Tag: village

  • ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮೊಬೈಲ್ ಕಸಿದು, ಅಕ್ಕಿಯೊಂದಿಗೆ ಪರಾರಿ – ಕೊಡಗಿಗೆ ಕೆಂಪು ಉಗ್ರರು ಎಂಟ್ರಿ?

    ಮಡಿಕೇರಿ: ಮಧ್ಯ ಭಾರತದಲ್ಲಿ ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ಹೆದರಿ ನಕ್ಸಲರು ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಕಡೆ ವಲಸೆ ಹೋಗುತ್ತಿದ್ದಾರೆ ಎನ್ನುವ ವರದಿಯ ಬೆನ್ನಲ್ಲೇ ಕೊಡಗಿಗೆ ಮತ್ತೆ ಕೆಂಪು ಉಗ್ರರು ಪ್ರವೇಶಿಸಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಜಿಲ್ಲೆಯ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ನಕ್ಸಲರು ಅಕ್ಕಿ ಹಾಗೂ ಮೊಬೈಲ್‍ನೊಂದಿಗೆ ಕಾಡಿನೊಳಗೆ ಪರಾರಿಯಾಗಿದ್ದಾರೆ. ಬೆಟ್ಟದ ತಪ್ಪಲಿನ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಇಂದು ಇಬ್ಬರು ಕೆಂಪು ಉಗ್ರರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದರು. ನಕ್ಸಲರು ಸುಮಾರು 30 ವರ್ಷ ಪ್ರಾಯದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಎಂದು ಶಂಕಿಸಲಾಗಿದೆ. ನಕ್ಸಲರ ತಂಡ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಗ್ರಾಮದ ಕುಟ್ಟಪ್ಪ ಅವರ ಮನೆಗೆ ನುಗ್ಗಿ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಗ್ರಾಮದ ಅರುಣ ಎಂಬವರ ಮನೆಗೂ ನಕ್ಸಲರು ನುಗ್ಗಿದ್ದಾರೆ. ಮನೆಗೆ ನುಗ್ಗಿದ ನಕ್ಸಲರು ಅರುಣ ಅವರ ಪತ್ನಿಯ ಮೊಬೈಲ್ ಕಸಿದು, ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದಾರೆ. ಸದ್ಯ ನಕ್ಸಲರಿಂದ ಬೆಟ್ಟ ತಪ್ಪಲಿನ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೊಡಗು ಪೊಲೀಸ್ ಹಾಗೂ ಎಎನ್‍ಎಫ್ ಪಡೆ ಗ್ರಾಮಕ್ಕೆ ದೌಡಾಯಿಸಿದೆ.

  • ಋತುಮತಿ, ಹೆರಿಗೆಯಾದ್ರೆ 5 ತಿಂಗ್ಳು ಊರಿಂದ್ಲೇ ಹೊರಗಿರ್ಬೇಕು- ಕೊಪ್ಪಳದ ಸಜ್ಜಿಹೊಲದಲ್ಲಿ ಹೆಣ್ಮಕ್ಕಳ ನರಕಯಾತನೆ

    ಋತುಮತಿ, ಹೆರಿಗೆಯಾದ್ರೆ 5 ತಿಂಗ್ಳು ಊರಿಂದ್ಲೇ ಹೊರಗಿರ್ಬೇಕು- ಕೊಪ್ಪಳದ ಸಜ್ಜಿಹೊಲದಲ್ಲಿ ಹೆಣ್ಮಕ್ಕಳ ನರಕಯಾತನೆ

    ಕೊಪ್ಪಳ: ಹೈದ್ರಾಬಾದ್ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆ ಕೊಪ್ಪಳದಲ್ಲಿ ಇನ್ನೂ ಅಸ್ಪೃಶ್ಯತೆ ಎಂಬ ಪಿಡುಗು ಜೀವಂತವಾಗಿದೆ. ಅಸ್ಪೃಶ್ಯತೆ ಜೊತೆಗೆ ಕೊಪ್ಪಳ ನಗರದಲ್ಲಿ ಮತ್ತೊಂದು ಸಾಮಾಜಿಕ ಪಿಡುಗು ಬಯಲಿಗೆ ಬಂದಿದೆ. ಜಿಲ್ಲಾಡಳಿತದಿಂದ ಕೂಗಳತೆ ದೂರದಲ್ಲಿರೋ ಪ್ರದೇಶದಲ್ಲಿ ಅನಿಷ್ಠ ಪದ್ಧತಿಯೊಂದು ಜಾರಿಯಲ್ಲಿದ್ದು, ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಗಮನ ಕೊಟ್ಟಿಲ್ಲ.

    ಪ್ರಪಂಚಕ್ಕೆ ಪ್ರಪಂಚವೇ ಬದಲಾವಣೆಯ ಗಾಳಿಯಲ್ಲಿ ತೇಲುತ್ತಿದೆ. ಆದರೆ ನಮಗೆ ಮಾತ್ರ ಇನ್ನೂ ದಶಕಗಳ ಹಿಂದಿನ ಪದ್ಧತಿಯಲ್ಲಿ ಕೊರಗುವಂತಿದೆ. ಹೌದು. ಕೊಪ್ಪಳ ನಗರದಿಂದ ಸುಮಾರು 3-4 ಕಿಲೋ ಮೀಟರ್ ದೂರದಲ್ಲಿರುವ ಸಜ್ಜಿಹೊಲ ಗ್ರಾಮದಲ್ಲಿ ಹೆಣ್ಮಕ್ಕಳು ತಿಂಗಳ ಋತುಮತಿಯಾದ್ರೆ ಅಥವಾ ಮಗುವಿಗೆ ಜನ್ಮ ನೀಡಿದ್ರೆ 5 ತಿಂಗಳ ಕಾಲ ಬಾಣಂತಿಯನ್ನು ಮುಟ್ಟಿಸಿಕೊಳ್ಳದೆ ಊರ ಹೊರಗಡೆ ಇಡ್ತಾರೆ ಎಂದು ಸ್ಥಳೀಯರಾದ ಗೌರಮ್ಮ ಹೇಳಿದ್ದಾರೆ.

