Tag: village

  • ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಬೇಡಿ: ಅಧಿಕಾರಿಗಳಿಗೆ ಸಚಿವೆ ಖಡಕ್ ವಾರ್ನಿಂಗ್

    ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜಕೀಯ ಮಾಡಬೇಡಿ: ಅಧಿಕಾರಿಗಳಿಗೆ ಸಚಿವೆ ಖಡಕ್ ವಾರ್ನಿಂಗ್

    ಬೆಳಗಾವಿ: ಜನರ ನಡುವೆಯೇ ನೂತನ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.

    ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮ ಮಾಂಜರಿ ಭೇಟಿ ನೀಡಿದ್ದರು. ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನದ ವೇಳೆ ಶಶಿಕಲಾ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಅಲ್ಲದೆ ಪರಿಹಾರ ಕೊಡುವಲ್ಲಿ ರಾಜಕೀಯ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾತನಾಡಿದ ಶಶಿಕಲಾ ಅವರು, ಶೇ.15ರಿಂದ 20ರಷ್ಟು ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ 25 ಸಾವಿರ ರೂ., ಶೇ. 50ರಿಂದ 75ರಷ್ಟು ಮನೆ ಕಳೆದುಕೊಂಡವರಿಗೆ ಅವರಿಗೆ 1 ಲಕ್ಷ ರೂ. ಹಾಗೂ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಅವರಿಗೆ 5 ಲಕ್ಷ ರೂ. ನೀಡಲಾಗುತ್ತೆ. ಈ ಹಣವನ್ನು ಯಾರು ದುರುಪಯೋಗ ಮಾಡದಂತೆ ಪ್ರಮಾಣಿಕವಾಗಿ ಸಂತ್ರಸ್ತರಿಗೆ ಉಪಯೋಗ ಆಗುವಂತೆ ಈ ಊರಿನವರೇ ಅಧಿಕಾರಗಳ ಜೊತೆಗೂಡಿ ಕೆಲಸ ಮಾಡಬೇಕು ಎಂದರು.

    ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ರಾಜಕೀಯ ಮಾಡಬೇಡಿ. ಅವರು ಪ್ರೆಷರ್ ಹಾಕಿದ್ರು, ಇವರು ಪ್ರೆಷರ್ ಹಾಕಿದ್ರು ಎಂದು ನನ್ನ ಬಳಿ ಹೇಳಿದ್ದರೆ ನಾನು ಸುಮ್ಮನೆ ಇರುವುದಿಲ್ಲ. ಅವರು ಹೀಗಂದ್ರು ಇವರು ಹೀಗಂದ್ರು ಎಂದು ನನಗೆ ಸಬೂಬು ನೀಡಿದ್ದರೆ ನಾನು ಸಹಿಸುವುದಿಲ್ಲ. ಅಲ್ಲದೆ, ಈ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಹ ಕ್ರಮ ಜರುಗಿಸುವ ಅಧಿಕಾರ ನನಗಿದೆ. ನನಗೆ ಅಲ್ಲದೆ ಹಿರಿಯ ಅಧಕಾರಿಗಳಿಗೆ, ಸರ್ಕಾರಕ್ಕೆ ಕ್ರಮ ಜರುಗಿಸುವ ಅಧಿಕಾರವಿದೆ ಎಂದು ಹೇಳಿದರು.

  • ನೆರೆಪೀಡಿತ ಗ್ರಾಮವನ್ನು ದತ್ತು ಪಡೆಯಲು ಮುಂದಾದ ಗ್ರಾಮಸ್ಥರು

    ನೆರೆಪೀಡಿತ ಗ್ರಾಮವನ್ನು ದತ್ತು ಪಡೆಯಲು ಮುಂದಾದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ನೆರೆಪೀಡಿತ ಜನರ ಸಂಕಷ್ಟಕ್ಕೆ ಮಿಡಿದ ಬಿಕ್ಕಲಹಳ್ಳಿ ಗ್ರಾಮಸ್ಥರು ನೆರೆಪೀಡಿತ ಗ್ರಾಮವೊಂದನ್ನ ದತ್ತು ಪಡೆಯುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ ತಮ್ಮ ಗ್ರಾಮದ ದೇವಾಲಯದ ಹುಂಡಿಗೆ ಹಣ ಹಾಕಬೇಡಿ, ಬದಲಾಗಿ ನೆರೆ ಸಂತ್ರಸ್ತರಿಗೆ ಹಣ ನೀಡಿ ಎಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಉತ್ತರ ಕರ್ನಾಟಕ ಭಾಗದ ನೆರೆಗೆ ಸ್ಪಂದಿಸಿರುವ ಗೌರಿಬಿದನೂರು ತಾಲೂಕಿನ ಬಿಕ್ಕಲಹಳ್ಳಿ ಗ್ರಾಮಸ್ಥರು ಅಕ್ಕಿ, ಬೇಳೆ, ಚಾಪೆ, ಬಟ್ಟೆ ಸೇರಿದಂತೆ ಜಾನುವಾರುಗಳಿಗೆ ಮೇವು ಸಂಗ್ರಹಣೆ ಮಾಡಿದ್ದಾರೆ. ಸದ್ಯ ಈ ಎಲ್ಲಾ ಅಗತ್ಯ ಸಾಮಾಗ್ರಿಗಳನ್ನ ನೆರೆ ಸಂತ್ರಸ್ತರಿಗೆ ತಲುಪಿಸಲು ಮುಂದಾಗಿದ್ದಾರೆ.

    ಕೇವಲ ಪರಿಹಾರ ಸಾಮಾಗ್ರಿಗಳನ್ನ ಕಳಿಸುವುದಲ್ಲದೇ ನೆರೆಪೀಡಿತ ಗ್ರಾಮವೊಂದನ್ನ ಒಂದು ವರ್ಷಕ್ಕೆ ದತ್ತು ಪಡೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಗ್ರಾಮದ ಯೋಗಮುನೇಶ್ವರಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಲ್ಲಿ ಹುಂಡಿಗೆ ಹಣ ಹಾಕುವ ಬದಲು ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ದೇವಾಲಯಕ್ಕೆ ಬರುವ ಆದಾಯದ ಹಣವನ್ನು ನೆರೆಪೀಡಿತ ಗ್ರಾಮಕ್ಕೆ ಮೀಸಲಿಡಲು ಮುಂದಾಗಿದ್ದಾರೆ ಎಂದು ದೇವಾಲಯದ ಸಂಸ್ಥಾಪಕರಾದ ಮಂಜುನಾಥ್ ತಿಳಿಸಿದರು.

    ಒಂದು ವರ್ಷ ನೆರೆಪೀಡಿತ ಗ್ರಾಮವನ್ನ ದತ್ತು ಪಡೆದು, ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುವುದು ಗ್ರಾಮಸ್ಥರ ಉದ್ದೇಶವಾಗಿದೆ.

  • 2 ಫುಟ್ಬಾಲ್ ಮೈದಾನದಷ್ಟು ಗುಡ್ಡ ಅಗೆದು ತಲಕಾವೇರಿಯಲ್ಲಿ ಅಕ್ರಮ ರೆಸಾರ್ಟ್?

    2 ಫುಟ್ಬಾಲ್ ಮೈದಾನದಷ್ಟು ಗುಡ್ಡ ಅಗೆದು ತಲಕಾವೇರಿಯಲ್ಲಿ ಅಕ್ರಮ ರೆಸಾರ್ಟ್?

    – ಬೆಟ್ಟದಂಚಿನಲ್ಲಿ ಭೂ ಕುಸಿತದ ಭೀತಿ
    – ಜಿಲ್ಲಾಡಳಿತ ಕೂಡಲೇ ಕ್ರಮಕೊಳ್ಳಬೇಕೆಂದು ಗ್ರಾಮಸ್ಥರ ಆಗ್ರಹ

    ಮಡಿಕೇರಿ: ಜೀವನದಿ ಜನ್ಮಸ್ಥಳ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಕೇವಲ ಒಂದು ಕಿ.ಮೀ ದೂರದಲ್ಲಿ ದಟ್ಟಾರಣ್ಯವಿರುವ ಬೆಟ್ಟವನ್ನು ಅಗಾದ ಪ್ರಮಾಣದಲ್ಲಿ ಸಮತಟ್ಟು ಮಾಡಿ, ರೆಸಾರ್ಟ್ ನಿರ್ಮಾಣಕ್ಕೆ ಹುನ್ನಾರ ನಡೆಸಲಾಗಿದೆ.

    ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾಗಮಂಡಲಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಕೇವಲ ಒಂದು ಕಿ.ಮಿ ದೂರದಲ್ಲಿ ದಟ್ಟಾರಣ್ಯವಿರುವ ಬೆಟ್ಟವನ್ನು ಭಾರೀ ಪ್ರಮಾಣದಲ್ಲಿ ಸಮತಟ್ಟು ಮಾಡಿ, ಸುಮಾರು ಎರಡು ಫುಟ್ಬಾಲ್ ಗ್ರೌಂಡಿನಷ್ಟು ಬೆಟ್ಟವನ್ನು ಅಗೆದು, ಟನ್ ಗಟ್ಟಲೆ ಮಣ್ಣನ್ನು ಬೆಟ್ಟದಂಚಿಗೆ ಸುರಿಯಲಾಗಿದೆ.

    ಭಾರೀ ಮಳೆ ಬಂದಾಗ ಈ ಮಣ್ಣು ಕೆಸರಿನರಾಶಿಯಾಗಿ ಬೆಟ್ಟದ ಬುಡದಲ್ಲಿರುವ ಕೋಳಿಕಾಡು ಪೈಸಾರಿಗೆ ನುಗ್ಗಿದೆ. ಇದೀಗ ಬೆಟ್ಟವೇ ಹಲವು ಮೀಟರ್ ದೂರ ಬಿರುಕುಬಿಟ್ಟಿದ್ದು ಮಳೆ ಹೆಚ್ಚಾದರೆ ಯಾವ ಕ್ಷಣದಲ್ಲಿ ಬೇಕಾದರೂ ಭೂ ಕುಸಿತವಾಗಬಹುದು. ಜೊತೆಗೆ ಬೆಟ್ಟವನ್ನು ಕೊರೆದು ಬೃಹತ್ ಕೆರೆಯೊಂದನ್ನು ತೆಗೆಯಲಾಗಿದ್ದು, ಅದರ ದಂಡೆ ಈಗಾಗಲೇ ಬಿರುಕು ಬಿಡಲಾರಂಭಿಸಿದೆ.

    ಒಂದು ವೇಳೆ ನೀರು ತುಂಬಿದ ಬಳಿಕ ಕೆರೆ ಒಡೆದಲ್ಲಿ ಬೆಟ್ಟದ ಅಂಚಿನ ಮನೆಗಳಿಗೆ ಬಹಳಷ್ಟು ಹಾನಿಯಾಗಲಿದೆ ಎಂದು ಗ್ರಾಮಸ್ಥರು ಅಂತಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಂಡು ನಮ್ಮನ್ನು ಕಾಪಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

    ಈ ಸಂಬಂಧ ಭಾಗಮಂಡಲ ಕೂರ್ಗ್ ಕರ್ನಾಟಕ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಕೊಡಗು ಜಿಲ್ಲೆಯಾದ್ಯಂತ ಈ ವಿಡಿಯೋ ವೈರಲ್ ಆಗಿದೆ.

    https://www.facebook.com/Bhagamandalacoorgkarnataka/videos/689544661549369/

  • ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಪ್ರವಾಹಕ್ಕೆ ಹೆದರಿ ಜನ ಸ್ಥಳಾಂತರಗೊಂಡರೂ ಗ್ರಾಮ ಬಿಡದ ಜೈನ ಮುನಿ

    ಬೆಳಗಾವಿ: ಕೃಷ್ಣಾ ನದಿ ಪ್ರವಾಹಕ್ಕೆ ಅಥಣಿ ತಾಲೂಕಿನ ಝುಂಜುರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹಕ್ಕೆ ಹೆದರಿ ಮನೆಗಳಿಗೆ ಬೀಗ ಜಡಿದು ಊರಿಗೆ ಊರೇ ಖಾಲಿಯಾಗಿದ್ದರೂ ಜೈನ ಮಹಾಮುನಿ ಮಾತ್ರ ಗ್ರಾಮ ಬಿಟ್ಟು ಕದಲುತ್ತಿಲ್ಲ.

    ಸಮುದ್ರ ಸೇನ ಮಾಹಾಮುನಿಗಳು ಚಾತುರ್ಮಾಸ್ಯ ಆಚರಣೆಗಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಗ್ರಾಮದ ಬಸ್ತಿಯಲ್ಲಿ ಮುನಿಗಳ ಚಾತುರ್ಮಾಸ್ಯ ಆಚರಣೆ ಮಾಡುತ್ತಿದ್ದು, ಚಾತುರ್ಮಾಸ್ಯ ವ್ರತ ಬಿಟ್ಟು ಗ್ರಾಮದಿಂದ ತೆರಳಲು ಮುನಿಗಳು ಮುಂದಾಗುತ್ತಿಲ್ಲ.

    ಮುನಿಗಳನ್ನು ಬಿಟ್ಟು ಸಂಪೂರ್ಣ ಗ್ರಾಮಸ್ಥರನ್ನು ಪೊಲೀಸರು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಮುನಿಗಳ ನಿಲುವಿನಿಂದ ಜೈನ ಭಕ್ತರು ಕಂಗೆಟ್ಟಿದ್ದಾರೆ. ಬೇರೆ ಕಡೆಗೆ ತೆರಳಿ ಎಂದು ಭಕ್ತರು ಪರಿ ಪರಿಯಾಗಿ ಕೇಳಿಕೊಂಡರೂ ಜೈನ ಮುನಿ ಮಾತ್ರ ಸ್ಥಳ ಬಿಟ್ಟು ಕದಲುತ್ತಿಲ್ಲ.

  • ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಛಾಯಾ ಭಗವತಿ ದೇವಸ್ಥಾನ ಮುಳುಗಡೆ

    ವಿಜಯಪುರ: ಆಲಮಟ್ಟಿ ಜಲಾಶಯದಿಂದ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ವಿಜಯಪುರ ಮುದ್ದೇಬಿಹಾಳ ತಾಲೂಕಿನ ಗಡಿ ಭಾಗದಲ್ಲಿ ಬರುವ ನಾರಾಯಣಪೂರ ಸಮೀಪದ ಛಾಯಾ ಭಗವತಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.

    ಜಲಾವೃತಗೊಂಡ ಕಾರಣ ಛಾಯಾ ಭಗವತಿಗೆ ದೇವಸ್ಥಾನದಲ್ಲಿ ಪೂಜೆ ಸ್ಥಗಿತಗೊಂಡಿದೆ. ಅಲ್ಲದೆ ಪೊಲೀಸರು ಪ್ರವಾಸಿಗರನ್ನು ಮೆಟ್ಟಿಲು ಬಳಿ ತೆರಳದಂತೆ ಕಣ್ಗಾವಲು ಇಟ್ಟಿದ್ದಾರೆ.

    ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಅಡಿ ಇದ್ದು, ಇಂದಿನ ಮಟ್ಟ 517.10 ಅಡಿಯಾಗಿದೆ. ಒಟ್ಟು 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 87.737 ಟಿಎಂಸಿ ನೀರಿನ ಸಂಗ್ರಹವಿದೆ. ಆಲಮಟ್ಟಿ ಜಲಾಶಯದ ಒಳಹರಿವು 3,67,318 ಕ್ಯೂಸೆಕ್ ಇದ್ದರೆ, 3,90,929 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ.

    ಇತ್ತ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯ ಅಲಮೇಲ ತಾಲೂಕಿನ ತಾರಾಪುರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇಂದು ಬೆಳಗ್ಗೆ ತಾರಾಪುರಕ್ಕೆ ತೆರಳುವ ರಸ್ತೆ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ.

    ಗ್ರಾಮದ ಸಂಪರ್ಕ ಸೇತುವೆ ಮೇಲೆ 4 ಅಡಿ ಅಷ್ಟು ನೀರು ನಿಂತಿದ್ದು, ಗ್ರಾಮಸ್ಥರು ವಾಹನಗಳು ಗ್ರಾಮದ ಹೊರಗಡೆ ನಿಲ್ಲಿಸಿದ್ದಾರೆ. ವಾಹನಗಳು ಗ್ರಾಮದ ಒಳಗೆ ಹೋಗಲು ಸಾಧ್ಯವಾಗದ ಕಾರಣ ಜನರು ನಡೆದುಕೊಂಡು ಗ್ರಾಮಕ್ಕೆ ತೆರಳುತ್ತಿದ್ದಾರೆ. ತಾರಾಪುರಕ್ಕೆ ತೆರಳುವ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ನೀರು ಆವರಿಸುತ್ತಿದೆ.

  • ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು – ದ್ವೀಪಗಳಾದ ಹಳ್ಳಿಗಳು

    ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ನೀರು – ದ್ವೀಪಗಳಾದ ಹಳ್ಳಿಗಳು

    ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವುದರಿಂದ ರಾಯಚೂರಿನ ಲಿಂಗಸುಗೂರು ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ಐದು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮ್ಯಾದರಗಡ್ಡಿ, ಕಡದರಗಡ್ಡಿ ನಡುಗಡ್ಡೆ ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗಿವೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗಲೆಲ್ಲಾ ಈ ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗುತ್ತವೆ.

    ನಡುಗಡ್ಡೆ ಗ್ರಾಮಸ್ಥರಿಗೆ ಸಮರ್ಪಕವಾದ ವಸತಿ ಹಾಗೂ ಭೂಮಿ ಸೌಲಭ್ಯ ಸಿಗದೇ ಸ್ಥಳಾಂತರ ಸಾಧ್ಯವಾಗಿಲ್ಲ. ಹೀಗಾಗಿ ನಡುಗಡ್ಡೆ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಲ್ಲಿನ ಯರಗೋಡಿ ಗ್ರಾಮದಿಂದ ಕಡದರಗಡ್ಡಿ ಗ್ರಾಮದ ಮಧ್ಯೆ ಸೇತುವೆ ನಿರ್ಮಿಸಲು 4 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಕಾಮಗಾರಿಗೆ 16 ಕೋಟಿ ರೂ. ಅವಶ್ಯಕತೆ ಇರುವುದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ಲಿಂಗಸುಗೂರು ಶಾಸಕ ಡಿ.ಎಸ್ ಹೂಲಿಗೇರಿ ಹೇಳಿದ್ದಾರೆ.

    https://www.facebook.com/publictv/videos/374289933210694/

  • ಸ್ವಗ್ರಾಮದ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ಘೋಷಿಸಿದ ಕೆಸಿಆರ್

    ಸ್ವಗ್ರಾಮದ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ಘೋಷಿಸಿದ ಕೆಸಿಆರ್

    ಹೈದರಾಬಾದ್: ತಮ್ಮ ಸ್ವಗ್ರಾಮ ಚಿಂತಾಮಡಕ ಗ್ರಾಮದಲ್ಲಿ ನೆಲೆಸಿರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂಪಾಯಿ ಹಣ ನೀಡುವುದಾಗಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಘೋಷಿಸಿದ್ದಾರೆ.

    ಚಿಂತಾಮಡಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿಂತಾಮಡಕ ಗ್ರಾಮದಲ್ಲಿ ಇರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಹಣದಿಂದ ಕೃಷಿಗೆ ಬೇಕಾದ ಅಗತ್ಯ ಉಪಕರಣಗಳನ್ನು ಖರೀದಿಸಿ. ಉತ್ತಮ ಸೌಕರ್ಯವಿರುವ ಮನೆಗಳನ್ನು ಕಟ್ಟಿಸಿಕೊಳ್ಳಿ. ಆಧುನಿಕ ಸೋಲಾರ್ ಶಕ್ತಿಯ ಉಪಕರಣ ಬಳಸಿ, ಈ ಹಣವನ್ನು ಸದುಪಯೋಗ ಮಾಡಿಕೊಳ್ಳಿ ಎಂದಿದ್ದಾರೆ.

    ಅಷ್ಟೇ ಅಲ್ಲದೆ ಗ್ರಾಮದಲ್ಲಿ ರಸ್ತೆ, ದೇಗುಲ ಹಾಗೂ ಇತರೇ ಸೌಕರ್ಯವನ್ನು ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಗಾಗಿ ಅನುದಾನವನ್ನು ಕೂಡ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿದೆ.

    ಇದು ನನ್ನ ಕರ್ತವ್ಯ. ನಿಮಗೆ ಅನುಕೂಲವಾಗಬೇಕು, ಪ್ರತಿಯೊಬ್ಬ ವ್ಯಕ್ತಿ ಕೂಡ ಆರೋಗ್ಯವಾಗಿರಬೇಕು, ಸಿರಿವಂತನಾಗಬೇಕು ಎಂದು ಚಿಂತಾಮಡಕವನ್ನು ಒಂದು ಮಾದರಿ ಗ್ರಾಮವನ್ನಾಗಿಸಬೇಕೆಂಬ ಆಸೆಯನ್ನು ಕೆಸಿಆರ್ ವ್ಯಕ್ತಪಡಿಸಿದರು. ಅಲ್ಲದೆ ಚಿಂತಾಮಡಕದ ಜನರ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ. ರಾಜಕೀಯಕ್ಕೆ ಬರಲು ತೆಲಂಗಾಣ ಚಳುವಳಿ ನಡೆಯಲು ಸಿದ್ಧಿಪೇಟೆ ಪ್ರೇರಣೆ ಎಂದು ಜನರನ್ನು ಕೆಸಿಆರ್ ಅಭಿನಂದಿಸಿದರು.

    ಸಿದ್ಧಿಪೇಟೆ ಅಭಿವೃದ್ಧಿಗೆ 25 ಕೋಟಿ, ರಂಗನಾಯಕ ಸಾಗರ ಕೆರೆ ಅಭಿವೃದ್ಧಿಗೆ 5 ಕೋಟಿ ಮತ್ತು ಸಿದ್ಧಿಪೇಟೆ ವಿಧಾನಸಭೆ ವ್ಯಾಪ್ತಿಗೆ ಬರುವ ಪ್ರತಿ ಪಂಚಾಯ್ತಿಗೂ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೊತೆ ಮುಸ್ತಾಬಾದ್ ಮತ್ತು ಗುಡೂರ್ ಗ್ರಾಮಕ್ಕೆ ತಲಾ 1 ಕೋಟಿ ಹಾಗೂ ಡಬ್ಬಾಕ್ ಗ್ರಾಮಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ಜನರಿಗೆ ಮಾತು ಕೊಟ್ಟಿದ್ದಾರೆ.

    ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ಕೂಡ ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕೆಸಿಆರ್ ಸೂಚಿಸಿದ್ದು, ಮತ್ತೆ ನವೆಂಬರ್ ನಲ್ಲಿ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ.

  • ಜಮೀನಿನ ವಿವಾದಕ್ಕೆ ಗುಂಡಿನ ಮಳೆ- ಮೂವರು ಮಹಿಳೆಯರು ಸೇರಿ 9 ಜನರ ಹತ್ಯೆ

    ಜಮೀನಿನ ವಿವಾದಕ್ಕೆ ಗುಂಡಿನ ಮಳೆ- ಮೂವರು ಮಹಿಳೆಯರು ಸೇರಿ 9 ಜನರ ಹತ್ಯೆ

    ಲಕ್ನೋ: ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಗುಂಡಿಕ್ಕಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶೋನ್‍ಭಂದ್ರಾ ಜಿಲ್ಲೆಯ ಉಭಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖ್ಯಸ್ಥನಾಗಿದ್ದ ಯಾಗ್ಯ ದತ್ ಬೆಂಬಲಿಗರು ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ 19 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು?:
    ಯಾಗ್ಯ ದತ್ ಉಭಾ ಗ್ರಾಮದ ಸಮೀಪದ ಘೋರ್‍ವಾಲ್‍ನಲ್ಲಿ ಎರಡು ವರ್ಷಗಳ ಹಿಂದೆ 36 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದ. ಆದರೆ ಯಾಗ್ಯ ದತ್ ತನ್ನ ಸಹವರ್ತಿಗಳ ಜೊತೆಗೆ ಬುಧವಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದ. ಇದಕ್ಕೆ ಗ್ರಾಮಸ್ಥರು ಭಾರೀ ವಿರೋಧಿಸಿದ್ದರು. ಇದರಿಂದಾಗಿ ಗಲಾಟೆ ಆರಂಭವಾಗುತ್ತಿದ್ದಂತೆ ಯಾಗ್ಯ ದತ್ ಕಡೆಯ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ತಗುಲಿ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 19 ಜನರ ಸ್ಥಿತಿ ಗಂಭೀರವಾಗಿದೆ.

    ಈ ಕೃತ್ಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ 19 ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ.

  • 2022ರ ಒಳಗಡೆ 1.95 ಕೋಟಿ ಮನೆ ನಿರ್ಮಾಣ: ಸೀತಾರಾಮನ್

    2022ರ ಒಳಗಡೆ 1.95 ಕೋಟಿ ಮನೆ ನಿರ್ಮಾಣ: ಸೀತಾರಾಮನ್

    ನವದೆಹಲಿ: 2022ರೊಳಗೆ ಎಲ್ಲರಿಗೂ ಮನೆ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಮುಂದಿನ 3 ವರ್ಷದಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    ಗ್ರಾಮೀಣ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಅಡುಗೆ ಅನಿಲ, ವಿದ್ಯುತ್, ನೀರು ಪೂರೈಕೆ. ಪ್ರತಿ ಮನೆ ನಿರ್ಮಾಣದ ಕೆಲಸದ ಅವಧಿಯನ್ನು 314ರಿಂದ 114 ದಿನಗಳಿಗೆ ಕಡಿತವಾಗಿದೆ.

    ಜಲಶಕ್ತಿ ಸಚಿವಾಲಯ 2024ರೊಳಗೆ ಪ್ರತಿ ಮನೆಗೂ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು. ಶೇ.97ರಷ್ಟು ಜನರಿಗೆ ಎಲ್ಲ ಹವಾಮಾನದಲ್ಲಿಯೂ ಸುರಕ್ಷಿತ ರಸ್ತೆಯನ್ನು ನೀಡುವುದು.

    ಮುಂದಿನ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 1.25 ಲಕ್ಷ ಕಿ.ಮೀ ರಸ್ತೆ ನಿರ್ಮಾಣ. ಈ ಯೋಜನೆಗಾಗಿ 80,250 ಕೋಟಿ ರೂ. ಅನುದಾನ ಮೀಸಲು.

    ಮಾರುಕಟ್ಟೆಗಳಿಗೆ ಮಾರ್ಗ ಕಲ್ಪಿಸುವ ಗ್ರಾಮದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸ್ವಚ್ಛತಾ ಅಭಿಯಾನದಡಿಯಲ್ಲಿ ಕಸ ವಿಂಗಡನೆಯ ವ್ಯವಸ್ಥೆ ಕಲ್ಪಿಸಲಾಗುವುದು.

    ಕೃಷಿ ಉತ್ಪನ್ನಗಳ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ. ಯುವ ಜನತೆಯನ್ನು ಕೃಷಿ ವಲಯದತ್ತ ಆಕರ್ಷಿಸುವುದು ಮತ್ತು ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಮತ್ತು ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಸ್ವಾಲಂಬನೆ ಹೊಂದಿ ರಫ್ತು ಉತ್ತೇಜನ.

    ಉಜಲಾ ಯೋಜನೆಯಡಿ 35 ಕೋಟಿ ಎಲ್‍ಇಡಿ ವಿದ್ಯುತ್ ದೀಪಗಳನ್ನು ಹಂಚಿಕೆ ಮಾಡಲಾಗುವುದು. ಈ ಯೋಜನೆಗಾಗಿ 18 ಸಾವಿರ 341 ಕೋಟಿ ರೂ. ಮೀಸಲು. ಈ ಯೋಜನೆಯಿಂದಾಗಿ ವಿದ್ಯುತ್ ಬಳಕೆಯನ್ನು ಮಿತಿಗೊಳಿಸುವುದು.

    ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರರಾಗುತ್ತಾರೆ. ಹಾಗಾಗಿ ಗ್ರಾಮೀಣ ಕ್ಷೇತ್ರದ ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಸಮಿತಿ ರಚಿಸಲಾಗುವುದು. ಈ ಮೂಲಕ ಗ್ರಾಮೀಣ ವಿಭಾಗದ ಮಹಿಳೆಯರನ್ನು ಅರ್ಥವ್ಯವಸ್ಥೆ ಒಳಗೆ ಕರೆತರುವುದು.

  • ರಸ್ತೆ ಜಾಗದಲ್ಲಿ ಮನೆ ನಿರ್ಮಾಣ- 1 ವರ್ಷದಿಂದ ಗ್ರಾಮಸ್ಥರ ಕಚ್ಚಾಟ

    ರಸ್ತೆ ಜಾಗದಲ್ಲಿ ಮನೆ ನಿರ್ಮಾಣ- 1 ವರ್ಷದಿಂದ ಗ್ರಾಮಸ್ಥರ ಕಚ್ಚಾಟ

    ತುಮಕೂರು: ಒಂದು ವರ್ಷದಿಂದ ಜಿಲ್ಲೆಯ ಶಿರಾ ತಾಲೂಕಿನ ದೇವರಹಳ್ಳಿಯ ಜನರು ನೆಮ್ಮದಿಯಿಂದ ಬದುಕುತ್ತಿಲ್ಲ. ಹಗಲು ರಾತ್ರಿ ಎನ್ನದೆ ಬರೀ ಜಗಳ, ಘರ್ಷಣೆಯಿಂಟ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಒಬ್ಬರ ಮುಖ ಇನ್ನೊಬ್ಬರು ನೊಡದಷ್ಟು ಕಡು ಕೋಪಿಷ್ಟರಾಗಿದ್ದಾರೆ.

    ಹೌದು. ದೇವರಹಳ್ಳಿಯಲ್ಲಿ ಲಕ್ಕಮ್ಮ ಕುದುರಪ್ಪ ಎಂಬವರಿಗೆ ಮನೆ ನಿರ್ಮಾಣವಾಗುತ್ತಿದೆ. ಆದರೆ ಲಕ್ಕಮ್ಮ ಕುದುರಪ್ಪ, ರಸ್ತೆ ಜಾಗ ಒತ್ತುವರಿ ಮಾಡ್ಕೊಂಡು ಮನೆ ಕಟ್ಟುತ್ತಿದ್ದಾರೆ. ಗ್ರಾಮಸ್ಥರು ಮೊದಲೇ ಎಚ್ಚರ ನೀಡಿದ್ದರೂ ಲಕ್ಕಮ್ಮ ಕುಟುಂಬ ಕ್ಯಾರೇ ಎನ್ನದೆ ಮನೆ ಕಟ್ಟಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಗ್ರಾಮಸ್ಥರ ನಡುವೆ ದಿನನಿತ್ಯವೂ ಗಲಾಟೆ ನಡೆಯುತ್ತಲೇ ಇದೆ ಎಂದು ಸ್ಥಳೀಯ ನಿವಾಸಿ ಮಹಂತೇಶ್ ತಿಳಿಸಿದ್ದಾರೆ.

    ಅಕ್ರಮ ಮನೆ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಈಗ ಊರಿನ ಪರಿಸ್ಥಿತಿ ಅರಿತ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದ್ದಾರೆ. ಲಕ್ಕಮ್ಮ ಕುಟುಂಬದ ಮನೆ ಸೇರಿದಂತೆ ರಸ್ತೆ ಒತ್ತುವರಿ ಮಾಡಿಕೊಂಡು ಕಟ್ಟಿದ ಇತರರ ಮನೆಗಳನ್ನೂ ತೆರವುಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಮೋಹನ್ ಕುಮಾರ್ ಭೇಟಿ ಬಳಿಕ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗೆ ಶಾಂತಿ ನೆಲೆಸಿದೆ.