Tag: villagers

  • ಹಾಸನದ ಹಲವೆಡೆ ಭರ್ಜರಿ ಮಳೆ- ಮನೆಯೊಳಗೆ ನುಗ್ಗಿದ ನೀರು

    ಹಾಸನದ ಹಲವೆಡೆ ಭರ್ಜರಿ ಮಳೆ- ಮನೆಯೊಳಗೆ ನುಗ್ಗಿದ ನೀರು

    ಹಾಸನ: ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದ್ದು, ಅರಕೆರೆ ಗ್ರಾಮದಲ್ಲಿ ಹಲವು ಮನೆಯೊಳಗೆ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

    ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ಪರದಾಡಿದ್ದಾರೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಪರಿಣಾಮ, ಮಳೆಗಾಲದಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆ ಎಂದು ಈ ಹಿಂದೆಯೇ ಹಲವು ಬಾರಿ ಗ್ರಾಮಸ್ಥರು ಪಿಡಿಒಗೆ ಮನವಿ ಮಾಡಿದ್ದರು.

    ಗ್ರಾಮಸ್ಥರ ಮನವಿಗೆ ಪಿಡಿಒ ಸ್ಪಂದಿಸದ ಕಾರಣ ಇದೀಗ ಸ್ವಲ್ಪ ಮಳೆಯಾದರೂ ಮನೆ ಮುಂದೆ ನೀರು ನಿಂತು ಕೆರೆಯ ವಾತಾವರಣ ನಿರ್ಮಾಣವಾಗುತ್ತಿದೆ. ಕೋವಿಡ್-19 ಸಂಕಷ್ಟದಲ್ಲಿರುವ ಜನರಿಗೆ ಈಗ ಅಧಿಕಾರಿಗಳ ಬೇಜವಬ್ದಾರಿಯಿಂದ ಮಳೆ ಬಂದಾಗ ಸಮಸ್ಯೆ ಎದುರಿಸುವಂತಾಗಿದೆ. ಎಷ್ಟೇ ಮನವಿ ಮಾಡಿದರೂ ಪಿಡಿಒ ಮಾತ್ರ ಚರಂಡಿ ಸರಿ ಮಾಡಿಸುತ್ತಿಲ್ಲ. ಹೀಗಾಗಿ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದ ಟ್ಯಾಂಕರ್ ಹಿಡಿದ ಗ್ರಾಮಸ್ಥರು

    ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿಯಲು ಬಂದ ಟ್ಯಾಂಕರ್ ಹಿಡಿದ ಗ್ರಾಮಸ್ಥರು

    ರಾಯಚೂರು: ಕಾರ್ಖಾನೆಗಳ ವಿಷಕಾರಿ ತ್ಯಾಜ್ಯವನ್ನು ಕೆರೆಗೆ ಸುರಿಯಲು ಬಂದಿದ್ದ ಟ್ಯಾಂಕರ್ ಅನ್ನು ಹಿಡಿದು ಗ್ರಾಮಸ್ಥರೇ ಪೊಲೀಸರಿಗೆ ಒಪ್ಪಿಸಿರುವ ಘಟನೆ ರಾಯಚೂರಿನ ಮನ್ಸಲಾಪುರದಲ್ಲಿ ನಡೆದಿದೆ.

    ಕಳೆದ ಒಂದು ವರ್ಷದಿಂದಲೂ ರಾಯಚೂರಿನ ಹೈದರಾಬಾದ್ ರಸ್ತೆಯಲ್ಲಿನ ಕೆಲ ಕಾರ್ಖಾನೆಗಳು ತಮ್ಮ ರಾಸಾಯನಿಕ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿವೆ. ಇದರಿಂದ ಕೆರೆ ನೀರು ವಿಷವಾಗುತ್ತಿದ್ದು ಮೀನುಗಳು ಸಾಯುತ್ತಿವೆ, ಗದ್ದೆಗಳು ಹಾಳಾಗುತ್ತಿದ್ದು ಸರಿಯಾಗಿ ಬೆಳೆ ಬರುತ್ತಿಲ್ಲ. ಮನುಷ್ಯರ ಮೇಲೂ ಈ ರಾಸಾಯನಿಕ ತ್ಯಾಜ್ಯ ಕೆಟ್ಟಪರಿಣಾಮ ಬೀರುತ್ತಿದೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಳೆದ ರಾತ್ರಿ ತ್ಯಾಜ್ಯ ಸುರಿಯಲು ಬಂದ ವೇಳೆ ಟ್ಯಾಂಕರ್ ಅನ್ನು ಹಿಡಿದಿದ್ದು, ಚಾಲಕರಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ ಅಂತ ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಸತ್ತು ಹೋಗಿದ್ದವು. ಭತ್ತದ ಬೆಳೆ ಹಾಳಾಗಿತ್ತು. ಗದ್ದೆಯಲ್ಲಿ ಕೆಲಸ ಮಾಡುವ ರೈತರ ಕೈಗಳಿಗೆ ಬೊಬ್ಬೆಗಳು ಬರುತ್ತಿದ್ದವು. ಈಗ ಮತ್ತೆ ಮಳೆಗಾಲ ಬಂದಿರುವುದರಿಂದ ಕೆರೆ ಹಾಗೂ ಹಳ್ಳ ಇರುವ ಪ್ರದೇಶದಲ್ಲಿ ರಾಸಾಯನಿಕ ತ್ಯಾಜ್ಯ ಸುರಿಯಲು ಕಾರ್ಖಾನೆಗಳು ಮುಂದಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಆದರೆ ಈ ಟ್ಯಾಂಕರ್ ಯಾವ ಕಾರ್ಖಾನೆಗೆ ಸೇರಿದ್ದು ಎಂದು ಇನ್ನೂ ತಿಳಿದುಬಂದಿಲ್ಲ.

  • ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    -ಪೊಲೀಸರು ಬಂದ್ಮೇಲೆ ತಿಳಿಯಾದ ವಾತಾವರಣ

    ಹೈದರಾಬಾದ್: ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ಕಟ್ಟಿ ಹಾಕಿದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

    ವಿದ್ಯುತ್ ಇಲಾಖೆಯ ಅಧಿಕಾರಿಗಳಿಬ್ಬರು ಗ್ರಾಮಕ್ಕೆ ಪರಿಶೀಲನೆಗೆ ಆಗಮಿಸಿದ್ದರು. ವಿದ್ಯುತ್ ಬಿಲ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

    ವಿದ್ಯುತ್ ಇಲಾಖೆಯ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ʼಹೊರ ಜಿಲ್ಲೆಯಿಂದ ಬಂದ್ರೆ ಶಾಲೆಯಲ್ಲಿ ಇರಬೇಕುʼ – ಡಂಗುರ ಸಾರಿದ ಗ್ರಾಮಸ್ಥರು

    ʼಹೊರ ಜಿಲ್ಲೆಯಿಂದ ಬಂದ್ರೆ ಶಾಲೆಯಲ್ಲಿ ಇರಬೇಕುʼ – ಡಂಗುರ ಸಾರಿದ ಗ್ರಾಮಸ್ಥರು

    – ಕೊರೊನಾ ಟೆಸ್ಟ್ ಮಾಡಿಸಿದ್ರೆ ಮಾತ್ರ ಶಾಲೆ ಕಟ್ಟಡಕ್ಕೆ ಎಂಟ್ರಿ
    – ನೇರವಾಗಿ ಮನೆಗೆ ಬಂದ್ರೆ ಮಾಲೀಕರಿಗೆ ದಂಡ

    ಚಿಕ್ಕಮಗಳೂರು: ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಏಳು ದಿನಗಳ ಕಾಲ ಶಾಲಾ ಕಟ್ಟಡದಲ್ಲಿ ಇದ್ದು ಕ್ವಾರಂಟೈನ್‌ ಬಳಿಕ ಮನೆಗೆ ಬರಬೇಕೆಂದು ಕಡೂರು ತಾಲೂಕಿನ ಗ್ರಾಮದಲ್ಲಿ ಡಂಗುರ ಸಾರಿಸಿ ಎಚ್ಚರಿಕೆ ನೀಡಲಾಗಿದೆ.

    ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಿಸಿ ಸ್ಥಳೀಯರಿಗೆ ಎಚ್ಚರಿಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಬರುವವರನ್ನು ಯಾರೂ ಮನೆಗೆ ಸೇರಿಸಬಾರದು ಎಂದು ಗ್ರಾಮಸ್ಥರಿಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸಿಕೊಂಡರೆ ಮಾಲೀಕರಿಗೆ ಯಾವುದೇ ಮುಲಾಜಿಲ್ಲದೆ ದಂಡ ಹಾಕುವುದಾಗಿ ತಿಳಿಸಿದ್ದಾರೆ.

    ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ. ಬಂದವರು ಕಡ್ಡಾಯವಾಗಿ ಏಳು ದಿನಗಳ ಕಾಲ ಶಾಲೆಯಲ್ಲಿ ಕ್ವಾರಂಟೈನ್‍ ಆಗಿ ಬಳಿಕ ಮನೆಗೆ ಬರಬೇಕೆಂದು ಡಂಗುರ ಸಾರಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 155 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 97 ಜನ ಬಿಡುಗಡೆಯಾಗಿದ್ದರೆ. ಸದ್ಯ 54 ಸಕ್ರಿಯ ಪ್ರಕರಣಗಳಿವೆ. ಇತ್ತೀಚಿನ ಪ್ರಕರಣಗಳಲ್ಲಿ ಬೆಂಗಳೂರಿಗೆ ಹೋಗಿ ಬಂದ ಬಹುತೇಕರಲ್ಲಿ ಕೊರೊನಾ ಪತ್ತೆಯಾಗಿರುವ ಕಾರಣ ಹಳ್ಳಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ.

