Tag: Vijayadashami

  • ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    – ರಾಣಿಯಂತೆ ಪೋಸ್ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌! 

    ಮೋಹಕ ತಾರೆ ರಮ್ಯಾ (Actress Ramya) ದಸರಾ (Dasara) ಹಾಗೂ ವಿಜಯದಶಮಿ (Vijayadashami) ಆಚರಣೆ ಮಾಡಿ ಗೋಲ್ಡನ್‌ ಕಲರ್‌ ಸ್ಯಾರಿಯಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಮೈಸೂರು ದಸರಾ ಜಂಬೂ ಸವಾರಿ ಹಾಗೂ ಅರಮನೆಯ ಪೇಂಟಿಂಗ್‌ (Mysuru Palace) ಮುಂದೆ ದಸರಾ ಗೊಂಬೆಯಂತೆ ಪೋಸ್‌ ಕೊಟ್ಟಿದ್ದಾರೆ!

    ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರಮ್ಯಾ, ಚೆಂದದ ಸಾಲೊಂದನ್ನು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದು, ಸರಿ ಮತ್ತು ತಪ್ಪು ಎಂಬ ದ್ವಂದ್ವತೆಯನ್ನು ಮೀರಿ ದೈವಿಕತೆಯನ್ನು ಮಾತ್ರ ಕಂಡುಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಫೋಟೋಗಳಿಗೆ ಮನಸೋತ ಫ್ಯಾನ್ಸ್‌ ʻಅರೆರೆ ಅಪ್ಸರೆʼ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    ಫೋಟೋ ಅಪ್ಲೋಡ್‌ ಆಗಿ 30 ನಿಮಿಷದಲ್ಲೇ ಸುಮಾರು 14,500 ಮಂದಿಯ ಲೈಕ್‌ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ತಮಟೆ ಸದ್ದಿಗೆ ಸ್ಟೇಪ್ ಹಾಕಿದ ಶಿವಣ್ಣ

  • Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    ಆನೇಕಲ್: ಮಿನಿ ಮೈಸೂರು ಖ್ಯಾತಿಯ ಆನೇಕಲ್ (Anekal) ಪಟ್ಟಣದಲ್ಲಿ ಶಕ್ತಿ ದೇವತೆ ಚೌಡೇಶ್ವರಿ ದೇವಿ (Chowdeshwari) ವಿಜಯದಶಮಿ (Vijayadashami) ದಸರಾ ಉತ್ಸವ ಮತ್ತು ಜಂಬೂಸವಾರಿ (Jamboo Savari) ವಿಜೃಂಭಣೆಯಿಂದ ಆಚರಿಸಲಾಯಿತು. ನಾಡ ಹಬ್ಬ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದ್ರೆ ಆನೇಕಲ್‌ನಲ್ಲಿ ಕೇರಳದ ಕೊಚ್ಚಿಯ ಶೇಖರ್ ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಹೆಜ್ಜೆ ಹಾಕಿತು.

    ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲಿ ನಾಡಹಬ್ಬ ದಸರಾ (Dasara) ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಕೊಚ್ಚಿಯ ಶೇಖರ್ ಆನೆ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು. ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಬಳಿಕ ಆನೇಕಲ್ ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ಇದಕ್ಕೂ ಮೊದಲು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪಕ್ಕದ ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಆಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಶೇಖರ್ ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡಿದ್ದಾರೆ. ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ಆನೇಕಲ್ ಪಟ್ಟಣದ ಚೌಡೇಶ್ವರಿ ದೇವಿ ದಸರಾ ಮಹೋತ್ಸವ ನೋಡಲು ಕಳೆದ ಮೂರು ವರ್ಷದಿಂದ ಇಲ್ಲಿಗೆ ಬರುತ್ತೆವೆ. ಈ ಬಾರಿಯು ಕುಟುಂಬ ಸಮೇತ ಆಗಮಿಸಿದ್ದು, ತಾಯಿ ಚೌಡೇಶ್ವರಿ ಜಂಬೂ ಸವಾರಿಯನ್ನು ನೋಡಲು ತುಂಬಾ ಖುಷಿಯಾಯಿತು. ತುಂಬಾ ವಿಜೃಂಭಣೆಯಿಂದ ಈ ಬಾರಿ ದಸರಾ ಆಚರಣೆ ಮಾಡಿದ್ದಾರೆ. ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ದೇವಿಯ ದರ್ಶನ ಪಡೆದಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಸಾದ್ಯವಾಗದ ಭಕ್ತರು ಆನೇಕಲ್ ದಸರಾ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಜೊತೆಗೆ ವಿವಿಧ ಕಡೆಯಿಂದ ಆಗಮಿಸಿದ್ದ ಆಕರ್ಷಕ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿವೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

  • ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    – ಸಚಿವರ ಮಿಲ್‌ ಬಳಿ `ಚೋರರಿಗೊಂದು ಕಾಲ, ಶೂರರಿಗೊಂದು ಕಾಲʼ ಹಾಡಿಗೆ ಭರ್ಜರಿ ಸ್ಟೆಪ್ಸ್‌!

    ದಾವಣಗೆರೆ: ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯದಶಮಿ ಸಮಿತಿ ವತಿಯಿಂದ ಅದ್ದೂರಿಯಾಗಿ ವಿಜಯದಶಮಿ ಶೋಭಾಯಾತ್ರೆ ನಡೆಯುತ್ತಿದೆ.

     

    ಶೋಭಾಯಾತ್ರೆಯ ದಾರಿಯುದ್ದಕ್ಕೂ ಸುಂದರವಾದ ಟ್ಯಾಬ್ಲೋಗಳನ್ನು ನಿರ್ಮಿಸಲಾಗಿದೆ. ಆಂಜನೇಯ, ಶಿವಾಜಿ, ವೆಂಕಟೇಶ್ವರ ಸರ್ಕಲ್ ನಲ್ಲಿ ಶ್ರೀ ಕೃಷ್ಣ, ಬೃಹತ್ ಆಂಜನೇಯನ ಟ್ಯಾಬ್ಲೋ ಮಾಡಲಾಗಿದೆ. ಅಲ್ಲದೇ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಭಾರತ ಮಾತೆ, ಭುವನೇಶ್ವರಿ ದೇವಿ, ಅಕ್ಕಮಹಾದೇವಿ, ಅಂಬೇಡ್ಕರ್, ಬಸವಣ್ಣ ಸೇರಿದಂತೆ ದೇಶಭಕ್ತರು ಹಾಗೂ ಸಮಾಜ ಸುಧಾರಕರ ಟ್ಯಾಬ್ಲೋಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ವಿಶ್ವಕರ್ಮ ಮಂಡಳಿ ಮಾಡಿ ಸರ್ಕಾರ ಮರೆತಂತಿದೆ: ಶಂಕರಾತ್ಮಾನಂದ ಸರಸ್ವತಿ ಶ್ರೀ ಕಿಡಿ

    1500ಕ್ಕೂ ಹೆಚ್ಚು ಪೊಲೀಸರು, ಡಿಆರ್ ಹಾಗೂ ಕೆಎಸ್‍ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ವಿನ ಭದ್ರತೆ ಕೈಗೊಳ್ಳಲಾಗಿದೆ. ವಿವಾದಾತ್ಮಕ ಘೋಷಣೆ, ಪೋಸ್ಟರ್ ಪ್ರದರ್ಶನ ಮಾಡಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಮಸೀದಿಗಳಿಗೆ ಭದ್ರತೆ ನೀಡಲಾಗಿದ್ದು, ಸಿಸಿ ಕ್ಯಾಮೆರಾ, ಡ್ರೋನ್ ಮೂಲಕ ಹದ್ದಿನ ಕಣ್ಣಿಡಲಾಗಿದೆ.

    ಶೋಭಾಯಾತ್ರೆಯಲ್ಲಿ ಡೊಳ್ಳು ಬಾರಿಸುವ ಮೂಲಕ ಮಾಜಿ ಸಚಿವ ರೇಣುಕಾಚಾರ್ಯ ಗಮನ ಸೆಳೆದಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಡಿಜೆಗೆ ಅನುಮತಿ ಕೊಡಿಸುವಲ್ಲಿ ಹಾಗೂ ಕಾರ್ಲ್ ಮಾರ್ಕ್ಸ್‌ ನಗರದಲ್ಲಿ ನಡೆದ ಬ್ಯಾನರ್ ವಿಚಾರವಾಗಿ ಮೌನವಾಗಿದ್ದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಒಡೆತನದ ಮಿಲ್ ಎದುರು `ಚೋರರಿಗೊಂದು ಕಾಲ, ಶೂರರಿಗೊಂದು ಕಾಲ’ ಹಾಡು ಹಾಕಿ ಯುವಕರು, ಬಿಜೆಪಿ ನಾಯಕರು ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

  • ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್‌

    ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್‌

    ಮೈಸೂರು: ನಾಡಹಬ್ಬ ದಸರಾ ಅದ್ದೂರಿಯಾಗಿ ನಡೆಯುತ್ತಿದೆ. ಇದರ ಭಾಗವಾಗಿ ಯದುವೀರ್ ಒಡೆಯರ್‌ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನದ ಬಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ.

    ವಜ್ರಮುಷ್ಠಿ ಕಾಳಗ ಮುಕ್ತಾಯವಾಗುತ್ತಿದ್ದಂತೆ ಭುವನೇಶ್ವರಿ ದೇವಾಲಯದವರೆಗೆ ವಿಜಯಯಾತ್ರೆ ನಡೆಯಿತು. ಬಳಿಕ ಯದುವೀರ್ ಒಡೆಯರ್‌, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಪೂಜೆ ಮುಕ್ತಾಯವಾಗುತ್ತಿದ್ದಂತೆ ಯದುವೀರ್ ಅರಮನೆಗೆ ವಾಪಸ್ ಆದರು. ಇದರೊಂದಿಗೆ ಅರಮನೆ ದಸರಾ ಮುಕ್ತಾಯಗೊಂಡಿದೆ. ಇದನ್ನೂ ಓದಿ: ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು?

    ಪೊಲೀಸ್‌ ಬ್ಯಾಂಡ್‌ ಜೊತೆಗೆ ಪಟ್ಟದ ಆನೆ, ಕುದುರೆ, ಹಸು ವಿಜಯಯಾತ್ರೆಯಲ್ಲಿ ಭಾಗಿಯಾಗಿದ್ದವು. ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರಿನಲ್ಲಿ ಯದುವೀರ್ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

  • ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು?

    ಬನ್ನಿ ಪೂಜೆಯ ಪೌರಾಣಿಕ ಮಹತ್ವವೇನು?

    ನವರಾತ್ರಿಯ ಕೊನೆಯ ದಿನ ಬನ್ನಿ ಪೂಜೆಯನ್ನು ಮಾಡಲಾಗುತ್ತದೆ. ಬನ್ನಿ ಕೊಡುವ ಸಂಪ್ರದಾಯದೊಂದಿಗೆ ಈ ದಸರಾ ಹಬ್ಬವನ್ನು ಆಚರಿಸುತ್ತೇವೆ. ಬನ್ನಿಯ ಮಹತ್ವವೇನು? ಯಾಕೆ ಬನ್ನಿ ಕೊಡುವ ಸಂಪ್ರದಾಯವಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

    ವಿಜಯದಶಮಿ ಹೆಸರೇ ಹೇಳುವಂತೆ ವಿಜಯದ ಸಂಕೇತವಾಗಿರುವ ವಿಜಯ ದಶಮಿಯ ದಿನ ಬನ್ನಿ ವೃಕ್ಷವನ್ನು ಪೂಜಿಸಲಾಗುತ್ತದೆ. ಬನ್ನಿ ವೃಕ್ಷದ ಪೂಜೆ ಮಾಡುವುದು ಸಾಮಾನ್ಯ. ಆದರೆ ಪ್ರತಿಯೊಂದು ತನ್ನ ಒಳ ಕಥೆಯನ್ನು ಹೊಂದಿರುತ್ತದೆ. ಬನ್ನಿಯ ಹಿಂದೆ ಒಂದು ಪೌರಾಣಿಕ ಕಥೆಯಿದೆ.

    ಹಿಂದೂ ಸಂಸ್ಕೃತಿಯ ಪ್ರತಿಯೊಂದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಹಿಂದಿನ ಕಾಲದಲ್ಲಿ ಸೂರ್ಯವಂಶಸ್ಥ ರಘು ಮಹಾರಾಜ ಎಂಬ ರಾಜ ಭರತಖಂಡವನ್ನು ಆಳುತ್ತಿದ್ದ. ಈ ಸಮಯದಲ್ಲಿ ಕೌಸ್ಥೇಯನೆಂಬ ಬಡ ಬ್ರಾಹ್ಮಣ ಬಾಲಕನೊಬ್ಬ ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳೆಂಬ ಗುರುಗಳ ಗುರುಕುಲಕ್ಕೆ ಬಂದಿದ್ದ. ಆ ಮುನಿಗಳ ಆಶ್ರಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಕೌಸ್ಥೇಯ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿಂದ ಯಾವುದೇ ಗುರುದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆ ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆಂದು ಆಗ್ರಹ ಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿಂದ ಕುಪಿತಗೊಂಡ ಅರುಣಿ ಮಹರ್ಷಿಗಳು “ಗುರುದಕ್ಷಿಣೆ” ಕೊಡುವುದೇ ಇದ್ದರೆ “ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು” ಎದು ಬಡ ಕೌಸ್ಥೇಯನಿಗೆ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.

    ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆಂಬ ಕಲ್ಪನೆ ಕೂಡ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ0ಪಾದಿಸುವುದೆಂಬ ಗಾಢ ಚಿಂತೆಗೆ ತೊಡಗುತ್ತಾನೆ. ಹೀಗೇ ರಘು ಮಹಾರಾಜನ ಆಸ್ಥಾನಕ್ಕೆ ಕೌಸ್ಥೇಯ ಬಂದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭಂಡಾರದ ಸಮಸ್ತ ಧನವನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊಂಡಿರುತ್ತಾನೆ. ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭಂಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲವೇ ವರ್ಷಗಳಲ್ಲಿ ರಾಜಕೋಶವು ಮತ್ತೆ ತುಂಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆಂದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಹೇಳಿಕೊಳ್ಳುತ್ತಾನೆ.

    ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆoಬ ಸದುದ್ದೇಶದಿಂದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ಼ದು ಸoಕಲ್ಪ ಮಾಡುತ್ತಾನೆ. ತನ್ನ ಚತುರಂಗ ಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒoದು ವನದಲ್ಲಿ ರಾಜ ಬಿಡಾರ ಹಾಕುತ್ತಾನೆ. ಅದು ಶಮೀವೃಕ್ಷಗಳಿ0ದ ತುಂಬಿದ ವನ. ಇದೇ ಸಂದರ್ಭದಲ್ಲಿ ಕುಬೇರನಿಗೆ ರಘು ಮಹಾರಾಜ ವಿದ್ಯಾರ್ಥಿಯೊಬ್ಬನ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಸದುದ್ದೇಶದಿ0ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ರಾಜನ ಸದುದ್ದೇಶ ಕೇಳಿ ಸುಪ್ರೀತನಾದ ಕುಬೇರ, ತನ್ನ ಮಾಯಾ ಶಕ್ತಿಯಿಂದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ0ದು ಎಲೆಯೂ ಸುವರ್ಣ ನಾಣ್ಯವಾಗುವಂತೆ ಮಾಡುತ್ತಾನೆ.

    ಸೂರ್ಯೋದಯವಾಗುತ್ತಿದ್ದಂತೆಯೇ ಶಮೀವೃಕ್ಷದ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಪರಿವರ್ತನೆಗೊಳ್ಳುತ್ತವೆ. ರಾಜ ಇದನ್ನು ದೈವೀಕೃಪೆ ಎoದು ಭಾವಿಸಿ ಕುಬೇರನ ಮೇಲೆ ತಾನು ಹೂಡಬೇಕಿದ್ದ ಯುದ್ಧವನ್ನು ತ್ಯಜಿಸುತ್ತಾನೆ. ಬಳಿಕ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊಂಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.

    ರಾಜನ ಭಂಡಾರ ಮತ್ತೆ ಸುವರ್ಣ ನಾಣ್ಯಗಳಿoದ ತುಂಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ಸಹಾಯಕ ಗುಣ ಮತ್ತು ದಾನದ ಗುಣವನ್ನು ಕಂಡು ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದಂದು ಶಮೀವೃಕ್ಷಕ್ಕೆ ಭಕ್ತಿಯಿ0ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತಂದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿಂದ ಧನ-ಧಾನ್ಯ ಸಮೃದ್ಧಿಯಾಗುವುದೆಂಬ ನ0ಬಿಕೆಯಿದೆ.

    ಹೀಗಾಗಿ ದಸರಾ ಸಂದರ್ಭದಲ್ಲಿ ಬನ್ನೀ ವೃಕ್ಷವನ್ನು ಅತ್ಯಂತ ವಿಶೇಷವಾಗಿ ಪೂಜಿಸಲಾಗುತ್ತದೆ. ಇದೇ ಬನ್ನಿ ವೃಕ್ಷದಲ್ಲಿ ಪಾಂಡವರು ತಮ್ಮ ಆಯುಧಗಳನ್ನು ಬಚ್ಟಿಟ್ಟು, ವಿಜಯದಶಮಿಯಂದು ಹೊರತೆಗೆದಿದ್ದರು ಎಂಬ ಪ್ರತೀತಿ ಕೂಡ ಇದೆ.

  • ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ (Navarathri)  ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ (Vijaya Dashmi) ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ.

    ವಿಜಯದಶಮಿಯ ಹಿನ್ನೆಲೆ ಏನು?
    ಕಾಡೆಮ್ಮೆ ರೂಪದ ಮಹಿಷಾಸುರ (Mahishura) ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

    ರಾಮಾಯಣಕ್ಕೆ ಏನು ಸಂಬಂಧ?
    ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮನ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬಕ್ಕಾಗಿ ಭಾರೀ ಏರ್ಪಾಡು ನಡೆಯುತ್ತದೆ.

    ಪಾಂಡವರಿಗೂ ಏನು ಸಂಬಂಧ?
    ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯಲು ಮುಂದಾಗುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಂತಳು. ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ  ಉತ್ತರ ಕುಮಾರ ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ ಎಂದು ಹೇಳುತ್ತಾನೆ.  ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಕಲಿಯುಗದಲ್ಲೂ ಆಚರಣೆ:
    ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಈ ಹಿಂದೆ ರಾಜರಲ್ಲಿತ್ತು. ಹೀಗಾಗಿ ದಶಮಿಯಂದೇ ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರಿದಿದೆ.

  • ವಿಜಯ ದಶಮಿ|  ದುರ್ಗಾ ನಮಸ್ಕಾರ ಪೂಜೆ ಮಾಡೋದರ ಉದ್ದೇಶ ಏನು?

    ವಿಜಯ ದಶಮಿ| ದುರ್ಗಾ ನಮಸ್ಕಾರ ಪೂಜೆ ಮಾಡೋದರ ಉದ್ದೇಶ ಏನು?

    ವರಾತ್ರಿಯ 9 ದಿನ ಅಥವಾ ವಿಜಯ ಆಚರಣೆ ನಡೆಯುವ ಜಾಗದಲ್ಲಿ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯನ್ನು ಮಾಡಲಾಗುತ್ತದೆ.

    ದಸರಾ ಸಮಯದಲ್ಲೇ ಮಾಡಬೇಕು ಎಂದು ಏನಿಲ್ಲ. ಮಂಗಳವಾರ ಅಥವಾ ಶುಕ್ರವಾರವೂ ಮಾಡಬಹುದು. ಕೆಲವೊಮ್ಮೆ ಮನೆಯಲ್ಲಿ ಬೆಳಗ್ಗೆ ಗಣಹೋಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆಯನ್ನು ಮಾಡುತ್ತಾರೆ.

    ಯಾಕೆ ಈ ಪೂಜೆ?
    ದುರ್ಗಾ ದೇವು ತುಂಬಾ ಶಕ್ತಿಶಾಲಿ ಮತ್ತು ಕರುಣಾಮಯಿ ತಾಯಿ. ಅವಳು ದುಷ್ಟಶಕ್ತಿಗಳನ್ನು ನಾಶಮಾಡುವವಳು. ದುರ್ಗಾ ನಮಸ್ಕಾರ ಪೂಜೆ ಮಾಡುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿ ಹೋಗುತ್ತದೆ ಎಂಬ ನಂಬಿಕೆ. ಜಾತಕ ದೋಷಕ್ಕೆ ಪರಿಹಾರ, ವ್ಯವಹಾರ ನಷ್ಟವನ್ನು ಕಡಿಮೆ ಮಾಡಿ ಆರ್ಥಿಕ ಅಭಿವೃದ್ಧಿ..ಹೀಗೆ ನಾನಾ ಕಾರಣಕ್ಕೆ ಈ ಪೂಜೆಯನ್ನು ಮಾಡಲಾಗುತ್ತದೆ.

    ಈ ಪೂಜೆ ಮಾಡುವ ಮೊದಲು ಮಂಡಲವನ್ನು ರಚಿಸಲಾಗುತ್ತದೆ. ಮಂಡಲದ ಮಧ್ಯ ಭಾಗದಲ್ಲಿ ಕಾಲುದೀಪವನ್ನು ಇಡಲಾಗುತ್ತದೆ. ನಂತರ ಸುತ್ತಲು ಹೂವುಗಳಿಂದ ಅಲಂಕರಿಸಲಾಗುತ್ತದೆ. ದುರ್ಗಾ ದೇವಿಯನ್ನು ಮಾತೃಕ-ನ್ಯಾಸ ಮಾಡುವ ಮೂಲಕ ದೊಡ್ಡ ದೀಪದಲ್ಲಿ ಆವಾಹಿಸಿ ಅಲ್ಲಿ ಅವಳ ಪ್ರತಿಯೊಂದು ಭಾಗವನ್ನು ವಿಭಿನ್ನ ಅಕ್ಷರಗಳಿಂದ ಪೂಜಿಸಲಾಗುತ್ತದೆ. ದುರ್ಗಾ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ರೂಪದಲ್ಲಿ ಆವಾಹಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ದೀಪಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಲಾಗುತ್ತದೆ.

    ದುರ್ಗಾ ದೇವಿ ಪರಾಕ್ರಮ, ಶಕ್ತಿ ಮತ್ತು ಜ್ಞಾನದ ದೇವತೆ. ಈ ಪೂಜೆಯ ಮೂಲಕ ಅವಳ ದೈವಿಕ ಶಕ್ತಿಯನ್ನು ಮನೆಗೆ ಆಹ್ವಾನಿಸಿ, ಕುಟುಂಬದ ಸದಸ್ಯರನ್ನು ರಕ್ಷಿಸುವುದು ಮತ್ತು ಅವರಿಗೆ ಆಶೀರ್ವಾದಗಳನ್ನು ನೀಡುವುದು ಈ ಪೂಜೆಯ ಮುಖ್ಯ ಉದ್ದೇಶ. ಈ ಪೂಜೆಯ ಮೂಲಕ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರವಿಡಬಹುದು ಎಂದು ನಂಬಲಾಗಿದೆ.

    ದುರ್ಗಾ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿಯೂ ಪೂಜಿಸಲಾಗುತ್ತದೆ. ದುರ್ಗಾ ದೇವಿಯು ಆರೋಗ್ಯ ಮತ್ತು ಸುಖವನ್ನು ನೀಡುವ ದೇವತೆ. ಪೂಜೆಯ ಮೂಲಕ ಕುಟುಂಬದ ಎಲ್ಲ ಸದಸ್ಯರು ಆರೋಗ್ಯವಾಗಿ ಮತ್ತು ಸುಖವಾಗಿ ಇರುತ್ತಾರೆ ಎಂಬ ನಂಬಿಕೆಯಿದೆ.

  • Navratri 2025: ವಿಜಯದಶಮಿಯ ಪೌರಾಣಿಕ ಮಹತ್ವವೇನು?

    Navratri 2025: ವಿಜಯದಶಮಿಯ ಪೌರಾಣಿಕ ಮಹತ್ವವೇನು?

    ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ. ಮೂಲತಃ ಈ ದಿನವನ್ನು ಆದಿ ಶಕ್ತಿಯು ಶುಂಭ ಮತ್ತು ನಿಶುಂಭರ ಮೇಲೆ ಸಾಧಿಸಿದ ಜಯದ ನೆನಪಿಗಾಗಿ ಆಚರಿಸಲಾಗುತ್ತದೆ. ಇದು ದೈವತ್ವವು ದುಷ್ಟ ಶಕ್ತಿಗಳ ಅಟ್ಟಹಾಸದ ಮೇಲೆ ಸಾಧಿಸಿದ ಮೇಲೆ ಜಯದ ಆಚರಣೆಯಾಗಿರುತ್ತದೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದರೆ, ಈ ದಿನವು ಇನ್ನೂ ಹಲವಾರು ಜಯಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ.

    ದಶಕಂಠನ ಮೇಲೆ ಶ್ರೀರಾಮನ ವಿಜಯ:
    ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ ‘ದಶ ಹರ’ ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.

    ಪಾಂಡವರ ವನವಾಸ ಅಂತ್ಯಗೊಂಡ ದಿನ:
    ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ ‘ವಿಜಯದಶಮಿ’. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು.

    ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ ‘ಗೋಲು’ ಎಂದು, ಕರ್ನಾಟಕದಲ್ಲಿ ‘ಗೊಂಬೆ ಹಬ್ಬ’ ಎಂದು ಕರೆಯುತ್ತಾರೆ. ಕೇರಳದಲ್ಲಿ, ವಿಜಯದಶಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಈ ದಿನ ವಿದ್ಯಾಭ್ಯಾಸವನ್ನು ಆರಂಭಿಸಲು ಒಳ್ಳೆಯ ದಿನ ಎಂಬ ನಂಬಿಕೆ ಇದೆ.

    ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ.

  • ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌ – ಡಿಎ 3% ಏರಿಕೆ

    ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌ – ಡಿಎ 3% ಏರಿಕೆ

    ನವದೆಹಲಿ: ವಿಜಯದಶಮಿಯ (Vijayadashami) ಮುನ್ನ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಗಿಫ್ಟ್‌ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ 3% ತುಟ್ಟಿ ಭತ್ಯೆ (Dearness Allowance) ನೀಡಲು ಒಪ್ಪಿಗೆ ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಲೆ ಏರಿಕೆಯನ್ನು ಸರಿದೂಗಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿ ಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (DR) ನೀಡಲು ಅನುಮೋದನೆ ನೀಡಿದೆ.

     

    ಈ ವರ್ಷದಲ್ಲಿ ಮಾರ್ಚ್ ತಿಂಗಳಿನಲ್ಲಿ 2% ರಷ್ಟು ಡಿಎ ಏರಿಕೆ ಮಾಡಲಾಗಿತ್ತು. ಈಗ ಮೊತ್ತೊಮ್ಮೆ ಡಿಕೆ ಏರಿಕೆ ಮಾಡಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಇದು ಮೂಲ ವೇತನ/ಪಿಂಚಣಿಯ 55% ಹಾಲಿ ದರಕ್ಕಿಂತ 3% ಹೆಚ್ಚಳವಾಗಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡರ ಹೆಚ್ಚಳದಿಂದಾಗಿ ಬೊಕ್ಕಸದ ಮೇಲೆ ಒಟ್ಟಾರೆಯಾಗಿ ವಾರ್ಷಿಕ 1,0083.96 ಕೋಟಿ ರೂ.ಗಳ ಹೊರೆ ಬೀಳಲಿದೆ. ಇದನ್ನೂ ಓದಿ: RSS ಶತಮಾನೋತ್ಸವ – ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ

    7ನೇ ಕೇಂದ್ರ ವೇತನ ಆಯೋಗದ ಶಿಫಾರಸಿಗೆ ಅನುಗುಣವಾಗಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಜೀವನ ವೆಚ್ಚ ಏರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ಕೇಂದ್ರದ ನಿರ್ಧಾರದಿಂದ ಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

    ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದ ಮೇಲೆ ವರ್ಷದಲ್ಲಿ 2 ಬಾರಿ ಕೇಂದ್ರ ಸರ್ಕಾರ ಡಿಎ ಏರಿಕೆ ಮಾಡುತ್ತೆ. ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಡಿಎ, ಡಿಆರ್ ನೀಡಲಾಗುತ್ತದೆ.

  • ವಿಜಯದಶಮಿಗೆ ಬನ್ನಿ ಕೊಡಲು ಹೋದ ಮಕ್ಕಳ ಬಾಳಲ್ಲಿ ದುರಂತ – ಓರ್ವ ಯುವತಿ ಸಾವು

    ವಿಜಯದಶಮಿಗೆ ಬನ್ನಿ ಕೊಡಲು ಹೋದ ಮಕ್ಕಳ ಬಾಳಲ್ಲಿ ದುರಂತ – ಓರ್ವ ಯುವತಿ ಸಾವು

    ರಾಯಚೂರು: ವಿಜಯದಶಮಿ (Vijayadashami) ದಿನ ತಮ್ಮ ತಾತನಿಗೆ ಬನ್ನಿ ಕೊಡಲು ಹೋದ ಮೊಮ್ಮಕ್ಕಳ ಬಾಳಲ್ಲಿ ದುರಂತ ನಡೆದಿದೆ. ರಾಯಚೂರು ನಗರದ (Raichur City) ಡಿಸಿ ಬಂಗಲೆ ಬಳಿ ಸ್ಕೂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದಾಳೆ, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

    ರಸ್ತೆ ಅಪಘಾತದಲ್ಲಿ (Road Accident 20 ವರ್ಷದ ಸಾಕ್ಷಿ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಸಂಜನಾಳಿಗೆ ಗಂಭೀರ ಗಾಯಗಳಾಗಿವೆ. ನಿನ್ನೆ (ಶನಿವಾರ) ರಾತ್ರಿ ತಾತನ ಮನೆಗೆ ಬನ್ನಿ ಕೊಡಲು ಸಂಜನಾ ಹಾಗೂ ಸಾಕ್ಷಿ ತೆರಳಿದ್ದರು. ಬನ್ನಿ ಕೊಟ್ಟು ವಾಪಸ್ ಬರುವ ವೇಳೆ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ನಗರದ ಬಸವೇಶ್ವರ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ – 18 ಗಂಟೆಗಳ ಬಳಿಕ ತೆರವು ಕಾರ್ಯಾಚರಣೆ ಯಶಸ್ವಿ

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ನಲ್ಲಿ ಹಿಂದೆ ಕುಳಿತಿದ್ದ ಸಾಕ್ಷಿ, ಕಾರಿನ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ. ಸಂಜನಾಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಪಘಾತದ ಬಳಿಕ ಕಾರು ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

    ಘಟನೆ ಹಿನ್ನೆಲೆ ರಾಯಚೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Tungabhadra Dam | ಒಳಹರಿವು ಹೆಚ್ಚಳ – ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