Tag: Vijayotsava

  • ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಯಶ್ ಟಾಂಗ್

    ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಯಶ್ ಟಾಂಗ್

    – ಸುಮಕ್ಕನನ್ನು ಅವಹೇಳನ ಮಾಡಿ ನೀವೇ ನಮ್ಮ ಕೆಲ್ಸ ಕಡಿಮೆ ಮಾಡಿದ್ದು
    – ವೋಟ್ ಹಾಕಿದವರು ಮಾತ್ರವಲ್ಲ ಹಾಕದಿದ್ದವರು ಕೂಡ ನಮ್ಮವರು

    ಮಂಡ್ಯ: ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    ಸುಮಲತಾ ಅವರು ನಿಂತಿದ್ದ ಚುನಾವಣೆ ಹೇಗಿತ್ತು ಅನ್ನೋದಕ್ಕೆ ಒಂದು ಕಥೆ ಹೇಳುತ್ತೇನೆ ಕೇಳಿ ಎಂದ ಅವರು, ಜಗತ್ತಿನಲ್ಲಿ ಮೊದಲನೇ ಸಲ ಸ್ಟೀಮ್ ಬೋಟ್ ತಯಾರಿ ಮಾಡುತ್ತಿದ್ದಾಗ ಎಲ್ಲ ಜನ ನೋಡುತ್ತಾ ನಿಂತಿದ್ದರು. ಈ ವೇಳೆ ಜನ ಸ್ಟೀಮಲ್ಲಿ ಹೇಗೆ ಬೋಟ್ ಓಡುತ್ತೆ ಇದು ಸಾಧ್ಯವಿಲ್ಲ ಎನ್ನುತ್ತಿದ್ದರು. ಹಾಗೆಯೇ ನೋಡುತ್ತಿರುವಾಗ ಬೋಟ್ ಎಂಜಿನ್ ಸ್ಟಾರ್ಟ್ ಆಯ್ತು. ಆಗ ಎನೋ ಸ್ಟಾರ್ಟ್ ಆಗಿರಬಹುದು ಆದ್ರೆ ಮುಂದಕ್ಕೆ ಹೋಗಲ್ಲ ಅಂದರು. ಆಮೇಲೆ ಮುಂದಕ್ಕೆ ಹೋಗುತ್ತಿದ್ದಂತೆ ಇದು ನಿಲ್ಲಲ್ಲ ಹಾಗೆ ಹೋಗಿ ಎಲ್ಲಾದರೂ ಗುದ್ದಿಕೊಳ್ಳುತ್ತೆ ಎಂದರು. ಇದನ್ನು ಯಾಕೆ ಹೇಳುತ್ತಿದ್ದೇನೆ ಅಂತ ಅರ್ಥವಾಯ್ತಲ್ಲ ಎಂದು ಜನತೆಗೆ ಕೇಳಿ ನಯವಾಗಿ ನಮ್ಮ ಎದುರಾಳಿಗಳಿಗೆ ಯಶ್ ಮಾತಿನ ಚಾಟಿ ಬೀಸಿದರು.

    ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಅವರ 67ನೇ ಹುಟ್ಟುಹಬ್ಬಕ್ಕೆ ಮಂಡ್ಯದ ಜನತೆ ಸುಮಲತಾ ಅಮ್ಮನನ್ನು ಚುನಾವಣೆಯಲ್ಲಿ ಗೆಲ್ಲಿಸಿ ದೊಡ್ಡ ಗಿಫ್ಟ್ ಕೊಟ್ಟಿದ್ದೀರಿ. ಒಂದಂತೂ ನಿಜ ಎಂದಿಗೂ ಮಂಡ್ಯದ ಗಂಡು ಅಂಬರೀಶ್ ಅಣ್ಣ ಮಾತ್ರ. ಹೇಗೆ ನಿಮಗೆ ಧನ್ಯವಾದ ಹೇಳಬೇಕು? ಯಾವ ರೀತಿ ನಿಮಗೆ ಕೃತಜ್ಞತೆ ಸಲ್ಲಿಸಬೇಕು ಗೊತ್ತಿಲ್ಲ. ನಿಮ್ಮ ಅಭಿಮಾನಕ್ಕೆ ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಸಿ ನಿಮಗೆ ಗೌರವ ಸಲ್ಲಿಸಬೇಕು ಎಂದು ದರ್ಶನ್ ಅವರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿರೋದನ್ನ ಕೇಳಿದ್ದೇನೆ. ಈ ಮಾತು ಯಾಕೆ ಬರುತ್ತದೆ ಎಂದರೆ ನೀವು ನಮಗೆ ಅಷ್ಟರ ಮಟ್ಟಿಗೆ ಪ್ರೀತಿ ಅಭಿಮಾನಿ ತೊರಿಸಿದ್ದೀರಿ. ಮಂಡ್ಯದ ಜನ ಇವತ್ತು ಕೊಟ್ಟಿರುವ ಕೊಡುಗೆ ಎಲ್ಲರಲ್ಲೂ ಕೃತಜ್ಞತಾ ಭಾವ ಮೂಡಿಸಿದೆ. ಅದರಲ್ಲೂ ಸುಮಲತಾ ಅಮ್ಮನವರ ಮೇಲೆ ನೀವು ತೋರಿಸಿದ ಪ್ರೀತಿ ಅಭಿಮಾನ ಹೆಚ್ಚು ಎಂದು ಹೊಗಳಿದರು.

    ಹುಟ್ಟುವಾಗಲೇ ಯಾರೂ ಎಲ್ಲವನ್ನೂ ತಿಳಿದುಕೊಂಡು ಬರಲ್ಲ. ಅಂಬೆಗಾಲು ಇಟ್ಟುಕೊಂಡು ಮುಂದೆ ಬರುತ್ತಾರೆ. ನಮ್ಮ ಪ್ರತಿಸ್ಪರ್ಧಿಗಳಿಗೊಂದು ನನ್ನ ನಮ್ಮ ಮನವಿ. ಯಾರೆಲ್ಲಾ ನಮ್ಮನ್ನು ಟೀಕಿಸಿದ್ದೀರಿ. ಯಾರೆಲ್ಲಾ ನಮ್ಮ ಸುಮಕ್ಕನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದೀರಿ ನೀವೇ ನಮಗೆ ಕೆಲಸ ಕಡಿಮೆ ಮಾಡಿದ್ದು. ಟೀಕೆಗಳಿಂದ ಸುಮಲತಾರ ಪರ ಜನರಿಗೆ ಒಲವು ಹೆಚ್ಚಾಯ್ತು ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಟೀಕೆಗಳಿಗೆ ಯಶ್ ತಿರುಗೇಟು ನೀಡಿದರು.

    ವೋಟ್ ಹಾಕಿರುವವರಷ್ಟೇ ನಮ್ಮವರಲ್ಲ, ವೋಟ್ ಹಾಕದಿರುವವರು ಕೂಡ ನಮ್ಮವರು. ಎಲ್ಲರೂ ಟೀಕೆ ಮಾಡುವುದನ್ನು ಬಿಟ್ಟು ಸುಮಲತಾರಿಗೆ ಕೆಲಸ ಮಾಡಲು ಬಿಡಿ ಎಂದು ಹೇಳಿದರು.

    ಅಮ್ಮನ ಹೋರಾಟ ಸಾಮಾನ್ಯವಾಗಿರಲಿಲ್ಲ. ಇಲ್ಲಿ ಅವರು ಮಾಡಿದ್ದು ತುಂಬಾ ದೊಡ್ಡ ಹೋರಾಟ, ಅವರು ಮಂಡ್ಯದ ಜನರನ್ನು ನಂಬಿದ್ದರು. ನಾವು ಇಲ್ಲಿ ಬಂದು ಹೋರಾಡಿದೆವು, ಕಷ್ಟಪಟ್ಟೆವು ಎನ್ನುವುದಕ್ಕಿಂತ ನಾವು ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದೆವು. ಕಾಮನ್ ಸೆನ್ಸ್ ಅಂದರೆ ಮೊದಲು ಜನಗಳ ಧ್ವನಿ ಏನು ಎನ್ನುವುದನ್ನು ಕೇಳಬೇಕು. ಆಗ ಸುಮಲತಾ ಅವರು ಚುನವಾಣೆಗೆ ನಿಲ್ಲಬೇಕು ಎನ್ನುವುದು ಜನಗಳ ಕೂಗಾಗಿತ್ತು. ಹೀಗಾಗಿ ಅವರ ಜೊತೆ ನಾವು ಮನೆ ಮಕ್ಕಳಾಗಿ ಜೊತೆಗೆ ನಿಂತೆವು ಎಂದು ಹೇಳಿದರು.

  • ಮಹಿಳೆಯರ ಗೌರವ ಏನು ಅನ್ನೋದನ್ನು ಮಂಡ್ಯ ಜನ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ- ರಾಕ್‍ಲೈನ್

    ಮಹಿಳೆಯರ ಗೌರವ ಏನು ಅನ್ನೋದನ್ನು ಮಂಡ್ಯ ಜನ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ- ರಾಕ್‍ಲೈನ್

    ಮಂಡ್ಯ: ಮಹಿಳೆಯರ ಸ್ಥಾನಮಾನ, ಗೌರವ, ಮೌಲ್ಯವನ್ನು ಮಂಡ್ಯ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

    ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸುಮಲತಾ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಮಂಡ್ಯ ಚುನಾವಣೆಯ ಶಕ್ತಿ ಏನು ಎಂದು ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನೀವು ತೋರಿಸಿಕೊಟ್ಟಿದ್ದೀರ ಎಂದು ಮಂಡ್ಯ ಜನತೆಯನ್ನು ಹಾಡಿ ಹೊಗಳಿದರು.

    ಕಾರ್ಯಕ್ರಮದಲ್ಲಿ ಅಂಬರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಅವರು, ಇಂದು ನಮ್ಮೆಲ್ಲರ ಪ್ರೀತಿಯ ಅಣ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ, ನಾವು ಇಂದು ಅಂಬಿ ಅಣ್ಣನನ್ನು ನೆನೆಸಿಕೊಂಡು ಒಂದು ಕ್ಷಣ ಮೌನವಾಗಿ ನಿಲ್ಲೋಣ ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ನಿಲ್ಲಿಸಿ ಮೌನ ನಮನ ಸಲ್ಲಿಸಿದರು.

    ಮಂಡ್ಯದ ಗಂಡು ಅಂಬರೀಶ್ ಅವರ ಈ ಜನ್ಮ ದಿನದ ಆಚರಣೆಯಲ್ಲಿ ಎಲ್ಲರೂ ಭಾಗಿಯಾಗಿದ್ದಕ್ಕೆ ಧನ್ಯವಾದ. ಇಂದು ಅಂಬಿ ಅವರ ಕುಟುಂಬಕ್ಕೆ ನೀವು ಬಹಳಷ್ಟು ಸಂತೋಷವನ್ನು ಕೊಟ್ಟಿದ್ದೀರಿ. ಈ ಚುನಾವಣೆಯಲ್ಲಿ ಒಂದಲ್ಲ, ಎರಡಲ್ಲ ಎಷ್ಟೊಂದು ವಿಚಾರವನ್ನ ನೀವು ನಾಡಿಗೆ, ದೇಶಕ್ಕೆ ಕಲಿಸಿಕೊಟ್ಟಿದ್ದೀರಿ ಅನ್ನೊದನ್ನ ವೇದಿಕೆ ಮೇಲಿರುವ ಇತರೇ ಕಲಾವಿದರು ಹೇಳುತ್ತಾರೆ ಎಂದರು.

    ಬಳಿಕ ಇಂದು ಅಂಬಿ ಅಣ್ಣದ ಹುಟ್ಟುಹಬ್ಬ, ಆದರೆ ಅವರು ನಮ್ಮ ಜೊತೆ ಇಲ್ಲ. ನಿಮಗೆಲ್ಲ ಗೊತ್ತು ಅಣ್ಣ ತಮ್ಮ ಹುಟ್ಟುಹಬ್ಬದ ದಿನದಂದು ನಾನು ಮಂಡ್ಯದ ಜನರ ಜೊತೆ ಇರಬೇಕು. ಅವರ ಜೊತೆ ಬೆರೆಯಬೇಕು ಎಂದು ಹುಟ್ಟುಹಬ್ಬದ ಹಿಂದಿನ ದಿನದ ರಾತ್ರಿಯಿಂದ ಹಿಡಿದು ಪೂರ್ತಿ ದಿನವನ್ನು ನಿಮ್ಮ ಜೊತೆಯಲ್ಲೇ ಕಳೆಯುತ್ತಿದ್ದರು. ಇವತ್ತು ನಾವು ಅವರ ನೆನಪನ್ನು ಮನದಲ್ಲಿ ಇಟ್ಟುಕೊಂಡಿದ್ದೇವೆ. ಅವರು ಎಂದಿಗೂ ನಮ್ಮ ಮನದಲ್ಲಿ ಇರುತ್ತಾರೆ. ಮಂಡ್ಯದ ಜನರಿಂದ, ಅಭಿಮಾನಿಗಳಿಂದ ಅಂಬರೀಶ್ ಅವರು ಎಂದಿಗೂ ದೂರ ಆಗುವುದಿಲ್ಲ ಎಂದು ರೆಬೆಲ್ ಸ್ಟಾರ್ ಅವರನ್ನು ನೆನೆದರು.

    ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅವರ ಪರವಾಗಿ ಕನ್ನಡ ಚಿತ್ರರಂಗದ ಅನೇಕರು ದುಡಿದಿದ್ದಾರೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಚುನಾವಣೆ ಬಳಿಕ ನಾನು ದರ್ಶನ್ ಹಾಗೂ ಯಶ್ ಬಳಿ, ನೀವು ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದರೆ ನಿಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದೆ ಎಂದು ಹೇಳಿದ್ದೆ. ಯಾಕೆಂದರೆ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದಿರುವ ನಾಯಕ ನಟರು ಯಾವತ್ತೂ ಇಂತಹ ರಿಸ್ಕ್ ತೆಗೆದುಕೊಳ್ಳಲ್ಲ. ಅಂತಹ ಧೈರ್ಯವನ್ನ ದರ್ಶನ್ ಹಾಗೂ ಯಶ್ ಇಬ್ಬರೂ ಮಾಡಿದ್ದಾರೆ. ಇತಿಹಾಸದಲ್ಲಿ ಇನ್ನು ಯಾರು ಮಾಡದಂತಹ ಸಾಧನೆಯನ್ನು ಇವರು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಅಂಬಿ ಅಭಿಮಾನಿಗಳ ಸಂಘ, ಬಿಜೆಪಿ, ರೈತ ಸಂಘ ಎಲ್ಲರೂ ಈ ಚುನಾವಣೆಯಲ್ಲಿ ಸುಮಲತಾ ಅವರನ್ನು ಬೆಂಬಲಿಸಿದ್ದೀರಿ. ನಿಮ್ಮೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ನಮಸ್ಕರಿಸಿದರು.

  • ಅಂಬಿ ಚಿತ್ರವಿರುವ 750 ಗ್ರಾಂ ತೂಕದ ಬೃಹತ್ ಚಿನ್ನದ ಹಾರ ಧರಿಸಿದ ಅಭಿಮಾನಿ

    ಅಂಬಿ ಚಿತ್ರವಿರುವ 750 ಗ್ರಾಂ ತೂಕದ ಬೃಹತ್ ಚಿನ್ನದ ಹಾರ ಧರಿಸಿದ ಅಭಿಮಾನಿ

    ಮಂಡ್ಯ: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ಹೀಗಾಗಿ ಇದೇ ದಿನದಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ವಿಜಯೋತ್ಸವದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಯೊಬ್ಬರು ಅಂಬಿ ಭಾವಚಿತ್ರವುಳ್ಳ ಬರೋಬ್ಬರಿ 750 ಗ್ರಾಂ ತೂಕ ಇರುವ ಚಿನ್ನದ ಹಾರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಂಡ್ಯದ ಕೀಲಾರದ ರುದ್ರಗೌಡ ಅವರೇ ಈ ಚಿನ್ನದ ಅಭಿಮಾನಿ. ಕಳೆದ 35 ವರ್ಷದಿಂದ ಅಂಬರೀಶ್ ಅಭಿಮಾನಿಯಾಗಿರುವ ರುದ್ರೆಗೌಡರು, ಅಂಬರೀಶ್ ಭಾವಚಿತ್ರವುಳ್ಳ ಚಿನ್ನದ ಪದಕದ ಜೊತೆ ಬೃಹತ್ ಚಿನ್ನದ ಹಾರ ಹಾಕಿಕೊಂಡಿದ್ದಾರೆ. 7-8 ವರ್ಷಗಳಿಂದ ಅಭಿಮಾನಿ ಈ ಚಿನ್ನದ ಪದಕ ಇರುವ ಹಾರ ಮಾಡಿಸಿಕೊಂಡು, ಅದನ್ನು ಧರಿಸಿ ಅಭಿಮಾನ ಮೆರೆಯುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 35 ವರ್ಷದಿಂದ ಅಣ್ಣನ ಅಭಿಮಾನಿ. ಅವರ ಚಿತ್ರ ಅವರ ಜೀವನ ನಮಗೆ ಪ್ರೇರಣೆ. ನಾವು ಯಾವಾಗಲೂ ಅವರ ಜೊತೆ ಇರುತ್ತಿದ್ದೇವು. ಇಂದು ಅವರು ನಮ್ಮ ಜೊತೆ ಇಲ್ಲ. ಈ ವಿಜಯೋತ್ಸವವನ್ನ ಅವರು ನೋಡಬೇಕಿತ್ತು ಎಂದರು.

    ಈ ಚಿನ್ನದ ಪದಕಕ್ಕೆ ಯಾವುದೇ ತೆರಿಗೆ ಸಮಸ್ಯೆ ಇಲ್ಲ. ಅಣ್ಣನ ಫೋಟೋ ಇದ್ದ ಮೇಲೆ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.