Tag: village

  • ನೋ ಟವರ್, ನೋ ಪವರ್-ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು, ಪೋಷಕರ ಪರದಾಟ

    ನೋ ಟವರ್, ನೋ ಪವರ್-ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು, ಪೋಷಕರ ಪರದಾಟ

    -ಮಲೆನಾಡಿನ ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ

    ಶಿವಮೊಗ್ಗ : ಆನ್‍ಲೈನ್ ಶಿಕ್ಷಣಕ್ಕೆ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಎದುರಾಗಿದೆ. ಆನ್‍ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಈ ಎರಡೂ ಅತೀ ಮುಖ್ಯವಾಗಿದೆ. ಆದ್ರೆ ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡರದ್ದು ಸಮಸ್ಯೆ ಇದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಬಗ್ಗೆ ಒಲವು ತೋರುತ್ತಿಲ್ಲ. ನೆಟ್ ವರ್ಕ್ ಸಿಗಬೇಕು ಅಂದ್ರೆ ಊರಿಂದ ಆಚೆ ಹೋಗಬೇಕಿದೆ.

    ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಎಲ್ಲಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಈ ಮಹಾಮಾರಿಯಿಂದ ಮಕ್ಕಳ ಶೈಕ್ಷಣಿಕ ಕಲಿಕೆಯ ಮೇಲೆಯೂ ಪರಿಣಾಮ ಬೀರಿದೆ. ಕೊರೊನಾ ಭಯದಿಂದಾಗಿ ಇದುವರೆಗೂ ಶಾಲಾ ಕಾಲೇಜುಗಳು ಆರಂಭವಾಗಿಲ್ಲ. ಆದರೆ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸಕಾರ ಇತ್ತೀಚಿಗೆ ಆನ್‍ಲೈನ್ ಕ್ಲಾಸ್ ನ ಮೊರೆ ಹೋಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ವ್ಯವಸ್ಥೆ ವರ್ಕ್ ಔಟ್ ಆಗುತ್ತಿಲ್ಲ ಎಂಬ ಮಾತಿಗೆ ಸಾಕ್ಷಿ ದೊರೆತಿದ್ದು, ಅದೆಷ್ಟೋ ಗ್ರಾಮಗಳಲ್ಲಿ ಮಳೆಗಾಲ ಆಗಿರುವುದರಿಂದಾಗಿ 2 ದಿನಕ್ಕೊಮ್ಮೆ ಕರೆಂಟ್ ಬರುತ್ತಿದ್ದು, ಇದು ಕೂಡ ಸಮಸ್ಯೆಯಲ್ಲೊಂದಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸರ್ಕಾರ, ಸದ್ಯ ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಈ ಆನ್‍ಲೈನ್ ಶಿಕ್ಷಣ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಅನುಕೂಲಕರವಾಗುತ್ತದೆಯೇ ಹೊರತು ಗ್ರಾಮೀಣ ಭಾಗದ ಮಕ್ಕಳಿಗಲ್ಲ. ಇದನ್ನೂ ಓದಿ:  ಮಕ್ಕಳ ಆನ್‍ಲೈನ್ ಶಿಕ್ಷಣಕ್ಕಾಗಿ ಮಾಂಗಲ್ಯ ಅಡವಿಟ್ಟ ತಾಯಿ- ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆ

    ಇಂತಹ ಸ್ಥಿತಿಯಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೆಂದಾಳುಬೈಲು ಹೊರತಾಗಿಲ್ಲ. ಕುಂದಾದ್ರಿ ಬೆಟ್ಟದ ಬುಡದಲ್ಲಿ ಇರುವ ಪುಟ್ಟ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇದೆ. ಇಲ್ಲಿನ ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುವವರು. ಇವರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಹಿಂದೆ ಮುಂದೆ ನೋಡ್ತಾರೆ. ಅದರಲ್ಲೂ ಮಕ್ಕಳಿಗೆ ಮೊಬೈಲ್ ಕೊಡಿಸುವುದು ಆಗದ ಮಾತು. ಮೊಬೈಲ್ ಇದ್ದರೂ ನೆಟ್‍ವರ್ಕ್ ಇಲ್ಲ. ಮೊಬೈಲ್ ಚಾರ್ಜ್ ಮಾಡಲು ಪವರ್ ಇರುವುದಿಲ್ಲ. ಇದು ಇಲ್ಲಿನ ಸಮಸ್ಯೆ. ನಗರ ಭಾಗದ ಬಹುತೇಕ ಪೋಷಕರಿಗೆ ಆನ್‍ಲೈನ್ ಶಿಕ್ಷಣ ಮಾಡಿರುವುದು ಸಂತಸ ತಂದಿದೆ. ಮಕ್ಕಳಿಗೆ ಶಿಕ್ಷಣ ಸಿಗುತ್ತದೆ ಅನ್ನುವುದಕ್ಕಿಂತ, ಮಕ್ಕಳು ಮನೆಯಲ್ಲಿ ನೀಡುತ್ತಿದ್ದ ಕಾಟದಿಂದ ಬೇಸತ್ತು ಪೋಷಕರು ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪೋಷಕರು ಇದ್ದಾರೆ. ಇದನ್ನೂ ಓದಿ: ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆ ಮಾರಿದ ತಾಯಿ