    ಕೊರೊನಾ ಆರಂಭದ ದಿನಗಳಲ್ಲಿ ಹೊರ ಜಿಲ್ಲೆಗಳಿಂದ ಬಂದರೆ ಅಂಥವರನ್ನು ಗ್ರಾಮದ ಹೆಬ್ಬಾಗಿಲಿನಿಂದ ವಾಪಸ್ ಕಳುಹಿಸಲಾಗಿತ್ತು. ಗ್ರಾಮದ ಮುಂಭಾಗ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದವರು ಯಾರೂ ಗ್ರಾಮದೊಳಕ್ಕೆ ಕಾಲಿಡದಂತೆ ಹಳ್ಳಿಗರು ಕಾದುಕುಳಿತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ರಾಜ್ಯವಾಪಿ ಹರಡಿರುವುದರಿಂದ ಹಳ್ಳಿಗರು ಲಾಕ್‍ಡೌನ್ ನಂತಹ ನಿರ್ಧಾರಗಳನ್ನು ಕೈಬಿಟ್ಟು, ಈ ರೀತಿಯ ಕಾನೂನುಗಳನ್ನು ಸ್ವಯಂಪ್ರೇರಿತವಾಗಿ ಜಾರಿಗೆ ತಂದುಕೊಂಡಿದ್ದಾರೆ.

  • ಮಾದಪ್ಪನ ದೇವಾಲಯ ಬಂದ್ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

    ಮಾದಪ್ಪನ ದೇವಾಲಯ ಬಂದ್ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟವನ್ನು ಬಂದ್ ಮಾಡುವಂತೆ ಇದೀಗ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

    ದಿನನಿತ್ಯ ಸಾವಿರಾರು ಜನರು ಮಲೆ ಮಹದೇಶ್ವರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಜನರು ಭಾಗಿಯಾಗಿದ್ದಾರೆ.

    ದಿನೇ ದಿನೇ ರಾಜ್ಯದಲ್ಲಿ ಮತ್ತು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗುತ್ತಿದೆ. ಈ ಮಧ್ಯೆ ರಾಜ್ಯದ ವಿವಿಧ ಭಾಗಗಳಿಂದ ಬೆಟ್ಟಕ್ಕೆ ಭಕ್ತರು ಬರುತ್ತಿದ್ದಾರೆ. ಬೆಟ್ಟದಲ್ಲಿ ಕೇವಲ ದೇವಾಲಯಕ್ಕೆ ಪ್ರವೇಶ ಮಾಡುವಾಗ ಮಾತ್ರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಮೈಸೂರು, ಬೆಂಗಳೂರು ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಇದುವರೆಗೂ ಬೆಟ್ಟದಲ್ಲಿ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಕೊರೊನಾ ಪ್ರಕರಣ ಕಡಿಮೆಯಾಗುವವರೆಗೂ ಹೊರಗಿನವರಿಗೆ ಪ್ರವೇಶ ನೀಡಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಬಾಗಿಲು ಬಂದ್ ಮಾಡುವಂತೆ ಕೆಲ ಕಾಲ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

  • ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    ಹೊರ ರಾಜ್ಯ, ಜಿಲ್ಲೆಯಿಂದ ಬಂದ್ರೆ 10 ಸಾವಿರ ದಂಡ, ಬಂದವರನ್ನು ಹಿಡಿದು ಕೊಟ್ರೆ 2 ಸಾವಿರ ಬಹುಮಾನ

    – ಗ್ರಾಮಸ್ಥರಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ
    – ಬೆಂಗಳೂರಿಂದ ಬಂದವರು ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ

    ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕೆ ಗ್ರಾಮಗಳೇ ಕ್ರಮ ಕೈಗೊಳ್ಳುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಂದ ಯಾರಾದರೂ ಗ್ರಾಮಕ್ಕೆ ಬಂದರೆ ಭಾರೀ ಪ್ರಮಾಣದ ದಂಡ ವಿಧಿಸುವುದಾಗಿ ಎಚ್ಚರಿಗೆ ನೀಡಿವೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಗ್ರಾಮ ಹಾಗೂ ಪುಣಜನೂರಿನ ಮೂಕನಪಾಳ್ಯದ ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ. ಕೇರಳ, ಕೊರೊನಾ ಹಾಟ್ ಸ್ಪಾಟ್ ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರಿನಿಂದ ಗ್ರಾಮಕ್ಕೆ ಯಾರಾದರೂ ಬಂದರೆ 10 ಸಾವಿರ ರೂ ದಂಡ, ಬಂದವರನ್ನು ಹಿಡಿದು ಕೊಟ್ಟರೆ 2 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ಗ್ರಾಮಸ್ಥರು ಡಂಗೂರ ಸಾರಿಸಿದ್ದಾರೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ವ್ಯಕ್ತಿ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಜಾಗೃತಿ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಭೆ ಕರೆಯುವ ಮೂಲಕ ಜನರೇ ಕೊರೊನಾ ಹೊಡೆದೊಡಿಸಲು ಸಾಕಷ್ಟು ಜಾಗೃತಿ ವಹಿಸಿತ್ತಿದ್ದಾರೆ.

    ಸ್ವಯಂ ತಪಾಸಣೆಗೆ ಒಳಗಾಗದಿದ್ರೆ, ಕಾನೂನು ಕ್ರಮ
    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಈಗ ಬೆಂಗಳೂರಿನಿಂದ ಸಾಕಷ್ಟು ಜನ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹವರಿಗೆ ಶಾಸಕ ನರೇಂದ್ರ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಶಾಸಕರು, ಬೆಂಗಳೂರಿನಿಂದ ಜಿಲ್ಲೆಗೆ 3800ಕ್ಕೂ ಹೆಚ್ಚು ಜನರು ಬಂದಿದ್ದಾರೆ. ಇವರೆಲ್ಲ ಕಡ್ಡಾಯವಾಗಿ ಖುದ್ದಾಗಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ತಪಾಸಣೆಗೆ ಒಳಗಾಗದೆ ಅಣ್ಣ, ತಮ್ಮ, ಸಂಬಂಧಿ ಬಚ್ಚಿಡುವ ಪ್ರಯತ್ನ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಜರುಗಿಸಲಾಗುವುದು. ಯುವಕರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಬೇಡಿ. ಇದರಿಂದ ಕೊರೊನಾ ಆತಂಕ ಹೆಚ್ಚಾಗಬಹುದು. ಈಗಾಗಲೇ ಕ್ರಿಕೆಟ್ ಆಡಿದ ಒಬ್ಬ ಯುವಕನಿಗೆ ಕೊರೊನಾ ಬಂದಿದ್ದು, ಇದರಿಂದ 30 ರಿಂದ 40 ಮಂದಿಗೆ ಕೊರೊನಾ ಆತಂಕ ಎದುರಾಗಿದೆ ಎಂದು ಸಲಹೆ ನೀಡಿದ್ದಾರೆ.

    ಚಾಮರಾಜನಗರದ ಹಲವೆಡೆ ಮಾರಿ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾರೂ ಮಾರಿಹಬ್ಬ, ಜಾತ್ರೆ ಮಾಡ್ಬೇಡಿ ಇದರಿಂದ ರೋಗ ಉಲ್ಬಣ ಆಗುತ್ತೆದೆ. ಬೆಂಗಳೂರಿನಿಂದ ಬಂದ ಯುವಕರು ಕೆಲಸಕ್ಕೆ ಹೋಗ್ತಿಲ್ಲ, ಜನರನ್ನು ಗುಂಪುಗೂಡಿಸಿ ಜೂಜಾಟವಾಡುತ್ತಿದ್ದಾರೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ. ನಾನು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.

    ಮಾದಪ್ಪನ ಸನ್ನಿದಿಯಲ್ಲಷ್ಟೇ ತಪಾಸಣೆ ನಡೀತಿದೆ, ಬರುವ ಭಕ್ತಾದಿಗಳು ಬೆಟ್ಟದಲ್ಲಿ ಓಡಾಡಿ ನಂತರ ದರ್ಶನಕ್ಕೆ ಹೋಗ್ತಾರೆ, ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಇದೆ. ಇಂದಿನಿಂದಲೇ ಮಾದಪ್ಪನ ತಾಳಬೆಟ್ಟದಲ್ಲಿ ತಪಾಸಣೆ ಆರಂಭಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟಿದ್ದೇನೆ. ಚೆಕ್ ಪೋಸ್ಟ್ ನಲ್ಲಿ ಪ್ರತಿಯೊಬ್ಬರ ತಪಾಸಣೆ ನಡೆಸಿ ರೋಗ ಲಕ್ಷಣವಿದ್ದವರನ್ನು ಕ್ವಾರಂಟೈನ್‍ಗೆ ಒಳಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

  • ನಮ್ಮೂರಿಗೆ ಬರಬೇಡಿ, ಬಸ್ ಬೇಡ್ವೇ ಬೇಡ- ಗ್ರಾಮಸ್ಥರಿಂದ ತಡೆ

    ನಮ್ಮೂರಿಗೆ ಬರಬೇಡಿ, ಬಸ್ ಬೇಡ್ವೇ ಬೇಡ- ಗ್ರಾಮಸ್ಥರಿಂದ ತಡೆ

    – ನಮಗೆ ಬಸ್ ಅವಶ್ಯವಿಲ್ಲ ಎಂದ ಜನ

    ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದಾಗಿ ಜಿಲ್ಲೆಯ ಜನ ಭಯಭೀತರಾಗಿದ್ದಾರೆ. ಹೀಗಾಗಿ ಬಸ್ ತಡೆದು ಪತಿಭಟನೆ ನಡೆಸಿದ್ದು, ನಮ್ಮೂರಿಗೆ ಯಾರೂ ಬರುವುದು ಬೇಡ, ಬಸ್ ನಮಗೆ ಅವಶ್ಯವೇ ಇಲ್ಲ ಮೊದಲು ಬಸ್ ಸಂಚಾರ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಳಿಗಿರಿ ರಂಗನಾಥ ಬೆಟ್ಟದ ಹೊಸಪೋಡು ಬಳಿ ಘಟನೆ ನಡೆದಿದ್ದು, ಕೊರೊನಾ ಆತಂಕ ಹಿನ್ನೆಲೆ ಗ್ರಾಮಕ್ಕೆ ಬಸ್ ಬರದಂತೆ ಸೋಲಿಗರು ರಸ್ತೆ ತಡೆ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದರೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಬಿಳಿಗಿರಿ ರಂಗನಾಥನ ಸನ್ನಿಧಿಗೆ ಯಳಂದೂರಿನಿಂದ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇದೀಗ ಬಸ್ ಸಂಚಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಾವು ಕಳೆದ ಮೂರ್ನಾಲ್ಕು ದಿನಗಳಿಂದ ಮನವಿ ಮಾಡುತ್ತಿದ್ದೇವೆ. ನಮ್ಮೂರಿಗೆ ಬಸ್ ಬಿಡಬೇಡಿ, ನಮಗೆ ಬಸ್ ಅವಶ್ಯವಿಲ್ಲ ಎಂದು ಸಾರಿಗೆ ಅಧಿಕಾರಿಗಳಿಗೆ ಹೇಳಿದ್ದೇವೆ ಆದರೂ ಬಸ್ ಬಿಡಲಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಕೊರೊನಾ ಭಯ ಕಾಡುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರಿಗೆ, ಭಕ್ತರಿಗೆ ಬಿಆರ್‍ಟಿಗೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿದ್ದಾರೆ.

  • ಬೆಂಬಲಿಗನ ಮನೆಯಲ್ಲೇ ಕುಳಿತು, ಗ್ರಾಮಸ್ಥರನ್ನು ಕರೆಯಿರಿ ಎಂದು ಶಾಸಕರ ದೌಲತ್ತು

    ಬೆಂಬಲಿಗನ ಮನೆಯಲ್ಲೇ ಕುಳಿತು, ಗ್ರಾಮಸ್ಥರನ್ನು ಕರೆಯಿರಿ ಎಂದು ಶಾಸಕರ ದೌಲತ್ತು

    – ಯಾರಿಗೆ ಸಮಸ್ಯೆ ಇದೆಯೋ, ಇಲ್ಲೆಗೇ ಬರಲು ಹೇಳಿ ಎಂದ ಶಾಸಕ
    – ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಪ್ರತಿಭಟನೆ
    – ಶಾಸಕ ದುರ್ಯೋಧನ ಐಹೊಳೆಗೆ ಘೇರಾವ್ ಹಾಕಿ ತರಾಟೆ ತೆಗೆದುಕೊಂಡ ಜನ

    ಚಿಕ್ಕೋಡಿ: ಜನರ ಸಮಸ್ಯೆ ಕೇಳಲು ಬಂದು ಬೆಂಬಲಿಗರ ಮನೆಯಲ್ಲಿ ಕುಳಿತ ಶಾಸಕರ ನಡೆಯಿಂದ ಬೇಸತ್ತು ಜನರು ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಯರನ್ನು ತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಗೈರಾಣು ಜಮೀನಿನ ಸಮಸ್ಯೆ ಆಲಿಸಲು ಬಂದಿದ್ದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಕಂಕನವಾಡಿ ಗ್ರಾಮದ ತಮ್ಮ ಬೆಂಬಲಿಗರ ಮನೆಯಲ್ಲೆ ಕುಳಿತು, ಜನರನ್ನು ಅಲ್ಲಿಗೇ ಕರೆಸಿ ಎಂದಿದ್ದಾರೆ. ಇದಕ್ಕೆ ಗರಂ ಆದ ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡು, ಘೇರಾವ್ ಹಾಕಿದ್ದಾರೆ.

    ಕಂಕಣವಾಡಿ ಗ್ರಾಮದ ಸರ್ಕಾರಿ ಜಾಗ ಒತ್ತುವರಿ ವ್ಯಾಜ್ಯದ ಕುರಿತು ಕಳೆದ ಹಲವು ದಿನಗಳಿಂದ ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷ ನಡೆದಿದ್ದು, ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಕಳೆದ 30 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣ ಜಮೀನಿನಲ್ಲಿ ವಾಸವಿದ್ದ 2 ಸಾವಿರ ಕುಟುಂಬಗಳಿಗೆ ಸರ್ಕಾರವೇ ಮೂಲಭೂತ ಸೌಕರ್ಯಗಳನ್ನು ನೀಡಿ ಆಶ್ರಯ ಯೋಜನೆಯಲ್ಲೂ ಮನೆ ನಿರ್ಮಿಸಿ ಕೊಟ್ಟಿದೆ. ಆದರೆ ಈಗ ಏಕಾಏಕಿ ಗೈರಾಣು ಜಮೀನಿನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.

    ಮನೆಗಳನ್ನು ಖಾಲಿ ಮಾಡಿಸುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿದೆ. ಹೀಗಾಗಿ ಕಂಕನವಾಡಿ ಗ್ರಾಮದ ಶೇ.85 ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಗ್ರಾಮದಲ್ಲಿ ನಿರ್ಮಾಣ ವಾಗಿದೆ. ಸರ್ಕಾರದ ನಿರ್ಧಾರ ಖಂಡಿಸಿ ಗ್ರಾಮಸ್ಥರು ಕಳೆದ 4 ದಿನಗಳ ಹಿಂದೆ ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಆದರೆ ಅಂದು ಗ್ರಾಮಸ್ಥರ ಅಳಲು ಕೇಳಲು ಬಾರದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಘಟನೆ ನಡೆದು ನಾಲ್ಕು ದಿನಗಳ ಬಳಿಕ ಕಂಕಣವಾಡಿ ಗ್ರಾಮಕ್ಕೆ ಬಂದಿದ್ದಾರೆ.

    ಶಾಸಕ ಐಹೊಳೆ ಗ್ರಾಮಸ್ಥರಿರುವಲ್ಲಿಗೆ ಹೋಗುವುದನ್ನು ತಮ್ಮ ಬೆಂಬಲಿಗರ ಮನೆಗೆ ತೆರಳಿದ್ದಾರೆ. ಅಲ್ಲಿಂದಲೇ ಯಾರಿಗೆ ಸಮಸ್ಯೆ ಇದೆಯೋ ಅವರನ್ನು ಇಲ್ಲಿಗೇ ಕರೆಸಿ ಎಂದಿದ್ದಾರೆ. ಶಾಸಕರ ದರ್ಪದ ಮಾತಿಗೆ ಗರಂ ಆದ ಸ್ಥಳೀಯರು ಶಾಸಕ ಐಹೊಳೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ತಡೆದು ಶಾಸಕರ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಬೆಂಬಲಿಗನ ಮನೆಯಿಂದ ಶಾಸಕ ಐಹೊಳೆ ಕಾಲ್ಕಿತ್ತು ಜನರ ಬಳಿ ಬಂದಿದ್ದಾರೆ.

    ಶಾಸಕರು ಆಗಮಿಸುತ್ತಿದ್ದಂತೆ ಜನರು ಮತ್ತು ಶಾಸಕ ದುರ್ಯೋಧನ ಐಹೊಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜನ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಆಕ್ರೋಶವನ್ನು ನೋಡಿ ಪೊಲೀಸರ ಸಹಾಯದಿಂದ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

  • ಕೆಸರು ಗದ್ದೆಯಂತಾದ ರಸ್ತೆ ಮಧ್ಯೆ ಸಿಲುಕಿದ ಅಂಬುಲೆನ್ಸ್

    ಕೆಸರು ಗದ್ದೆಯಂತಾದ ರಸ್ತೆ ಮಧ್ಯೆ ಸಿಲುಕಿದ ಅಂಬುಲೆನ್ಸ್

    – ನಿತ್ಯ ವಾಹನ ಸವಾರರ ಗೋಳು

    ಶಿವಮೊಗ್ಗ: ಮಳೆಗಾಲ ಆರಂಭವಾದರೆ ಮಲೆನಾಡಿನ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದ್ದು, ಕೆಸರುಗದ್ದೆಯಂತಹ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸಪಟ್ಟು ಸಂಚರಿಸುತ್ತಾರೆ. ಅಲ್ಲದೆ ಅಂಬುಲೆನ್ಸ್ ಗಳು ಇದೇ ರಸ್ತೆಯಲ್ಲಿ ಸಿಲುಕಿಕೊಂಡ ಘಟನೆಯೂ ಇವೆ.

    ಇಷ್ಟಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸದೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕೋಡು ಗ್ರಾಮದ ಜನರ ಗೋಳಿಡುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಹಣ ಎಲ್ಲಿ ಹೋಗುತ್ತೆದೆ. ರಸ್ತೆಗಳು ಎಲ್ಲಿ ಅಭಿವೃದ್ಧಿ ಆಗುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ದೂರಿಸಿದ್ದಾರೆ.

    ಮಳೆಗಾಲ ಆರಂಭವಾಗಿದ್ದು, ಮಲೆನಾಡಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರ ಜೊತೆಗೆ ಗ್ರಾಮ ಪಂಚಾಯಿತಿ ಸಹ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ, ರಸ್ತೆಗೆ ಮಣ್ಣು ಸುರಿದು ತಕ್ಕಮಟ್ಟಿಗಿದ್ದ ರಸ್ತೆಯನ್ನು ಇನ್ನೂ ದುಸ್ಥಿತಿಗೆ ತಳ್ಳಿದೆ. ಕಳೆದ ಮೂರು ದಿನದ ಹಿಂದೆ ಗ್ರಾಮದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಕ್ಕೆ ಅಂಬುಲೆನ್ಸ್ ಬಂದಿತ್ತು. ಕೆಸರು ತುಂಬಿದ್ದ ರಸ್ತೆಯಲ್ಲಿ ಅಂಬುಲೆನ್ಸ್ ಸಿಲುಕಿದ ಪರಿಣಾಮ ರೋಗಿಯನ್ನು ಸಾಗಿಸಲು ಗ್ರಾಮಸ್ಥರು ಪರದಾಡಿದ್ದಾರೆ. ನಂತರ ಕೆಸರು ತುಂಬಿದ್ದ ರಸ್ತೆಯಲ್ಲಿ ದೂರದಲ್ಲೇ ಅಂಬುಲೆನ್ಸ್ ನಿಲ್ಲಿಸಿ, ರೋಗಿಯನ್ನು ಅಂಬುಲೆನ್ಸ್ ಬಳಿಗೆ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಈ ಕಷ್ಟ ನೋಡಲಾರದೆ ಗ್ರಾಮಸ್ಥರು ಶಾಶ್ವತ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

  • ಗ್ರಾಮದಲ್ಲಿ ಕೊರೊನಾ ಸೋಂಕಿತ- ಹಳ್ಳಿ ಬಿಟ್ಟು ಜಮೀನು ಸೇರಿದ ಜನ

    ಗ್ರಾಮದಲ್ಲಿ ಕೊರೊನಾ ಸೋಂಕಿತ- ಹಳ್ಳಿ ಬಿಟ್ಟು ಜಮೀನು ಸೇರಿದ ಜನ

    – ಹೊಲಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸ
    – ಕೊರೊನಾಗೆ ಸೆಡ್ಡು ಹೊಡೆದ ಗ್ರಾಮಸ್ಥರು

    ಯಾದಗಿರಿ: ರಾಜಕಾರಣಿಗಳು ಬೇಕಾಬಿಟ್ಟಿಯಾಗಿ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಲಸಿಕೆ ಸಂಶೋಧನೆಯಾಗಿಲ್ಲ. ಹೀಗಿರುವಾಗ ಸಾಮಾಜಿಕ ಅಂತರವೇ ಮಹಾಮಾರಿ ತಡೆಗೆ ಆಯುಧವಾಗಿದೆ. ಇದನ್ನರಿತ ಗ್ರಾಮಸ್ಥರು ಕೊರೊನಾ ಬಂದ ಹಿನ್ನೆಲೆ ಹಳ್ಳಿ ಬಿಟ್ಟು ಜಮೀನು ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ಕೊರೊನಾಗೆ ಸದ್ಯ ಔಷಧಿ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ವಿರುದ್ಧ ಹೋರಾಡಬಹುದಾಗಿದೆ. ಈ ಕುರಿತು ಸರ್ಕಾರ ಸಹ ಸಾರಿ ಸಾರಿ ಹೇಳುತ್ತಿದೆ. ಆದರೆ ಸುಕ್ಷಿತರೂ ಸೇರಿದಂತೆ ಹಲವರು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಚಂದಾಪುರತಾಂಡಾದ 40ಕ್ಕೂ ಅಧಿಕ ಕುಟುಂಬಗಳು ತಮ್ಮ ಗ್ರಾಮವನ್ನು ತೊರೆದು, ಕಳೆದ ಒಂದು ತಿಂಗಳಿನಿಂದ ಹೊಲಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ಕುಟುಂಬ ಸಮೇತರಾಗಿ ಅಲ್ಲೇ ವಾಸಿಸುತ್ತಿದ್ದಾರೆ.

