Tag: villagers

  • ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಕನಕಪುರದ ಕಪಾಲ ಬೆಟ್ಟದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ತಲೆ ಎತ್ತಿದ್ದ ಏಸು ಪ್ರತಿಮೆ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು.

    ಅಕ್ರಮವಾಗಿ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಏಸು ಪ್ರತಿಮೆ ಮೇಲೆ ಹಿಂದೂಪರ ಸಂಘಟನೆಗಳ ಕಣ್ಣು ಬಿದ್ದು ಹೋರಾಟಕ್ಕಿಳಿದಿದ್ರು. ಹೀಗಾಗಿ ಎಚ್ಚೆತ್ತ ತಹಶೀಲ್ದಾರ್ ಅಜಿತ್ ರೈ ಇಂದು ಏಸು ಪ್ರತಿಮೆ ತೆರವು ಮಾಡಿದ್ರು. ಆದರೆ ಗ್ರಾಮಸ್ಥರು ಮಾತ್ರ ಏಸು ಪ್ರತಿಮೆ ತೆರವು ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಹೌದು. ಬೆಟ್ಟದ ಮೇಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗ್ರಾಮದ ಕೈಸ್ಥ ಧರ್ಮ ಬೆಂಬಲಿತರು ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರಿಟ್ಟು, ಬೆಟ್ಟದ ಮೇಲೆ ಅಕ್ರಮವಾಗಿ ಏಸು ಪ್ರತಿಮೆ, ಶಿಲುಬೆ ಹಾದಿ ನಿರ್ಮಾಣ ಮಾಡಿ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಗಳ ಕಣ್ಣಿಗೆ ಬಿದ್ದು ಕನಕಪುರ ಕಪಾಲ ಬೆಟ್ಟದಂತೆ ದೊಡ್ಡ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಇಂದು ಏಸು ಪ್ರತಿಮೆ ತೆರವು ಕಾರ್ಯ ನಡೆಸಿದರು.

    ದೊಡ್ಡಬಳ್ಳಾಪುರ ಡಿವೈಎಸ್‍ಪಿ ರಂಗಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು, ಕ್ರೇನ್ ಹಾಗೂ ಟಿಪ್ಪರ್‍ಗಳ ಮೂಲಕ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ತಹಶೀಲ್ದಾರ್ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು ಮಾಡಿದರು.

    ತೆರವು ಮಾಡಿದ ಏಸು ಪ್ರತಿಮೆಯನ್ನ ಟಿಪ್ಪರ್ ಮೂಲಕ ಗ್ರಾಮದಲ್ಲಿನ ಚರ್ಚ್‍ಗೆ ಸ್ಥಳಾಂತರಿಸಲಾಯಿತು. ಆದರೆ ಈ ವೇಳೆ ಬೆಳಗ್ಗೆಯಿಂದಲೂ ಊಟ ತಿಂಡಿ ಬಿಟ್ಟು ಚರ್ಚ್ ಬಳಿ ಮೊಕ್ಕಾಂ ಹೂಡಿದ್ದ ಕೈಸ್ತ ಧರ್ಮೀಯ ಗ್ರಾಮಸ್ಥರು, ಪ್ರತಿಮೆ ಆಗಮಿಸುತ್ತಿದ್ದಂತೆ ಕೈಯಲ್ಲಿ ಮೊಂಬತ್ತಿ ಹಿಡಿದು ಕಣ್ಣಿರು ಸುರಿಸಿ ಗೋಳಾಡಿದರು. ಕನಿಷ್ಠ ಗುಡ್ ಪ್ರೈಡೇ ಹಬ್ಬದವರೆಗೂ ಏಸು ಪ್ರತಿಮೆ ತೆರವು ಮಾಡದಂತೆ ಮನವಿ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಅಂತ ತಮ್ಮ ಅಸಮಾಧಾನ ಹೊರಹಾಕಿದ್ರು.

    ಕನಕಪುರ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿವಾದಂತೆ ಈ ಮಹಿಮಾ ಬೆಟ್ಟದ ಏಸು ಪ್ರತಿಮೆಯೂ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತ ತಾಲೂಕು ಆಡಳಿತ ವಿವಾದ ತೀವ್ರ ಸ್ವರೂಪ ಪಡೆಯುವ ಮುನ್ನವೇ ಏಸು ಪ್ರತಿಮೆ ತೆರವು ಮಾಡಿದೆ. ಇದು ಸ್ಥಳೀಯ ಗ್ರಾಮಸ್ಥರ ಕಣ್ಣೀರಿಗೂ ಕಾರಣವಾಗಿದೆ.