    ಅಷ್ಟಕ್ಕೂ ಆನ್‍ಲೈನ್ ಶಿಕ್ಷಣಕ್ಕೆ ಪವರ್ ಹಾಗೂ ಟವರ್ ಅತೀ ಮುಖ್ಯವಾಗಿದೆ. ಆದರೆ, ಮಲೆನಾಡಿನಲ್ಲಿ ಪವರ್ ಹಾಗೂ ಟವರ್ ಎರಡೂ ಇಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ, ವಿದ್ಯಾರ್ಥಿಗಳು ಹೇಗೆ ಆನ್‍ಲೈನ್ ಕ್ಲಾಸ್ ನೋಡಲು ಸಾಧ್ಯವಾಗುತ್ತದೆ ಎಂದು ಪೋಷಕರು ಪ್ರಶ್ನಿಸುವಂತಾಗಿದೆ. ಮಲೆನಾಡಿನ ಭಾಗದಲ್ಲಿ ಮೊಬೈಲ್ ಟವರ್ ಗಳ ಸಮಸ್ಯೆ ವಿಪರೀತವಿದೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಇಲ್ಲಿ ಸಾಮಾನ್ಯವಾಗಿ ಫೋನ್ ನಲ್ಲಿ ಮಾತನಾಡಬೇಕಾದರೆ ಮನೆ ಮೇಲೆ ಹತ್ತಬೇಕು, ಮರ ಏರಬೇಕು ಇಲ್ಲವೇ ಸಮೀಪದ ಬೆಟ್ಟ ಹತ್ತುವ ಸ್ಥಿತಿ ಇದೆ. ಹೀಗಿರುವಾಗ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿ ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಸ್ಥಿತಿಯಲ್ಲಿ ಮೊಬೈಲ್ ಇಂಟರ್ ನೆಟ್ ನೆಟ್‍ವರ್ಕ್ ದೊರೆಯುವುದು ಸಾಹಸವೇ ಸರಿ. ವಿದ್ಯಾಭ್ಯಾಸದ ಬಗ್ಗೆ ಅರಿವು ಇರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಅವರಿಗೆ ಮೊಬೈಲ್ ನೀಡುವ ಶಕ್ತಿ ಇರುವುದಿಲ್ಲ. ಅದಕ್ಕೆ ಪ್ರತಿ ತಿಂಗಳು ರೀಚಾರ್ಜ್ ಮಾಡಿಸಲು ಸಹ ಆಗುವುದಿಲ್ಲ. ಇಂತಹ ಸ್ಥಿತಿ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಇದೆ. ಅದರಲ್ಲೂ ಆನ್‍ಲೈನ್ ಕ್ಲಾಸ್ ಗಳು ಸಾಮಾನ್ಯ ತರಗತಿಗಿಂತ ಭಿನ್ನವಾಗಿರುತ್ತವೆ. ಸಾಮಾನ್ಯ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡಿದ ಮೇಲೆ ಅಲ್ಲಿಯೇ ಚರ್ಚೆ ನಡೆಸಬಹುದು. ಆನ್‍ಲೈನ್ ಕ್ಲಾಸ್ ನಲ್ಲಿ ಅವರು ಹೇಳಿದ್ದು, ಬೇಗ ಅರ್ಥವಾಗುವುದಿಲ್ಲ. ಪ್ರಶ್ನೆ ಕೇಳಲು ಸಹ ಆಗುವುದಿಲ್ಲ. ಇದರಿಂದ ಆನ್‍ಲೈನ್ ಕ್ಲಾಸ್ ಗಳನ್ನು ಮಲೆನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಷ್ಟಾಗಿ ಇಷ್ಟಪಡುತ್ತಿಲ್ಲ.

    ಒಟ್ಟಾರೆ ಆನ್‍ಲೈನ್ ಶಿಕ್ಷಣ ಎಂಬುದು ಎಲ್ಲರಿಗೂ ಅಲ್ಲ ಎಂಬುದು ಕೆಲವೇ ದಿನಗಳಲ್ಲಿಯೇ ತಿಳಿದು ಬಂದಿದ್ದು, ಮಲೆನಾಡು ಸೇರಿದಂತೆ, ಅದೆಷ್ಟೋ ಗ್ರಾಮಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ

  • ಬದುಕು ಕಟ್ಟಿಕೊಂಡ ಬೆಂಗಳೂರಿನಿಂದ ದೂರ ಉಳಿದ ಜನತೆ

    ಬದುಕು ಕಟ್ಟಿಕೊಂಡ ಬೆಂಗಳೂರಿನಿಂದ ದೂರ ಉಳಿದ ಜನತೆ

    – ಬೆಂಗಳೂರಿಗೆ ಮತ್ತೆ ಬರಲು ಹಿಂದೇಟು

    ಬೆಂಗಳೂರು: ನಗರಕ್ಕೆ ಬಂದು ಬದುಕು ಕಟ್ಟಿಕೊಂಡು ಹೇಗೋ ಜೀವನ ಮಾಡುತ್ತಿದ್ದ ಜನರು ಈಗ ಬೆಂಗಳೂರಿಗೆ ಮತ್ತೆ ವಾಪಸ್ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಮಾಹಾಮಾರಿಯಿಂದ ಬೆಂಗಳೂರು ಬಿಟ್ಟು ಹೋದ ಜನರು ಮತ್ತೆ ವಾಪಸ್ ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರಿನಲ್ಲಿ ಉತ್ತಮ ಸಂಬಳ ಪಡೆದು ಜೀವನ ಕಟ್ಟಿಕೊಂಡಿದ್ದ ಸಾವಿರಾರು ಜನರಿಗೆ ಕೊರೊನಾ ಮಹಾಮಾರಿ ಹೊಡೆತ ಕೊಟ್ಟಿದೆ. ಒಂದೆಡೆ ಲಾಕ್‍ಡೌನ್, ಸೀಲ್‍ಡೌನ್‍ನಿಂದ ಕಂಪನಿಗಳು ಆರ್ಥಿಕ ನಷ್ಟ ಅನುಭವಿಸಿವೆ. ಮತ್ತೊಂದೆಡೆ ಉದ್ಯೋಗಿಗಳಿಗೆ ಕಂಪನಿಗಳು ಸಂಬಳ ನೀಡಲೂ ಕಷ್ಟವಾಗಿದೆ. ಇದಲ್ಲದೇ ಅತೀ ವೇಗದಲ್ಲಿ ಬೆಂಗಳೂರಿನಲ್ಲಿ ಹಬ್ಬುತ್ತಿರುವ ಕೊರೊನಾದಿಂದ ಹಲವು ಉದ್ಯೋಗಿಗಳು ಕೆಲಸ ಬಿಟ್ಟು ಮನೆಗೆ ತೆರಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲೂ ನೂರಾರು ಜನರು ಬೆಂಗಳೂರಿನಿಂದ ತವರು ಕಡೆ ಮುಖ ಮಾಡಿದ್ದು, ಕೆಲವರು ಕೊರೊನಾಗೆ ಹೆದರಿ ಕೆಲಸ ತೊರೆದು ಮನೆಯತ್ತ ಮುಖಮಾಡಿದ್ದಾರೆ. ಇಲ್ಲಿಯೇ ಸಣ್ಣ ಉದ್ಯೋಗ ಸಿಕ್ಕರೂ ಮಾಡುತ್ತೇನೆ. ಬೆಂಗಳೂರಿಗೆ ಹೋಗುವುದಿಲ್ಲ. ಇಂದಿಗೆ ನಾಲ್ಕು ತಿಂಗಳಿನಿಂದ ಕಂಪನಿಯಿಂದ ಸಂಬಳವಾಗಿಲ್ಲ. ಬೆಂಗಳೂರಿನಲ್ಲಿ ಹಣವಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯ ಕಾರಣದಿಂದ ಮನೆಗೆ ಬಂದಿದ್ದೇನೆ ಎಂದು ಖಾಸಗಿ ಕಂಪನಿಯ ಉದ್ಯೋಗಿ ಜಗದೀಶ್ ಹೇಳಿದ್ದಾರೆ.

    ಇತ್ತ ಧಾರವಾಡದ ಜನತೆಗೂ ಬೆಂಗಳೂರಿಗೆ ಹೋಗಬೇಕೆಂದರೆ ಭಯ ಆಗುತ್ತಿದೆ. ಕಳೆದ 10 ರಿಂದ 20 ವರ್ಷಗಳ ಕಾಲ ಬೆಂಗಳೂರಲ್ಲೇ ಇದ್ದು ಕೆಲಸ ಮಾಡಿಕೊಂಡಿದ್ದ ಜನರಿಗೆ ಬೆಂಗಳೂರಿಗೆ ಬೇಡವಾಗಿದೆ. ಲಾಕ್‍ಡೌನ್ ನಂತರ ಧಾರವಾಡಕ್ಕೆ ಬಂದಿರುವ ಸಹಾಯ ನಿರ್ದೇಶಕರೊಬ್ಬರು, 19 ವರ್ಷಗಳಿಂದ ಬೆಂಗಳೂರಲ್ಲಿ ಇದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹರಡುವುದನ್ನು ನೋಡಿ ಹೋಗುವುದಕ್ಕೆ ಮನಸ್ಸಿಲ್ಲ. ಅಲ್ಲದೇ ಸಿನೆಮಾ ಇಂಡಸ್ಟ್ರಿ ಸ್ಥಿತಿಯಂತೂ ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ. ಸದ್ಯ ಇಲ್ಲೆ ಏನಾದರೂ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದಾರೆ.

    ಕೊರೊನಾ ಬಳಿಕ ಬೆಂಗಳೂರು ಬಿಟ್ಟು ತಮ್ಮ ಊರಿಗಳಿಗೆ ಹೋಗಿರುವ ಜನರು ಮತ್ತೆ ಬೆಂಗಳೂರಿಗೆ ವಾಪಸ್ ಆಗುವುದಿಲ್ಲ ಅಂತ ಹೇಳಿದ್ದಾರೆ. ಕೂಲಿನಾದರೂ ಮಾಡಿಕೊಂಡು ಇರುತ್ತೀವಿ, ಬೆಂಗಳೂರು ಸಹವಾಸ ಬೇಡ ಅಂತ ಕೆಲವರು ಕೃಷಿಯತ್ತ ಮುಖ ಮಾಡಿದ್ದರೆ, ಇನ್ನೂ ಕೆಲವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇಲ್ಲೇ ಇರುತ್ತೀವಿ ಎಂದು ಹೇಳುತ್ತಿದ್ದಾರೆ.

  • ಕೊರೊನಾ ಅಟ್ಟಹಾಸಕ್ಕೆ ಬೇಸತ್ತು ಮನೆ ಬಿಟ್ಟು ಜಮೀನು ಸೇರಿದ ಕುಟುಂಬಗಳು!

    ಕೊರೊನಾ ಅಟ್ಟಹಾಸಕ್ಕೆ ಬೇಸತ್ತು ಮನೆ ಬಿಟ್ಟು ಜಮೀನು ಸೇರಿದ ಕುಟುಂಬಗಳು!

    ಗದಗ: ಕೊರೊನಾ ಅಟ್ಟಹಾಸಕ್ಕೆ ಬೇಸತ್ತು ಸಾರ್ವಜನಿಕರು ಮನೆ ಬಿಟ್ಟು ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಬದುಕುತ್ತಿರುವ ಘಟನೆ ಜಿಲ್ಲೆಯ ಮುಳಗುಂದದ ಶೀತಾಲಹರಿ ಗ್ರಾಮದಲ್ಲಿ ನಡೆದಿದೆ.

    ಸುಮಾರು ಒಂದುಸಾವಿರ ಜನಸಂಖ್ಯೆ ಇರುವ ಈ ಚಿಕ್ಕ ಗ್ರಾಮದಲ್ಲಿ ಈಗಾಗಲೇ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದು, 10 ಜನರಿಗೆ ಸೋಂಕು ದೃಢವಾಗಿದೆ. ಗ್ರಾಮದಲ್ಲಿ ಇನ್ನೂ ಸೋಂಕಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಯಭೀತಗೊಂಡ ಸ್ಥಳೀಯರು ಊರು ಬಿಟ್ಟು ತಮ್ಮ ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

    ಈಗಾಗಲೇ 30ಕ್ಕೂ ಅಧಿಕ ಕುಟುಂಬಗಳು ಗ್ರಾಮ ತೊರೆದು ಜಮೀನು ಸೇರಿವೆ. ಕೊರೊನಾ ತಂದಿಟ್ಟ ಸಂಕಷ್ಟದಿಂದ ಹೈರಾಣಾದ ಕೂಲಿ ಕಾರ್ಮಿಕರು, ಬಡ ಜನ್ರ ಗೋಳಾಟ ಇಲ್ಲಿ ಕೇಳತೀರದಾಗಿದೆ. ಈ ಚಿಕ್ಕ ಗ್ರಾಮದಲ್ಲಿಯೇ ವೈರಸ್ ಇಷ್ಟೊಂದು ಪಸರಿಸುವುದರಿಂದ ಊರು ತೊರೆಯುವುದೇ ಒಳ್ಳೆಯದು ಎಂದು ಕೊಂಡಿದ್ದಾರೆ.

    ವೃದ್ದರು, ಚಿಕ್ಕಮಕ್ಕಳು ಇರುವವರು ಜಮೀನಿನಲ್ಲಿ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಜೀವ ಉಳಿದ್ರೆ ಸಾಕಪ್ಪಾ ಅನ್ನೊ ಮನಸ್ಥಿತಿಗೆ ಜನ ಬಂದಿದ್ದಾರೆ.

     

  • ಬೆಂಗ್ಳೂರಿನಿಂದ ಬಂದ್ರೆ, ಹೋದ್ರೆ 5 ಸಾವಿರ ದಂಡ- ಮಂಡ್ಯದಲ್ಲಿ ಡಂಗೂರ

    ಬೆಂಗ್ಳೂರಿನಿಂದ ಬಂದ್ರೆ, ಹೋದ್ರೆ 5 ಸಾವಿರ ದಂಡ- ಮಂಡ್ಯದಲ್ಲಿ ಡಂಗೂರ

    ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ಗ್ರಾಮಗಳು, ಜಿಲ್ಲೆ ಸ್ವಯಂ ಲಾಕ್‍ಡೌನ್ ಘೋಷಿಸಿಕೊಂಡಿವೆ. ಇದೀಗ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಂಗಳೂರಿನಿಂದ ಬರುವವರಿಗೆ ದಂಡ ವಿಧಿಸುವುದಾಗಿ ಡಂಗೂರದ ಮೂಲಕ ಸಾರಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿ ಬೆಂಗಳೂರಿಗರ ಭಯ ಶುರುವಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಊರಿನ ಒಳಗೆ ಬೆಂಗಳೂರಿನವರು ಬರುವಾಗಿಲ್ಲ ಎಂದು ಡಂಗೂರದ ಮೂಲಕ ಸಾರಿಸಿದ್ದಾರೆ. ಇದೀಗ ಡಂಗೂರ ಸಾರಿಸಿರುವ ವಿಡಿಯೋ ವೈರಲ್ ಆಗಿದೆ.

    ಅಷ್ಟೇ ಅಲ್ಲದೇ ಬೆಂಗಳೂರು, ಮೈಸೂರಿನವರು ಊರಿಗೆ ಬರಬಾರದು. ಅದೇ ರೀತಿ ಊರಿನವರು ಬೆಂಗಳೂರಿಗೆ ಹೋಗಬಾರದು. ಒಂದು ವೇಳೆ ಬೆಂಗಳೂರಿನಿಂದ ಇಲ್ಲಿದೆ ಬಂದರೆ ಮತ್ತು ಇಲ್ಲಿಂದ ಬೆಂಗಳೂರಿಗೆ ಹೋದರೆ ಐದು ಸಾವಿರ ದಂಡ ವಿಧಿಸಲಾಗುತ್ತದ ಎಂದು ಡಂಗೂರ ಸಾರಿಸಿದ್ದಾರೆ.

    ಭಾನುವಾರ ಬೆಂಗಳೂರಲ್ಲಿ ಹೊಸದಾಗಿ 1235 ಜನರ ಮೇಲೆ ಸೋಂಕು ಸವಾರಿ ಮಾಡಿದೆ. ಪರಿಣಾಮ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 9,580ಕ್ಕೆ ಏರಿಕೆ ಆಗಿದೆ. ಇನ್ನೂ ರಾಜ್ಯದ ಒಟ್ಟು ಸೋಂಕಿತರ ಪೈಕಿ ಬೆಂಗಳೂರಿನದ್ದೇ ದೊಡ್ಡ ಪಾಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,474ಕ್ಕೆ ಏರಿಕೆ ಆಗಿದೆ.

  • ಕೊರೊನಾ ಅತಂಕ – ದೊಣ್ಣೆ ಹಿಡ್ಕೊಂಡು ನಿಂತ ಗ್ರಾಮಸ್ಥರು

    ಕೊರೊನಾ ಅತಂಕ – ದೊಣ್ಣೆ ಹಿಡ್ಕೊಂಡು ನಿಂತ ಗ್ರಾಮಸ್ಥರು

    ಹಾವೇರಿ: ಕೊರೊನಾ ತಡೆಗಾಗಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮಸ್ಥರು ಗ್ರಾಮಕ್ಕೆ ಸ್ವಯಂ ಪ್ರೇರಿತ ನಿರ್ಬಂಧ ಹಾಕಿಕೊಂಡಿದ್ದಾರೆ.

    ಗ್ರಾಮಕ್ಕೆ ಬೇರೆ ಊರುಗಳಿಂದ ಸಂಪರ್ಕ ಕಲ್ಪಿಸುವ ಗಡಿಗಳಲ್ಲಿ ದೊಣ್ಣೆ ಹಿಡಿದುಕೊಂಡು ಗ್ರಾಮಸ್ಥರು ಕಾವಲು ಕಾಯ್ತಿದ್ದಾರೆ. ಗ್ರಾಮಕ್ಕೆ ಬೇರೆ ಊರುಗಳಿಂದ ಯಾರೂ ಬರುವಂತಿಲ್ಲ, ಗ್ರಾಮಗಳಿಂದ ಯಾರೂ ಹೊರಹೋಗದಂತೆ ಗ್ರಾಮಸ್ಥರು ನೋಡಿಕೊಳ್ಳುತ್ತಿದ್ದಾರೆ.

    ಸುಮಾರು ಹದಿನೈದು ದಿನ ಗ್ರಾಮಕ್ಕೆ ಯಾರಿಗೂ ಎಂಟ್ರಿ ಇಲ್ಲ, ಗ್ರಾಮದ ಯಾರೂ ಹೊರಹೋಗದಂತೆ ಕ್ರಮ ಕೈಗೊಂಡಿದ್ದಾರೆ. ಗ್ರಾಮದ ಪ್ರತಿ ಮನೆಗಳ ಸದಸ್ಯರು ಇಂತಿಷ್ಟು ಗಂಟೆಗಳ ಲೆಕ್ಕದಲ್ಲಿ ಕಾವಲು ಕಾಯುತ್ತಿದ್ದಾರೆ.

  • ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    -ಆಸ್ಪತ್ರೆ ಬಿಟ್ಟು ಹಳ್ಳಿಗಳಿಗೆ ತೆರಳಿ ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ವೈದ್ಯರ ಸೇವೆ ಮಹತ್ವ ಎಷ್ಟೆಂಬುದು ಎಲ್ಲರಿಗೂ ಅರಿವಾಗಿದೆ. ಆದ್ರೂ ಇಂತಹ ಸಂದರ್ಭದಲ್ಲೂ ಕೆಲ ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆ ಲಾಕ್ ಮಾಡಿದ್ದು ಉಂಟು. ಆದ್ರೆ ಇಲ್ಲೊಬ್ಬ ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ತಮ್ಮ ಆಸ್ಪತ್ರೆ ಮುಚ್ಚಿ ನೇರವಾಗಿ ಜನರ ಬಳಿಯೇ ಹಳ್ಳಿಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ಕೊಡ್ತಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದಿಂದ ಸಮಾಜಮುಖಿ ಮಾದರಿ ವೈದ್ಯರ ಕಾರ್ಯ ನೆನೆಯುವ ವರದಿ ಇದಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಪೀಪಲ್ಸ್ ಖಾಸಗಿ ಆಸ್ಪತ್ರೆಯ ವೈದ್ಯ ಅನಿಲ್ ಕುಮಾರ್ ಕೋವಿಡ್-19 ಸಂಕಷ್ಟದ ಸಮಯದಲ್ಲಿ ತಮ್ಮ ತಾಲೂಕಿನ ಬಡ ಜನರ ಆರೋಗ್ಯ ಕಾಯೋಕೆ ಮುಂದಾಗಿದ್ದಾರೆ. ಕೊರೊನಾ ಆರಂಭದಿಂದ ಹಾಗೂ ಲಾಕ್‍ಡೌನ್ ಆದ ನಂತರ ಖುದ್ದು ತಾವೇ ಪ್ರತಿದಿನ 2-3 ಹಳ್ಳಿಗಳಂತೆ ಹಳ್ಳಿ ಹಳ್ಳಿಗೂ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುತ್ತಾ ಬರುತ್ತಿದ್ದಾರೆ.

    ಕೇವಲ ಆರೋೀಗ್ಯ ತಪಾಸಣೆ ಅಷ್ಟೇ ಅಲ್ಲದೆ ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಲಹೆ ಸೇವೆ ಮಾಡುತ್ತಾ ಉಚಿತವಾಗಿ ಔಷಧಿಗಳನ್ನ ಕೊಡುತ್ತಿದ್ದಾರೆ. ಲಾಕ್‍ಡೌನ್ ಇರುವವರೆಗೂ ಹಳ್ಳಿ ಹಳ್ಳಿಗಳಿಗೂ ತೆರಳಿ ಸೇವೆ ನೀಡಿದ್ದ ವೈದ್ಯ ಅನಿಲ್ ಕುಮಾರ್, ಈಗ ಜನ ನರೇಗಾ ಮೂಲಕ ಕೆಲಸ ಮಾಡುವ ಆಯಕಟ್ಟಿನ ಸ್ಥಳಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಬಡ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕೋವಿಡ್ 19 ವಿರುದ್ಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಷ್ಟು ದಿನ ಬಾಗೇಪಲ್ಲಿ ತಾಲೂಕಿನಲ್ಲಿ ಮಾಡುತ್ತಿದ್ದ ಸೇವೆಯನ್ನ ಈಗ ಪಕ್ಕದ ಗುಡಿಬಂಡೆ ಗೌರಿಬಿದನೂರು ತಾಲೂಕಿಗೆ ವಿಸ್ತರಿಸುತ್ತಿದ್ದು, ವೈದ್ಯರ ಈ ಸೇವೆಯನ್ನ ಜನ ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಬಾಗೇಪಲ್ಲಿಯ ಪೀಪಲ್ಸ್ ಆಸ್ಪತ್ರೆ ಅಂದ್ರೆ ಜನಸಾಮಾನ್ಯರ ವೈದ್ಯ ಅಂತಲೇ ಪ್ರಖ್ಯಾತ ಪಡೆದಿರುವ ವೈದ್ಯ ಅನಿಲ್ ಕುಮಾರ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವೆಯನ್ನ ಕರ್ತವ್ಯ ಅಂತ ಭಾವಿಸಿ ಬಡ ಜನರ ಸೇವೆ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯವೇ ಸರಿ. ರಾಷ್ಟ್ರೀಯ ವೈದ್ಯರ ದಿನದಂದು ಈ ವೈದ್ಯರಿಗೆ ನಮ್ಮದೊಂದು ಸಲಾಂ.

  • ಮನೆ ಕಳೆದುಕೊಂಡ ತಮ್ಮ ಗ್ರಾಮಸ್ಥರ ನೆರವಿಗೆ ಬಂದ ಪೃಥ್ವಿ ಶಾ

    ಮನೆ ಕಳೆದುಕೊಂಡ ತಮ್ಮ ಗ್ರಾಮಸ್ಥರ ನೆರವಿಗೆ ಬಂದ ಪೃಥ್ವಿ ಶಾ

    ಮುಂಬೈ: ಭಾರತ ತಂಡ ಆಟಗಾರ 20 ವರ್ಷದ ಪೃಥ್ವಿ ಶಾ ತಮ್ಮ ಗ್ರಾಮದ ನಿವಾಸಿಗಳ ಮನೆಯನ್ನು ರಿಪೇರಿ ಮಾಡಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

    ಸದ್ಯ ಲಾಕ್‍ಡೌನ್‍ನಿಂದ ತಮ್ಮ ಗ್ರಾಮದಲ್ಲೇ ಬಂಧಿಯಾಗಿರುವ ಪೃಥ್ವಿ ಶಾ, ರಾಜಕಾರಣಿ ಸಂಜಯ್ ಪೊಟ್ನಿಸ್ ತೋಟದ ಮನೆಯಲ್ಲಿ ಉಳಿದಿದ್ದಾರೆ. ಸಂಜಯ್ ಅವರ ಮಗ ಯಶ್ ಮತ್ತು ಪೃಥ್ವಿ ಶಾ ಇಬ್ಬರು ಗೆಳೆಯರಾಗಿದ್ದು, ಇವರಿಬ್ಬರು ಒಟ್ಟಿಗೆ ಅವರ ತೋಟದ ಮನೆಯಲ್ಲಿ ಉಳಿದುಕೊಂಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಭಾರತದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ಇದ್ದಾರೆ. ಕೊರೊನಾದಿಂದ ನಲುಗಿದ್ದ ಮಹಾಗೆ ಸೈಕ್ಲೋನ್ ಕೂಡ ಪೆಟ್ಟುಕೊಟ್ಟಿತ್ತು. ಈ ಸೈಕ್ಲೋನ್‍ನಿಂದ ಪೃಥ್ವಿ ಅವರ ಸ್ವಗ್ರಾಮವಾದ ಮಾಂಡ್ವಾದ ಧೋಕವಾಡೆದಲ್ಲಿ ಹಲವಾರು ಮನೆಗಳು ಹಾನಿಯಾಗಿದ್ದರು. ಈ ಹಾಳಾಗಿದ್ದ ಮನೆಗಳನ್ನು ಸರಿಪಡಿಸಲು ಪೃಥ್ವಿ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಂಜಯ್ ಪೊಟ್ನಿಸ್, ಪೃಥ್ವಿ ಮತ್ತು ನನ್ನ ಮಗ ಲಾಕ್‍ಡೌನ್‍ನಿಂದ ನಮ್ಮ ಮನೆಯಲ್ಲೇ ಇದ್ದಾರೆ. ಸೈಕ್ಲೋನ್ ಇಲ್ಲಿ ಜಾಸ್ತಿ ಅವಾಂತರವನ್ನು ಸೃಷ್ಟಿಸಿದೆ. ನಮ್ಮ ಧೋಕವಾಡೆ ಗ್ರಾಮ ಹಾನಿಗೊಳಗಾಗಿದೆ. ನಮ್ಮ ಮನೆಗೂ ಕೂಡ ಹಾನಿಯಾಗಿದೆ. ಗ್ರಾಮಸ್ಥರ ಕಷ್ಟವನ್ನು ನೋಡಿ ಪೃಥ್ವಿ ಮತ್ತು ನನ್ನ ಮಗ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪೃಥ್ವಿ ಇದರ ಜೊತೆಗೆ ಕಷ್ಟದಲ್ಲಿ ಇರುವ ಜನರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.

    ಈ ಎಲ್ಲದರ ಜೊತೆಗೆ ಪೃಥ್ವಿ ತೋಟದ ಮನೆಯಲ್ಲಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇತರ ಆಟಗಾರರಂತೆ ಅವರು ಕೂಡ ಕಳೆದ ಮಾರ್ಚ್‍ನಿಂದ ಕ್ರಿಕೆಟ್‍ನಿಂದ ದೂರು ಉಳಿದಿದ್ದಾರೆ. ಕಳೆದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಪೃಥ್ವಿ ಶಾ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭವಾಗುವ ಮುನ್ನವೇ ಕೊರೊನಾ ವೈರಸ್ ನಿಂದ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ ಕಾರಣ ಅದು ಕೂಡ ನಿಂತು ಹೋಗಿತ್ತು.

    ಕಳೆದ ವರ್ಷ ಡೋಪಿಂಗ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೃಥ್ವಿ ಶಾ ಅವರನ್ನು ಎಂಟು ತಿಂಗಳು ಕ್ರಿಕೆಟ್‍ನಿಂದ ನಿಷೇಧ ಮಾಡಲಾಗಿತ್ತು. ಇದಾದ ನಂತರ ಶಾ ಭಾರತ ಎ ತಂಡಕ್ಕೆ ಮರಳುವ ಮೂಲಕ ಕ್ರಿಕೆಟ್‍ಗೆ ವಾಪಸ್ ಆಗಿದ್ದರು. ನಂತರ ನ್ಯೂಜಿಲೆಂಡ್‍ನಲ್ಲಿ ನಡೆದ ಮೂರು ಏಕದಿನ ಮತ್ತು ಎರಡು ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಇದರ ಜೊತೆಗೆ 2020ರ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಐಪಿಎಲ್ ಕೂಡ ಮುಂದಕ್ಕೆ ಹೋಗಿದೆ.

  • ಸರ್ಕಾರ, ಅಧಿಕಾರಿಗಳ ಎಡವಟ್ಟು- 10 ಹಳ್ಳಿಗಳಿಗೆ ಜೀವನಾಡಿಯಾಗಿದ್ದ ದಡ್ಡಿ ಗ್ರಾಮ ಸೀಲ್‍ಡೌನ್

    ಸರ್ಕಾರ, ಅಧಿಕಾರಿಗಳ ಎಡವಟ್ಟು- 10 ಹಳ್ಳಿಗಳಿಗೆ ಜೀವನಾಡಿಯಾಗಿದ್ದ ದಡ್ಡಿ ಗ್ರಾಮ ಸೀಲ್‍ಡೌನ್

    – ಬಿತ್ತನೆ ಮಾಡಬೇಕಿದ್ದವರು ಮನೆಯಲ್ಲೇ ಲಾಕ್

    ಬೆಳಗಾವಿ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಹತ್ತು ಹಳ್ಳಿ ಜನರ ಜೀವನಾಡಿಯಾಗಿತ್ತು. ಪ್ರತಿಯೊಂದು ವಸ್ತು ಖರೀದಿಗೂ ಜನರು ಈ ಗ್ರಾಮಕ್ಕೆ ಬರಬೇಕಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಇದೀಗ ಊರಿಗೆ ಊರೇ ಸ್ತಬ್ಧವಾಗಿದೆ. ಬಿತ್ತನೆ ಕಾರ್ಯ ಮಾಡಬೇಕಿದ್ದ ರೈತರು ಮನೆ ಸೇರುವಂತಾಗಿದೆ.

    ದಡ್ಡಿ ಗ್ರಾಮದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿ ಮಹಾರಾಷ್ಟ್ರ ಗಡಿಯಿದೆ. ಕೊರೊನಾ ಆರಂಭದಲ್ಲಿ ಮಹಾರಾಷ್ಟ್ರದ ಪಕ್ಕದಲ್ಲಿದ್ದರೂ ಈ ಗ್ರಾಮದಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಲಾಕ್‍ಡೌನ್ ಸಡಿಲಿಕೆ ನಂತರ ಮುಂಬೈಗೆ ಕೆಲಸಕ್ಕೆ ಹೋಗಿದ್ದ ಒಂದು ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಗ್ರಾಮಕ್ಕೆ ಆಗಮಿಸಿದ್ದಾರೆ. ಅವರೆಲ್ಲರನ್ನು ಕ್ವಾರಂಟೈನ್ ಮಾಡಿ 14 ದಿನ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶ ಬಂತು ಅನ್ನುವ ಕಾರಣಕ್ಕೆ ಕೊರೊನಾ ರಿಪೋರ್ಟ್ ಬರುವ ಮುನ್ನವೇ ಅವರನ್ನು ರಿಲೀಸ್ ಮಾಡಲಾಗಿತ್ತು.

    ಹೀಗೆ ಮನೆಗೆ ಹೋದ ಎಲ್ಲರೂ ಗ್ರಾಮದ ಅಂಗಡಿಗಳಿಗೆ, ಮದುವೆ ಸೇರಿದಂತೆ ಶುಭಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ರಿಲೀಸ್ ಆದ ಎರಡು ದಿನಕ್ಕೆ ಮನೆಗೆ ಹೋದವರ ಪೈಕಿ 16 ಮಂದಿಗೆ ಕೊರೊನಾ ಬಂದಿತ್ತು. ಪರಿಣಾಮ ಎಲ್ಲರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ ಇಡೀ ಗ್ರಾಮ ಸೀಲ್‍ಡೌನ್ ಮಾಡಲಾಗಿದೆ. ಜಮೀನುಗಳಿಗೆ ಬಿತ್ತನೆ ಮಾಡಲು ಹೋಗಬೇಕಿದ್ದ ರೈತರು ಇದೀಗ ಲಾಕ್ ಆಗಿದ್ದಾರೆ. ಈ ಬಾರಿಯೂ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೊರೊನಾ ವರದಿ ಬರುವ ಮುನ್ನವೇ ಬಿಡುಗಡೆ ಮಾಡಿದ್ದಕ್ಕೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದಡ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಈ ಎಲ್ಲ ಗ್ರಾಮಗಳಿಗೆ ಜೀವನಾಡಿ ಈ ದಡ್ಡಿ ಗ್ರಾಮವಾಗಿತ್ತು. ಉಪ್ಪಿನಿಂದ ಹಿಡಿದು ಎಲ್ಲಾ ರೀತಿಯ ಸಾಮಗ್ರಿ ಕೊಳ್ಳಲು ಸುತ್ತಮುತ್ತಲ ಗ್ರಾಮಸ್ಥರು ಬರುತ್ತಿದ್ದರು. ಈ ಹತ್ತು ಗ್ರಾಮಗಳಲ್ಲಿ 92 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದಕ್ಕೆ ದಡ್ಡಿ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. ತರಕಾರಿ ಮಾರುಕಟ್ಟೆ ಸೇರಿದಂತೆ ದಿನಸಿ ಮಾರ್ಕೆಟ್ ಕೂಡ ಬಂದ್ ಮಾಡಲಾಗಿದೆ.

    ಮಹಾರಾಷ್ಟ್ರಕ್ಕೆ ಈ ಗ್ರಾಮ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಖ್ಯ ರಸ್ತೆಯಲ್ಲಿ ಕಾವಲಿಗಿದ್ದಾರೆ. ಇತ್ತ ಸೀಲ್‍ಡೌನ್ ಆದ ಪ್ರದೇಶದಲ್ಲಿ ಕೂಡ ಪೊಲೀಸರು ರೌಂಡ್ಸ್ ಮಾಡುತ್ತಿದ್ದು, ಯಾರಿಗೂ ಓಡಾಡಲು ಅವಕಾಶ ನೀಡುತ್ತಿಲ್ಲ. ಮೆಡಿಕಲ್ ಶಾಪ್ ಮತ್ತು ರಸಗೊಬ್ಬರ ಅಂಗಡಿಗಳು ಮಾತ್ರ ಓಪನ್ ಇದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಮಾತ್ರ ದಿನಸಿ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.

  • ಕೋಟೆನಾಡಿಗೆ ಕಳ್ಳದಾರಿಯೇ ಕಂಟಕ – ಜಿಲ್ಲೆಯಲ್ಲಿ ನಿಂತಿಲ್ಲ ಅಕ್ರಮ ವಲಸಿಗರ ಪ್ರವೇಶ

    ಕೋಟೆನಾಡಿಗೆ ಕಳ್ಳದಾರಿಯೇ ಕಂಟಕ – ಜಿಲ್ಲೆಯಲ್ಲಿ ನಿಂತಿಲ್ಲ ಅಕ್ರಮ ವಲಸಿಗರ ಪ್ರವೇಶ

    ಚಿತ್ರದುರ್ಗ: ಗ್ರೀನ್ ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಆರಂಭದಿಂದಲೂ ಹೊರ ರಾಜ್ಯಗಳಿಂದ ಅಕ್ರಮವಾಗಿ ಕಳ್ಳದಾರಿಯಲ್ಲಿ ಬರುವವರಿಂದಲೇ ಕಂಟಕ ಶುರುವಾಗಿತ್ತು. ಆದರೆ ಇತ್ತೀಚೆಗೆ ಚಿತ್ರದುರ್ಗದಲ್ಲಿ ಕೊರೊನಾ ಹತೋಟಿಗೆ ಬಂದಿದ್ದು, ಸೋಂಕಿತರೆಲ್ಲಾ ಗುಣಮುಖರಾಗುತ್ತಿದ್ದರು. ಆದರೆ ಮತ್ತೆ ಕೋಟೆನಾಡಿಗೆ ಕಳ್ಳದಾರಿಯ ಮೂಲಕ ವಲಸಿಗರು ಪ್ರವೇಶ ಮಾಡುತ್ತಿದ್ದಾರೆ.

    ಕೊರೊನಾ ಪ್ರಾರಂಭವಾದಗಿನಿಂದಲೂ ಗ್ರೀನ್‍ಜೋನ್‍ನಲ್ಲಿದ್ದ ಚಿತ್ರದುರ್ಗಕ್ಕೆ ಅನುಮತಿ ಇಲ್ಲದೇ ಗುಜರಾತ್‍ನಿಂದ ಬಂದಿದ್ದ 15 ತಬ್ಲಿಘಿಗಳಿಂದ ಕಂಠಕ ಆರಂಭವಾಗಿತ್ತು. ನಂತರ ತಮಿಳುನಾಡಿನಿಂದ ಬಂದಿದ್ದ ಕೋಡಿಹಳ್ಳಿಯ ತಂದೆ, ಮಗಳಿಂದ ಆತಂಕ ಎದುರಾಗಿತ್ತು. ಆದರೆ ಅವರೆಲ್ಲಾ ಅದೃಷ್ಟವಶಾತ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

    ಸರ್ಕಾರವೇ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧಾಜ್ಞೆ ಹೇರಿದೆ. ಆದರೂ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಪುಟ್ಲಾರಹಳ್ಳಿ ಹಾಗೂ ಜಾಜೂರಿನ ಬಳಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗುಜರಾತ್‍ನಿಂದ ಅನುಮತಿ ಇಲ್ಲದೇ ಕಳ್ಳದಾರಿಯಲ್ಲಿ ಬರುವವರ ಅಕ್ರಮ ಪ್ರವೇಶ ಮಾತ್ರ ಇನ್ನೂ ನಿಂತಿಲ್ಲ.

    ಹೀಗಾಗಿ ಮತ್ತೆ ತಮಿಳುನಾಡಿನಿಂದ ಬಂದಿರುವ ಉತ್ತರ ಪ್ರದೇಶದ 27 ಜನ ವಲಸೆ ಕಾರ್ಮಿಕರು ಸೇರಿದಂತೆ ದೆಹಲಿಯಿಂದ ಬಂದಿರುವ ಓರ್ವ ಯುವಕನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರೋದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಅಕ್ರಮ ಪ್ರವೇಶವನ್ನು ತಡೆಯಲು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆದರೆ ಜಮೀನುಗಳ ಮೂಲಕ ಹಾಗೂ ಕಳ್ಳದಾರಿಗಳಲ್ಲಿ ಕಾರ್ಮಿಕರು ಗ್ರಾಮಕ್ಕೆ ಬರುತ್ತಿದ್ದಾರೆ.

    ಹೊರರಾಜ್ಯಗಳಾದ ತಮಿಳುನಾಡು, ಉತ್ತರಪ್ರದೇಶ, ಗುಜರಾತ್ ಹಾಗೂ ದೆಹಲಿಯಿಂದ ಆಗಮಿಸಿರುವವರಲ್ಲಿ ಮಾತ್ರ ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರನ್ನು ಜನನಿಬಿಡ ಪ್ರದೇಶಗಳೆನ್ನದೇ ಸಿಕ್ಕ ಸಿಕ್ಕ ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಬಳಿಕ ಅವರಲ್ಲಿ ಯಾರಿಗಾದರೂ ಪಾಸಿಟಿವ್ ಪತ್ತೆಯಾದರೆ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ ತೋರುತ್ತಿದೆ. ಜನರು ಅಗತ್ಯ ವಸ್ತುಗಳು ಹಾಗೂ ರೈತರು ಉಳುಮೆ ಮಾಡಲು ಬೇಕಿರುವ ಬೀಜ, ಗೊಬ್ಬರ ಖರೀದಿಸಲು ಸಹ ಹೊರಬರಲು ಯೋಚಿಸುವಂತಾಗಿದೆ ಎಂದು ಸ್ಥಳೀಯ ಮೂಡಲಗಿರಿ ಹೇಳಿದ್ದಾರೆ.

    ಮೇ 14 ರಿಂದ ಇಲ್ಲಿಯವರೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಬಂದು ಚೆಕ್‍ಪೋಸ್ಟ್ ಗಳಲ್ಲಿ ಸಿಕ್ಕಂತಹ 39 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅವರಲ್ಲಿ 9 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸರ್ಕಾರ ಹೊರರಾಜ್ಯಗಳಿಂದ ಬರುವವರ ಪ್ರವೇಶಕ್ಕೆ ನಿಷೇಧ ಹೇರಿದ್ದರೂ ಸಹ ಅಕ್ರಮ ಪ್ರವೇಶದಿಂದ ಜನರು ಗ್ರಾಮಗಳಿಗೆ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಮತ್ತೆ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ರಣಕೇಕೆಯಾಕಲಿದೆ ಎಂಬ ಭೀತಿ ಶುರುವಾಗಿದೆ.

  • ಕೊರೊನಾ ಭೀತಿಗೆ ವಿಜಯಪುರದ ಮತ್ತೊಂದು ಗ್ರಾಮ ಸ್ತಬ್ಧ

    ಕೊರೊನಾ ಭೀತಿಗೆ ವಿಜಯಪುರದ ಮತ್ತೊಂದು ಗ್ರಾಮ ಸ್ತಬ್ಧ

    ವಿಜಯಪುರ: ಕೊರೊನಾ ಭೀತಿಗೆ ಮತ್ತೊಂದು ಗ್ರಾಮ ಸ್ತಬ್ಧವಾಗಿದ್ದು, ಜಿಲ್ಲೆಯ ಸಿಂಧಗಿ ತಾಲೂಕಿನ ಗಣಿಹಾರ ಗ್ರಾಮ ಸಂಪೂರ್ಣ ಸ್ತಬ್ಧವಾಗಿದೆ.

    ಗಂಟಲು ದ್ರವದ ವರದಿ ಬರುವ ಮುನ್ನವೇ ಸಾಂಸ್ಥಿಕ ಕ್ವಾರಂಟೈನ್ ನಿಂದ ಸೋಂಕಿತನಿಗೆ ಮುಕ್ತಿ ನೀಡಲಾಗಿತ್ತು. ಅಲ್ಲದೆ ನಂತರ ಹೋಮ್ ಕ್ವಾರಂಟೈನ್ ಆಗದೆ ಸೋಂಕಿತ ಗ್ರಾಮ ಸೇರಿದಂತೆ ಹಲವೆಡೆ ಓಡಾಟ ನಡೆಸಿದ್ದ. ಇನ್ನೂ ಸೋಂಕಿತನಿಗೆ ಶನಿವಾರ ಸೋಂಕು ಪತ್ತೆಯಾಗಿದ್ದು, ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಮೇ 15 ರಂದು ಮಾಹಾರಾಷ್ಟ್ರದ ಸೋಲ್ಲಾಪುರದಿಂದ ಪತ್ನಿ ಮತ್ತು ಮಕ್ಕಳ ಜೊತೆ ಸೋಂಕಿತ ಗ್ರಾಮಕ್ಕೆ ಮಾವನ ಮನೆಗೆ ಬಂದಿದ್ದ. ಆಗ ಆಶಾ ಕಾರ್ಯಕರ್ತೆಯರ ಮಾಹಿತಿ ಮೆರೆಗೆ 14 ದಿನ ತಾಲೂಕಾಡಳಿತ ಕ್ವಾರಂಟೈನ್ ಮಾಡಿತ್ತು. ಆದರೆ ಪರೀಕ್ಷಾ ವರದಿ ಬರುವ ಮುನ್ನವೇ ಸೋಂಕಿತನನ್ನು ಸಾಂಸ್ಥಿಕ ಕ್ವಾರಂಟೈನ್‍ನಿಂದ ಮುಕ್ತಿ ನೀಡುವ ಮೂಲಕ ತಾಲೂಕಾಡಳಿತ ಮಹಾ ಎಡವಟ್ಟು ಮಾಡಿಕೊಂಡಿದೆ.

    ಗಂಟಲು ದ್ರವದ ವರದಿ ಬರುವ ಮುನ್ನ ಸೋಂಕಿತನನ್ನ ಮನೆಗೆ ಕಳಿಸಿದ್ದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸೋಂಕಿತನ ಸಂಪರ್ಕಕ್ಕೆ ಬಂದ 25ಕ್ಕೂ ಹೆಚ್ಚು ಜನರನ್ನ ಕ್ವಾರಂಟೈನ್ ಮಾಡಿದೆ. ಸೋಂಕಿತನ ಟ್ರಾವೆಲ್ ಹಿಸ್ಟರಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ತಮಗೂ ಸೋಂಕು ತಗುಲವ ಭೀತಿ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಗ್ರಾಮವನ್ನು ಲಾಕ್‍ಡೌನ್ ಮಾಡಿಕೊಂಡಿದ್ದಾರೆ.