Tag: village

  • ಚುನಾವಣೆಯಲ್ಲಿ ಸೋಲು- ಕೊಟ್ಟ ಮಾತು ಉಳಿಸಿಕೊಂಡ  ಮೆಟ್ರೋ ಮ್ಯಾನ್ ಶ್ರೀಧರನ್

    ಚುನಾವಣೆಯಲ್ಲಿ ಸೋಲು- ಕೊಟ್ಟ ಮಾತು ಉಳಿಸಿಕೊಂಡ  ಮೆಟ್ರೋ ಮ್ಯಾನ್ ಶ್ರೀಧರನ್

    ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೆಟ್ರೋಮ್ಯಾನ್ ಇ. ಶ್ರೀಧರನ್ ಅವರು ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಮಾತನ್ನು ಈಡೇರಿಸುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪಾಲಿಕೆಯ ವಾರ್ಡ್ 3ರಲ್ಲಿನ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಕೆಲವರಿಗೆ ಬಾಕಿ ಇರುವ ಬಿಲ್ ಮೊತ್ತ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳ ಗುಂಪೊಂದು ಶ್ರೀಧರನ್ ಅವರ ಬಳಿ ಹೇಳಿಕೊಂಡಿತ್ತು. ಆಗ ವಿದ್ಯುತ್ ಸಂಪರ್ಕ ಮರುಕಲ್ಪಿಸುವ ಭರವಸೆ ನೀಡಿದ್ದರು.

    ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಾಲಕ್ಕಾಡ್ ಪಾಲಿಕೆ ವ್ಯಾಪ್ತಿಯ ಮದುರವೀರನ್ ಕಾಲೋನಿಯ ಜನತೆಗೆ, ನಾನು ಗೆಲ್ಲಲಿ, ಅಥವಾ ಸೋಲಲಿ ಇಲ್ಲಿನ ಎಲ್ಲ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಸಿಗಲಿದೆ ಎಂಬ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಮಡೆದುಕೊಂಡಿದ್ದಾರೆ.

    ಚುನಾವಣೆಯಲ್ಲಿ ಸೋತ ಬಳಿಕವೂ ತಮ್ಮ ಆಶ್ವಾಸನೆ ಮರೆಯದ ಶ್ರೀಧರನ್, ಕಲ್ಪತ್ತಿಯ ಕೆಎಸ್‍ಇಬಿ ಸಹಾಯಕ ಎಂಜಿನಿಯರ್ ಹೆಸರಿಗೆ ಮಂಗಳವಾರ 81,525 ರೂಪಾಯಿಯ ಚೆಕ್ ರವಾನಿಸಿದ್ದಾರೆ. ಜತೆಗೆ, 11 ಎಸ್‍ಸಿ ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹ ವ್ಯವಸ್ಥೆ ಮಾಡಲಾಗಿದೆ.

  • ಹಳ್ಳಿ ಹಳ್ಳಿಗೆ ಜಿಲ್ಲಾಧಿಕಾರಿ- ಗ್ರಾಮೀಣ ಜನರಲ್ಲಿ ಧೈರ್ಯ ತುಂಬಿದ ಉಡುಪಿ ಡಿಸಿ

    ಹಳ್ಳಿ ಹಳ್ಳಿಗೆ ಜಿಲ್ಲಾಧಿಕಾರಿ- ಗ್ರಾಮೀಣ ಜನರಲ್ಲಿ ಧೈರ್ಯ ತುಂಬಿದ ಉಡುಪಿ ಡಿಸಿ

    ಉಡುಪಿ: ಜಿಲ್ಲೆಯ ಹಳ್ಳಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಹಳ್ಳಿ ಜನರ ಕಡೆ ಗಮನ ಕೊಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಹಗದೀಶ್ ವಿಲೇಜ್ ಟೂರ್ ಮಾಡಿದ್ದಾರೆ.

    ಜಿಲ್ಲೆಯ ಕೋವಿಡ್ ಪೀಡಿತ ಹಳ್ಳಿಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರೆಗೆ ತೆರಳಿ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳ ಜೊತೆ ಸಮಾಲೋಚನೆ ಮಾಡಿದ್ದಾರೆ.

    ಜಡಿಮಳೆಯಲ್ಲೂ ಜಿಲ್ಲಾಧಿಕಾರಿ ಹಳ್ಳಿ ಸಂಚಾರ ಮಾಡಿ ಜನಜಾಗೃತಿ ಜೊತೆ ಸೋಂಕಿತರ ಮನೆಗೆ ತೆರಳಿ ಧೈರ್ಯ ತುಂಬುತ್ತಿದ್ದಾರೆ. ಅಗತ್ಯವಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದಾರೆ. ಹೆಬ್ರಿ ತಾಲೂಕು ಮುದ್ರಾಡಿಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿದ್ದು, ಹಳ್ಳಿಗಳಿಂದ ತಾಲೂಕಿಗೆ ಚಿಕಿತ್ಸೆಗೆ ಬರುವವರಿಗೆ ವಾಹನ ವ್ಯವಸ್ಥೆಗೂ ಜಿಲ್ಲಾಡಳಿತ ಚಿಂತನೆ ಮಾಡಿದೆ. ಶಾಸಕರ ಅನುದಾನ ಬಳಸಿಕೊಂಡು 5 ಸಾವಿರ ಆಕ್ಸಿ ಮೀಟರ್ ಗಳನ್ನು ವಿತರಿಸುವ ಯೋಜನೆ ಹೊಂದಿದ್ದಾರೆ.

    ಈ ಕುರಿತು ಮಾತನಾಡಿದ ಉಡುಪಿ ಡಿಸಿ ಜಿ.ಜಗದೀಶ್, ಕೇಂದ್ರ ಸರ್ಕಾರದಿಂದ ಬಂದಿರುವ ಆದೇಶದ ಪ್ರಕಾರ ಹಳ್ಳಿಗಳನ್ನು ಕೊರೊನಾ ಮುಕ್ತ ಮಾಡಬೇಕು. ಗ್ರಾಮಾಂತರ ಪ್ರದೇಶದ ಜನರ ಜೊತೆ ಜಿಲ್ಲಾಡಳಿತ ಸದಾ ಇರುತ್ತದೆ. ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದರೆ ಕೇರ್ ಸೆಂಟರ್, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಗೆ ಬನ್ನಿ. ಸಾಂಕ್ರಾಮಿಕ ರೋಗ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂದರು.

  • ಚಿಕ್ಕಮಗಳೂರಿನ ಒಂದೇ ಗ್ರಾಮದ 128 ಜನರಿಗೆ ಕೊರೊನಾ

    ಚಿಕ್ಕಮಗಳೂರಿನ ಒಂದೇ ಗ್ರಾಮದ 128 ಜನರಿಗೆ ಕೊರೊನಾ

    ಚಿಕ್ಕಮಗಳೂರು: ಒಂದೇ ಗ್ರಾಮದ 128 ಜನರಿಗೆ ಕೊರೊನಾ ಪಾಸಿಟಿವ್ ಬಂದ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಿರಾನಗರ (ಎನ್.ಎಂ.ಡಿ.ಸಿ.) ಗ್ರಾಮದಲ್ಲಿ ನಡೆದಿದೆ.

    ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಇಂದಿರಾನಗರ ಗ್ರಾಮದ 60 ಸಂಜೀವ ಎಂಬುವರು ಮೇ 12ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮೇ 14 ರಂದು ಸಾವನ್ನಪ್ಪಿದ್ದರು. ಆಸ್ಪತ್ರೆಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

    ನಾನ್ ಕೋವಿಡ್ ಡೆತ್ ಎಂದು ಮೃತನ ಅಂತ್ಯಕ್ರಿಯೆಯಲ್ಲಿ ಊರಿನ ಹಲವು ಜನ ಪಾಲ್ಗೊಂಡಿದ್ದರು. ಮೃತ ಸಂಜೀವ್ ಮರಣದ ನಂತರ ಅವರ ಅಂತ್ಯಸಂಸ್ಕಾರ ಮಾಡಿ ಜನ ಮನೆಗೆ ಬರುತ್ತಿದ್ದಂತೆ ಮೃತನ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿದ್ದು ಊರಿನ ಜನಕ್ಕೆ ಬರಸಿಡಿಲು ಬಡಿದಂತಾಗಿತ್ತು. ವರದಿ ನೋಡಿ ಜನ ಕೂಡ ಕಂಗಾಲಾಗಿದ್ದರು. ಮರು ದಿನ ಗ್ರಾಮದ ಸುಮಾರು 220ಕ್ಕೂ ಅಧಿಕ ಜನ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವರದಿ ಬಂದಿದ್ದು, 128 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ಇದೇ ಗ್ರಾಮದ ಮತ್ತೆ ಹಲವರ ವರದಿಯೂ ಬರಬೇಕಿದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಇದೇ ಗ್ರಾಮದ ಅಕ್ಕಪಕ್ಕದಲ್ಲಿ ಹತ್ತಾರು ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳಿವೆ. ಅಲ್ಲಿಗೆ ಹಲವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರಿಂದಲೂ ಸೋಂಕು ಬಂದಿರಬಹುದು ಎಂದು ಹಳ್ಳಿಯ ಜನ ಅಂದಾಜಿಸಿದ್ದಾರೆ.

    ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಪಡಿತರ ಹಂಚಲಾಗಿದೆ. ಜನ ಮತ್ತಷ್ಟು ಸೌಲಭ್ಯಗಳಿಗೆ ಬೇಡಿಕೆ ಇಟ್ಟಿದ್ದಾರೆ. ತಾಲೂಕು ಆಡಳಿತ ಎಲ್ಲಾ ಸೌಲಭ್ಯ ಕಲ್ಪಿಸುತ್ತೇವೆ. ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದೆ.

  • ಸೂಪರ್ ಸಿನಿಮಾದಂತೆ ಹಳ್ಳಿಯನ್ನು ಕ್ಲೀನ್ ಮಾಡಿಕೊಂಡ ಜನ

    ಸೂಪರ್ ಸಿನಿಮಾದಂತೆ ಹಳ್ಳಿಯನ್ನು ಕ್ಲೀನ್ ಮಾಡಿಕೊಂಡ ಜನ

    ಬೆಂಗಳೂರು: ನನ್ನ ಮನೆ, ನನ್ನ ಬಟ್ಟೆ, ನಮ್ಮವರು, ನಾನು, ನನ್ನದು ಎಂದು ಬದುಕುವ ಜನ ಸ್ವಾರ್ಥಿಗಳಾಗೋಗ್ತಾರೆ. ಈ ಸ್ವಾರ್ಥದಿಂದ ಲಾಭವೂ ಆಗುತ್ತೆ ಅನ್ನೋ ಒಂದು ಕಾನ್ಸೆಪಟ್ಟ್ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾದಲ್ಲಿ ತೋರಿಸಿದಂತೆ ಹಳ್ಳಿಯ ಜನರು ತಮ್ಮ ಹಳ್ಳಿಯನ್ನು ತಾವೇ ಸ್ವಚ್ಚ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದ ಜನರು ತಮ್ಮ ಮನೆಯ ಸುತ್ತ ಮುತ್ತ ತಾವೇ ಸ್ವಚ್ಚ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನು ಸೂಪರ್ ಸ್ಟಾರ್ ಉಪೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಮ್ಮ ಮನೆ, ನಮ್ಮ ಸ್ವಚ್ಚತೆ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಪ್ರಜಾಕೀಯ ಕಾರ್ಯಕರ್ತರೊಬ್ಬರು ಈ ಅಭಿಯಾನ ಏರ್ಪಡಿಸಿದ್ದಾರೆ. ಅದರಂತೆ, ಗ್ರಾಮದ ಜನರೆಲ್ಲರು ಈ ಕೆಲಸದಲ್ಲಿ ಪಾಲ್ಗೋಂಡು ಸ್ವಚ್ಚ ಮಾಡಿದ್ದಾರೆ. ತಮ್ಮ ಮನೆ, ಗ್ರಾಮ, ಆವರಣ, ಮೋರಿಗಳನ್ನು ತಾವೇ ಸ್ವಚ್ಚಗೊಳಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ನಗರ ಆಯ್ತು – ಈಗ ಗ್ರಾಮೀಣ ಭಾಗದಲ್ಲೂ ಕೊರೊನಾ ಸ್ಫೋಟ

    ನಗರ ಆಯ್ತು – ಈಗ ಗ್ರಾಮೀಣ ಭಾಗದಲ್ಲೂ ಕೊರೊನಾ ಸ್ಫೋಟ

    ಬೆಂಗಳೂರು: ನಗರ ಪ್ರದೇಶಗಳಲ್ಲಿ ಸ್ಫೋಟಗೊಳ್ಳುತ್ತಿರುವ ಕೊರೊನಾ ಈಗ ಗ್ರಾಮೀಣ ಭಾಗದಲ್ಲೂ ಸ್ಫೋಟಗೊಳ್ಳಲು ಆರಂಭವಾಗಿದೆ.

    ಜನತಾ ಲಾಕ್‍ಡೌನ್ ಘೋಷಣೆ ಬೆನ್ನಲ್ಲೇ ಜನರು ಬೆಂಗಳೂರು ಸಹವಾಸ ಬೇಡ ಅಂತ ತಮ್ಮ ಊರುಗಳತ್ತ ದಾಂಗುಡಿ ಇಟ್ಟಿದ್ದರು. ಕೋವಿಡ್ ಟೆಸ್ಟ್ ಬಗ್ಗೆ ತಲೆಯೂ ಕೆಡಿಸಿಕೊಳ್ಳದೇ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಳ್ಳಿಗಳಿಗೆ ದೌಡಾಯಿಸಿದ್ರು. ಆದ್ರೀಗ ಬೆಂಗಳೂರಿನಿಂದ ಹೋದವರೇ ತಮ್ಮ ಹಳ್ಳಿಗಳಿಗೇ ಕೊರೋನಾ ಕಂಟಕವಾಗೋ ಆತಂಕ ಮನೆ ಮಾಡಿದೆ.

    ಚಿಂತಾಮಣಿಯ ಕುರಟಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಉಸಿರಾಟದ ಸಮಸ್ಯೆ ಉಂಟಾಗಿ ನಡುಬೀದಿಯಲ್ಲಿ ಕುಸಿದುಬಿದ್ದ ಮಹಿಳೆಯ ನೆರವಿಗೆ ಸೋಂಕು ಭೀತಿಯ ಕಾರಣ ಗ್ರಾಮಸ್ಥರು ಯಾರು  ಬರದ ಕಾರಣ ನರಳಿ ನರಳಿ ಸಾವನ್ನಪ್ಪಿದ್ದಾರೆ. ಕೊನೆಗೆ ಜೆಸಿಬಿ ಮೂಲಕ ಆ ಮಹಿಳೆಯ ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅದೇ ಜೆಸಿಬಿಯಲ್ಲಿ ಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದ್ದಾರೆ. ಮಗಳೀಗ ಅನಾಥಳಾಗಿದ್ದಾಳೆ.

    ಬೀದರ್ ಜಿಲ್ಲೆಯ ಗಡವಂತಿ ಗ್ರಾಮದಲ್ಲಿ ಒಂದೇ ದಿನ 18 ಜನರಲ್ಲಿ ಸೋಂಕು ಕಂಡುಬಂದಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರಿನಲ್ಲಿ 52ಕ್ಕೂ ಅಧಿಕ ಪಾಸಿಟಿವ್ ಕೇಸ್ ಕಂಡುಬಂದಿವೆ. ತಮಿಳುನಾಡಿಂದ ಚೋರನೂರಿಗೆ ಬೇಕರಿಯಲ್ಲಿ ಕೆಲಸ ಮಾಡಲು ಬಂದಿದ್ದ ಕಾರ್ಮಿಕನಿಂದ ಸೋಂಕು ಹಬ್ಬಿದೆ ಎಂದು ಹೇಳಲಾಗಿದೆ.

    ಬೆಂಗಳೂರಿಂದ ಹಳ್ಳಿಗಳಿಗೆ ವಾಪಸ್ ಆದವರೆಷ್ಟು, ಎಷ್ಟು ಜನಕ್ಕೆ ಸೋಂಕು ತಗುಲಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಸರ್ವೇ ನಡೆಸಿದ್ದು, ಅದರ ಅಂಕಿ ಅಂಶ ಇಂತಿದೆ.

    ಗ್ರಾಮೀಣ ಭಾಗಕ್ಕೆ ಕೊರೋನಾ `ವಲಸೆ’.
    * ಬೆಂಗಳೂರಿನಿಂದ ಊರಿಗೆ ಹೋದವ ಸಂಖ್ಯೆ – 1,13,928
    * ಇದುವರೆಗೆ ಪತ್ತೆಯಾದ ಸೋಂಕಿತರ ಸಂಖ್ಯೆ – 25,222
    * ಕೊರೋನಾ ಸೋಂಕು ಸ್ಫೋಟ ಇನ್ನಷ್ಟು ಹೆಚ್ಚುವ ಸಾಧ್ಯತೆ

  • ಹೊರ ಜಿಲ್ಲೆಯಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ – ಇಲ್ದೇ ಇದ್ರೆ ಗ್ರಾಮಕ್ಕಿಲ್ಲ ಪ್ರವೇಶ

    ಹೊರ ಜಿಲ್ಲೆಯಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ – ಇಲ್ದೇ ಇದ್ರೆ ಗ್ರಾಮಕ್ಕಿಲ್ಲ ಪ್ರವೇಶ

    – 7 ದಿನ ಮನೆಯಿಂದ ಹೊರ ಬರುವಂತಿಲ್ಲ

    ಧಾರವಾಡ: ಕೊರೊನಾ ಎರಡನೇ ಅಲೆ ಜೋರಾಗಿ ಹಬ್ಬುತ್ತಿದ್ದಂತೆ ಜಿಲ್ಲೆಯ ಜನ ತಾವಾಗಿಯೇ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಸಹಿತ ಹೊರ ಜಿಲ್ಲೆಯಿಂದ ಆಗಮಿಸುವವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಂದರೆ ಮಾತ್ರ ಹಳ್ಳಿಗಳಿಗೆ ಪ್ರವೇಶ. ಇಲ್ಲದೆ ಇದ್ದರೆ ಹಳ್ಳಿ ಪ್ರವೇಶಕ್ಕೆ ಅನುಮತಿ ನೀಡದೇ ಇರಲು ನಿರ್ಧರಿಸಿದ್ದಾರೆ.

    ಕಳೆದ ವರ್ಷ ಕೊರೊನಾ ಮೊದಲ ಅಲೆ ಬಂದಾಗ ಲಾಕ್‍ಡೌನ್ ಆಗುತ್ತಿದ್ದಂತೆ ಹಳ್ಳಿ ಹಳ್ಳಿಗಳನ್ನೆಲ್ಲಾ ಲಾಕ್ ಮಾಡಲಾಗಿತ್ತು. ಆದರೆ ಎರಡನೇ ಅಲೆ ಜೋರಾಗಿದ್ದರೂ ಬಹುತೇಕ ಹಳ್ಳಿಗಳು ಇನ್ನೂ ಲಾಕ್ ಆಗಿಲ್ಲ. ಆದರೆ ಈ ಬಾರಿ ಸರ್ಕಾರ ಲಾಕ್‍ಡೌನ್ ಮಾಡಿದರು ಕೂಡ ಕೆಲವು ಕ್ರಮಗಳು ಸಡಿಲಿಕೆಯಲ್ಲಿದೆ. ಹಾಗಾಗಿ ಹಳ್ಳಿಗರು ಸಹ ಉದಾಸೀನ ವಹಿಸೋಕೆ ಆರಂಭ ಮಾಡಿ ಬಿಟ್ಟಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಹಳ್ಳಿ ಹಳ್ಳಿಯಲ್ಲೂ ಜನ ಕೊರೊನಾ ನಿಯಂತ್ರಣಕ್ಕೆ ತಮಗೆ ತಾವೇ ಟಫ್ ರೂಲ್ಸ್‍ಗಳನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ.

    ಧಾರವಾಡ ಸಮೀಪದ ಹೆಬ್ಬಳ್ಳಿ ಗ್ರಾಮ ಸುಮಾರು 18 ಸಾವಿರ ಜನಸಂಖ್ಯೆವುಳ್ಳ ದೊಡ್ಡ ಗ್ರಾಮವಾಗಿದ್ದು, ಹೆಬ್ಬಳ್ಳಿಯಲ್ಲಿ ಈಗಾಗಲೇ 8 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹೀಗಾಗಿ ಇದು ಬೆಳೆಯಬಾರದು. ಈ ಚೈನ್ ಲಿಂಕ್ ಕಟ್ ಮಾಡಬೇಕು ಎಂದುಕೊಂಡು ಹೆಬ್ಬಳ್ಳಿ ಗ್ರಾಮ ಪಂಚಾಯತ್‍ನವರು ಮತ್ತು ಸಾರ್ವಜನಿಕರು ಟಫ್ ರೂಲ್ಸ್ ಹಾಕಿಕೊಂಡಿದ್ದಾರೆ.

    ಈ ಪ್ರಕಾರ ಬೆಂಗಳೂರಿನಿಂದ ಬರುವವರಿಗೆ ನೇರವಾಗಿ ಗ್ರಾಮಕ್ಕೆ ಪ್ರವೇಶ ಇಲ್ಲ. ಊರಿಗೆ ಬರುವುದಾದರೆ ಮೊದಲು ಆಸ್ಪತ್ರೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಬೇಕು. ನೆಗಟಿವ್ ಬಂದರೆ ಮಾತ್ರ ಊರೊಳಗೆ ಬರಬೇಕು ಎನ್ನುವ ರೂಲ್ಸ್ ಮಾಡಿದ್ದಾರೆ. ಅದಲ್ಲದೆ ಬೇರೆ ಯಾವುದೇ ಊರಿನಿಂದ ಬಂದರೂ ಏಳು ದಿನ ಮನೆಬಿಟ್ಟು ಹೊರಗೆ ಬರದೇ ಕ್ವಾರಂಟೈನ್ ಆಗಬೇಕು ಎಂದು ಎಲ್ಲರಿಗೂ ತಿಳಿ ಹೇಳಿದ್ದಾರೆ.

  • ಗ್ರಾಮಕ್ಕೆ ಹೊರಗಿನವರಿಗೆ ನೋ ಎಂಟ್ರಿ – ಸೆಲ್ಫ್ ಲಾಕ್ ಮಾಡಿಕೊಂಡ ಗ್ರಾಮಸ್ಥರು

    ಗ್ರಾಮಕ್ಕೆ ಹೊರಗಿನವರಿಗೆ ನೋ ಎಂಟ್ರಿ – ಸೆಲ್ಫ್ ಲಾಕ್ ಮಾಡಿಕೊಂಡ ಗ್ರಾಮಸ್ಥರು

    ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ಸ್ವಯಂ ನಿರ್ಬಂಧ ಹೇರಿಕೊಳ್ಳಲು ಜಿಲ್ಲೆಯ ಕೊಳ್ಳೇಗಾಲ ತಾಲೂಕು ಸತ್ತೆಗಾಲ ಗ್ರಾಮಸ್ಥರು ಮುಂದಾಗಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕಟ್ಟಿ ಹಾಕಲು ಸಭೆ ನಡೆಸಿದ ಡಾ.ಬಿ.ಆರ್ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ತುರ್ತು ಸಂದರ್ಭ ಹೊರತಾಗಿ ಗ್ರಾಮದಿಂದ ಯಾರೂ ಹೊರ ಹೋಗುವಂತಿಲ್ಲ ಹಾಗೆಯೇ ಹೊರಗಿನಿಂದಲು ಗ್ರಾಮಕ್ಕೆ ಯಾರು ಬರುವಂತಿಲ್ಲ ಎಂದು ತೀರ್ಮಾನ ಕೈಗೊಂಡಿದ್ದಾರೆ.

    ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ಇರುವರು ಸದ್ಯಕ್ಕೆ ಗ್ರಾಮಕ್ಕೆ ಬರಬಾರದು ಎಂದು ಸೂಚನೆ ನೀಡಿದ್ದು, ಸಾಲ ವಸೂಲಾತಿಗೆ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಕೊರೊನಾ ಕಡಿಮೆ ಆಗುವವರೆಗು ಬರಬಾರದು. ಬಡಾವಣೆಯ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡರೆ ತಕ್ಷಣ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಎಲ್ಲಿಯು ಗುಂಪು ಸೇರದೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ನ್ಯಾಯಪಂಚಾಯ್ತಿ ಸಭೆ ನಡೆಸಿ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದು ಈ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಿ, ಧ್ವನಿವರ್ಧಕ ಮೂಲಕವೂ ತಿಳಿಸಿದ್ದಾರೆ.

  • ಕೊರೊನಾಗೆ ಸೆಲ್ಫ್ ಲಾಕ್‍ಡೌನ್ ಹೇರಿಕೊಂಡ ಗ್ರಾಮಸ್ಥರು

    ಕೊರೊನಾಗೆ ಸೆಲ್ಫ್ ಲಾಕ್‍ಡೌನ್ ಹೇರಿಕೊಂಡ ಗ್ರಾಮಸ್ಥರು

    ಬೀದರ್: ಕೊರೊನಾ ಎರಡನೇಯ ಅಲೆಯ ಅಬ್ಬರಕ್ಕೆ ಗಡಿ ಜಿಲ್ಲೆ ಬೀದರ್ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದು,ಪ್ರತಿದಿನ 400 ಪಾಸಿಟಿವ್ ಕೇಸ್‍ಗಳು ಪತ್ತೆಯಾಗುತ್ತಿವೆ. ಕೊರೊನಾಗೆ ಭಯಗೊಂಡ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಹೇರಿಕೊಂಡಿದ್ದಾರೆ.

    ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಸೇರಿಕೊಂಡು ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕಲು ಈ ನಿರ್ಧಾರ ಮಾಡಿದ್ದಾರೆ. ಗ್ರಾಮದಲ್ಲಿ ತಮಟೆ ಬಾರಿಸುವ ಮುಖಾಂತರ ಗ್ರಾಮಸ್ಥರು ಸೆಲ್ಫ್ ಲಾಕ್ ಡೌನ್ ಹೇರಿಕೊಂಡಿದ್ದಾರೆ. ಬೆಳಗ್ಗೆ ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ಓಪನ್ ಮಾಡಲು ನಿರ್ಧಾರ ಮಾಡಿದ್ದಾರೆ. ಯಾರು ಮಾಸ್ಕ್ ಇಲ್ಲದೆ ಓಡುವಂತಿಲ್ಲ ಎಂದು ಕೊವೀಡ್ ನಿಯಮಗಳನ್ನು ಪಾಲಿಸುವಂತೆ ಕೂಡಾ ತಮಟೆ ಬಾರಿಸುವ ಮೂಲಕ ತಿಳಿಸಿದ್ದಾರೆ.

    ಒಂದೇ ವಾರದಲ್ಲಿ 7ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದ್ದು, ಓರ್ವ ಕೊರೊನಾಗೆ ಬಲಿಯಾಗಿದ್ದಾನೆ. ಹೀಗಾಗಿ ಭಯಗೊಂಡ ಬೀದರ್ ತಾಲೂಕಿನ ಬಾವಗಿ ಗ್ರಾಮಸ್ಥರು ಸೆಲ್ಫ್ ಲಾಕ್ ಡೌನ್ ಹೇರಿಕೊಂಡಿದ್ದಾರೆ. ಗ್ರಾಮದಲ್ಲಿ ಕೊರೊನಾ ಪತ್ತೆಯಾಗುತ್ತಿರುವ ಕಾರಣ ಭಯಗೊಂಡು ಸೆಲ್ಫ್ ಲಾಕ್ ಡೌನ್ ನಿರ್ಧಾರ ಮಾಡಿದ್ದೇವೆ ಎಂದು ಬಾವಗಿ ಗ್ರಾಮಸ್ಥರು ಹೇಳಿದ್ದಾರೆ.

  • ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಮಡಿಕೇರಿ: ಪುಂಡಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ 6 ಸಾಕಾನೆಗಳನ್ನು ಬಳಸಿ ಯಶಸ್ವಿಯಾಗಿ ಕಾಡಾನೆಯನ್ನು ಸೆರೆಹಿಡಿದಿದ್ದಾರೆ.

    ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಗೋಣಿಕೋಪ್ಪ ಸಮೀಪದ ಕಳತ್ಮಾಡು ಹಾಗೂ ಅಮ್ಮತ್ತಿ ಸುತ್ತಮುತ್ತ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಕಾಡಾನೆಯ ಉಪಟಳಕ್ಕೆ ಬೇಸತ್ತಿದ್ದ ಜನರು ಆನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

    ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ 40ಕ್ಕೂ ಅಧಿಕ ಸಿಬ್ಬಂದಿ ಭಾಗಿಯಾಗಿದ್ದು, 6 ಸಾಕಾನೆಗಳ ಬಳಸಿಕೊಂಡು ಕಳತ್ಮಾಡುವಿನ ಕಾಫಿ ತೋಟದಲ್ಲಿ ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶ್ರಮ ಪಟ್ಟು ಕೊನೆಗೂ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

    ಪಶುವೈದ್ಯ ಡಾ.ಮುಜೀಬ್ ಮಾರ್ಗದರ್ಶನದಲ್ಲಿ ಹಾಗೂ ಮಡಿಕೇರಿ, ವಿರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದೆ. ಮತ್ತಿಗೋಡು ಅನೆ ಶಿಬಿರದಿಂದ ಸಾಕಾನೆ ಅಭಿಮನ್ಯು ನೇತ್ರತ್ವದಲ್ಲಿ , ಹರ್ಷ, ಅಜಯ, ಧನಂಜಯ, ವಿಕ್ರಮ, ಸಾಕಾನೆಗಳು, ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಶ್ರಮಪಟ್ಟಿವೆ.

  • ನಮ್ಮ ಹಳ್ಳಿಗೆ ಬಾರ್ ಬೇಡ – ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

    ನಮ್ಮ ಹಳ್ಳಿಗೆ ಬಾರ್ ಬೇಡ – ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

    ಚಿಕ್ಕಮಗಳೂರು: ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ನಮ್ಮ ಹಳ್ಳಿಗೆ ಬಾರ್ ಬೇಡ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    ಉದ್ದೇಬೋರನಹಳ್ಳಿ ಸುತ್ತಮುತ್ತಲಿನ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಿಗೆ ಉದ್ದೇಬೋರನಹಳ್ಳಿಯೇ ಕೇಂದ್ರ ಸ್ಥಳವಾಗಿದೆ. ಅಂಚೆ ಕಛೇರಿ, ಬ್ಯಾಂಕ್, ಆಸ್ಪತ್ರೆ, ನ್ಯಾಯಬೆಲೆ, ಪಶು ವೈದ್ಯಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿದಿನ ನೂರಾರು ಜನ, ಮಹಿಳೆಯರು, ವಿದ್ಯಾರ್ಥಿಗಳು ಶಾಲಾ-ಕಾಲೇಜು, ವ್ಯವಹಾರಕ್ಕೆ ಉದ್ದೇಬೋರನಹಳ್ಳಿಗೆ ಆಗಮಿಸುತ್ತಾರೆ. ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದರಿಂದ ನಾನಾ ರೀತಿ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಮದ್ಯದ ಅಂಗಡಿಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

    ಸದ್ಯಕ್ಕೆ ಗ್ರಾಮದಲ್ಲಿ ನೆಮ್ಮದಿ ಇದೆ. ಬಾರ್ ಓಪನ್ ಆಗುವುದರಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳಿಯರು ಗ್ರಾಮದ ನಿವೇಶನದಲ್ಲಿ ಗ್ರಾಮ ಪಂಚಾಯಿತಿಯಿಂದ ಅನುಮತಿಯನ್ನೂ ಪಡೆಯದೇ ಶೆಡ್ ನಿರ್ಮಿಸುತ್ತಿದ್ದಾರೆ. ಇದು ಮದ್ಯದ ಅಂಗಡಿ ತೆರೆಯಲು ಎಂದು ತಿಳಿದು ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಈ ಹಿಂದೆ ಕೂಡ ಗ್ರಾಮದಲ್ಲಿ ಮದ್ಯದ ಅಂಗಡಿ ಇತ್ತು. ಸ್ಥಳಿಯರು ಹೋರಾಟ ಮಾಡಿ ಬೇರೆಡೆಗೆ ಸ್ಥಳಾಂತರಿಸಿದ್ದರು. ಈಗ ಮತ್ತೆ ಬಾರ್ ಪ್ರಾರಂಭಿಸಲು ಹೊರಟಿರುವುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಬಾರ್ ಅಥವಾ ಯಾವುದೇ ರೀತಿಯ ಮದ್ಯದಂಗಡಿ ಪ್ರಾರಂಭಿಸಿದರೆ ಸ್ತ್ರೀ ಶಕ್ತಿ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ.