ್ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಕರಡಿ ಜನರಲ್ಲಿ ಬಾರಿ ಆತಂಕ ಮೂಡಿಸಿತ್ತು.

    ಇತ್ತ ಜನರನ್ನು ಕಂಡು ಕರಡಿ ಕೂಡ ಗಾಬರಿಗೊಂಡು ಮರವನ್ನು ಏರಿ ಕುಳಿತಿತ್ತು. ಕರಡಿಯನ್ನು ಗ್ರಾಮದಲ್ಲಿ ಕಂಡ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಕರಡಿಯನ್ನು ಓಡಿಸಲು ಕೋಲಿನಿಂದ ತಿವಿದು, ಬೆಂಕಿಯಿಟ್ಟು ಅವೈಜ್ಞಾನಿಕವಾಗಿ ತಡರಾತ್ರಿಯವರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಇದರಿಂದಾಗಿ ಇನ್ನೂ ಗಾಬರಿಗೊಳಗಾದ ಕರಡಿಯು ಮರದಿಂದ ಕೆಳಗೆ ಇಳಿಯಲಿಲ್ಲ. ಅಲ್ಲದೇ ಕೊನೆಗೆ ಮಧ್ಯಾಹ್ನದಿಂದ ತಡರಾತ್ರಿವರೆಗೆ ಕಾಲಹರಣ ಮಾಡಿದ್ದ ಅರಣ್ಯಾಧಿಕಾರಿಗಳು ಅಲ್ಲಿಂದ ವಾಪಸ್ ತೆರೆಳಿದ್ದರು.

    ಕೊನೆಗೆ ಬೆಳಗಿನ ಜಾವ ಕರಡಿ ತನ್ನಷ್ಟಕ್ಕೆ ತಾನು ಮರದಿಂದ ಕೆಳಗೆ ಇಳಿದು ಬದುಕಿಕೊಂಡಿತು ಬಡಜೀವ ಅಂತ ಓಡಿ ಹೋಗಿದೆ. ಆದರೆ ಅದೃಷ್ಟವಶಾತ್ ಜನರಿಗಾಗಲಿ, ಕರಡಿಗಾಗಲಿ ಯಾವುದೇ ಅಪಾಯವಾಗಿಲ್ಲ. ಇತ್ತೀಚೆಗೆ ಕೋಟೆನಾಡಲ್ಲಿ ಕಾಡುಪ್ರಾಣಿಗಳಾದ ಕರಡಿ ಹಾಗೂ ಚಿರತೆ ಆಹಾರ ಹರಸಿ ನಾಡಿನತ್ತ ಬರುತ್ತಿರುವುದು ಹೆಚ್ಚಾಗುತ್ತಿದೆ. ಆದರೆ ಈವರೆಗೆ ಆ ಪ್ರಾಣಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುವ ವೈಜ್ಞಾನಿಕ ಪದ್ಧತಿಯನ್ನು ಮಾತ್ರ ಅರಣ್ಯ ಇಲಾಖೆ ಅನುಸರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹೀಗಾಗಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ನಡೆ ವಿರುದ್ಧ ಸ್ಥಳೀಯರು ಮತ್ತು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ದೈತ್ಯ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ

    ನೆಲಮಂಗಲ: ಕಳೆದ ಇಪ್ಪತ್ತು ದಿನಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ದೈತ್ಯ ಚಿರತೆಯೊಂದು ಬೋನಿಗೆ ಬಿದ್ದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಬರಗೂರು ಗ್ರಾಮದ ಬಳಿಯಲ್ಲಿ ಚಿರತೆ ಸೆರೆ ಸಿಕ್ಕಿದೆ.

    ಗ್ರಾಮಸ್ಥರ ಒತ್ತಾಯದಿಂದ ಕಳೆದ ಒಂದು ವಾರದ ಹಿಂದೆ ನೆಲಮಂಗಲ ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಬೋನ್‍ನ್ನು ಇರಿಸಿದ್ದರು. ಈ ದೈತ್ಯ ಚಿರತೆ ಪ್ರತಿದಿನ ಗ್ರಾಮದಲ್ಲಿ ಭಾರಿ ಆರ್ಭಟ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಈ ಕಾರಣದಿಂದ ನೆಲಮಂಗಲ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹಲವಾರು ದಿನಗಳಿಂದ ನಾಗರಿಕರಿಗೆ ನಿದ್ದೆಗೆಡಿಸಿದ್ದ ಚಿರತೆ ಹಿಡಿಯಲು ಬೋನ್ ಹಾಕಿದ್ದರು. ಇಂದು ಗ್ರಾಮದ ದಿಣ್ಣೆ ಹೊಲ ಎಂಬಲ್ಲಿ ಆಹಾರ ಅರಸಿ ಬಂದು ಚಿರತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟದ್ದಾರೆ.

  • ಕೊಡಗಿನ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ವ್ಯಾಘ್ರನ ಕಂಡು ಆತಂಕಕ್ಕೆ ಒಳಗಾದ ವಾಹನ ಸವಾರರು

    ಕೊಡಗಿನ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ವ್ಯಾಘ್ರನ ಕಂಡು ಆತಂಕಕ್ಕೆ ಒಳಗಾದ ವಾಹನ ಸವಾರರು

    ಮಡಿಕೇರಿ: ಅರಣ್ಯ ಪ್ರದೇಶದ ಮಖ್ಯ ರಸ್ತೆಯಲ್ಲಿ ಯಾವುದೇ ಭಯ ಇಲ್ಲದೇ ಜನರ ವಾಹನ ಸವಾರರ ನಡುವೆ ಓಡಾಡಿದ ಹುಲಿಯನ್ನು ಕಂಡು ಸ್ಥಳೀಯರು ಅಂತಕಕ್ಕೆ ಒಳಗಾದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾರ್ಮಾಡ್ ಬಾಳೆಲೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದಿದೆ.

    ಇಂದು ಸಂಜೆ ಗ್ರಾಮದ ರಸ್ತೆಯಲ್ಲಿ ಯಾವುದೇ ಅಂತಕ ಇಲ್ಲದೇ ಹುಲಿರಾಯ ರಸ್ತೆಯಲ್ಲಿ ರಾಜಗಂಭೀರ್ಯದಿಂದ ನಡೆದಾಡಿದ್ದಾನೆ. ಇದನ್ನು ಗಮನಿಸಿದ ವಾಹನ ಚಾಲಕರು ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ಹುಲಿರಾಯ ಓಡಾಡುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ಹುಲಿ ಮಾತ್ರ ವಾಹನವನ್ನು ನೋಡಿದ್ರು ಯಾವುದೇ ಭಯ ಇಲ್ಲದೇ ವಾಹನದ ನಡುವೇ ರಸ್ತೆಯನ್ನು ದಾಟಿದೆ.

    ಆದರೆ ಹುಲಿಯನ್ನು ಕಂಡ ವಾಹನ ಸವಾರರು ಮಾತ್ರ ಅಂತಕಕ್ಕೆ ಒಳಗಾಗಿದ್ದಾರೆ. ಸದ್ಯ ಈಗ ಬಾಳೆಲೆ ಕಾರ್ಮಾಡ್ ಗ್ರಾಮೀಣ ರಸ್ತೆಯಿಂದ ಹುಲಿ ದಾಟಿ ಹೋಗಿದ್ದು, ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಹುಲಿ ಪ್ರತ್ಯಕ್ಷವಾಗಿದ್ದು, ನಾಗರಹೊಳೆ ಅಕ್ಕ ಪಕ್ಕದ ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿದೆ.

  • ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ನಿಧಿಯಾಸೆಗೆ ಲಿಂಗವನ್ನೇ ಕೆಡವಿದ ದುಷ್ಕರ್ಮಿಗಳು

    ಕೋಲಾರ: ನಿಧಿಯಾಸೆಗೆ ದುಷ್ಕರ್ಮಿಗಳು ಪುರಾತನ ಕಾಲದ ಲಿಂಗವನ್ನು ಧ್ವಂಸ ಮಾಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

    ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಪಡೆದಿರುವ ನಂಬಿಹಳ್ಳಿಯ ಚೌಡಪ್ಪ ಎಂಬವರ ಜಮೀನನಲ್ಲಿರುವ ಪಂಚಲಿಂಗಗಳನ್ನು ಧ್ವಂಸ ಮಾಡಿದ್ದು, ನಿಧಿ ಆಸೆಗಾಗಿ ಶಿವಲಿಂಗದ ಬಳಿ ದುಷ್ಕರ್ಮಿಗಳು ವಾಮಾಚಾರ ಮಾಡಿಸಿದ್ದಾರೆ.

