Tag: villagers

  • ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಸಾವಿರ ಟನ್ ವಿಷಾನಿಲ ಸೋರಿಕೆ

    – 13 ಮಂದಿ ಸಾವು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥ
    – ನಾಯಿ, ಪಕ್ಷಿ, ಹಸುಗಳು ಅಸ್ವಸ್ಥ

    ವಿಶಾಖಪಟ್ಟಣಂ: ಆಂಧ್ರಪ್ರದೇಶದ ರಾಸಾಯನಿಕ ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 13 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆ. ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ, ಬೆಳಗ್ಗಿನ ವೇಳೆ ವಾಕಿಂಗ್ ಬಂದವರು ಮಕ್ಕಳು ರಸ್ತೆಯಲ್ಲಿ ಓಡಾಡುವವರು ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಜೊತೆಗೆ ಈ ವಿಷ ಅನಿಲ ಸೇವನೆಯಿಂದ ನಾಯಿಗಳು ಮತ್ತು ಹಸುಗಳು ಪಕ್ಷಿಗಳು ಕೂಡ ಸಾವನ್ನಪ್ಪುತ್ತಿವೆ.

    ಈ ಕಾರ್ಖಾನೆ ವಿಶಾಖಪಟ್ಟಣಂ ನಗರದಿಂದ 14 ಕಿಲೋಮೀಟರ್ ದೂರದಲ್ಲಿರುವ ಆರ್.ಆರ್.ವೆಂಕಟಪುರಂನಲ್ಲಿ ಇದ್ದು, ಈ ಕಂಪನಿ ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಕ ಎಲ್.ಜಿ ಕೆಮಿಕಲ್ ಲಿಮಿಟೆಡ್ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಮಾತನಾಡಿರುವ ಕಂಪನಿಯ ಅಡಳಿತ ಮಂಡಳಿ, ಸೋರಿಕೆ ಹೇಗೆ ಆಯ್ತು ಮತ್ತು ಅದಕ್ಕೆ ನಿಖರ ಕಾರಣವೇನು? ಜನರು ಸಾಯುವುದಕ್ಕೆ ಕಾರಣ ಮತ್ತು ಘಟನೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದೆ.

    ವಿಶಾಖಪಟ್ಟಣಂನ ಸಹಾಯಕ ಪೊಲೀಸ್ ಆಯುಕ್ತ ಸ್ವರೂಪಾ ರಾಣಿ ಮಾತನಾಡಿ, ಮಾರ್ಚ್ ಅಂತ್ಯದಿಂದ ದೇಶವೇ ಕೊರೊನಾ ವೈರಸ್ ಲಾಕ್‍ಡೌನ್ ಆಗಿದ್ದರಿಂದ ಈ ಕಾರ್ಖಾನೆ ಎರಡು ತಿಂಗಳು ಕಾರ್ಯನಿರ್ವಹಿಸಿರಲಿಲ್ಲ. ಆದರೆ ಈಗ ಲಾಕ್‍ಡೌನ್ ಸಡಿಲಿಕೆ ಆದ ಮೇಲೆ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಟ್ಯಾಂಕ್‍ಗಳಲ್ಲಿ ಮೊದಲೇ ಉಳಿದಿದ್ದ ಅನಿಲ ಈಗ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಶಾಖೋತ್ಪತ್ತಿಯಾಗಿ ಸೋರಿಕೆಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಸ್ಥಳೀಯ ಯುವಕನೋರ್ವ ಘಟನೆಯ ಬಗ್ಗೆ ವಿವರಿಸಿ, ನಾವು ಬೆಳಗ್ಗೆ ಎದ್ದಾಗ ಗಾಳಿಯಲ್ಲಿ ದಟ್ಟವಾಗಿ ಏನೋ ಕಾಣಿಸಿಕೊಂಡಿತು. ಆ ಸಮಯದಲ್ಲಿ ನಮಗೆ ಉಸಿರಾಡಲು ಕಷ್ಟವಾಯಿತು. ತಕ್ಷಣ ನಾವು ಮನೆಯಿಂದ ಮೂರು ಕಿ.ಮೀ ಓಡಿ ಬಂದಿವೆ. ಆದರೆ ಅದು ತುಂಬ ವೇಗವಾಗಿ ಗಾಳಿಯಲ್ಲಿ ಹರಡಿತು. ಈಗ ಉಸಿರಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾನೆ.

    ಈಗ ಕಾರ್ಖಾನೆಯ ಮೂರು ಕಿ.ಮೀ ಅಂತರದಲ್ಲಿ ಇರುವ ಎಲ್ಲಾ ಜನರನ್ನು ಸ್ಥಳಾಂತರ ಮಾಡಿದ್ದೇವೆ ಎಂದು ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಜೊತೆಗೆ ಎಲ್‍ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯನ್ನು ಗುರುತಿಸಲಾಗಿದೆ. ಹೀಗಾಗಿ ಸುರಕ್ಷತಾ ಮುನ್ನೆಚ್ಚರಿಕೆಗಾಗಿ ಸುತ್ತಮುತ್ತಲಿನ ನಾಗರಿಕರು ಮನೆಗಳಿಂದ ಹೊರಬರದಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.

    ಈ ವಿಚಾರವಾಗಿ ಮಾತನಾಡಿರುವ ವಿಶಾಖಪಟ್ಟಣಂನ ಎಸಿಪಿ ರಾಣಿ, ಇಂದು ಬೆಳಗ್ಗೆ ಸುಮಾರು 4 ಗಂಟೆಗೆ ನಮ್ಮ ಅಧಿಕಾರಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ನಾನು ತಕ್ಷಣ ಅಲ್ಲಿಗೆ ಹೋದೆ. ಅಲ್ಲಿ ಹಲವಾರು ಜನರು ಪ್ರಜ್ಞೆ ಇಲ್ಲದೇ ಬಿದ್ದಿದ್ದರು. ನಾನೇ ಸುಮಾರು 15 ಜನರನ್ನು ಅಂಬುಲೆನ್ಸ್ ಗೆ ಹತ್ತಿಸಿ ಕಳುಹಿಸಿದೆ. ಹಳ್ಳಿಗಳಿಂದ ಜನರು ಓಡಿಬಂದು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

  • ಸೀಲ್‍ಡೌನ್ ಮುಕ್ತ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ

    ಸೀಲ್‍ಡೌನ್ ಮುಕ್ತ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ

    ಮೈಸೂರು: 28 ದಿನಗಳಿಂದ ಸೀಲ್‍ಡೌನ್ ಆಗಿದ್ದ ಮೈಸೂರು ತಾಲೂಕಿನ ಗ್ರಾಮಗಳನ್ನು ಇವತ್ತು ಸೀಲ್‍ಡೌನ್ ನಿಂದ ಮುಕ್ತ ಮಾಡಲಾಯಿತು.

    ವರುಣಾ ಕ್ಷೇತ್ರದ ಸೋಮೇಶ್ವರಪುರ ಹಾಗೂ ಹೆಬ್ಯಾ ಗ್ರಾಮಗಳು ಸೀಲ್‍ಡೌನ್ ಮುಕ್ತವಾಗಿ ಇಂದಿನಿಂದ ಸಹಜ ಸ್ಥಿತಿಗೆ ಮರಳಿದವು. ಸೀಲ್‍ಡೌನ್ ಆಗಿದ್ದ ಗ್ರಾಮದ ಗ್ರಾಮಸ್ಥರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮ ಸೋಮೇಶ್ವರಪುರ ಗ್ರಾಮದಲ್ಲಿ ನಡೆಯಿತು. ಸಿಎಂ ಪುತ್ರ ವಿಜಯೇಂದ್ರ ಸೂಚನೆಯಂತೆ ಗ್ರಾಮದ ಜನರು ಹಾಗೂ ಗ್ರಾಮದಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು.

    ಸೀಲ್‍ಡೌನ್ ಆಗಿದ್ದ ವರುಣಾ ಕ್ಷೇತ್ರದ 5 ಗ್ರಾಮಗಳಲ್ಲಿಯೂ ಇದೆ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸನ್ಮಾನದ ಜೊತೆ ಪಡಿತರ ಕಿಟ್ ವಿತರಣೆಯೂ ನಡೆಯಿತು. ಬಿಜೆಪಿ ರಾಜ್ಯಕಾರ್ಯದರ್ಶಿ ಎಂ.ರಾಜೇಂದ್ರ, ಬಿಜೆಪಿ ಮುಖಂಡ ಅಶೋಕ್ ಹಾಗೂ ವಿಜಯೇಂದ್ರ ಅಭಿಮಾನಿಗಳು ಭಾಗವಹಿಸಿದ್ದರು.

  • ಉಡುಪಿಯ ನದಿಯಲ್ಲಿ ಪಿಪಿಇ ಕಿಟ್- ಅಲೆವೂರು ರಾಂಪುರ ಜನರಲ್ಲಿ ಆತಂಕ

    ಉಡುಪಿಯ ನದಿಯಲ್ಲಿ ಪಿಪಿಇ ಕಿಟ್- ಅಲೆವೂರು ರಾಂಪುರ ಜನರಲ್ಲಿ ಆತಂಕ

    ಉಡುಪಿ: ಜಿಲ್ಲೆಯ ಅಲೆವೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡಂಗಳ ನದಿಯಲ್ಲಿ ಕೊರೊನಾ ವೈದ್ಯಕೀಯ ಸಿಬ್ಬಂದಿಗಳು ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ) ಪತ್ತೆಯಾಗಿದ್ದು, ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.

    ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವಾಗ ಈ ವಿಶೇಷ ಕಿಟ್ ಧರಿಸಲಾಗುತ್ತದೆ. ಉಪಯೋಗಿಸಿದ ಬಳಿಕ ಕಿಟ್‍ನ್ನು ಅತ್ಯಂತ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‍ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆ ಇದ್ದು, ಗ್ರಾಮಸ್ಥರು ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

    ಮೇಲ್ನೋಟಕ್ಕೆ ಇದು ಬಳಸಿ ಎಸೆದ ಕಿಟ್ ನಂತೆ ಕಾಣುತ್ತಿದ್ದು, ಸ್ಥಳೀಯ ಆಶಾ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಡಂಗಳ ನದಿಯ ಸೇತುವೆಯ ಮೇಲ್ಭಾಗದಿಂದ ಅಂಬುಲೆನ್ಸ್ ಚಾಲಕರು ಇದನ್ನು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ನದಿಯ ನೀರನ್ನು ಗ್ರಾಮಸ್ಥರು ಬಳಸುತ್ತಿರುವ ಕಾರಣ ಇಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ.

    ಸ್ಥಳೀಯ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿ, ಯಾರಾದರು ಎಸೆಯದೆ ಇಲ್ಲಿ ಬಂದು ಬಿದ್ದಿರುವ ಸಾಧ್ಯತೆ ಇಲ್ಲ. ಆ ರಸ್ತೆಯಲ್ಲಿ ಅಂಬುಲೆನ್ಸ್ ಸಂಚಾರ ಕಡಿಮೆ. ರಾಷ್ಟ್ರೀಯ ಹೆದ್ದಾರಿ ತಪ್ಪಿಸಿ ಒಳ ರಸ್ತೆಯಲ್ಲಿ ಬಂದು ಎಸೆದಿರುವ ಸಾಧ್ಯತೆ ಇದೆ. ಸ್ಥಳೀಯ ಯುವಕರು ಈಜುವ ಸಂದರ್ಭ ಕಿಟ್ ಇರುವುದು ಗಮನಕ್ಕೆ ಬಂದಿದೆ. ಮಣಿಪಾಲ ಪೊಲೀಸರು ಸ್ಥಳಕ್ಕಾಗಮಿಸಿದ್ದರು ಎಂದು ಅವರು ಹೇಳಿದರು.

  • ಇದ್ದಕ್ಕಿದ್ದಂತೆ ಜಾನುವಾರಗಳ ಸಾವು – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಇದ್ದಕ್ಕಿದ್ದಂತೆ ಜಾನುವಾರಗಳ ಸಾವು – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಯಾದಗಿರಿ: ಸದ್ಯ ಕೊರೊನಾ ಗ್ರೀನ್ ಜೋನ್‍ನಲ್ಲಿರುವ ಯಾದಗಿರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕೆಳದ ಮೂರು ದಿನಗಳಿಂದ ದನ-ಕರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿವೆ.

    ಜಿಲ್ಲೆಯ ಯಾದಗಿರಿ ತಾಲೂಕಿನ ನಗಲಾಪುರ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ಆರು ದನಗಳು ಸಾವನ್ನಪ್ಪಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದನಗಳ ಸಾವಿಗೆ ಯಾವುದೇ ಕಾರಣವಿಲ್ಲ ಮತ್ತು ಅವುಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮೇಯಲು ಹೊರಗಡೆ ತಿರುಗಾಡಿ ಮನೆಗೆ ಬಂದು ನೀರು ಕುಡಿದ ತಕ್ಷಣವೇ ದನಗಳು ಸಾವನ್ನಪ್ಪುತ್ತಿವೆ.

    ಹೀಗೆ ದನ-ಕರುಗಳು ಸಾವನ್ನಪ್ಪುತ್ತಿದ್ದಂತೆ ಪಶು ವೈದ್ಯರು ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಜಾನುವಾರುಗಳು ಹೀಗೆ ಸಾವನ್ನಪ್ಪಲು ಹಲವಾರು ಕಾರಣಗಳಿವೆ. ಆದರೆ ಈ ವರ್ಷದಲ್ಲಿ ಜಾನುವಾರುಗಳಿಗೆ ಸಂಭವಿಸಿದ ಯಾವುದೇ ಮಾರಣಾಂತಿಕ ಕಾಯಿಲೆಗಳು ಪತ್ತೆಯಾಗಿಲ್ಲ. ದನಗಳು ಹೀಗೆ ದಿಢೀರ್ ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿಸಿದೆ.

  • ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ನಾರಾಯಣಪುರದಲ್ಲಿ ಹಲವರಿಗೆ ಜ್ವರ- ಆತಂಕದಲ್ಲಿ ಗ್ರಾಮಸ್ಥರು

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಲವರಿಗೆ ಜ್ವರ, ಮೆ- ಕೈ ನೋವು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಗ್ರಾಮದಲ್ಲಿ ಪ್ರತಿ ದಿನ ಸುಮಾರು 15ರಿಂದ 20 ಜನರಿಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮಸ್ಥರು ಗಾಬರಿಯಾಗಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಗೆ ಹೋದರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ನಮ್ಮ ಬಳಿ ಆಸ್ಪತ್ರೆಗೆ ತೋರಿಸಲು ಹಣವೂ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆಯೂ ಸಿಗುತ್ತಿಲ್ಲ. ಹೀಗಾಗಿ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.

    ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

    ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.

    ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.

  • ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಸ್ಯಾನಿಟೈಸರ್ ಸಾವು ಪ್ರಕರಣ- ಗ್ರಾಮದ 15 ಮದ್ಯವ್ಯಸನಿಗಳು ಸ್ಯಾನಿಟೈಸರ್ ಸೇವಿಸಿರುವ ಶಂಕೆ

    ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ ಕಲಘಟಗಿ ಸಿಪಿಐ ವಿಜಯ ಬಿರಾದಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಹಿತಿ ಬಹಿರಂಗವಾಗಿದೆ. 13 ಜನರಲ್ಲಿ 4 ಜನರಿಗೆ ಗ್ರಾಮದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಘಟಗಿಯಿಂದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಉಳಿದ 9 ಜನರಿಗೆ ಮತ್ತು ಗ್ರಾಮಕ್ಕೆ ಕಲಬೆರಕೆ ಮದ್ಯ ತಂದವರನ್ನು ಹುಡುಕಲು ತಂಡ ರಚನೆ ಮಾಡಲಾಗಿದೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಸ್ಯಾನಿಟೈಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಸ್ಯಾನಿಟೈಸರ್‍ನಿಂದಾಗಿ ಗ್ರಾಮದಲ್ಲಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.

    ಭಾನುವಾರ ಇಬ್ಬರ ಸಾವು
    ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದರು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ ಮೂರು ದಿನಗಳಿಂದ ಸ್ಯಾನಿಟೈಸರ್ ದಾಸರಾಗಿದ್ದರು.

  • ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಅನಾಮಧೇಯ ವ್ಯಕ್ತಿಗಳಿಂದ ಫುಡ್ ಕಿಟ್ ವಿತರಣೆ- ಗ್ರಾಮಸ್ಥರಲ್ಲಿ ಆತಂಕ

    ಗದಗ: ಕೊರೊನಾ ಲಾಕ್‍ಡೌನ್ ವೇಳೆ ಅನ್ಯಕೋಮಿನ ಅನಾಮಧೇಯ ವ್ಯಕ್ತಿಗಳು ದಿನಸಿ ಕಿಟ್ ವಿತರಿಸಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.

    ಗುರುವಾರ ರಾತ್ರಿ 3 ಜನರ ಯುವಕರು, ಗ್ರಾಮದ ಹತ್ತಾರು ಮನೆಗಳಿಗೆ ಅಕ್ಕಿ, ಗೋಧಿ, ಬೆಳೆ, ಸಕ್ಕರೆ, ಎಣ್ಣೆ ಪ್ಯಾಕೆಟ್ ಹೀಗೆ ಅನೇಕ ವಸ್ತುವಿನ ದಿನಸಿ ಕಿಟ್ ವಿತರಿಸಿದ್ದಾರೆ. ನಮಗೆ ಬೇಡ ಅಂದರೂ ಕೊಟ್ಟು ಹೋಗಿದ್ದಾರೆ ಎಂದು ಸ್ಥಳೀಯ ಅಜ್ಜಿಯರಿಬ್ಬರು ಹೇಳುತ್ತಿದ್ದಾರೆ. ಇವರು ವಯಸ್ಸಾದವರು ಹಾಗೂ ಹೆಚ್ಚು ಮಕ್ಕಳಿದ್ದ ಮನೆಯೇ ಟಾರ್ಗೆಟ್ ಮಾಡಿ ಕೇವಲ ಬೆರಳೆಣಿಕೆಯಷ್ಟು ಮನೆಗಳಿಗೆ ಮಾತ್ರ ಹಂಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ತಾಲೂಕಾಡಳಿತ ಅನುಮತಿ ಇಲ್ಲದೇ ಯಾರು ಎಲ್ಲಿಂದ ಬಂದರು ಏನು ಎಂಬುದನ್ನು ತಿಳಿಸದೇ ಕಿಟ್ ನೀಡಿ ಪರಾರಿಯಾಗಿದ್ದಾರೆ. ಇದು ಈ ಸಂದರ್ಭದಲ್ಲಿ ಗ್ರಾಮದ ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಗದಗ ಎಸ್.ಪಿ ಯತೀಶ್ ಎನ್, ರೋಣ ತಹಶೀಲ್ದಾರ್ ಜಕ್ಕನಗೌಡ ತಾಲೂಕ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅನುಮಾನಸ್ಪದ ವ್ಯಕ್ತಿಗಳು ಗುರುತು ಸಿಕ್ಕಿದ್ದು, ಈ ಕುರಿತು ಪೊಲೀಸರ ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ.

  • ಲಿಂಗಸುಗೂರಿನಲ್ಲಿ ಕಲುಷಿತ ನೀರು ಕುಡಿದು 12 ಜನ ಆಸ್ಪತ್ರೆಗೆ ದಾಖಲು

    ಲಿಂಗಸುಗೂರಿನಲ್ಲಿ ಕಲುಷಿತ ನೀರು ಕುಡಿದು 12 ಜನ ಆಸ್ಪತ್ರೆಗೆ ದಾಖಲು

    ರಾಯಚೂರು: ಕಲುಷಿತ ನೀರು ಕುಡಿದು 12ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ.

    ಬೇಸಿಗೆ ಹಿನ್ನೆಲೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಎನ್‍ಆರ್‍ಬಿಸಿ ಕಾಲುವೆ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕಲುಷಿತ ನೀರು, ಗ್ರಾಮದಲ್ಲಿನ ನೈರ್ಮಲ್ಯ ಕೊರತೆ ಗ್ರಾಮಸ್ಥರು ಆಸ್ಪತ್ರೆ ಸೇರುವಂತೆ ಮಾಡಿದೆ. ಇನ್ನೂ ಸಾಕಷ್ಟು ಜನರಲ್ಲಿ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

    ಲಾಕ್ ಡೌನ್ ಹಿನ್ನಲೆ ಗ್ರಾಮದಿಂದ ಲಿಂಗಸೂಗುರಿಗೆ ತಪಾಸಣೆಗೆ ಬರುವವರನ್ನು ಪೊಲೀಸರು ತಡೆ ಹಿಡಿಯುತ್ತಿದ್ದಾರೆ. ವಾಹನಗಳನ್ನು ಸೀಜ್ ಮಾಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮದ ಪರಿಸ್ಥಿತಿ ಅರಿತು ಲಿಂಗಸುಗೂರು ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

  • ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ಆದೇಶ ನೀಡಿದೆ. ಆದರೆ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ 30 ಕೆಜಿ ಅಕ್ಕಿ ನೀಡಬೇಕಾಗಿದ್ದ ಅಳತೆಯಲ್ಲಿ 25 ಕೆಜಿ ನೀಡುತ್ತಿದ್ದು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಸಂದ್ರ, ಕದಿರನ್ನಾಗಾರಪಲ್ಲಿ, ಊಗಲನಾಗೇಪಲ್ಲಿ ಗ್ರಾಮಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.

    ಈ ರೀತಿ ಪ್ರತಿಯೊಬ್ಬರಿಗೂ 1 ಕೆಜಿ, 2 ಕೆಜಿ, ಮತ್ತು 3 ಕೆಜಿ ತೂಕದಲ್ಲಿ ಕಡಿತ ಮಾಡಿ ಕಡಿಮೆ ನೀಡುತ್ತಿದ್ದರೆ. ಇದೇ ರೀತಿ ಮಾಲೀಕ ಉಳಿತಾಯ ಮಾಡಿ ಲಾಭಗಳಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಮಾಲೀಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಇನ್ನು ಮುಂದೆ ಈ ರೀತಿ ನಡೆಯದಂತೆ ನಮಗೆ ಸೂಕ್ತ ನ್ಯಾಯಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.