    ಈ ಸಜ್ಜಿಹೊಲ ಗ್ರಾಮದಲ್ಲಿ ಸುಮಾರು 30 ಅಡವಿ ಬೆಂಚರ ಕುಟುಂಬ ವಾಸ ಮಾಡುತ್ತಿದೆ. ಆಸ್ಪತ್ರೆ ಮತ್ತು ಹೊರಜಗತ್ತಿನ ಪರಿಚಯವೇ ಇಲ್ಲದೆ ಹೆಣ್ಮಕ್ಕಳು ಗರ್ಭಿಣಿಯಾದರೆ ತಾವೇ ಹೆರಿಗೆಯನ್ನು ಮಾಡಿಕೊಳ್ಳಬೇಕಾದ ದುಸ್ಥಿತಿ. 5 ತಿಂಗಳು ಮಗುವಿನ ನಿತ್ಯಕರ್ಮ, ಲಾಲನೆಯನ್ನು ನೋಡಿಕೊಳ್ಳಬೇಕು. ಇವರಿಗೆ ಯಾರಾದರೂ ನೆರವಾದರೆ ಅಂತಹವರ ತಲೆಕೂದಲನ್ನು ತೆಗೆಯುವ ಪದ್ಧತಿಯೂ ರೂಢಿಯಲ್ಲಿಟ್ಟುಕೊಂಡಿದ್ದಾರೆ. ಮೂಲ ಸೌಕರ್ಯ ಇಲ್ಲದ ಸಣ್ಣ ಪುಟ್ಟ ಗುಡಿಸಲಿನಲ್ಲಿ ದಿನದೂಡುವಂತಹ ಸ್ಥಿತಿ ಇಲ್ಲಿನ ಹೆಣ್ಮಕ್ಕಳದ್ದಾಗಿದೆ ಎಂಂದು ನಗರಸಭೆ ಸದಸ್ಯ ರಮೇಶ್ ಹೇಳುತ್ತಾರೆ.

    ಒಟ್ಟಾರೆ ಓರ್ವ ಪುರುಷನ ಸರ್ವಸಮನಾಗಿ ನಿಂತಿರುವ ಮಹಿಳೆಗೆ ವಿಶ್ವವೇ ಗೌರವ ನೀಡುತ್ತಿದೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಮಹಿಳೆ ತಾನು ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಎಂದು ಕೊರಗುತ್ತಿದ್ದಾರೆ. ತಮಗೆ ಹೆಣ್ತನ ಕೊಟ್ಟ ದೇವರಿಗೆ ಶಪಿಸುತ್ತಿದ್ದಾರೆ. ಜನಪ್ರತಿನಿಧಿಗಳಾದರೂ ಈ ಜನಾಂಗಕ್ಕೆ ಹೊರಜಗತ್ತು ತೋರಿಸಿ ಅನಿಷ್ಠ ಪದ್ಧತಿ ತೊಲಗಿಸಿ ಬದಲಾವಣೆಯನ್ನು ತರಬೇಕಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಮಂಗಳೂರು: ಅದು ಮಂಗಳೂರಿನ ಹೊರವಲಯದ ನೇತ್ರಾವತಿ ನದಿ ಮಧ್ಯದಲ್ಲಿರುವ ದ್ವೀಪ ಪ್ರದೇಶ. ಸುತ್ತ ನೀರಿನಿಂದ ಆವೃತವಾಗಿರುವ ಈ ದ್ವೀಪದಲ್ಲಿ ನೂರಾರು ಮಂದಿ ವಾಸವಿದ್ದಾರೆ. ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿರುವ ಈ ಕುಗ್ರಾಮ ಸ್ಮಾರ್ಟ್ ಸಿಟಿ ಮಂಗಳೂರಿನ ಆವರಣದಲ್ಲೇ ಇದ್ದರೂ, ಜನರ ಸಂಪರ್ಕಕ್ಕೆ ಸೇತುವೆಯೇ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಸೋತ ಅಲ್ಲಿನ ಜನರು ತಾವೇ ತಾತ್ಕಾಲಿಕ ಸೇತುವೆಯನ್ನು ರೆಡಿ ಮಾಡಿದ್ದಾರೆ. ಹಗ್ಗದ ಮೇಲಿನ ನಡಿಗೆಯಂತಿರೋ ಈ ಸೇತುವೆ ಸಂಚಾರ ಮಾತ್ರ ತುಂಬಾನೇ ಡೇಂಜರಸ್.

    ಸಚಿವ ಯುಟಿ ಖಾದರ್ ಸಿಂಪ್ಲಿಸಿಟಿಗೆ ಮತ್ತೊಂದು ಹೆಸರು. ಮಾನವೀಯತೆ ತೋರೋದರಲ್ಲಿ ಎತ್ತಿದ ಕೈ ಎಂಬ ಮಾತುಗಳನ್ನ ಸಾರ್ವಜನಿಕ ವಲಯದಲ್ಲಿ ಕೇಳಿರುತ್ತೇವೆ. ಆದರೆ ಅವರದ್ದೇ ಕ್ಷೇತ್ರದ ಊರೊಂದರ ಕಣ್ಣೀರ ಕಹಾನಿ ಇಲ್ಲಿದೆ. ಸ್ಮಾರ್ಟ್ ಸಿಟಿಯ ಗರಿ ಸಿಕ್ಕಿಸಿಕೊಂಡಿರುವ ಮಂಗಳೂರು ನಗರದ ಕೂಗಳತೆ ದೂರದಲ್ಲೇ ಇರೋ ಪಾವೂರಿಗೆ ಇನ್ನೂ ಮೂಲಸೌಲಭ್ಯಗಳೇ ಮರೀಚಿಕೆ. ದಿಪದ ಬುಡದಲ್ಲಿ ಕತ್ತಲೇ ಎಂಬಂತೆ ಪಾವೂರು ಇನ್ನು ಕುಗ್ರಾಮವಾಗಿ ಉಳಿದುಕೊಂಡಿದೆ. ನೇತ್ರಾವತಿ ನದಿ ಮಧ್ಯದಲ್ಲಿರುವ ಪಾವೂರು ಎಂಬ ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಬೇಕೆಂದು ನಡೆಸಿರುವ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.

    ಕಬ್ಬಿಣದ ಪೈಪ್ ಮತ್ತು ಹಲಗೆ ಬಳಸಿ ಗ್ರಾಮಸ್ಥರೇ ನಿರ್ಮಿಸಿರುವ ಈ ಸೇತುವೆಯ ಸಂಚಾರ ಹಗ್ಗದ ಮೇಲಿನ ನಡಿಗೆಯಂತಿದ್ದು, ವಿಸ್ತಾರವಾಗಿರುವ ನದಿಯನ್ನು ದಾಟುವುದೇ ಸಾಹಸವಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಇದೇ ಹಲಗೆಯಲ್ಲಿ ಸಂಚರಿಸುತ್ತಿದ್ದು, ದುರಂತಕ್ಕೆ ಆಹ್ವಾನ ನೀಡುವಂತಿದೆ. ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸತತ ಮೂರು ಬಾರಿ ಸಚಿವರಾದರೂ, ಸೇತುವೆಯ ಬೇಡಿಕೆ ಇನ್ನೂ ಅವರ ಅವರ ಕಿವಿ ಮುಟ್ಟಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ದೋಣಿಯಲ್ಲಿ ಸಂಚರಿಸುತ್ತಿದ್ದ ಜನರು ಸದ್ಯಕ್ಕೆ ಹಲಗೆಯ ಸೇತುವೆಯಲ್ಲಿ ಸಾಗುತ್ತಿದ್ದಾರೆ. ಆದರೆ, ಯಾವಾಗ ಬೀಳುತ್ತೋ ಅನ್ನುವ ಭಯದಲ್ಲೇ ಜನ ಓಡಾಡುತ್ತಿದ್ದಾರೆ. ಈ ಸೇತುವೆ ಬೇಸಿಗೆಗೆ ಸೀಮಿತವಾಗಿದ್ದು, ಜೂನ್ ವೇಳೆಗೆ ನದಿ ತುಂಬಿದಾಗ ಜನರು ಮತ್ತೆ ದೋಣಿಯನ್ನೇ ಅವಲಂಬಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಾಣಿಗಳು ಸೇರಿದಂತೆ ಇಡೀ ಗ್ರಾಮವೇ ಖಾಲಿ ಖಾಲಿ

    ಪ್ರಾಣಿಗಳು ಸೇರಿದಂತೆ ಇಡೀ ಗ್ರಾಮವೇ ಖಾಲಿ ಖಾಲಿ

    ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಚೇನಹಳ್ಳಿ ಗ್ರಾಮದಲ್ಲಿ 5 ವರ್ಷಕ್ಕೊಮ್ಮೆ ಮನೆಗಳಿಗೆ ಬೀಗ ಜಡಿದು ಇಡೀ ಊರಿಗೆ ಊರೇ ಖಾಲಿಯಾಗುತ್ತದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮ ಬಿಟ್ಟು ಹೊರಡುವ ಜನರು, ಸಂಜೆವರೆಗೂ ಹಳ್ಳಿಯ ಕಡೆ ಸುಳಿಯುವುದೇ ಇಲ್ಲ.

    ಬಾಚೇನಹಳ್ಳಿ ಗ್ರಾಮದಲ್ಲಿ ಸಾವಿರಾರು ವರ್ಷಗಳಿಂದಲೂ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. 100ಕ್ಕೂ ಹೆಚ್ಚು ಕುಟುಂಬಗಳಿರುವ ಈ ಊರಿನಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಹೊರಬೀಡು ಅನ್ನೋ ಹೆಸರಿನಲ್ಲಿ ಇಡೀ ಗ್ರಾಮದ ಜನರು ಊರು ತೊರೆಯುತ್ತಾರೆ. ಸಂಕ್ರಾಂತಿ ನಂತರದ ಮೊದಲ ಗುರುವಾರ, ಇಡೀ ಊರಲ್ಲಿ ಯಾರೊಬ್ಬರೂ ಇರೋದಿಲ್ಲ. ವಾಸದ ಮನೆಗಳಿಗೆ ಬೀಗ ಹಾಕಿ, ಕೋಳಿ, ಇತರೆ ಸಾಕಪ್ರಾಣಿಗಳು ಓಡಾಡದಂತೆ ಒಂದೆಡೆ ಕೂಡಿ ಹಾಕಲಾಗುತ್ತದೆ.

    ಮಹಿಳೆಯರು ಹಾಗೂ ಮನೆ ಮಂದಿ ಮನೆಯಿಂದ ಹೊರಡುವಾಗಲೇ ಚಿಕನ್ ಅಥವಾ ಮಟನ್ ಊಟ ತಯಾರಿಕೆಗೆ ಬೇಕಾದ ಸಾಂಬಾರ್ ಪದಾರ್ಥ ಹಾಗೂ ಪಡಿತರ ಹೊಂದಿಸಿಕೊಂಡು ಜಮೀನು ಬಳಿ ಪ್ರತ್ಯೇಕವಾಗಿ ಅಡುಗೆ ತಯಾರು ಮಾಡಲಾಗುತ್ತದೆ. ನಂತರ ಒಂದು ಸಮುದಾಯದವರು ನಿರ್ಮಿಸಿದ ಸೋಂಕು ಮಾರಿಯ ಮಣ್ಣಿನ ದೇವರ ಪ್ರತಿಮೆ ಎದುರು ಮುದ್ದೆ ಊಟ ಎಡೆ ಇಟ್ಟು ಪೂಜೆ ಸಲ್ಲಿಸಿ ನಂತರ ನೆಂಟರಿಷ್ಟರ ಜೊತೆ ಕೂಡಿ ಸಾಮೂಹಿಕವಾಗಿ ಊಟ ಮಾಡುತ್ತೇವೆ. ಬಾಣಂತಿಯರು, ನಡೆಯಲಾಗದ ವಯೋವೃದ್ಧರು ಊರ ಹೊರಗಿನ ದೇಗುಲ ಅಥವಾ ಬಸ್ ನಿಲ್ದಾಣಗಳಲ್ಲಿ ಉಳಿದುಕೊಳ್ಳುತ್ತಾರೆ. ಉಳಿದವರು ಊರಿಂದ ಅನತಿ ದೂರ ಹೋಗುತ್ತಾರೆ ಎಂದು ಸ್ಥಳೀಯ ನಿವಾಸಿ ಅಪ್ಪೇಗೌಡ ಹೇಳಿದ್ದಾರೆ.


    ಏನಿದು ಆಚರಣೆ?
    ಹಿಂದಿನ ಕಾಲದಲ್ಲಿ ಸೋಂಕು ಮಾರಿ ರೋಗ ಕಾಣಿಸಿಕೊಂಡು ಇಡೀ ಊರಿಗೆ ಕೇಡಾಗಿತ್ತು. ಹೀಗಾಗಿ ಈ ಆಚರಣೆ ಬಂದಿದೆ. ಇದು ಮರುಕಳಿಸದಿರಲಿ ಅಂತ ಹಿರಿಯರು ನಡೆಸಿಕೊಂಡು ಬಂದಿರುವ ಆಚರಣೆಯನ್ನು ಈಗಿನವರು ಮುಂದುವರಿಸುತ್ತಿದ್ದಾರೆ. ಸೋಂಕು ಮಾರಿಯ ಮೂರ್ತಿ ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ಇಟ್ಟ ನಂತರ ಮಾರಿಯನ್ನು ಊರ ಎಲ್ಲೆ ದಾಟಿಸಿ ಬಂದರೆ ಭವಿಷ್ಯದಲ್ಲಿ ಗ್ರಾಮದ ಜನರಿಗೆ ಒಳ್ಳೆಯದಾಗಲಿದೆ. ಜಾನುವಾರು ಕ್ಷೇಮವಾಗಿರುತ್ತವೆ ಅನ್ನೋ ನಂಬಿಕೆ ಜನರದ್ದಾಗಿದೆ ಎಂದು ದೇವರ ಪ್ರತಿಮೆ ತಯಾರಕ ದಯಾನಂದ್ ತಿಳಿಸಿದ್ದಾರೆ.

    ಬೆಳಗ್ಗೆ ಮನೆ ಬಿಟ್ಟವರು ಸಂಜೆ 5 ಗಂಟೆಗೆ ಊರ ಮುಂದಿನ ದೇಗುಲ ಬಳಿ ಸೇರುತ್ತಾರೆ. ಈ ವೇಳೆ ಪ್ರಾಣಿ ಬಲಿಕೊಟ್ಟು ಒಂದು ಸುತ್ತು ಗುಂಡು ಹಾರಿಸಲಾಗುತ್ತದೆ. ಅದರ ಬೆನ್ನಲ್ಲೇ ಮನೆ ಮುಂದೆ ನೀರು ಹಾಕಿ, ದೀಪ ಹಚ್ಚಿಟ್ಟು ಮೊದಲು ಜಾನುವಾರು ಪ್ರವೇಶ ಮಾಡಿಸಿ, ನಂತರ ಜನರು ಮನೆ ಸೇರುತ್ತಾರೆ ಎಂದು ಗ್ರಾಮದ ಮಹಿಳೆ ಪದ್ಮಾ ತಿಳಿಸಿದ್ದಾರೆ.

    ಗ್ರಾಮದಲ್ಲಿ ಯಾರೊಬ್ಬರೂ ಇಲ್ಲದೇ ಇದ್ದಾಗ, ಹೊರಗಿನವರೂ ಊರು ಪ್ರವೇಶ ಮಾಡುವಂತಿಲ್ಲ. ಇದಕ್ಕಾಗಿ ಹೆಬ್ಬಾಗಿಲಲ್ಲಿ ವ್ಯಕ್ತಿಯೊಬ್ಬರು ಕಾವಲಿರುತ್ತಾರೆ. ಆಧುನೀಕತೆ ಎಷ್ಟೇ ಬೆಳೆದರೂ, ಗ್ರಾಮೀಣ ಜನರು ತಾವು ನಂಬಿಕೊಂಡು ಬಂದಿರುವ, ರೂಢಿ, ಆಚರಣೆಗಳನ್ನು ಎಂದೂ ಕೂಡ ಬಿಡರು ಎಂಬುದಕ್ಕೆ ಈ ಹೊರಬೀಡು ಆಚರಣೆ ಸಾಕ್ಷಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

    ಇಡೀ ಊರನ್ನೇ ತನ್ನ ಹೆಸರಿಗೆ ಮಾಡಿಕೊಂಡ ಪಂಚಾಯ್ತಿ ಸದಸ್ಯ..!- ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ರಾಮಸ್ಥರು

    ಮಂಡ್ಯ: ಸ್ಥಳೀಯ ಶಾಸಕ, ಎಂಎಲ್‍ಸಿಯ ಬೆಂಬಲಿಗನಾಗಿರುವ ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಇಡೀ ಹಳ್ಳಿಯನ್ನೇ ತಮ್ಮ ತಾಯಿಯ ಹೆಸರಿಗೆ ರಿಜಿಸ್ಟಾರ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಗ್ರಾಮದ ಜನ ಹಲವು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ಇದೀಗ ಗ್ರಾಮದಲ್ಲಿರುವ ಮನೆ, ದೇವಾಲಯ, ಸರ್ಕಾರಿ ಶಾಲೆ ಸೇರಿದಂತೆ ಸಂಪೂರ್ಣ ಹಳ್ಳಿಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಕಳೆದುಕೊಳ್ಳುವ ಭೀತಿಯಲ್ಲಿ ತಮ್ಮ ಹಳ್ಳಿಯ ಉಳಿವಿಗಾಗಿ ಬೀದಿಗಿಳಿದು ಪ್ರತಿಭಟನೆಯನ್ನು ಕೂಡ ಮಾಡಿ ಹೋರಾಡುತ್ತಿದ್ದಾರೆ.

    ಗ್ರಾಮದ ಸರ್ವೆ ನಂಬರ್ 190/1 ರಲ್ಲಿ ಬರುವ 4 ಎಕರೆ 16 ಗುಂಟೆ ಜಮೀನು ಮುಜರಾಯಿ ಇಲಾಖೆಗೆ ಸೇರಿದ್ದು, ಶ್ರೀ ಲಕ್ಷ್ಮಿ ದೇವರ ದೇವಸ್ಥಾನಕ್ಕೆ ಜಮೀನನ್ನು ಅರ್ಚಕರ ಹೆಸರಿಗೆ ವಿಲ್ ಮಾಡಲಾಗಿತ್ತು. ಈ ನಾಲ್ಕು ಎಕರೆ 16 ಗುಂಟೆ ಜಮೀನಿನಲ್ಲಿ 1 ಎಕರೆ 16 ಗುಂಟೆ ಜಮೀನನ್ನು ನಿಯಮಾನುಸಾರ ಶಾಲೆ, ದೇವಸ್ಥಾನ ಮತ್ತು ಮನೆ ನಿರ್ಮಿಸಲು ಮದಲಹಳ್ಳಿ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದಲಹಳ್ಳಿಯ ಸುಮಾರು 30 ಕುಟುಂಬಗಳು ಈ ಜಾಗದಲ್ಲಿ ಕಳೆದ 50 ವರ್ಷಗಳ ಹಿಂದೆಯೇ ಮನೆಕಟ್ಟಿಕೊಂಡು ವಾಸವಾಗಿದ್ದಾರೆ.

    ಆದರೆ ಇದೀಗ 4 ಎಕರೆ 16 ಗುಂಟೆ ಸಂಪೂರ್ಣ ಜಮೀನನ್ನು ಶಾಸಕ ಸುರೇಶ್‍ಗೌಡ ಬೆಂಬಲಿಗ ತಾಲೂಕು ಪಂಚಾಯಿತಿ ಸದಸ್ಯ ಹೇಮರಾಜ್ ತನ್ನ ತಾಯಿ ಲಕ್ಷ್ಮಿದೇವಿ ಹೆಸರಿಗೆ ಅಕ್ರಮವಾಗಿ ರಿಜಿಸ್ಟಾರ್ ಮಾಡಿದ್ದಾರೆ. ಅಕ್ರಮ ಎಸಗಲು ಲಕ್ಷ್ಮಿದೇವಿಯ ಸಹೋದರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಶಿಕ್ಷಕ ಸಿ.ಜೆ.ಕುಮಾರ್ ತಮ್ಮ ಪ್ರಭಾವ ಬಳಸಿ ಹೇಮರಾಜ್ ಅವರಿಗೆ ಈ ಅಕ್ರಮ ಮಾಡಲು ಸಹಾಯ ಮಾಡಿದ್ದಾರೆ ಎಂದು ಮದಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

    ಗ್ರಾಮದ 40 ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ಶಾಲೆ, ದೇವಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು ನಾಗಮಂಗಲ ತಹಶಿಲ್ದಾರ್ ನಂಜುಂಡಯ್ಯ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ನ್ಯಾಯ ದೊರಕಿಸಿಕೊಡುವುದಾಗಿ ತಹಶಿಲ್ದಾರ್ ನಂಜುಂಡಯ್ಯ ಭರವಸೆ ನೀಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಆರೋಪ ನಿರಾಕರಿಸುತ್ತಿರುವ ಲಕ್ಷ್ಮಿದೇವಿಯ ತಮ್ಮ, ಶಿಕ್ಷಕ ಸಿ.ಜೆ.ಕುಮಾರ್ ಜಮೀನಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಲಕ್ಷ್ಮಿದೇವಿ ನನ್ನ ಅಕ್ಕನೇ ಆಗಿದ್ದರೂ ಜಮೀನು ಪರಬಾರೆಯಲ್ಲಿ ನಾನು ಯಾವ ಪ್ರಭಾವವನ್ನು ಬಳಸಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಕೇಸ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.

    ಇತ್ತ ಲಕ್ಷ್ಮಿದೇವಿಯ ಮಗ, ತಾಲೂಕು ಪಂಚಾಯ್ತಿ ಸದಸ್ಯ ಹೇಮರಾಜ್ ನಾನು ಕಾನೂನು ಬದ್ಧವಾಗಿ ನನ್ನ ತಾಯಿಯ ಹೆಸರಿಗೆ ಜಮೀನು ಕೊಂಡುಕೊಂಡಿದ್ದೇನೆ. ನನ್ನ ಬಳಿ ಎಲ್ಲ ಸೂಕ್ತ ದಾಖಲೆ ಇದೆ. ಅಲ್ಲಿ ಮನೆ ಕಟ್ಟಿರುವವರೇ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಲಯದ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಅಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ – ಬೆಚ್ಚಿಬಿದ್ದ ಗ್ರಾಮಸ್ಥರು – ವಿಡಿಯೋ ನೋಡಿ

    ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ – ಬೆಚ್ಚಿಬಿದ್ದ ಗ್ರಾಮಸ್ಥರು – ವಿಡಿಯೋ ನೋಡಿ

    ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಕೊಡಿಹಳ್ಳಿಯಲ್ಲಿ ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

    ಗ್ರಾಮದ ಇಗ್ಗಲೂರು ನಾಲೆಯ ಬಳಿ ಹೆಬ್ಬಾವು ಇರುವುದನ್ನು ನೋಡಿದ ಗ್ರಾಮಸ್ಥರು ಗಾಬರಿಯಾಗಿ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದು, ರಾತ್ರಿಯಲ್ಲೇ ಹೆಬ್ಬಾವನ್ನ ರಕ್ಷಿಸಿ ಹತ್ತಿರದ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಬೃಹತ್ ಆಕಾರದ ಹೆಬ್ಬಾವು ಪ್ರತ್ಯಕ್ಷವಾದ ವಿಚಾರ ಗೊತ್ತಾಗುತ್ತಿದಂತೆ ಹೆಬ್ಬಾವನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.

    https://www.youtube.com/watch?v=F38FT-K7k5U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗ್ಗೆ ಜಮೀನಲ್ಲಿ ಆನೆ ಹಿಂಡು ದಾಳಿ – ಸಂಜೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗದ ಗಜಗಾಂಭೀರ್ಯದ ನಡಿಗೆ

    ಬೆಳಗ್ಗೆ ಜಮೀನಲ್ಲಿ ಆನೆ ಹಿಂಡು ದಾಳಿ – ಸಂಜೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗದ ಗಜಗಾಂಭೀರ್ಯದ ನಡಿಗೆ

    ಹಾಸನ: ಬೆಳಂ ಬೆಳಗ್ಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡಿದ್ದ ಆನೆಗಳ ದಾಳಿಗೆ ಕಂಗಾಲಾಗಿದ್ದ ಗ್ರಾಮಸ್ಥರು ಸಂಜೆ ಆಗುತ್ತಿದಂತೆ ಗ್ರಾಮಕ್ಕೆ ಭೇಟಿ ಕೊಟ್ಟ ಒಂಟಿ ಸಲಗ ನೋಡಿ ಆತಂಕ್ಕೆ ಒಳಗಾದ ಘಟನೆ ಜಿಲ್ಲೆಯ ಸಕಲೇಶಪುರದ ಚಿನ್ನಳ್ಳಿಯಲ್ಲಿ ನಡೆದಿದೆ.

    ಗ್ರಾಮಕ್ಕೆ ಏಕಾಏಕಿ ಎಂಟ್ರಿ ಕೊಟ್ಟಿದ್ದ ಒಂಟಿ ಸಲಗ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜೋರಾಗಿ ಘೀಳಿಡುತ್ತಾ ರಾಜರೋಷವಾಗಿ ನಡೆದಾಟಿದೆ. ಒಂಟಿಸಲಗನನ್ನು ಕಂಡ ಕೂಡಲೇ ಗ್ರಾಮಸ್ಥರು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಗ್ರಾಮದ ಯುವಕ ಆನೆ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ಆನೆಯ ಗಾಂಭೀರ್ಯದ ನಡೆಯನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ.

    ಒಂಟಿ ಸಲಗವಾದ ಕಾರಣ ಗ್ರಾಮದ ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ದಾಳಿ ನಡೆಸಿವ ಸಾಧ್ಯತೆಗಳಿತ್ತು. ಆದರೆ ಈ ವೇಳೆ ಯಾರು ಆನೆಗೆ ಅಡ್ಡ ಪಡಿಸದ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರ ನಡೆದಿದೆ. ಅದೃಷ್ಟವಶಾತ್ ಗ್ರಾಮಸ್ಥರು ಬೇಗ ಎಚ್ಚರಗೊಂಡ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಮುಖವಾಗಿ ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ರೈತರ ತೋಟಗಳಿಗೆ ನುಗ್ಗಿರುವ ಆನೆಗಳ ಹಿಂಡು ಬೆಳೆಗಳನ್ನು ನಾಶ ಪಡಿಸಿದೆ. ಒಂಟಿ ಸಲಗ ಗ್ರಾಮ ಪ್ರವೇಶಿಸುವ ಮುನ್ನ ರೈತರ ಹೊಲಗಳಿಗೆ ಸುಮಾರು 16 ಆನೆಗಳ ಹಿಂಡು ದಾಳಿ ನಡೆಸಿದ್ದವು. ಆನೆಗಳ ದಾಳಿಯಿಂದ ಗ್ರಾಮಸ್ಥರ ಬೆಳೆ ನಾಶವಾಗಿದ್ದು, ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

    ಇತ್ತ ಕಳೆದ ಒಂದು ವಾರದಿಂದ ಆನೆ ದಾಳಿಗೆ ಪರಿಹಾರ ನೀಡಿ ಶಾಶ್ವತ ಪರಿಹಾರ ನೀಡಬೇಕೆಂದು ಸಕಲೇಶಪುರ ತಾಲುಕಿನ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಅಂತ್ಯಗೊಂಡಿದೆ. ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಆನೆ ಹಾವಳಿಗೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರದ ಭರವಸೆ ಲಭಿಸಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಸಿಎಂ ಸಭೆಯಲ್ಲಿನ ತೀರ್ಮಾನವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಹೋರಾಟಗಾರರಿಗೆ ತಿಳಿಸಿದ್ದು, ಭರವಸೆ ಶೀಘ್ರ ಈಡೇರಿಸಲು ಗಡುವು ನೀಡಿದ ರೈತರು ಹೋರಾಟ ಅಂತ್ಯಗೊಳಿಸಿದರು.

    https://www.youtube.com/watch?v=bW_PRxClGpE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಪುಣ್ಯಾರಾಧನೆ – ನಾಟಿ ಕೋಳಿ ಸಾಂಬಾರ್, ರಾಗಿ ಮುದ್ದೆ, ಮಟನ್, ಚಿಕನ್ ಚಾಪ್ಸ್

    ಅಂಬಿ ಪುಣ್ಯಾರಾಧನೆ – ನಾಟಿ ಕೋಳಿ ಸಾಂಬಾರ್, ರಾಗಿ ಮುದ್ದೆ, ಮಟನ್, ಚಿಕನ್ ಚಾಪ್ಸ್

    ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ ವಾರವೇ ಕಳೆದಿದ್ದು ಅಭಿಮಾನಿಗಳು ಅಂಬಿಯ ನೆನಪಿನಲ್ಲಿ ಪುಣ್ಯಾರಾಧನೆ (ತಿಥಿ) ಕಾರ್ಯವನ್ನ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಳೂರಿನಲ್ಲಿ ನಡೆಸಿದ್ದಾರೆ.

    ಅಂಬರೀಶ್ ಅಭಿಮಾನಿಗಳು ಹಾಗೂ ಮಳೂರು ಪಟ್ಟಣ ಗ್ರಾಮದ ನಿವಾಸಿಗಳು ಸೇರಿ ಅಂಬರೀಶ್ ಪುಣ್ಯಾರಾಧನೆ ಕಾರ್ಯ ನೆರವೇರಿಸಿದ್ದಾರೆ. ಈ ವೇಳೆ ಅಂಬರೀಶ್ ಫೋಟೋವನ್ನಟ್ಟು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

    ಪುಣ್ಯಾರಾಧನೆ ವೇಳೆ ನಾಟಿ ಕೋಳಿ ಸಾಂಬಾರ್, ರಾಗಿ ಮುದ್ದೆ, ಮಟನ್, ಚಿಕನ್ ಚಾಪ್ಸ್ ಅಡಿಗೆಯನ್ನು ಮಾಡಿ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಊಟ ಬಡಿಸಿದರು.

    ತಿಥಿ ಕಾರ್ಯದಂತೆ ಅಂಬಿ ಫೋಟೋ ಮುಂದೆ ಊಟವನ್ನ ಬಡಿಸಿದ್ದಾರೆ. ಅಂಬರೀಶ್ ನಮ್ಮ ಜೊತೆಯಿಲ್ಲ ಆದರೆ ಅವರನ್ನ ಎಂದಿಗೂ ಮರೆಯಲಾಗಲ್ಲ ಹಾಗಾಗಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಗ್ರಾಮಸ್ಥರು ಪ್ರಾರ್ಥಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ಕದಿಯುವಾಗ ಶಬ್ದ ಓಡಿ ಹೋಗಿ ತಿರುಗಿದ್ರೆ ಹಂದಿ – ಕಾಡುತ್ತಿರುವ ಕಾಲೇಜಿನ ತುಂಟತನ

    ನೆನಪುಗಳನ್ನು ಹಿಡಿಯುವ ಹಂಬಲ. ಆದರೆ ಕೈ ಸಿಗದೇ ಓಡಿ ಹೋಗುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ನೆನಪುಗಳು ಸದಾ ಇರುತ್ತವೆ. ಕೆಲವರಿಗೆ ಸಿಹಿ ನೆನಪುಗಳಾದ್ರೆ ಇನ್ನೂ ಕೆಲವರಿಗೆ ಕಹಿ ನೆನಪುಗಳು ಅಚ್ಚಳಿಯದೇ ಉಳಿದಿವೆ. ಆದರೆ ಮನುಷ್ಯನ ಜೀವನ ಮಾತ್ರ ನೆನಪು ಮತ್ತು ಕನಸಿನ ಮಧ್ಯೆ ಸಾಗುತ್ತದೆ.

    ನನ್ನ ಬದುಕಿನಲ್ಲಿ ಸದಾ ಹಸಿರಾಗಿ ಉಳಿದುಕೊಂಡಿರುವ ಒಂದು ಸಿಹಿ ನೆನಪಿನ ಪುಟ್ಟ ಕಥೆ ನಿಮಗಾಗಿ….

    ನಾನು ಹಳ್ಳಿಯ ಹೊಲ-ಗದ್ದೆ, ಸ್ನೇಹಿತರು, ಜಾತ್ರೆ, ಹಬ್ಬ-ಹರಿದಿನಗಳ ಮಧ್ಯೆ ಅಲೆದಾಡಿ ಬೆಳೆದಿದ್ದೆ. ಆದರೆ ಹುಟ್ಟೂರಿನಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಕಾಲಿಟ್ಟಿದ್ದೆ. ಪಟ್ಟಣಕ್ಕಿಂತ ನಮಗೆ ಪಟ್ಟಣದ ಹಾಸ್ಟೆಲ್ ಒಂದು ಜೈಲು ಎಂದು ಅನ್ನಿಸುತ್ತಿತ್ತು. ಆದರೆ ಮೊದ ಮೊದಲು ಹೊಸ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುವಾಗ ದಿನಗಳು ವರ್ಷಗಳೇ ಕಳೆದಂತೆ ಭಾಸವಾಗುತ್ತಿತ್ತು. ಕಾಲಕ್ರಮೇಣ ದಿನ ಕಳೆದಂತೆ ತರಗತಿಯಲ್ಲಿನ ಸಹಪಾಠಿಗಳು ಮತ್ತು ಹಾಸ್ಟೆಲ್ ನ ಸ್ನೇಹಿತರು ಹತ್ತಿರವಾದರು. ಬಳಿಕ ನಮ್ಮದೇ ಆದ ಗುಂಪು ಮಾಡಿಕೊಂಡು ಕಾಲೇಜ್, ಸುತ್ತಾಟ, ತರಲೆ ಮತ್ತು ಆಟವಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದವು.

    ಆರಂಭದಲ್ಲಿ ಹಾಸ್ಟೆಲ್ ಗೆ ಬಂದಾಗ ಭಾನುವಾರ ಬಂದರೆ ಸಾಕು ಊರಿಗೆ ಹೊರಡಲು ಸಿದ್ಧರಾಗುತ್ತಿದ್ದೆವು. ಆದರೆ ಕೆಲವು ದಿನಗಳ ನಂತರ ಯಾಕಾದರೂ ರಜೆ ಬರುತ್ತದೋ ಎಂದು ಹೇಳುವಂತಾಯಿತು. ಅಷ್ಟರ ಮಟ್ಟಿಗೆ ಸ್ನೇಹಿತರೆಲ್ಲರೂ ಹತ್ತಿರವಾಗಿದ್ದೆವು.

    ಕದ್ದ ಹಣ್ಣು ತುಂಬಾ ರುಚಿ:
    ರಜೆಯ ಒಂದು ದಿನ ಹಾಸ್ಟೆಲ್ ನಲ್ಲಿ ಕ್ರಿಕೆಟ್ ಆಡಿ ಮುಗಿದ ಬಳಿಕ ವರಾಂಡದಲ್ಲಿ ಕುಳಿತು ಸ್ನೇಹಿತರೆಲ್ಲರೂ ಹರಟೆ ಹೊಡೆಯುತ್ತಿದ್ದೆವು. ಈ ಸಮಯದಲ್ಲಿ ನಮ್ಮಲ್ಲೊಬ್ಬ ಗೆಳೆಯ ಹಾಸ್ಟೆಲ್ ಹಿಂದಿನ ತೋಟದಲ್ಲಿರುವ ಹಲಸಿನ ಹಣ್ಣಿನ ಬಗ್ಗೆ ಹೇಳಿದ್ದ. ಮೊದಲೇ ಕಾಲೇಜ್- ಹಾಸ್ಟೆಲ್ ನ ಜೀವನ. ನಮಗೆ ಆ ರಾತ್ರಿಯೇ ಹಲಸಿನ ಹಣ್ಣನ್ನು ಕದಿಯುವ ಯೋಚನೆಯಾಯಿತು.

    ಕೊನೆಗೆ ತಡರಾತ್ರಿಯೇ ಹಣ್ಣು ಕದಿಯಲು ನಿಪುಣ ಕಳ್ಳರಂತೆ ಯೋಜನೆ ರೂಪಿಸಿದೆವು. ಯಾರು ಮರ ಹತ್ತುವರು? ಹಣ್ಣನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವುದು ಯಾರು? ಹಾಗೂ ತೋಟದ ಮಾಲೀಕ ಬರುವುದೊಳಗೆ ಹಿಂದಿರುಗಬೇಕು ಎಂದು ಪಿಸುಗುಟ್ಟುತ್ತಾ ತೋಟಕ್ಕೆ ನುಗ್ಗಿದೆವು. ಶಬ್ದ ಬರದಂತೆ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿದ್ದೆವು. ಆದರೆ ಕೆಲ ಹೊತ್ತಿನಲ್ಲಿ ತೋಟದೊಳಗೆ ಜೋರಾದ ಶಬ್ದ ಕೇಳಿಸಿತು. ಎಲ್ಲರು ತೋಟದ ಮಾಲೀಕ ಬಂದನೆಂದು ಹೆದರಿ ತೋಟದಿಂದ ಕಾಲ್ಕಿತ್ತೆವು.

    ನಾವು ಓಡಿ ಹೋಗುತ್ತಿದ್ದಂತೆ ನಮ್ಮ ಹಿಂದೆಯೇ ಯಾರೋ ಇದ್ದಾರೆಂದು ಭಾಸವಾಯಿತು. ಒಮ್ಮೆ ಎಲ್ಲರೂ ಧೈರ್ಯ ಮಾಡಿ ಹಿಂದೆ ತಿರುಗಿ ನೋಡಿದರೆ ಗುಟುರಾಕುತ್ತಿದ್ದ ಹಂದಿಗಳು. ನಕ್ಕರೇ ತೋಟದ ಮಾಲೀಕ ಬರುತ್ತಾರೆ ಎಂದು ಮನಸಿನಲ್ಲೇ ನಕ್ಕು ಅವುಗಳನ್ನು ಓಡಿಸಿದೆವು. ಬಳಿಕ ಹಲಸಿನ ಹಣ್ಣಿನ ಜೊತೆ ಸಪೋಟ ಹಣ್ಣನ್ನು ಕಿತ್ತು ತೋಟದಿಂದ ಬಂದೆವು. ‘ಕದ್ದು ತಿನ್ನುವ ರುಚಿಯೇ ಬೇರೆ’ ಎಂಬ ಗಾದೆಯಂತೆ ತಂದಿಟ್ಟ ಹಣ್ಣುಗಳು ಕೇವಲ ಮೂರು ದಿನಗಳಲ್ಲಿ ಖಾಲಿಯಾಗುತ್ತಿದ್ದವು. ಯಾರನ್ನು ಕೇಳಿದರು ‘ತಿಂದವರ್ಯಾರು’ ಎಂಬ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು.

    ಹಾಸ್ಟೆಲ್ ನ ಸಪ್ಪೆ ಊಟ ತಿಂದು ಮರಗಟ್ಟಿದ್ದ ನಾಲಗೆಗೆ ರುಚಿ ಬೇಕೆನಿಸಿದಾಗ ಕೋಳಿ ಸುಟ್ಟು ತಿನ್ನುವ ಖಯಾಲಿ. ಉಪ್ಪು-ಖಾರ ಸರಿಯಾಗಿಲ್ಲ ಎಂದರೂ ಹಾಸ್ಟೆಲ್ ಊಟಕ್ಕಿನ್ನ ಮೋಸವಿಲ್ಲ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವಾಗ ಬಿಸಿ ಕೋಳಿ ತುಟಿ ಸುಟ್ಟ ನೆನಪು. ಆದರೆ ಹಳ್ಳಿಯಿಂದ ಕಾಲೇಜಿಗೆ ಈಗ ಬಂದಂತೆ ಭಾವನೆ, ನೋಡಿದರೆ ಕಾಲೇಜು ಜೀವನವೇ ಮುಗಿದು ಹೋಯಿತು.

    ಕದ್ದು ತಿಂದ ಹಣ್ಣು, ತುಟಿ ಸುಟ್ಟ ಕೋಳಿ, ಕಾಲೇಜಿನಲ್ಲಿ ಸ್ನೇಹಿತರ ಕೋಳಿ ಜಗಳ, ಸೆಂಡಾಫ್ ದಿನದ ಹುಚ್ಚು ಕುಣಿತ, ಪಕ್ಕದ ಡಿಪಾರ್ಟ್ ಮೆಂಟಿನ ಊಟ, ಜೂನಿಯರ್ ಗಳ ಹರಟೆ… ಇವೆಲ್ಲವೂ ಈಗ ಬರೀ ನೆನಪು ಮಾತ್ರ…

     – ಪವನ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಅನಂತ್ ಕುಮಾರ್ ದತ್ತು ಪಡೆದ ಗ್ರಾಮದಲ್ಲಿ ನೀರವ ಮೌನ

    ಅನಂತ್ ಕುಮಾರ್ ದತ್ತು ಪಡೆದ ಗ್ರಾಮದಲ್ಲಿ ನೀರವ ಮೌನ

    ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿದ್ದಾಗ ಅನಂತ್ ಕುಮಾರ್ ದತ್ತು ಪಡೆದಿದ್ದ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ.

    ಸಂಸದರ ಆದರ್ಶ ಗ್ರಾಮ ಎಂಬ ಯೋಜನೆಯ ಅಡಿಯಲ್ಲಿ ಅನಂತ್ ಕುಮಾರ್ ಸಹ ಬನ್ನೇರುಘಟ್ಟ ಸಮೀಪ ರಾಗಿ ಹಳ್ಳಿ ಎಂಬ ಗ್ರಾಮ ದತ್ತು ಪಡೆದಿದ್ದರು. ದತ್ತು ಪಡೆದ ಬಳಿಕ ಊರಿನ ಅಭಿವೃದ್ಧಿಗೆ ಕಾಂಕ್ರಿಟ್ ರಸ್ತೆಗಳು, ಫುಟ್ ಪಾತ್, ಸಸಿಗಳು, ಅದಮ್ಯ ಚೇತನದಿಂದ ಮಧ್ಯಾಹ್ನ ಬಿಸಿ ಊಟ, ನೀರಿನ ಟ್ಯಾಂಕ್ ಹಾಗೂ ಮಹಿಳೆಯರು ಸ್ವಉದ್ಯೋಗ ಹೊಂದಲು ಸಹಕಾರಿಯಾದ ಚಪಾತಿ ತಯಾರಿಕಾ ಘಟಕವನ್ನು ತೆರೆದಿದ್ದರು.

    https://twitter.com/KPGanesh/status/1061920530004144129

    ಗ್ರಾಮದ ಅಭಿವೃದ್ಧಿಗೆ ಅನಂತ್ ಕುಮಾರ್ ಹಲವು ಯೋಜನೆಗಳನ್ನು ತಂದಿದ್ದರು, ಗಿಡಗಳನ್ನು ಬೆಳೆಸಿದ್ದರು. ಎಲ್ಲವೂ ಇಂದು ಅನಂತಕುಮಾರ್ ಆಗಲಿಕೆಯನ್ನು ನೆನಪಿಸುತ್ತಿದೆ ಎಂದು ಗ್ರಾಮಸ್ಥರು ನೆನದಿದ್ದಾರೆ.

    ಅನಂತ್ ಕುಮಾರ್ ಪಾರ್ಥಿವ ಶರೀರವನ್ನು ನಿನ್ನೆ ಅವರ ಬಸವನಗುಡಿ ನಿವಾಸದಲ್ಲಿ ಇರಿಸಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ, ರಾಜ್ಯ ನಾಯಕರು ನಿವಾಸಕ್ಕೆ ತೆರಳಿ ಅಂತಿಮ ದರ್ಶನವನ್ನು ಪಡೆದರು. ಇಂದು ಬೆಳಗ್ಗೆ ಬಿಜೆಪಿ ಕಚೇರಿ ಇರಿಸಿದ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    https://twitter.com/KPGanesh/status/1061920948188864513

    https://twitter.com/siddnow/status/1003519223090462720

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews