Tag: village

  • ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ – ಲಕ್ಷ್ಮಣ ರೇಖೆಯಂತೆ ಊರಿಗೆ ದಿಗ್ಭಂಧನ

    ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ – ಲಕ್ಷ್ಮಣ ರೇಖೆಯಂತೆ ಊರಿಗೆ ದಿಗ್ಭಂಧನ

    ಗದಗ: ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಜಿಲ್ಲೆಯ ಕೊಟುಮಚಗಿ ಹಾಗೂ ರೋಣ ತಾಲೂಕಿನ ಗುನಗುಂಡಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ದಿಗ್ಭಂಧನ ಹಾಕಿಕೊಂಡಿದ್ದಾರೆ.

    ಇಡೀ ದೇಶವೇ ಲಾಕ್‍ಡೌನ್ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಮನವಿಗೆ ಗದಗ ಜಿಲ್ಲೆ ಕೊಟುಮಚಗಿ ಗ್ರಾಮದ ಜನರು ಸಖತ್ ರೆಸ್ಪಾನ್ಸ್ ಮಾಡಿದ್ದಾರೆ. ಇಂದಿನಿಂದ ಏಪ್ರಿಲ್ 14 ರವರೆಗೆ ಕೊಟುಮಚಗಿ ಗ್ರಾಮಕ್ಕೆ ಬೇರೆ ಗ್ರಾಮಗಳ ಜನರು ಬರುವಂತಿಲ್ಲ. ಈ ಗ್ರಾಮದ ಜನರು ಸಹ ಬೇರೆ ಕಡೆ ಹೋಗುವಂತಿಲ್ಲ ಎಂದು ಊರಿಗೆ ಲಕ್ಷ್ಮಣ ರೇಖೆಯ ದಿಗ್ಭಂಧನ ಹಾಕಿಕೊಂಡಿದ್ದಾರೆ.

    ಪ್ರವೇಶ ಮಾಡುವಂತಹ ಎಲ್ಲ ರಸ್ತೆಗಳಿಗೆ ಅಡ್ಡಲಾಗಿ, ಚಕ್ಕಡಿ, ಟ್ರ್ಯಾಕ್ಟರ್‌ನ ಟ್ರಾಲಿ ಹಾಗೂ ಗುಂಡಿ ತೆಗೆದು ರಸ್ತೆ ಬಂದ್ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರು ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಊರಲ್ಲಿ ಡಂಗುರ ಸಾರಿದ್ದಾರೆ.

    ಅಲ್ಲದೇ ಅಕ್ಕಪಕ್ಕದ ಊರುಗಳಿಂದ ಬಂದವರು ಆದಷ್ಟು ಬೇಗ ತಮ್ಮ ತಮ್ಮ ಊರುಗಳಿಗೆ ತೆರಳಬೇಕು. ಇಲ್ಲದಿದ್ದರೆ 21 ದಿನಗಳ ಕಾಲ ಯಾರೂ ಊರಿಂದ ಹೊರ ಹೋಗಲು ಮತ್ತು ಒಳಗೆ ಬರದಂತೆ ನಿರ್ಬಂಧ ಮಾಡುವುದಾಗಿ ತಿಳಿಸಿದ್ದರು. ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಎಲ್ಲರೂ 21 ದಿನ ನಿಮ್ಮ ಮನೆಯಲ್ಲೇ ಇದ್ದು ಬಿಡಿ ಅಂತ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ಕೊರೊನಾ ಸೋಂಕು ತಡೆಗೆ ಗ್ರಾಮಕ್ಕೆ ಬರೋ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು

    ಕೊರೊನಾ ಸೋಂಕು ತಡೆಗೆ ಗ್ರಾಮಕ್ಕೆ ಬರೋ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು

    ಹಾವೇರಿ: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮಸ್ಥರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಇಂದಿನಿಂದ 21 ದಿನಗಳ ಕಾಲ ಬೇರೆ ಬೇರೆ ಗ್ರಾಮಗಳ ಜನರು ಬರದಂತೆ ಗ್ರಾಮಸ್ಥರು ಕೂಡಲ ಗ್ರಾಮವನ್ನು ಸಂಪರ್ಕಿಸೋ ರಸ್ತೆಗಳಿಗೆ ಮುಳ್ಳಿನ ಬೇಲಿ, ಕಬ್ಬಿಣದ ರಾಡು ಅಡ್ಡಲಾಗಿ ಇಟ್ಟು ರಸ್ತೆಗಳನ್ನ ಬಂದ್ ಮಾಡಿದ್ದಾರೆ. ಈಗಾಗಲೆ ಬೆಂಗಳೂರ ಅಥವಾ ಬೇರೆ ಬೇರೆ ಊರುಗಳಿಂದ ಬಂದವರು ತಪಾಸಣೆ ಮಾಡಿಸಿಕೊಂಡು ಬಂದ ಬಳಿಕ ಊರನ್ನು ಪ್ರವೇಶಿಸುವಂತೆ ಗ್ರಾಮದಲ್ಲಿ ಡಂಗುರ ಸಾರಲಾಗುತ್ತಿದೆ.

