Tag: village

  • ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಪರದಾಟ

    ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಪರದಾಟ

    – ಮಳೆಯ ನೀರಿನ ಆಶ್ರಯದಲ್ಲೇ ಬದುಕು

    ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ, ಮತ್ತೊಂದು ಕಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸಿನಕಲ್ಲು ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ.

    ಗ್ರಾಮಕ್ಕೆ ತೆರಳಲು ರಸ್ತೆ ಇಲ್ಲ, ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಮಳೆಯ ನೀರಿನ ಆಶ್ರಯದಲ್ಲೇ ದಿನದ ಬದುಕು ಸಾಗಿಸುತ್ತಿದ್ದಾರೆ. ಸಣ್ಣ ಕೆರೆಯ ನೀರನ್ನು ನಂಬಿ ಜೀವನ ನಡೆಸುತ್ತಿರುವ ಗ್ರಾಮದ ಜನರು ದಿನನಿತ್ಯದ ಬಳಕೆಗೆ ಕೊಳಕು ನೀರು ಆಧಾರವಾಗಿದೆ ಎಂದು ದೂರಿದ್ದಾರೆ.

    ದುಡ್ಡು ಕೊಟ್ಟು ಕುಡಿಯುವ ನೀರನ್ನು ಕೊಳ್ಳಬೇಕು. 500 ರಿಂದ 700 ರೂ. ಕೊಟ್ಟು ನೀರು ಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕಲ್ಲು ಬಂಡೆಗಳ ನಡುವೆ ನಡೆದು ನೀರು ತರುವ ಸ್ಥಿತಿ ನಮ್ಮ ಗ್ರಾಮಕ್ಕೆ ಬಂದಿದೆ. ಈಗಲಾದರೂ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ನೆಲಮಂಗಲ ಶಾಸಕ ಶ್ರೀನಿವಾಸ ಮೂರ್ತಿ ಹಾಗೂ ತಾಲೂಕು ಅಧಿಕಾರಿಗಳು ಸಹ ಗಮನಹರಿಸಬೇಕಿದೆ ಎಂದಿದ್ದಾರೆ.

  • ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ಕೊರೊನಾ ಸೋಂಕಿತೆಯ ಸಂಪರ್ಕ, ಜನ ಕ್ವಾರಂಟೈನ್- ಜಾನುವಾರುಗಳ ಮೂಕ ರೋಧನೆ

    ನೆಲಮಂಗಲ: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಕೆಲ ಗ್ರಾಮಸ್ಥರು ಮತ್ತು ಸಂಬಂಧಿಕರನ್ನು ಸೇರಿ 12 ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಿಂದ ಅಲ್ಲಿನ ಗ್ರಾಮದ ಜಾನುವಾರುಗಳು ಆಹಾರವಿಲ್ಲದೇ ಮೂಕ ರೋಧನೆ ಅನುಭವಿಸುತ್ತಿವೆ.

    ಕ್ವಾರಂಟೈನ್ ಆದ ಮನೆಯ ಜಾನುವಾರುಗಳನ್ನು ನೋಡುವವರಿಲ್ಲದೆ ಕಂಗೆಟ್ಟ ಮೂಕಪ್ರಾಣಿಗಳ ರೋಧನೆ ಮುಗಿಲುಮುಟ್ಟಿದೆ. ಪ್ರತಿದಿನ ಸುಮಾರು 60 ಲೀಟರ್ ಹಾಲು ನೀಡುತ್ತಿದ್ದ ಗೋವುಗಳ ಹಾಲು ವ್ಯರ್ಥವಾಗುತ್ತಿದೆ. ಕೊರೊನಾ ಬರುತ್ತೆ ಎಂದು ಗ್ರಾಮಸ್ಥರು ಅವರ ಮನೆಯ ಕಡೆ ಹೋಗುತ್ತಿಲ್ಲ. ಸ್ಥಳೀಯ ಹಾಲಿನ ಡೈರಿಯಲ್ಲಿ ಹಾಲನ್ನು ಖರೀದಿಸುತ್ತಿಲ್ಲ. ಜೊತೆಗೆ ಹಾಲನ್ನು ಪಡೆಯಲು ಸಹ ಹಾಲಿನ ಡೈರಿಯವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

    ಹೀಗಾಗಿ ಕೂಡಲೇ ತಾಲೂಕು ಆಡಳಿತ ಮೂಕ ಪ್ರಾಣಿಗಳ ನೆರವಿಗೆ ಬರುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಈ ಗ್ರಾಮದ ಸಮಸ್ಯೆ ಬಗ್ಗೆ ವಿಡಿಯೋ ಮಾಡಿದ ಅದೇ ಗ್ರಾಮದ ಭಾನುಪ್ರಕಾಶ್ ನೆಲಮಂಗಲ ತಾಲೂಕು ಆಡಳಿತಕ್ಕೆ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

  • ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಮಂಡ್ಯದಲ್ಲಿ ಮುಸ್ಸಂಜೆ ದಿಢೀರ್ ಬೆಳಕು – ವೈಜ್ಞಾನಿಕ ವಿಶ್ಲೇಷಣೆ

    ಬೆಂಗಳೂರು: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲಿ ಸಂಜೆಯ ವೇಳೆ ದಿಢೀರ್ ಬೆಳಕು ಮೂಡಿದ ವಿಚಾರ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ರೀತಿ ನಡೆಯಲು ಸಾಧ್ಯವಿಲ್ಲ ಎಂದರೆ ನೋಡಿದವರು ನಮ್ಮ ಗ್ರಾಮದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ಬೆಳಕಿನ ಕುರಿತು ಚರ್ಚೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿಯೂ ಈ ರೀತಿಯಾಗಿ ಬೆಳಕು ಮೂಡುವ ಸಾಧ್ಯತೆಯಿದೆ ಎನ್ನುವ ಮಾತು ಈಗ ಕೇಳಿ ಬಂದಿದೆ.

    ನಡೆದಿದ್ದು ಏನು?
    ಕಳೆದ ವಾರದ ಪಾಂಡವಪುರ ಭಾಗದಲ್ಲಿ ಭಾರೀ ಸದ್ದು ಕೇಳಿತ್ತು. ಇದಾದ ಮೂರು ದಿನದಲ್ಲಿ ಹೆರಗನಹಳ್ಳಿಯಲ್ಲಿ ಸಂಜೆ 7:15ಕ್ಕೆ ದಿಢೀರ್ ಬೆಳಕು ಕಾಣಿಸಿದೆ. ಸುಮಾರು 5 ನಿಮಿಷಗಳ ಕಾಲ ಈ ಬೆಳಕು ಇತ್ತು. ಬೆಳಗಿನ ಜಾವ ಬೆಳಕು ಹೇಗೆ ಇರುತ್ತದೋ ಅದೇ ರೀತಿಯಾಗಿ ಸಂಜೆಯೂ ಕಾಣಿಸಿತ್ತು. ಈ ರೀತಿ ಆಗಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ಅಚ್ಚರಿಗೆ ಕಾರಣವಾದ ಈ ಘಟನೆ ನಿಜವಾಗಿಯೇ ನಡೆಯಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ  ಭೌತಶಾಸ್ತ್ರ ಪ್ರಾಧ್ಯಾಪಕಿ ಡಾ. ಕಮಲಾ ಅವರನ್ನು ಸಂಪರ್ಕಿಸಿದ್ದು ಅವರು ಮಂಡ್ಯದ ಬೆಳಕನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.

    ವೈಜ್ಞಾನಿಕ ವಿಶ್ಲೇಷಣೆ ಏನು?
    ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಬದುಕಿನೊಂದಿಗೆ ಭೌತಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಿದ್ಯಮಾನಗಳು. ಈ ಎರಡೂ ಘಟನೆಗಳು ಕ್ಷಿತಿಜದಂಚಿನಲ್ಲಿ ನಡೆಯುತ್ತಿರುತ್ತದೆ. ಇವೆರಡರೊಂದಿಗೆ ಬೆಸೆದಿರುವ ವಿದ್ಯಮಾನಗಳು ಮುಂಜಾನೆ ಮತ್ತು ಮುಸ್ಸಂಜೆ.

    ಸೂರ್ಯ ಕ್ಷಿತಿಜದಂಚಿನಲ್ಲಿ ಮರೆಯಾದ ನಂತರವೂ ಸುಮಾರು 18 ಡಿಗ್ರಿಗಳಷ್ಟು ಕೆಳಗಿಳಿಯುವ ತನಕ ಸೂರ್ಯನಿಂದ ಬೆಳಕು ಸ್ಪರ್ಷಕವಾಗಿ (Tangential) ಬರುತ್ತಿರುತ್ತದೆ. ಇದು ಸುಮಾರು 45 – 50 ನಿಮಿಷ ಬರುತ್ತಿರುತ್ತದೆ. ಈ ರೀತಿ ಬಂದ ಬೆಳಕು ನಿರ್ದಿಷ್ಟ ದಿಕ್ಕಿನಲ್ಲಿ ಮೋಡಗಳ ಮೇಲೆ ಬಿದ್ದಾಗ ಅಲ್ಲಿನ ವಾತಾವರಣವನ್ನನುಸರಿಸಿ ಪ್ರತಿಫಲಿತವಾಗುತ್ತದೆ. ಈ ಪ್ರತಿಫಲಿತ ಬೆಳಕು ಮಂಡ್ಯದ ಕೆಲ ಹಳ್ಳಿಗಳ ಮೇಲಾಗಿದೆ.

    ಭೂಮಿಯ ಮೇಲಿನ ವಿವಿಧ ಪ್ರದೇಶಗಳು ಅಲ್ಲಿನ ಸೂರ್ಯಾಸ್ತದ ಸಮಯ ಇತ್ಯಾದಿ ಅಂಶಗಳ ಆಧಾರದ ಮೇಲೆ ಇದನ್ನು ವಿವರಿಸಲಾಗುತ್ತದೆ. ಧ್ರುವ ಪ್ರದೇಶಗಳೆಡೆಗೆ ಸಾಗಿದಂತೆ ಈ ವಿದ್ಯಮಾನ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು ಉಲ್ಕೆಯ ಸಿದ್ಧಾಂತದ ಆಧಾರದ ಮೇಲೂ ವಿವರಣೆಗಳು ನಡೆಯುತ್ತಿವೆ. ಈ ಕಾರಣದಿಂದ ಮಂಡ್ಯದ ಗ್ರಾಮದಲ್ಲಿ ಬೆಳಕು ಕಾಣಿಸಿರಬಹುದು.  ಇನ್ನಿತರ ವಿವರಣೆಗಳಿಗೆ ಮುಂದೆ ಕಾಯೋಣ.

  • ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಹಳ್ಳಿಗೆ ಇರ್ಫಾನ್ ಖಾನ್ ಹೆಸರಿಟ್ಟು ಗೌರವ ಸಲ್ಲಿಸಿದ ಗ್ರಾಮಸ್ಥರು

    ಮುಂಬೈ: ಬಾಲಿವುಡ್‍ನ ಅದ್ಭುತ ನಟ ಇರ್ಫಾನ್ ಖಾನ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸಿನಿಮಾಗಳು, ಜನರಿಂದ ಅವರು ಗಳಿಸಿದ ಪ್ರೀತಿ ಸದಾ ಜೀವಂತ. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರದಲ್ಲಿ ಗ್ರಾಮವೊಂದಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಟ್ಟು ಇರ್ಫಾನ್ ಖಾನ್ ಅವರಿಗೆ ಗೌರವ ಸಲ್ಲಿಸಿ ಪ್ರೀತಿ ಮೆರೆಯಲಾಗಿದೆ.

    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಸಮೀಪದಲ್ಲಿ ಪ್ರತಿಯಚಾ ವಾಡಾ ಗ್ರಾಮಸ್ಥರು ಇರ್ಫಾನ್ ಖಾನ್ ಅವರು ಮಾಡಿರುವ ಸಹಾಯಕ್ಕೆ ಗೌರವ ಸಲ್ಲಿಸಿದ್ದಾರೆ. ಇರ್ಫಾನ್ ಖಾನ್ ಬದುಕಿದ್ದಾಗ ಸಾಕಷ್ಟು ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ನೆರವಾಗಿದ್ದರು. ಹಲವು ಹಳ್ಳಿಗಳಿಗೆ, ಬಡ ಜನರಿಗೆ ಸಹಾಯ ಹಸ್ತಚಾಚಿದ್ದರು. ಮರಾಠಿಯಲ್ಲಿ ‘ಹೀರೋ ಚಿ ವಾಡಿ’ ಎಂದರೆ ಹೀರೋನ ನೆರೆಹೊರೆಯವರು ಎಂದರ್ಥ. ಹೀಗಾಗಿ ಅವರು ಮಾಡಿರುವ ಸಹಾಯಕ್ಕೆ ಪ್ರತಿಯಚಾ ವಾಡಾ ಗ್ರಾಮಕ್ಕೆ `ಹೀರೋ ಚಿ ವಾಡಿ` ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಇಗತ್ಪುರು ತಾಲೂಕಿನ ತ್ರಿಲಂಗವಾಡಿ ಕೋಟೆಯ ಸಮೀಪ ಇರ್ಫಾನ್ ಫಾರ್ಮ್ ಅವರ ಫಾರ್ಮ್ ಹೌಸ್ ಕೂಡ ಇದೆ. ಆದರೆ ಈ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಹಳ್ಳಿಗಳ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿರುವುದನ್ನು ಅರಿತ ಇರ್ಫಾನ್ ಅವರು ಅಲ್ಲಿನ ನೆರೆ ಹೊರೆಯ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದರು. ಪ್ರತಿಯಚಾ ವಾಡ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲೆಂದು ಅಂಬುಲೆನ್ಸ್, ಮಕ್ಕಳಿಗೆ ಕಂಪ್ಯೂಟರ್, ಪುಸ್ತಕ, ರೇನ್ ಕೋಟ್ ಮತ್ತು ಸ್ವೆಟರ್ ಗಳನ್ನು ನೀಡಿದ್ದರು. ಇರ್ಫಾನ್ ಅವರು ಮಾಡಿರುವ ಸಹಾಯವನ್ನು ಸ್ಮರಿಸಲು, ಅವರ ಮೇಲಿಟ್ಟಿರುವ ಪ್ರೀತಿಯಿಂದ ಗ್ರಾಮಸ್ಥರು ತಮ್ಮ ಹಳ್ಳಿಯ ಹೆಸರನ್ನು ‘ಹೀರೋ ಚಿ ವಾಡಿ` ಎಂದು ಬದಲಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲೂ ನಟಿಸಲಿದ್ದರು ಇರ್ಫಾನ್

    ಬಹಳ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇರ್ಫಾನ್ ಖಾನ್ ಅವರು ಏಪ್ರಿಲ್ 29ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಾಲಿವುಡ್‍ನಲ್ಲಿ ಹೀರೋ ಮತ್ತು ಪೋಷಕ ನಟ ಯಾವುದೇ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇರ್ಫಾನ್ ಅವರು, ಹಾಲಿವುಡ್‍ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 1988ರಲ್ಲಿ ತೆರೆಕಂಡ ಸಲಾಮ್ ಬಾಂಬೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇರ್ಫಾನ್ ನಂತರ ನೂರಾರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಇವರಿಗೆ 2011ರಲ್ಲಿ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

  • ಚನ್ನರಾಯಪಟ್ಟಣದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ಸೂಚನೆ

    ಚನ್ನರಾಯಪಟ್ಟಣದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಲು ಸೂಚನೆ

    – ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳು ಕ್ಲೋಸ್
    – ಸೋಂಕಿತರ ಹಳ್ಳಿ ಸೀಲ್‍ಡೌನ್

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲಿಸಲು ಅಧಿಕಾರಿಗಳ ಸೂಚನೆ ನೀಡಿದ್ದಾರೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿದ್ದವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ, ಪಟ್ಟಣದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜೊತೆಗೆ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಅಲ್ಲದೆ ಅನಾವಶ್ಯಕವಾಗಿ ಜನ ಬೀದಿಗಿಳಿಯದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳನ್ನು ಅಧಿಕಾರಿಗಳು ಕ್ಲೋಸ್ ಮಾಡಿಸಿದ್ದಾರೆ. ಮಂಗಳವಾರ ರಾತ್ರಿ ಸಾಮಾಜಿಕ ಅಂತರದ ನಿರ್ಲಕ್ಷ್ಯ ತೋರಿಸಿದ ಅಂಗಡಿಗಳನ್ನು ಅಧಿಕಾರಿಗಳು ಕ್ಲೋಸ್ ಮಾಡಿಸಿದ್ದಾರೆ. ಮುಂಬೈನಿಂದ ಬಂದ ಐವರಲ್ಲಿ ಮಂಗಳವಾರ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಅವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಈ ಕಾರಣದಿಂದ ಸೋಂಕಿತರ ಹಳ್ಳಿಯನ್ನು ಸೀಲ್‍ಡೌನ್ ಮಾಡಲಾಗಿದೆ.

  • ಊರಿಗೆ ತೆರಳಲೆಂದು 1,200 ಕಿ.ಮೀ ಪ್ರಯಾಣಿಸಿದ ನಂತ್ರ ಕೈ ಕೊಡ್ತು ಅದೃಷ್ಟ

    ಊರಿಗೆ ತೆರಳಲೆಂದು 1,200 ಕಿ.ಮೀ ಪ್ರಯಾಣಿಸಿದ ನಂತ್ರ ಕೈ ಕೊಡ್ತು ಅದೃಷ್ಟ

    – ಇನ್ನೂ 300 ಕಿ.ಮೀ ದೂರವಿರುವಾಗ್ಲೇ ಲಾಕ್
    – ಪ್ರತಿದಿನ 180-220 ಕಿ.ಮೀ. ಪ್ರಯಾಣ

    ಭುವನೇಶ್ವರ: ಲಾಕ್‍ಡೌನ್ ಆದ ಪರಿಣಾಮ ಅನೇಕ ಕಾರ್ಮಿಕರು ತಮ್ಮ ಸ್ವ-ಗ್ರಾಮಗಳಿಗೆ ನಡೆದುಕೊಂಡೇ ಹೋಗಿದ್ದಾರೆ. ಆದರೆ ಇಲ್ಲಿಬ್ಬರು ಸ್ನೇಹಿತರು ತಮ್ಮ ಗ್ರಾಮಕ್ಕೆ ತೆರಳು ಸೈಕಲ್ ಮೂಲಕ 1,200 ಕಿ.ಮೀ ದೂರ ಪ್ರಯಾಣ ಮಾಡಿದ್ದಾರೆ. ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿದ್ದು, ಇದೀಗ ಅವರನ್ನು 14 ದಿನ ಐಸೋಲೇಷನ್‍ನಲ್ಲಿ ಇರಿಸಲಾಗಿದೆ.

    ದೀಪ್ತಿರಾಜನ್ ಮತ್ತು ಗಣೇಶ್ವರ್ ಸೈಕಲಿನಲ್ಲಿ 1500 ಕಿಲೋ ಮೀಟರ್ ಪ್ರಯಾಣಿಸಲು ಮುಂದಾಗಿದ್ದರು. ಇಬ್ಬರು ಯುವಕರು ಪುದುಚೇರಿಯಿಂದ ತಮ್ಮ ಜಗತ್‍ಸಿಂಗ್‍ಪುರ ಜಿಲ್ಲೆಯ ಗ್ರಾಮಗಳಿಗೆ ತಲುಪಲು ಸೈಕಲ್‍ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದರೆ ಇವರಿಬ್ಬರು ತಮ್ಮ ಗ್ರಾಮ ತಲುಪುವ ಮುನ್ನವೇ ವಿಶಾಖಪಟ್ಟಣಂನಲ್ಲಿ ಐಸೋಲೇಷನ್ ವಾರ್ಡಿನಲ್ಲಿ ಬಂಧಿಯಾಗಿದ್ದಾರೆ.

    ದೀಪ್ತಿರಾಜನ್ ಮತ್ತು ಗಣೇಶ್ವರ್ ಇಬ್ಬರು ಸ್ನೇಹಿತರಾಗಿದ್ದು, ಪುದುಚೆರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಫೆಬ್ರವರಿಯಲ್ಲಿ ಅಲ್ಲಿಗೆ ತೆರಳಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಅವರು ತಮ್ಮ ಗ್ರಾಮಕ್ಕೆ ಹಿಂದಿರುಗಲು ಸಾಧ್ಯವಾಗದೆ ಪುದುಚೆರಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ಮನೆ ಬಾಡಿಗೆ ಪಾವತಿಸಲು ಹಣವಿಲ್ಲದ ಕಾರಣ ಇಬ್ಬರು ತಮ್ಮ ಗ್ರಾಮಗಳಿಗೆ ವಾಪಸ್ ಆಗಲು ನಿರ್ಧರಿಸಿದ್ದರು.

    ಅದರಂತೆಯೇ ಇಬ್ಬರು ತಮ್ಮ ತಮ್ಮ ಸೈಕಲ್‍ನಲ್ಲಿ ಏಪ್ರಿಲ್ 12 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೂಲಕ ಸಂಚರಿಸಿದ್ದ ಅವರನ್ನು ವಿಶಾಖಪಟ್ಟಣಂನಲ್ಲಿ ಐಸೋಲೇಷನ್ ವಾರ್ಡಿಗೆ ಒಳಪಡಿಸಲಾಗಿದೆ.

    ಇಬ್ಬರು ಯುವಕರು ವಿಶಾಖಪಟ್ಟಣಂವರೆಗೆ ಸೈಕಲ್‍ಗಳಲ್ಲಿ 1,500 ಕಿ.ಮೀ ಪ್ರಯಾಣವನ್ನು ಕೈಗೊಂಡಿದ್ದರು. ಆದರೆ ವಿಶಾಖಪಟ್ಟಣಂನಲ್ಲಿ ಇಬ್ಬರು ಐಸೋಲೇಷನ್ ವಾರ್ಡಿಗೆ ಶಿಫ್ಟ್ ಆಗಿದ್ದಾರೆ. ಇಲ್ಲಿಯವರೆಗೂ ಅವರು 1,200 ಕಿ.ಮೀ. ಪ್ರಯಾಣ ಮಾಡಿದ್ದರು. ಪ್ರತಿದಿನ ಸುಮಾರು 12-14 ಗಂಟೆಗಳ ಕಾಲ ಸೈಕಲ್ ಮೂಲಕ 180-220 ಕಿ.ಮೀ. ಪ್ರಯಾಣ ಮಾಡುತ್ತಿದ್ದರು. ಇನ್ನೊಂದೆರಡು ದಿನಗಳು ಸೈಕಲ್ ನಲ್ಲಿ ಪ್ರಯಾಣಿಸಿದ್ದರೆ ಇಬ್ಬರೂ ಊರು ಸೇರಲು ಸಾಧ್ಯವಾಗುತ್ತಿತ್ತು.

    ಈ ವೇಳೆ ಮಾತನಾಡಿದ ಗಣೇಶ್ವರ, ನಾನು ಮತ್ತು ದೀಪ್ತಿರಾಜನ್ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡದಿದ್ದರೆ 2-3 ದಿನಗಳಲ್ಲಿ ತಮ್ಮ ಗ್ರಾಮಗಳನ್ನು ತಲುಪುತ್ತಿದ್ದೆವು. ತಮ್ಮನ್ನು ಕಾಲೇಜಿನಲ್ಲಿ ಸ್ಥಾಪಿಸಲಾದ ಪ್ರತ್ಯೇಕ ಐಸೋಲೇಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಲಾಕ್‍ಡೌನ್ ವೇಳೆ ನಮಗೆ ಊಟವೂ ಸಿಗುತ್ತಿರಲ್ಲಿ. ಹೀಗಾಗಿ ಸೈಕಲ್ ಮೂಲಕ ಹೊರಟ್ಟಿದ್ದೆವು. ನಾವು ರಾತ್ರಿಯಲ್ಲಿ ಪೆಟ್ರೋಲ್ ಪಂಪ್‍ಗಳಲ್ಲಿ ಮಲಗುತ್ತಿದ್ದೆವು ಎಂದು ದೀಪ್ತಿರಾಜನ್ ಹೇಳಿದರು.

  • 26 ದಿನದಿಂದ 19 ಗಂಟೆ ಗ್ರಾಮಕ್ಕೆ ಕಾವಲು ಕೂತ ಯುವಕರು

    26 ದಿನದಿಂದ 19 ಗಂಟೆ ಗ್ರಾಮಕ್ಕೆ ಕಾವಲು ಕೂತ ಯುವಕರು

    ಚಿಕ್ಕಮಗಳೂರು: ಕೊರೊನಾ ವೈರಸ್‍ಗೆ ಆತಂಕಗೊಂಡು ಕಳೆದ 26 ದಿನಗಳಿಂದ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮದ ಜನ ಇಂದಿಗೂ ದಿನಕ್ಕೆ 19 ಗಂಟೆಗಳ ಕಾಲ ಗ್ರಾಮದ ದ್ವಾರಬಾಗಿಲಲ್ಲಿ ಕಾವಲು ಕೂತಿದ್ದಾರೆ.

    ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇವತ್ತು ನೆಗೆಟಿವ್ ಇದ್ದ ಜಿಲ್ಲೆಯಲ್ಲಿ ಬೆಳಗಾಗುವಷ್ಟರಲ್ಲಿ ಎರಡು-ಮೂರು ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಇಷ್ಟು ದಿನ ಜಿಲ್ಲೆ, ತಾಲೂಕು, ಪಟ್ಟಣಗಳಲ್ಲಿದ್ದ ಕೊರೊನಾ ಹಳ್ಳಿಗೂ ಕಾಲಿಟ್ಟಿರುವುದರಿಂದ ಜನ ಮತ್ತಷ್ಟು ಭಯಗೊಂಡಿದ್ದಾರೆ. ಹೀಗಾಗಿ ಯುವಕರು ಗ್ರಾಮದ ಮುಂಭಾಗ ಟೋಲ್ ಗೇಟ್ ನಿರ್ಮಿಸಿ ಪೊಲೀಸರಂತೆ ಕಾವಲು ಕೂತಿದ್ದಾರೆ.

    ಬೆಳಗ್ಗೆ 6 ಗಂಟೆಯಿಂದ ರಾತ್ರಿ 1 ಗಂಟೆವರೆಗೂ ಕಾವಲು ಕೂತಿದ್ದಾರೆ. ವಿದೇಶ, ಹೊರರಾಜ್ಯ, ಬೆಂಗಳೂರು, ಮೈಸೂರು ಸೇರಿದಂತೆ ಅಕ್ಕಪಕ್ಕದ ಊರಿನವರೂ ಯಾರೂ ಬರುವಂತಿಲ್ಲ. ಕದ್ದು ಮುಚ್ಚಿ ಯಾರಾದರೂ ಬಂದರೆ ಅವರ ವಿರುದ್ಧ ಗ್ರಾಮಸ್ಥರಿಂದ ಸೂಕ್ತ ಕ್ರಮವೆಂದು ಬೋರ್ಡ್ ಹಾಕಿದ್ದಾರೆ. ಯಾರಾದರೂ ಕದ್ದು ಮುಚ್ಚಿ ಗ್ರಾಮಕ್ಕೆ ಬಂದರೆ ಅಕ್ಕಪಕ್ಕದವರು ಗ್ರಾಮದ ಮುಖಂಡರಿಗೆ ತಿಳಿಸುವಂತೆ ತೀರ್ಮಾನಿಸಿದ್ದಾರೆ.

    ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಅದು ಹಾಗೇ ಇರಲಿ ಎಂದು ಜಿಲ್ಲೆಯ ಬಹುತೇಕ ಗ್ರಾಮಗಳು ಗ್ರಾಮದ ಗಡಿಯಲ್ಲಿ ಬಂದೋಬಸ್ತ್ ಮಾಡಿದ್ದಾರೆ. ಊರಿನ ಯುವಕರು ಶಿಫ್ಟ್ ಆಧಾರದಲ್ಲಿ ದಿನಕ್ಕೆ ಮೂರು ಶಿಫ್ಟ್‍ನಂತೆ ಕಾದು ಕೂತಿದ್ದಾರೆ.

  • ಸಂಕಷ್ಟದಲ್ಲಿದ್ದ ರೈತನ ಮನೆಗೆ ತೆರಳಿ, ಹೊಲ ಉತ್ತು ನೆರವು ನೀಡಿದ ಎಂಎಲ್‍ಸಿ ಗೋಪಾಲಸ್ವಾಮಿ

    ಸಂಕಷ್ಟದಲ್ಲಿದ್ದ ರೈತನ ಮನೆಗೆ ತೆರಳಿ, ಹೊಲ ಉತ್ತು ನೆರವು ನೀಡಿದ ಎಂಎಲ್‍ಸಿ ಗೋಪಾಲಸ್ವಾಮಿ

    ಹಾಸನ: ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಅವರು ಸಂಕಷ್ಟದಲ್ಲಿದ್ದ ರೈತನ ಮನೆಗೆ ತೆರಳಿ ಹೊಲ ಉತ್ತು ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ದಡದಳ್ಳಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಮೇವಿಲ್ಲದೆ ಸಾಯುತ್ತಿದ್ದ ಮೇಕೆಗಳನ್ನು ನೋಡಿ ಕಂಗೆಟ್ಟಿದ್ದ ರೈತ ಕುಟುಂಬದ ಬಳಿ ತೆರಳಿದ ಎಂಎಲ್‍ಸಿ ಗೋಪಾಲಸ್ವಾಮಿ ಮೇವಿನ ವ್ಯವಸ್ಥೆ ಮಾಡುವುದರ ಜೊತೆಗೆ ರೈತನ ಹೊಲ ಉಳುವ ಮೂಲಕ ಸಾಂಕೇತಿಕವಾಗಿ ಧೈರ್ಯ ತುಂಬಿದ್ದಾರೆ.

    ದಡದಳ್ಳಿ ಗ್ರಾಮದ ಯುವ ರೈತ ಸಂತೋಷ್ ಮೇಕೆ ಸಾಕಾಣಿಕೆ ಮೂಲಕ ಬದುಕುಕಟ್ಟಿಕೊಂಡಿದ್ದರು. ಹೆಚ್ಚುವರಿ ಮೇಕೆ ಸಾಕಾಣಿಕೆ ಮಾಡುವ ಉದ್ದೇಶದಿಂದ 100 ಮೇಕೆಗಳನ್ನು ತರಲು ರೈತ ಸಂತೋಷ್ ರಾಜಸ್ಥಾನಕ್ಕೆ ತೆರಳಿದ್ದರು. ಮೇಕೆ ಕೊಂಡುಕೊಂಡು ವಾಪಸ್ ಬರಲು ಸಿದ್ಧತೆ ನಡೆಸಿದ್ದಾಗ ದೇಶಾದ್ಯಂತ ಲಾಕ್‍ಡೌನ್‍ನಿಂದ ಸಂತೋಷ್ ಮೇಕೆಗಳ ಜೊತೆ ರಾಜಸ್ಥಾನದಲ್ಲೇ ಲಾಕ್ ಆಗಿದ್ದಾರೆ. ಇದೀಗ ಪ್ರತಿದಿನ ರಾಜಸ್ಥಾನದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತ ಮೇಕೆ ಸಾಕಲಾಗದೆ ರೈತ ಸಂತೋಷ್ ಪರಿತಪಿಸುತ್ತಿದ್ದಾರೆ.

    ಇತ್ತ ಸಂತೋಷ್ ಸ್ವಗ್ರಾಮ ದಡದಳ್ಳಿಯಲ್ಲಿ ಸಾಕಿದ್ದ ಮೇಕೆಗಳೂ ಮೇವಿಲ್ಲದೆ ಸಾವನ್ನಪ್ಪುತ್ತಿದ್ದು, ಮಗನಿಲ್ಲದ ವೇಳೆ ಮೇಕೆ ಸಾವಿನಿಂದ ಪೋಷಕರು ಕಂಗಾಲಾಗಿದ್ದರು. ವಿಷ್ಯ ತಿಳಿದ ಎಂಎಲ್‍ಸಿ ಗೋಪಾಲಸ್ವಾಮಿ ದಡದಳ್ಳಿ ಗ್ರಾಮಕ್ಕೆ ತೆರಳಿ ಮೇಕೆಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಸಾಂಕೇತಿಕವಾಗಿ ರೈತರ ಹೊಲ ಉತ್ತು, ಜೋಳದ ಬೀಜ ಬಿತ್ತಿ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

  • ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯದ ಒಂದೇ ಗ್ರಾಮದ 50 ಮಂದಿಗೆ ಜ್ವರ – ಆತಂಕದಲ್ಲಿ ಗ್ರಾಮಸ್ಥರು

    ಮಂಡ್ಯ: ಇದಕ್ಕಿದ್ದಂತೆ ಒಂದು ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ 50 ಮಂದಿ ಜನರಿಗೆ ಕಳೆದ ಹಲವು ದಿನಗಳಿಂದ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ. ಗ್ರಾಮದಲ್ಲಿ 100 ಕುಟುಂಬಗಳಿದ್ದು, ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಜ್ವರ ಕಾಣಿಸಿಕೊಂಡಿದೆ. ಇದರದ ಇಡೀ ಗ್ರಾಮ ಹಾಗೂ ಅಕ್ಕ-ಪಕ್ಕದ ಜನರು ಗಾಬರಿಗೊಂಡಿದ್ದಾರೆ.

    ಈ ಗ್ರಾಮಕ್ಕೆ ಮುಂಬೈ, ದುಬೈ ಹಾಗೂ ಬೆಂಗಳೂರಿನಿಂದ ಹಲವು ಜನರು ಬಂದಿರುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಲವು ದಿನಗಳಿಂದ ಜ್ವರ ಬಂದಿದ್ದರೂ ಸಹ ಜನರು ಆಸ್ಪತ್ರೆಗೆ ಹೋಗುತ್ತಿಲ್ಲ. ಆಸ್ಪತ್ರೆಗೆ ಹೋದರೆ ಕ್ವಾರಂಟೈನ್‍ನಲ್ಲಿ ಹಾಕಬಹುದು ಎನ್ನುವ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.

    ಇಂದಿಗೂ ಸಹ ಈ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಾಲಿಟ್ಟಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಜನರನ್ನು ತಪಾಸಣೆ ಮಾಡಬೇಕಾಗಿದೆ.

  • ಗ್ರಾಮದ ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ವಿನೋದ್ ರಾಜ್

    ಗ್ರಾಮದ ಬೀದಿ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ವಿನೋದ್ ರಾಜ್

    – ಪುತ್ರನಿಗೆ ತಾಯಿ ಲೀಲಾವತಿ ಸಾಥ್

    ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಎಚ್ಚರ ವಹಿಸುವುದರ ಭಾಗವಾಗಿ ನಟ ವಿನೋದ್ ರಾಜ್ ತಮ್ಮ ಹಳ್ಳಿಯನ್ನು ಕಾಪಾಡಲು ಮುಂದಾಗಿದ್ದು, ಇಡೀ ಗ್ರಾಮದ ರಸ್ತೆ ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ.

    ಸ್ವಗ್ರಾಮ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಟ ವಿನೋದ್ ರಾಜ್ ರಾಸಾಯನಿಕ ಸಿಂಪಡಣೆ ಮಾಡಿಸಿದ್ದು, ಈ ಮೂಲಕ ತಮ್ಮ ಗ್ರಾಮದ ಸುರಕ್ಷತೆಗೆ ಮುಂದಾಗಿದ್ದಾರೆ. ಹಿರಿಯ ನಟಿ ಡಾ.ಲೀಲಾವತಿ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ನಟ ವಿನೋದ್ ರಾಜ್ ಅವರು ಸ್ವತಃ ಕ್ರಿಮಿನಾಶಕ ಗನ್ ಹಿಡಿದು ಸಿಂಪಡಿಸಿದ್ದಾರೆ. ಗ್ರಾಮಕ್ಕೆ ವೈರಸ್ ಕಾಲಿಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಔಷಧಿಯನ್ನು ಸಿಂಪಡಣೆ ಮಾಡಿಸಿದ್ದಾರೆ.

    ಗ್ರಾಮದ ಬೀದಿ, ಮನೆಗಳ ಗೋಡೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ವಿನೋದ್ ರಾಜ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮವೇ ನಟ ವಿನೋದ್ ರಾಜ್ ಬೆಂಬಲಕ್ಕೆ ನಿಂತು ಗ್ರಾಮದ ಸ್ವಚ್ಛತೆಗೆ ಮುಂದಾಗಿದೆ. ತಮ್ಮ ತೋಟದಲ್ಲಿ ಬಳಸುವ ಮಿನಿ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ.

    ಈ ವೇಳೆ ಹಿರಿಯ ನಟಿ ಲೀಲಾವತಿ ಅವರು ಕೈಮುಗಿದು ಬೇಡಿಕೊಂಡಿದ್ದು, ಎಲ್ಲರೂ ಚೆನ್ನಾಗಿ ಬಾಳಬೇಕು ಅಂತ ಇಲ್ಲಿ ಬಂದವರು. ಆದರೆ ದೇವರು ಕಷ್ಟ ಕೊಟ್ಟಿದ್ದಾನೆ. ಕೊರೊನಾ ವೈರಸ್ ನಮ್ಮ ಕರ್ಮ ಆಗಿಬಿಟ್ಟಿದೆ. ಸರ್ಕಾರದ ಕಾನೂನು ಮೀರಬೇಡಿ, ಮನೆಯಲ್ಲೇ ಇದ್ದು ಸಹಕರಿಸಿ. ನಿಮ್ಮ ಮನೆ, ಜಾಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಪೊಲೀಸರು ಹೊಡೆದರು ಎಂದು ಹೇಳುವ ಬದಲು ಹೊಡೆಯದ ಹಾಗೆ ಇರಿ. ಮಾಸ್ಕ್ ಧರಿಸಿ ಶುಚಿತ್ವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.