Tag: village

  • ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕು ನಾಶ – ಸರ್ಕಾರದ ನಿಯಮಗಳಿಗೆ ಜನ ಕಂಗಾಲು

    ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕು ನಾಶ – ಸರ್ಕಾರದ ನಿಯಮಗಳಿಗೆ ಜನ ಕಂಗಾಲು

    ಚಿಕ್ಕಮಗಳೂರು: ರಾಜ್ಯ ಸರ್ಕಾರ, ಪರಿಹಾರ-ಪುನರ್ವಸತಿ ಹೆಸರಲ್ಲಿ ಮಲೆನಾಡಿಗರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ. ಏಕೆಂದರೆ ಮಹಾಮಳೆಗೆ ನಿರ್ಗತಿಕರಾದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಆಲೇಖಾನ್ ಹೊರಟ್ಟಿ, ಮಧುಗುಂಡಿ, ದುರ್ಗದಹಳ್ಳಿ, ಮೇಗೂರು, ಮಲೆಮನೆ ಗ್ರಾಮಗಳ ಸ್ಥಳಾಂತರಕ್ಕೆ ಮುಂದಾಗಿದೆ. ಅಲ್ಲದೆ ದಾಖಲೆ ಇರುವವರಿಗಷ್ಟೇ ಜಮೀನು. ಒತ್ತುವರಿದಾರರಿಗೆ ಏನೂ ಸಿಗುವುದಿಲ್ಲ, ಕೇವಲ ಮನೆಯಷ್ಟೆ ಎಂದು ಸರ್ಕಾರ ಹೇಳಿದೆ. ಇದು ನಿರಾಶ್ರಿತರಿಗೆ ಬರಸಿಡಿಲು ಬಡಿದಂತಾಗಿದೆ.

    ಸರ್ಕಾರ ಕೊಟ್ಟ ಜಾಗಕ್ಕೆ ಹೋಗಬೇಕು. ಇಷ್ಟು ವರ್ಷ ವಾಸವಿದ್ದ ಜಾಗದಿಂದ ಏನ್ನನ್ನು ತರದೆವ, ಸರ್ಕಾರ ಕೊಟ್ಟಿದ್ದನ್ನು ತೆಗೆದುಕೊಂಡು ಕೊಟ್ಟ ಜಾಗಕ್ಕೆ ಹೋಗುವಾಗ ಪರಿಹಾರ ಪ್ರಶ್ನಿಸಿ ಕೋರ್ಟಿಗೆ ಹೋಗಲ್ಲವೆಂದು ಸೈನ್ ಮಾಡಿ ಹೋಗಬೇಕು. ಸರ್ಕಾರದ ಈ ರೀತಿ-ನೀತಿಗಳು ಮಲೆನಾಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದ್ದು, ಮುಂದಿನ ದಾರಿ ಕಾಣದೆ ಇಷ್ಟಕ್ಕೆಲ್ಲಾ ಕಾರಣಕರ್ತನಾದ ವರುಣದೇವನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ನಾವು ಕೊಟ್ಟಿದ್ದ ಜಾಗಕ್ಕೆ ಹೋಗಬೇಕು ಎಂದು ಸರ್ಕಾರ ಭೂಮಿ ಕೊಟ್ಟರೆ ಏನ್ ಮಾಡುವುದು ಎಂಬುದು ಮಲೆನಾಡಿಗರ ಆತಂಕ. ಏಕೆಂದರೆ ಅಡಿಕೆ, ಕಾಫಿ, ಮೆಣಸು ಯಾವುದ್ದನ್ನು ಬೆಳೆಯಬೇಕು ಎಂದರೆ ಏಳೆಂಟು ವರ್ಷ ಬೇಕು. ಆ ಏಳೆಂಟು ವರ್ಷ ದುಡಿಯುವುದೋ, ದುಡಿಯುವುದರಲ್ಲಿ ತಿನ್ನುವುದೋ, ಮಕ್ಕಳನ್ನು ಸಾಕುವುದು ಅಥವಾ ತೋಟ ಮಾಡುವುದೋ ಎನ್ನುವುದು ಮಲೆನಾಡಿಗರಿಗೆ ಚಿಂತೆಗೀಡು ಮಾಡಿದೆ.

    ಈಗಾಗಲೇ ಸರ್ಕಾರ 300ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿ ಎಲ್ಲರ ಅಕೌಂಟ್‌ಗೂ ಒಂದೊಂದು ಲಕ್ಷ ಹಣ ಹಾಕಿದೆ. ಕೆಲವರು ಹಣವನ್ನು ಬಳಸಿಕೊಂಡಿದ್ದರೆ, ಮತ್ತೆ ಕೆಲವರು ಬಳಸಿಕೊಂಡಿಲ್ಲ. 300 ಜನರಲ್ಲಿ 40-45 ಜನ ಸರ್ಕಾರದ ನೀತಿಗೆ ಒಪ್ಪಿ ಸಹಿ ಹಾಕಿ ತಲೆ ಮೇಲೆ ಕೈ ಹಾಕಿ ಕೂತಿದ್ದಾರೆ. ಸರ್ಕಾರ ಜಮೀನುಗಳ ದಾಖಲೆ ಇದ್ದವರಿಗೆ ಮಾತ್ರ ಜಮೀನು ಎಂತಿದೆ. ನೆರೆ ವೀಕ್ಷಣೆಗೆ ಬಂದಿದ್ದ ಸಚಿವರು ಯಾರಿಗೂ ಅನ್ಯಾಯ ಮಾಡಲ್ಲ ಎಂದಿದ್ದರು. ಆದರೆ ಇದ್ಯಾವ ನ್ಯಾಯ ಎಂದು ಸರ್ಕಾರವೇ ಉತ್ತರಿಸಬೇಕಿದೆ.

    ಸರ್ಕಾರದ ರೀತಿ-ರಿವಾಜುಗಳು ಜನರ ಕಣ್ಣಲ್ಲಿ ನೀರು ತರಿಸುತ್ತಿದ್ದರೆ, ಅರಣ್ಯ ಇಲಾಖೆ ಮನಸಲ್ಲೇ ಮೊಸರನ್ನು ತಿಂತಿದೆ. ಏಕೆಂದರೆ ಮಲೆನಾಡಲ್ಲಿ ಲಕ್ಷಾಂತರ ಎಕ್ರೆ ಅರಣ್ಯ ಒತ್ತುವರಿಯಾಗಿದೆ. ಇಲಾಖೆಗೆ ಕಂಡಿದ್ದು ಸಣ್ಣವರದ್ದಷ್ಟೆ. ಅಧಿಕಾರಿಗಳು ತೆರವಿಗೆ ಮುಂದಾದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಮಹಾಮಳೆಗೆ ಬೆದರಿ ಜನರೇ ಸರ್ಕಾರದ ನೀತಿಗೆ ಒಪ್ಪಿ ಜಾಗ ಖಾಲಿ ಮಾಡುತ್ತಿದ್ದಾರೆ.

  • ಪತ್ನಿಯನ್ನ ಕೊಲೆಗೈದು, ಮೂರು ದಿನ ಶವದ ಜೊತೆಗೆ ಮಲಗಿದ್ದ ಪತಿ ಅರೆಸ್ಟ್

    ಪತ್ನಿಯನ್ನ ಕೊಲೆಗೈದು, ಮೂರು ದಿನ ಶವದ ಜೊತೆಗೆ ಮಲಗಿದ್ದ ಪತಿ ಅರೆಸ್ಟ್

    ಕಲಬುರಗಿ: ಪತಿಯೊಬ್ಬ ತನ್ನ ಪತ್ನಿಯನ್ನ ಕೊಲೆಗೈದು ಮೃತದೇಹವನ್ನು ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ.

    ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಸಂಗೀತಾ ಸಕ್ಕರಗಿ (35) ಕೊಲೆಯಾದ ಪತ್ನಿ. ಶ್ರೀಶೈಲ್ ಸಕ್ಕರಗಿ (45) ಕೊಲೆಗೈದ ಪಾಪಿ ಪತಿ. ಮಾದನಹಿಪ್ಪರಗಾ ಗ್ರಾಮದ ಮನೆಯಲ್ಲಿ ಶ್ರೀಶೈಲ್ ಶನಿವಾರ ಕೃತ್ಯ ಎಸಗಿದ್ದಾನೆ. ಶವ ಕೊಳೆತ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಶ್ರೀಶೈಲ್ 15 ವರ್ಷಗಳ ಹಿಂದೆಯೇ ಸಂಗೀತಾಳನ್ನು ಮದುವೆಯಾಗಿದ್ದರು. ಮಾದನಹಿಪ್ಪರಗಾ ಗ್ರಾಮದಲ್ಲಿ ಇಬ್ಬರು ಕೂಲಿ ಮಾಡಿಕೊಂಡು ಸಂತೋಷವಾಗಿದ್ದರು. ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎನ್ನುವ ಕೊರಗು ದಂಪತಿಗೆ ಇತ್ತು. ಇತ್ತೀಚಗೆ ಶ್ರೀಶೈಲ್ ಅದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಸಂಬಂಧ ಬೆಳೆಸಿದ್ದ. ಇವರಿಬ್ಬರ ಸಂಬಂಧ ಸಂಗೀತಾಳಿಗೆ ಗೊತ್ತಿದ್ದರು ಕೂಡ ಗೊತ್ತಿಲ್ಲದಂತೆ ಇದ್ದಳು. ಅದನ್ನೇ ದುರುಪಯೋಗಪಡಿಸಿಕೊಂಡಿದ್ದ ಪಾಪಿ ಪತಿ ಶ್ರೀಶೈಲ ಪ್ರತಿನಿತ್ಯ ಮದ್ಯ ಕುಡಿದು ಮನೆಗೆ ಬಂದು ಸಂಗೀತಾಳಿಗೆ ಚಿತ್ರಹಿಂಸೆ ಕೊಡುತ್ತಿದ್ದ. ಶನಿವಾರವೂ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಶ್ರೀಶೈಲ್ ಹೆಂಡತಿಯೊಂದಿಗೆ ಗಲಾಟೆ ಮಾಡಲು ಶುರು ಮಾಡಿದ್ದ. ಬಳಿಕ ಜಗಳ ವಿಕೋಪಕ್ಕೆ ತೆರಳಿ ಹೆಂಡತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

    ಸಂಗೀತಾಳನ್ನು ಕೊಲೆ ಮಾಡಿದ ಪಾಪಿ ಪತಿ ಆಕೆಯ ಮೃತದೇಹವನ್ನು ಮೂಟೆಕಟ್ಟಿ ತನ್ನ ಮನೆಯ ಮಂಚದ ಕೆಳಗೆ ಬಚ್ಚಿಟ್ಟಿದ್ದ. ಬಳಿಕ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಶ್ರೀಶೈಲ್ ಇದ್ದ. ದುರಂತವೆಂದರೆ ಮನೆಯಲ್ಲೇ ಪತ್ನಿಯ ಶವವನ್ನು ಇಟ್ಟು ತನ್ನದೆ ಗ್ರಾಮದಲ್ಲಿ ಸಾವನ್ನಪ್ಪಿದ್ದ ಮತ್ತೊಬ್ಬನ ಅಂತ್ಯಸಂಸ್ಕಾರಕ್ಕೆ ತೆರಳಿ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಮನೆಗೆ ಬಂದು ಸ್ನಾನ ಮಾಡಿದ್ದ. ಅಷ್ಟೇ ಅಲ್ಲದೆ ಆರೋಪಿಯು ತನ್ನ ಪತ್ನಿಯ ಶವದ ಜೊತೆಗೆ ಮನೆಯಲ್ಲೆ ಮೂರು ದಿನ ಮಲಗಿದ್ದ.

    ಸಂಗೀತಾ ಮೂರು ದಿನಗಳಿಂದ ಕಾಣದೆ ಇರುವುದರಿಂದ ಶ್ರೀಶೈಲ್‌ನನ್ನು ಅಕ್ಕ ಪಕ್ಕದ ಮನೆಯವರು ವಿಚಾರಿಸಿದ್ದರು. ಆದರೆ ಆರೋಪಿಯು, ಪತ್ನಿ ತವರು ಮನೆಗೆ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ. ಅದಾದ ಬಳಿಕ ಮನೆಯಿಂದ ಮೃತದೇಹ ಕೊಳೆತ ವಾಸನೆ ಬರಲು ಆರಂಭಿಸಿತು. ಇದಕ್ಕೆ ಮತ್ತೊಂದು ಕತೆ ಕಟ್ಟಿದ ಶ್ರೀಶೈಲ್, ತಾನು ಮದ್ಯ ಕುಡಿದು ಮನೆಯಲ್ಲೇ ವಾಂತಿ ಮಾಡಿಕೊಂಡಿರುವುದಾಗಿ ಹೇಳಿದ್ದ. ಆರೋಪಿಯ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸ್ಥಳೀಯರು ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸಂಗೀತಾ ಮೃತದೇಹ ಪತ್ತೆಯಾಗಿದೆ.

    ಈ ಸಂಬಂಧ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಶೈಲ್‌ನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಕತ್ತಲಲ್ಲಿದ್ದ ಗ್ರಾಮಕ್ಕೆ ಪ್ರಕಾಶಮಾನ ಬೆಳಕು- ಕೋಲಾರದ ತೋರದೇವಂಡಹಳ್ಳಿ ಪಬ್ಲಿಕ್ ಹೀರೋ

    ಕತ್ತಲಲ್ಲಿದ್ದ ಗ್ರಾಮಕ್ಕೆ ಪ್ರಕಾಶಮಾನ ಬೆಳಕು- ಕೋಲಾರದ ತೋರದೇವಂಡಹಳ್ಳಿ ಪಬ್ಲಿಕ್ ಹೀರೋ

    ಕೋಲಾರ: ವಿದ್ಯುತ್ ನಂಬಿ ಸಾಲದ ಸುಳಿಗೆ ಸಿಕ್ಕಿ ಕಂಗಾಲಾಗಿದ್ದ ಗ್ರಾಮ ಪಂಚಾಯ್ತಿಗೀಗ ಹಗಲು ರಾತ್ರಿ ಸೂರ್ಯನ ಬೆಳಕು. ಅಭಿವೃದ್ದಿ ಕಾಣದೆ ಕತ್ತಲಾಗಿದ್ದ ಗ್ರಾಮಕ್ಕೆ ಈಗ ಸೋಲಾರ್ ಶಕ್ತಿ ಬೆಳಕು. ಗ್ರಾಮ ಪಂಚಾಯ್ತಿಯೊಂದರ ಈ ಮಾದರಿ ಐಡಿಯಾ ಸದ್ಯ ಎಲ್ಲರ ಗಮನ ಸೆಳೆಯುವಂತಾಗಿದೆ.

    ಹೌದು. ಕೋಲಾರ ತಾಲೂಕಿನ ತೋರದೇವಂಡಹಳ್ಳಿ ಗ್ರಾಮದಲ್ಲಿರುವ ಇಡೀ ಬೀದಿ ದೀಪಗಳಿಗೆ ಸೋಲಾರ್ ಅಳವಡಿಕೆ ಮಾಡಿ ಕಂಗೊಳಿಸುವಂತೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿಗೆ ಈ ಹಿಂದೆ ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯನ್ನು ನಿವಾರಣೆ ಮಾಡಲು ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಸೋಲಾರ್ ಅಳವಡಿಕೆ ಮಾಡಿ ಶಾಶ್ವತವಾಗಿ ವಿದ್ಯುತ್ ಸಮಸ್ಯೆಯಿಲ್ಲದೆ ಮಾದರಿ ಗ್ರಾಮವನ್ನಾಗಿ ಮಾಡಲಾಗಿದೆ.

    ಕೋಲಾರ ಜಿಲ್ಲೆಯಲ್ಲಿ ತೋರದೇವಂಡಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿಯ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ಪಂಚಾಯ್ತಿ ಒಳಗೆ ದೊಡ್ಡ ಪ್ಯಾನಲ್ ಮತ್ತು ಬ್ಯಾಟರಿಗಳನ್ನು ಅಳವಡಿಕೆ ಮಾಡಿ, ಇಡೀ ಗ್ರಾಮದ ಎಲ್ಲಾ ಬೀದಿ ದೀಪಗಳಿಗೆ ಸೋಲಾರ್ ಸಂಪರ್ಕ ನೀಡಿ ಗ್ರಾಮವನ್ನು ರಾತ್ರಿಯಾಗುತ್ತಿದ್ದಂತೆ ಕಂಗೊಳಿಸುವಂತೆ ಮಾಡಲಾಗಿದೆ. ಮಾತ್ರವಲ್ಲದೆ ತಮಗೆ ಬೇಕಾದಷ್ಟು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್‍ನ್ನ ಮಾರಾಟ ಮಾಡುತ್ತಿದೆ.

    ಗ್ರಾಮ ಪಂಚಾಯ್ತಿಗೆ ಬರುತ್ತಿದ್ದ ಕೋಟಿಗಟ್ಟಲೆ ವಿದ್ಯುತ್ ಬಿಲ್ ಮತ್ತು ಕೊಳವೆ ಬಾವಿಗಳ ಬಿಲ್‍ನಿಂದ ಗ್ರಾಮ ಪಂಚಾಯ್ತಿ ತತ್ತರಿಸಿ ಹೋಗಿತ್ತು. ಬೀದಿ ದೀಪಗಳು ಮತ್ತು ವಿದ್ಯುತ್ ಬಿಲ್‍ಗಳು ವರ್ಷಕ್ಕೆ 1.20 ಕೋಟಿ ಯಷ್ಟು ಪಂಚಾಯ್ತಿಗೆ ವಿದ್ಯುತ್ ಬರುತ್ತಿತ್ತು. ಇದರಿಂದ ಈ ಪಂಚಾಯ್ತಿ ಸೋಲಾರ್ ಸಿಸ್ಟಮ್ ವ್ಯವಸ್ಥೆಯನ್ನ ಕಂಡುಕೊಂಡಿದೆ.

    ಗ್ರಾಮದ ಪಕ್ಕದಲ್ಲಿರುವ ಖಾಸಗಿ ಕಾರ್ಖಾನೆಯ ಸಹಕಾರದಿಂದ ಸಿಎಸ್‍ಆರ್ ಅನುದಾನದಲ್ಲಿ ಸುಮಾರು 18 ಲಕ್ಷ ರೂ.ಗಳ ವೆಚ್ಚದಲ್ಲಿ 5 ಕೆ.ವಿ. ಸೋಲಾರ್ ಗ್ರಾಮ ಪಂಚಾಯ್ತಿ ಮೇಲ್ಛಾವಣಿ ಮೇಲೆ ಅಳವಡಿಕೆ ಮಾಡಿ ಅದರ ಮೂಲಕ ಗ್ರಾಮದಲ್ಲಿರುವ 94 ವಿದ್ಯುತ್ ದೀಪಗಳಿಗೆ ಸಂಪರ್ಕ ನೀಡಿ ರಾತ್ರಿಯಾಗುತ್ತಿದ್ದಂತೆ ವಿದ್ಯುತ್ ಇರಲಿ, ಬಿಡಲಿ ಗ್ರಾಮ ಮಾತ್ರ ಕಂಗೊಳಿಸುತ್ತದೆ. ಜಿಲ್ಲೆಯಲ್ಲಿ ಈ ಗ್ರಾಮ ಸೋಲಾರ್ ಗ್ರಾಮವಾಗಿ ಹೆಸರು ಪಡೆದಿದ್ದು ಇದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಪಂಚಾಯ್ತಿ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.

    ಒಟ್ಟಿನಲ್ಲಿ ಗ್ರಾಮಗಳು ಸ್ವಾವಲಂಬಿಗಳಾದರೆ ಮಾತ್ರ ದೇಶ ಮತ್ತು ರಾಜ್ಯ ಉದ್ಧಾರವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿದ್ದರೆ ಆ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬಹುದು ಎನ್ನುವುದಕ್ಕೆ ತೋರದೇವಂಡಹಳ್ಳಿ ಪಂಚಾಯ್ತಿ ಒಳ್ಳೆಯ ಉದಾಹರಣೆಯಾಗಿ ಮಾದರಿಯಾಗಿದೆ.

  • ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಮೋದಿ ಬಳಿ ಪರಿಹಾರ ಕೇಳಲು ನಿಮ್ಗೆ ಧೈರ್ಯವಿಲ್ಲ – ಸಂಸದರಿಗೆ ಸಂತ್ರಸ್ತರು ಘೇರಾವ್

    ಬೆಳಗಾವಿ: ನಿಮಗೆ ಪ್ರಧಾನಿ ನರೇಂದ್ರ ಮೋದಿ ಬಳಿ ಪರಿಹಾರ ಕೇಳಲು ಧೈರ್ಯವಿಲ್ಲ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಸಂತ್ರಸ್ತರು ಗ್ರಾಮದಿಂದ ಘೇರಾವ್ ಹಾಕಿದ್ದಾರೆ.

    ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ ಅಣ್ಣಾಸಾಬ್ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಿಂದ ಪಾದಯಾತ್ರೆ ಆರಂಭ ಮಾಡಿದ ಸಂಸದರನ್ನು ತಡೆದ ಗಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರವಾಹ ಬಂದು ಎರಡು ತಿಂಗಳಾದರೂ ಯಾರೂ ನಮ್ಮ ಕಷ್ಟ ಕೇಳಲು ಬಂದಿಲ್ಲ. ನಿಮ್ಮ ಸರ್ಕಾರದಿಂದ ಪರಿಹಾರ ಬಂದಿಲ್ಲ ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ಎಲ್ಲ ಮಾಡಿದ್ದಾರೆ. ನೀವೇನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಕೋಪಗೊಂಡ ಸಂಸದರು, ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಸಂತ್ರಸ್ತರನ್ನು ತಳ್ಳಿ ಮುಂದೆ ಹೋಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಬಳಿ ಪರಿಹಾರ ಕೊಡಿಸಲು ನಿಮಗೆ ಧೈರ್ಯವಿಲ್ಲ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಂತ್ರಸ್ತರು ಘೇರಾವ್ ಹಾಕಿದ್ದಾರೆ.

  • ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ

    ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ

    ಹಾಸನ: ಒಂದೆಡೆ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇತ್ತ ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ ನೋಡಿ ಗ್ರಾಮಸ್ಥರು ದಂಗಾಗಿದ್ದಾರೆ.

    ಹೌದು. ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ರಸ್ತೆಗಳಲ್ಲಿ ಗಂಭೀರ ಹೆಜ್ಜೆ ಹಾಕಿ ಜನರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಒಂದು ತುದಿಯಿಂದ ಪ್ರವೇಶಿಸಿದ ಕಾಡಾನೆ, ಊರ ತುಂಬೆಲ್ಲಾ ಸುತ್ತು ಹಾಕಿ ಕಾಫಿ ತೋಟಕ್ಕೆ ಪ್ರವೇಶಿಸಿದೆ. ಗ್ರಾಮದಲ್ಲಿ ಪ್ರತ್ಯೇಕ್ಷವಾದ ಆನೆ ಕಂಡು ಜನರು ಭಯಗೊಂಡಿದ್ದು, ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.

    ಗ್ರಾಮದಲ್ಲಿ ರಾಜಾರೋಷವಾಗಿ ಆನೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆನೆ ಆರಾಮಾಗಿ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು, ಜನರು ಗ್ರಾಮಕ್ಕೆ ಎಂಟ್ರಿ ಕೊಟ್ಟ ಗಜರಾಜನನ್ನು ನೋಡಿ ಗಾಬರಿಗೊಂಡು ಓಡುತ್ತಿರುವ ದೃಶ್ಯಗಳು ಸೆರೆಯಾಗಿದೆ.

  • ಮಳೆಯ ರೌದ್ರಾವತಾರಕ್ಕೆ ಗ್ರಾಮವೇ ಕೆರೆಯಾಯ್ತು

    ಮಳೆಯ ರೌದ್ರಾವತಾರಕ್ಕೆ ಗ್ರಾಮವೇ ಕೆರೆಯಾಯ್ತು

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಡೀ ಗ್ರಾಮದಲ್ಲಿ ನೀರು ಮೊಣಕಾಲುವರೆಗೂ ರಭಸವಾಗಿ ಹರಿಯುತ್ತಿದ್ದು, ಇಡೀ ಗ್ರಾಮ ಕೆರೆಯಾಗಿ ಮಾರ್ಪಾಡಾಗಿದೆ.

    ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಸರ್ಕಾರ ಕಣ್ತೆರೆಯದೇ ಇರೋದಕ್ಕೆ ಜನರು ಆಕ್ರೋಶವನ್ನ ಹೊರಹಾಕಿದ್ದಾರೆ. ಭೀಕರ ಪ್ರವಾಕ್ಕೂ ಪರಿಹಾರ ನೀಡದ ಸರ್ಕಾರ ನಮಗೇನು ಪರಿಹಾರ ನೀಡುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಅಕ್ಕಿ, ಜೋಳ ನಮ್ಮಲ್ಲಿವೆ, ನೀವೇನು ಕೊಡಬೇಡಿ ಎಂದು ಸರ್ಕಾರದ ಕಿವಿ ಹಿಂಡಿದ್ದಾರೆ.

    ಮತ್ತೊಂದೆಡೆ ರಾಯಚೂರಿನ ಯಾಪಲದಿನ್ನಿ ಸೋಲಾರ್ ಪ್ಲ್ಯಾಂಟ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಘಟಕದಿಂದ ಹೊರಬರುವ ನೀರೆಲ್ಲಾ ರೈತರ ಜಮೀನಿಗೆ ನುಗ್ಗಿ ಹತ್ತಿ ಬೆಳೆ ನಾಶವಾಗಿದೆ. ಮಾನ್ವಿ ತಾಲೂಕಿನ ಉಟಕನೂರು ದೋತರಬಂಡಿ ಮಧ್ಯದ ಹಳ್ಳ ತುಂಬಿ ಹರಿಯುತ್ತಿದ್ದು, ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರೆಳಲು ಪರದಾಡುತ್ತಿದ್ದಾರೆ. ಇದರಿಂದ ಪರೀಕ್ಷೆಗಳಿದ್ದರೂ ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೂ ನೀರು ನುಗ್ಗಿ ನೂರಾರು ಎಕ್ರೆ ಬೆಳೆ ಹಾನಿಯಾಗಿದೆ.

  • ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ನಿರಂತರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.

    ಕೊಪ್ಪಳದ ಕುವೆಂಪು ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ ಧಾನ್ಯಗಳು ನೀರಿಗಾಹುತಿಯಾಗಿದೆ. ರಾತ್ರಿ ಇಡೀ ನೀರಿನಲ್ಲೇ ಇದ್ದ ಜನರು, ಮನೆಗಳಿಂದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮಳೆ ಬಂದರೆ ಪ್ರದೇಶದಲ್ಲಿ ನೀರು ತುಂಬುತ್ತದೆ ಎಂದು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

    ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಸೇತುವೆ ಮೇಲೆ ನೀರು ಬಂದಿದ್ದು, ಲಕ್ಷ್ಮೀ ಕ್ಯಾಂಪ್- ಗುಂಡೂರು ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದರು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಗುಂಡೂರು ಗ್ರಾಮಸ್ಥರು ನಿರಾಳರಾಗಿದ್ದಾರೆ. ಯಾಕೆಂದರೆ ಈ ಮೊದಲು ಗ್ರಾಮದ ಹಳ್ಳ ತುಂಬಿದರೆ ಗ್ರಾಮಕ್ಕೆ ನೀರು ನುಗ್ಗುತ್ತಿತ್ತು. ಆದರೆ ಸೇತುವೆ ನಿರ್ಮಾಣದಿಂದ ಹಳ್ಳ ನೀರು ಗ್ರಾಮಕ್ಕೆ ನುಗ್ಗದೆ ಸರಾಗವಾಗಿ ಹರಿಯುತ್ತಿದೆ. ಆದ್ದರಿಂದ ತುಂಬಿದ ಹಳ್ಳ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

  • ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದು ಸರ್ಕಾರಿ ಶಾಲೆಯಲ್ಲೇ ಒಂದು ದಿನ ವಾಸ್ತವ್ಯ ಹೂಡಿ ಸ್ಥಿತಿಗತಿಗಳ ಬಗ್ಗೆ ಅರಿಯಲು ಮುಂದಾಗಿದ್ದಾರೆ.

    ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲೂಕಿನ ಎನ್.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ಸಂಜೆ 6 ಗಂಟೆಗೆ ಗ್ರಾಮದ ಶಾಲೆಗೆ ಆಗಮಿಸಲಿರುವ ಸಚಿವರು, ರಾತ್ರಿ ಇದೇ ಶಾಲೆಯಲ್ಲಿ ತಂಗಲಿದ್ದಾರೆ.

    ಈ ನಡುವೆ ಆರಂಭದಲ್ಲಿ ಗಡಿನಾಡ ಶಾಲೆಗಳ ಪ್ರಚಲಿತ ಸಮಸ್ಯೆಗಳು, ತಾಲೂಕು ಮತ್ತು ಜಿಲ್ಲೆಯ ಶೈಕ್ಷಣಿಕ ವಿಚಾರಗಳ ಕುರಿತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಸದರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿ ರಾತ್ರಿ 10 ಗಂಟೆಗೆ ವಿದ್ಯಾರ್ಥಿಗಳು ನಡೆಸಿಕೊಡುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ.

    ಬಳಿಕ ನಾಳೆ ಬೆಳಗ್ಗೆ 8 ಗಂಟೆಗೆ ಪಾವಗಡ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಗಡಿನಾಡು ಶಾಲೆಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು, ವಳ್ಳೂರು ಹಾಗೂ ತಿರುಮಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡಲಿರುವ ಶಾಲೆಯಲ್ಲಿ ಸರ್ವ ತಯಾರಿ ನಡೆದಿದೆ.

  • ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಬಸವಸಾಗರ ಜಲಾಶಯದಿಂದ 1.75 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಗ್ರಾಮಸ್ಥರಿಗೆ ಎಚ್ಚರಿಕೆ

    ಯಾದಗಿರಿ: ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬರೋಬ್ಬರಿ 1,75,916 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನಾಳೆ ಬೆಳಗ್ಗೆ ವೇಳೆಗೆ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದೆ.

    ನೀರಿನ ಪ್ರಮಾಣ 2 ಲಕ್ಷ ಕ್ಯೂಸೆಕ್ ತಲುಪಿದರೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಲಿದೆ. ಜಿಲ್ಲೆಯ ಶಳಗ್ಗಿ, ದೇವಾಪುರ, ಯಕ್ಷಚಿಂತಿ, ಗೌಡೂರು ಮತ್ತು ಕೊಳ್ಳೂರು ಗ್ರಾಮಗಳು ಮತ್ತೆ ಜಲಾವೃತವಾಗುವ ಭೀತಿ ನಿರ್ಮಾಣವಾಗಿದೆ. ಕೊಳ್ಳೂರು ಬ್ರಿಡ್ಜ್ ಮುಳುಗಡೆಯ ಮಟ್ಟ ತಲುಪಿದ್ದು, ದೇವದುರ್ಗ ಮತ್ತು ಯಾದಗಿರಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಕಳೆದ ಬಾರಿಯ ಪ್ರವಾಹಕ್ಕೆ ನೀಲಕಂಠರಾಯನ ಗಡ್ಡಿ ಸೇತುವೆ ಕೊಚ್ಚಿಹೋಗಿದ್ದು, ಗ್ರಾಮಕ್ಕೆ ವಿದ್ಯುತ್ ಮತ್ತು ಬಾಹ್ಯ ಸಂಪರ್ಕ ಕಡಿತಗೊಂಡು ನಡುಗಡ್ಡೆಯಾಗಿದೆ.

    ನದಿಪಾತ್ರದ ಜಮೀನುಗಳಲ್ಲಿ ನದಿ ನೀರು ಹೊಕ್ಕು ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಈಗಾಗಲೇ ಅಧಿಕಾರಿಗಳು ನದಿಪಾತ್ರದ ಗ್ರಾಮಗಳಲ್ಲಿ ಬಿಡು ಬಿಟ್ಟಿದ್ದು, ಜನರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದಷ್ಟು ಬೇಗ ಮತ್ತೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯುವ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ.

    ನಾರಾಯಣಪುರ ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಯ ಮಾಹಿತಿ ಪ್ರಕಾರ 17 ಗೇಟ್‍ಗಳಿಂದ 1,75,916 ಕ್ಯೂಸೆಕ್ ಹೊರಕ್ಕೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯ ಒಳಹರಿವು 1,40,000 ಕ್ಯೂಸೆಕ್ ಇದ್ದು, ನೀರಿನ ಮಟ್ಟ 491.77 ಮೀ. ಇದೆ. ಜಲಾಶಯದ ಗರಿಷ್ಟ ಮಟ್ಟ 492.25 ಮೀ. ಆಗಿದೆ. ಗರಿಷ್ಟ ಸಂಗ್ರಹ ಸಾಮಥ್ರ್ಯ 33.315 ಟಿಎಂಸಿ ಆಗಿದ್ದು ಪ್ರಸ್ತುತ 31.28 ಟಿಎಂಸಿ ನೀರು ಸಂಗ್ರಹವಾಗಿದೆ.

  • ಉ.ಕ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ – ಹೆದ್ದಾರಿ, ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

    ಉ.ಕ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ – ಹೆದ್ದಾರಿ, ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕರಾವಳಿ ಭಾಗದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

    ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದರಿಂದಾಗಿ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಇತ್ತ ಹೊನ್ನಾವರದ ಮಂಕಿ ಗ್ರಾಮ ಹಾಗೂ ಶರಾವತಿ ನದಿ ತಡದ ಪ್ರದೇಶಗಳಿಗೆ ನೀರು ನುಗ್ಗಿದ್ದು, ಇಡೀ ಗ್ರಾಮವೇ ನೀರಿನಿಂದ ತುಂಬಿ ಹೋಗಿದೆ.

    ಹೊನ್ನಾವರ ತಾಲೂಕಿನ ಗುಳದಕೇರಿಯಲ್ಲಿ ತುರ್ತು ಗಂಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದ್ದು, ನೂರಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ. ಇನ್ನೂ ಎರಡು ದಿನ ಅಬ್ಬರದ ಮಳೆ ಬೀಳುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ನೆರೆ ಪೀಡಿತ ಕದ್ರಾ ಪ್ರವಾಹ ಪ್ರದೇಶಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.