    ಈ ತಾಂಡದ ವ್ಯಕ್ತಿಗೆ ಮೇ 17 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ಗ್ರಾಮದಲ್ಲಿ ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಉಂಟಾಗಿತ್ತು. ಸ್ಥಳೀಯ ಗ್ರಾ.ಪಂ.ಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿತ್ತು. ಇದರಿಂದ ಜಾಗೃತಗೊಂಡ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು, ಜೀವನ ಸಾಗಿಸುತ್ತಿವೆ.

    ಶೆಡ್ ನಲ್ಲಿಯೂ ಮಾಸ್ಕ್ ಧರಿಸುತ್ತಿರುವ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ. ಸದ್ಯ ಪಾಸಿಟಿವ್ ಬಂದಿದ್ದ ಈ ಗ್ರಾಮದ ವ್ಯಕ್ತಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಜಿಲ್ಲಾಡಳಿತ ಸಹ ತಮ್ಮ ಮನೆಗಳಿಗೆ ತೆರಳುವಂತೆ ಈ ಕುಟುಂಬಗಳಿಗೆ ಸೂಚನೆ ನೀಡಿದೆ. ಆದರೆ ಈ ಕುಟುಂಬಗಳು ಕೊರೊನಾ ಕಡಿಮೆಯಾಗುವವರಿಗೂ ಜಮೀನಲ್ಲಿಯೇ ವಾಸ ಮಾಡಲು ನಿರ್ಧರಿಸಿವೆ.

    ಸ್ಯಾಂಪಲ್ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಯಾದಗಿರಿ ಪ್ರಥಮ ಸ್ಥಾನ
    ಕೊರೊನಾ ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಯಲ್ಲಿ ಯಾದಗಿರಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಯಾದಗಿರಿ ಜಿಲ್ಲಾಡಳಿತ ಕೆಲವು ದಿಟ್ಟ ನಿರ್ಧಾರ ಕೈಗೊಂಡಿತ್ತು. ಇದರ ಪರಿಣಾಮ ಕಳೆದ 10 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಯಾದಗಿರಿಯಲ್ಲಿ ಅತಿ ಹೆಚ್ಚು ಕೊವಿಡ್ 19 ಟೆಸ್ಟ್ ಆಗಿದೆ. 10 ದಿನದ ಅವಧಿಯಲ್ಲಿ 7,297 ಜನರಿಂದ ಸ್ಯಾಂಪಲ್ ಸಂಗ್ರಹಣೆ ಮಾಡಲಾಗಿದೆ. ಈವರೆಗೆ ಬರೋಬ್ಬರಿ 21,100 ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ ನಡೆದಿದ್ದು, ಇದರಲ್ಲಿ 19,500 ನೆಗಟಿವ್ ಮತ್ತು 828 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಈ ವರೆಗೆ 18,000ಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿದ್ದು, ಇನ್ನೂ 150 ಜನರ ವರದಿ ಬಾಕಿಯಿದೆ.

    ಸೋಂಕು ಹರಡುವದನ್ನು ತಟೆಗಟ್ಟಲು ಜಿಲ್ಲೆಯಲ್ಲಿ ಫೋರ್ ಪ್ರಿನ್ಸಿಪಲ್ಸ್ ಆಫ್ ‘ಟಿ’ ಅಳವಡಿಕೆ ಮಾಡಲಾಗಿತ್ತು. ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ ಗೆ ಮಹತ್ವದ ಆಧ್ಯತೆ ನೀಡಲಾಗಿದೆ. ಪರಿಣಾಮ ಯಾದಗಿರಿ ಪ್ರಥಯ ಸ್ಥಾನ ಬಳಿಕ ಕಲಬುರಗಿ (4843) ಉಡುಪಿ(4219) ವಿಜಯಪುರ(3891) ಸ್ಥಾನ ಪಡೆದಿವೆ. ಅತಿ ಹೆಚ್ಚು ಟೆಸ್ಟಿಂಗ್ ನೊಂದಿಗೆ ಯಾದಗಿರಿ ಅಗ್ರಸ್ಥಾನದಲ್ಲಿದೆ.