Tag: villagers

  • ಹೂ ಚೆಲ್ಲಿ ಆಶಾ ಕಾರ್ಯಕರ್ತೆಯರನ್ನು ಸ್ವಾಗತಿಸಿದ ಜನ

    ಹೂ ಚೆಲ್ಲಿ ಆಶಾ ಕಾರ್ಯಕರ್ತೆಯರನ್ನು ಸ್ವಾಗತಿಸಿದ ಜನ

    – ಭಾವುಕರರಾದ ಆರೋಗ್ಯ ಯೋಧರು

    ಯಾದಗಿರಿ: ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾದಗಿರಿಯ ಜನ ಹೂಮಳೆಯ ಸ್ವಾಗತ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.

    ಇತ್ತೀಚೆಗಷ್ಟೇ ಆರೋಗ್ಯ ತಪಾಸಣೆಗೆ ತೆರಳಿದ್ದ ಆಶಾ ಕಾರ್ಯಕರ್ತರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿ ಕೆಲವರು ವಿಕೃತಿ ಮೆರೆದಿದ್ದರು. ಆದರೆ ಯಾದಗಿರಿ ಜಿಲ್ಲೆಯ ಬೆಳೆಗೇರಾ ಗ್ರಾಮದಲ್ಲಿ ಕೊರೊನಾ ಜಾಗೃತಿಗೆ ತೆರಳಿದ್ದ ಆಶಾ ಕಾರ್ಯಕರ್ತೆರಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಕೈಯಲ್ಲಿ ಹೂ ಹಿಡಿದು ನಿಂತು ಅವರ ಮೇಲೆ ಗ್ರಾಮಸ್ಥರೆಲ್ಲರೂ ಹೂ ಚೆಲ್ಲಿ ಭರ್ಜರಿ ಸ್ವಾಗತ ಕೋರಿದ್ದಾರೆ.

    ಈ ವೇಳೆ ಭಾರತಾಂಭೆಗೆ ಜಯ ಘೋಷಣೆ ಕೂಗಿದ್ದ ಗ್ರಾಮಸ್ಥರು, ಆಶಾ ಕಾರ್ಯಕರ್ತೆ ಜೊತೆ ನಾವಿದ್ದೇವೆ ಎಂದು ಕೂಗಿ ಹೇಳಿದ್ದಾರೆ. ಇತ್ತ ಜನರ ಪ್ರೀತಿ ಕಂಡು ಆಶಾ ಕಾರ್ಯಕರ್ತೆಯರು ಭಾವುಕಗಿದ್ದಾರೆ.

  • ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯ: ಇದಕ್ಕಿದ್ದಂತೆ ಒಂದು ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ 50 ಮಂದಿ ಜನರಿಗೆ ಕಳೆದ ಹಲವು ದಿನಗಳಿಂದ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮದಲ್ಲಿ 100 ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಜ್ವರ ಕಾಣಿಸಿಕೊಂಡಿದೆ. ಇದರದ ಇಡೀ ಗ್ರಾಮ ಹಾಗೂ ಅಕ್ಕ-ಪಕ್ಕದ ಜನರು ಗಾಬರಿಗೊಂಡಿದ್ದಾರೆ.

    ಈ ಗ್ರಾಮಕ್ಕೆ ಮುಂಬೈ, ದುಬೈ ಹಾಗೂ ಬೆಂಗಳೂರಿನಿಂದ ಹಲವು ಜನರು ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಲವು ದಿನಗಳಿಂದ ಜ್ವರ ಬಂದಿದ್ದರೂ ಸಹ ಜನರು ಆಸ್ಪತ್ರೆಗೆ ಹೋಗುತ್ತಿಲ್ಲ. ಆಸ್ಪತ್ರೆಗೆ ಹೋದರೆ ಕ್ವಾರಂಟೈನ್‍ನಲ್ಲಿ ಹಾಕಬಹುದು ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.

    ಇಂದಿಗೂ ಸಹ ಈ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲಿಟ್ಟಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಜನರನ್ನು ತಪಾಸಣೆ ಮಾಡಬೇಕಾಗಿದೆ.

  • ಹೋಮ್ ಕ್ವಾರೆಂಟೈನ್‍ನಲ್ಲಿದ್ದ ಯುವಕ ಸುತ್ತಾಟ, ಸ್ಥಳೀಯರ ಆಕ್ರೋಶ

    ಹೋಮ್ ಕ್ವಾರೆಂಟೈನ್‍ನಲ್ಲಿದ್ದ ಯುವಕ ಸುತ್ತಾಟ, ಸ್ಥಳೀಯರ ಆಕ್ರೋಶ

    ರಾಮನಗರ: ಹೋಮ್ ಕ್ವಾರೆಂಟೈನ್ ನಲ್ಲಿದ್ದ ಯುವಕ ಚನ್ನಪಟ್ಟಣ ನಗರದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕುರಿತು ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ನಗರದ ಯುವಕನೋರ್ವ ಏಳು ದಿನಗಳ ಹಿಂದೆ ಸೌದಿಯಿಂದ ಆಗಮಿಸಿದ್ದ. ಆತನನ್ನು 14 ದಿನಗಳ ಕಾಲ ಮನೆಯಲ್ಲಿಯೇ ನಿಗಾದಲ್ಲಿರುವಂತೆ ತಾಲೂಕು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು. ಆದರೆ ಹೋಮ್ ಕ್ವಾರೆಂಟೈನ್ ನಲ್ಲಿದ್ದ ಆತ ಮೆಡಿಕಲ್ ಸ್ಟೋರ್‍ಗೆ ಹೋಗುವುದಾಗಿ ನೆಪವೊಡ್ಡಿ ಮನೆಯಿಂದ ಹೊರಬಂದು ನಗರದಲ್ಲಿ ಬೇಕಾಬಿಟ್ಟಿ ಓಡಾಟ ನಡೆಸಿದ್ದಾನೆ. ಕೈಯಲ್ಲಿ ಸೀಲ್ ಇದ್ದರೂ ರಾಜರೋಷವಾಗಿ ತಿರುಗುತ್ತಿದ್ದ ಯುವಕನನ್ನು ಗಮನಿಸಿದ ಸಾರ್ವಜನಿಕರು ಆತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ನಂತರ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯಾಧಿಕಾರಿ, ಸ್ಥಳಕ್ಕೆ ಆಗಮಿಸಿ ಆತನಿಗೆ ವಾರ್ನಿಂಗ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಹೋಮ್ ಕ್ವಾರೆಂಟೈನ್ ನಲ್ಲಿರುವವರ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

  • ಲಾಕ್‍ಡೌನ್ ಬಗ್ಗೆ ಜಾಗೃತಿ – ಅಕ್ರಮ ಮದ್ಯ ಮಾರಾಟಕ್ಕೆ ಪೊಲೀಸ್ ಬೆಂಬಲದ ಆರೋಪ

    ಲಾಕ್‍ಡೌನ್ ಬಗ್ಗೆ ಜಾಗೃತಿ – ಅಕ್ರಮ ಮದ್ಯ ಮಾರಾಟಕ್ಕೆ ಪೊಲೀಸ್ ಬೆಂಬಲದ ಆರೋಪ

    ರಾಯಚೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್‍ನ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಭೀತಿಗೆ ನಗರದಿಂದ ಜನ ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಈ ಬೆನ್ನಲ್ಲೇ ಹಳ್ಳಿಗಳಲ್ಲಿಯೂ ಈ ಬಗ್ಗೆ ಯುವಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಡಂಗೂರ ಬಾರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

    ರಾಯಚೂರು ಜಿಲ್ಲೆಯ ಡಿ.ರಾಂಪೂರ್ ಗ್ರಾಮದಲ್ಲಿ ಯುವಕರ ತಂಡ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಅಂಗನವಾಡಿ ಸಹಾಯಕಿಯರು ಸೇರಿ ಮನೆ ಮನೆಗೆ ಹೋಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಒಂದೆಡೆ ಮನೆಯಿಂದ ಹೊರ ಬರಬೇಡಿ, ತೀರಾ ಅಗತ್ಯ ಕೆಲಸಗಳಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ, ಎಲ್ಲರೂ ಮಾಸ್ಕ್ ಗಳನ್ನ ಧರಿಸಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

    ಇನ್ನೊಂದೆಡೆ 21 ದಿನಗಳ ತನಕ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಘೋಷಿಸಿದರೂ ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲಿ ಹೋಗುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಜನ ಒಟ್ಟೊಟ್ಟಿಗೆ ಬಸ್ ನಿಲ್ದಾಣ, ಹಳ್ಳಿ ಕಟ್ಟೆಗಳಲ್ಲಿ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಯಾಪಲದಿನ್ನಿ ಪೊಲೀಸರಿಗೆ ಕೊರೊನಾ ವೈರಸ್ ಬಗ್ಗೆ ಗ್ರಾಮಗಳಿಗೆ ಬಂದು ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರೂ ಪೊಲೀಸರು ಮಾತ್ರ ಕಾಟಚಾರಕ್ಕೆ ಹಳ್ಳಿಗಳಿಗೆ ಬಂದು ಹೋಗ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಹೀಗಾಗಿ ಸ್ವತಃ ಊರಿನ ಯುವಕರು ಹಾಗೂ ಪಂಚಾಯ್ತಿ ಸದಸ್ಯರು ಸೇರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅತ್ಯವಶ್ಯಕವಾಗಿರುವ ಅಂಗಡಿಗಳನ್ನು ಮಾತ್ರ ತೆರೆಯಬೇಕು. ಅಲ್ಲಿ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಲೈನ್ ಬಾಕ್ಸ್ ಗಳಲ್ಲಿ ನಿಂತು ವ್ಯವಹರಿಸಬೇಕು ಅಂತ ಜಾಗೃತಿ ಮೂಡಿಸಲಾಗುತ್ತಿದೆ.

    ಲಾಕ್‍ಡೌನ್ ನಡುವೆಯೂ ಮೀನು ಹಿಡಿಯುತ್ತಿರುವ ಜನ
    ಲಾಕ್‍ಡೌನ್ ಘೋಷಣೆ ಬಳಿಕ ಜನರು ಮನೆಯಲ್ಲಿಯೇ ಇರಬೇಕು ಎಂದು ತಿಳಿಸಿ ಹೇಳಿದರೂ ಡಿ.ರಾಂಪೂರ್, ಆತ್ಕೂರು, ವಡ್ಡೆಪಲ್ಲಿ, ಯಾಪಲದಿನ್ನಿ, ಕೊರ್ತಕುಂದ ಗ್ರಾಮಗಳಲ್ಲಿ ಮೀನುಗಾರರು ಮೀನು ಹಿಡಿಯಲು ನದಿಗೆ ಇಳಿಯುತ್ತಿದ್ದಾರೆ. ಇತ್ತ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಂಚ್ಚಿಕೊಂಡು ಕುಳಿತಿದ್ದಾರೆ. ಮದ್ಯ ಮಾರಾಟಗಾರರ ಜೊತೆ ಪೊಲೀಸರು ಹಣ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಗಳಿಗೆ ಪೊಲೀಸರು ಭೇಟಿ ನೀಡ್ತಿಲ್ಲ. ಸಂಜೆಯಿಂದ ರಾತ್ರಿ ತನಕ ಮದ್ಯ ಖರೀದಿಗೆ ಜನ ಗುಂಪು ಸೇರ್ತಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

  • ಕೊರೊನಾ ಭೀತಿಗೆ ಗ್ರಾಮಕ್ಕೆ ಬಂದ ನೆಂಟರನ್ನೇ ವಾಪಸ್ ಕಳಿಸಿದ್ರು

    ಕೊರೊನಾ ಭೀತಿಗೆ ಗ್ರಾಮಕ್ಕೆ ಬಂದ ನೆಂಟರನ್ನೇ ವಾಪಸ್ ಕಳಿಸಿದ್ರು

    ಚಿಕ್ಕಮಗಳೂರು: ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಭೀತಿಗೆ ಜನ ಮನೆಯಿಂದ ಹೊರಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಈಗಾಗಲೇ ಕೆಎಫ್‍ಡಿ ಭಯದಿಂದ ಕಂಗಲಾಗಿರೋ ಮಲೆನಾಡಿಗರಲ್ಲಿ ಮಹಾಮಾರಿ ಕೊರೊನಾ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಹೀಗಿರುವಾಗ ಹಳ್ಳಿ ಬಿಟ್ಟು ವರ್ಷವಾಗಿದ್ದ ಜನ ಕೊರೊನಾ ವೈರಸ್‍ಗೆ ಹೆದರಿ ಮತ್ತೆ ಹಳ್ಳಿಗಳತ್ತ ಮುಖ ಮಾಡ್ತಿದ್ದಾರೆ. ಆದ್ದರಿಂದ ಮಲೆನಾಡಿಗರು ಅವರಿಗೆಲ್ಲಾ ಬರಬೇಡಿ ಅಲ್ಲೇ ಇರಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲೂ ಗ್ರಾಮದ ಮುಖ್ಯ ರಸ್ತೆಗೆ ಬೇಲಿ ಹಾಕಿ ಗ್ರಾಮಸ್ಥರು ಊರಿಗೆ ಯಾರೂ ಹೊರಗಿನಿಂದ ಬಾರದಂತೆ ಕಾದು ಕೂತಿದ್ದಾರೆ. ಒಳಗಿನವರು ಹೊರ ಹೊಗುವಂತಿಲ್ಲ. ಯಾರೇ ಆದರೂ ಹೊರಗಿನವರಂತೂ ಬಿಲ್‍ಕುಲ್ ಒಳಗೆ ಬರುವಂತಿಲ್ಲ ಎಂದು ಮುಖ್ಯ ರಸ್ತೆಗೆ ಬೇಲಿ ಹಾಕಿಕೊಂಡು ಕಾದು ಕೂತಿದ್ದಾರೆ.

    ಅಷ್ಟೇ ಅಲ್ಲದೇ ಗ್ರಾಮಕ್ಕೆ ಬಂದ ನೆಂಟರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ವಾಪಸ್ ಕಳುಹಿಸಿದ್ದಾರೆ. ಈಗಾಗಲೇ ಕೊರೊನಾದಿಂದ ಆತಂಕಕ್ಕೀಡಾಗಿರೋ ಮಲೆನಾಡಿನ ಮತ್ತಾವರ ಗ್ರಾಮದಲ್ಲಿ ಹಳ್ಳಿಕಟ್ಟೆ ಮುಂದೆ ಯುವಕರು ಕಾದು ಕೂತಿದ್ದು, ಗ್ರಾಮಕ್ಕೆ ಹೊಸಬರು ಬಂದರೆ ವಾಪಸ್ ಕಳುಹಿಸುತ್ತಿದ್ದಾರೆ. ಇತ್ತ ದೂರದೂರಲ್ಲಿ ಇರುವವರಿಗೆ ಅಲ್ಲೇ ಇರಿ ಗ್ರಾಮಕ್ಕೆ ಬರಬೇಡಿ ಎಂದು ಫೋನ್ ಮಾಡಿ ಹೇಳುತ್ತಿದ್ದಾರೆ. ಮೂಡಿಗೆರೆಯ ಮರ್ಕಲ್ ಗ್ರಾಮದಲ್ಲಿ ರಸ್ತೆಗೆ ತಂತಿ ಬೇಲಿ ಹಾಕಿದ್ರೆ, ಕೆಲ್ಲೂರು ಗ್ರಾಮದಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ ಎಂದು ರಸ್ತೆ ತುಂಬಾ ಬ್ಯಾನರ್ ಕಟ್ಟಿದ್ದಾರೆ.

  • ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಜನರನ್ನು ಗುಂಪಿನಿಂದ ಬೇರ್ಪಡಿಸಬೇಕೆಂದು ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ ಗ್ರಾಮಸ್ಥರು

    ಧಾರವಾಡ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಹೇಳಿದರೂ ಕೆಲವು ಜನ ಕೇಳ್ತಾನೆ ಇಲ್ಲ. ಪೊಲೀಸರು ಲಾಠಿ ರುಚಿ ತೋರಿಸಿದರೂ ಕೆಲವರಿಗೆ ಭಯವೇ ಇಲ್ಲವಾಗಿ ಹೋಗಿದೆ. ಹೀಗಾಗಿ ಜನರನ್ನು ಹೇಗಾದರೂ ಮಾಡಿ ಗುಂಪಿನಿಂದ ಬೇರ್ಪಡಿಸಬೇಕು ಎಂದು ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮಸ್ಥರು ಹೊಸ ಪ್ಲಾನ್ ಮಾಡಿದ್ದಾರೆ.

    ಗ್ರಾಮದ ಅರಳಿಮರದ ಕಟ್ಟೆ ಹಿಡಿದು ಗುಂಪು ಗುಂಪಾಗಿ ಕುಳಿತುಕೊಳ್ಳೋರೆಲ್ಲಾ ಈಗ ಅದರಿಂದ ದೂರ ಇರುವಂತೆ ಮಾರಡಗಿ ಗ್ರಾಮಸ್ಥರು ಮಾಡಿದ್ದಾರೆ. ಗ್ರಾಮದ ಪ್ರಮುಖ ವೃತ್ತದಲ್ಲಿರೋ ಅರಳಿಮರದ ಕಟ್ಟೆಗೆ ಡಾಂಬರು ಹಾಕಿದ್ದು, ಯಾರು ಕಟ್ಟೆಯ ಮೇಲೆ ಕೂರದಂತೆ ಮಾಡಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಯಾರೂ ಈ ಕಟ್ಟೆಯ ಮೇಲೆ ಕುಳಿತುಕೊಳ್ಳಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಜನರಿಗೆ ಎಷ್ಟೇ ಹೇಳಿದರೂ ಯಾರೂ ಮಾತನ್ನು ಕೇಳಿರಲಿಲ್ಲ. ಗ್ರಾಮಸ್ಥರು ಒಂದು ಗುಂಪಿಗೆ ತಿಳಿ ಹೇಳಿ ಅಲ್ಲಿಂದ ಕಳಿಸುತ್ತಿದ್ದಂತೆ ಮತ್ತೊಂದು ಗುಂಪು ಕಟ್ಟೆ ಮೇಲೆ ಬಂದು ಕುಳಿತುಕೊಳ್ಳುತ್ತಿತ್ತು.

    ಎಷ್ಟೇ ಹೇಳಿದರೂ ಕೇಳದ ಜನರಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಪ್ಲಾನ್ ಮಾಡಿದ್ದು, ಆ ಕಟ್ಟೆಯ ಮೇಲೆ ಡಾಂಬರು ಸುರಿದು ಬಿಟ್ಟಿದ್ದಾರೆ. ಮೊದಲೇ ಈಗ ಬೇಸಿಗೆ, ಸೂರ್ಯ ಶಾಖಕ್ಕೆ ಡಾಂಬರು ಕಾಯುತ್ತಿರೋದು ಒಂದೆಡೆಯಾದ್ರೆ, ಅದು ಅಂಟಿಕೊಂಡ್ರೆ ಮುಗದೇ ಹೋಯ್ತು ಎಂದು ಜನರು ಕಟ್ಟೆಯಿಂದ ದೂರವಿದ್ದಾರೆ. ಹೀಗಾಗಿ ಈಗ ಯಾರೂ ಕೂಡ ಗುಂಪಾಗಿ ಕುಳಿತುಕೊಳ್ಳಲು ಸಾಧ್ಯವಾಗದೆ ತಮ್ಮ ಪಾಡಿಗೆ ತಾವೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.

  • ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಕೊರೊನಾ ಫಿಯರ್ ಮಧ್ಯೆಯೂ ಮದ್ಯ ಮಾರಾಟ – ಗ್ರಾಮಸ್ಥರಿಂದ ತರಾಟೆ

    ಚಿಕ್ಕಮಗಳೂರು: ಇಡೀ ದೇಶವೇ ಕೊರೊನಾ ಫಿಯರ್ ನಿಂದ ಕಂಗಾಲಾಗಿದ್ರೆ, ತಾಲೂಕಿನ ಕರಿಸಿದ್ದನಹಳ್ಳಿಯಲ್ಲಿ ಈ ಭಯವನ್ನೇ ಅಡ್ವಾಂಟೇಜ್ ಮಾಡಿಕೊಂಡಿದ್ದಾರೆ.

    ವೈರಸ್ ಭಯದಿಂದ ಜನ ಮನೆಯಿಂದ ಹೊರಬಾರದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಿಸಿದ್ದನಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಮದ್ಯ ಸಿಗುತ್ತಿದೆ ಎಂದು ಗೊತ್ತಾದ ಕೂಡಲೇ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಕದ್ದು-ಮುಚ್ಚಿ ಮದ್ಯ ಖರೀದಿಸೋದಕ್ಕೆ ಬರುತ್ತಿದ್ದರು.

