Tag: village people

  • ಲಾಕ್‍ಡೌನ್ ಸಮಯದಲ್ಲಿ ಅದಿವಾಸಿಗಳು ಜಾಗ ಖಾಲಿ ಮಾಡುವಂತೆ ಪಿಡಿಓ ನೋಟಿಸ್

    ಲಾಕ್‍ಡೌನ್ ಸಮಯದಲ್ಲಿ ಅದಿವಾಸಿಗಳು ಜಾಗ ಖಾಲಿ ಮಾಡುವಂತೆ ಪಿಡಿಓ ನೋಟಿಸ್

    ಮಡಿಕೇರಿ: ಜಿಲ್ಲೆಯ ಗ್ರಾಮ ಒಂದರಲ್ಲಿ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಆದಿವಾಸಿಗಳಿಗೆ ಲಾಕ್‍ಡೌನ್ ಸಮಯದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಆ ಜಾಗವನ್ನು ಖಾಲಿ ಮಾಡಿ ತೆರಳುವಂತೆ ನೋಟಿಸ್ ಹೊರಡಿಸಿದ್ದಾರೆ.

    ಕೊಡಗಿನ ಕಾಫಿ ತೋಟಗಳಲ್ಲಿ ಜೀತ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ ಲೈನ್ ಮನೆಯ ಕೂಲಿ ಕಾರ್ಮಿಕರು ಸ್ವಾಭಿಮಾನವಾಗಿ ಬದುಕು ನಡೆಸಬೇಕು ಎಂದು ಸುಮಾರು 21 ಕುಟುಂಬಸ್ಥರು ಕಾಫಿ ತೋಟವನ್ನು ಬಿಟ್ಟು ಹೊರಗೆ ಬಂದು ಗ್ರಾಮ ಒಂದರಲ್ಲಿ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಇದೀಗ ಗ್ರಾಮ ಪಂಚಾಯತಿ ಪಿಡಿಓ ಆ ಜಾಗವನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ವಾಸವಾಗಿರುವ ಅದಿವಾಸಿಗಳಿಗೆ ಪಂಚಯತ್‍ನ ಪಿಡಿಓ ನೋಟಿಸ್ ನೀಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲೆಡೆ ಕಫ್ರ್ಯೂ ಜಾರಿಯಾಗಿದ್ದರು ಕೂಡ ಇಲ್ಲಿ ಮಾತ್ರ 21 ಕುಟುಂಬಗಳನ್ನು ಮನೆಯಿಂದಲೇ ಹೊರ ಹಾಕಲು ನೋಟಿಸ್ ನೀಡಿದ್ದಾರೆ. ಲಾಕ್ ಡೌನ್ ಸಮಯವೇ ನೋಡಿಕೊಂಡು ಏಳು ದಿನಗಳ ಒಳಗಾಗಿ ಜಾಗ ಖಾಲಿ ಮಾಡಬೇಕು ಇಲ್ಲ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದಾಗಿ ನಿರಾಶ್ರಿತರು ಕಂಗಾಲಾಗಿದ್ದಾರೆ.

    ಕಾಫಿ ತೋಟಗಳ ಲೈನ್ ಮನೆ ಬಿಟ್ಟು ಗುಡಿಸಲು ಹಾಕಿಕೊಂಡು ಹೇಗೋ ಜೀವನ ನಡೆಸುತ್ತಿದ್ದೇವು ಅದರೆ ಈಗ ಇದ್ದಕ್ಕಿದ್ದಂತೆ ಗುಡಿಸಲು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಎಲ್ಲಿಗೆ ಹೋಗುವುದೆಂದು ಗೊತ್ತಾಗುತ್ತಿಲ್ಲ. ಒಕ್ಕಲೆಬ್ಬಿಸಿದರೆ ಮತ್ತೆ ನಮಗೆ ಜೀತವೇ ಗತಿ. ಇದರ ಬದಲು ಅಧಿಕಾರಿಗಳೇ ವಿಷಕೊಟ್ಟು ಸಾಯಿಸಲಿ ಎಂದು ಆದಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಕೊರೊನಾದಂತಹ ಕಷ್ಟದ ಪರಿಸ್ಥಿತಿಯಲ್ಲಿ ಸೌಲಭ್ಯ ಕಲ್ಪಿಸುವ ಬದಲು ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ. ನೋಟಿಸ್ ಜೊತೆಗೆ ನಿರ್ಗತಿಕರ ಸಭೆ ಕರೆದು ಗುಡಿಸಲು ತೆರವು ಮಾಡಲು ಪಿಡಿಓ ಸೂಚಿಸಿದ್ದಾರೆ. ನಾವು ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಬೇಕು ಹೀಗಾಗಿ ನೀವಿರುವ ಜಾಗದಲ್ಲಿ ಕಸದ ಪ್ಲಾಂಟ್ ಸಿದ್ಧ ಮಾಡಲು ಜಾಗ ಖಾಲಿ ಮಾಡಿ ಎಂದು ಪಿಡಿಓ ಕಾರಣ ಕೊಟ್ಟಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಆಧಾರ್  ಕಾರ್ಡ್ ಗಾಗಿ ಬ್ಯಾಂಕ್ ಮುಂದೆ ಮಲಗಿದ ಜನ

    ಆಧಾರ್ ಕಾರ್ಡ್ ಗಾಗಿ ಬ್ಯಾಂಕ್ ಮುಂದೆ ಮಲಗಿದ ಜನ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಆಧಾರ  ಕಾರ್ಡ್  ಗಾಗಿ ರಾತ್ರಿ ಜನರು ಬ್ಯಾಂಕ್ ಮುಂದೆ ಮಲಗುತ್ತಿದ್ದಾರೆ.

    ಬ್ಯಾಂಕಿನ ಸಿಬ್ಬಂದಿ ರಾತ್ರಿ ಬಂದವರಿಗೆ ಮಾತ್ರ ಟೋಕನ್ ನೀಡುತ್ತಾರೆ. ಆದ ಕಾರಣ ಗಂಗಾವತಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಆಧಾರ್ ಕಾರ್ಡ್ ಮಾಡಿಸಲು ಕ್ಯೂ ನಿಲ್ಲಲು ಬಂದು ಅಲ್ಲೇ ರಾತ್ರಿ ಮಲಗುವ ಪರಿಸ್ಥಿತಿ ಬಂದಿದೆ.

    ವಾರಕ್ಕೆ ಕೇವಲ ನೂರು ಆಧಾರ್ ಕಾರ್ಡ್ ಮಾಡಿಕೊಡುವುದರಿಂದ, ಗಂಗಾವತಿ ತಾಲೂಕಿನ ಹಳ್ಳಿಯ ಜನರು ರಾತ್ರಿ ಬಂದು ಆಧಾರ ಕಾರ್ಡ್ ಗಾಗಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಗಮನಕ್ಕೆ ತಂದರು ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಹಳ್ಳಿಯ ಜನರು ಕಿಡಿಕಾರಿದ್ದಾರೆ.