Tag: village stay

  • ಡಿಸಿ ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ- ಶಾಸಕರು, ಜನಪ್ರತಿನಿಧಿಗಳು ಭಾಗಿಯಾಗಲು ಕ್ರಮ: ಆರ್.ಅಶೋಕ್

    ಡಿಸಿ ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ- ಶಾಸಕರು, ಜನಪ್ರತಿನಿಧಿಗಳು ಭಾಗಿಯಾಗಲು ಕ್ರಮ: ಆರ್.ಅಶೋಕ್

    ಹುಬ್ಬಳ್ಳಿ: ಕಂದಾಯ ಇಲಾಖೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಆರಂಭಿಸಲಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಧಾನ ಸಭೆ ಅಧಿವೇಶನದಲ್ಲಿ ಶಾಸಕರು ತಮ್ಮ ಕ್ಷೇತ್ರದ ಗ್ರಾಮಗಳಲ್ಲಿ ವಾಸ್ತವ್ಯ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

    ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಲು ಆಗಮಿಸಿದ ಅವರು, ಗ್ರಾಮದ ಸಿದ್ಧಾರೂಢ ಮಠದಲ್ಲಿ ದರ್ಶನ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮೊದಲ ಗ್ರಾಮ ವಾಸ್ತವ್ಯವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೈಗೊಂಡಿದ್ದೆ, ಎರಡನೇ ವಾಸ್ತವ್ಯವನ್ನು ಮುಂಬೈ ಕರ್ನಾಟಕ ಭಾಗದ ಧಾರವಾಡ ಜಿಲ್ಲೆಯ ಛಬ್ಬಿ ಗ್ರಾಮದಲ್ಲಿ ಕೈಗೊಂಡಿದ್ದೇನೆ. ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು ಪಾಲ್ಗೊಳ್ಳಲು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಅಲ್ಲದೆ ಜನ ಪ್ರತಿನಿಧಿಗಳು ಪಾಲ್ಗೊಳ್ಳಲು ಸೂಕ್ತ ನಿಯಮಗಳನ್ನು ರೂಪಿಸಲಾಗುವುದು ಎಂದರು.

    ಜಿಲ್ಲಾಧಿಕಾರಿ, ಉಪವಿಭಾಧಿಕಾರಿ ಹಾಗೂ ತಹಶಿಲ್ದಾರರೆಲ್ಲರೂ ಜನರ ಸೇವಕರು. ಜನರು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನ ಈ ರೀತಿ ಸರ್ಕಾರಿ ಕಚೇರಿ ಮುಂದೆ ಕೈ ಕಟ್ಟಿ ನಿಂತುಕೊಳ್ಳಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಧಿಕಾರಿಗಳು ಜನರ ಬಾಗಿಲಿಗೆ ಬಂದು ಕೆಲಸ ಮಾಡಿಕೊಡಿಬೇಕು ಎಂದು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.

    ಗ್ರಾಮ ವಾಸ್ತವ್ಯದ 15 ದಿನ ಮುಂಚಿತವಾಗಿ ಕಂದಾಯ ಇಲಾಖೆ ಅಧಿಕಾರಿಗಳು ಜನರ ಮನೆಗಳಿಗೆ ತೆರಳಿ ಸಮಸ್ಯೆಗಳ ಪಟ್ಟಿ ತಯಾರಿಸಿದ್ದಾರೆ. ಕಂದಾಯ ಇಲಾಖೆಯ ಪಿಂಚಣಿ ಹಾಗೂ ಇತರೆ ಸಮಸ್ಯೆಗಳು ಇದ್ದರೆ ಸ್ಥಳದಲ್ಲೇ ಬಗೆಹರಿಸಲಾಗುವುದು. ಜನರ ಮನೆ ಬಾಗಿಲಿಗೆ ಸರ್ಕಾರ ತಗೆದುಕೊಂಡು ಹೋಗಬೇಕಾಗಿದೆ. ಕಾಟಾಚಾರಕ್ಕೆ ‘ಬಂದ ಸಿದ್ಧ ಹೋದ ಸಿದ್ಧ’ ಎನ್ನುವಂತೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಗಬಾರದು. ಗ್ರಾಮದಲ್ಲಿ 24 ಗಂಟೆ ಇದ್ದು, ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಸಹ ಪಾಲಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ವಿಪತ್ತು ನಿರ್ವಹಣ ಆಯುಕ್ತ ಮನೋಜ್ ರಾಜ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿ.ಪಂ.ಸಿಇಓ ಡಾ.ಬಿ.ಸುಶೀಲ್, ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.

  • ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಆರ್.ಅಶೋಕ್ ಗ್ರಾಮ ವಾಸ್ತವ್ಯ- ಎತ್ತಿನ ಗಾಡಿಯಲ್ಲಿ ಸಂಚಾರ

    ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ನಡೆಸಿದ್ದು, ಗ್ರಾಮದಲ್ಲಿ ಎತ್ತಿನಗಾಡಿಯಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್‍ಗೆ ಪೂರ್ಣ ಕುಂಭ, ಜಾನಪದ ಕಲಾತಂಡಗಳೊಂದಿಗೆ ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ. ಎತ್ತಿನಗಾಡಿಯಲ್ಲೇ ವಾಸ್ತವ್ಯದ ಸ್ಥಳಕ್ಕೆ ತೆರಳಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವ ಆರ್.ಅಶೋಕ್‍ಗೆ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬುದು ಸಚಿವ ಆರ್.ಅಶೋಕ್ ಕನಸಿನ ಕಾರ್ಯಕ್ರಮವಾಗಿದ್ದು, ಇದನ್ನು ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯಲ್ಲಿ ಉದ್ಘಾಟನೆ ಮಾಡಲಾಯಿತು. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದು, ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ನಡೆಸಲಾಗುತ್ತಿದೆ.

  • ಜನವರಿ 4ರಂದು ಮೇದಿನಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

    ಜನವರಿ 4ರಂದು ಮೇದಿನಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅತಿ ಹಿಂದುಳಿದ ಕುಗ್ರಾಮ ಎಂಬ ಹಣೆಪಟ್ಟಿ ಕಟ್ಟಿಕೊಂಡು ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಕುಮಟಾ ತಾಲೂಕಿನ ಮೇದಿನಿ ಗ್ರಾಮಕ್ಕೆ ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಭೇಟಿ ನೀಡಲಿದ್ದು, ಒಂದು ದಿನ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಾರ್ತಾ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮದಲ್ಲಿ ಹಿಂದುಳಿದ ಪ್ರದೇಶದ ಜನರಿಗೆ ಸರ್ಕಾರ ನಿಮ್ಮೊಂದಿಗೆ ಎಂಬ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನವರಿ ನಾಲ್ಕರಂದು ಗ್ರಾಮಕ್ಕೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಕುಮಟಾ ಪಟ್ಟಣದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಸೊಪ್ಪಿನ ಹೊಸಳ್ಳಿ ಗ್ರಾಮ ಮೇದಿನಿ ಗ್ರಾಮವೂ ರಸ್ತೆ, ವಿದ್ಯುತ್, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆ ಹುಲಿದೇವರಕೊಡ್ಲು ಕ್ರಾಸ್ ನಿಂದ 8 ಕಿ.ಮೀ ದೂರದಲ್ಲಿದ್ದು ಘಟ್ಟ ಪ್ರದೇಶದ ಕಡಿದಾದ ಹಾದಿಯಲ್ಲಿ ಸಾಗಬೇಕಾಗಿದೆ.

    ಪ್ರಸ್ತುತ ಮೇದಿನಿ ಬಗ್ಗೆ ತಿಳಿದ ಮತ್ತು ಇತ್ತೀಚೆಗೆ ಸರ್ಕಾರದ ಸೂಚನೆಯಂತೆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಇದೀಗ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಮೇದಿನಿ ಕುಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ವಾಸ್ತವ್ಯಕ್ಕಾಗಿ ಈಗಾಗಲೇ ಶಾಲಾ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಗ್ರಾಮದ ಸ್ಥಿತಿಗತಿಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಲಿದ್ದಾರೆ.

    ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಕುಮಟಾ ಸಹಾಯಕ ಕಮೀಷನರ್ ಅಜಿತ್ ಸೇರಿದಂತೆ ಇತರೆ ಅಧಿಕಾರಿಗಳು ತೆರಳಲಿದ್ದು, ಆರೋಗ್ಯ ಶಿಬಿರ, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಪ್ರತಿ ತಿಂಗಳ ಎರಡನೇ ಬುಧವಾರ ಮತ್ತು ನಾಲ್ಕನೇ ಬುಧವಾರ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ನೇರ ಫೋನ್ ಇನ್ ವಾರ್ತಾ ಸ್ಪಂದನ, ಪತ್ರಕರ್ತರೊಂದಿಗೆ ಸಂವಾದ ಹಾಗೂ ತಿಂಗಳಿಗೊಮ್ಮೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸಮಸ್ಯೆಗಳಿಗೆ ಸ್ಪಂದಿಸುವ ವಾರ್ತಾ ಮುಸ್ಸಂಜೆ ಕಾರ್ಯಕ್ರಮಗಳನ್ನು ವಾರ್ತಾ ಇಲಾಖೆ ಹಮ್ಮಿಕೊಂಡಿದೆ.

    ಜಿಲ್ಲೆಯೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸ್ವಚ್ಛತೆ ಹಾಗೂ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಯತ್ ಸಿಇಓ ಎಂ. ರೋಷನ್ ಅವರು ಮಾತನಾಡಿ, ಇನ್ನು ಒಂದು ವರ್ಷದಲ್ಲಿ ಪ್ಲಾಸ್ಟಿಕ್ ರಹಿತ ಜಿಲ್ಲೆಯನ್ನಾಗಿ ಮಾಡುವ ಇಚ್ಚೆ ಇದೆ. ಇದರ ಜೊತೆಗೆ ಜಿಲ್ಲೆಯ ಸಂಪ್ರದಾಯಿಕ ಪದಾರ್ಥಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತದಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗುವುದು. ಇದರ ಮೂಲಕ ಸ್ಥಳೀಯ ಸಂಪ್ರದಾಯಿಕ ಪದಾರ್ಥಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದರು.

  • ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಬೆಂಗಳೂರು: ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಎಸ್‍ಪಿ ರವಿ ಡಿ ಚನ್ನಣ್ಣನವರ್ ಗ್ರಾಮ ಸಭೆ ಮಾಡಿ ಅದೇ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ಜನಸ್ನೇಹಿ ಪ್ರಯತ್ನ ಮಾಡಿದೆ.

    ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು.

    ಪೊಲೀಸ್ ಸೇವೆಗಳು ಜನರಿಗೆ ಹತ್ತಿರವಾಗಲೂ ಹೊಸ ಪ್ರಯೋಗ ಹಾಗೂ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಮೂಡಿಸುವ ಜೊತೆಗೆ ಜನರಿಗೆ ಪೊಲೀಸರ ವ್ಯವಸ್ಥೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಪೊಲೀಸರೊಂದಿಗೆ ಗ್ರಾಮಸ್ಥರು, ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದಾರೆ.

  • ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    – ಇಬ್ಬರು ಪೊಲೀಸರು ಅಮಾನತು

    ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಆಗಮಿಸುತ್ತಿದ್ದಾಗ ಪ್ರತಿಭಟಿಸಿದ 50 ಮಂದಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ವಿರುದ್ಧ ಕೇಸ್ ದಾಖಲಾಗಿದೆ.

    ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಒಂದು ದಿನದ ಶಾಲಾ ವಾಸ್ತವ್ಯಕ್ಕೆ ಹೋಗುತ್ತಿದ್ದ ಸಿಎಂ ಬಸ್ಸನ್ನು ತಡೆದು ರಾಯಚೂರಿನ ಸಕ್ರ್ಯೂಟ್ ಹೌಸ್ ಮುಂದೆ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದರು.

    ಈಗ ಸಿಎಂ ವಿರುದ್ಧ ಪ್ರತಿಭಟನೆ ಮಾಡಿದ 50 ಜನ ಕಾರ್ಮಿಕರ ವಿರುದ್ಧ ರಾಯಚೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಡಾ ಸಿ.ಬಿ ವೇದಮೂರ್ತಿ ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಎಂ ಭದ್ರತೆ ವೈಫಲ್ಯದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪಿಎಸ್‍ಐ ಹಾಗೂ ಯರಗೇರಾ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಮಾದಿಗ ಜಾಗೃತಿ ಸೇನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.

    ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಉತ್ತಮ ಅಧಿಕಾರಿಗಳು ಆಗಿದ್ದಾರೆ. ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಕೂಗುತ್ತಿದ್ದಾರೆ.

  • ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    – ಸಿಎಂ ಕನಸಿನಲ್ಲೂ ಮೋದಿ ಕಾಡ್ತಿದ್ದಾರೆ

    ಯಾದಗಿರಿ: ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್ ಗ್ರಾಮ ವಾಸ್ತವ್ಯ ಎಂಬ ಜಾತ್ರೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕನಸಿನಲ್ಲೂ ಮೋದಿ ಕಾಡುತ್ತಿದ್ದಾರೆ. ವೈಟಿಪಿಎಸ್ ಸಿಬ್ಬಂದಿಗೆ ಲಾಠಿ ಬೀಸಲು ಹೇಳುತ್ತಿರಾ. ಕರ್ನಾಟಕದಲ್ಲಿ ಪೊಲೀಸ್ ರಾಜ್ಯ ನಿರ್ಮಿಸಲು ನೀವು ಹೊರಟಿದ್ದೀರಾ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.

    ಸರ್ಕಾರದ ದುಡ್ಡಿನಲ್ಲಿ ಸಿಎಂ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆಯನ್ನು ಕೊಡಬೇಕು. ಮಾಜಿ ಪ್ರಧಾನಿ ದೇವೇಗೌಡರು ಪುತ್ರನ ವ್ಯಾಮೋಹದಲ್ಲಿದ್ದಾರೆ. ಸಿಎಂ ಏನೇ ತಪ್ಪು ಮಾಡಿದರೂ ದೊಡ್ಡಗೌಡರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯವನ್ನು ನೀಡದೆ. ಸಿಎಂ ‘ಗ್ರಾಮ ಡ್ರಾಮ’ ಮಾಡುತ್ತಿದ್ದಾರೆ. ನಾಟಕ ಮಾಡೋದನ್ನು ಬಿಟ್ಟು ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿದರು.

    ಹೊಳೆನರಸೀಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ಆದರೆ ಯಾದಗಿರಿಗೆ ಸಿಎಂ ಮೆಡಿಕಲ್ ಕಾಲೇಜು ಬೇಡ ಎನ್ನುತ್ತಾರೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ನಿಂಬೆಹಣ್ಣಿನ ಶಕ್ತಿ ಅಡ್ಡಿ ಮಾಡುತ್ತಿದೆ ಎಂದು ದೇವೇಗೌಡರ ಕಾಲೆಳೆದ ರವಿಕುಮಾರ್, ಒಂದು ವರ್ಷ ರೆಸಾರ್ಟ್ ವಾಸವಾಯ್ತು, ಈಗ ಗ್ರಾಮ ಡ್ರಾಮ ನಂತರ ಅಮೆರಿಕಾಗೆ ಸಿಎಂ ತೆರಳಲಿದ್ದಾರೆ ಎಂದು ವ್ಯಂಗ್ಯವಾಡಿದರು.

  • ಸಿಎಂ ಒಂದು ಹಳ್ಳಿಯಲ್ಲಿ ಮಲ್ಕೊಂಡು ಬಂದ್ರೆ ಏನು ಪ್ರಯೋಜನ – ಶಾಸಕ ಕಾರಜೋಳ

    ಸಿಎಂ ಒಂದು ಹಳ್ಳಿಯಲ್ಲಿ ಮಲ್ಕೊಂಡು ಬಂದ್ರೆ ಏನು ಪ್ರಯೋಜನ – ಶಾಸಕ ಕಾರಜೋಳ

    – ಗ್ರಾಮ ವಾಸ್ತವ್ಯ ಜನರನನ್ನು ಡೈವರ್ಟ್ ಮಾಡೋ ಗಿಮಿಕ್

    ಬಾಗಲಕೋಟೆ: ರಾಜ್ಯದಲ್ಲಿ 166 ತಾಲೂಕುಗಳಲ್ಲಿ ಬರ ತಾಂಡವಾಡುತ್ತಿದೆ. ದನಕರುಗಳಿಗೆ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಜನರು ಗುಳೆ ಹೊರಟಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ನಮ್ಮ ಸಿಎಂ ಯಾವುದೋ ಒಂದು ಹಳ್ಳಿಯಲ್ಲಿ ಮಲಗಿ ಎದ್ದು ಬಂದರೆ ಏನು ಪ್ರಯೋಜನ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಸಿಎಂ ಗ್ರಾಮ ವಾಸ್ತವ್ಯಕ್ಕೆ ಲೇವಡಿ ಮಾಡಿದ್ದಾರೆ.

    ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಒಂದು ಗಿಮಿಕ್ ಅಷ್ಟೇ. ಒಂದೊಂದು ಜಿಲ್ಲೆಯ ಒಂದು ಹಳ್ಳಿಗೆ ಹೋಗಿ ಮಲಗಿಕೊಂಡ ಬಂದರೆ ಯಾರಿಗೂ ಪ್ರಯೋಜನವಿಲ್ಲ ಎಂದು ಸಿಎಂಗೆ ಟಾಂಗ್ ನೀಡಿದರು.

    ರಾಜ್ಯದಲ್ಲಿ 39,407 ಕಂದಾಯ ಗ್ರಾಮಗಳಿದ್ದಾವೆ. 58,648 ಜನ ವಸತಿ ಪ್ರದೇಶಗಳಿವೆ, ನಾವು ಎಲ್ಲಕಡೆ ಹೋಗಿ ಗ್ರಾಮ ವಾಸ್ತವ್ಯ ಮಾಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾವು ಮಾಡುವ ಕೆಲಸ ಇಡೀ ರಾಜ್ಯಕ್ಕೆ ಸಾರ್ವತ್ರಿಕವಾಗಿ ಪ್ರಯೋಜನವಾಗಬೇಕು ಎಂದರು. ಸಿಎಂ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ರೆ ಬೆಳಗಾವಿ, ಕಲಬುರ್ಗಿ, ಮೈಸೂರು, ಬೆಂಗಳೂರು ಭಾಗದಲ್ಲಿ ಸಭೆ ಮಾಡಿ, ಅಧಿಕಾರಿಗಳಿಗೆ ಚಾಟಿ ಬೀಸಿ ಕೆಲಸ ಮಾಡೋಕೆ ಹೇಳಿದ್ದರೆ ಉಪಯೋಗ ಆಗುತಿತ್ತು ಎಂದು ಹೇಳಿದರು.

    ಇನ್ನೂ ರಾಜ್ಯದಲ್ಲಿ ಜೆಡಿಎಸ್ ಜನಪ್ರಿಯತೆ ಗಳಿಸಿಕೊಂಡಿದ್ದರೆ, 37 ಸೀಟ್ ಅಷ್ಟೇ ಯಾಕೆ ಗೆಲ್ಲುತ್ತಿತ್ತು, 124 ಸೀಟ್ ಗೆಲ್ಲುತ್ತಿತ್ತು. ಅಲ್ಲದೆ ಸಿಎಂ ಆಡಳಿತ ನಡೆಸಲು ಕಾಂಗ್ರೆಸ್‍ನವರು ಸಹಕಾರ ಕೊಡುತ್ತಿಲ್ಲ. ಅದಕ್ಕೆ ಸಿಎಂ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಗ್ರಾಮ ವಾಸ್ತವ್ಯದ ಗಿಮಿಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

  • ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು  ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

    ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

    ನಂತರ ಬಸ್‍ನಲ್ಲೇ ಕುಳಿತು ಮನವಿ ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು, ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.

  • ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    ಅರ್ಜಿ ತೆಗೆದುಕೊಂಡು ಬಂದರೆ ಏನೂ ಅಗಲ್ಲ – ಗ್ರಾಮ ವಾಸ್ತವ್ಯಕ್ಕೆ ಶೆಟ್ಟರ್ ವ್ಯಂಗ್ಯ

    – ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡುವುದರಿಂದ ಅಭಿವೃದ್ಧಿಯಾಗಲ್ಲ

    ಹುಬ್ಬಳ್ಳಿ: ಸಿಎಂ ಗ್ರಾಮ ವಾಸ್ತವ್ಯ ಮಾಡಿ ಕೇವಲ ಅರ್ಜಿ ತೆಗೆದುಕೊಂಡು ಬಂದರೆ ಅಭಿವೃದ್ಧಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

    ಇಂದು ಹುಬ್ಬಳ್ಳಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾಡೋ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಒಂದು ಗ್ರಾಮಕ್ಕೆ ಹೋಗಿ ವಾಸ್ತವ್ಯ ಮಾಡಿದರೆ ಅಭಿವೃದ್ಧಿಯಾಗಲ್ಲ ಎಂದು ಕಿಡಿಕಾರಿದ್ದಾರೆ.

    ಒಂದು ಗ್ರಾಮಕ್ಕೆ ಹೋಗಿ ಒಂದು ದಿನ ಇದ್ದು ಕೇವಲ ಅರ್ಜಿಗಳನ್ನು ತೆಗೆದುಕೊಂಡು ಬಂದರೆ ಏನ್ ಅಭಿವೃದ್ಧಿ ಆಗತ್ತೆ, ಅದು ಅಧಿಕಾರಿಗಳು ಮಾಡೋ ಕೆಲಸ. ಮೊದಲು ಸಿಎಂ ಕಟ್ಟುನಿಟ್ಟಿನ ಆಡಳಿತ ನಡೆಸಲಿ. ತಮ್ಮಲ್ಲಿನ ಒಳ ಜಗಳವನ್ನು ಬಗೆಹರಿಸಲಿ. ಅದು ಬಿಟ್ಟು ಗ್ರಾಮ ವಾಸ್ತವ್ಯ ಎಂದು ನಾಟಕ ಮಾಡಿದರೆ ಏನು ಅಭಿವೃದ್ಧಿ ಆಗಲ್ಲ ಎಂದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಮಾತನಾಡಿ, ಈ ಯೋಗ ಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯಲು ಭಾರತದ ಪ್ರಧಾನಿ ಮೋದಿ ಅವರು ಕಾರಣ. 2015 ರಲ್ಲಿ ವಿಶ್ವಸಂಸ್ಥೆಯಲ್ಲಿ ಯೋಗ ದಿನದ ಬಗ್ಗೆ ಮೊದಲು ಪ್ರಸ್ತಾಪಿಸಿದ್ದು ಮೋದಿ ಅವರು ಇದಕ್ಕೆ ಪ್ರಪಂಚದ 170 ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ್ದವು. ಅದ್ದರಿಂದ ಜೂನ್ 21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮತ ಬೇಟೆಗಾಗಿ ಪರಮೇಶ್ವರ್ ಕಸರತ್ತು-ಕೆಪಿಸಿಸಿ ಅಧ್ಯಕ್ಷರ ಮೂರನೇ ಗ್ರಾಮವಾಸ್ತವ್ಯ

    ಮತ ಬೇಟೆಗಾಗಿ ಪರಮೇಶ್ವರ್ ಕಸರತ್ತು-ಕೆಪಿಸಿಸಿ ಅಧ್ಯಕ್ಷರ ಮೂರನೇ ಗ್ರಾಮವಾಸ್ತವ್ಯ

    ತುಮಕೂರು: ಮತ ಬೇಟೆಗಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಕಸರತ್ತು ಮುಂದುವರೆದಿದೆ. ಕೊರಟಗೆರೆ ಕ್ಷೇತ್ರದ ಕೋಳಾಲ ಹೋಬಳಿಯ ಎನ್.ಬೇವಿನಹಳ್ಳಿಯಲ್ಲಿ ಪರಮೇಶ್ವರ್ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಗ್ರಾಮವಾಸ್ತವ್ಯ ಪರಿಕಲ್ಪನೆ ಸಮಾಜಮುಖಿಯಾಗಿದೆ. ಗ್ರಾಮವಾಸ್ತವ್ಯದಿಂದ ಗ್ರಾಮದ ಸಮಸ್ಯೆ, ಹಳ್ಳಿ ಜನರ ಕಷ್ಟನಷ್ಟ ತಿಳಿಯುತ್ತದೆ. ಹೀಗಾಗಿ ಮುಂದಿನ ದಿನದಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ಗ್ರಾಮವಾಸ್ತವ್ಯ ಮಾಡುವಂತೆ ಫರ್ಮಾನು ಹೊರಡಿಸಲಾಗುವುದು ಎಂದರು. ಎನ್.ಬೇವಿನಹಳ್ಳಿ ಗ್ರಾಮದ ರೈತ ರಂಗಧಾಮಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಪರಮೇಶ್ವರ್ ಮುದ್ದೆ ಊಟ ಸೇವಿಸಿದ್ರು. ಬಳಿಕ ನೆಲದ ಮೇಲೆ ಚಾಪೆ ಹಾಸಿ ಮಲಗಿದ್ರು.

    ಬಿಜೆಪಿ ಒಳಂಗಿಂದೊಳಗೆ ಓವೈಸಿ ಜೊತೆ ಮಾತುಕತೆ ನಡೆಸುತಿರುವುದು ನಮಗೆ ಮೊದಲೇ ಗೊತ್ತಿತ್ತು. ಮುಸ್ಲಿಂರನ್ನು ದ್ವೇಷಿಸುವ ಬಿಜೆಪಿ ಓವೈಸಿ ಸಖ್ಯ ಬೆಳೆಸಿದೆ. ಅವರಿಗೆ ನೈತಿಕತೆಯೇ ಇಲ್ಲ ಎಂದುಪರಮೇಶ್ವರ್ ಬಿಜೆಪಿ ವಿರುದ್ಧ ಹರಿಹಾಯ್ದರು.