Tag: Vijayan

  • ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ವಿಜಯಪುರ: ಸೈನ್ಯ ಸೇರ್ಪಡೆಗೆ ಯುವಜನತೆಯನ್ನು ಪ್ರೇರೇಪಿಸಲು ಹಾಗೂ ದೇಶಸೇವೆಯಂತಹ ಪವಿತ್ರ ಕಾರ್ಯಕ್ಕೆ ಅಣಿಗೊಳಿಸುವ ಉದ್ದೇಶದಿಂದ ಸೈನಿಕ ಶಾಲೆಯ ಪ್ರಾಚಾರ್ಯರೊಬ್ಬರು ಸುದೀರ್ಘ 700 ಕಿಮೀ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

    ಉತ್ತರ ಕರ್ನಾಟಕದ ಮುಕುಟ ಪ್ರಾಯವಾಗಿರುವ ವಿಜಯಪುರದಲ್ಲಿರುವ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ ಅವರು ಇಂಥದ್ದೊಂದು ಪ್ರೇರಣಾತ್ಮಕ ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ. ಇವರು ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಗೇಟಿನವರೆಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

    ವಿಜಯಪುರದಿಂದ ಆರಂಭವಾಗಿ ಕೊಡಗಿನವರೆಗೆ ತಮೋಜಿತ್ ಬಿಸ್ವಾಸ್ ಪ್ರಯಾಣಿಸಲಿದ್ದು, ನಿಗದಿತ ಅವಧಿಯೊಳಗೆ ಸುಮಾರು ಆರು ಜಿಲ್ಲೆಗಳ ಮೂಲಕ 700 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇವರು ದಿನಕ್ಕೆ 200 ಕಿಮೀ ಪೆಡಲ್ ತುಳಿಯುವ ದೃಢ ನಿರ್ಧಾರ ಮಾಡಿ, ಆಲಮಟ್ಟಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕನಾಯಕನಹಳ್ಳಿ, ಹೊಳೆನರಸೀಪುರ ಮಾರ್ಗವಾಗಿ ಪ್ರಯಾಣಿಸಿ ಅಕ್ಟೋಬರ್ 31 ರಂದು ಕೊಡಗಿನ ಸೈನಿಕ ಶಾಲೆಗೆ ತಲುಪಲಿದ್ದಾರೆ. ಇನ್ನು ಮಾರ್ಗಮಧ್ಯೆ ಸಿಗುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೆಲಕಾಲ ಸಮಯ ಕಳೆದು ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ದೇಶಸೇವೆಯ ಪವಿತ್ರ ಕಾರ್ಯ ನಿರ್ವಹಿಸಲು ಪ್ರೇರೇಪಿಸಲಿದ್ದಾರೆ.

    ದೇಶಸೇವೆ ಅತ್ಯಂತ ಪುಣ್ಯದ ಕಾರ್ಯ. ಇತ್ತೀಚಿನ ಶಿಕ್ಷಣ ಪದ್ಧತಿ ಎಂದರೆ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಗಳಿಸುವುದು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಿಜವಾದ ಶಿಕ್ಷಣ ಎಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸನವಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆದು ರಾಷ್ಟ್ರ ಪ್ರೇಮದ ಬಗ್ಗೆ ಆ ಶಕ್ತಿಯನ್ನು ಮೂಡಿಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರು ಇಂದಿನಿಂದಲೇ ಕನಸು ಕಾಣಿ, ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಬೇಕೆಂದು ತಮೋಜಿತ್ ಬಿಸ್ವಾಸ್ ಹೇಳಿದ್ದಾರೆ.


  • ವಿಜಯಪುರದಲ್ಲಿ ಪಿಸ್ತೂಲ್ ಮಾರಾಟಗಾರರು ಅರೆಸ್ಟ್: ಎಷ್ಟು ಪಿಸ್ತೂಲ್ ಸಿಕ್ಕಿದೆ?

    ವಿಜಯಪುರದಲ್ಲಿ ಪಿಸ್ತೂಲ್ ಮಾರಾಟಗಾರರು ಅರೆಸ್ಟ್: ಎಷ್ಟು ಪಿಸ್ತೂಲ್ ಸಿಕ್ಕಿದೆ?

    ವಿಜಯಪುರ: ಮೂರು ಜಿಲ್ಲೆಯಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ 12 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 20 ನಾಡ ಪಿಸ್ತೂಲು ಮತ್ತು 49 ಮದ್ದುಗುಂಡುಗಳನ್ನು ವಿಜಯಪುರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಸರಬರಾಜಿನ ಕಿಂಗ್ ಪಿನ್ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಚ್ಚನ್ ಸಿಂಗ್ ಹಾಗೂ ತನ್‍ಮನ್ ಸಿಂಗ್ ಎಂದು ಹೇಳಿದ್ದಾರೆ. ಹಾಗೂ ಆರೋಪಿಗಳು ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ನಾವು ಅಕ್ರಮವಾಗಿ ಪಿಸ್ತೂಲ್ ಗಳನ್ನು ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    12 ಮಂದಿಯ ವಿರುದ್ಧ 9 ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವರ ಕಿಂಗ್ ಪಿನ್ ಆಗಿರುವ ಮಧ್ಯ ಪ್ರದೇಶದ ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದು ಆದಷ್ಟು ಬೇಗ, ಸೆರೆ ಹಿಡಿಯುವುದಾಗಿ ಉತ್ತರ ವಲಯ ಐಜಿಪಿ ಡಾ ಕೆ ರಾಮಚಂದ್ರರಾವ್ ತಿಳಿಸಿದರು.

    ಪೊಲೀಸರಿಗೆ ಬಹುಮಾನ: ಅಕ್ರಮ ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಜಿಲ್ಲಾ ಪೊಲೀಸರಿಗೆ 1 ಲಕ್ಷ ಬಹುಮಾನವನ್ನು ಐಜಿಪಿ ಘೋಷಿಸಿದ್ದಾರೆ. ವಿಜಯಪುರದಲ್ಲಿ ಅಕ್ರಮ ಪಿಸ್ತೂಲು ಮಾರಾಟ ದಂಧೆ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.