    ಲಿಂಗವನ್ನು ಹಾರೆಯಿಂದ ಕಿತ್ತು ಹಾಕಿ ಮಾಟ ಮಂತ್ರಕ್ಕೆ ತಂದಿದ್ದ ವಸ್ತುಗಳು ಹಾಗೂ ಅಗೆಯಲು ತಂದಿದ್ದ ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಹಿಂದೆಯೂ ನಿಧಿಯಾಸೆಗೆ ಲಿಂಗವನ್ನು ಕೆಡವಿದ್ದ ದುಷ್ಕರ್ಮಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು. ಪುರಾತನ ದೇವಾಲಯ ಇದಾಗಿದ್ದು, ಶಿವಲಿಂಗಕ್ಕೆ ಸುಮಾರು ವರ್ಷಗಳಿಂದ ಸರ್ಪ ಕಾವಲಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಸ್ಥಳದಲ್ಲಿ ಅರಿಶಿಣ, ಕುಂಕುಮ, ತೆಂಗಿನ ಕಾಯಿ, ನಿಂಬೆಹಣ್ಣು ಪತ್ತೆಯಾಗಿದ್ದು, ವಾಮಾಚಾರದ ಮೂಲಕ ಹಾವಿಗೆ ತೊಂದರೆ ನೀಡಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ದೇವರ ಕೃಪೆಯೋ ಅಥವಾ ಧೈವ ಶಕ್ತಿಯ ಪ್ರಭಾವವೋ ನಿಧಿ ಸಿಗದೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

  • ದಶಕದ ಹಿಂದೆ ಕಳೆದೋಗಿದ್ದ ನದಿ ಮೂಲ ಹುಡುಕಿದ ಯುವಕರು

    ದಶಕದ ಹಿಂದೆ ಕಳೆದೋಗಿದ್ದ ನದಿ ಮೂಲ ಹುಡುಕಿದ ಯುವಕರು

    ಚಿಕ್ಕಮಗಳೂರು: ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನದಿ ಮೂಲವನ್ನು ಸ್ಥಳೀಯ ಯುವಕರೇ ಹುಡುಕಿಕೊಂಡು ಕೆರೆ ತುಂಬಿಸಿಕೊಳ್ಳಲು ಮುಂದಾಗಿರುವ ಘಟನೆ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

    ಸಿದ್ದಪ್ಪನ ಬೆಟ್ಟದಿಂದ ಹರಿದು ಬರುತ್ತಿದ್ದ ನದಿ ಮೂಲ ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮರಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದೆ. ಗಿಡಘಂಟೆಗಳಿಂದ ತುಂಬಿ ಪಾಳುಬಿದ್ದಿದ್ದ ಕೆರೆಯನ್ನು ಸ್ವಚ್ಛ ಮಾಡಿ, ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

    ತಾಲೂಕಿನ ಹಿರೇಗೌಜ ಗ್ರಾಮವಂದ್ರೆ ಭೀಕರ ಬರದ ತವರು. ಜನ, ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುತ್ತಿದ್ದರು. ನೀರಿನ ಸೌಲಭ್ಯ ನೀಡಬೇಕಿದ್ದ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ನಡೆ ಹಾಗೂ ನುಡಿ ಬಾಯಾರಿಕೆಯ ದಾಹವನ್ನು ನೀಗಿಸುತ್ತಿರಲಿಲ್ಲ. 250 ರಿಂದ 300 ಮನೆಗಳಿದ್ದ ಗ್ರಾಮಕ್ಕೆ ವಾರಕ್ಕೆ ನಾಲ್ಕೈದು ಟ್ಯಾಂಕರ್ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿತ್ತು.

    ಬೈಕಲ್ಲಿ ನೀರು ತರ್ತಿದ್ದರು: ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ದಿನನಿತ್ಯದ ಬಳಕೆ ಕಡಿಮೆಯಾಗುತ್ತಿದ್ದ ಕಾರಣ, ಹೆಚ್ಚುವರಿಯಾಗಿ ವಾರಗಟ್ಟಲೇ ಡ್ರಮ್ಮಿನಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಗ್ರಾಮದ ಪುರುಷರು ಬೈಕಿನಲ್ಲಿ ತೆರಳಿ ನೀರು ತರುತ್ತಿದ್ದರು. ಮಹಿಳೆಯರು ಕೂಡ ಸುತ್ತಮುತ್ತಲಿನ ತೋಟಗಳಿಂದ ನೀರನ್ನು ಹೊತ್ತು ತರುತ್ತಿದ್ದರು.

    ಸಪ್ತ ನದಿಗಳ ನಾಡು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿಗೆ ಬರ ಎಂದರೇ ಯಾರೂ ನಂಬಲ್ಲ. ಆದರೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರೋ ಹಿರೇಗೌಜ ಗ್ರಾಮದಲ್ಲಿ ನೀರಿನ ಬವಣೆ ಹೇಳತೀರದ್ದಾಗಿತ್ತು. ಜನ ಕೂಲಿ ಮಾಡಿ ನೀರನ್ನು ಕುಡಿಯುತ್ತಿದ್ರು. ಟ್ಯಾಂಕರ್ ನೀರಿಗೆ ನಿತ್ಯ 100 ರಿಂದ 200 ರೂ. ನೀರು ಖರೀದಿ ಮಾಡುತ್ತಿದ್ದರು. ವಿದ್ಯುತ್ ಸಮಸ್ಯೆಯಿಂದ ಟ್ಯಾಂಕರ್ ನೀರು ಕೂಡ ಕಷ್ಟಸಾಧ್ಯವಾಗಿತ್ತು.

    ಗ್ರಾಮದ ಮನೆಗೆ ಬೀಗವೇ ಹಾಕಲ್ಲ: ಹಿರೇಗೌಜ ಗ್ರಾಮದಲ್ಲಿ ಎಲ್ಲರೂ ಕೆಲಸಕ್ಕೆ ಹೋದರೂ ಯಾವ ಮನೆಗೂ ಬೀಗ ಹಾಕುತ್ತಿರಲಿಲ್ಲ. ಕಾರಣ ಪಂಚಾಯತಿ ಅವರು ಯಾವ ಸಂದರ್ಭದಲ್ಲಿಯಾದರೂ ನೀರನ್ನು ಬಿಡುತ್ತಿದ್ದರು. ಕೆಲ ಸಮಯ ದೊರೆಯುವ ನೀರನ್ನು ಸಂಗ್ರಹಿಸಲು ಸದಾ ಮನೆಯಲ್ಲಿ ಒಬ್ಬರು ಇರುತ್ತಿದ್ದರು. ಟ್ಯಾಂಕರ್ ಬಂದಾಗ ನೀರನ್ನು ತುಂಬಿಕೊಳ್ಳೋದಕ್ಕೆ ಮನೆಯಲ್ಲಿದ್ದವರು ಕಾಯುತ್ತಿದ್ದರು.

    ಕಳೆದ ಕೆಲ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರು ಸಮಸ್ಯೆ ಬಗೆಹರಿಸಿಕೊಳ್ಳಲು ಚಿಂತನೆ ನಡೆಸಿದ್ದರು. ಹಿಂದೆ ತಮ್ಮ ಊರಿನ ಕೆರೆಗೆ ಬರುತ್ತಿದ್ದ ನೀರಿನ ಮೂಲವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಕೆರೆಗೆ ನೀರು ಬರುತ್ತಿದ್ದ ನದಿಯ ಮೂಲವನ್ನು ಮತ್ತೆ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಆ ಮೂಲಕ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

    ನೀರಿನ ಮೂಲ ಪತ್ತೆ ಮಾಡಲು ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದ ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಕಾಡುಮೇಡುಗಳಲ್ಲಿ ಅಲೆದು ಊಟ-ತಿಂಡಿ, ನೀರನ್ನು ಹೊತ್ತು ಸಂಚರಿಸಿದ್ದರು. ಈ ವೇಳೆ ನದಿಯ ಮೂಲವನ್ನು ಯುವಕರು ಪತ್ತೆ ಮಾಡಿದ್ದಾರೆ. ಗ್ರಾಮದ ಯುವಕರ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

  • ಯೋಧ ಗ್ರಾಮದಲ್ಲಿ ಸೇನಾ ದಿನಾಚರಣೆ – ಮಾಜಿ, ಹಾಲಿ ಸೈನಿಕರನ್ನು ಮೆರವಣಿಗೆ ಮಾಡಿ ಗೌರವಾರ್ಪಣೆ

    ಯೋಧ ಗ್ರಾಮದಲ್ಲಿ ಸೇನಾ ದಿನಾಚರಣೆ – ಮಾಜಿ, ಹಾಲಿ ಸೈನಿಕರನ್ನು ಮೆರವಣಿಗೆ ಮಾಡಿ ಗೌರವಾರ್ಪಣೆ

    ಚಾಮರಾಜನಗರ: ಯೋಧ ಗ್ರಾಮ ಎಂದೇ ಕರೆಯಿಸಿಕೊಳ್ಳುವ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಸೇನಾ ದಿನ ಆಚರಿಸಲಾಯಿತು. ಈ ವೇಳೆ ಮಾಜಿ, ಹಾಲಿ ಸೈನಿಕರನ್ನು ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು.

    ಮಾಜಿ ಸೈನಿಕರು, ರಜೆ ಮೇಲೆ ಬಂದಿರುವ ಯೋಧರನ್ನು ಶಾಲಾ ಮಕ್ಕಳ ಬ್ಯಾಂಡ್ ಟ್ರೂಪ್‍ನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಕ್ಕಳು, ಗ್ರಾಮಸ್ಥರು ಭಾರತ ಮಾತೆಗೆ ಜೈಕಾರ ಹಾಕುತ್ತಾ ದೇಶಭಕ್ತಿ ಪಸರಿಸಿದರು.

    ಸೇನಾ ದಿನ ಆಚರಣೆ ಹಿನ್ನೆಲೆ ಚರ್ಚ್ ಪಾದ್ರಿ ಕ್ರಿಸ್ಟೋಫರ್ ಸಗಾಯ್ ರಾಜ್ ನೇತೃತ್ವದಲ್ಲಿ ಗ್ರಾಮಸ್ಥರು ಹುತಾತ್ಮ ಯೋಧರಿಗೆ ಮೇಣದ ಬತ್ತಿ ಹಚ್ಚಿ ನಮನ ಸಲ್ಲಿಸಿದರು. ಸಂತ ಮೇರಿ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

    ಈ ಗ್ರಾಮದಲ್ಲಿ 114 ಮಂದಿ ಯೋಧರಿದ್ದು, ಕಾರ್ಗಿಲ್ ಸಮರದಲ್ಲಿ ಗ್ರಾಮದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಅಸುನೀಗಿದ ಸೈನಿಕರ ಪತ್ನಿಯರೂ ಗ್ರಾಮದಲ್ಲಿದ್ದಾರೆ.

  • ಗ್ರಾಮಸ್ಥರಲ್ಲಿ ಸಂಕ್ರಾಂತಿ ಅಂದ್ರೆ ಭಯ- ಹಬ್ಬದ ಬದಲಿಗೆ ಬಸವ ಜಯಂತಿ ಆಚರಣೆ

    ಗ್ರಾಮಸ್ಥರಲ್ಲಿ ಸಂಕ್ರಾಂತಿ ಅಂದ್ರೆ ಭಯ- ಹಬ್ಬದ ಬದಲಿಗೆ ಬಸವ ಜಯಂತಿ ಆಚರಣೆ

    ಕೋಲಾರ: ಸಂಕ್ರಾಂತಿ ವರ್ಷದ ಮೊದಲ ಹಬ್ಬವಾದ ಕಾರಣ ನಾಡಿನ ಎಲ್ಲೆಡೆ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೋಲಾರ ಅರಾಭಿಕೊತ್ತನೂರು ಗ್ರಾಮಸ್ಥರಲ್ಲಿ ಸಂಕ್ರಾಂತಿ ಎಂದರೇ ಭಯ, ಆತಂಕ ಎದುರಾಗುತ್ತದೆ. ಸಂಕ್ರಾಂತಿ ಹಬ್ಬ ಮಾಡಿದರೆ ಗ್ರಾಮಕ್ಕೆ ಕೇಡಾಗುತ್ತದೆ, ದನ-ಕರುಗಳು ಒಂದೊಂದಾಗಿ ಸಾಯುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದೆ.

    ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇತ್ತೀಚೆಗಂತೂ ಗ್ರಾಮದ ಹಲವರು ಉತ್ತಮ ಶಿಕ್ಷಣ ಪಡೆದು ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಂಕ್ರಾಂತಿ ಹಬ್ಬವನ್ನು ಮಾಡಿದ್ರೆ ಊರಿಗೆ ಕೆಟ್ಟದಾಗುತ್ತದೆ ಎಂಬ ಹಿರಿಯ ನಂಬಿಕೆಯಂತೆ ಇಂದಿಗೂ ಈ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡುವುದಿಲ್ಲ.

    ಪಕ್ಕದ ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರೂ ಅರಾಭಿಕೊತ್ತನೂರಲ್ಲಿ ಮಾತ್ರ ಅಂದು ಯಾವುದೇ ವಿಶೇಷ ಆಚರಣೆ ಮಾಡುವುದಿಲ್ಲ. ಕಳೆದ 300 ವರ್ಷಗಳ ಹಿಂದೆ ಅರಾಭಿಕೊತ್ತನೂರು ಗ್ರಾಮದಲ್ಲಿ ಕಾಯಿಲೆಯೊಂದು ಕಾಣಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾವನ್ನಪ್ಪುತ್ತಿದ್ದವು. ಈ ವೇಳೆ ದಿಕ್ಕು ತೋಚದಂತಾದ ಊರಿನ ಹಿರಿಯರು ಅನಾಹುತವನ್ನು ತಪ್ಪಿಸುವಂತೆ ಊರಿನ ಬಸವಣ್ಣನಲ್ಲಿ ಮನವಿ ಮಾಡಿದ್ದರು. ಕಾಯಿಲೆ ನಿಯಂತ್ರಣಕ್ಕೆ ಬಂದು ಜಾನುವಾರುಗಳ ಸಾವು ನಿಂತರೆ ಸಂಕ್ರಾಂತಿ ಹಬ್ಬದಂದು ದನ-ಕರುಗಳಿಗೆ ಮಾಡುವ ಪೂಜೆಯನ್ನು ನಿಲ್ಲಿಸಿ ಬೇರೊಂದು ದಿನ ಬಸವಣ್ಣನಿಗೆ ಪೂಜೆ ಮಾಡುವುದಾಗಿ ಪ್ರಾರ್ಥನೆ ಮಾಡಿಕೊಂಡಿದ್ದರಂತೆ.

    ಹಿರಿಯರ ಪ್ರಾರ್ಥನೆ ಬಳಿಕ ರಾಸುಗಳ ಸಾವು ನಿಯಂತ್ರಣಕ್ಕೆ ಬಂದಿತ್ತು. ಅಂದಿನಿಂದಲೂ ಈ ಗ್ರಾಮದಲ್ಲಿ ಸಂಕ್ರಾಂತಿಯಂದು ಜಾನುವಾರುಗಳಿಗೆ ಯಾವುದೇ ಪೂಜೆ ಮಾಡದೆ, ಸಂಕ್ರಾಂತಿ ಬಳಿಕ ಗ್ರಾಮದಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ರಾಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇಂದಿಗೂ ಇದೇ ಪದ್ದತಿಯನ್ನು ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ.

  • ದನದ ಕೊಟ್ಟಿಗೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

    ದನದ ಕೊಟ್ಟಿಗೆಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ತಟದ ನರಕಲದಿನ್ನಿ ಗ್ರಾಮದಲ್ಲಿ ಏಕಾಏಕಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಆತಂಕಕ್ಕೊಳಪಡಿಸಿದೆ.

    ತಡರಾತ್ರಿ ಗ್ರಾಮದೊಳಗೆ ಬಂದಿರುವ ಮೊಸಳೆ ಗ್ರಾಮದ ಹೊರವಲಯದಲ್ಲಿರುವ ರೈತರೊಬ್ಬರ ದನದ ಕೊಟ್ಟಿಗೆಯಲ್ಲಿ ಅಡಗಿತ್ತು. ಬೆಳಗ್ಗೆ ಮೊಸಳೆಯನ್ನು ಗಮನಿಸಿದ ಗ್ರಾಮಸ್ಥರು ಎಚ್ಚೆತ್ತಿದ್ದರಿಂದ ಯಾವುದೇ ಅಪಾಯವಾಗಿಲ್ಲ.

    ಮೊಸಳೆಯನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಅದೃಷ್ಟವಶಾತ್ ಮೊಸಳೆಯಿಂದ ಗ್ರಾಮದಲ್ಲಿ ಯಾವುದೇ ಕೆಡುಕಾಗಿಲ್ಲ. ಆತಂಕಗೊಂಡಿರುವ ಕೆಲ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಮೊಸಳೆಯನ್ನು ಗಾಯಗೊಳಿಸಿದ್ದಾರೆ.

    ನದಿ ಪಕ್ಕದಲ್ಲೆ ಗ್ರಾಮ ಇರುವುದರಿಂದ ಆಹಾರ ಹುಡುಕಿಕೊಂಡು ಮೊಸಳೆ ಗ್ರಾಮಕ್ಕೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಈಗ ರಾತ್ರಿ ವೇಳೆ ಓಡಾಡಲು ಗ್ರಾಮಸ್ಥರು ಹೆದರಿಕೊಂಡಿದ್ದಾರೆ.