Tag: village

  • ಕೊರೊನಾ ಓಡಿಸಲು ಅಜ್ಜಿಹಬ್ಬ ಆಚರಿಸಿದ ಗ್ರಾಮಸ್ಥರು

    ಕೊರೊನಾ ಓಡಿಸಲು ಅಜ್ಜಿಹಬ್ಬ ಆಚರಿಸಿದ ಗ್ರಾಮಸ್ಥರು

    ಚಿತ್ರದುರ್ಗ: ಕೊರೊನಾ ಎರಡನೇ ಅಲೆ ರಣಕೇಕೆ ಹಾಕುತ್ತಿದೆ.ಮಕ್ಕಳು ಮರಿ ಎನ್ನದೇ ಎಲ್ಲರನ್ನು ಬಲಿ ಪಡೆಯುತ್ತಿದೆ.ಹೀಗಾಗಿ ಆತಂಕಗೊಂಡಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮಸ್ಥರು ಕೊರೊನಾ ತೊಲಗಲಿ ಎಂದು ಅಜ್ಜಿಹಬ್ಬ ಆಚರಣೆ ಮಾಡಿದ್ದಾರೆ.

    ಪಟ್ರೆಹಳ್ಳಿ ಗ್ರಾಮದ ಗ್ರಾಮದೇವತೆ ಕರೇಕಲ್ ಮಾರಮ್ಮಗೆ ಸಾಂಪ್ರದಾಯಿಕವಾಗಿ ಎಡೆ ನೀಡಿ,ಪೂಜಾಕೈಂಕಾರ್ಯ ನೆರವೇರಿಸಿದ್ದಾರೆ.ಪೂರ್ವಜರಕಾಲದಿಂದಲೂ ಗ್ರಾಮಕ್ಕೆ ಯಾವುದೇ ಸಾಂಕ್ರಾಮಿಕ ರೋಗಗಳು,ಸಮಸ್ಯೆಗಳು ಎದುರಾದಾಗ ಗ್ರಾಮದಲ್ಲಿ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕೊರೊನಾ ತೊಲಗಲಿ, ಲೋಕಕಲ್ಯಾಣವಾಗಲಿ ಅಂತ ಆಚರಿಸಲಾಯಿತು.

    ಈ ಅಜ್ಜಿಹಬ್ಬವನ್ನು ಆಚರಿಸಲು ಮನಯನ್ನೆಲ್ಲ ಶುದ್ಧಿಗೊಳಿಸಿ, ಮಡಿಯಿಂದ ದೇವತೆಗೆ ಹೋಳಿಗೆ ಸೇರಿದಂತೆ ವಿವಿಧ ಸಿಹಿ ಖಾದ್ಯಗಳನ್ನು ಎಡೆಯಾಗಿ ಸಿದ್ದಪಡಿಸಲಾಗುತ್ತದೆ. ಒಂದು ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪನ್ನು ಇಟ್ಟು ಹೊಸ ಮರ, ಬಳೆ ಪೂಜಾಸಾಮಗ್ರಿಗಳೊಂದಿಗೆ ಕರೇಕಲ್ ಮಾರಮ್ಮದೇವಿಯ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಹೊರವಲಯದಲ್ಲಿರುವ ಬೇವಿನ ಮರದ ಕೆಳಗೆ ಎಡೆಯನ್ನುಇಟ್ಟು ಪೂಜಿಸಿದರೆ ಗ್ರಾಮಕ್ಕೆ ಎದುರಾಗಿರುವ ಸಂಕಷ್ಟ ಬಗೆಹರೆಯುವುದೆಂಬ ನಂಬಿಕೆ ಇಲ್ಲಿದೆ. ಹೀಗಾಗಿ ಕಳೆದ ಮೂರು ವರ್ಷಗಳ ಹಿಂದೆ ಆಚರಿಸಲಾಗಿದ್ದ ಅಜ್ಜಿ ಹಬ್ಬ ಮತ್ತೆ ಕೊರೊನಾ ಓಡಿಸಲು ಗ್ರಾಮದಲ್ಲಿ ಶಾಂತಿ ನೆಲೆಸಲು ಆಚರಿಲಾಯಿತು.

  • ಆರು ಕುರಿ ಬಲಿ- ಲಾಕ್‍ಡೌನ್‍ನಲ್ಲೂ ನಿಲ್ಲದ ಧಾರ್ಮಿಕ ಆಚರಣೆಗಳು

    ಆರು ಕುರಿ ಬಲಿ- ಲಾಕ್‍ಡೌನ್‍ನಲ್ಲೂ ನಿಲ್ಲದ ಧಾರ್ಮಿಕ ಆಚರಣೆಗಳು

    ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಿಮಿತವಾಗಿದೆ, ಜನ ತಲೆಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ದೇವರಿಗೆ ಹರಕೆ ತೀರಿಸಲು ನಗರದ ತಹಶೀಲ್ದಾರ್ ಕಚೇರಿ ಮುಂದೆಯೇ ಕುರಿಬಲಿ ಕೊಟ್ಟಿದ್ದಾರೆ.

