Tag: village accountent

  • ಸರ್ಕಾರಿ ಜಮೀನಿನ ಹೆಸರಲ್ಲಿ ಬೆಳೆ ಪರಿಹಾರ ನೀಡಿದ ವಿಎ ಬಂಧನ

    ಸರ್ಕಾರಿ ಜಮೀನಿನ ಹೆಸರಲ್ಲಿ ಬೆಳೆ ಪರಿಹಾರ ನೀಡಿದ ವಿಎ ಬಂಧನ

    – ನೆರೆ ಪರಿವಾರದಲ್ಲೂ ಗ್ರಾಮಲೆಕ್ಕಾಧಿಕಾರಿ ತಾರತಮ್ಯ

    ಹಾವೇರಿ: ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಂಧನ ಮಾಡಲಾಗಿದೆ.

    ಬಂಧಿತ ಗ್ರಾಮ ಲೆಕ್ಕಾಧಿಕಾರಿಯನ್ನು ವೆಂಕಟೇಶ ಮಡಿವಾಳರ(26) ಎಂದು ಗುರುತಿಸಲಾಗಿದೆ. ಸರ್ಕಾರಿ ಜಮೀನಿನ ಹೆಸರಿನಲ್ಲಿ ಬೆಳೆ ಪರಿಹಾರ ಹಂಚಿಕೆ ಮಾಡಿದ್ದ. ಅಲ್ಲದೆ ಬೆಳೆ ಪರಿಹಾರದ ಹಣವನ್ನು ಸ್ನೇಹಿತನ ಖಾತೆಗೆ ಜಮಾ ಆಗುವಂತೆ ಈ ಗ್ರಾಮ ಲೆಕ್ಕಾಧಿಕಾರಿ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಅಲ್ಲದೆ ಆಗಸ್ಟ್ 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ರೈತರ ಅಪಾರ ಪ್ರಮಾಣದ ಬೆಳೆ ಹಾಳಾಗಿತ್ತು. ಇದರ ಬೆಳೆ ಪರಿಹಾರ ನೀಡುವಲ್ಲಿ ಸಹ ಗ್ರಾಮ ಲೆಕ್ಕಾಧಿಕಾರಿ ತಾರತಮ್ಯ ಮಾಡಿದ್ದ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟ ನಾಶ ಮಾಡಿದ್ರಾ ತಹಶೀಲ್ದಾರ್?

    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
    – ಜಾತ್ರೆಗೆ ಜಾಗ ಸಾಕಾಗಲ್ಲವೆಂದು ತೋಟ ನಾಶ

    ತುಮಕೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ತಹಶೀಲ್ದಾರ್ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ತುಮಕೂರು ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಮಮತಾ ಅವರ ಮೇಲೆ ಆರೋಪ ಕೇಳಿ ಬಂದಿದೆ. ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಅವರಿಗೆ ಉಡುಸಲಮ್ಮ ದೇವಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ, ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗುವುದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶಿಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ.

    ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಿ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ 300 ಅಡಿಕೆ, 30 ತೆಂಗು ಮತ್ತು ಬಾಳೆ ಗಿಡಗಳನ್ನು ಉರುಳಿಸಿದ್ದಾರೆ. ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮ ಕುಟುಂಬ ಉಡುಸಲಮ್ಮ ದೇವಸ್ಥಾನದ ಅರ್ಚಕರಾಗಿದ್ದಾರೆ. ಹೀಗಾಗಿ ಈ ಕುಟುಂಬಕ್ಕೆ ದೇವಸ್ಥಾನದಿಂದಲೇ ಜಮೀನು ಕೊಡುಗೆಯಾಗಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನು ಪೂರ್ಣ ಸ್ವಾಧೀನ ಕೋರಿ ಜಿಲ್ಲಾ ನ್ಯಾಯಾಲಯದಲ್ಲಿ ಮುನಿ ಕೆಂಪಯ್ಯ ಕುಟುಂಬ ಅರ್ಜಿ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಏಕಾಏಕಿ ಗಿಡಗಳನ್ನು ನಾಶ ಮಾಡಿದ್ದಾರೆ.

    ಈ ನಡುವೆ ಸಣ್ಣ ಕೆಂಪಯ್ಯ ಮತ್ತು ಸಿದ್ದಮ್ಮರ ಮಧ್ಯೆಯೇ ಜಮೀನು ಹಂಚಿಕೆಯಲ್ಲಿ ವಿವಾದ ಉಂಟಾಗಿತ್ತು. ಇದರ ಲಾಭ ಪಡೆದುಕೊಂಡ ತಾಲೂಕು ಆಡಳಿತ ಏಕಾಏಕಿ ತೋಟವನ್ನು ಉರುಳಿಸಿದೆ. ಗುಬ್ಬಿ ಪೊಲೀಸರ ಸಮುಖದಲ್ಲೇ ಗ್ರಾಮ ಲೆಕ್ಕಿಗ ಮುರುಳಿ ಮರಗಳನ್ನು ಕಡಿದಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕುಟುಂಬ ದುಃಖದ ಮಡುವಿನಲ್ಲಿದೆ. ಮುನಿ ಕೆಂಪಯ್ಯ ಕುಟುಂಬದ ಆಕ್ರಂದನದ ವಿಡಿಯೋ ವೈರಲ್ ಆಗಿದೆ.