Tag: village

  • ಮೈಸೂರಿನಲ್ಲಿ ಕಾಣಿಸಿಕೊಂಡ ಬಿಳಿ ಕಾಗೆ – ಗ್ರಾಮಸ್ಥರಲ್ಲಿ ಆತಂಕ

    ಮೈಸೂರಿನಲ್ಲಿ ಕಾಣಿಸಿಕೊಂಡ ಬಿಳಿ ಕಾಗೆ – ಗ್ರಾಮಸ್ಥರಲ್ಲಿ ಆತಂಕ

    ಮೈಸೂರು: ಸಾಮಾನ್ಯವಾಗಿ ಕಾಗೆ ಎಂದ ತಕ್ಷಣ ನೆನಪಾಗುವುದು ಕಪ್ಪು ಬಣ್ಣ. ಆದ್ರೆ ಜಿಲ್ಲೆಯಲ್ಲಿ ಬಿಳಿ ಬಣ್ಣದ ಕಾಗೆ ಕಾಣಿಸಿಕೊಂಡಿದ್ದು ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಕೆಆರ್ ನಗರ ತಾಲೂಕು ಭೇರ್ಯ ಗ್ರಾಮದಲ್ಲಿ ಬಿಳಿ ಕಾಗೆ ಕಾಣಿಸಿಕೊಂಡಿದ್ದು, ಬೇರೆ ಸಾಮಾನ್ಯ ಕಾಗೆಗಳ ಗುಂಪಿನ ಜೊತೆಯಲ್ಲೇ ಹಾರಾಟ ನಡೆಸುತ್ತಿದೆ. ದಿನನಿತ್ಯ ಗ್ರಾಮದ ದಿನಸಿ ಅಂಗಡಿ ಬಳಿ ಕಾಣಿಸಿಕೊಳ್ಳುವ ಈ ಬಿಳಿ ಕಾಗೆ ಕುರಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಕಾಗೆಯ ಮೈಬಣ್ಣ ಬಿಳಿಯಾಗಿದ್ದರೆ, ಕತ್ತಿನ ಮೇಲ್ಭಾಗ ಮಾತ್ರ ಕಪ್ಪಿಗಿದೆ. ಜೀನ್ ವ್ಯತ್ಯಾಸದಿಂದ ಕಾಗೆ ಬಿಳಿ ಬಣ್ಣಕ್ಕೆ ತಿರುಗಿರೋ ಸಾಧ್ಯತೆ ಇದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಎನ್ನುವುದು ಕೆಲ ಪಕ್ಷಿ ತಜ್ಞರ ಅಭಿಪ್ರಾಯವಾಗಿದೆ.

    ಈ ಹಿಂದೆಯೂ ಸಹ ಮೈಸೂರಿನ ಕೆಆರ್ ಆಸ್ಪತ್ರೆ ಬಳಿ ಕಪ್ಪು ಹಾಗೂ ಬಿಳಿ ಬಣ್ಣದಿಂದ ಕೂಡಿದ್ದ ಕಾಗೆ ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿತ್ತು.

  • ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆಯಲಿದೆ ರೇವಾ ವಿಶ್ವವಿದ್ಯಾಲಯ

    ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆಯಲಿದೆ ರೇವಾ ವಿಶ್ವವಿದ್ಯಾಲಯ

    ಬೆಂಗಳೂರು: ವಿಶ್ವ ಪರಿಸರ ದಿನಾಚಾರಣೆಯ ಅಂಗವಾಗಿ ರೇವಾ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ತನ್ನ ವ್ಯಾಪ್ತಿಯಲ್ಲಿ ಬರುವ ಶೆಟ್ಟಿಗೆರೆ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲು ರೇವಾ ವಿವಿ ಮುಂದಾಗಿದೆ.

    ಈ ಕಾರ್ಯಕ್ರಮದಲ್ಲಿ ರೇವಾ ವಿವಿಯ ಕುಲಾಧಿಪತಿ ಡಾ. ಪಿ. ಶ್ಯಾಮರಾಜು, ಕುಲಪತಿ ಡಾ.ಎಸ್. ವೈ ಕುಲಕರ್ಣಿ, ಶೆಟ್ಟಿಗರೆ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಲಿದ್ದಾರೆ.

    ಮಾದರಿ ಗ್ರಾಮವನ್ನಾಗಿ ಹೇಗೆ ಮಾಡಲಾಗುತ್ತೆ?
    ಆರ್ಥಿಕ ಅಭಿವೃದ್ಧಿಗೋಸ್ಕರ ಕೌಶಲ್ಯ ತರಬೇತಿ, ಸಂಚಾರಿ ಆರೋಗ್ಯ ಘಟಕ, ಐಸಿಟಿ ಸೌಲಭ್ಯಗಳೊಂದಿಗೆ ಶಾಲೆ/ಉನ್ನತ ಶಿಕ್ಷಣವನ್ನು ಮೇಲ್ದರ್ಜೆಗೇರಿಸುವುದು, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಘನ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಬೀದಿ ದೀಪಗಳು, ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ, ಡಿಜಿಟಲ್ ಸಾಕ್ಷರತೆ, ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣ, ಅಪೌಷ್ಟಿಕತೆ ರಹಿತ ಗ್ರಾಮ, ಮಾಲಿನ್ಯ ಮುಕ್ತ ಗ್ರಾಮ, ಪರಿಸರ ಸಂರಕ್ಷಣೆ:ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗದವರಿಗೆ ಉತ್ತೇಜನ ಮತ್ತು ಮಾಹಿತಿ.

  • 22 ವರ್ಷಗಳ ಬಳಿಕ ಗ್ರಾಮದಲ್ಲಿ ಮದುವೆ ಸಂಭ್ರಮ!

    22 ವರ್ಷಗಳ ಬಳಿಕ ಗ್ರಾಮದಲ್ಲಿ ಮದುವೆ ಸಂಭ್ರಮ!

    ಜೈಪುರ: ಅಘೋಷಿತ ಶಾಪಕ್ಕೆ ಗುರಿಯಾಗಿದ್ದ ರಾಜಸ್ಥಾನದ ದೋಲ್‍ಪುರ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮದುವೆಯ ಸಂಭ್ರಮ ಮನೆ ಮಾಡಿದೆ.

    1996 ರಲ್ಲಿ ಈ ಗ್ರಾಮದಲ್ಲಿ ಮದುವೆಯ ಕಾರ್ಯಕ್ರಮ ನಡೆದಿತ್ತು. ಮತ್ತೆ 22 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಯಾವುದೇ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಈ ಹಳ್ಳಿಗೆ ವಿದ್ಯುತ್, ರಸ್ತೆ, ನೀರು ಕೂಡ ಇಲ್ಲ. ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಇಲ್ಲಿನ ಯುವಕರಿಗೆ ಹೆಣ್ಣು ನೀಡಲು ಯಾರು ಮುಂದೇ ಬರುತ್ತಿರಲಿಲ್ಲ. ಅದ್ದರಿಂದ ಇಲ್ಲಿನ ಯುವಕರು ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಗ್ರಾಮದ ಪವನ್ ಎಂಬ ಯುವಕನಿಗೆ ಮದುವೆ ನಿಶ್ಚಾಯವಾಗಿದ್ದು, ಹಳ್ಳಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.

    ಈ ಗ್ರಾಮದಲ್ಲಿ 40 ಕಚ್ಚಾ ಮನೆಗಳಿದ್ದು, 300 ಜನ ವಾಸಿಸುತ್ತಿದ್ದಾರೆ. ಗ್ರಾಮಸ್ಥರನ್ನು ಬಡತನ ಕಾಡುತ್ತಿದೆ. ಸರ್ಕಾರದ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಕ್ಕೆ ಒಂದು ಶಾಲೆ ಹಾಗೂ ನೀರಿನ ಕೈ ಪಂಪ್ ನೀಡಿದೆ. ಹಳ್ಳಿಯಲ್ಲಿರುವ 125 ಮಹಿಳೆಯಲ್ಲಿ ಕೇವಲ ಇಬ್ಬರು ಮಾತ್ರ ತಮ್ಮ ಹೆಸರನ್ನು ಬರೆಯುತ್ತಾರೆ. ಅಲ್ಲದೆ ಇದುವರೆಗೂ ಹಳ್ಳಿಯ ಯಾವುದೇ ಮಹಿಳೆಯರು ಟಿವಿಯನ್ನು ನೋಡಿಲ್ಲ.

  • ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ನಡೆಸಲು ತೆರಳಿದ್ದ ಶಾಸಕರ ಪುತ್ರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡರ ಪುತ್ರಿ ಐಶ್ವರ್ಯ ತಮ್ಮ ತಂದೆಯ ಪರ ಮತಯಾಚನೆ ಮಾಡಲು ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಗೊಲ್ಲಳ್ಳಿ ಗ್ರಾಮಸ್ಥರು ಶಾಸಕರು ತಮ್ಮ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಅಭಿವೃದ್ಧಿ ಮಾಡದಿದ್ದರೂ ಮತ ಕೇಳಲು ಮಾತ್ರ ಬರುತ್ತೀರಿ ಎಂದು ಆರೋಪಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಐಶ್ವರ್ಯ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆಗೆ ಸಮಾಜಾಯಿಸಿ ನೀಡಲು ಯತ್ನಿಸಿದ್ದಾರೆ. ಆದರೆ ಬಳಿಕ ಗ್ರಾಮಸ್ಥರ ಅಸಮಾಧಾವನ್ನು ಶಮನಗೊಳಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿದ್ದಾರೆ.

    https://www.youtube.com/watch?v=9lt3Z0DUPx8

  • ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು

    ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು

    ಕಲಬುರುಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡುವುದು ಸಾಮಾನ್ಯ, ಆದರೆ ಜಿಲ್ಲೆಯ ತರಕಸಪೇಟ ಗ್ರಾಮದ ದರ್ಗಾ ಜಾತ್ರೆಗಾಗಿ ಹಿಂದು-ಮುಸ್ಲಿಮರು ಐಕ್ಯತೆ ಮೆರೆದಿದ್ದು, ತಾವೇ ರಸ್ತೆ ನಿರ್ಮಿಸಿಕೊಂಡು, ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ್ದಾರೆ.

    ಜಿಲ್ಲೆ ಚಿತ್ತಾಪುರ ತಾಲೂಕಿನ ತರಕಸಪೇಟದ ಈ ಗ್ರಾಮದ ಹೊರವಲಯದ ಶಾಪೀರ್ ವಲಿ-ಗೈಪೀರ್ ವಲಿ ದರ್ಗಾದ ಬೃಹತ್ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಹಿಂದು-ಮುಸ್ಲಿಮರು ಒಟ್ಟಿಗೆ ಸೇರುತ್ತಾರೆ. ಆದರೆ ಗ್ರಾಮದಿಂದ ಒಂದೂವರೆ ಕಿ.ಮೀ. ದೂರದ ದರ್ಗಾಕ್ಕೆ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿಹೋದ ತರಕಸಪೇಟದ ಗ್ರಾಮಸ್ಥರು ತಮ್ಮಲ್ಲೇ ಹಣ ಸಂಗ್ರಹಿಸಿ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ.

    ಗ್ರಾಮದ ಜನ ನಿರ್ಮಿಸಿರುವ ರಸ್ತೆ ಚಿಕ್ಕದಾದರೂ ಇವರ ಭಾವೈಕತೆಯ ಮನಸ್ಸು ಮಾತ್ರ ದೊಡ್ಡದು. ಈ ಕಚ್ಚಾ ರಸ್ತೆಗೆ ಮುಂಬರುವ ದಿನಗಳಲ್ಲಿ ಡಾಂಬರೀಕರಣ ಮಾಡಲು ಸಹ ಗ್ರಾಮಸ್ಥರೇ ಸಿದ್ಧತೆ ಕೈಗೊಂಡಿದ್ದಾರೆ.

  • ಹಾಸನದಲ್ಲಿ ನೀರಿಲ್ಲದೇ ಗುಳೆ ಹೊರಟ ಗ್ರಾಮಸ್ಥರು

    ಹಾಸನದಲ್ಲಿ ನೀರಿಲ್ಲದೇ ಗುಳೆ ಹೊರಟ ಗ್ರಾಮಸ್ಥರು

    ಹಾಸನ: ಮಳೆಯಿಲ್ಲ, ಬೆಳೆಯಿಲ್ಲ ಅನ್ನೋ ಕಾರಣಕ್ಕೆ ಗುಳೆ ಹೋಗೋದನ್ನು ನಾವು ಕಂಡಿದ್ದೇವೆ. ಆದ್ರೆ ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಕುಡಿಯಲು ಮತ್ತು ಬಳಕೆಗೆ ನೀರಿಲ್ಲ ಅಂತ ಹಳ್ಳಿಯ ಶೇಕಡ 60 ರಿಂದ 70ರಷ್ಟು ಮಂದಿ ಗ್ರಾಮ ಬಿಟ್ಟು ಹೋಗಿದ್ದಾರೆ. ಬೇಲೂರು ತಾಲೂಕಿನ ಬೋವಿಕಾಲೋನಿ ಅನ್ನೋ ಗ್ರಾಮದಲ್ಲಿ ಇಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೇ ಪಡಬಾರದ ಕಷ್ಟ ಪಡುತ್ತಿರುವ ಪರಿಶಿಷ್ಟರು, ಸರ್ಕಾರದ ಭಾಗ್ಯ ಯೋಜನೆಗಳು ಹೋಗಲಿ, ನಮಗೆ ಮೊದಲು ನೀರು ಕೊಡಿ ಅಂತ ಪರಿ ಪರಿಯಾಗಿ ಬೇಡುತ್ತಿದ್ದಾರೆ.

    ಇದು ಶಿಲ್ಪಸೌಂದರ್ಯದ ನೆಲೆವೀಡು, ಹಳೇಬೀಡಿನ ಕೂಗಳತೆ ದೂರದಲ್ಲಿರುವ ನರಸೀಪುರ ಬೋಬಿ ಕಾಲೋನಿ. ಇಲ್ಲಿ ಸುಮಾರು 200 ಕುಟುಂಬಗಳು ವಾಸವಿದ್ದು, ಸುಮಾರು 1 ಸಾವಿರ ಜನಸಂಖ್ಯೆ ಇದೆ. ಇವರೆಲ್ಲರೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಈ ಗ್ರಾಮಕ್ಕೆಂದೇ ಕೊರೆಸಿದ್ದ ಹಲವು ಕೊಳವೆ ಬಾವಿಗಳು ನೀರಿನ ಅಭಾವದಿಂದ ಬತ್ತಿಹೋಗಿವೆ. ಬೇಲೂರಿನ ಯಗಚಿ ಜಲಾಶಯದಿಂದ ನೀರಿನ ಸಂಪರ್ಕವಿದ್ದರೂ ಅಲ್ಲಿಂದು ನೀರು ಪೂರೈಕೆಯಾಗೋದು ಅಮಾವಾಸ್ಯೆಗೋ, ಹುಣ್ಣಿಮೆಗೋ. ಗ್ರಾಮದಲ್ಲಿ ನೀರಿನ ಸಮಸ್ಯೆ ಹೇಗಿದೆ ಅಂದ್ರೆ ಯಾರಾದ್ರು ಹೊರಗಿನವರು ಬಂದು ಕುಡಿಯಲು ನೀರು ಕೇಳಿದ್ರೂ ಕೂಡ ಮನೆಯಲ್ಲಿ ನೀರಿರೋದಿಲ್ಲ.

    ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ರೂ ಒಂದು ಟ್ಯಾಂಕ್ ನೀರು ಬಂದರೆ ಮನೆಗೊಂದು ಬಿಂದಿಗೆ ಸಿಗೋದು ಕಷ್ಟ. ನೀರಿನ ಅಭಾವದಿಂದಲೇ ಗ್ರಾಮದ ಶೇ.60 ರಿಂದ 70ರಷ್ಟು ಮಂದಿ ಮನೆಗೆ ಬೀಗ ಜಡಿದು ಊರು ಬಿಟ್ಟು ಮೂಡಿಗೆರೆ, ಮಡಿಕೇರಿ ಕಡೆಗೆ ವಲಸೆ ಹೋಗಿದ್ದಾರೆ. ಇನ್ನೂ ಕೆಲವರು ನಮಗೇ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಎಲ್ಲಿಂದ ತರೋದು ಅಂತ ಮೂಕಪ್ರಾಣಿಗಳನ್ನು ಮಾರಾಟ ಮಾಡಿದ್ದಾರೆ.

    ಗ್ರಾಮದಲ್ಲಿ ಉಳಿದಿರುವುದು ವಯೋವೃದ್ಧರು, ಶಾಲೆಗೆ ಹೋಗುವ ಮಕ್ಕಳು, ಬಾಣಂತಿಯರು ಮಾತ್ರ. ಆಗೊಮ್ಮೆ ಈಗೊಮ್ಮೆ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾರೆ. ಆದರೆ ಅದರಿಂದ ಒಂದು ಮನೆಗೆ 4 ಕೊಡ ನೀರು ಸಿಗೋದು ಕಷ್ಟ. ಇದೇ ಕಾರಣಕ್ಕೆ ಗ್ರಾಮದ ಪಕ್ಕ ಇರೋ ಪಾಚಿಗಟ್ಟಿದ ಕೆರೆ ನೀರನ್ನೇ ಬಳಕೆ ಮಾಡೋದು ಬಡಜನರಿಗೆ ಅನಿವಾರ್ಯವಾಗಿದೆ. ನೀರು ಕೊಡಿ ಸ್ವಾಮಿ ಅಂದ್ರೆ ಒಬ್ಬರತ್ತ ಇನ್ನೊಬ್ಬರು ಬೊಟ್ಟು ಮಾಡುತ್ತಾರೆ. ಕೊರೆಸಿದ್ದ ಕೊಳವೆಬಾವಿಗಳೆಲ್ಲಾ ಸತ್ತು ಹೋಗಿವೆ. ಗ್ರಾಮದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದ್ರೆ ಸ್ವಚ್ಛಭಾರತ್ ನಿರ್ಮಾಣ ಅಭಿಯಾನ ಯೋಜನೆಯಡಿ ರೇಷನ್ ಕಾರ್ಡ್ ಕಟ್ ಮಾಡುವ ಬೆದರಿಕೆ ಹಾಕಿ ಬಹುತೇಕ ಮನೆಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಳಕೆ ಮಾಡಲು ನೀರೇ ಇಲ್ಲ. ಇದರಿಂದಾಗಿ ಬಾಣಂತಿಯರ ಪಾಡಂತೂ ಹೇಳತೀರದ್ದಾಗಿದೆ.

    ಶುಚಿಯಾದ ನೀರಿಲ್ಲದ ಕಾರಣ ಗ್ರಾಮದ ಹೆಚ್ಚು ಜನರು ಕಜ್ಜಿ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ನಮಗೇನೂ ಬೇಡ, ಮೊದಲು ನೀರು ಕೊಡಿ ಅನ್ನೋದು ನೊಂದ ಜನರ ಮನವಿಯಾಗಿದೆ.

  • ಚಿಕ್ಕಬಳ್ಳಾಪುರದಲ್ಲಿ 1.2 ತೀವ್ರತೆಯ ಭೂಕಂಪನ- ಮನೆಯಲ್ಲಿನ ಪಾತ್ರೆಗಳು ಚೆಲ್ಲಾಪಿಲ್ಲಿ

    ಚಿಕ್ಕಬಳ್ಳಾಪುರದಲ್ಲಿ 1.2 ತೀವ್ರತೆಯ ಭೂಕಂಪನ- ಮನೆಯಲ್ಲಿನ ಪಾತ್ರೆಗಳು ಚೆಲ್ಲಾಪಿಲ್ಲಿ

    ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನವಾಗಿದೆ.

    ಆಂಧ್ರದ ಗಡಿಗೆ ಹೊಂದಿಕೊಂಡಿರುವ ಐವಾರಪಲ್ಲಿ, ಲಘು ಮದ್ದೇಪಲ್ಲಿ, ಚಿಕ್ಕ ತಿಮ್ಮನಹಳ್ಳಿ, ಪಾಕು ಪಟ್ಲಪಲ್ಲಿ ಸೇರಿದಂತೆ ತುಮಕೇಪಲ್ಲಿ ಹಾಗೂ ಹತ್ತು ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.

    ಎರಡು ಬಾರಿ 5-6 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ್ದು, ಮನೆಗಳಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿವೆ. ಈ ವೇಳೆ ಕರ್ಕಶ ಶಬ್ಧ ಕೂಡ ಕೇಳಿಬಂದಿದೆ ಎನ್ನಲಾಗಿದ್ದು, ರಾತ್ರಿಯಿಡೀ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆದು ನಿದ್ದೆಗೆಟ್ಟಿದ್ದಾರೆ.

    ಭೂಮಿ ನಡುಗಿದ ಅನುಭವದಿಂದಾಗಿ ರಸ್ತೆ ಬದಿಯಲ್ಲಿಯೇ ಜನ ಕಾಲ ಕಳೆದಿದ್ದಾರೆ. ಆದರೆ ಭೂಕಂಪನದಿಂದ ಯಾವುದೇ ಅವಘಡ ಸಂಭವಿಸಿಲ್ಲ. ಭೂಕಂಪನವಾದ ಗ್ರಾಮಗಳಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಹಾಗೂ ಬಾಗೇಪಲ್ಲಿ ವೃತ್ತ ನಿರೀಕ್ಷಕ ಗೋವಿಂದರಾಜು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ.

    ಭೂಕಂಪನ ಆಗಿರುವುದು ಅಧಿಕೃತವಾಗಿ ದೃಢಪಟ್ಟಿದೆ. ರೆಕ್ಟರ್ ಮಾಪನದಲ್ಲಿ ಪರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇದರ ಪ್ರಮಾಣ 1.2 ರಷ್ಟು ತೀವ್ರತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಸ್ಪಷ್ಟಪಡಿಸಿದ್ದಾರೆ.

  • ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಚುನಾವಣೆ ಹೊತ್ತಲ್ಲಿ ಎಚ್ಚೆತ್ತ ಮತದಾರ-ಬೇಡಿಕೆ ಈಡೇರಿಕೆಗಾಗಿ ಚುನಾವಣೆ ಬಹಿಷ್ಕಾರ..!

    ಕಾರವಾರ: ಚುನಾವಣೆ ಸಮೀಪಿಸುತಿದ್ದಂತೆ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕಡಿಮೆ ಇಲ್ಲ. ಆದ್ರೆ ಈ ಹಿಂದೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸದೇ ಮರೆತ ರಾಜಕಾರಣಿಗಳಿಗೀಗ ಚುನಾವಣೆ ಬಹಿಷ್ಕಾರ ದೊಡ್ಡ ತಲೆನೋವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೂರ್ವೆ ಗ್ರಾಮ ಚುನಾವಣೆಯನ್ನು ಬಹಿಷ್ಕರಿಸಿದೆ.

    ಸಾಮನ್ಯವಾಗಿ ಚುನಾವಣೆ ಹತ್ತಿರವಾಗಿದ್ದಂತೆ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳೊತ್ತವೆ. ಆದ್ರೆ ಈ ಬಾರಿ ಕಾಮನ್ ಮೆನ್‍ಗಳು ಸಹ ಎಚ್ಚೆತ್ತುಕೊಂಡಿದ್ದಾರೆ. ಬೇಡಿಕೆ ಈಡೇರಿಸುವವರಿಗೂ ಚುನಾವಣೆ ಬೇಡ ಅಂತ ಕೂರ್ವೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಕೂರ್ವೆ ಗ್ರಾಮ ಗಂಗಾವಳಿ ನದಿಯ ನೀರಿನಿಂದ ಆವರಿಸಿದ್ದು ದ್ವೀಪದಂತಿದೆ. 47 ಕುಟುಂಬಗಳು ವಾಸವಿರುವ ಈ ಗ್ರಾಮಕ್ಕೆ ಹೋಗಬೇಕಾದ್ರೆ ಇಂದಿಗೂ ದೋಣಿಯಲ್ಲಿಯೇ ಸಂಚರಿಸಬೇಕು.

    ಈ ಹಿಂದೆ ಗ್ರಾಮಕ್ಕೆ ಸರ್ಕಾರದಿಂದ ಒಂದು ದೂಣಿಯನ್ನು ನೀಡಲಾಗಿತ್ತು. ಆದ್ರೆ ಕೆಲವು ಕಿಡಿಗೇಡಿಗಳು ದೋಣಿಯನ್ನು ಸುಟ್ಟುಹಾಕಿದ್ರು. ಈಗ ಈ ಗ್ರಾಮಕ್ಕೆ ಯಾವುದೇ ದೋಣಿಗಳು ಇಲ್ಲದಿದ್ರೂ ಜನರೇ ತಮ್ಮ ಸ್ವಂತ ದೋಣಿಯನ್ನು ಬಳಸಿಕೊಂಡು ದಿನನಿತ್ಯದ ವಸ್ತುಗಳನ್ನು ತರುತ್ತಾರೆ. ಇನ್ನು ಇಲ್ಲಿ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದ್ರೆ ಶಿಕ್ಷಕರು ಈ ಭಾಗಕ್ಕೆ ಬರಬೇಕಿದ್ರೆ ಹಾಗೂ ಬಿಸಿಯೂಟಕ್ಕೆ ಸಾಮಗ್ರಿ ತರಬೇಕಿದ್ರೆ ಹರಸಾಹಸ ಪಡಬೇಕಿದೆ.

    ಗ್ರಾಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಿಸಬಹುದಿತ್ತು. ಆದರೆ ಜನಪ್ರತಿನಿಧಿಗಳ ಅಸಡ್ಡೆ ಇವರನ್ನ ಕತ್ತಲಲ್ಲಿ ಇರುವಂತೆ ಮಾಡಿದೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನವನ್ನು ಗ್ರಾಮದ ಜನರು ಕೈಗೊಂಡಿದ್ದಾರೆ.

  • ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

    ಚಿಕ್ಕಮಗಳೂರು: ಕೆರೆ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದ್ದು, ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ.

    ಸಖರಾಯಪಟ್ಟಣದ ಅಯ್ಯನಕೆರೆ ನೀರನ್ನು ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಎರಡೂ ಗ್ರಾಮಗಳ ಗ್ರಾಮಸ್ಥರ ನಡುವೆ ಗಲಾಟೆ ನಡೆದು, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪ್ರಸ್ತುತ ತಹಶೀಲ್ದಾರ್ ಭಾಗ್ಯ ಅವರು ಈ ಪ್ರದೇಶದಲ್ಲಿ 144 ಸೆಕ್ಷನ್ (ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ. ಇದೀಗ ಸಖರಾಯಪಟ್ಟಣ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಿದರೆ ಬೋರ್‍ವೆಲ್‍ಗಳು ಅಂತರ್ಜಾಲ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಮತ್ತು ಹೊಲಗದ್ದೆಗಳಿಗೂ ನೀರು ಲಭಿಸಲಿದೆ ಎಂದು ಗುರುವಾರ ಜಿಗಣೇಹಳ್ಳಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಸಖರಾಯಪಟ್ಟಣ ಗ್ರಾಮಸ್ಥರು ಕಡೂರು-ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.

    https://www.youtube.com/watch?v=AmB7U5-ug8o

  • ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಚಿಕ್ಕಬಳ್ಳಾಪುರ: ವಿವಿಧ ಭಾಷೆ, ಧರ್ಮ, ಜಾತಿ, ಮತ, ಪಂಥ ಗಳನ್ನು ಮೀರಿದ ಏಕತೆಯ ರೂಪವಾಗಿ ಭವ್ಯ ಭಾರತವನ್ನು ಕಾಣಬಹುದು. ಆದರೆ ಇತ್ತೀಚೆಗೆ ಜಾತಿ-ಜಾತಿ, ಧರ್ಮಗಳ ನಡುವೆಯೇ ರಾಜಕೀಯ ವ್ಯಕ್ತಿಗಳು ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗೆ ಸ್ಪಷ್ಟ ಸಾಕ್ಷಿ ಎಂಬಂತೆ ಇಲ್ಲೊಂದು ಗ್ರಾಮದ ಜನರಿಗೆ ಜಾತಿ-ಧರ್ಮಗಳಿಗಿಂತ ರಾಜಕೀಯ ಪಕ್ಷವೇ ಶ್ರೇಷ್ಠವಾಗಿದೆ. ತಮ್ಮ ಒಣ ಪ್ರತಿಷ್ಠೆಗಾಗಿ ಗ್ರಾಮದ ದೇವರಿಗೆ ಪ್ರತ್ಯೇಕ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.

    ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹುಜಗೂರು ಗ್ರಾಮದಲ್ಲಿ ಇಂತಹ ಬೆಳವಣಿಗೆ ಸಾಕ್ಷಿಯಾಗಿದ್ದು, ಈ ಗ್ರಾಮದಲ್ಲಿ ವಾಸಿಸುವ 130 ಕುಟುಂಬ ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ರಾಜಕೀಯ ಸಂಘರ್ಷಕ್ಕೆ ಹೆಸರು ಪಡೆದಿದೆ. ಗ್ರಾಮದ 130 ಕುಟುಂಬಗಳ ಪೈಕಿ 74 ಕುಟುಂಬಗಳು ಜೆಡಿಎಸ್ ಪಕ್ಷ ಬೆಂಬಲಿಸಿದರೆ, ಉಳಿದ 56 ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಈ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತರ ಮನೆಗಳು ಇರುವ ಬೀದಿಗೆ ಕಾಂಗ್ರೆಸ್ ನವರು ಹೆಜ್ಜೆ ಇಡಲ್ಲ. ಕಾಂಗ್ರೆಸ್ ಬೆಂಬಲಿತರ ಮನೆಯ ಇರುವ ಕಡೆಗೆ ಜೆಡಿಎಸ್ ನವರು ಹೆಜ್ಜೆ ಹಾಕಲ್ಲ. ಅಷ್ಟೇ ಅಲ್ಲದೇ ಪರಸ್ಪರರು ಮಾತಾಡೋದು ಅಷ್ಟಕ್ಕಷ್ಟೇ.

    ಗ್ರಾಮದ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೂ ಅವರ ಪಕ್ಷದವರು ಇವರ ಮನೆಯ ಬಳಿ ಹೋಗಲ್ಲ. ಕೊನೆಗೆ ಶುಭ ಸಮಾರಂಭಗಳಿಗೂ ಹೋಗಲ್ಲ. ಚುನಾವಣೆ ಬರಲಿ – ಮುಗಿಯಲಿ, ವರ್ಷ ಪೂರ್ತಿಯೂ ಹಾವು ಮುಂಗುಸಿಯಂತೆ ಇರುತ್ತಾರೆ ಈ ಗ್ರಾಮದ ಕುಟುಂಬಗಳು.

    ಇವರ ಪಕ್ಷ ರಾಜಕೀಯ ಕಾದಾಟ ಕೇವಲ ಬರೀ ಮಾತಿನಲ್ಲಿ ನಿಲ್ಲದೇ ಹಬ್ಬ ಹರಿದಿನಗಳ ದೇವರ ಕಾರ್ಯದಲ್ಲೂ ನಡೆಯುತ್ತದೆ. ಯಾವುದೇ ಹಬ್ಬ, ರಾಷ್ಟ್ರೀಯ ಆಚರಣೆಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಗ್ರಾಮದಲ್ಲಿ ನಡೆಯುವ ಗಣೇಶ ಹಬ್ಬದಂದು ಬೇರೆ ಬೇರೆಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಸಂಕ್ರಾಂತಿ ಹಬ್ಬದಂದು ಪ್ರತ್ಯೇಕ ದೇವರ ಗುಡಿಗಳನ್ನು ನಿರ್ಮಿಸಿ ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ನೇರವೇರಿಸಿದ್ದಾರೆ.

    ಈ ಗ್ರಾಮದಲ್ಲಿರುವ ಆಂಜನೇಯಸ್ವಾಮಿಗೆ ಶನಿವಾರ ಜೆಡಿಎಸ್ ಬೆಂಬಲಿತರು ಪೂಜೆ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರು ಸೋಮವಾರ ಪೂಜೆ ಸಲ್ಲಿಸುತ್ತಾರೆ. ವಿಶೇಷ ಏನೆಂದರೆ ಕಾಂಗ್ರೆಸ್ ನವರು ಪ್ರತಿಷ್ಠಾಪಿಸಿರುವ ನವಗ್ರಹ ಕಲ್ಲುಗಳಿಗೆ ಜೆಡಿಎಸ್ ನವರು ನಮಸ್ಕಾರ ಹಾಕುವುದು ವಿರಳಾತಿ ವಿರಳ. ಅಲ್ಲದೇ ಆಟೋಗಳ ಮೂಲಕ ಪಟ್ಟಣಕ್ಕೆ ತೆರಳುವಾಗಲೂ ಸಹ ನಾವು ಕಾಂಗ್ರೆಸ್ ನೀವು ಜೆಡಿಎಸ್ ಎನ್ನುವ ಬೇಧ ಭಾವ ಕಾಣಸಿಗುತ್ತದೆ. ಇಂತಹ ಭೇದ ಭಾವಗಳು ಸದ್ಯ ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೂ ತಟ್ಟಿದ್ದು ಅವರು ಕೂಡ ನಾವು ಜೆಡಿಎಸ್, ನಾವು ಕಾಂಗ್ರೆಸ್ ಪಕ್ಷ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

    ಮನೆಯೊಂದು ಮೂರು ಬಾಗಿಲು ಎಂಬಂತೆ ಗ್ರಾಮವೊಂದು ಎರಡು ಮನಸ್ಥಿತಿಗಳು ಎಂಬಂತಾಗಿ ಕಾಂಗ್ರೆಸ್, ಜೆಡಿಎಸ್ ಎಂದು ವಿಭಜನೆಯಾಗಿದೆ. ಆದರೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಗ್ರಾಮದ ಮುಂದಿನ ಮಕ್ಕಳ ಭವಿಷ್ಯ ಸ್ಥಿತಿ ಏನಾಗಬಹುದು ಎಂಬುದು ಹಲವರ ಚಿಂತೆ. ಆದರೆ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಗ್ರಾಮದಲ್ಲಿ ಚುನಾವಣೆಗಾಗಿ ಹಣ ಖರ್ಚು ಮಾಡುವುದು ಬೇಡ, ಚುನಾವಣಾ ಪ್ರಚಾರ ಮಾಡುವುದು ಬೇಡ. ಗ್ರಾಮಸ್ಥರ ಮತಗಳು ತಮ್ಮ ಪಕ್ಷಕ್ಕೆ ಬಂದೇ ಬರುತ್ತವೆ ಎನ್ನುವ ಲೆಕ್ಕಾಚಾರ ರಾಜಕೀಯ ಪಕ್ಷಗಳ ನಾಯಕರದ್ದು. ಆದರೆ ರಾಜಕೀಯ ಬೇಗುದಿಯ ವಿಷ ಬೀಜ ಬೆಳೆಯುತ್ತಿರುವ ಮಕ್ಕಳಲ್ಲಿ ಮೂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.