  • ಚುಂಬಿಸ್ತಾರೆ, ಜೋಡಿಯಾಗಿ ಕುಣಿಯುತ್ತಾರೆ -ದಾವಣಗೆರೆಯಲ್ಲೊಂದು ವಿಶೇಷ ಜಾತ್ರೆ

    ಚುಂಬಿಸ್ತಾರೆ, ಜೋಡಿಯಾಗಿ ಕುಣಿಯುತ್ತಾರೆ -ದಾವಣಗೆರೆಯಲ್ಲೊಂದು ವಿಶೇಷ ಜಾತ್ರೆ

    ದಾವಣಗೆರೆ: ಜಾತ್ರೆ ಎಂದರೆ ಸಾಕು ಪೂಜೆ, ದೇವಿ ಮೆರವಣೆಗೆ, ಭರ್ಜರಿ ಬಾಡೂಟ ಎಲ್ಲಾ ಇರುತ್ತೆ. ನೆಂಟರೆಲ್ಲಾ ಬಂದು ಮನೆಯಲ್ಲಿ ಸಂಭ್ರಮದ ವಾತವರಣದ ಇರುತ್ತದೆ. ಅಲ್ಲದೆ ಜಾತ್ರೆಯಲ್ಲಿ ಆರ್ಕೇಸ್ಟ್ರಾ, ರಿಕಾರ್ಡಿಂಗ್ ಡ್ಯಾನ್ಸ್, ನಾಟಕ ಸೇರಿದಂತೆ ಹಲವು ರೀತಿಯ ಮನೋರಂಜನೆ ಕೂಡ ಇರುತ್ತದೆ. ಆದರೆ ದಾವಣಗೆರೆ ತಾಲೂಕಿನ ಮಾಗಾನಹಳ್ಳಿ ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿ ದೇವಿಯ ಮುಂದೆ ಭಕ್ತರು ಜೋಡಿಗಳು ಡ್ಯಾನ್ಸ್ ಮಾಡಿ, ಮುತ್ತು ಕೊಟ್ಟು ವಿಶಿಷ್ಟವಾಗಿ ಜಾತ್ರೆ ಆಚರಿಸುತ್ತಾರೆ.

    ಹೌದು. ಮಾಗಾನಹಳ್ಳಿಯ ಉರಮ್ಮ ದೇವಿಯ ಎದುರು ಭಕ್ತರು ಜೋಡಿಯಾಗಿ ಡ್ಯಾನ್ಸ್ ಮಾಡಿ, ಮುತ್ತು ಕೊಡುವುದೇ ಈ ಜಾತ್ರೆಯ ವಿಶೇಷವಾಗಿದೆ. ಈ ಊರಲ್ಲಿ 10 ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಅದ್ಧೂರಿಯಾಗಿ ಆಚರಿಸಿ ದೇವರ ಕೃಪಗೆ ಪಾತ್ರರಾಗುತ್ತಾರೆ.

    ಈ ಜಾತ್ರೆಯಲ್ಲಿ ಅಸಾಧಿ ಸಂಪ್ರದಾಯದ ನೃತ್ಯ ಮಾಡಲಾಗುತ್ತೆ. ಸಾಮಾನ್ಯವಾಗಿ ದಲಿತರು ಅಸಾಧಿ ಪದ ಹಾಡಿ ನೃತ್ಯ ಮಾಡುತ್ತಾರೆ. ಹೀಗಾಗಿ ಇಲ್ಲಿ ಕೂಡ ಸಂಪ್ರದಾಯದಂತೆ ದಲಿತ ಮಹಿಳೆಯೊಬ್ಬಳು ಗ್ರಾಮದ ಜಾತ್ರೆ ವೇಳೆ ನೃತ್ಯ ಮಾಡುತ್ತಾಳೆ. ಈ ಮಹಿಳೆ ಜೊತೆ ಗ್ರಾಮದ ಮುಖಂಡ ಕೂಡ ಹೆಜ್ಜೆ ಹಾಕುತ್ತಾನೆ. ನೃತ್ಯ ಮಾಡುವ ವೇಳೆ ಆ ಮಹಿಳೆಗೆ ಮುತ್ತು ಕೊಡುವುದೇ ಈ ಜಾತ್ರೆಯ ವಿಶೇಷವಾಗಿದೆ.