    ಅಲ್ಲದೆ ಅಕ್ಕಪಕ್ಕದ ಊರುಗಳಿಂದ ಬಂದವರು ಆದಷ್ಟು ಬೇಗ ತಮ್ಮ ತಮ್ಮ ಊರುಗಳಿಗೆ ತೆರಳಬೇಕು. ಇಲ್ಲದಿದ್ದರೆ 21 ದಿನಗಳ ಕಾಲ ಯಾರೂ ಊರಿಂದ ಹೊರ ಹೋಗಲು ಮತ್ತು ಒಳಗೆ ಬರದಂತೆ ರಸ್ತೆ ಬಂದ್ ಮಾಡಲಾಗಿದೆ. ಹೀಗೆ ಎಚ್ಚರಿಕೆ ನೀಡಿ ಗ್ರಾಮಕ್ಕೆ ಸಂಪರ್ಕಿಸೋ ಮೂರು ಪ್ರಮುಖ ರಸ್ತೆಗಳನ್ನ ಬಂದ್ ಮಾಡಿ ಗ್ರಾಮಸ್ಥರು ಧ್ವನಿವರ್ಧಕದ ಮೂಲಕ ಡಂಗುರ ಸಾರುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಈ ಸೂಚನೆಯನ್ನು ಪಾಲನೆ ಮಾಡುವಂತೆ ಗ್ರಾಮಸ್ಥರಲ್ಲಿ ಗ್ರಾಮದ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ನೀವು, ನಿಮ್ಮ ಕುಟುಂಬವನ್ನ ಬದುಕಿಸಿ ಜೊತೆಗೆ ಗ್ರಾಮಸ್ಥರ ಜೀವವನ್ನ ಉಳಿಸೋ ದೃಷ್ಟಿಯಿಂದ ಯಾರೂ ಹೊರ ಹೋಗಬೇಡಿ. ಯಾರೂ ಬೇರೆ ಊರುಗಳಿಂದ ಗ್ರಾಮಕ್ಕೆ ಬರಬೇಡಿ. ಎಲ್ಲರೂ 21 ದಿನಗಳ ಕಾಲ ನಿಮ್ಮ ನಿಮ್ಮ ಮನೆಯಲ್ಲೇ ಇದ್ದುಬಿಡಿ ಅಂತಾ ಗ್ರಾಮಸ್ಥರು ಮನವಿ ಮಾಡಿಕೊಳ್ಳಿತ್ತಿದ್ದಾರೆ.

  • ಹಾಸನದ ಒಂದಿಡೀ ಗ್ರಾಮಕ್ಕೆ ಹೋಂ ಕ್ವಾರಂಟೈನ್ ಭೀತಿ

    ಹಾಸನದ ಒಂದಿಡೀ ಗ್ರಾಮಕ್ಕೆ ಹೋಂ ಕ್ವಾರಂಟೈನ್ ಭೀತಿ

    ಹಾಸನ: ಅರಕಲಗೂಡು ತಾಲೂಕಿನ ಶ್ರೀರಾಂಪುರದಲ್ಲಿ 75ಕ್ಕೂ ಹೆಚ್ಚು ಕೊರೊನಾ ಶಂಕಿತರು ಪತ್ತೆಯಾಗಿದ್ದು, ಎಲ್ಲರಿಗೂ ಮುಂಗೈ ಮೇಲೆ ಸೀಲ್ ಹಾಕಲಾಗಿದೆ. ಜೊತೆಗೆ ಇಡೀ ಗ್ರಾಮಕ್ಕೆ ದಿಗ್ಬಂಧನ ವಿಧಿಸಲು ತಾಲೂಕು ಆಡಳಿತ ಚಿಂತನೆ ನಡೆಸುತ್ತಿದೆ.

    ಪರಿಸ್ಥಿತಿಯ ಅವಲೋಕನ, ಪರಿಹಾರ ಮತ್ತು ಮುಂಜಾಗ್ರತ ಕ್ರಮಗಳ ಕುರಿತು ಚರ್ಚಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಬೀಡಿದ್ದಾರೆ. ಜೊತೆಗೆ ಗ್ರಾಮಸ್ಥರಿಂದ ಕೆಲವು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀರಾಂಪುರದ ಕೆಲವರು ಜ್ಯೋತಿಷ್ಯವನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿದ್ದು ಕೇರಳ, ಮಂಗಳೂರು, ಉಡುಪಿ ಮತ್ತು ಗೋವಾ, ಬಾಂಬೆ ಸೇರಿದಂತೆ ವಿವಿಧೆಡೆಯಿಂದ ವಾಪಸ್ ಆಗಿದ್ದಾರೆ.

    ತಾಲೂಕಿನ ಜನ ಹೂವು, ತರಕಾರಿ ಮಾರಾಟ ಮಾಡಲು ಮಂಗಳೂರು, ಕೇರಳ, ಬೆಂಗಳೂರಿನೆಡೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಹಾಗೆಯೇ ಎಂಜಿನೀಯರಿಂಗ್, ವೈದ್ಯಕೀಯ, ನರ್ಸಿಂಗ್ ಇತ್ಯಾದಿ ಕೆಲಸಗಳನ್ನು ಮಾಡುವ ಜನರೂ ಬೆಂಗಳೂರು, ವಿವಿಧ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳಿಂದ ಹಳ್ಳಿಗೆ ವಾಪಸ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮಕ್ಕೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ.

  • ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿ ಮಾದರಿಯಾದ ಗ್ರಾಮಸ್ಥರು

    ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿ ಮಾದರಿಯಾದ ಗ್ರಾಮಸ್ಥರು

    ಕೋಲಾರ: ಇಡೀ ವಿಶ್ವವೇ ಕೊರೊನಾ ವೈರಸ್‍ನಿಂದ ದೂರ ಇರಲು ಹರಸಾಹಸ ಪಡುತ್ತಿದೆ. ಹೀಗಾಗಿ ಮುಳಬಾಗಿಲು ತಾಲೂಕಿನ ಎಂ.ಗೊಲ್ಲಹಳ್ಳಿಯ ಜನರು ಗ್ರಾಮಕ್ಕೆ ಅಷ್ಟದಿಗ್ಬಂಧನ ಹಾಕಿಕೊಂಡು ಮಾದರಿಯಾಗಿದ್ದಾರೆ.

    ಎಂ.ಗೊಲ್ಲಹಳ್ಳಿಯ ಜನರು ಸ್ವಯಂ ದಿಗ್ಬಂಧನ ಮಾಡಿಕೊಳ್ಳುವ ಮೂಲಕ ಗ್ರಾಮಕ್ಕೆ ಕೊರೊನಾ ಕಾಲಿಡದಂತೆ ಕೊರೊನಾಗೆ ಎಚ್ಚರಿಕೆ ವಹಿಸಿದ್ದಾರೆ. ಎರಡು ತಿಂಗಳ ಕಾಲ ಗ್ರಾಮದಿಂದ ಯಾರೂ ಹೊರ ಹೋಗದಂತೆ, ಹೊರಗಿನಿಂದ ಗ್ರಾಮಕ್ಕೆ ಯಾರೂ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಐದು ರಸ್ತೆಗಳಲ್ಲಿ ಗ್ರಾಮಸ್ಥರೇ ಚೆಕ್ ಪೋಸ್ಟ್ ಹಾಕಿದ್ದಾರೆ. ಜೊತೆಗೆ ಗ್ರಾಮಸ್ಥರೇ ಚೆಕ್ ಪೋಸ್ಟ್‍ಗಳಲ್ಲಿ ಕಾವಲು ಕಾಯುವ ಕೆಲಸ ಮಾಡುತ್ತಿದ್ದಾರೆ.

    ನಮ್ಮೂರು ನೆರೆಯ ರಾಜ್ಯ ಆಂಧ್ರಪ್ರದೇಶಕ್ಕೆ ಕೇವಲ ಕೂಗಳತೆ ದೂರದಲ್ಲಿದೆ. ಅಲ್ಲಿಂದಲೂ ಜನರು ಬರುತ್ತಾರೆ. ಹಾಗಾಗಿ ಕರ್ನಾಟಕ ಅಥವಾ ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಂದಲೂ ಗ್ರಾಮಸ್ಥರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಎಲ್ಲಾ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕು ಎನ್ನುವುದು ಸರಿಯಲ್ಲ. ಮೊದಲು ನಮ್ಮ ಗ್ರಾಮವನ್ನು ನಾವು ಕಾಪಾಡಿಕೊಳ್ಳಬೇಕು. ಅದಕ್ಕಾಗಿಯೇ ಗ್ರಾಮಕ್ಕೆ ದಿಗ್ಬಂಧನ ಹಾಕಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಕೊರೊನಾ ವೈರಸ್‍ನಿಂದ ಗ್ರಾಮಸ್ಥರನ್ನು ಕಾಪಾಡಲು ಮುಖಂಡರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಮೊದಲಿಗೆ ಅವಶ್ಯಕತೆ ಇರುವ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಳ್ಳುವುದು, ನಂತರ ಬೇರೆ ಗ್ರಾಮದಲ್ಲಿರುವ ಕುಟುಂಬದ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಯೋಚಿಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹಾಕಿರುವ ಚೆಕ್ ಪೋಸ್ಟ್ ಗಳಲ್ಲಿ ಗ್ರಾಮದವರೇ ಕಾವಲು ಕಾಯುವುದು, ಗ್ರಾಮದಲ್ಲಿ ಉತ್ಪಾದನೆಯಾದ ಹಾಲು, ತರಕಾರಿಯನ್ನು ಗ್ರಾಮದಲ್ಲೇ ಹಂಚಿಕೆ ಮಾಡಿಕೊಳ್ಳುವಂತೆ ಗ್ರಾಮದ ಮುಖಂಡರು ತಿಳಿಸಿದ್ದಾರೆ.

    ಎಲ್ಲರೂ ಸೇರಿ ಗ್ರಾಮವನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಗ್ರಾಮದಲ್ಲಿ ಸಂಗ್ರಹವಾಗುವ ಹಸುವಿನ ಗಂಜಲವನ್ನು ಗ್ರಾಮದಲ್ಲಿ ಸಿಂಪಡಿಸುವುದು ಸೇರಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ.

  • ಮಗನ ಸಾವಿನ ಸುದ್ದಿ ತಿಳಿದು ತಾಯಿಗೆ ಹೃದಯಾಘಾತ

    ಮಗನ ಸಾವಿನ ಸುದ್ದಿ ತಿಳಿದು ತಾಯಿಗೆ ಹೃದಯಾಘಾತ

    – ಸಾವಿನಲ್ಲೂ ಒಂದಾದ ತಾಯಿ,ಮಗ

    ಹಾವೇರಿ: ಅನಾರೋಗ್ಯದಿಂದ ಮೃತಪಟ್ಟ ಮಗನ ನೆನಪಲ್ಲಿ ಕಣ್ಣೀರು ಹಾಕಿ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.

    ಮೈನಾವತಿ ತೆಪ್ಪದ (52) ಮತ್ತು ಬಸವರಾಜ್ ತೆಪ್ಪದ (31) ಮೃತ ತಾಯಿ-ಮಗ. ಗುರುವಾರ ರಾತ್ರಿ ಬಸವರಾಜ್ ಅನಾರೋಗ್ಯದಿಂದ ಮೃತಪಟ್ಟಿದ್ದನು. ಮಗನ ಸಾವಿನ ದುಃಖದಲ್ಲಿ ತಾಯಿ ಮೈನಾವತಿ ರಾತ್ರಿಯಿಡೀ ಕಣ್ಣೀರು ಹಾಕಿದ್ದಾರೆ. ಪರಿಣಾಮ ಇಂದು ಬೆಳಿಗ್ಗೆ ಹೃದಯಾಘಾತವಾಗಿ ತಾಯಿಯೂ ಮೃತಪಟ್ಟಿದ್ದಾರೆ.

    ಮೃತ ಮೈನಾವತಿಗೆ ನಾಲ್ವರು ಮಕ್ಕಳಿದ್ದು, ಮೂವರು ಹೆಣ್ಣು ಮಕ್ಕಳು, ಬಸವರಾಜ್ ಒಬ್ಬನೇ ಮಗನಿದ್ದನು. ಮನೆಯ ಜವಾಬ್ದಾರಿಯನ್ನು ಮಗ ಬಸವರಾಜ್ ನೋಡಿಕೊಳ್ಳುತ್ತಿದ್ದನು. ಬಸವರಾಜ್​​ಗೆ ಇನ್ನೂ ಮದುವೆಯಾಗಿರಲ್ಲಿ. ಆದರೆ ಕೆಲವು ದಿನಗಳಿಂದ ಬಸವರಾಜ್ ಜಾಂಡೀಸ್​ನಿಂದ ಬಳಲುತ್ತಿದ್ದನು. ಹೀಗಾಗಿ ಗುರುವಾರ ಹೃದಯಘಾತವಾಗಿ ಮೃತಪಟ್ಟಿದ್ದಾನೆ. ಸಾವಿನಲ್ಲೂ ಒಂದಾದ ತಾಯಿ ಮಗನ ಪ್ರೀತಿಗೆ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

  • ಗ್ರಾಮವನ್ನು ಮದ್ಯಮುಕ್ತ ಮಾಡಿದ ಪೊಲೀಸರು

    ಗ್ರಾಮವನ್ನು ಮದ್ಯಮುಕ್ತ ಮಾಡಿದ ಪೊಲೀಸರು

    ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮವನ್ನು ಪೊಲೀಸರು ಮದ್ಯಪಾನ ಮುಕ್ತ ಗ್ರಾಮವನ್ನು ಮಾಡಲು ಮುಂದಾಗಿದ್ದಾರೆ.

    ಗ್ರಾಮದಲ್ಲಿ ಸರಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಟ ಮಾಡಲಾಗ್ತಿತ್ತು. ಇದರಿಂದ ಗ್ರಾಮದಲ್ಲಿ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಹೊರಗಡೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಸತ್ತ ಗ್ರಾಮದ ಗುರುಹಿರಿಯರು, ಮಹಿಳಾ ಸಂಘಗಳು, ಯುವಕ ಮಂಡಳಿಗಳು, ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರ ಕೊಟ್ಟಿದ್ದರು. ಅನಧಿಕೃತವಾಗಿ ಗ್ರಾಮದಲ್ಲಿ ಎಲ್ಲಂದರಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್, ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಇದರಿಂದ ಗ್ರಾಮದಲ್ಲಿ ಅಶಾಂತಿಯುತ ವಾತವರಣ ಸೃಷ್ಟಿ ಆಗಿದ್ದು, ದಯವಿಟ್ಟು ನಮ್ಮ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿ ದೂರು ದಾಖಲಿಸಿದ್ದಾರೆ.

    ದೂರನ್ನು ತ್ವರಿತವಾಗಿ ಸ್ವಿಕರಿಸಿದ ಗಂಗಾವತಿ ಠಾಣೆಯ ಸಿಪಿಐ ಸುರೇಶ್ ತಳವಾರ್ ಕೂಡಲೇ ಗ್ರಾಮಕ್ಕೆ ಬಂದು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರಿಗೆ ವಾರ್ನ್ ಮಾಡಿ, ಕಾಲಾವಕಾಶ ಕೊಟ್ಟು ಹೋಗಿದ್ದರು. ಆದರೂ ಅಕ್ರಮ ಮದ್ಯ ಮಾರಾಟ ಮುಂದುವರೆದ ಹಿನ್ನೆಲೆ ಗ್ರಾಮದ ಮಹಿಳೆಯರು ನೀಡಿದ ದೂರಿನನ್ವಯ ಗ್ರಾಮವನ್ನು ಸಂಪೂರ್ಣ ಸಾರಾಯಿ, ಮದ್ಯ ಮುಕ್ತ ಗ್ರಾಮ ಮಾಡಲು ಪೊಲೀಸರು ಪಣ ತೊಟ್ಟು, ಗ್ರಾಮಕ್ಕೆ ಆಗಮಿಸಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ನಂತರ ಗ್ರಾಮದಲ್ಲಿ ಸಾರಾಯಿ ಮುಕ್ತ ಗ್ರಾಮ ಎಂದು ಬೊರ್ಡ್ ಹಾಕಿಸಿದ್ದಾರೆ. ಇಂದಿನಿಂದ ಇದು ಸಾರಾಯಿ ಮುಕ್ತ ಗ್ರಾಮ ಇನ್ನುಮುಂದೆ ಯಾರಾದರೂ ಸಾರಾಯಿಯನ್ನು ಮಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

    ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಹೊರಟಿರುವುದು ಶ್ಲಾಘನೆಗೆ ಕಾರಣವಾಗಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಮುನ್ನುಡಿ ಮಾತ್ರ. ಇನ್ನೂ ಹಲವಾರು ಗ್ರಾಮಗಳು ಈ ಗ್ರಾಮದಿಂದ ಪ್ರೇರೆಪಿತಗೊಂಡು ಸ್ವಯಂ ಪ್ರೇರಿತ ಮದ್ಯಮುಕ್ತ ಗ್ರಾಮ ಮಾಡಿಕೊಂಡರೆ ಒಳ್ಳೆದು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ನಮ್ಮ ಪೊಲೀಸ್ ಠಾಣೆಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ಪಣ ತೊಡುವುದಾಗಿ ಹೇಳಿದರು.

    ಈ ಕಾರ್ಯಕ್ಕೆ ಗ್ರಾಮದ ಮಹಿಳೆಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹಗಲಲ್ಲೆ ಒಡಾಡದಂತ ಪರಿಸ್ಥಿತಿ ಇತ್ತು. ಮನೆಯಲ್ಲಿ ಗಂಡ, ಮಕ್ಕಳು ಎಲ್ಲಾರು ಈ ಸಾರಾಯಿಗೆ ದಾಸರಾಗಿದ್ದರು. ಇದೀಗ ಸಾರಾಯಿ ಬಂದ್ ಮಾಡಿದ್ದರಿಂದ ನಮಗೆ ತುಂಬಾ ಖುಷಿ ಆಗ್ತಿದೆ ಎಂದರು. ಪೊಲೀಸರ ಈ ನಿರ್ಧಾದದಿಂದ ಗ್ರಾಮದ ಮಹಿಳೆಯರು ನಿಟ್ಟುಸಿರು ಬಿಡುತ್ತಿದ್ದಾರೆ.

  • ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ‘ಆನೆಬಲ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು, ಇವುಗಳ ಜೊತೆಗೆ ತೆರೆದುಕೊಳ್ಳುವ ‘ಆನೆಬಲ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿರುವ ಗ್ರಾಮೀಣ ಸೊಗಡಿನ ಕಥೆಗೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ.

    ಸಿನಿಮಾಗಳಿಗೆ ಪ್ರಮೋಷನ್ ತುಂಬಾ ಮುಖ್ಯವಾಗುತ್ತೆ. ಒಂದು ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಅದರ ಜವಾಬ್ದಾರಿ ಚಿತ್ರತಂಡದ ಮೇಲಿರುತ್ತೆ. ನಂತರ ಆ ಸಿನಿಮಾ ರಿಲೀಸ್ ಆಗಿ, ಕಥೆ ಪ್ರೇಕ್ಷಕರಿಗೆ ಇಷ್ಟವಾದ್ರೆ ಪ್ರಮೋಷನ್ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ನಮ್ಮ ಕನ್ನಡಿಗರು ಯಾವತ್ತಿಗೂ ಉತ್ತಮವಾದ ಸಿನಿಮಾವನ್ನ ಕೈಬಿಟ್ಟ ಉದಾಹರಣೆಯೇ ಇಲ್ಲ. ಒಬ್ಬ ನೋಡಿದ ಸಿನಿಮಾ ಕಥೆಯನ್ನ ಹತ್ತು ಜನಕ್ಕೆ ಹಂಚಿ ಅವರು ಕೂಡ ಆ ಸಿನಿಮಾವನ್ನು ನೋಡುವಂತೆ ಮಾಡುವುದು ನಮ್ಮ ಕನ್ನಡಿಗರ ಗುಣ. ಇದೀಗ ಅಂತದ್ದೇ ಒಂದು ಸನ್ನಿವೇಶ ಮುಂದುವರೆದಿದೆ. ಅದು ‘ಆನೆಬಲ’ ಸಿನಿಮಾಗೆ. ಹೌದು ವಿದ್ಯಾರ್ಥಿಗಳು ಈ ಸಿನಿಮಾವನ್ನು ನೋಡಿ, ಪ್ರಚಾರ ಕೂಡ ಆರಂಭಿಸಿದ್ದಾರೆ. ಎಲ್ಲಿ ಅಂತೀರಾ..? ಮುಂದೆ ಓದಿ.

    ನಾಗಮಂಗಲ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಈ ರೀತಿ ವಿದ್ಯಾರ್ಥಿಗಳ ಸಪೋರ್ಟ್ ಸಿನಿಮಾಗೆ ಸಿಕ್ಕಿದೆ. ತಾವೂ ನೋಡಿದ್ದಲ್ಲದೇ, ಸ್ನೇಹಿತರಿಗೂ ಈ ಸಿನಿಮಾ ನೋಡಿ, ಇಲ್ಲಂದ್ರೆ ಒಂದೊಳ್ಳೆ ಕನ್ನಡ ಸಿನಿಮಾವನ್ನು ಮಿಸ್ ಮಾಡಿಕೊಳ್ತೀರಾ ಅಂತ ಸಲಹೆ ನೀಡುತ್ತಿದ್ದಾರೆ. ಈ ಸಿನೆಮಾದಲ್ಲಿರುವ ಹಾಡು ಮತ್ತು ಕಾಮಿಡಿಗೆ ಫಿದಾ ಆಗಿರುವ ವಿದ್ಯಾರ್ಥಿಗಳು ವಾಲಂಟರಿಯಾಗಿ ಸಿನೆಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹೊಸ ಹುರುಪು ಸಿಕ್ಕಂತಾಗಿದೆ.

    ಪದವಿ ತರಗತಿಯ ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವ ಕಾರಣ ವಿದ್ಯಾರ್ಥಿಗಳು ‘ಆನೆಬಲ’ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಸಹಪಾಠಿಗಳಿಗೆ, ಸಿಕ್ಕವರಿಗೆಲ್ಲ ‘ಆನೆಬಲ’ ಸಿನಿಮಾ ನೋಡಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೀತಿ ಸಹಕಾರಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದೆ.

  • ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಯೋಧರು- ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ನಿವೃತ್ತ ಸೈನಿಕರಿಗೆ ಹಾವೇರಿಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಜಗದೀಶ್, ಅಗಡಿ ಗ್ರಾಮದ ನಜೀರ್ ಅಹಮ್ಮದ್ ಮತ್ತು ಲಕ್ಷ್ಮಣ ಅವರನ್ನು ಅದ್ಧೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು. ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ ನಿವೃತ್ತ ಸೈನಿಕರು ಇಂದು ಊರಿಗೆ ಮರಳಿದ್ದಾರೆ. ಕಾರು ಇಳಿಯುತ್ತಿದ್ದಂತೆ ನಿವೃತ್ತ ಸೈನಿಕರಿಗೆ ಮಕ್ಕಳು ಪುಷ್ಪಗುಚ್ಛ ನೀಡಿದರು. ಇದೇ ವೇಳೆ ಕುಟುಂಬಸ್ಥರು ಸಹ ಸ್ವಾಗತಿಸಿದರು.

    ನಂತರ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದಲ್ಲಿ ದೇಶಭಕ್ತಿ ಗೀತೆಗಳ ಮೂಲಕ ನಿವೃತ್ತ ಸೈನಿಕರ ಮೆರವಣಿಗೆ ಮಾಡಲಾಯ್ತು. ಹಾವೇರಿಯಿಂದ ಸೈನಿಕರ ಸ್ವಗ್ರಾಮ ಅಗಡಿವರೆಗೆ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ಮೂಲಕ ದೇಶಾಭಿಮಾನ ಮೆರೆದರು.

  • ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ಸಿದ್ಧ ಸೂತ್ರವ ಬಿಟ್ಟು ಮಾಡಿದ ಆನೆಬಲ ಈ ವರ್ಷಗಳನ್ನ ಬಂದಿರುವ ಕಲ್ಟ್ ಚಿತ್ರ. ಯಾವುದೇ ಸಿನಿಮಾ ಆಗ್ಲಿ ಕಂಪ್ಲೀಟ್ ಸಿನಿಮಾ ಮುಗಿಯುವವರೆಗೂ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಂಡರೆ ಪ್ರೇಕ್ಷಕನಿಗೆ ಬಹಳ ಹತ್ತಿರವಾಗಿಬಿಡುತ್ತೆ. ಅದೇ ಸಾಲಿಗೆ ಸೇರಿರುವಂತ ಸಿನಿಮಾ ಅಂದ್ರೆ ಅದು ‘ಆನೆ ಬಲ’. ಸಿನಿಮಾ ಕಂಪ್ಲಿಟ್ ಆಗುವವರೆಗೂ ಬಹಳ ಕ್ಯೂರಿಯಾಸಿಟಿ ಮತ್ತು ಇಂಟ್ರೆಸ್ಟ್ ಕ್ರಿಯೇಟ್ ಮಾಡೋ ಶಕ್ತಿಯನ್ನ ಆನೆಬಲ ಸಿನಿಮಾ ಹೊಂದಿದೆ.

    ಇದೊಂದು ವಿಭಿನ್ನ ಕಥೆಯನ್ನ ಹೊಂದಿರುವ ಸಿನಿಮಾ. ಊರಿನ ಬಗ್ಗೆ ಅಪಾರ ಗೌರವ ಹೊಂದಿರುವ ಯುವಕರ ತಂಡದ ಸಿನಿಮಾ. ಕಾಮಿಡಿ ಜೊತೆಯಲ್ಲಿ ಊರಿನ ಹೆಸರನ್ನು ಉಳಿಸಲು ಸ್ನೇಹಿತರನ್ನ ಬಿಡದೇ ಜೊತೆಯಲ್ಲೇ ಸಾಗುತ್ತಾನೆ. ಸಿನಿಮಾದಲ್ಲಿ ದೋಷಗಳು ಇಲ್ಲವೆಂದೆನಿಲ್ಲ. ಆದರೆ ಅದಕ್ಕೂ ಮೀರಿ ಒಳ್ಳೆಯ ಅಂಶಗಳೇ ಹೆಚ್ಚಾಗಿ ಚಿತ್ರದುದ್ದಕ್ಕೂ ಸಿಗುತ್ತವೆ.

    ಸಿನಿಮಾದಲ್ಲಿ ಕೇಳ ಸಿಗುವ ‘ನಾವು ಚೆಂಗ್ಲು ಹುಡುಗರೇ ಇರಬಹುದು ಆದ್ರೆ ಊರಿನ ವಿಷಯಕ್ಕೆ ಬಂದರೇ ನಾವು ಒಳ್ಳೆಯವರೇ’ ಎಂಬ ಡೈಲಾಗ್ ಇಡೀ ಸಿನಿಮಾದ ಕಥೆಯನ್ನು ಸಾರುತ್ತಿದೆ. ಹಾಗೇ ಸಿನಿಮಾದುದ್ದಕ್ಕೂ ಹೆಣ್ಣಿನ ಮಹತ್ವವನ್ನು ಸಾರಲಾಗಿದೆ. ಜಿಲ್ಲಾ ಮಟ್ಟದ ರಾಗಿ ಮುದ್ದೆ ಸ್ವರ್ಧೆ ಮಾಡಬೇಕೆನ್ನುವ ಶಿವನ ಮಾತಿನಿಂದ ಇಡೀ ಸಿನೆಮಾ ಬೇರೊಂದು ತಿರುವು ಪಡೆದುಕೊಂಡು ಚಿತ್ರಕ್ಕೆ ಒಂದು ಶಕ್ತಿಯನ್ನ ತುಂಬುತ್ತದೆ.

    ಸಿನಿಮಾದಲ್ಲಿ ಪ್ರೀತಿ ವಿಚಾರವನ್ನು ಎಷ್ಟು ಬೇಕು ಅಷ್ಟನ್ನ ಹೇಳಿರುವ ನಿರ್ದೇಶಕ ರಾಜು, ಚಿತ್ರದುದ್ದಕ್ಕೂ ಹಳ್ಳಿಯ ಹುಡುಗರಿಗೆ ಇರಬೇಕಾದ ಜವಾಬ್ದಾರಿಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನ ಒಟ್ಟು ಹೂರಣವನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಟ್ಟೆಗೌಡ ಅದ್ಧೂರಿಯಾಗಿ ದೃಶ್ಯ ಸೆರೆ ಹಿಡಿದಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು ಹಾಡುಗಳು ಇಂಪಾಗಿವೆ. ಸಾಗರ್ ಸೇರಿದಂತೆ ಬಹುತೇಕ ನಟರು ಸಹಜವಾಗಿ ಅಭಿನಯಿಸಿದ್ದಾರೆ, ಅದು ಇಡೀ ಸಿನೆಮಾದ ಪ್ಲಸ್ ಪಾಯಿಂಟ್. ಸಂಭಾಷಣೆ ಚುರುಕಾಗಿದೆ ಹೆಚ್ಚಾಗಿ ಸಂದರ್ಭೋಚಿತವಾಗಿವೆ. ಆನೆಬಲ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.

  • ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ನೆಬಲ ಸಂಪೂರ್ಣ ಚಿತ್ರ ಹಳ್ಳಿ ಹಿನ್ನೆಲೆಯಲ್ಲೇ ನಡೆಯುತ್ತೆ. ಹಳ್ಳಿಯ ಆಚರಣೆ, ಸಂಪ್ರದಾಯ, ಕಟ್ಟುಪಾಡು, ಹಬ್ಬ, ಹೀಗೆ ಎಲ್ಲವನ್ನು ತೋರಿಸುತ್ತ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕರು. ಮಹಾತ್ಮ ಗಾಂಧೀಜಿ ಹೇಳಿದ ಹಳ್ಳಿಗಳೇ ದೇಶದ ಅಭಿವೃದ್ಧಿಯ ಜೀವಾಳ ಅನ್ನೋದನ್ನ ಮತ್ತೆ ಮತ್ತೆ ನೆನಪಿಸಿದ್ದಾರೆ. ತ್ರಂತ್ರಜ್ಞಾನದ ಜೊತೆ ಹಳ್ಳಿಯ ಆಚರಣೆಗಳು, ಸಂಪ್ರದಾಯಗಳು ಕಳೆದು ಹೋಗ್ಬಾರ್ದು ಎರಡು ಒಟ್ಟೊಟ್ಟಿಗೆ ಸಾಗಬೇಕು ಎಂದು ಎಚ್ಚರಿಸುತ್ತಾ ಭರಪೂರ ಮನರಂಜನೆಯನ್ನು ನೀಡುತ್ತೆ.

    ಮಂಡ್ಯದಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಮುದ್ದೆ ತಿನ್ನುವ ಸ್ಪರ್ಧೆಯೇ ಈ ಚಿತ್ರದ ಕಥಾವಸ್ತು. ಮುದ್ದೆ ತಿನ್ನುವ ಸ್ಪರ್ಧೆಯ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಇರುವಂತೆ ಈ ಹಳ್ಳಿಯ ಬಗ್ಗೆ ಸದಾ ಆಲೋಚಿಸುವ ಶಿವು ಎಂಬ ಹುಡುಗ ಈ ಚಿತ್ರದ ಕಥಾ ನಾಯಕ. ಯಾವಾಗಲು ಸಕಾರಾತ್ಮಕ ಯೋಚನೆ ಜೊತೆಗೆ ಜಾಲಿಯಾಗಿರುವ ಹುಡುಗ ಶಿವು. ಹಳ್ಳಿಯ ಬಗ್ಗೆ, ಜನ್ರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾನೆ. ಜೊತೆಗೆ ಆತನ ಪ್ರೇಮ ಪುರಾಣವೂ ಚಿತ್ರದಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಕೃಷಿಯೇ ಉಸಿರಾಗಿಸಿಕೊಂಡಿರುವ ಹಳ್ಳಿ ಜನ್ರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಆಗ ಜನ್ರ ಬದುಕು ಹಸನಾಗುತ್ತೆ, ಸುಧಾರಿಸುತ್ತೆ ಅನ್ನೋದು ಶಿವು ಆಲೋಚನೆ ಒಂದು ಕಡೆ ಆದ್ರೆ, ಹಿಂದಿನಿಂದ ನಡೆದುಬಂದ ಮುದ್ದೆ ತಿನ್ನುವ ಸ್ಪರ್ಧೆ ಇನ್ನೊಂದು ಕಡೆ. ಶಿವು ಕನಸು ಈಡೇರುತ್ತಾ? ಮುದ್ದೆ ತಿನ್ನುವ ಸ್ಪರ್ಧೆ ಹೇಗಿತ್ತು ಅನ್ನೋದಕ್ಕೆ ಆನೆಬಲ ಚಿತ್ರ ನೋಡಿಯೇ ತಿಳಿಯಬೇಕು.

    ನೈಜತೆಗೆ ಹತ್ತಿರವಾಗಿ ಸಾಗೋ ಆನೆಬಲ ಚಿತ್ರ ನೋಡುಗರನ್ನು ಸೆಳೆಯುತ್ತೆ. ಮಂಡ್ಯ ಆಡು ಭಾಷೆಯ ಸೊಗಡನ್ನು ತೆರೆ ಮೇಲೆ ಸವಿಯೋ ಆನಂದ ಚಿತ್ರದ ಮೇಲೆ ಇನ್ನಷ್ಟು ಸೆಳೆತ ಉಂಟು ಮಾಡುತ್ತೆ. ಸಿಲ್ವರ್ ಸ್ಕ್ರೀನ್ ಮೇಲೆ ಆಡಂಬರ ಅಬ್ಬರ ನೋಡಿ ಬೋರಾಗಿದ್ದ ಪ್ರೇಕ್ಷಕನಿಗೆ ಹಳ್ಳಿ ಸೊಬಗು, ಸೊಗಡು ಸವಿಯೋ ಅವಕಾಶವನ್ನು ಆನೆಬಲ ಚಿತ್ರ ತಂದಿದೆ. ನಿರ್ದೇಶಕರ ಈ ಪ್ರಯತ್ನಕ್ಕೆ ನಾವು ಶಬ್ಬಾಶ್ ಹೇಳಲೇಬೇಕು. ಒಟ್ಟಿನಲ್ಲಿ ಮುದ್ದೆ ಉಂಡಷ್ಟೇ ಖುಷಿಯನ್ನು ಆನೆಬಲ ಚಿತ್ರ ನೀಡುತ್ತೆ.

    ಚಿತ್ರ: ಆನೆಬಲ
    ನಿರ್ದೇಶನ: ಸೂನಗಹಳ್ಳಿ ರಾಜು
    ನಿರ್ಮಾಪಕ: ಎ.ವಿ.ವೇಣುಗೋಪಾಲ್ ಅಡಕಮಾರನಹಳ್ಳಿ
    ಸಂಗೀತ ನಿರ್ದೇಶನ: ಪೂರ್ಣಚಂದ್ರ ತೇಜಸ್ವಿ
    ಛಾಯಾಗ್ರಾಹಕ: ಜಿ.ಟಿ. ಬೆಟ್ಟೇಗೌಡ
    ತಾರಾಬಳಗ: ಸಾಗರ್, ರಕ್ಷಿತ, ಇತರರು

    ರೇಟಿಂಗ್-3.5/4