Tag: vikas parva

  • ‘ವಿಕಾಸ ಪರ್ವ’ ಚಿತ್ರಕ್ಕೆ ಪ್ರಣಯರಾಜ ಸಾಥ್

    ‘ವಿಕಾಸ ಪರ್ವ’ ಚಿತ್ರಕ್ಕೆ ಪ್ರಣಯರಾಜ ಸಾಥ್

    ಸಾಮಾಜಿಕ ಕಳಕಳಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿದೆ “ವಿಕಾಸ ಪರ್ವ”. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ “ವಿಕಾಸ ಪರ್ವ” (Vikas Parva) ಚಿತ್ರದ ಟ್ರೇಲರ್ (Trailer) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಹಾಡು ಬರೆದಿರುವ ವಿ.ನಾಗೇಂದ್ರಪ್ರಸಾದ್ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು “ವಿಕಾಸ ಪರ್ವ” ದ ಕುರಿತು ಮಾತನಾಡಿದರು.

    ವಿಕಾಸ ಪರ್ವ  ಉತ್ತಮ ಸಂದೇಶವಿರುವ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರ ಇದಾಗಲಿದೆ. ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ತಿಳಿಸಿದರು.

    ಚಿತ್ರತಂಡದ ಸಹಕಾರದಿಂದ “ವಿಕಾಸ ಪರ್ವ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ  ಎಂದರು ನಿರ್ದೇಶಕ ಅನ್ಬು ಅರಸ್. ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ ಎಂದು ಮಾತನಾಡಿದ ನಟ ರೋಹಿತ್ ನಾಗೇಶ್, ಈ ಚಿತ್ರದ ಕುರಿತು ಒಂದು ಮಾತು ಹೇಳಬಹುದು. ಚಿತ್ರ ನೋಡುವವರಿಗೆ ಬೇಸರವಾಗಲ್ಲ. ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ. ಅಂತಹ ಉತ್ತಮ ಸಿನಿಮಾವಿದು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀನಾಥ್ ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು.

    ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ ಪಿ ಓ ಮಾಹಿತಿ ನೀಡಿದರು. ನಟಿ ಸ್ವಾತಿ, ನಟರಾದ ಅಶ್ವಿನ್ ಹಾಸನ್, ಕುರಿಬಾಂಡ್ ತಮ್ಮ ಪಾತ್ರದ ಕುರಿತು ಮಾತನಾಡಿದರು. ಕನ್ನಡವೇ ಸತ್ಯ ರಂಗಣ್ಣ, ವೀರಕಪುತ್ರ ಶ್ರೀನಿವಾಸ್ ಮುಂತಾದ ಗಣ್ಯರು ಸಮಾರಂಭದಲ್ಲಿದ್ದರು.

  • 130 ಎಕರೆ ಪ್ರದೇಶದಲ್ಲಿ ಜೆಡಿಎಸ್ ಸಮಾವೇಶ- ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಿಲೀಸ್

    130 ಎಕರೆ ಪ್ರದೇಶದಲ್ಲಿ ಜೆಡಿಎಸ್ ಸಮಾವೇಶ- ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಿಲೀಸ್

    ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಸೈನ್ಯವನ್ನು ರೆಡಿ ಮಾಡಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಿರ್ಧಾರ ಮಾಡಿರುವ ಜೆಡಿಎಸ್, ಲಕ್ಷಾಂತರ ಜನರ ಸಮ್ಮುಖದಲ್ಲಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೋಷಣೆ ಮಾಡಲು ಇಂದು ಅದ್ಧೂರಿ ಸಮಾವೇಶ ಆಯೋಜಿಸಿದೆ.

    ವಿಕಾಸ ಪರ್ವದ ಹೆಸರಿನಲ್ಲಿ ಯಲಹಂಕದ ಬಳಿ 130 ಎಕರೆ ಜಾಗದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ಆಯೋಜಿಸಿದ್ದು, 10 ಲಕ್ಷ ಜನ ಸೇರಿಸುವ ಪ್ಲಾನ್ ಮಾಡಿದೆ. ಇನ್ನು ಚುನಾವಣೆ ಸಮರಕ್ಕೆ ತಮ್ಮ ಹುರಿಯಾಳುಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದ್ದು, 150 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದೆ.

    25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕವಾಗಿದ್ದು, ಆ ಮತಗಳನ್ನು ತನ್ನತ್ತ ಸೆಳೆಯಲು ಜೆಡಿಎಸ್ ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಎಸ್‍ಪಿ ನಾಯಕಿ ಮಾಯಾವತಿ ಆಗಮಿಸುತ್ತಿದ್ದು, ಜೆಡಿಎಸ್‍ಗೆ ಪರವಾಗಿ ಬೆಂಬಲದ ಕಹಳೆ ಊದಲಿದ್ದಾರೆ.

    ಮೋದಿ, ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾರೆ ಎಂದು ಸಮಾವೇಶ ಮಾಡಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಸಮಾವೇಶ ಮಾಡುತ್ತಿದ್ದು, ಸ್ವತಂತ್ರ ಬಲದಲ್ಲಿ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.