    ದೊಡ್ಡವರು ಮಾತ್ರವಲ್ಲ ಮಕ್ಕಳು, ವೃದ್ಧರು ಕೂಡ ಡ್ಯಾನ್ಸ್ ಮಾಡಿ ಜಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ಈ ರೀತಿ ನೃತ್ಯ ಮಾಡಿದರೆ ಗ್ರಾಮ ದೇವಿ ಸಂತೃಪ್ತಳಾಗುತ್ತಾರೆ. ತಮ್ಮ ಸಂಕಷ್ಟ ನಿವಾರಣೆಯಾಗುತ್ತದೆ ಎಂಬುದು ಗ್ರಾಮದ ಜನರ ನಂಬಿಕೆಯಾಗಿದೆ. ಇಂಥ ವಿಶಿಷ್ಟ ಆಚರಣೆ ನಡೆಸುವ ಮೂಲಕ ಇಡೀ ಗ್ರಾಮವೇ ಜಾತ್ರೆ ಮಾಡುತ್ತದೆ.

    ತುಂಬಾ ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ, ನಮ್ಮ ಹಿರಿಯರ ಮಾರ್ಗದರ್ಶನದಂತೆ ನಾವು ಹಬ್ಬ ಮಾಡುತ್ತೇವೆ. ಜಾತ್ರೆಯಲ್ಲಿ ದೇವರಿಗೆ ವಿಶೇಷ ಪೂಜೆ ವಿಶಿಷ್ಟ ಅಡುಗೆ ಮಾಡುತ್ತೇವೆ. ಜೊತೆಗೆ ಅಸಾಧಿ ಸಂಪ್ರದಾಯದಂತೆ ನೃತ್ಯ ಮಾಡುವುದು ಒಂದು ಸಂಪ್ರದಾಯ. ಹತ್ತು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಅಸಾಧಿ ಆಚರಣೆ ಪ್ರಮುಖವಾಗಿದ್ದು, ಇಲ್ಲಿ ಯಾವುದೇ ಅಶ್ಲೀಲತೆ ಇರುವುದಿಲ್ಲ. ಹೀಗೆ ಮಾಡಿದರೆ ಊರಮ್ಮ ದೇವಿ ಸಂತೃಷ್ಟವಾಗಿ ಇಡೀ ಗ್ರಾಮಕ್ಕೆ ಒಳಿತು ಮಾಡುತ್ತಾಳೆ ಎನ್ನುವುದು ಇಲ್ಲಿನ ನಂಬಿಕೆ ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.

    ವಿಶಿಷ್ಟ ಹಬ್ಬ ಆಚರಣೆ ಹಿನ್ನೆಲೆ ಸುತ್ತಮುತ್ತ ಗ್ರಾಮದ ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೂ ಅಸಾಧಿ ಸಂಪ್ರಾದಾಯದಂತೆ ಇಲ್ಲಿ ನೃತ್ಯ ಮಾಡಿ ಕಿಸ್ ಮಾಡುವುದು ಸಖತ್ ಫೇಮಸ್ ಆಗಿದೆ. ಇದು ಒಂದು ಸಂಪ್ರದಾಯವಷ್ಟೇ ಎಂಬುದು ಜನರ ನಂಬಿಕೆಯಾಗಿದೆ.

  • ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ನಿಧಿ ಶೋಧನೆ ನಡೆಸಲು ಹೋದ ಅರ್ಚಕನ ಜೊತೆ ಐವರು ಅರೆಸ್ಟ್

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಬಡಗೋಡಿನ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿಧಿ ಶೋಧನೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

    ಬಡಗೋಡಿಯ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನಯ್ಯ, ಬರದವಳ್ಳಿಯ ಹಾಲಸ್ವಾಮಿ, ಶಿರಸಿಯ ಸೂರಜ್, ರಘುನಾಥ್ ಮತ್ತು ಸಾಗರದ ಭಾಸ್ಕರ್ ಬಂಧಿತ ಆರೋಪಿಗಳು. ಇದರ ಜೊತೆಗೆ ಆರೋಪಿಗಳು ನಿಧಿ ಶೋಧಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಕಾರು, ನೆಲ ಅಗಿಯಲು ತಂದಿದ್ದ ಸಾಮಾಗ್ರಿ, ಲೋಹ ಪತ್ತೆಯ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗ್ರಾಮದ ದೇವಸ್ಥಾನದ ಹಿಂಭಾಗ ನಿಧಿ ಶೋಧ ಕಾರ್ಯದಲ್ಲಿ ಕೆಲವರು ತೊಡಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಈ ವೇಳೆ ಆರೋಪಿಗಳು ವಾಹನದಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ಆರೋಪಿಗಳನ್ನು ಸ್ಥಳದಲ್ಲಿಯೇ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಲು ಯಶಸ್ವಿಯಾಗಿದ್ದಾರೆ. ನಿಧಿ ಶೋಧನೆಯಲ್ಲಿ ತೊಡಗಿದ್ದ ಐವರು ಆರೋಪಿಗಳ ವಿರುದ್ದ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಮೊದಲು ಗ್ರಾಮದ ರಸ್ತೆ ಅಭಿವೃದ್ಧಿ ಮಾಡಿ, ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿಕೊಳ್ಳಿ: ಕಿಮ್ಮನೆ ಆಗ್ರಹ

    ಮೊದಲು ಗ್ರಾಮದ ರಸ್ತೆ ಅಭಿವೃದ್ಧಿ ಮಾಡಿ, ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿಕೊಳ್ಳಿ: ಕಿಮ್ಮನೆ ಆಗ್ರಹ

    ಶಿವಮೊಗ್ಗ: ಮೊದಲು ನಮ್ಮ ಗ್ರಾಮದ ಸೇತುವೆ, ರಸ್ತೆ ದುರಸ್ತಿ ಮಾಡಿ ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿ ಎಂದು ಆಗ್ರಹಿಸಿ ಕಾಲುವೆ ಕಾಮಗಾರಿಯನ್ನು ಗ್ರಾಮಸ್ಥರು ನಿಲ್ಲಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಇಲ್ಲಿನ ಸಾವೇಹಕ್ಲು ಜಲಾಶಯದಿಂದ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸುವ ಕಾಲುವೆಯ ದುರಸ್ತಿ ಕಾಮಗಾರಿಯನ್ನು ಕೆಪಿಸಿ ನಿರ್ವಹಿಸುತ್ತಿದೆ. ಬುಧವಾರ ಕಾಮಗಾರಿ ಆರಂಭವಾಗುತ್ತಿದ್ದಂತೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಜಮಾವಣೆಯಾದ ಸ್ಥಳೀಯರು ಕಾಮಗಾರಿ ನಡೆಸದಂತೆ ತಾಕೀತು ಮಾಡಿದರು. ಅಲ್ಲದೇ ಕಾಮಗಾರಿ ನಡೆಸುವುದಕ್ಕೆ ಗ್ರಾಮಸ್ಥರು ಅವಕಾಶ ಕೊಡದೆ ನಿಲ್ಲಿಸಿದರು.

    ಈ ಸುದ್ದಿ ತಿಳಿಯುತ್ತಿದ್ದಂತೆ ಕರಿಮನೆ ಗ್ರಾಮಪಂಚಾಯ್ತಿಗೆ ಭೇಟಿ ನೀಡಿದ ಕೆಪಿಸಿ ಅಧಿಕಾರಿಗಳು, ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲುವೆಯಿಂದ ನೀರು ಹರಿಸುತ್ತಿರುವ ಕಾರಣ ಮಳಲಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಲುವೆ ದುರಸ್ತಿ ಕಾಮಗಾರಿಯನ್ನು ವರ್ಷಂಪ್ರತಿ ಮಾಡುತ್ತಿದ್ದೀರಿ. ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಮಾಡುವವರೆಗೆ ಕಾಲುವೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದರು.

    ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗ್ರಾಮಸ್ಥರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

  • ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    – ಈ ಕುಟುಂಬಕ್ಕೆ ಊರ ಜಾತ್ರೆಗೂ ನೋ ಎಂಟ್ರಿ

    ಬೆಳಗಾವಿ/ಬೆಂಗಳೂರು: ಪುಲ್ವಾಮ ದಾಳಿ ನಡೆದಾಗ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದರು. ಯೋಧರ ಛಿದ್ರ ಛಿದ್ರವಾದ ದೇಹಗಳನ್ನು ನೋಡಿ ಮನಸ್ಸು ವಿಲ ವಿಲ ಅಂದಿತ್ತು. ಮೊಂಬತ್ತಿಯ ಮಂದಬೆಳಕಿನಲ್ಲಿ ಮೌನವೇ ಮಾತಾಗಿತ್ತು. ಆದರೆ ಕರುನಾಡಿನ ಹೆಮ್ಮೆಯ ಯೋಧರೊಬ್ಬರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಅವರ ಜೊತೆ ಯಾರಾದರೂ ಮಾತನಾಡಿದರೆ ಐದು ಸಾವಿರ ದಂಡ ವಿಧಿಸುವ ನೀಚ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.

    ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.

    ಇದರಿಂದ ಯೋಧ ವಿಠಲ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಕೂಡ ಮುಂದೂಡುವ ಪರಿಸ್ಥಿತಿಗೆ ಬಂದಿದ್ದಾರೆ. ದೇಶ ಕಾಯುವ ಯೋಧನಿಗೆ ಶತ್ರುಗಳ ಕಾಟಕ್ಕಿಂತ ಈಗ ನೆರೆಹೊರೆಯವರ ಕಾಟವೇ ಹೆಚ್ಚಾಗಿ ಬದುಕೇ ಸಾಕಾಗಿದೆ ಎನ್ನುವ ನೋವು ತುಂಬಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಠಲ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಮನೆ ಮುಂದೆ ಒಂದು 30*40 ಜಾಗ ಇದೆ. ಹೊಲದಲ್ಲೂ ಮನೆ ಕಟ್ಟಿದ್ದೀವಿ. ಆ ಜಾಗವನ್ನು ಅಂಗನವಾಡಿಗೆ ತಗೋಳ್ತೀವಿ, ಸರ್ಕಾರಿ ಜಾಗ ಅಂತ ಹೇಳಿ ಒತ್ತಾಯವಾಗಿ ತಗೊಳೋಕೆ ಗ್ರಾಮದ ಕೆಲವರು ಪ್ರಯತ್ನಿಸಿದರು. ಎಲ್ಲಾ ನಮ್ಮ ಅಪ್ಪನ ಹೆಸರಲ್ಲೇ ದಾಖಲೆಗಳು ಇದೆ. ಡಿಸಿ ಅವರಿಗೂ ಈ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದೆವು. ಯಾರು ಏನೂ ಮಾಡಲಿಲ್ಲ. ನಾನು ತುರ್ತು ರಜೆ ಹಾಕಿ ಬಂದು ಡಿಸಿಗೆ ಕೇಳಿದೆ, ಇವೆಲ್ಲಾ ನಾರ್ಮಲ್, ಊರಲ್ಲಿ ಇದೆಲ್ಲಾ ಇದ್ದೀದ್ದೆ ಅಂತ ಹೇಳಿ ಕಳುಹಿಸಿದರು. ಆದರೆ ಜಾಗ ಕೊಟ್ಟಿಲ್ಲ ಅಂತ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಯಾರು ನಮ್ಮ ಬಳಿ ಮಾತಾಡೊ ಹಂಗಿಲ್ಲ, ಮಾತಾಡಿದರೆ ಅವರಿಗೆ 5 ಸಾವಿರ ದಂಡ, ಯಾವುದೇ ಕಾರ್ಯಕ್ರಮ ಇದ್ದರೂ ನಮ್ಮ ಜನ ಕರೆಯೋ ಹಂಗಿಲ್ಲ ಎಂದು ಕಷ್ಟವನ್ನು ಹೇಳಿಕೊಂಡರು.

    ಯೋಧನ ಕುಟುಂಬ ಕಳೆದ ಮೂರು ವರ್ಷದಿಂದ ನರಕ ನೋಡುತ್ತಿದ್ದರೂ, ಇಂತಹ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿಯ ರಾಜಕೀಯ ಶೂರರ ಮನಸ್ಸುಗಳು, ಈ ಯೋಧನ ಕುಟುಂಬದ ಪರ ನಿಲ್ಲುತ್ತಾ? ಅವರ ಕುಟುಂಬವನ್ನು ಬಹಿಷ್ಕಾರದ ಶಿಕ್ಷೆಯಿಂದ ಪಾರು ಮಾಡುತ್ತಾರಾ? ಇಲ್ಲವೋ ಎನ್ನುವುದನ್ನ ಕಾದು ನೋಡಬೇಕಿದೆ.

  • ಮೂಢನಂಬಿಕೆ ಹೆಸರಲ್ಲಿ ಪ್ರಾಣಿಗಳ ಮಾರಣಹೋಮ – 30 ಕೋಣ, 300ಕ್ಕೂ ಹೆಚ್ಚು ಕುರಿ, ಮೇಕೆಗಳ ವಧೆ

    ಮೂಢನಂಬಿಕೆ ಹೆಸರಲ್ಲಿ ಪ್ರಾಣಿಗಳ ಮಾರಣಹೋಮ – 30 ಕೋಣ, 300ಕ್ಕೂ ಹೆಚ್ಚು ಕುರಿ, ಮೇಕೆಗಳ ವಧೆ

    – ಕೋಣ ಕಡಿಯಲು ಆಂಧ್ರದಿಂದ ಬರುತ್ತಾನೆ ಭೂತಬಿಲ್ಲಿ
    – ಪ್ರಾಣಿಬಲಿಯಿಂದ ಸಂಪೂರ್ಣ ರಕ್ತಮಯವಾಗಿರುವ ಗ್ರಾಮಗಳು

    ರಾಯಚೂರು: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೌಢ್ಯಾಚರಣೆಗಳಿಗೆ ಯಾವುದೇ ನಿರ್ಬಂಧಗಳು ಬಿದ್ದಿಲ್ಲ. ಮೂಢನಂಬಿಕೆಯ ಆಚರಣೆ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದರೂ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ. ರಾಯಚೂರಿನಲ್ಲಿ ನೂರಾರು ಪ್ರಾಣಿಗಳನ್ನ ದೇವರ ಹೆಸರಿನಲ್ಲಿ ಬಲಿ ಕೊಟ್ಟರೂ ಪೊಲೀಸ್ ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

    ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ಐದು ವರ್ಷಕ್ಕೆ ಒಮ್ಮೆ ನಡೆಯುವ ದ್ಯಾವಮ್ಮ ಜಾತ್ರೆಯಲ್ಲಿ ಕುರಿ, ಕೋಣಗಳ ಬಲಿ ಬೇಕೆ ಬೇಕಂತೆ. ಗ್ರಾಮ ದೇವತೆಗೆ ಹರಕೆ ತೀರಿಸಲು ಲೆಕ್ಕವಿಲ್ಲದಷ್ಟು ಕೋಣ, ಕುರಿ, ಮೇಕೆಗಳು ಪ್ರಾಣ ಕಳೆದುಕೊಳ್ಳುತ್ತಿವೆ. ತಾಲೂಕಿನ ಕುರಡಿ ಹಾಗೂ ಮಾಚನೂರು ಗ್ರಾಮದಲ್ಲಿ ಎಗ್ಗಿಲ್ಲದೆ ಪ್ರಾಣಿ ಬಲಿ ನಡೆದಿದೆ. ದ್ಯಾವಮ್ಮ, ದುರುಗಮ್ಮ ದೇವಿ ಜಾತ್ರೆ ಹೆಸರಿನಲ್ಲಿ ಸುಮಾರು 30 ಕೋಣ, 300ಕ್ಕೂ ಹೆಚ್ವು ಕುರಿ-ಮೇಕೆಗಳನ್ನ ಬಲಿ ಕೊಡಲಾಗಿದೆ. ಜಾತ್ರೆಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಯಿದ್ದರೂ ಸಾರ್ವಜನಿಕವಾಗಿ ಹಗಲು, ರಾತ್ರಿ ವೇಳೆ ನಿರಂತರವಾಗಿ ಪ್ರಾಣಿ ಬಲಿ ನಡೆಸಲಾಗಿದೆ.

    ಪ್ರಾಣಿ ಬಲಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಡೆಯಲು ಸಾಧ್ಯವಾಗಿಲ್ಲ. ಇಡೀ ಕುರಡಿ ಹಾಗೂ ಮಾಚನೂರು ಗ್ರಾಮಗಳು ಪ್ರಾಣಬಲಿಯಿಂದ ರಕ್ತಮಯವಾಗಿದೆ. ಕೋಣ ಕಡಿಯಲು ಲಕ್ಷಾಂತರ ರೂಪಾಯಿ ಕೊಟ್ಟು ಆಂಧ್ರದಿಂದ ವ್ಯಕ್ತಿಗಳನ್ನ ಕರೆಸಲಾಗಿದೆ. ಅವರನ್ನ ಭೂತಬಿಲ್ಲಿ ಅಂತ ಕರೆಯುತ್ತಾರೆ. ರಾತ್ರಿವೇಳೆ ಕೋಣಗಳಿಗೆ ಸುಣ್ಣದ ನೀರನ್ನ ಕುಡಿಸಿ ಬಲಿ ಕೊಡಲಾಗಿದೆ. ಆದ್ರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮಾತ್ರ ನಮ್ಮ ಸಿಬ್ಬಂದಿಯನ್ನ ನೇಮಿಸಿದ್ದೇವೆ ಅಂತಹದ್ದೇನು ನಡೆದಿಲ್ಲ ಎಂದು ಘಟನೆಯನ್ನ ಮುಚ್ಚಿಹಾಕಲು ಮುಂದಾಗಿದ್ದಾರೆ.

    ಐದು ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಯಲ್ಲಿ ಕುರಿ, ಕೋಣಗಳನ್ನ ಬಲಿ ಕೊಡಲು ಒಂದು ತಿಂಗಳಿನಿಂದ ಸಾಕುತ್ತಾರೆ. ಹರಕೆ ತೀರಿಸಿಕೊಳ್ಳಲು ದ್ಯಾವಮ್ಮ ದೇವಿ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರೆ. ರಾತ್ರಿಯಲ್ಲಾ ಗ್ರಾಮದಲ್ಲಿ ವಿದ್ಯುತ್ ತೆಗೆದು ಕೇವಲ ಪಂಜನ್ನ ಹಿಡಿದು ಬೂತಬಿಲ್ಲಿ ಮೂಲಕ ಕೋಣ ಬಲಿ ಕೊಟ್ಟಿದ್ದಾರೆ. ಬೆಳಗ್ಗೆ ಕುರಿಗಳ ಬಲಿ ನಿರಂತರವಾಗಿ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಪ್ಪಿತಸ್ಥರನ್ನ ಪತ್ತೆಹಚ್ವಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದಾರೆ.

    ಆದರೆ ರಾಜಾರೋಷವಾಗಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆದಿದ್ದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮಾತ್ರ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಮೌಢ್ಯ ನಿಷೇಧ ಕಾಯ್ದೆ ಜಾರಿಯಾದರೂ ಮೂಢ ಆಚರಣೆಗಳು ಮುಂದುವರೆದಿರುವುದು ವಿಪರ್ಯಾಸ. ಕನಿಷ್ಠ ಈಗಲಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಹಗಲು ಹೊತ್ತಲ್ಲೇ ಚಿರತೆ ಕಾಟ- ಗ್ರಾಮಸ್ಥರು ಕಂಗಾಲು

    ಹಗಲು ಹೊತ್ತಲ್ಲೇ ಚಿರತೆ ಕಾಟ- ಗ್ರಾಮಸ್ಥರು ಕಂಗಾಲು

    ಹಾಸನ: ಹಗಲು ಹೊತ್ತಿನಲ್ಲೇ ಚಿರತೆಯೊಂದು ಹೊಲ, ಮನೆಗಳ ಸಮೀಪ ಓಡಾಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಜೀವ ಕೈಯಲ್ಲೇ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಗಾನಗರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಚಿರತೆ ಓಡಾಡುವ ದೃಶ್ಯವನ್ನು ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಗಲು ಹೊತ್ತಿನಲ್ಲೇ ಗ್ರಾಮದ ಸುತ್ತ-ಮುತ್ತ ಚಿರತೆ ಜನರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿ ಚಿರತೆ ಹಿಡಿಯುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

    ಚಿರತೆಯ ಕಾಟದಿಂದ ಬೇಸತ್ತ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಗಲು ಹೊತ್ತಿನಲ್ಲೇ ಚಿರತೆ ಓಡಾಡುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಚಿರತೆ ದಾಳಿಯಿಂದ ಅನಾಹುತ ಸಂಭವಿಸುವ ಮುನ್ನ ಚಿರತೆ ಸೆರೆ ಹಿಡಿಯಿರಿ. ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ನೀವೇ ಹೊಣೆಗಾರರು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

  • ಕಾಡಂಚಿನ ಗ್ರಾಮದಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ

    ಕಾಡಂಚಿನ ಗ್ರಾಮದಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ

    ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯಗ್ರಾಮ ಪಚ್ಚೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು.

    ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ. ಮೊದಲನೇಯದಾಗಿ ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನಂತರ ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ವಾಸ್ತವ್ಯ ಮಾಡಿದ್ದರು. ಇದೀಗ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

    6ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ ದೂರದ ಅಜ್ಜಿಪುರಕ್ಕೆ ಕಾಡಿನ ನಡುವೆ ಕಲ್ಲು, ಮುಳ್ಳು ಹಾಗೂ ಕಡಿದಾದ ಹಾದಿಯಲ್ಲಿ ಮಕ್ಕಳು ನಡೆದು ಹೋಗಬೇಕು. ಕಾಡುಪ್ರಾಣಿಗಳ ಹಾವಳಿ ಬೇರೆ ಇದೆ. ನಡೆಯುವುದರಲ್ಲೇ ಸಾಕಷ್ಟು ಕಾಲ ವ್ಯಯವಾಗುವುದರಿಂದ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನಮಗೆ ರಸ್ತೆ ಬೇಕು, ವಾಹನ ವ್ಯವಸ್ಥೆಬೇಕು ಎಂದು ಮನವಿ ಮಾಡಿಕೊಂಡರು.

    ಮಕ್ಕಳ ಸಮಸ್ಯೆಗೆ ಸ್ಪಂಧಿಸಿದ ಸಚಿವ ಸುರೇಶ್ ಕುಮಾರ್ ಅವರು, ಹತ್ತು ದಿನಗಳಲ್ಲಿ ಕಾಡಿನ ರಸ್ತೆಯ ಜಂಗಲ್ ಕಟಿಂಗ್ ಮಾಡಿ, ಅಜ್ಜಿಪುರಕ್ಕೆ ವ್ಯಾನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಇದೇ ವೇಳೆ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ ಸೌಲಭ್ಯ ಕಲ್ಪಿಸಿ, ತಿಂಗಳಲ್ಲಿ ಎರಡು ಬಾರಿ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

  • ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಾಯಚೂರು: ಮಸ್ಕಿ ತಾಲೂಕಿನ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲಿ ಹುಚ್ಚು ತೋಳವೊಂದು ದಾಳಿ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ. ಇದರಲ್ಲಿ ಇಬ್ಬರ ಪರಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಹಿರ್ದೆಸೆಗೆ ತೆರಳಿದ್ದವರ ಮೇಲೆ ಮೊದಲು ದಾಳಿ ನಡೆಸಿದ ತೋಳ, ಬಳಿಕ ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಎಗರಿ ದಾಳಿ ಮಾಡಿದೆ. ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿ 9 ಮಂದಿ ತೋಳದ ದಾಳಿಗೆ ತುತ್ತಾಗಿದ್ದಾರೆ. ಇರಕಲ್ ಗ್ರಾಮಕ್ಕೆ ನುಗ್ಗಿದ ತೋಳ ಅಲ್ಲಿ ಮೂವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಗಾಯಗೊಂಡ 12 ಜನರನ್ನ ಮಸ್ಕಿ ಹಾಗೂ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಳಗ್ಗೆ 5 ಗಂಟೆ ಸಮಯಕ್ಕೆ ತೋಳ ದಾಳಿ ಶುರು ಮಾಡಿ ಕೊನೆಗೆ ಇರಕಲ್ ಗ್ರಾಮದಲ್ಲಿ ಸಾವನ್ನಪ್ಪಿದೆ. ಇಷ್ಟೆಲ್ಲಾ ಘಟನೆ ನಡೆದಿದ್ದರೂ ಗ್ರಾಮಸ್ಥರ ಮಾಹಿತಿಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು

    ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಡೋಣಗಾಂವ್ ಗ್ರಾಮದಲ್ಲಿ ಶ್ವಾನಗಳಿಗೆ ಬಲಿಯಾಗುತ್ತಿದ್ದ ನವಜಾತ ಶಿಶುವನ್ನು ರಕ್ಷಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ. ಹೆಣ್ಣು ಶಿಶು ಎಂಬ ಕಾರಣಕ್ಕೆ ಕ್ರೂರಿ ತಾಯಿ ಮಗುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ರಸ್ತೆ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಗುವನ್ನು ನಾಯಿಗಳು ಕಚ್ಚುತ್ತಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ನಾಯಿಗಳಿಂದ ಶಿಶುವನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಶಿಶುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶು ಆರೋಗ್ಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದಾಳೆ. ಆದರೆ ಈಗಲೂ ಹೆಣ್ಣು ಶಿಶುಗಳ ಮಾರಣಹೋಮ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

    ಹೆಣ್ಣು ಮಗು ಹುಟ್ಟಿದರೆ ನಮಗೆ ಹೊರೆ ಎಂದು ಪ್ರತಿಕ್ರಿಯೆ ನೀಡುವ ಕ್ರೂರಿಗಳಿಗೆ ಎಷ್ಟೇ ಅರಿವು ನೀಡಿದರು ಬದಲಾಗುತ್ತಿಲ್ಲ. ಬೀದರ್ ನ ಈ ಕ್ರೂರಿ ತಾಯಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆಯಾದರು ಈ ರೀತಿಯ ಘಟನೆಗಳು ಮರುಕಳಿಸದೆ ಇರಲಿ ಎಂಬುವುದೇ ಪ್ರಜ್ಞಾವಂತ ಸಮಾಜದ ಕಳಕಳಿಯಾಗಿದೆ. ಕಮಲಾನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.