Tag: village

  • ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮಕ್ಕೆ ಕಾಡೆಮ್ಮೆಯೊಂದು ರಾಜಗಾಂಭೀರ್ಯವಾಗಿ ಓಡಾಡುತ್ತಿದೆ.

    ಕಳೆದೊಂದು ತಿಂಗಳಿಂದ ಈ ಕಾಡೆಮ್ಮೆ ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದೆ. ಕಾಡೆಮ್ಮೆ ಬಂದು ಹೋಗೋದನ್ನು ಜನ ನಿಂತು ನೋಡುತ್ತಿದ್ದಾರೆ. ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡರೆ ಹೆದರಿ ಓಡಿ ಹೋಗುತ್ತದೆ. ಆದರೆ ಈ ಕಾಡೆಮ್ಮೆ ಆಗಲ್ಲ. ಗ್ರಾಮಕ್ಕೆ ಬಂದು ಒಂದು ರೌಂಡ್ ಹಾಕಿ ಹೋಗುತ್ತದೆ.

    ಕಳೆದೊಂದು ತಿಂಗಳಿಂದ ಆಗಾಗ ಗ್ರಾಮದ ಮುಖ್ಯ ರಸ್ತೆಗೆ ಬರುತ್ತಿರುವ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತಿದೆ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರುವುದರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದರೆ ಊರೊಳಗೆ ಬರುವುದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರುತ್ತವೆ. ಗ್ರಾಮಕ್ಕೆ ಈ ಕಾಡೆಮ್ಮೆ ಬಂದು ಏನು ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯವಾಗಿ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಕ್ಕೀಡಾಗಿದ್ದಾರೆ.

    https://www.youtube.com/watch?v=ggLOcvSx75g

  • ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಕುಟುಂಬ ಆತ್ಮಹತ್ಯೆಗೆ ನಿರ್ಧಾರ

    ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಗೀಕಹಳ್ಳಿ ಗ್ರಾಮದಲ್ಲಿ ಕುಟುಂಬವೊಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದೆ.

    ಗೀಕಹಳ್ಳಿ ಗ್ರಾಮದ ಮಹದೇವ್ ಎಂಬವರ ಕುಟುಂಬಕ್ಕೆ ಇಂತಹ ದುಃಸ್ಥಿತಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಗ್ರಾಮದ ಮುಖಂಡರ ಆಕ್ರೋಶಕ್ಕೆ ಸಿಲುಕಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಮಹದೇವ್, ಬಿಳಿಗೆರೆ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ.

    ಐದು ವರ್ಷದ ಹಿಂದೆ ಗ್ರಾಮದ ಮುಖಂಡರ ಜೊತೆ ಜಾಗ ಖರೀದಿ ವಿಚಾರದಲ್ಲಿ ಮಹದೇವ ಜಗಳ ಮಾಡಿಕೊಂಡಿದ್ದರು. ಈ ವಿಚಾರ ಮುಂದಿಟ್ಟುಕೊಂಡ ಗ್ರಾಮದ ಇನ್ನಿತರ ಮುಖಂಡರು ಮಹದೇವ್ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ರು. ಬಹಿಷ್ಕಾರದ ಎಫೆಕ್ಟ್ ಇವರ ಮಗಳ ಕುಟುಂಬದ ಮೇಲೂ ಬೀರಿದೆ. ಅಳಿಯ ಮಗಳನ್ನು ಇದೇ ಕಾರಣಕ್ಕೆ ಬಿಟ್ಟು ಹೋಗಿದ್ದಾನೆ. ಹಬ್ಬಗಳಲ್ಲಿ ಭಾಗವಹಿಸುವಂತಿಲ್ಲ, ಅಂಗಡಿಗಳಲ್ಲಿ ಪದಾರ್ಥ ಕೊಂಡುಕೊಳ್ಳುವಂತಿಲ್ಲ, ಮತ್ತೊಬ್ಬರ ಮನೆಯಲ್ಲಿ ನೀರೂ ಕುಡಿಯುವಂತಿಲ್ಲ ಇಂತಹ ಪರಿಸ್ಥಿತಿ ಮಹದೇವ್ ಅವರ ಕುಟುಂಬಕ್ಕೆ ಬಂದಿದೆ. ಗ್ರಾಮದ ಹೊರವಲಯದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಮಹದೇವನ ಕುಟುಂಬಕ್ಕೆ ಸದ್ಯ ಜೀವ ಭಯ ಉಂಟಾಗಿದೆ.

  • ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಜ್ಯೋತಿಷಿಯ ಮಾತು ಕೇಳಿ ಗ್ರಾಮ ಬಿಟ್ಟಿದ್ದ ಚಿಕ್ಕಮಗಳೂರಿನ 50ಕ್ಕೂ ಹೆಚ್ಚು ಕುಟುಂಬ ವಾಪಸ್

    ಚಿಕ್ಕಮಗಳೂರು: ಜ್ಯೋತಿಷಿಯ ಮಾತು ಕೇಳಿ ಊರು ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 50ಕ್ಕೂ ಹೆಚ್ಚು ಕುಟುಂಬಗಳು ಎನ್.ಆರ್.ಪುರಕ್ಕೆ ವಾಪಸ್ ಮರಳಿವೆ.

    ಊರುಬಿಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆದಿದ್ದು, 50 ಕುಟುಂಬಗಳನ್ನು ಮನವೊಲಿಸುವಲ್ಲಿ ಶೃಂಗೇರಿ ಶಾಸಕ ರಾಜೇಗೌಡ ಯಶಸ್ವಿಯಾಗಿದ್ದಾರೆ.

    ಸಭೆಯಲ್ಲಿ ತಾತ್ಕಲಿಕವಾಗಿ ಎನ್‍ಆರ್ ಪುರ ದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಬೇರೆ ಕಡೆ ಜಾಗ ನೀಡುವುದಾಗಿ ಶಾಸಕರು ಹಾಗೂ ತಾಲೂಕು ಆಡಳಿತದಿಂದ ಭರವಸೆ ನೀಡಲಾಗಿದೆ. ಹೀಗಾಗಿ ಶಾಸಕರ ಮಾತಿಗೆ ಬೆಲೆಕೊಟ್ಟು 50 ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ್ದಾರೆ.

    ಇತ್ತೀಚೆಗಷ್ಟೇ ಜ್ಯೋತಿಷಿಯೊಬ್ಬರ ಮಾತು ಕೇಳಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬ ಶಿಗುವಾನಿ ಗ್ರಾಮದಿಂದ ರಾತ್ರೋರಾತ್ರಿ ಹೋಗಿದ್ದರು. 8 ವರ್ಷದಲ್ಲಿ 25 ಜನ ನಿಧನ ಹೊಂದಿದ್ದರು. ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಯ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿತ್ತು. ಕೊನೆ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದ.

    ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಮಾಡಿದ್ದರು. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದರು.

  • ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಚಿಕ್ಕಮಗಳೂರು: ಜ್ಯೋತಿಷ್ಯಕ್ಕೆ ಹೆದರಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಹೊರಟು ಹೋದ ಘಟನೆ ಜಿಲ್ಲೆಯ ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

    ಶಿಗುವಾನಿ ಗ್ರಾಮಸ್ಥರೇ ಮೂಢನಂಬಿಕೆಗೆ ಒಳಗಾದವರು. ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ಹಾವುಗೊಲ್ಲರು, ಹಕ್ಕಿಪಿಕ್ಕಿ ಕುಟುಂಬಗಳು ವಾಸವಾಗಿದ್ದವು. ಆದರೆ ಕಳೆದ 8 ದಿನಗಳಿಂದ 25 ಪುರುಷರು, ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.

    ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಯಿತು.

    ಕೊನೆಯ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದರಂತೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಆಗಿದೆ. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಹಾವು ಹಿಡಿಯುವುದು, ಹಕ್ಕಿಪುಕ್ಕ ಸೇರಿಸಿ ಮಾರುವುದು ಶಿಗುವಾನಿ ಗ್ರಾಮಸ್ಥರ ಮೂಲ ವೃತ್ತಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಗಾರೆ ಕೆಲಸ, ಕಾಫಿ ತೋಟ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿರಂತರ ಸಾವಿನ ಸಂಗತಿಯಿಂದ ಬೆಚ್ಚಿಬಿದ್ದು ಗ್ರಾಮವನ್ನು ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರು. ಸದ್ಯ ಅವರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎನ್ನಲಾಗುತ್ತಿದೆ.

  • ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಜೀವ ಕೈಯಲ್ಲಿ ಹಿಡಿದು ಶಾಲೆಗೆ ಪಯಣ – ಊರಿಗೆ ಹೋಗಲು ಗ್ರಾಮಸ್ಥರ ಹಗ್ಗಜಗ್ಗಾಟ!

    ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ಗ್ರಾಮದಿಂದ ಬೇರೆಡೆಗೆ ಹೋಗಲು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಗ್ರಾಮದಿಂದ ರಟ್ಟೀಹಳ್ಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಮಸ್ಯೆ ಎದುರಾಗಿದೆ. ಸೂಕ್ತ ರಸ್ತೆ ಇಲ್ಲದ್ದಕ್ಕೆ ಗ್ರಾಮಸ್ಥರು ತುಂಬಿ ಹರಿಯೋ ಕುಮುದ್ವತಿ ನದಿಯಲ್ಲಿ ತೆಪ್ಪದ ಮೂಲಕ ನದಿ ದಾಟಿ ಹೋಗುತ್ತಿದ್ದಾರೆ.

    ನದಿಯ ಎರಡೂ ಕಡೆಗಳಲ್ಲಿ ಹಗ್ಗವನ್ನ ಕಟ್ಟಿ ಹಗ್ಗದ ಸಹಾಯದಿಂದ ತೆಪ್ಪದಲ್ಲಿ ಪಯಣಿಸಬೇಕಾದ ದುಃಸ್ಥಿತಿ ಬಂದಿದೆ. ಶಾಲಾ ಕಾಲೇಜು ಸೇರಿದಂತೆ ಗ್ರಾಮಸ್ಥರು ಎಲ್ಲದಕ್ಕೂ ರಟ್ಟೀಹಳ್ಳಿ ಗ್ರಾಮವನ್ನೇ ಅವಲಂಬಿಸಿರೋದ್ರಿಂದ ಅರ್ಧ ಕಿ.ಮೀ.ನಷ್ಟು ತೆಪ್ಪದಲ್ಲಿ ನದಿ ದಾಟಿಕೊಂಡು ಹೋಗ್ತಿದ್ದಾರೆ. ಇದನ್ನೂ ಓದಿ: ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

    ನದಿಗೆ ಬ್ರಿಡ್ಜ್ ನಿರ್ಮಾಣ ಆಗಿದ್ರೂ ಸೇತುವೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರು ತೆಪ್ಪದಲ್ಲಿ ಪಯಣಿಸ್ತಿದ್ದಾರೆ. ಸ್ವಲ್ಪವೇ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ ಅನ್ನೋ ಹಾಗೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ತೆಪ್ಪದ ಮೂಲಕ ಪ್ರಯಾಣ ಮಾಡ್ತಿದ್ದಾರೆ.

    ತೆಪ್ಪ ಬಿಟ್ಟು ಬೇರೆ ಮಾರ್ಗದ ಮೂಲಕ ಗ್ರಾಮಸ್ಥರು ರಟ್ಟೀಹಳ್ಳಿ ತಲುಪಬೇಕಾದ್ರೆ ಹನ್ನೆರಡು ಕಿ.ಮೀ ದೂರ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯ ಎಂಬಂತೆ ಗ್ರಾಮಸ್ಥರು ತೆಪ್ಪವನ್ನೆ ನದಿ ದಾಟಲು ಅವಲಂಭಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಟ್ಟು ತೆಪ್ಪದ ಪ್ರಯಾಣ ತಪ್ಪಿಸಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ

  • ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಯುವತಿಯೊಂದಿಗೆ ಜಮೀನಿನಲ್ಲಿದ್ದ ಯುವಕರನ್ನು ಪ್ರಶ್ನಿಸಿದಕ್ಕೆ ಎರಡು ಗ್ರಾಮಗಳ ನಡುವೆ ಗಲಾಟೆ!

    ಮೈಸೂರು: ಇಬ್ಬರು ಯುವಕರೊಂದಿಗೆ ಯುವತಿಯೊಬ್ಬಳು ರೈತನ ಜಮೀನಿನಲ್ಲಿ ಕಾಣಿಸಿಕೊಂಡಿದ್ದಾಳೆ. ಈ ವೇಳೆ ಯುವಕರನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಂಡುವಿನಹಳ್ಳಿ ಗ್ರಾಮದ ಬಳಿ ಯುವಕರಿಬ್ಬರು ಯುವತಿಯೊಬ್ಬಳನ್ನು ಜಮೀನಿಗೆ ಕರೆತಂದಿದ್ದರು. ಇದನ್ನು ಕಂಡ ಜಮೀನಿನ ಮಾಲೀಕ ದೇವಣ್ಣ ಯುವಕರನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಯುವಕರು ತಮ್ಮ ಸ್ನೇಹಿತರನ್ನು ಕರೆಸಿಕೊಂಡು ಹಂಡುವಿನಹಳ್ಳಿ ಗ್ರಾಮಕ್ಕೆ ನುಗ್ಗಿ, ಜಮೀನಿನ ಮಾಲೀಕ ದೇವಣ್ಣನ ಪುತ್ರ ನಾಗರಾಜು ಮೇಲೆ ಹಲ್ಲೆ ಮಾಡಿದ್ದಾರೆ.

    ಯುವಕರ ಗುಂಪಿನ ವರ್ತನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಯುವಕರನ್ನು ಹಿಡಿದು ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ನಂಜನಗೂಡು ಗ್ರಾಮಾಂತರ ಪೊಲೀಸರು, ಹಂಡುವಿನಹಳ್ಳಿ ಗ್ರಾಮದ ರಾಮಮಂದಿರದಲ್ಲಿ ಕೂಡಿಹಾಕಿದ್ದ ಇಬ್ಬರು ಯುವಕರನ್ನು ತಮ್ಮ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ – ಜಲಾವೃತಗೊಂಡ ಗ್ರಾಮಗಳ ಸಂಚಾರ, ವಿದ್ಯುತ್ ಸಂಪರ್ಕ ಕಟ್

    ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ – ಜಲಾವೃತಗೊಂಡ ಗ್ರಾಮಗಳ ಸಂಚಾರ, ವಿದ್ಯುತ್ ಸಂಪರ್ಕ ಕಟ್

    ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದರಿಂದ ಐದು ಗ್ರಾಮಗಳು ಜಲಾವೃತವಾಗಿದ್ದು, ಸಂಚಾರ, ವಿದ್ಯುತ್ ಸಂಪರ್ಕ ಕಡಿತವಾಗಿದೆ.

    ನದಿಗೆ ನೀರು ಬಿಡುಗಡೆ ಮಾಡಿರುವುದರಿಂದ ಒಂದಡೆ ರೈತರಿಗೆ ಸಂತಸ ತಂದಿದ್ದರು, ಮತ್ತೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ಸ್ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ರಾಯಚೂರು ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ. ಪ್ರಮುಖವಾಗಿ ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಇದರಿಂದ ಈ ಭಾಗಕ್ಕೆ ಸಂಚಾರ, ವಿದ್ಯುತ್ ವ್ಯತ್ಯಯ ಉಂಟಾಗಿದೆ.

    ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಸಿರುವ ಕಾರಣ ನದಿ ತಟದ ಬಳಿ ಯಾರೂ ಹೋಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೇ ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಲಾಗಿದೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು ಐದಾರು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಇನ್ನೂ ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಅಳವಡಿಸಿದ್ದ ಪಂಪ್ ಸೆಟ್ ಗಳು ನೀರಿನಲ್ಲಿ ಮುಳುಗಿಹೋಗಿವೆ.

    ಗ್ರಾಮಗಳಲ್ಲಿ ಜಾನುವಾರುಗಳನ್ನ ಕಟ್ಟಿಕೊಂಡುರುವ ಕುಟುಂಬಗಳು ಅಲ್ಲಿಯೇ ಉಳಿದುಕೊಂಡಿವೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನದಿ ದಡಕ್ಕೆ ಯಾರು ತೆರಳದಂತೆ ಭದ್ರತೆಯನ್ನು ಏರ್ಪಡಿಸಲಾಗಿದೆ.

  • ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ- 5 ದಿನಗಳ ರಜೆಯ ನಂತರ ಶಾಲೆಗಳು ಪುನಾರಂಭ

    ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ- 5 ದಿನಗಳ ರಜೆಯ ನಂತರ ಶಾಲೆಗಳು ಪುನಾರಂಭ

    ಮಡಿಕೇರಿ: ಕೊಡಗಿನಲ್ಲಿ ವರುಣನ ಆರ್ಭಟ ತಗ್ಗಿದ್ದು, ಜಿಲ್ಲೆಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ಅಂಗನವಾಡಿ, ಶಾಲೆಗಳು ಎಂದಿನಂತೆ ಆರಂಭಗೊಂಡಿದೆ.

    ಕಳೆದ 2 ವಾರಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದ ಮಳೆ ಮಂಗಳವಾರ ರಾತ್ರಿಯಿಂದ ಕಡಿಮೆಯಾಗಿದೆ. ಕಳೆದ 5 ದಿನಗಳಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆಗಳು ಮತ್ತೆ ಆರಂಭಗೊಂಡಿದೆ.

    ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿದಿದೆ. ಅಲ್ಲದೇ ಮುಳುಗಡೆಯಾಗಿದ್ದ ರಸ್ತೆ ಹಾಗೂ ಸೇತುವೆ ಸಹಜ ಸ್ಥಿತಿಗೆ ಮರಳಿದೆ.

    ಮಹಾಮಳೆಗೆ ಭಗಂಡೇಶ್ವರ ಕ್ಷೇತ್ರ ಜಲಾವೃತಗೊಂಡಿದ್ದು, ಗಾಳಿಯ ರಭಸಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯಯಾಗಿತ್ತು. ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿತ್ತು. ಸದ್ಯ ವರುಣ ತನ್ನ ಆರ್ಭಟ ನಿಲ್ಲಿಸಿದ್ದರೂ ತುಂತುರು ಮಳೆಯಾಗುತ್ತಿದೆ.

  • ಮಂಡ್ಯದ ಗ್ರಾಮಕ್ಕೆ ಬೆಳಕು ಮೂಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

    ಮಂಡ್ಯದ ಗ್ರಾಮಕ್ಕೆ ಬೆಳಕು ಮೂಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್

    ಮುಂಬೈ: ಸಿನಿಮಾರಂಗದ ನಟ-ನಟಿಯರು ತಮ್ಮ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿರುತ್ತಾರೆ. ಈಗ ಬಾಲಿವುಡ್ ನಟಿ ಆಲಿಯಾ ಭಟ್ ಅವರಿಂದ ಮಂಡ್ಯದ ಗ್ರಾಮವೊಂದಕ್ಕೆ ಬೆಳಕಿನ ಭಾಗ್ಯ ಲಭಿಸಿದೆ.

    ಹೌದು, ಕರ್ನಾಟಕದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿರುವ 40 ಕುಟುಂಬಗಳಿಗೆ ಆಲಿಯಾ ಭಟ್ ರಿಂದ ವಿದ್ಯುತ್ ದೊರೆತಿದೆ. ಇದೇ ವರ್ಷ ಆರಂಭವಾದ `ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್’ ಸ್ಟೈಲ್ಕ್ರಾಕರ್ ನೈಟ್ ಮಾರ್ಕೆಟ್ ನಲ್ಲಿ ನಡೆಸಲಾದ ಅಭಿಯಾನದ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಒಂದು ವಿಶೇಷವಾದ ಬಟ್ಟೆಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.

    ಬೆಂಗಳೂರು ಮೂಲದ ಎಆರ್ ಓಎಚ್‍ಎ ಸಂಸ್ಥೆಯೊಂದು ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಇದು ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ಬಳಿಕ ಅದರಿಂದ ವಿದ್ಯುತ್ ಇಲ್ಲದ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸೋಲಾರ್ ದೀಪಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

    ಈ ಸಂಸ್ಥೆ `ಲಿಟರ್ ದ ಲೈಟರ್’ ಕಾರ್ಯಕ್ರಮದಡಿಯಲ್ಲಿ ಚಾರಿಟಿಗಾಗಿ ಆಲಿಯಾ ಭಟ್ ಅವರನ್ನ ಸಂಪರ್ಕಿಸಿದೆ. ಆಗ ಆಲಿಯಾ ಭಟ್ ಮಾರಾಟಕ್ಕಿಟ್ಟಿದ್ದ ಬಟ್ಟೆಯಿಂದ ಬಂದ ಹಣವನ್ನು ಈ ಸಂಸ್ಥೆಗೆ ನೀಡಿದ್ದಾರೆ. ಅವರು ನೀಡಿದ ಹಣದಿಂದ 40 ಕುಟುಂಬಗಳಿಗೆ ಈ ಸಂಸ್ಥೆ ಸೋಲಾರ್ ದೀಪಗಳನ್ನು ಒದಗಿಸಿದ್ದಾರೆ.

    ಈ ಯೋಜನೆಯ ಬಗ್ಗೆ ಮಾತನಾಡಿದ ಅಲಿಯಾ, “ಭಾರತದಲ್ಲಿ ಅನೇಕ ಕುಟುಂಬಗಳು ಕತ್ತಲೆಯಲ್ಲಿ ಜೀವಿಸುತ್ತಿವೆ. ಅವರಿಗೆ ಮನೆಗಳನ್ನು ಬೆಳಗಿಸಲು ಹೊಸ ಮತ್ತು ಸಮರ್ಥನೀಯ ಮಾರ್ಗ ಇದಾಗಿದ್ದು, ಪರಿಸರ ಸ್ನೇಹಿ ಸೌರ ದೀಪಗಳಾಗಿವೆ. ಈ ಸಂಸ್ಥೆ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ಸಮುದಾಯದವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ಕಿಕ್ಕೇರಿ ಗ್ರಾಮದ 200 ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.

    ಆಲಿಯಾ ಭಟ್ ಇತ್ತೀಚೆಗೆ ಮೇಘನಾ ಗುಲ್ಜಾರ್ ಅವರ `ರಾಜಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಣವೀರ್ ಸಿಂಗ್ ಅಭಿನಯದ `ಜೊಯಾ ಅಖ್ತರ್ ಗಲ್ಲಿ ಬಾಯ್’ ನ್ಲಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಅಯನ್ ಮುಖರ್ಜಿಯವರ `ಬ್ರಹ್ಮಸ್ತರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಮೌನಿ ರಾಯ್, ಅಮಿತಾಬ್ ಬಚ್ಚನ್, ಕಲಾಂಕ್, ವರುಣ್ ಧವನ್, ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ ಸೇರಿದಂತೆ ತಾರಾ ಬಳಗವಿದೆ.

  • ರಾಜಕೀಯ ವೈಷಮ್ಯದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಪುರ್ತಗೇರಿ ಗ್ರಾಮಸ್ಥರು!

    ರಾಜಕೀಯ ವೈಷಮ್ಯದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಪುರ್ತಗೇರಿ ಗ್ರಾಮಸ್ಥರು!

    ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಇದರಿಂದಾಗಿ ಗ್ರಾಮಸ್ಥರು ಯಾವ ಸರ್ಕಾರ ಬಂದರೂ ನಮಗೆ ಮಾತ್ರ ಯಾವುದೆ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮವು, ಶಾಸಕ ಜಿ.ಎಸ್. ಪಾಟೀಲ್, ಮಾಜಿ ಸಚಿವ ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರ್ ಹಾಗೂ ಜ್ಞಾನದೇವ ದೊಡ್ಡಮೇಟಿ ಅಲ್ಲದೇ ಅನೇಕ ಘಟಾನುಘಟಿ ನಾಯಕರುಗಳು ಆಡಳಿತ ಮಾಡಿದ ಕ್ಷೇತ್ರ. ಗ್ರಾಮದಲ್ಲಿನ ದುಸ್ಥಿತಿ ನೋಡಿದರೇ, ಈ ನಾಯಕರುಗಳು ಇಷ್ಟು ವರ್ಷಗಳ ಕಾಲ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದು ಉದಾಹರಣೆಯಾಗಿದೆ.

    ರಾಂಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 400 ರಿಂದ 450 ಮನೆಗಳಿವೆ. ಸುಮಾರು 1,100 ಮಂದಿ ಕನಿಷ್ಠ ಸೌಲಭ್ಯಗಳಿಂದಲೂ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಹಾಗೂ ಸಾರ್ವಜನಿಕರು ಓಡಾಡಲು 3 ಕಿಲೋ ಮೀಟರ್ ದೂರವಿರುವ ಗಜೇಂದ್ರಗಡ ಪಟ್ಟಣಕ್ಕೆ ನಡೆದುಕೊಂಡೇ ಹೋಗಬೇಕು. ಇಲ್ಲವೇ ಸೈಕಲ್, ಬೈಕ್ ಅಥವಾ ಟಂ ಟಂ ವಾಹನಗಳಿಗೆ ಅವಲಂಬಿತರಾಗಬೇಕು. ಗಜೇಂದ್ರಗಡದಲ್ಲಿ ಬಸ್ ಡಿಪೋ ಇದ್ರೂ 3 ಕಿ.ಮೀ ದೂರವಿರುವ ಪುರ್ತಗೇರಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ.

    ರಾಜಕೀಯ ವೈಷ್ಯಮ್ಯದಿಂದ ಊರು ಅಭಿವೃದ್ಧಿಯಾಗದೇ ಜನ ಪರಿತಪಿಸುತ್ತಿದ್ದಾರೆ. ಬೇರೆ ಅಭಿವೃದ್ಧಿ ಬೇಡ ನಮ್ಮ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಿ ಕೊಡಿ ಎಂದು ದೂರದ ಗದಗದಿಂದ ನಮ್ಮ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=oU1jbaXy9Ms