    ಜನ ಗುಂಪಾಗಿ ಸೇರಬಾರದು ಎಂದು ದೇಶದ ಪ್ರಧಾನಿಯೇ ಮನವಿ ಮಾಡಿಕೊಂಡು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದಾರೆ. ಹೀಗಿರುವಾಗ 25-30 ಮಂದಿ ಮದ್ಯ ಖರೀದಿಸುವುದಕ್ಕೆ ಕರಿಸಿದ್ದನಹಳ್ಳಿಯಲ್ಲಿ ಜಮಾಯಿಸುತ್ತಿದ್ದರು. ಕೆಲವರು ಕುಡಿದು ಗಲಾಟೆ ಮಾಡುತ್ತಿದ್ದರು. ಇದರಿಂದ ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿ, ಕರಿಸಿದ್ದನಹಳ್ಳಿ ಜನ ಕೆಂಗೇನಹಳ್ಳಿ ಗೇಟ್ ಬಳಿ ಗ್ರಾಮಕ್ಕೆ ಮದ್ಯ ಖರೀದಿಸಲು ಬರುತ್ತಿದ್ದ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾರ್ಗ ಮಧ್ಯೆಯೇ ಅಡ್ಡಗಟ್ಟಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗ್ರಾಮಸ್ಥರ ವಿರುದ್ಧ ಗ್ರಾಮಸ್ಥರೇ ತಿರುಗಿ ಬಿದ್ದಿದ್ದು ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದಾರೆ.

  • ಕೊರೊನಾ ಸೋಂಕು ತಡೆಗೆ ಗ್ರಾಮಕ್ಕೆ ಬರೋ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು

    ಕೊರೊನಾ ಸೋಂಕು ತಡೆಗೆ ಗ್ರಾಮಕ್ಕೆ ಬರೋ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು

    ಹಾವೇರಿ: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮಸ್ಥರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಇಂದಿನಿಂದ 21 ದಿನಗಳ ಕಾಲ ಬೇರೆ ಬೇರೆ ಗ್ರಾಮಗಳ ಜನರು ಬರದಂತೆ ಗ್ರಾಮಸ್ಥರು ಕೂಡಲ ಗ್ರಾಮವನ್ನು ಸಂಪರ್ಕಿಸೋ ರಸ್ತೆಗಳಿಗೆ ಮುಳ್ಳಿನ ಬೇಲಿ, ಕಬ್ಬಿಣದ ರಾಡು ಅಡ್ಡಲಾಗಿ ಇಟ್ಟು ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಈಗಾಗಲೆ ಬೆಂಗಳೂರ ಅಥವಾ ಬೇರೆ ಬೇರೆ ಊರುಗಳಿಂದ ಬಂದವರು ತಪಾಸಣೆ ಮಾಡಿಸಿಕೊಂಡು ಬಂದ ಬಳಿಕ ಊರನ್ನು ಪ್ರವೇಶಿಸುವಂತೆ ಗ್ರಾಮದಲ್ಲಿ ಡಂಗುರ ಸಾರಲಾಗುತ್ತಿದೆ.

    ಅಲ್ಲದೆ ಅಕ್ಕಪಕ್ಕದ ಊರುಗಳಿಂದ ಬಂದವರು ಆದಷ್ಟು ಬೇಗ ತಮ್ಮ ತಮ್ಮ ಊರುಗಳಿಗೆ ತೆರಳಬೇಕು. ಇಲ್ಲದಿದ್ದರೆ 21 ದಿನಗಳ ಕಾಲ ಯಾರೂ ಊರಿಂದ ಹೊರ ಹೋಗಲು ಮತ್ತು ಒಳಗೆ ಬರದಂತೆ ರಸ್ತೆ ಬಂದ್ ಮಾಡಲಾಗಿದೆ. ಹೀಗೆ ಎಚ್ಚರಿಕೆ ನೀಡಿ ಗ್ರಾಮಕ್ಕೆ ಸಂಪರ್ಕಿಸೋ ಮೂರು ಪ್ರಮುಖ ರಸ್ತೆಗಳನ್ನ ಬಂದ್ ಮಾಡಿ ಗ್ರಾಮಸ್ಥರು ಧ್ವನಿವರ್ಧಕದ ಮೂಲಕ ಡಂಗುರ ಸಾರುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಈ ಸೂಚನೆಯನ್ನು ಪಾಲನೆ ಮಾಡುವಂತೆ ಗ್ರಾಮಸ್ಥರಲ್ಲಿ ಗ್ರಾಮದ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ನೀವು, ನಿಮ್ಮ ಕುಟುಂಬವನ್ನ ಬದುಕಿಸಿ ಜೊತೆಗೆ ಗ್ರಾಮಸ್ಥರ ಜೀವವನ್ನ ಉಳಿಸೋ ದೃಷ್ಟಿಯಿಂದ ಯಾರೂ ಹೊರ ಹೋಗಬೇಡಿ. ಯಾರೂ ಬೇರೆ ಊರುಗಳಿಂದ ಗ್ರಾಮಕ್ಕೆ ಬರಬೇಡಿ. ಎಲ್ಲರೂ 21 ದಿನಗಳ ಕಾಲ ನಿಮ್ಮ ನಿಮ್ಮ ಮನೆಯಲ್ಲೇ ಇದ್ದುಬಿಡಿ ಅಂತಾ ಗ್ರಾಮಸ್ಥರು ಮನವಿ ಮಾಡಿಕೊಳ್ಳಿತ್ತಿದ್ದಾರೆ.

  • ಭಾರತ ಲಾಕ್‍ಡೌನ್ ಬೆಂಬಲಿಸಿ ಗ್ರಾಮಕ್ಕೆ ದಿಗ್ಬಂಧನ

    ಭಾರತ ಲಾಕ್‍ಡೌನ್ ಬೆಂಬಲಿಸಿ ಗ್ರಾಮಕ್ಕೆ ದಿಗ್ಬಂಧನ

    ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಲಾಕ್‍ಡೌನ್‍ಗೆ ಸರ್ಕಾರ ಸೂಚಿಸಿದ್ದು, ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳುವಂತೆ ಹೇಳಲಾಗಿದೆ. ಹೀಗಾಗಿ ಈ ಆದೇಶವನ್ನು ಪಾಲಿಸುತ್ತಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಂಗಾಪುರ ಹಾಗೂ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದ ಗ್ರಾಮಸ್ಥರು ಅವರ ಗ್ರಾಮಗಳಿಗೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.

    ಮೂರು ವಾರಗಳ ಕಾಲ ಗ್ರಾಮಕ್ಕೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿರುವ ಆಯಿತೋಳು ಹಾಗೂ ಶ್ರೀರಂಗಾಪುರ ಗ್ರಾಮಗಳ ಜನರು ಕೊರೊನಾ ನಿಯಂತ್ರಣಕ್ಕೆ ಸ್ವಯಂ ಪರಿಪಾಲನೆಯಷ್ಟೆ ಮುಖ್ಯ ಎಂದು ತೀರ್ಮಾನಿಸಿದ್ದು, ಗ್ರಾಮಕ್ಕೆ ವಲಸಿಗರು ಯಾರೂ ಬರುವಂತಿಲ್ಲ ಹಾಗೂ ಯಾರು ಸಹ ಗ್ರಾಮದಿಂದ ಹೊರ ಹೋಗುವಂತಿಲ್ಲ ಎಂದು ನಿರ್ಬಂಧ ಹೇರಿಕೊಂಡಿದ್ದಾರೆ.

    ಒಂದು ದಿನದಲ್ಲಿ ಗ್ರಾಮಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಗ್ರಾಮದ ಹಿರಿಯರೆಲ್ಲರೂ ಸೇರಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಹಾಗೆಯೇ ಕೊರೊನಾ ಮಹಾಮಾರಿ ಹರಡದಂತೆ ತಡೆಯಲು ಮತ್ತು ಹಳ್ಳಿಗಳ ಸ್ವಾಸ್ಥ್ಯ ಕಾಪಾಡಲು, ಈ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ತರಲು ಕರಪತ್ರಗಳನ್ನು ಹಂಚುತ್ತಿದ್ದಾರೆ. ಜೊತೆಗೆ ಬಿತ್ತಿ ಪತ್ರ ಹಾಗೂ ಬ್ಯಾನರ್ ಹಾಕುವ ಮೂಲಕ ಕೇಂದ್ರ ಸರ್ಕಾರದ ಆದೇಶ ಪಾಲಿಸಲು ಮನವಿ ಮಾಡಿದ್ದಾರೆ.

  • ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

    – ಎಲ್ಲ ವ್ಯಾಪಾರಿಗಳಿಗೂ ನೋ ಎಂಟ್ರಿ
    – ಬೇರೆ ಊರಲ್ಲಿರುವ ಗ್ರಾಮಸ್ಥರು ಅಲ್ಲೇ ಇರಿ, ಇಲ್ಲಿಗೆ ಬರಬೇಡಿ
    – ಅಲ್ಲೇ ಹಬ್ಬ ಮಾಡಿ ಎಂದ ಗ್ರಾಮಸ್ಥರು

    ಚಿಕ್ಕಮಗಳೂರು: ಕೊರೊನಾ ನಮ್ಮ ಊರಿಗೆ ಕಾಲಿಡೋದು ಬೇಡವೆಂದು ಗ್ರಾಮಸ್ಥರು ಆತಂಕದಿಂದ ಊರಿನ ದ್ವಾರಬಾಗಿಲಲ್ಲೇ ಕಾದು ಕೂತು ಗ್ರಾಮಕ್ಕೆ ಕಾಲಿಡುವ ವ್ಯಾಪಾರಿಗಳಿಗೆ ಗ್ರಾಮದ ಗಡಿಯಿಂದಲೇ ವಾಪಸ್ಸು ಕಳುಹಿಸುತ್ತಿದ್ದಾರೆ.

    ತಾಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖಂಡರ ತೀರ್ಮಾನದಂತೆ ನಾಲ್ಕೈದು ಜನ ಗ್ರಾಮದ ಮುಂಭಾಗದಲ್ಲಿರುವ ಹಳ್ಳಿಕಟ್ಟೆ ಮೇಲೆ ಕಾದು ಕೂತಿದ್ದಾರೆ. ಗ್ರಾಮಕ್ಕೆ ಯಾರೇ ಹೊಸಬರು ಕಾಲಿಟ್ಟರೂ ಅವರಿಗೆ ಕೊರೊನಾ ಬಗ್ಗೆ ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಐಸ್ ಕ್ರೀಂ ಮಾರುವವರು, ಪಾತ್ರೆ ವ್ಯಾಪಾರಿಗಳು, ಬಟ್ಟೆ, ಬಳೆ ಮಾರುವವರು ಸೇರಿದಂತೆ ಯಾರೊಬ್ಬರಿಗೂ ಗ್ರಾಮದೊಳಕ್ಕೆ ಬಿಡದಿರಲು ನಿರ್ಧರಿಸಿ ಕಾವಲು ಕಾಯುತ್ತಿದ್ದಾರೆ.

    ಊರಿನ ಪ್ರತಿಯೊಬ್ಬರೂ ಗ್ರಾಮ ಬಿಟ್ಟು ಹೊರಗೆ ಹೋಗದಂತೆ ತೀರ್ಮಾನಿಸಿದ್ದಾರೆ. ನಾವು ಕೂಡ ಸ್ಥಳೀಯವಾಗಿ ಗ್ರಾಮದೊಳಗೆ ಓಡಾಡುತ್ತಿದ್ದೇವೆ. ಗ್ರಾಮ ಬಿಟ್ಟು ಹೊರಗೆ ಹೋಗುವುದಿಲ್ಲ. ದಿನ ಬಳಕೆಗೆ ಎಷ್ಟು ವಸ್ತುಗಳು ಬೇಕೋ ಅಷ್ಟು ವಸ್ತುಗಳನ್ನು ನಿನ್ನೆ-ಮೊನ್ನೆಯೇ ಖರೀದಿಸಿ ತಂದಿದ್ದೇವೆ. ಹಬ್ಬವನ್ನೂ ಸರಳವಾಗಿ ಮಾಡಲು ಗ್ರಾಮಸ್ಥರೆಲ್ಲಾ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

    ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ನೀವು ಇಲ್ಲಿಗೆ ಬರೋದು ಬೇಡ. ಎಲ್ಲಿದ್ದೀರೋ ಅಲ್ಲೆ ಇರಿ, ಹಬ್ಬಕ್ಕೂ ಬರುವುದು ಬೇಡ. ಇಲ್ಲಿಗೆ ಬಂದು ವ್ಯವಸ್ಥೆ ಹಾಳುಮಾಡೋದು ಬೇಡ ಎಂದಿದ್ದಾರೆ.

    ಅಲ್ಲದೆ ಪಾಳಿ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಗ್ರಾಮವನ್ನ ಕಾಯುತ್ತಿದ್ದಾರೆ. ಪ್ರತಿ ಎರಡ್ಮೂರು ಗಂಟೆಗೊಮ್ಮೆ ಬದಲಾಗುತ್ತಿದ್ದು, ಎರಡ್ಮೂರು ಗಂಟೆ ಬಳಿಕ ಮತ್ತೊಂದು ಟೀಂ ಕಾಯುತ್ತದೆ. ಕೊರೊನಾ ವೈರಸ್ ಒಂದು ಹಂತಕ್ಕೆ ಬರುವವರೆಗೂ ಪ್ರತಿ ದಿನ ಗ್ರಾಮವನ್ನು ಕಾಯ್ತೀವಿ ಎಂದು ತಮ್ಮ ಗ್ರಾಮವನ್ನ ಕೊರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದಾರೆ.