Tag: village

  • ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್ ಜಿಲ್ಲೆಯ ಗ್ರಾಮದಲ್ಲಿ ಶುಕ್ರವಾರ ನಡೆಯಲ್ಲ ಯಾವುದೇ ಶುಭಕಾರ್ಯ

    ಬೀದರ್: ಶುಕ್ರವಾರ ಅಂದ್ರೆ ಶುಭ ದಿನ ಅಂತ ಎಲ್ಲರೂ ಭಾವಿಸ್ತಾರೆ. ಅದಕ್ಕೆ ಸಿನಿಮಾಗಳು ತೆರೆಗೆ ಅಪ್ಪಳಿಸಿದ್ರೆ, ಹಲವೆಡೆ ದೇವಿ ಪೂಜೆ ನಡೆಸ್ತಾರೆ. ಮುಸ್ಲಿಮರು ನಮಾಜ್ ಮಾಡಿ ಪ್ರಾರ್ಥಿಸುತ್ತಾರೆ. ಆದ್ರೆ ಬೀದರ್ ಜಿಲ್ಲೆಯ ಫತ್ತೇಪೂರ್ ಗ್ರಾಮದಲ್ಲಿ ಶುಕ್ರವಾರ ಯಾವುದೇ ಶುಭಕಾರ್ಯಗಳು ನಡೆಯಲ್ಲ.

    ಫತ್ತೆಪೂರ್ ಗ್ರಾಮದ ಜನರಿಗೆ ‘ಶುಕ್ರವಾರ’ ಅಂದ್ರೆ ಕರಾಳ ದಿನ. 100 ವರ್ಷದಿಂದ ಇಲ್ಲಿ ಶುಭಕಾರ್ಯ ನಡೆದಿಲ್ಲ ಎಂಬುವುದು ಗ್ರಾಮಸ್ಥರ ಮಾತು. ಇದೆಲ್ಲ ಮೂಢನಂಬಿಕೆ ಅಂತ ಲಕ್ಷ್ಮಿ ಎಂಬವರಿಗೆ ವರ್ಷದ ಹಿಂದೆ ಶುಕ್ರವಾರ ಮದುವೆ ಮಾಡಲಾಯ್ತು. ಮದುವೆ ಮಾಡಿದ 15 ದಿನಗಳಲ್ಲಿ ಲಕ್ಷ್ಮಿ ಸಾವನ್ನಪ್ಪಿದ್ದರು. 3 ವರ್ಷಗಳ ಹಿಂದೆ ಅಣ್ಣರೈ ಎಂಬವರು ಮಗವಿನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದರಿಂದ ಒಂದು ವಾರದಲ್ಲಿ ಅಣ್ಣರೈ ಸಾವನ್ನಪ್ಪಿದ್ದಾರೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

    ಬಹುಮನಿ ಸಾಮ್ರಾಜ್ಯದ ಕಾಲದಲ್ಲಿ ಮಹಮ್ಮದ್ ಗವಾನನ ಗುರುಗಳಾಗಿದ್ದ ಫಕುರಲ್ ಗಿಲಾನಿ ಕಾರಣಾಂತರದಿಂದ ಮೃತಪಟ್ಟಿದ್ದರು. ಗ್ರಾಮದಲ್ಲೇ ನನ್ನ ಅಂತ್ಯ ಸಂಸ್ಕಾರ ಆಗಬೇಕು ಅಂಥ ಫಕುರಲ್ ಗಿಲಾನಿ ಆಸೆ ಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಬಂದ್ರೆ ಸಾಕು, ಊರ ಜನರನ್ನ ಗಿಲಾನಿ ಶಾಪವಾಗಿ ಕಾಡ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಯಾವುದೊ ಕಾರಣಕ್ಕೆ ಜನರು ಸಾವನ್ನಪ್ಪಿದ್ರೆ ಅದನ್ನ ಶುಕ್ರವಾರಕ್ಕೆ ತಳಕು ಹಾಕಿ ಆತಂಕದಿಂದಿರೋದು ವಿಚಿತ್ರ. ಗ್ರಾಮಸ್ಥರಿಗೆ ವಿಚಾರವಾದಿಗಳು, ಬುದ್ಧಿವಂತರು ಬುದ್ಧಿ ಹೇಳಿ ಮೂಢನಂಬಿಕೆಯನ್ನ ದೂರವಾಗಿಸಬೇಕಿದೆ.

  • ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಗ್ರಾಮ ದತ್ತು ಪಡೆದ ಸಿನಿಮಾ ತಂಡ

    ಬಾಗಲಕೋಟೆ: ಸಿನಿಮಾ ತಂಡವೊಂದು ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದುಕೊಂಡು ಮಾದರಿಯನ್ನಾಗಿ ಮಾಡಲು ಮುಂದಾಗಿದೆ.

    ‘ಥರ್ಡ್ ಕ್ಲಾಸ್’ ಸಿನಿಮಾದ ನಾಯಕ ಜಗದೀಶ್ ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಇವರಿಗೆ ಸಿನಿಮಾ ತಂಡ ಕೂಡ ಸಾಥ್ ನೀಡಿದೆ. ಇತ್ತೀಚೆಗೆ ಮಲ್ಲಪ್ರಭಾ ನದಿಯ ಪ್ರವಾಹದಿಂದ ಹಾನಿಯಾಗಿದ್ದ ಕರ್ಲಕೊಪ್ಪ ಗ್ರಾಮದಲ್ಲಿ ಶಾಲೆಯ ಕಟ್ಟಡ ಸೇರಿದಂತೆ, ರಸ್ತೆ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಈ ಸಿನಿಮಾ ತಂಡ ಮುಂದಾಗಿದೆ.

    ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಕ್ಕೆ ಸಿನಿಮಾ ಪ್ರಚಾರಕ್ಕೆ ಆಗಮಿಸಿದ ಚಿತ್ರದ ನಾಯಕ ನಮ್ಮ ಜಗದೀಶ್ ಹಾಗೂ ನಟಿ ರೂಪಿಕಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರವಾಹದಿಂದ ಹಾನಿಯಾದ ಮಕ್ಕಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸಿನಿಮಾ ತಂಡ ಗ್ರಾಮ ವಾಸ್ತವ್ಯ ಮಾಡಿ, ಜಾಗೃತಿ ಮೂಡಿಸುವ ಜೊತೆಗೆ ವಿವಿಧ ಬಗೆಯ ಅಭಿವೃದ್ಧಿ ಕಾರ್ಯಗಳಿಂದ ಸಮಾಜ ಸುಧಾರಣೆ ಮಾಡಲು ಮುಂದಾಗಿದ್ದಾರೆ.

  • ಬೆಟ್ಟದಿಂದ ಉರುಳುವ ಹಂತದಲ್ಲಿ ಬಂಡೆ – ಗ್ರಾಮಸ್ಥರಲ್ಲಿ ಆತಂಕ

    ಬೆಟ್ಟದಿಂದ ಉರುಳುವ ಹಂತದಲ್ಲಿ ಬಂಡೆ – ಗ್ರಾಮಸ್ಥರಲ್ಲಿ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸುರಿದ ಮಹಾಮಳೆ, ಈ ಎರಡು ವರ್ಷವೂ ಅನಾಹುತಗಳನ್ನೇ ಸೃಷ್ಟಿಸಿತ್ತು. ಆದರೆ ಮಳೆ ನಿಂತರೂ ಮಳೆಹನಿ ಮಾತ್ರ ನಿಲ್ಲಲ್ಲ ಅನ್ನೋ ಹಾಗೆ, ಮಳೆಗಾಲ ಮುಗಿದು ಮೂರು ತಿಂಗಳಾದ್ರೂ ಮಳೆಯಿಂದ ಆಗುತ್ತಿರುವ ಅನಾಹುತಗಳು ಮಾತ್ರ ಮುಂದುವರಿಯುತ್ತಲೇ ಇವೆ.

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲೇನಹಳ್ಳಿಯ ಉಣುಗಲು ಬೆಟ್ಟದಲ್ಲಿರುವ ಭಾರೀ ಗಾತ್ರದ ಮೂರು ಬಂಡೆಗಳು ಉರುಳಿ ಬೀಳುವ ಸ್ಥಿತಿಯಲ್ಲಿವೆ. ಸುಮಾರು 100 ಅಡಿಯಷ್ಟು ಎತ್ತರವಿರುವ ಈ ಬೆಟ್ಟದ ಮೇಲೆ ಸಾಕಷ್ಟು ಬಂಡೆಕಲ್ಲುಗಳಿದ್ದು, ಅವುಗಳ ಪೈಕಿ ಮೂರು ಬಂಡೆಗಳು ಕೆಳಕ್ಕೆ ಉರುಳುವ ಸ್ಥಿತಿಯಲ್ಲಿವೆ.

    ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಈ ಬಂಡೆಗಳು ಒಂದೆಡೆಗೆ ಬಾಗಿವೆ. ಅದರಲ್ಲೂ ಒಂದು ಬಂಡೆ ಸುಮಾರು ಎರಡು ಅಡಿಯಷ್ಟು ಬಾಗಿದ್ದು ಈ ಬಂಡೆ ಉರುಳಿದ್ದಲ್ಲಿ ಉಳಿದ ಎರಡೂ ಬಂಡೆಗಳು ಉರುಳುತ್ತವೆ. ಒಂದು ವೇಳೆ ಬಂಡೆಗಳು ಹೀಗೆ ಉರುಳಿದ್ದೇ ಆದಲ್ಲಿ ಬೆಟ್ಟದ ತಪ್ಪಲಿನಲ್ಲೇ ಇರುವ 80 ಮನೆಗಳ ಪೈಕಿ 60 ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಆತಂಕದಲ್ಲಿ ಬದುಕುತ್ತಿದ್ದಾರೆ. ಮಲ್ಲೇನಹಳ್ಳಿಯಲ್ಲಿ 80 ಮನೆಗಳಿದ್ದು ಬಂಡೆಗಳು ಉರುಳಿಬಿದ್ದಲ್ಲಿ, ಕನಿಷ್ಠ 60 ಮನೆಗಳು ನಾಶವಾಗಿಬಿಡುತ್ತವೆ.

    ಅನಾದಿಕಾಲದಿಂದ ಈ ಬೆಟ್ಟದ ಮೇಲೆ ಬಂಡೆಗಳಿದ್ದರು ಇದೂವರೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಸುರಿದ ಮಳೆಗೆ ಬಂಡೆಕಲ್ಲುಗಳು ಒಂದೆಡೆಗೆ ಜಾರಿವೆ. ಕಳೆದ 15 ದಿನಗಳ ಹಿಂದೆ ಗ್ರಾಮದ ಗುರು ಬಸಪ್ಪ ಎಂಬವರು ಬೆಟ್ಟದ ಮೇಲೆ ಹೋದಾಗ ಬಂಡೆಗಳು ಒಂದೆಡೆಗೆ ಬಾಗಿರುವುದನ್ನು ಕಂಡಿದ್ದಾರೆ. ಕೂಡಲೇ ಗ್ರಾಮಕ್ಕೆ ಬಂದು ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಗ್ರಾಮದ ಜನರು ಹಗಲು ರಾತ್ರಿ ಎನ್ನದೇ ಬಂಡೆಗಳು ಯಾವಾಗ ಉರುಳಿ ಬೀಳುತ್ತವೆಯೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.

    ಈ ಗ್ರಾಮದಲ್ಲಿ ಎಲ್ಲರೂ ಕೂಲಿ ಕೆಲಸ ಮಾಡುವವರಾಗಿದ್ದು, ಮನೆಯಲ್ಲಿ ಮಕ್ಕಳು, ವೃದ್ಧರು ಇದ್ದಾರೆ. ಒಂದು ವೇಳೆ ಬಂಡೆಗಳು ಉರುಳಿದಲ್ಲಿ ದೊಡ್ಡ ಅನಾಹುತವೇ ಸಂಭವಿಸಿ ಬಿಡುತ್ತದೆ. ಹೀಗಾಗಿ ರಾತ್ರಿ ನೆಮ್ಮದಿಯಿಂದ ನಿದ್ದೆಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬಂಡೆಯನ್ನು ತೆರವು ಮಾಡಬೇಕು ಎನ್ನೋದು ಜನರ ಒತ್ತಾಯವಾಗಿದೆ.

  • ಬಿಎಸ್‍ಎನ್‍ಎಲ್ ಟವರ್‌ಗಾಗಿ ಡೀಸೆಲ್ ದಾನ ಮಾಡಿ- ಗ್ರಾಮಸ್ಥರ ಅಳಲು

    ಬಿಎಸ್‍ಎನ್‍ಎಲ್ ಟವರ್‌ಗಾಗಿ ಡೀಸೆಲ್ ದಾನ ಮಾಡಿ- ಗ್ರಾಮಸ್ಥರ ಅಳಲು

    ಕಾರವಾರ: ವಿವಿಧ ರೀತಿಯ ಉದ್ದೇಶಗಳಿಗೆ ದಾನ ಕೇಳುವುದನ್ನು ನೋಡಿದ್ದೇವೆ. ಆದರೆ ಡೀಸೆಲ್ ಕೊರತೆಯಿಂದ ಬಿಎಸ್‍ಎನ್‍ಎಲ್ ಟವರ್ ಕಾರ್ಯನಿರ್ವಹಿಸದ್ದಕ್ಕೆ ಗ್ರಾಮಸ್ಥರು ಡೀಸೆಲ್ ದಾನ ಮಾಡುವಂತೆ ಕೇಳುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆ ಶಿರಸಿಯ ತಾರಗೋಡಿ ಇಂತಹದ್ದೊಂದು ಪ್ರಸಂಗ ನಡೆದಿದ್ದು, ಶಿರಸಿಯಿಂದ ಮುಂಡಗೋಡಿಗೆ ಹೋಗುವ ಮಾರ್ಗದಲ್ಲಿ 15 ಕಿ.ಮೀ ಕ್ರಮಿಸಿದರೆ ತಾರಗೋಡು ಗ್ರಾಮ ಸಿಗುತ್ತದೆ. ಸಂಪೂರ್ಣ ಅರಣ್ಯ ಇರುವುದರಿಂದ ಈ ಭಾಗದಲ್ಲಿ ಖಾಸಗಿ ಮೊಬೈಲ್ ಕಂಪನಿಗಳ ಸಿಗ್ನಲ್ ಸಿಗುವುದಿಲ್ಲ. ಹೀಗಾಗಿ ಅನೇಕ ಜನರು ಸರ್ಕಾರಿ ಸಾಮ್ಯದ ಬಿಎಸ್‍ಎನ್‍ಎಲ್ ಮೊಬೈಲ್ ಟವರ್ ನಂಬಿಕೊಂಡಿದ್ದಾರೆ. ಸ್ಥಿರ ದೂರವಾಣಿ ಸಹ ಇಲ್ಲಿನ ಮನೆಗಳಲ್ಲಿ ಇಲ್ಲ. ಹೀಗಾಗಿ ಇನ್ನೂ 2ಜಿ, 3ಜಿ ಜಮಾನದಲ್ಲಿರುವ ಬಿಎಸ್‍ಎನ್‍ಎಲ್ ನಂಬರ್ ನಿಂದ ಕಾಲ್ ಮಾಡಿ ಮಾತನಾಡಲು ಕಷ್ಟಪಡವ ಪರಿಸ್ಥಿತಿ ಇದೆ.

    ಊರಿನ ಸಮೀಪದಲ್ಲಿರುವ ಬಹಿರುಂಬೆ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಟವರ್ ಇದೆ. ಆದರೆ ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಆಗ ಮಾತ್ರ ಸಿಗ್ನಲ್ ನೀಡುತ್ತದೆ. ಹಳ್ಳಿಯಾದ್ದರಿಂದ ದಿನಕ್ಕೆ ನಾಲ್ಕೈದು ಬಾರಿ ವಿದ್ಯುತ್ ಕಡಿತಗೊಳ್ಳುತ್ತದೆ. ಹೀಗಾಗಿ ಮೊಬೈಲ್ ಸಿಗ್ನಲ್ ಸಿಗದೆ ಊರಿನ ಜನ ಮೊಬೈಲ್ ಸಂಪರ್ಕವನ್ನೇ ಕಡಿದುಕೊಂಡಿದ್ದಾರೆ.

    ಈ ಕುರಿತು ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಮನವಿ ಮಾಡಿ ಗ್ರಾಮಸ್ಥರು ಸುಸ್ತಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸಾಕಷ್ಟು ಬಾರಿ ಗಲಾಟೆಯನ್ನೂ ಮಾಡಿದ್ದಾರೆ. ಆದರೆ ಆರು ತಿಂಗಳಿಂದ ಸಂಬಳವೇ ಆಗದ ಬಿಎಸ್‍ಎನ್‍ಎಲ್ ಸಿಬ್ಬಂದಿ, ಸಂಸ್ಥೆಯಿಂದ ಡೀಸೆಲ್ ಕೊಟ್ಟರೆ ವಿದ್ಯುತ್ ಇಲ್ಲದ ಸಮಯದಲ್ಲಿ ಜನರೇಟರ್ ಆನ್ ಮಾಡುತ್ತೇವೆ ಎಂದು ಕೈ ಚಲ್ಲಿ ಕುಳಿತಿದ್ದಾರೆ. ಹೀಗಾಗಿ ತಾರಗೋಡಿನ ಜನ ಬಿಎಸ್‍ಎನ್‍ಎಲ್ ಟವರ್ ಜನರೇಟರ್ ಆನ್ ಮಾಡಲು ಖುದ್ದು ದಾನಿಗಳ ಮೊರೆಹೋಗಿದ್ದಾರೆ. ಊರಿನ ರಸ್ತೆ ಬಳಿ ಖಾಲಿ ಡೀಸೆಲ್ ಬ್ಯಾರಲ್ ಇಟ್ಟು ಅದರ ಮೇಲೆ ಬಿಎಸ್‍ಎನ್‍ಎಲ್ ಟವರ್ ಜನರೇಟರ್‍ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಡಿಸೆಲ್ ದಾನ ಮಾಡಿ ಎಂದು ಬರೆದಿದ್ದಾರೆ.

  • ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಕ್ಕೆ ಮದ್ವೆಯಾಗುವಂತೆ ದುಂಬಾಲು

    ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಕ್ಕೆ ಮದ್ವೆಯಾಗುವಂತೆ ದುಂಬಾಲು

    – ಮನನೊಂದ ಯುವಕ ಆತ್ಮಹತ್ಯೆಗೆ ಶರಣು

    ಚಿತ್ರದುರ್ಗ: ಅಪ್ರಾಪ್ತ ಮಗಳ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಯುವಕನಿಗೆ ಪೋಷಕರು ಬೆದರಿಕೆ ಹಾಕಿ, ಮದುವೆಯಾಗುವಂತೆ ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದಲ್ಲಿ ನಡೆದಿದೆ.

    ಆಯಿತೋಳು ಗ್ರಾಮದ ಪ್ರಹ್ಲಾದಪ್ಪ ಅವರ ಮಗ ಅಭಿಷೇಕ್ ಆತ್ಮಹತ್ಯೆಗೆ ಶರಣಾದ ಯುವಕ. ಅಭಿಷೇಕ್ ತನ್ನ ಸ್ನೇಹಿತರೊಂದಿಗೆ ಡಿಸೆಂಬರ್ 27ರಂದು ಗಂಜಿಗಟ್ಟೆ ಬೆಟ್ಟದಲ್ಲಿರುವ ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಬಾಲ್ಯದ ಗೆಳತಿಯ ಹುಟ್ಟುಹಬ್ಬದ ಪಾರ್ಟಿಗೆ ತೆರಳಿದ್ದ. ಆಗ ಇಲ್ಲ ಸಲ್ಲದ ಅನುಮಾನದಿಂದ ದಿಢೀರ್ ಸ್ಥಳಕ್ಕೆ ಧಾವಿಸಿದ ಅಪ್ರಾಪ್ತ ಬಾಲಕಿಯ ತಂದೆ ಹಾಗೂ ಮಾವ ಸೇರಿ ಅಭಿಷೇಕ್‍ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಭಿಷೇಕ್‍ನ ಸ್ನೇಹಿತ ಆಟೋ ಚಾಲಕ ಶ್ರೀಧರ್ ಹಾಗೂ ತಂದೆ ಪ್ರಹ್ಲಾದಪ್ಪ ಅವರನ್ನು ಎಳೆದು ತಂದು ಮೂರು ದಿನಗಳ ಕಾಲ ಮನೆಯೊಂದರಲ್ಲಿ ಆಟೋ ಸಹಿತ ಕೂಡಿ ಹಾಕಿದ್ದರು.

    ನೀವು ಪದೇ ಪದೇ ನಮ್ಮ ಮಗಳನ್ನು ಆಟೋ, ಬೈಕ್‍ಲ್ಲಿ ಕೂರಿಸಿಕೊಂಡು ಎಲ್ಲೋಲ್ಲೋ ಸುತ್ತಾಡಿದ್ದೀರ. ಈಗ ಅವಳನ್ನು ಯಾರು ಮದುವೆಯಾಗುತ್ತಾರೆ. ಹೀಗಾಗಿ ಅಭಿಷೇಕ್ ಜೊತೆಗೆ ಆಕೆಯ ಮದುವೆಯಾಗಬೇಕು ಎಂದು ಒತ್ತಾಯಿಸಿ, ಹಲ್ಲೆ ನಡೆಸಿದ್ದರು. ಜೊತೆಗೆ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದ ಮೂವರಿಗೂ ಮನಬಂದಂತೆ ಥಳಿಸಿ, ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಅಪ್ರಾಪ್ತೆಯ ತಂದೆ ನೀಡಿದ ಕಿರುಕುಳ ತಡೆಯಲಾಗದೇ ಅಭಿಷೇಕ್ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೂವರನ್ನು ಬಿಟ್ಟು ಕಳುಹಿಸಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಬಾಲಕಿಯ ತಂದೆ ಹಾಗೂ ಸಂಬಂಧಿಕರು, ಅಭಿಷೇಕ್ ಮದುವೆಯಾಗದಿದ್ದರೆ ಜೀವಂತವಾಗಿ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದರು. ಹೀಗಾಗಿ ಈ ಅವಮಾನ ಹಾಗೂ ಪ್ರಾಣ ಬೆದರಿಕೆಯನ್ನು ಸಹಿಸಲಾಗದ ಅಭಿಷೇಕ್ ಗ್ರಾಮದ ಹೊರವಲಯದಲ್ಲಿ ಡಿಸೆಂಬರ್ 30ರಂದು ನೇಣಿಗೆ ಶರಣಾಗಿದ್ದಾನೆ.

    ಮೃತ ಅಭಿಷೇಕ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಥಮ ಬಿಎ ಓದುತ್ತಿದ್ದು, ಬಾಲಕಿ ಸಹ ಅಪ್ರಾಪ್ತಳಾಗಿದ್ದಾಳೆ. ಹೀಗಾಗಿ ಮದುವೆ ಮಾಡಿಕೊಳ್ಳುವುದಕ್ಕೆ ಆಗಲ್ಲ ಎಂದಾಗ ಬಾಲಕಿಯ ಮಾವ ಹಾಗೂ ತಂದೆ ಇಲ್ಲ ಸಲ್ಲದ ಆರೋಪವನ್ನು ಅಭಿಷೇಕ್ ಮೇಲೆ ಹೋರಿಸಿದ್ದರು. ಪೊಲೀಸರಿಗೆ ದೂರು ನೀಡಿದರೆ, ತಾವೂ ದೂರು ನೀಡುವುದಾಗಿ ಬೆದರಿಸಿದ್ದರು. ಹೀಗಾಗಿ ಅವರ ಕಿರುಕುಳ ಸಹಿಸಲಾಗದೇ ಅಭಿಷೇಕ್ ಸಾವಿಗೀಡಾಗಿದ್ದಾನೆ ಎಂದು ಮೃತನ ಸಹೋದರ ಮಹೇಶ್ ಆರೋಪಿಸಿದ್ದಾರೆ.

    ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಅಭಿಷೇಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

    ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

    ರಾಯಚೂರು: ರಸ್ತೆಗಳೇ ಇಲ್ಲದ ಗ್ರಾಮಗಳನ್ನ ನೀವು ನೋಡಿರಬಹುದು. ಆದರೆ ಗ್ರಾಮವೇ ಇಲ್ಲದ ಜಾಗಕ್ಕೆ ರಸ್ತೆ ನಿರ್ಮಿಸಿರುವುದನ್ನ ನೋಡಿರಲಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ಅಧಿಕಾರಿಗಳು ಇಂತಹ ಎಡವಟ್ಟು ಕೆಲಸವನ್ನ ಮಾಡಿದ್ದಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿ ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.

    ತಾಲೂಕಿನ ಪೂರತಿಪ್ಲಿ ಗ್ರಾಮದಿಂದ 2.3 ಕಿಲೋ ಮೀಟರ್‍ವರೆಗೆ ರಸ್ತೆ ಕಾಮಗಾರಿಯನ್ನೇನೋ ಮಾಡಲಾಗಿದೆ. ಆದರೆ ಅಲ್ಲಿ ಯಾವ ಕ್ಯಾಂಪ್ ಕೂಡ ಇಲ್ಲ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ 1 ಕೋಟಿ 61 ಲಕ್ಷ ಅನುದಾನದಲ್ಲಿ ಪೂರತಿಪ್ಲಿಯಿಂದ ಪೂರತಿಪ್ಲಿ ಕ್ಯಾಂಪ್‍ವರೆಗೆ 2.3 ಕೀ.ಮೀ ರಸ್ತೆ ನಿರ್ಮಿಸಿರುವುದಾಗಿ ಹೇಳಿಕೊಂಡಿವೆ. ಆದರೆ ರಾಯಚೂರು ತಹಶೀಲ್ದಾರ್ ಕಂದಾಯ ಇಲಾಖೆ ದಾಖಲೆಗಳಲ್ಲಿ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವೇಯಿಲ್ಲ ಅಂತ ವರದಿ ನೀಡಿದ್ದಾರೆ.

    ಹಾಗಾದರೆ ರಸ್ತೆ ನಿರ್ಮಾಣದ ಹಿಂದಿನ ಉದ್ದೇಶವೇನು ಅನ್ನೊದು ಗ್ರಾಮಸ್ಥರ ಪ್ರಶ್ನೆಯಾಗಿದೆ. ರಸ್ತೆಯೂ ಕಳಪೆಯಾಗಿರುವುದರಿಂದ ಗುತ್ತೆದಾರನ ಜೊತೆ ಅಧಿಕಾರಿಗಳು ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಗ್ರಾಮಸ್ಥರು ಹಾಗೂ ಹೋರಾಟಗಾರರು ಆರೋಪಿಸಿದ್ದಾರೆ.

    ಪೂರತಿಪ್ಲಿ ಕ್ಯಾಂಪ್ 2.8 ಕಿ.ಮೀ ಅನ್ನೊ ಮೈಲುಗಲ್ಲು, ಪೂರತಿಪ್ಲಿ ರಾಯಚೂರು ಪೂರತಿಪ್ಲಿ ಕ್ಯಾಂಪ್ ಅಂತ ಬರೆದಿರುವ ಮಾರ್ಗಸೂಚಿ ಫಲಕ, ರಸ್ತೆ ಕಾಮಗಾರಿಯ ಬೋರ್ಡ್ ಗಳು ಅಲ್ಲಲ್ಲಿ ಹಾಕಲಾಗಿದೆ. ಇವುಗಳನ್ನ ನೋಡಿದರೆ ಯಾರಿಗಾದರೂ ಇಲ್ಲೆಲ್ಲೋ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವಿದೆ ಎಂದು ಅನಿಸುತ್ತೆ. ಆದರೆ ಜಮೀನುಗಳಿಗೆ ಹೋಗಲು ಇದ್ದ ಪುಟ್ಟ ರಸ್ತೆಯನ್ನೇ ನಿವೇಶನಗಳು ಇಲ್ಲದ, ಜನವಸತಿಯಿಲ್ಲದ, ದಾಖಲೆಯಲ್ಲೂ ಇಲ್ಲದ ಪೂರತಿಪ್ಲಿ ಕ್ಯಾಂಪ್‍ವರೆಗೆ ರಸ್ತೆ ನಿರ್ಮಿಸಲಾಗಿದೆ. ದಾರಿಯಲ್ಲಿನ ಬಸವಣ್ಣನ ದೇವಾಲಯದವರೆಗೆ ರಸ್ತೆಯನ್ನ ಮಾಡಲಾಗಿದೆ. ಕೇವಲ ಮೂರು ತಿಂಗಳು ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ.

    ಕಾಮಗಾರಿ ಬಗ್ಗೆ ನೀಡಿದ ದೂರನ್ನ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ರಸ್ತೆಯಿಂದ ಜಮೀನಿಗೆ ಹೋಗುವ ರೈತರಿಗೆ ಅನುಕೂಲವಾಗಿದೆ ಅಂತ ವರದಿ ನೀಡಿ ಅಕ್ರಮವನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಬಸನಗೌಡ ದದ್ದಲ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ಕಾಮಗಾರಿ ಮಾಡಿಸಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ್ ಗಾರಲದಿನ್ನಿ ಆರೋಪಿಸಿದ್ದಾರೆ.

    ಜಿಲ್ಲೆಯಲ್ಲಿ ರಸ್ತೆಗಳೇ ಇಲ್ಲದ ಗ್ರಾಮಗಳು ಸಾಕಷ್ಟಿದ್ದರೂ ಗ್ರಾಮವೇ ಇಲ್ಲದ ಪ್ರದೇಶಕ್ಕೆ ರಸ್ತೆ ನಿರ್ಮಿಸಿರುವುದು ವಿಚಿತ್ರವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ.

  • ಆಸ್ಪತ್ರೆಗೆ ಹೋಗ್ಬೇಕಾದ್ರೆ ಜೋಲಿಯಲ್ಲೇ ಸಾಗ್ಬೇಕು- ಮಲೆಮಹದೇಶ್ವರದ ಚಂಗಡಿ ಗ್ರಾಮದ ದುರಂತ!

    ಆಸ್ಪತ್ರೆಗೆ ಹೋಗ್ಬೇಕಾದ್ರೆ ಜೋಲಿಯಲ್ಲೇ ಸಾಗ್ಬೇಕು- ಮಲೆಮಹದೇಶ್ವರದ ಚಂಗಡಿ ಗ್ರಾಮದ ದುರಂತ!

    ಚಾಮರಾಜನಗರ: ಇಲ್ಲಿನ ಚಂಗಡಿ ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ರಸ್ತೆ ಸಂಪರ್ಕವೂ ಇಲ್ಲ. ಯಾರಿಗಾದರೂ ಆರೋಗ್ಯ ಕೆಟ್ಟರೆ ಅಷ್ಟೇ. ಹೀಗಾಗಿ ಈ ಗ್ರಾಮದ ಸಮಸ್ಯೆಗಳ ಆಗರವಾಗಿದೆ.

    ಹೌದು. ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಧಾಮದ ದಟ್ಟಾರಣ್ಯದ ಮಧ್ಯೆ ಇರೋ ಚಂಗಡಿ ಗ್ರಾಮಸ್ಥರು ಡಾಂಬರ್ ರಸ್ತೆನೇ ನೋಡಿಲ್ಲ. ಕಿತ್ತೋದ ಹಾಳು ಮೂಳು ರಸ್ತೆಯೇ ಇವರಿಗೆ ಗತಿ. ಸರಿಯಾದ ರಸ್ತೆ ಸಂಪರ್ಕ ಇಲ್ಲದೇ ಬೇಸತ್ತು ಹೋಗಿದ್ದಾರೆ. ಈ ಗ್ರಾಮಕ್ಕೆ ಹೋಗಬೇಕಾದರೆ ಮುಖ್ಯರಸ್ತೆಯಿಂದ ಅರಣ್ಯದ ನಡುವೆ ಕಾಲುದಾರಿಯಲ್ಲಿ ಬರೋಬ್ಬರಿ 16 ಕಿ.ಮೀ ಸಾಗಬೇಕು. ಯಾರಿಗಾದ್ರೂ ಆರೋಗ್ಯ ಕೆಟ್ಟರೆ ಅಥವಾ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಅವರನ್ನು ಜೋಲಿಯಲ್ಲಿ ಕಟ್ಟಿಕೊಂಡು ಕಾಡಿನ ಮಧ್ಯೆ 22 ಕಿಲೋ ಮೀಟರ್ ದೂರ ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕು ಎಂದು ಗ್ರಾಮಸ್ಥ ಕರಿಯಪ್ಪ ಹೇಳಿದ್ದಾರೆ.

    ಚಂಗಡಿ ಗ್ರಾಮಸ್ಥರ ಸಮಸ್ಯೆ ಇಲ್ಲಿಗೆ ಮುಗಿದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ ಇರುವ ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ. ಅಲ್ಲದೆ ಈ ಗ್ರಾಮದ ಹೆಣ್ಣುಮಕ್ಕಳನ್ನು ಯಾರೂ ಮದುವೆಯಾಗಲು ಮುಂದೆ ಬರುತ್ತಿಲ್ಲ. ಚಂಗಡಿ ಗ್ರಾಮದಲ್ಲಿ 195 ಕುಟುಂಬಗಳಿವೆ. 1200ಕ್ಕೂ ಹೆಚ್ಚು ಜನಸಂಖ್ಯೆಯಿದೆ. ವ್ಯವಸಾಯವೇ ಇವರ ಮೂಲ ಕಸುಬು. ಬೆಳೆ ಬೆಳೆದರೂ ವನ್ಯಪ್ರಾಣಿಗಳ ಉಪಟಳದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದರಿಂದ ಬೇಸತ್ತಿರೋ ಗ್ರಾಮಸ್ಥರು ಅರಣ್ಯದಿಂದ ಹೊರಬರಲು ಸಿದ್ಧರಾಗಿದ್ದಾರೆ. ಆದರೆ ಸರ್ಕಾರ ಮಾತ್ರ ಇವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಿದೆ.

    ಬೇರೆ ಬೇರೆ ಕಡೆ ಹುಲಿರಕ್ಷಿತಾರಣ್ಯ ಹಾಗೂ ವನ್ಯಧಾಮಗಳಿಂದ ಅರಣ್ಯವಾಸಿಗಳನ್ನು ಹೊರತರಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಆದರೆ ಅಲ್ಲಿನ ಅರಣ್ಯವಾಸಿಗಳು ಅರಣ್ಯದಿಂದ ಬರಲು ಒಪ್ಪುತ್ತಿಲ್ಲ. ದಟ್ಟಾರಣ್ಯದ ಮಧ್ಯೆ ಇರುವ ಚಂಗಡಿ ಗ್ರಾಮಸ್ಥರು ತಾವಾಗಿಯೇ ಹೊರಬರಲು ಒಪ್ಪಿಗೆ ಸೂಚಿಸಿದ್ದರೂ ಸರ್ಕಾರ ಮಾತ್ರ ಅವರನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ನಿರ್ಲಕ್ಷ್ಯವಹಿಸಿರುವುದು ವಿಪರ್ಯಾಸವಾಗಿದೆ.

  • ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಉಪಚುನಾವಣೆ ವೇಳೆ ಕೊಟ್ಟ ಮಾತು ಉಳಿಸಿಕೊಂಡ ಹೆಬ್ಬಾರ್

    ಕಾರವಾರ: ಯಲ್ಲಾಪುರ ಉಪ ಚುನಾವಣೆ ಸಂದರ್ಭದಲ್ಲಿ ಕೊಂಡೆಮನೆ ಗ್ರಾಮದ ಜನರಿಗೆ ಕೊಟ್ಟ ಮಾತನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಉಳಿಸಿಕೊಂಡಿದ್ದಾರೆ.

    ಯಲ್ಲಾಪುರ ನಗರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕೊಂಡೆಮನೆ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತವೆ. ಪ್ರತಿ ದಿನ ನಗರಕ್ಕೆ ಬರಬೇಕಾದರೇ ಈ ಗ್ರಾಮದ ಜನರು ಕಾಲು ಹಾದಿಯಲ್ಲಿಯೇ ನಗರಕ್ಕೆ ಬರುವ ಸ್ಥಿತಿ ಇತ್ತು. ಈ ಕಾರಣದಿಂದ ಸತತ 15 ವರ್ಷಗಳಿಂದ ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರು ಏನೂ ಪ್ರಯೋಜನವಾಗಿರಲಿಲ್ಲ.

    ಕೊಂಡೆಮನೆ ಗ್ರಾಮವು ಮೊದಲು ಯಲ್ಲಾಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿತ್ತು. ಆದರೆ ಸರ್ಕಾರ ಈ ಗ್ರಾಮವನ್ನು ಉಪಳೇಶ್ವರ ಗ್ರಾಮ ಪಂಚಾಯ್ತಿಗೆ ಸೇರಿಸಿದ್ದು ಈ ಪ್ರಕ್ರಿಯೆ ನಡೆಯಲು ತಾಂತ್ರಿಕ ಕಾರಣದಿಂದ 15 ವರ್ಷಗಳೇ ಕಳೆದುಹೋಯಿತು. ಈ ಮಧ್ಯೆ ರಸ್ತೆ ಮಾಡಲು ಪಟ್ಟಣ ಪಂಚಾಯ್ತಿ ಆಗಲಿ, ಗ್ರಾಮ ಪಂಚಾಯ್ತಿಯಾಗಲಿ ಮುಂದೆ ಬಾರದೇ 15 ವರ್ಷಗಳಿಂದ ನಗರ ಪ್ರದೇಶಕ್ಕೆ ಹತ್ತಿರವಿದ್ದರೂ ಕೊಂಡೆಮನೆ ಗ್ರಾಮವು ರಸ್ತೆಯೇ ಇಲ್ಲದೇ ಕಾಲು ಹಾದಿಯಲ್ಲಿಯೇ ಇಲ್ಲಿನ ಜನರು ತಿರುಗಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಇತ್ತೀಚಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಶಿವರಾಮ್ ಹೆಬ್ಬಾರ್ ಈ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಇಲ್ಲಿನ ಗ್ರಾಮದ ಜನರು ತಮ್ಮ ಊರಿಗೆ ರಸ್ತೆ ಮಾಡಿಕೊಡುವುದಾದರೇ ಮಾತ್ರ ಮತ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಶಿವರಾಮ್ ಹೆಬ್ಬಾರ್ ತಾವು ಗೆಲ್ಲಲಿ ಸೋಲಲಿ ಈ ಊರಿಗೆ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು.

    ಈಗ ಚುನಾವಣೆಯಲ್ಲಿ ಅತ್ಯಂತ ಬಹುಮತದಲ್ಲಿ ಗೆದ್ದ ಹೆಬ್ಬಾರ್ ತಾವು ಕೊಟ್ಟ ಆಶ್ವಾಸನೆಯನ್ನು ಮರೆಯದೇ ಈ ಊರಿಗೆ ರಸ್ತೆ ಮಾಡಲು ಮುಂದಾಗಿದ್ದಾರೆ. ಆದರೇ ತಾಂತ್ರಿಕ ಕಾರಣ ಅಡ್ಡ ಬಂದಿದ್ದು ಅನುದಾನದ ಸಮಸ್ಯೆ ಎದುರಾಗಿದೆ. ಆದರೂ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಈಗ ರಸ್ತೆ ನಿರ್ಮಿಸಿದ್ದಾರೆ.

  • ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಆರೋಗ್ಯ ಇಲಾಖೆ ನಿರ್ಲಕ್ಷ್ಯ – ಗ್ರಾಮದ ಎಲ್ಲರಿಗೂ ಸಾಮೂಹಿಕ ಜ್ವರ

    ಚಾಮರಾಜನಗರ: ಸಮರ್ಪಕ ಚಿಕಿತ್ಸೆ ದೊರೆಯದೆ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಉಯಿಲನತ್ತ ಗ್ರಾಮಸ್ಥರು ಸಾಮೂಹಿಕವಾಗಿ ಜ್ವರ, ಮೈ-ಕೈನೋವು, ಮೂಳೆನೋವು ಮತ್ತು ಸಂದುನೋವಿನಿಂದ ಬಳಲುತ್ತಿದ್ದಾರೆ.

    ಹನೂರು ತಾಲೂಕು ಉಯಿಲನತ್ತ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳಿದ್ದು ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಜ್ವರ, ಮೈ-ಕೈನೋವು, ಮೂಳೆ ನೋವು, ಸಂದುನೋವಿನಿಂದ ಬಳಲುತ್ತಿದ್ದಾರೆ. ಇವರಿಗೆ ಕೇವಲ ಮಾತ್ರೆ ನೀಡಿ ಮತ್ತೆ ಯಾವುದೇ ಚಿಕಿತ್ಸೆ ನೀಡದೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.

    ತೀವ್ರ ಜ್ವರ ಹಾಗು ಸಂದುನೋವಿನಿಂದ ಬಳಲುತ್ತಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲೇ ಒಂದು ಕ್ಯಾಂಪ್ ಮಾಡಿ ಸಮಪರ್ಕ ಚಿಕಿತ್ಸೆ ನೀಡಬೇಕು ಇಲ್ಲವೆ ತಾಲೂಕು ಆಸ್ಪತ್ರೆ ಹಾಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    ಒಂದೇ ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ

    – ಗ್ರಾಮ ತೊರೆಯುತ್ತಿರುವ ಜನರು

    ಬೆಳಗಾವಿ: ಒಂದೇ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಬಂದಿರುವ ಕಾರಣ ಸೊಳ್ಳೆಗಳ ಕಾಟಕ್ಕೆ ಜನರು ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಬಂದಿದ್ದು, ಜನರು ಗ್ರಾಮವನ್ನು ತೊರೆಯುತ್ತಿದ್ದಾರೆ. ಜನ ಗ್ರಾಮ ಬಿಟ್ಟು ಹೋಗುತ್ತಿದ್ದರು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಈ ಗ್ರಾಮದಲ್ಲಿ ಹೆಚ್ಚು ಬಡಕುಟುಂಬಗಳೇ ವಾಸವಿದ್ದು, ಡೆಂಗ್ಯೂ ರೋಗದಿಂದ ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲಾಗದೇ ಪರದಾಡುತ್ತಿದ್ದಾರೆ. ಡೆಂಗ್ಯೂ ಎಂದು ಖಚಿತ ವರದಿ ಬಂದರೂ ಅಲ್ಲಗಳೆಯುತ್ತಿರುವ ತಾಲೂಕು ವೈದ್ಯಾಧಿಕಾರಿಗಳು, ಡೆಂಗ್ಯೂ ಅಂಕಿ ಅಂಶಗಳ ದಾಖಲೆಯಲ್ಲಿ ವಿಫಲರಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಅಸಡ್ಡೆ ನೋಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.