    ಬೆಳಗಿನ ಜಾವ ಡೊಳ್ಳು, ನಗಾರಿ ಸಹಿತ ಮೆರವಣಿಗೆ ಬಂದು ಆರು ಕುರಿಗಳನ್ನ ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಲಾಕ್‍ಡೌನ್ ವೇಳೆ ಧಾರ್ಮಿಕ ಆಚರಣೆಗಳಿಗೆ ನಿಷೇಧವಿದ್ದರೂ ನಿಷೇಧಿತ ಮೂಢನಂಬಿಕೆ ಆಚರಣೆಗಳಿಗೆ ಜನ ಮುಂದಾಗಿದ್ದಾರೆ. ತಹಶಿಲ್ದಾರ್ ಕಚೇರಿ ಮುಂದೆ 6 ಕಡೆಗಳಲ್ಲಿ ರಕ್ತದ ಗುರುತುಗಳು ಇದ್ದು. ಬೇವಿನ ಸೊಪ್ಪು, ಕುಂಕುಮ, ಬಲಿ ಪೂಜೆ ಮಾಡಿರುವ ಎಲ್ಲಾ ಗುರುತುಗಳಿವೆ.

    ಹಕರೆ ತೀರಿಸಲು ನಡು ರಸ್ತೆಯಲ್ಲಿ ಕುರಿಬಲಿ ನೀಡಿರುವ ಭಕ್ತರು ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ. ಈಗ ಮದುವೆ ಮುಹೂರ್ತಗಳು ಹೆಚ್ಚಾಗಿರುವುದರಿಂದ ಮದುವೆ ನಿಶ್ಚಯವಾದವರು, ಮದುವೆಯಾದವರು ಮಾರೆಮ್ಮ, ಜಮಲಮ್ಮದೇವಿಗೆ ಹರಕೆ ತೀರಿಸಲು ಕುರಿ ಬಲಿ ನೀಡುತ್ತಾರೆ. ಪ್ರಾಣಿಗಳ ಬಲಿ ನಿಷೇಧವಿದ್ದರೂ ರಾಯಚೂರಿನಲ್ಲಿ ಮಾತ್ರ ಪದ್ದತಿ ಮುಂದುವರೆದಿದೆ.

  • ಕೊರೊನಾದಿಂದ ವ್ಯಕ್ತಿ ಸಾವು- ಊರೊಳಗೆ ಶವ ತರಲು ಸ್ಥಳೀಯರ ವಿರೋಧ

    ಕೊರೊನಾದಿಂದ ವ್ಯಕ್ತಿ ಸಾವು- ಊರೊಳಗೆ ಶವ ತರಲು ಸ್ಥಳೀಯರ ವಿರೋಧ

    ಗದಗ: ಕೊರೊನಾ ಶಂಕೆ ಇರುವ ಮೃತ ವ್ಯಕ್ತಿಯ ಶವ ಊರೊಳಗೆ ತರದಂತೆ ಸ್ಥಳೀಯರು ತಾಕೀತು ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಬಾಸಲಾಪೂರದಲ್ಲಿ ನಡೆದಿದೆ.

    ಗ್ರಾಮದ 62 ವರ್ಷದ ನಿವೃತ ಪೊಲೀಸ್ ಸಿಬ್ಬಂದಿಯೋರ್ವ ಬಾದಾಮಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಆದ್ರೆ ಕೊರೊನಾ ರಿಪೋರ್ಟ್ ಬರುವುದು ತಡವಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್‍ನ ಯಾವುದೇ ನಿಯಮ ಪಾಲಿಸದೆ, ಶವ ಹಸ್ತಾಂತರಿಸಿದ್ದಾರೆ. ಶವವನ್ನು ಹಾಸಿಗೆ ಹಾಗೂ ಹೊದಿಕೆಯಲ್ಲಿ ಸುತ್ತಿ ಹಾಗೇ ಕೊಟ್ಟಿದ್ದಾರೆ.

    ಖಾಸಗಿ ಆಸ್ಪತ್ರೆಯ ಎಡವಟ್ಟು ನಿಂದ ಕುಟುಂಬಸ್ಥರು ಶವ ಊರಲ್ಲಿರುವ ಮನೆ ಬಳಿ ತರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಅಂತ್ಯ ಸಂಸ್ಕಾರಕ್ಕೆಂದು ಬಂದ ಕುಟುಂಬಸ್ಥರಿಗೆ ಗ್ರಾಮಸ್ಥರು ಗ್ರಾಮದೊಳಗೆ ಬಿಡುತ್ತಿಲ್ಲ. ಅಂಬುಲೆನ್ಸ್‌ನಲ್ಲಿ ಬಂದ ಶವ ಊರಾಚೆ ಗಂಟೆಗಟ್ಟಲೆ ಕಾದಿದ್ದಾರೆ.

    ರಸ್ತೆಯಲ್ಲಿಯೇ ಶವದ ಜೊತೆಗೆ ಕುಟುಂಬಸ್ಥರು ಕಣ್ಣೀರು ಹಾಕುವಂತಾಯಿತು. ಇಂದಲ್ಲಾ ನಾಳೆ ರಿಪೋರ್ಟ್ ಬರಬಹುದು. ಆದರೆ ಕೊರೊನಾ ಎಲ್ಲಾ ಲಕ್ಷಣಗಳು ಇರುವುದರಿಂದ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಬಿಡೋದಿಲ್ಲ ಎಂದು ಸ್ಥಳಿಯರು ಪಟ್ಟು ಹಿಡಿದಿದ್ದಾರೆ. ನಂತರ ಸ್ಥಳಕ್ಕೆ ಪಿಡಿಓ, ಆರ್.ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಸ್ಥಿತಿ ತಿಳಿಗೊಳಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಊರಾಚೆ ಅವರ ಜಮೀನಿನಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದಾರೆ.

  • ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಹಲ್ಲೆ

    ಭೋಪಾಲ್: ಕೊರೊನಾ ರೋಗಕ್ಕೆ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ಆರೋಗ್ಯ ಸಿಬ್ಬಂದಿಗೆ   ಗ್ರಾಮಸ್ಥರು ಥಳಿಸಿರುವ ಘಟನೆ ಮಧ್ಯಪ್ರದೇಶದ ಒಂದು ಹಳ್ಳಿಯೊಂದರಲ್ಲಿ ನಡೆದಿದೆ.

    ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಸಿಬ್ಬಂದಿಗಳ ತಂಡವು ಮಹಿಳಾ ತಹಶೀಲ್ದಾರ್ ನೇತೃತ್ವದಲ್ಲಿ ಮಧ್ಯಪ್ರದೇಶದ ಉಜ್ಜೈನ್ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಪರ್ಡಿ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ತಮ್ಮ ಹಳ್ಳಿಗೆ ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

    ಈ ಮೊದಲು ಕೂಡ ಆರೋಗ್ಯ ಸಿಬ್ಬಂದಿ ಈ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಆದರೆ ಆಗಲೂ ಸಹ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿರಲಿಲ್ಲ. ಮತ್ತೆ ತಂಡವು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ, ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಹೇಳಲು ಮುಂದಾಗಿದ್ದರು. ಈ ವೇಳೆ, ಕೆಲವು ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ತಂಡದ ಓರ್ವ ವ್ಯಕ್ತಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಒಳಗಾದ ಮೊಹಮ್ಮದ್ ಖುರೇಷಿ ಅದೇ ಗ್ರಾಮ ಪಂಚಾಯತಿಯ ಮಹಿಳಾ ಪದಾಧಿಕಾರಿಯ ಪತಿ ಎಂದು ತಿಳಿದು ಬಂದಿದ್ದು, ಆತ ಕೂಡ ಆರೋಗ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಮಹಿಳಾ ತಹಶೀಲ್ದಾರ್, ಎನ್‍ಎಂ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಪಟ್ವಾಡಿಗಳು ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹಾಗೂ ಗೊಂದಲಗಳನ್ನು ನಿವಾರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಪ್ರೇರೇಪಿಸಲು ಮುಂದಾಗಿದ್ದರು. ಈ ಕುರಿತಾಗಿ ತಹಶೀಲ್ದಾರ್ ಹಾಗೂ ಆರೋಗ್ಯ ಸಿಬ್ಬಂದಿ ಗ್ರಾಮಸ್ಥರ ಜೊತೆ ಮಾತನಾಡುತ್ತಿರುವಾಗ, 50 ಮಂದಿಯನ್ನೊಳಗೊಂಡ ಒಂದು ಗುಂಪು   ನಮ್ಮ ಮೇಲೆ ಮೇಲೆ ದಾಳಿ ಮಾಡಿದರು ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

    ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರೆ, ಗ್ರಾಮಸ್ಥರು ನಮ್ಮ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ತಹಶೀಲ್ದಾರ್ ಹಾಗೂ ತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾದರು. ಆದರೆ ಈ ದಾಳಿಯಲ್ಲಿ ನನ್ನ ತಲೆಗೆ ಪೆಟ್ಟಾಗಿದೆ ಎಂದು ಗಾಯಗೊಂಡ ವ್ಯಕ್ತಿ ಶಕೀಲ್ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಎಸ್‍ಪಿ ಆಕಾಶ್ ಭೂರಿಯಾ ಹೇಳಿದರು.

  • ಲಸಿಕೆ ಪಡೆಯಲು ಭಯಪಟ್ಟು ನದಿಗೆ ಹಾರಿದ ಗ್ರಾಮಸ್ಥರು

    ಲಸಿಕೆ ಪಡೆಯಲು ಭಯಪಟ್ಟು ನದಿಗೆ ಹಾರಿದ ಗ್ರಾಮಸ್ಥರು

    ಲಕ್ನೋ: ಕೊರೊನಾ ಲಸಿಕೆ ಕುರಿತಾಗಿ ತಪ್ಪು ಕಲ್ಪನೆ, ಭಯ ಹೊಂದಿರುವ ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು, ಆರೋಗ್ಯ ಸಿಬ್ಬಂದಿಯ ಕೈಗೆ ಸಿಗದಂತೆ ತಮ್ಮ ಮನೆಗಳಿಂದ ಓಡಿಹೋಗಿ ನದಿಗೆ ಹಾರಿರುವುದು ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮದಲ್ಲಿ ನಡೆದಿದೆ.

     

    ಸಾರ್ವಜನಿಕರಿಗೆ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಈ ವೇಳೆ ಅಧಿಕಾರಿಗಳನ್ನು ಕಂಡ ಕೆಲವುಗ್ರಾಮಸ್ಥರು ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ತಮ್ಮ ಮನೆಗಳಿಂದ ನದಿಯ ಕಡೆಗೆ ಓಡಿಹೋಗಿದ್ದಾರೆ. ಬಳಿಕ ಇವರನ್ನು ಆರೋಗ್ಯ ಅಧಿಕಾರಿಗಳು ಹಿಂಬಾಲಿಸಿದ್ದಾರೆ. 200ಕ್ಕೂ ಹೆಚ್ಚು ಜನರು ಆರೋಗ್ಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಳ್ಳಲು ನದಿ ಕಡೆಗೆ ಓಡಿದ್ದಾರೆ. ಸಿಬ್ಬಂದಿ ಹಿಂಬಾಲಿಸಿ ಬಂದಿದ್ರಿಂದ ಅವರಲ್ಲಿ ಕೆಲವು ನೀರಿಗೆ ಹಾರಿದ್ದಾರೆ.

    ಆರೋಗ್ಯಾಧಿಕಾರಿಗಳು ಎಷ್ಟೇ ಮನವಿ ಮಾಡಿಕೊಂಡರು ಸಹ ಗ್ರಾಮಸ್ಥರು ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನದಿಯಿಂದ ಹೊರಬನ್ನಿ ಎಂದು ಮನವಿ ಮಾಡಿದ್ದಾರೆ. ಇನ್ನು ಬಲವಂತ ಮಾಡಿ ಮುಂದೆ ಹೋದರೆ ಜನರು ನೀರಿನಲ್ಲಿ ಮುಳಗಬಹುದು ಎಂದು ಭಯದಿಂದ ಅಧಿಕಾರಿಗಳು ವಾಪಾಸ್ಸಾಗಿದ್ದಾರೆ. ಒಟ್ಟು 1500 ನಿವಾಸಿಗಳಿರುವ ಈ ಗ್ರಾಮದಲ್ಲಿ ಈವರೆಗೆ ಅಧಿಕಾರಿಗಳು ಕೇವಲ 14 ಮಂದಿಗೆ ಲಸಿಕೆ ಹಾಕಲು ಸಾಧ್ಯವಾಗಿಲ್ಲ.

     

    ಜನರಲ್ಲಿ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ. ಈ ಕುರಿತಾಗಿ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದು ಬಾರಾಬಂಕಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಬೆಂಗಳೂರು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಎಸ್.ಟಿ.ಸೋಮಶೇಖರ್ ಪತ್ರ ಬರೆದಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಕನಿಷ್ಟ 5 ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

    ಈ ಹಿಂದೆ ಸಹ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಸರ್ಕಾರಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪದವಿ ಪಡೆಯುವವರಿಗೆ ಇಂಟರ್ನ್‍ಶಿಪ್ ಅಥವಾ ಇಂತಿಷ್ಟು ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಹಲವರು ಧ್ವನಿ ಎತ್ತಿದ್ದರು. ಇದಕ್ಕೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದರು. ಇದೀಗ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿಎಂಗೆ ಪತ್ರ ಬರೆಯುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಹಾಗೇ ರಾಜ್ಯ ಸರ್ಕಾರ ಸಹ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ರಂಗವೂ ಹೊರತಾಗಿಲ್ಲ. ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಅಗಾಧವಾಗಿ ಖರ್ಚು ಮಾಡುತ್ತಾ ಬಂದಿದೆ. ಸರ್ಕಾರಿ ಕೋಟಾದಲ್ಲಿ ಓದುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ ವಿದ್ಯಾಭ್ಯಾಸ ಅವಧಿಯನ್ನು ಮುಗಿಸುವ ಹೊತ್ತಿಗೆ ಸರ್ಕಾರದಿಂದ 40 ರಿಂದ 50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ವೆಚ್ಚ ಮಾಡಿದರೂ ನಮ್ಮ ಪ್ರತಿಭೆಗಳು ನಮಗೆ ದಕ್ಕುತ್ತಿಲ್ಲ. ಕೆಲವು ವೈದ್ಯರು ನಮ್ಮ ಸೌಲಭ್ಯವನ್ನು ಪಡೆದು, ಕಲಿತು ವಿದೇಶಗಳಿಗೆ ಹೋಗಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ತಮ್ಮ ಕಾಲಾವಧಿಯಲ್ಲಿ ಇಂಥದ್ದೊಂದು ಪ್ರಕ್ರಿಯೆಗೆ ಕಡಿವಾಣ ಬೀಳಬೇಕಿದೆ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಪ್ರತಿಭಾ ಪಲಾಯನ ನಿಲ್ಲುವಂತಾಗಬೇಕು.

    ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ಮೂಲಕ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಹ ನುರಿತ ತಜ್ಞ ವೈದ್ಯರ ಸೇವೆ ಲಭಿಸಬೇಕು. ಇಂದು ಹಳ್ಳಿ ಎಂದರೆ ಮೂಗು ಮುರಿಯುವ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಹಳ್ಳಿ ಸಶಕ್ತವಾಗಿದ್ದರೆ, ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವ ಮನೋಭಾವಕ್ಕೆ ನಾವು ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ.

    ಹೀಗಾಗಿ ನಮ್ಮ ರಾಜ್ಯದ ಸಕಲ ಸೌಕರ್ಯವನ್ನು ಪಡೆದು ವೈದ್ಯರಾಗಿ ಹೊರ ಬರುವ ಪ್ರತಿಯೊಬ್ಬರೂ ಸಹ ರಾಜ್ಯದಲ್ಲಿ 5 ವರ್ಷ ಕಡ್ಡಾಯವಾಗಿ ವೃತ್ತಿಯನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನೊಂದನ್ನು ತಾವು ರೂಪಿಸಬೇಕು. ಈಗಾಗಲೇ ಹೀಗೆ ಸೇವೆ ಮಾಡುವ ವೈದ್ಯರಿಗೆ ಅತಿ ಹೆಚ್ಚಿನ ವೇತನವನ್ನು ನೀಡುತ್ತೇವೆ. ಸೌಲಭ್ಯಗಳನ್ನು ಕೊಡುತ್ತೇವೆಂದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಕಲ್ಪಿಸಿಕೊಡುವ ಮೂಲಕ ಹಳ್ಳಿಗಳಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಬೇಕಿದೆ. ಈ ಮೂಲಕ ನಮ್ಮ ರಾಜ್ಯದ ಹಣವನ್ನು ಬಳಸಿ ವೈದ್ಯರಾದವರ ಸೇವೆಯನ್ನು ನಮ್ಮ ರಾಜ್ಯದ ನಾಗರಿಕರಿಗೇ ಲಭಿಸುವಂತಾಗಬೇಕು.

    ಈಗ ಕೊರೊನಾ ಸಂಕಷ್ಟ ಕಾಲವಾಗಿರುವುದರಿಂದ ಇಂಥದ್ದೊಂದು ನಿಲುವಿನ ಅಗತ್ಯವಿದೆ. ಜೊತೆಗೆ ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರಲ್ಲೂ ಇಂತಹ ಮನೋಭಾವ ಬರಬೇಕಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ಸಿಗಬೇಕೆಂದರೆ ಕಠಿಣವಾದ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸದನದಲ್ಲಿ ಮಂಡಿಸಿ ಜಾರಿಗೊಳಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಮೂಲಕ ಪ್ರತಿಭಾ ಪಲಾಯನಕ್ಕೆ ತಡೆ ಹಾಕಬೇಕಿದೆ.

    ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕಟ್ಟುನಿಟ್ಟಿನ ನೀತಿಯನ್ನು ಸರ್ಕಾರದಿಂದ ರಚಿಸಬೇಕಿದ್ದು, ವೈದ್ಯಕೀಯ ಶಿಕ್ಷಣ ಓದಿಗೆ ಅವರು ಮುಂದಾಗುವಾಗಲೇ ಸರ್ಕಾರಿ ಕೋಟಾದ ಲಾಭ ಪಡೆಯಬೇಕೆಂದಿದ್ದರೆ, ಅವರ ಮೆರಿಟ್ ಆಧಾರದ ಜೊತೆಗೆ ರಾಜ್ಯದಲ್ಲಿ 5 ವರ್ಷ ಸೇವೆ ಸಲ್ಲಿಸುತ್ತೇವೆಂಬ ಕರಾರಿಗೆ ಮೊದಲೇ ಸಹಿ ಹಾಕಿಸಿಕೊಳ್ಳುವಂತಹ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಪರಿಹಾರ ದೊರಕಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ.

  • ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಕೊರೊನಾ ಭೀತಿ – ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು

    ಚಿತ್ರದುರ್ಗ: ಕೊರೊನಾ ಸೋಂಕಿನ ಭೀತಿಯಿಂದಾಗಿ ಬೆಚ್ಚಿರುವ ಜಿಲ್ಲೆಯ ಗ್ರಾಮಸ್ಥರು ಗ್ರಾಮದ ಸುತ್ತಲೂ ತೆಂಗಿನಕಾಯಿ ಕಟ್ಟಿ ಮೌಢ್ಯದ ಮೊರೆ ಹೋಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಮನ್ನೇಕೋಟೆ ಗ್ರಾಮದಲ್ಲಿ ಕೊರೊನಾ ಸೋಂಕಿನಿಂದಾಗಿ 25 ದಿನಗಳ ಅಂತರದಲ್ಲಿ 15 ಜನರ ಸರಣಿ ಸಾವಾಗಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಗ್ರಾಮಸ್ಥರು, ಈ ಗ್ರಾಮದ ನಾಲ್ಕು ದಿಕ್ಕಿಗೂ ಮಂತ್ರಿಸಿದ ತೆಂಗಿನಕಾಯಿ ಕಟ್ಟಿ ದಿಗ್ಬಂಧನ ಹಾಕಿದ್ದಾರೆ.

    ಈ ಮೂಲಕ ಕೊರೊನಾ ಗ್ರಾಮದೊಳಗೆ ಬರುವುದಿಲ್ಲ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಸುಮಾರು ಎರಡು ಸಾವಿರ ಜನಸಂಖ್ಯೆಯುಳ್ಳ ಅತಿದೊಡ್ಡ ಗ್ರಾಮವಾಗಿರುವ ಮನ್ನೇಕೋಟೆಯಲ್ಲಿ, ಕಳೆದ ಒಂದು ತಿಂಗಳಿಂದ 450ಕ್ಕೂ ಹೆಚ್ಚು ಜನರು ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ.

    ಗ್ರಾಮದಲ್ಲಿ 5 ಮಂದಿ ಕೋವಿಡ್‍ಗೆ ಬಲಿಯಾಗಿದ್ದು, ಉಳಿದ 10 ಮಂದಿ ಇನ್ನಿತರೆ ರೋಗಗಳಿಗೆ ತುತ್ತಾಗಿದ್ದಾರೆ. ಆದರೆ ಸೌಜನ್ಯಕ್ಕೂ ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಮೌಢ್ಯದ ಮೊರೆ ಹೋಗಿದ್ದಾರೆ. ಕೊರೊನಾ ನಿಯಮ ಪಾಲಿಸದೇ ಮೂಢನಂಬಿಕೆ ಮೊರೆಹೋದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸದ ಜಿಲ್ಲಾಡಳಿತದ ವಿರುದ್ಧ ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊರೊನಾದಿಂದ ಗ್ರಾಮ ಸೀಲ್‍ಡೌನ್- ಬೆಳೆದ ಬೆಳೆ ಮಣ್ಣು ಪಾಲು

    ಕೊರೊನಾದಿಂದ ಗ್ರಾಮ ಸೀಲ್‍ಡೌನ್- ಬೆಳೆದ ಬೆಳೆ ಮಣ್ಣು ಪಾಲು

    ಮಂಡ್ಯ: ಕೊರೊನಾದಿಂದ ಇಡೀ ಗ್ರಾಮ ಸೀಲ್‍ಡೌನ್ ಆಗಿರುವ ಕಾರಣ ರೈತರು ಬೆಳೆದ ಸುನಾಮಿ ಸೌತೆಕಾಯಿ ಮಣ್ಣು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ಜರುಗಿದೆ.

    ಕ್ಯಾತನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಇದೇ ಗ್ರಾಮ ರೈತ ಕುಮಾರ್ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸುನಾಮಿ ಸೌತೆಕಾಯಿಯನ್ನು ಬೆಳೆದಿದ್ದರು. ಇದೀಗೆ ಸಮೃದ್ಧಿಯಾಗಿ ಬಂದಿರುವ ಬೆಳೆಯನ್ನು ಕಟಾವು ಮಾಡಿಸಲಾಗದೇ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗುತ್ತಿದೆ.

    ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ಕುಮಾರ್ ಇದೀಗ ಕೊರೊನಾದ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಾವು ಹಾಕಿದ ಬಂಡವಾಳವು ಕೈ ಸೇರಲಿಲ್ಲ ಎಂದು ನಿರಾಸೆ ಅನುಭವಿಸುತ್ತಿದ್ದಾರೆ. ಸರ್ಕಾರ ನನ್ನ ನೆರವಿಗೆ ಬರಬೇಕೆಂದು ಕುಮಾರ್ ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಖಾಸಗಿ ವೈದ್ಯರು ಗ್ರಾಮ ದತ್ತು ಸ್ವೀಕರಿಸಿ, ಕೊರೊನಾ ನಿಯಂತ್ರಿಸಬಹುದು- ದಾವಣಗೆರೆ ಡಿಸಿ ಮನವಿ

    ಖಾಸಗಿ ವೈದ್ಯರು ಗ್ರಾಮ ದತ್ತು ಸ್ವೀಕರಿಸಿ, ಕೊರೊನಾ ನಿಯಂತ್ರಿಸಬಹುದು- ದಾವಣಗೆರೆ ಡಿಸಿ ಮನವಿ

    ದಾವಣಗೆರೆ: ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಅತಿ ವೇಗವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಸಗಿ ವೈದ್ಯರು ಗ್ರಾಮ ದತ್ತು ಪಡೆಯಬೇಕು. ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗಪತ್ತೆ, ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿನ 2ನೇ ಅಲೆ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅನೇಕರು ನಮ್ಮ ಕಣ್ಣಮುಂದೆಯೇ ಮರೆಯಾಗುತ್ತಿದ್ದಾರೆ. ಸದ್ದಿಲ್ಲದೆ ಸೋಂಕು, ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೆ ಬಹಳಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ದಾವಣಗೆರೆಯ ಶೇ.70ರಷ್ಟು ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ, ಜಾಗೃತಿ ಹಾಗೂ ಚಿಕಿತ್ಸೆ ಸಿಗದೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ವೈದ್ಯರು ಒಂದೊಂದು ಗ್ರಾಮವನ್ನು ದತ್ತು ಪಡೆದು ಚಿಕಿತ್ಸೆ ನೀಡಬೇಕು ಎಂದರು.

    ಈ ಹಿಂದೆ ಸಂಭವಿಸಿದ ಲಾತೂರ್ ಭೂಕಂಪ, ಕಂಡು ಕೇಳರಿಯದ ಪ್ರವಾಹ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಸಂದರ್ಭಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರ ತಂಡ, ದುರಂತ ಸ್ಥಳಗಳಿಗೆ ತೆರಳಿ, ಜನರ ಪ್ರಾಣ ರಕ್ಷಣೆ ಮಾಡಿದ ನಿದರ್ಶನವಿದೆ. ಹೀಗಾಗಿ ಜಿಲ್ಲೆಯ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದೆ, ಜಿಲ್ಲೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ತಿಳಿಸಿದರು.

    ಲಾಕ್‍ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ರೋಗದ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶೇ.70ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಹೀಗಾಗಿ ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

    ಗ್ರಾಮಗಳು ಉಳಿದರೆ, ಇಡೀ ದೇಶ ಉಳಿದಂತೆ. ಯಾವುದೇ ಗ್ರಾಮದಲ್ಲಿ 15 ರಿಂದ 20 ಜನರಲ್ಲಿ ಸೋಂಕು ಇರುವುದು ದೃಢಪಟ್ಟಲ್ಲಿ ಆಯಾ ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಅದ್ದರಿಂದ ಖಾಸಗಿ ವೈದ್ಯರು ಕನಿಷ್ಟ 2 ತಿಂಗಳು ಗ್ರಾಮಗಳ ದತ್ತು ಸ್ವೀಕರಿಸಬೇಕು. ಖಾಸಗಿ ಹಾಗೂ ಸರ್ಕಾರಿ ವೈದ್ಯರನ್ನು ಒಳಗೊಂಡ ನಿಯೋಜಿತ ತಂಡಗಳು ದತ್ತು ಸ್ವೀಕೃತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಮನವಿ ಮಾಡಿದರು.

  • ರಾಜ್ಯಮಟ್ಟದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಳ್ಳಿಗರಿಂದ ಕ್ಲಾಸ್

    ರಾಜ್ಯಮಟ್ಟದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಳ್ಳಿಗರಿಂದ ಕ್ಲಾಸ್

    – ಈಗ ಸರ್ಕಾರಿ ಕಾರಲ್ಲಿ ಬಂದಿದ್ದು ಯಾಕೆ? ತನಿಖೆಗೆ ಎಂಎಲ್‍ಸಿ ಒತ್ತಾಯ

    ಚಿಕ್ಕಮಗಳೂರು: ಪಾರ್ಟಿ ಮಾಡಲು ಕಾಡಿಗೆ ಹೋಗುತ್ತಿದ್ದಾರೆ ಎಂದು ತಿಳಿದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ವಾಹನಗಳನ್ನು ಸ್ಥಳಿಯರೇ ಅಡ್ಡ ಹಾಕಿ ತರಾಟೆಗೆ ತೆಗೆದುಕೊಂಡು ವಾಪಸ್ ಕಳಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ನಡೆದಿದೆ.

    ಮೇ 20ರ ಗುರುವಾರ ಅರಣ್ಯ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಎಂಟತ್ತು ಕಾರುಗಳಲ್ಲಿ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಸ್ಥಳಿಯರೇ ಅಡ್ಡ ಹಾಕಿ ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ. ಅವರೆಲ್ಲಾ ಅರಣ್ಯದಲ್ಲಿ ಪಾರ್ಟಿ ಮಾಡಲು ಹೋಗುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಹಳ್ಳಿಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾದ್ಯಂತ ಲಾಕ್‍ಡೌನ್ ಇದ್ದು, 144 ಸೆಕ್ಷನ್ ಕೂಡ ಜಾರಿಯಲ್ಲಿದೆ. ಆದರೆ, ಬೇರೆಯವರಿಗೆ ಬುದ್ಧಿವಾದ ಹೇಳಬೇಕಾದ ನೀವೇ ಹೀಗೆ ಮಾಡಿದರೆ ಹೇಗೆಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿ  ಎಲ್ಲ ಕಾರುಗಳನ್ನು ವಾಪಸ್ ಕಳಿಸಿದ್ದಾರೆ.

    ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕೂಡ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಎಸ್ಪಿ-ಡಿಸಿ ಗಮನಕ್ಕೆ ತಂದಿದ್ದೇನೆ. ರಾಜ್ಯ ಮಟ್ಟದ ಅಧಿಕಾರಿಗಳು, ಫಾರೆಸ್ಟ್, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೆಮ್ಮಣ್ಣುಗುಂಡಿ ಬಳಿ ಪಾರ್ಟಿ ಮಾಡಲು ಬಂದಿದ್ದಾರೆ. ಇಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಯಾವ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಬಂದಿದ್ದರು. ಎಲ್ಲರೂ ರಾಜ್ಯ ಮಟ್ಟದವರೇ. ಎಲ್ಲಾ ಗಾಡಿಗಳು ರಾಜ್ಯ ಮಟ್ಟದ್ದೇ. ಸರ್ಕಾರಿ ಕಾರು ಉಪಯೋಗಿಸಿಕೊಂಡು ಮೋಜು-ಮಸ್ತಿಗೆ ಬಂದಿದ್ದಾರೆ. ಆ ಪಂಚಾಯಿತಿಯವರು ಅವರಿಗೆ ಪ್ರಶ್ನೆ ಮಾಡಿದ್ದಾರೆ.   ಯಾವ ಕಾರಣಕ್ಕೆ ಬಂದಿದ್ದೇವೆ ಎಂದು ಜನರ ಮುಂದೆ ಅಧಿಕಾರಿಗಳು ಹೇಳಬೇಕು ಎಂದು ಆಗ್ರಹಿಸಿದ್ದಾರೆ.

    ಅಧಿಕಾರಿಗಳು ಕಾರಣ ಕೊಡುವುದನ್ನು ಬಿಟ್ಟು ಸ್ಥಳಿಯರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಮುಂದಾಗುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಅವರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಮೋಜು-ಮಸ್ತಿಗೆ ಏಕೆ ಬಂದಿದ್ದರು? ಯಾವ ಉದ್ದೇಶಕ್ಕೆ ಬಂದಿದ್ದರು ಎಂಬುದು ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.

    ಶಾಂತವೇರಿ ಬಳಿ ಹುಲಿ ಸಾವನ್ನಪ್ಪಿತ್ತು. ಅದರ ಪರಿಶೀಲನೆಗೆ ಹೋಗುತ್ತಿದ್ದರು ಎಂಬ ಮಾತುಗಳೂ ಅಧಿಕಾರಿಗಳ ವಲಯದಲ್ಲೇ ಕೇಳಿ ಬರುತ್ತಿದೆ. ಜೊತೆಗೆ, ಕೆಮ್ಮಣ್ಣುಗುಂಡಿಯಲ್ಲಿ ಇರುವ ಪ್ರವಾಸೋದ್ಯಮ ಇಲಾಖೆ ಸೇರಿದ ಅತಿಥಿ ಗೃಹಗಳನ್ನ ಫಾರೆಸ್ಟ್ ಇಲಾಖೆಗೆ ನೀಡಲು ಸರ್ಕಾರ ಚಿಂತಿಸುತ್ತಿದ್ದು ಅದರ ಪರಿವೀಕ್ಷಣೆಗೂ ಬಂದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದು ಎಷ್ಟರ ಮಟ್ಟಿಗಿನ ಸತ್ಯ-ಸುಳ್ಳು ಎಂಬುದನ್ನು ಅರಣ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ. ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವಾಗ ಈ ಗ್ರಾಮಕ್ಕೆ ಬೆಂಗಳೂರಿನಿಂದ ಬರುವ ಅಗತ್ಯ ಏನಿತ್ತು ಎನ್ನುವುದು ಗ್ರಾಮಸ್ಥರ ಪ್ರಶ್ನೆ.