Tag: villagers

  • ಮಠದ ಆವರಣದಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆಗಳು

    ಮಠದ ಆವರಣದಲ್ಲಿ ರಾಜಾರೋಷವಾಗಿ ಓಡಾಡಿದ ಚಿರತೆಗಳು

    ಹಾಸನ: ಜೈನ ಮಠದ ಆವರಣದಲ್ಲಿ ಎರಡು ಚಿರತೆಗಳು ರಾಜಾರೋಷವಾಗಿ ಓಡಾಡಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಎರಡು ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗಳ ಸಂಚಾರ ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಜೂನ್ 9ರಂದು ಮಧ್ಯರಾತ್ರಿ 2.40ರ ಸುಮಾರಿಗೆ ಚಿರತೆಗಳು ಮಠದ ಆವರಣದಲ್ಲಿ ಓಡಾಟ ನಡೆಸಿವೆ.

    ಒಟ್ಟೊಟ್ಟಿಗೆ ಎರಡು ಚಿರತೆಗಳ ಓಡಾಟದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೆಲ ತಿಂಗಳ ಹಿಂದೆ ಕೂಡ ಇದೇ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿದ್ದವು. ಇದೀಗ ಮತ್ತೆ ಎರಡು ಚಿರತೆಗಳು ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆಯವರು ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ಪಕ್ಕದೂರಿನ ಅಸಾಮಿ ಕಲ್ಲು ಎಸೆದಿದ್ದರಿಂದ ಕೆರೆ ನೀರನ್ನೇ ಖಾಲಿ ಮಾಡಿದ ಗ್ರಾಮಸ್ಥರು!

    ರಾಯಚೂರು: ಅನುಮಾನಕ್ಕಿಂತ ದೊಡ್ಡ ರೋಗವಿಲ್ಲ ಅಂತಾರೆ, ನಿಜ ಇಂತಹದ್ದೇ ಅನುಮಾನದಿಂದ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಗ್ರಾಮಸ್ಥರು ಕೆರೆಯಲ್ಲಿದ್ದ ಕುಡಿಯುವ ನೀರಿನ್ನೇ ಖಾಲಿಮಾಡಿ ಈಗ ಪರದಾಡುತ್ತಿದ್ದಾರೆ. ಪಕ್ಕದ ಅತ್ತನೂರು ಗ್ರಾಮದ ವ್ಯಕ್ತಿಯೋರ್ವ ಕೆರೆಗೆ ಏನನ್ನೋ ಎಸೆದ ಎಂಬ ಕಾರಣಕ್ಕೆ ಅವನು ಏನೋ ಕೆಟ್ಟದ್ದನ್ನೇ ಎಸೆದಿದ್ದಾನೆ ಎಂದು ಕೆರೆಯ ನೀರನ್ನೇ ಖಾಲಿಮಾಡಿದ್ದಾರೆ.

    ಕೊರೊನಾ ವೈರಸ್ ಆತಂಕ ಕೂಡ ಜನರನ್ನು ಕಾಡಿದೆ. ಕೆರೆಗೆ ಕಲ್ಲಿನ ರೂಪದ ವಸ್ತುವನ್ನ ಎಸೆದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರಿಂದ ಗ್ರಾಮಸ್ಥರ ಅನುಮಾನ ಬಲವಾಗಿದೆ. ಆದರೆ ಮರುದಿನ ಗ್ರಾಮಸ್ಥರು ಹಾಗೂ ಸಿರವಾರ ಠಾಣೆ ಪೊಲೀಸರ ಸಮ್ಮುಖದಲ್ಲಿ ಆ ವ್ಯಕ್ತಿ ಕೆರೆಯ ನೀರನ್ನು ಸ್ವತಃ ಕುಡಿದು, ನನ್ನಿಂದ ತಪ್ಪಾಗಿಲ್ಲ ಕೇವಲ ಕಲ್ಲನ್ನ ಎಸೆದಿದ್ದೆ ಎಂದು ಸ್ಪಷ್ಟಪಡಿಸಿದ್ದಾನೆ. ಆದರೆ ಗ್ರಾಮಸ್ಥರಲ್ಲಿ ಅನುಮಾನ ಕಡಿಮೆಯಾಗದ ಹಿನ್ನೆಲೆ ಕೆರೆ ನೀರನ್ನು ಪಂಪ್ ಸೆಟ್ ನಿಂದ ಖಾಲಿಮಾಡಲಾಗಿದೆ.

    ಕೆರೆಯ ಬಳಿಯ ಶುದ್ಧಕುಡಿಯುವ ನೀರಿನ ಘಟಕದಲ್ಲಿ ನೀರು ಕೇಳಿದ್ದಕ್ಕೆ, ಘಟಕದ ಸಿಬ್ಬಂದಿ ಹಣ ಕೇಳಿದ್ದಾರೆ. ಇದೇ ಗ್ರಾಮದ ಪಂಚಾಯ್ತಿಯಲ್ಲಿ ಲೈನ್ ಮ್ಯಾನ್ ಆಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಹಣಕೊಟ್ಟು ನೀರು ಪಡೆಯದೇ ಕೆರೆಯ ನೀರನ್ನು ಕುಡಿದು ಕೆರೆಗೆ ಕಲ್ಲು ಎಸೆದಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಏನೋ ವಿಷಕಾರಿ ವಸ್ತುವನ್ನ ಎಸೆದಿದ್ದಾನೆ ಎಂದು ಅನುಮಾನಗೊಂಡಿದ್ದಾರೆ ಎನ್ನಲಾಗಿದೆ.

    ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ಈಗ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಆದಷ್ಟು ಬೇಗ ಕೆರೆಯನ್ನ ತುಂಬಿಸುವುದಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

  • ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    – ಯಾರಿಗೂ ತೊಂದರೆ ಕೊಡದಿದ್ದರೂ ಆನೆ ಕೊಂದರು
    – ಹೊಟ್ಟೆಯಲ್ಲಿನ ಮಗು ನೆನೆದು, ಆಘಾತವಾಗಿ ಪ್ರಾಣ ಬಿಟ್ಟ ಆನೆ

    ತಿರುವನಂತರಪುರಂ: ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ಗರ್ಭಿಣಿ ಆನೆಗೆ ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿರುವ ಧಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ಬುಧವಾರ ಘಟನೆ ನಡೆದಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದಾರೆ. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಸಾವನ್ನಪ್ಪಿದೆ. ಘಟನೆ ಸಂಭವಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಆದರೆ ಆನೆ ಆಗಲೇ ಸಾವನ್ನಪ್ಪಿದೆ. ಘಟನೆ ನಡೆದ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.

    മാപ്പ്… സഹോദരീ .. മാപ്പ് …
    അവൾ ആ കാടിന്റെ പൊന്നോമനയായിരുന്നിരിക്കണം. അതിലുപരി അവൾ അതിസുന്ദരിയും സൽസ്വഭാവിയും…

    Posted by Mohan Krishnan on Saturday, May 30, 2020

    ಗರ್ಭಿಣಿ ಆನೆ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ತೆರಳಿತ್ತು. ಹೀಗೆ ದಾರಿಯಲ್ಲಿ ಓಡಾಡುತ್ತಿರುವಾಗ ಕೆಲ ಗ್ರಾಮಸ್ಥರು ಪಟಾಕಿ ತುಂಬಿದ ಪೈನಾಪಲ್‍ನ್ನು ಆನೆಯ ಸೊಂಡಿಲಿಗೆ ಇಟ್ಟಿದ್ದು, ಆನೆ ಅದನ್ನು ತಿಂದಿದೆ. ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಪಟಾಕಿ ಸಿಡಿದಿದೆ. ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

    ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಈ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಮನಮುಟ್ಟುವ ಸಾಲುಗಳನ್ನು ಬರೆದಿದ್ದಾರೆ. ಅವಳು ಎಲ್ಲರನ್ನೂ ನಂಬಿದ್ದಳು, ಯಾವಾಗ ತಾನು ತಿಂದ ಪೈನಾಪಲ್ ಬ್ಲಾಸ್ಟ್ ಆಯಿತೋ ಆಗ ಆಘಾತಕ್ಕೊಳಗಾಗಿದ್ದಾಳೆ. ಆದರೆ ಅವಳಿಗಾಗಿ ಅಲ್ಲ ಹೊಟ್ಟೆಯಲ್ಲಿರುವ ತನ್ನ ಮಗುವಿಗಾಗಿ. ಅವಳು ಇನ್ನು 18-20 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.

    ಪಟಾಕಿ ಸಿಡಿದಿದ್ದರಿಂದ ಆನೆಯ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯಗಳಾಗಿದ್ದವು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿದೆ. ಬಾಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ಆನೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿದೆ.

  • ಸೀಲ್‍ಡೌನ್ ಮಾಡಿದ್ರೂ ಕಳ್ಳದಾರಿಯಲ್ಲಿ ಓಡಾಟ- ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಹಲ್ಲೆ

    ಸೀಲ್‍ಡೌನ್ ಮಾಡಿದ್ರೂ ಕಳ್ಳದಾರಿಯಲ್ಲಿ ಓಡಾಟ- ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಹಲ್ಲೆ

    ಶಿವಮೊಗ್ಗ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾಲೂಕಿನ ಹಸೂಡಿ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ವಲಯ ಎಂದು ಘೋಷಿಸಿ ಸೀಲ್‍ಡೌನ್ ಮಾಡಿದೆ. ಕಳೆದ 4 ದಿನಗಳ ಹಿಂದೆ ಪಂಜಾಬ್ ನಿಂದ ಆಗಮಿಸಿದ್ದ ಹಸೂಡಿ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪ್ ನ ಮೂವರಿಗೆ ಕೊರೊನಾ ಪಾಸಿಟಿವ್ ಕಾಣಿಸಿತ್ತು. ಹಾಗಾಗಿ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು.

    ಹೀಗಾಗಿ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಾಡದಂತೆ ಜಿಲ್ಲಾಡಳಿತ ಗ್ರಾಮಸ್ಥರಿಗೆ ಮನವಿ ಸಹ ಮಾಡಿದೆ. ಹೀಗಿದ್ದರೂ ಜಿಲ್ಲಾಡಳಿತ ಮನವಿ ಧಿಕ್ಕರಿಸಿ ಹಕ್ಕಿಪಿಕ್ಕಿ ಕ್ಯಾಂಪಿನ ಜನರು ಪಕ್ಕದ ಚಿಕ್ಕಮರಡಿ ಗ್ರಾಮದ ಮೂಲಕ ಕಳ್ಳದಾರಿಯಲ್ಲಿ ಓಡಾಟ ನಡೆಸುತ್ತಿದ್ದರು. ಇದನ್ನು ಗಮನಿಸಿದ್ದ ಪಕ್ಕದ ಗ್ರಾಮಸ್ಥರು ನಮ್ಮ ಗ್ರಾಮದ ಕಡೆ ಬರಬೇಡಿ ಎಂದು ಹೇಳಿದ್ದಾರೆ. ಇದನ್ನೇ ತಪ್ಪು ಎಂದು ಭಾವಿಸಿದ ಹಕ್ಕಿಪಿಕ್ಕಿ ಕ್ಯಾಂಪಿನ ನೂರಾರು ಮಂದಿ ಚಿಕ್ಕಮರಡಿ ಗ್ರಾಮದವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಘಟನೆಯಲ್ಲಿ ಹಲವು ಮನೆಗಳು ಹಾಗೂ ವಾಹನಗಳು ಜಖಂಗೊಂಡಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ಡಿವೈಎಸ್‍ಪಿ ಸೇರಿದಂತೆ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿದ್ದು, ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

  • ಹಣ್ಣು ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಹೊರಬಂದ ವಲಸೆ ಕಾರ್ಮಿಕರು

    ಹಣ್ಣು ಖರೀದಿಸಲು ಕ್ವಾರಂಟೈನ್ ಕೇಂದ್ರದಿಂದ ಹೊರಬಂದ ವಲಸೆ ಕಾರ್ಮಿಕರು

    – ಕೊರೊನಾ ಅಂಟುವ ಭಯದಲ್ಲಿ ಹಳ್ಳಿಯ ಜನ
    – ಯಾದಗಿರಿಯಲ್ಲಿ ಶನಿವಾರ ಒಂದೇ ದಿನ 72 ಪ್ರಕರಣ ಪತ್ತೆ

    ಯಾದಗಿರಿ: ಕ್ವಾರಂಟೈನ್ ಕೇಂದ್ರಗಳೆಂದರೆ ಹಾಸ್ಟೆಲ್ ಆದಂತಾಗಿದ್ದು, ಯಾವಾಗ ಬೇಕಾದರೂ ಹೊರಗೆ ಬರಬಹುದು, ಯಾವಾಗ ಬೇಕಾದರೂ ಒಳಗೆ ಹೋಗಬಹುದು ಎನ್ನುವಂತಾಗಿದೆ.

    ಯಾದಗಿರಿ ಜಿಲ್ಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಭಾನುವಾರ ಶಹಪುರ ತಾಲೂಕಿನ ಬೇವಿನಹಳ್ಳಿ ಕ್ವಾರೆಂಟೈನ್ ಕೇಂದ್ರದ ವಲಸೆ ಕಾರ್ಮಿಕರು ಹಣ್ಣು ಕೊಳ್ಳಲು ಹೊರಗಡೆ ಬಂದಿದ್ದಾರೆ. ಇದರಿಂದಾಗಿ ಇದೀಗ ಹಳ್ಳಿಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಈಗಾಗಲೇ ಯಾದಗಿರಿಯಲ್ಲಿ ಕೊರೊನಾ ಸ್ಫೋಟ ಸಂಭವಿಸಿದ್ದು, ಸೋಂಕಿತರ ಸಂಖ್ಯೆ ನೂರರ ಗಡಿ ತಲುಪುತ್ತಿದೆ. ಇಂತಹ ಸಂದರ್ಭದಲ್ಲಿ ಕ್ವಾರಂಟೈನ್‍ನಲ್ಲಿದ್ದವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

    ಈಗಾಗಲೇ ಕ್ವಾರಂಟೈನ್ ಮಾಡಿದವರಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆಯೇ ಕ್ವಾರಂಟೈನ್ ಕೇಂದ್ರದಿಂದ ಹೊರ ಬಂದು, ಹಣ್ಣು ಖರೀಸುವ ನೆಪದಲ್ಲಿ ರಸ್ತೆಯಲ್ಲಿ ಸಂಚಾರ ಮಾಡಿದರೆ, ಮತ್ತೊಬ್ಬರನ್ನು ಸಂಪರ್ಕಿಸಿದರೆ ಮತ್ತೆ ಕೊರೊನಾ ಸ್ಫೋಟ ಸಂಭವಿಸುತ್ತದೆ. ಇದಾವುದನ್ನು ಅರಿಯದ ಕ್ವಾರಂಟೈನ್‍ನಲ್ಲಿರುವವರು, ಆರಾಮಾಗಿ ಹೊರ ಬರುತ್ತಿದ್ದಾರೆ. ಇದರಿಂದ ಜನ ಆತಂಕಗೊಂಡಿದ್ದಾರೆ. ಹೀಗಾಗಿ ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಹೊರಗೆ ಬರುತ್ತಿರುವುದನ್ನು ಕಂಡು ಸ್ಥಳೀಯರು ತಡೆದಿದ್ದು, ಕ್ವಾರಂಟೈನ್ ನಲ್ಲಿದ್ದರೂ ಹೊರಗಡೆ ಯಾಕೆ ಬಂದಿದ್ದೀರಿ, ವಾಪಾಸ್ ಹೋಗಿ ಎಂದು ಕಳುಹಿಸಿದ್ದಾರೆ.

    ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ಸಮೀಪಿಸುತ್ತಿದ್ದು, ಇಂದು ಮತ್ತೆ 5 ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ. ಸದ್ಯ 87 ಕೊರೊನಾ ಪ್ರಕರಣಗಳಿದ್ದು, ಇಂದು 92ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲೆಗೆ ಮಹಾರಾಷ್ಟ್ರ ಕಂಟಕ ಎದುರಾಗಿದ್ದು, ಮಹಾರಾಷ್ಟ್ರದಿಂದ ಬಂದವರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಶನಿವಾರ ಒಂದೇ ದಿನ 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು. ಈಗ ಮತ್ತೆ 5 ಕೊರೊನಾ ಪ್ರಕರಣಗಳು ಪತ್ತೆಯಾಗುವ ಸಂಭವವಿದೆ. ಸಾಲು ಸಾಲು ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆ ಯಾದಗಿರಿ ಜನ ಭಯ ಭೀತರಾಗಿದ್ದಾರೆ.

  • ದೋಣಿ ಬಿಟ್ಟು ಗುಂಡಿಬಿದ್ದ ರಸ್ತೆ ದಾಟಿದ ಗ್ರಾಮಸ್ಥರು

    ದೋಣಿ ಬಿಟ್ಟು ಗುಂಡಿಬಿದ್ದ ರಸ್ತೆ ದಾಟಿದ ಗ್ರಾಮಸ್ಥರು

    ದಾವಣಗೆರೆ: ಮಳೆಯಿಂದ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ದೋಣೆಯನ್ನು ಬಿಟ್ಟು ಗ್ರಾಮಸ್ಥರು ರಸ್ತೆ ದಾಟಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ಬಳ್ಳಾರಿಯ ಹರಪ್ಪನಹಳ್ಳಿ ತಾಲೂಕಿನ ಚಿಕ್ಕಮ್ಯಾಗಳಗೆರೆ ಗ್ರಾಮಸ್ಥರು ಈ ರೀತಿ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಮಳೆ ಬಂದರೆ ಸಾಕು ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬುತ್ತದೆ. ಹೀಗಾಗಿ ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪನವರಿಗೆ ಕೂಡ ಕರೆಮಾಡಿ, ರಸ್ತೆ ಕಾಮಗಾರಿ ಮಾಡಿಸಿ ಎಲ್ಲಾ ದೋಣೆ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ದೋಣೆಯಲ್ಲ ಕುದುರೆ ಹಾಗೂ ಆನೆ ಕೊಡಿಸುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದರು ಎಂದು ಜನರು ಆರೋಪಿಸಿದ್ದಾರೆ.

    ಅಲ್ಲದೇ ರಸ್ತೆ ಕಾಮಗಾರಿ ಮಾಡುವಂತೆ ಶಾಸಕ ಕರುಣಾಕರ್ ರೆಡ್ಡಿಯವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿ ಹೋಗಿ ಗುಂಡಿಯಲ್ಲಿ ದೋಣಿ ಹಾಕಿ ಮಕ್ಕಳನ್ನು ಕೂರಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ. ಹಾಗೆಯೇ ರಸ್ತೆ ಕಾಮಗಾರಿ ಮಾಡುವಂತೆ ಮನವಿ ಮಾಡಿದ್ದಾರೆ.

  • ಮುಂಬೈನಿಂದ ಬಂದವರ ಕ್ವಾರಂಟೈನ್-  ಅಂಬುಲೆನ್ಸ್‌ಗೆ ಕಲ್ಲು ತೂರಾಟ

    ಮುಂಬೈನಿಂದ ಬಂದವರ ಕ್ವಾರಂಟೈನ್- ಅಂಬುಲೆನ್ಸ್‌ಗೆ ಕಲ್ಲು ತೂರಾಟ

    ಹಾಸನ: ಮುಂಬೈನಿಂದ ಬಂದವರನ್ನು ಜಿಲ್ಲೆಯ ಹೊಳೆನರಸೀಪುರದಲ್ಲಿ ಕ್ವಾರಂಟೈನ್ ಮಾಡುತ್ತಿರುವುದಕ್ಕೆ ವಿರೋಧಿಸಿ ಅಂಬ್ಯುಲೆನ್ಸ್ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ.

    ಹೊಳೆನರಸೀಪುರ ತಾಲೂಕಿನ ದೇವರ ಮುದ್ದನಹಳ್ಳಿ ಬಳಿ ಘಟನೆ ನಡೆದಿದ್ದು, ಮುಂಬೈನಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಿದರೆ ಹಳ್ಳಿಯ ಜನರಿಗೂ ಕೊರೊನಾ ಬರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಮೇ.15ರಂದು ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರನ್ನು ತಟ್ಟೆಕೆರೆ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸ್ಥಳಾವಕಾಶ ಸಮಸ್ಯೆ ಹಿನ್ನೆಲೆ ಶನಿವಾರ ದೇವರಮುದ್ದನಹಳ್ಳಿಗೆ ಸ್ಥಳಾಂತರ ಮಾಡಲು ತಾಲೂಕು ಆಡಳಿತ ಮುಂದಾಗಿತ್ತು. ತಾಲೂಕು ಆಡಳಿತದ ಕ್ರಮ ಖಂಡಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಜನರನ್ನು ಅಂಬುಲೆನ್ಸ್ ಚಾಲಕ ಕೂಡಲೇ ವಾಪಸ್ ಕರೆ ತಂದಿದ್ದಾನೆ.

  • ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.

    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್

    ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

  • ಅಣ್ಣನ ಜೊತೆ ಮೀನು ಹಿಡಿಯಲು ತೆರೆಳಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಅಣ್ಣನ ಜೊತೆ ಮೀನು ಹಿಡಿಯಲು ತೆರೆಳಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    – ಆರೋಪಿ ಬಂಧನಕ್ಕೆ ಒತ್ತಾಯ

    ಹಾವೇರಿ: ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಆರೋಪಿ ಬಂಧನಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸುತ್ತಿದ್ದು, ಹಾನಗಲ್ ಪೊಲೀಸ್ ಠಾಣೆಯ ಬಳಿ ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ. ಮೇ 6ರಂದು ಅಣ್ಣನ ಜೊತೆ ಮೀನು ಹಿಡಿಯಲು ತೆರೆಳಿದ್ದ ವೇಳೆ ಕಾಮುಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

    ಘಟನೆ ನಂತರ ಆರೋಪಿ ತಲೆ ಮರೆಸಿಕೊಂಡಿದ್ದು, ಬಾಲಕಿಯ ಪೋಷಕರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸಿಪಿಐ ಪ್ರವೀಣ ಅವರಿಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಯನ್ನ ಬಂಧಿಸಿ ತಕ್ಕ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

  • ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ಬೆಂಗಳೂರು: ವಿದೇಶಿಗರನ್ನು ಗ್ರಾಮದ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿದೇಶದಿಂದ ಬರುವ ಭಾರತ ಮೂಲದ ಜನರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ಹೊರವಲಯದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿಯ ನರಸಾಪುರ ಹಾಗೂ ಬಾಣವಾಡಿ ಗ್ರಾಮಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕ್ವಾರಂಟೈನ್ ಕೇಂದ್ರ ಸಿದ್ಧತೆ ಮಾಡಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನಮ್ಮ ಗ್ರಾಮಗಳಲ್ಲಿ ಮಕ್ಕಳಿದ್ದಾರೆ. ಸ್ವಾಮಿ ನಾವು ಹಳ್ಳಿ ಜನರು ಯಾಕೆ ಇಲ್ಲಿ ಕ್ವಾಂರಟೈನ್ ಹೋಮ್ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಇನ್ನೂ ಕೊರೊನಾ ಕಾಲಿಟ್ಟಿಲ್ಲ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿಗೂ ಮಹಾಮಾರಿ ವ್ಯಾಪಿಸುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಜನರ ಮನವಿ ಮಾಡಿದ್ದು, ವಿದೇಶಿ ಜನರ ಕ್ವಾರಂಟೈನ್‍ಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹಳ್ಳಿಗಾಡಿನ ಜನರ ವಿರೋಧ ಮಾಡುತ್ತಿದ್ದಾರೆ. ಅಲ್ಲದೆ ಹೀಗೆ ಮಾಡುವುದರಿಂದ ಹಳ್ಳಿ ಹಳ್ಳಿಗೆ ಕರೊನಾ ವ್ಯಾಪಿಸುತ್ತದೆ ಎಂದು ವಿರೋಧಿಸುತ್ತಿದ್ದಾರೆ.