ಲಂಡನ್: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಅನುಮತಿ ನೀಡಿದೆ.
ಇತ್ತೀಚೆಗಷ್ಟೆ ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಯುಎಯಿಯಿಂದ ಗಡಿಪಾರು ಮಾಡಲಾಗಿತ್ತು. ಈಗ ವಿಜಯ್ ಮಲ್ಯ ಗಡಿಪಾರಿಗೆ ಕೋರ್ಟ್ ಆದೇಶ ನೀಡಿದ್ದು ಸಾಲ ಮಾಡಿ ಪರಾರಿಯಾದವರನ್ನು ದೇಶಕ್ಕೆ ಕರೆ ತರುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಈ ಹಿಂದೆ ಮಲ್ಯ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.

ಮುಂದೇನು?
ಒಂದು ವೇಳೆ ಮಲ್ಯ ಗಡಿಪಾರು ಮಾಡುವಂತೆ ಕೋರ್ಟ್ ತೀರ್ಪು ನೀಡಿದರೆ, ಈ ಆದೇಶ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪುತ್ತದೆ. ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರು ಆದೇಶ ಹೊರಡಿಸಿ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಕೋರ್ಟ್ ನೀಡಿದ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಮಲ್ಯಗೆ ಅವಕಾಶವಿದೆ. ಒಂದು ವೇಳೆ ಮೇಲ್ಮನವಿ ಸಲ್ಲಿಸಿದರೆ ಮತ್ತೆ ಸಿಬಿಐ ಕಾನೂನು ಹೋರಾಟ ನಡೆಸಬೇಕಾಗುತ್ತದೆ.
ನಾನು ಸಾಲಗಾರನಲ್ಲ. ಕಿಂಗ್ ಫಿಷರ್ ಏರ್ ಲೈನ್ಸ್ ತೆಗೆದುಕೊಂಡಿದ್ದ ಸಾಲಕ್ಕೆ ಜಾಮೀನು ನಿಂತಿದ್ದೆ. ಆದರೆ ಕಿಂಗ್ ಫಿಷರ್ ಏರ್ ಲೈನ್ಸ್ ಉದ್ಯಮದಿಂದ ನಷ್ಟವಾಯಿತು. ಹೀಗಾಗಿ ಸಂಸ್ಥೆ ನಷ್ಟದ ಪಾಲಾಗಿದ್ದು, ನಾನು ಆ ನಷ್ಟದ ಜವಾಬ್ದಾರನಾಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.

ಇತ್ತೀಚೆಗಷ್ಟೆ ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಕರೆತರುತ್ತಿದ್ದಂತೆ, ಸಾರ್ವಜನಿಕ ಬ್ಯಾಂಕ್‍ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಎಚ್ಚೆತ್ತು ಸರಣಿ ಟ್ವೀಟ್ ಮಾಡಿದ್ದರು. ತಮ್ಮ ಟ್ವೀಟ್ ನಲ್ಲಿ ನಾನು ಪಡೆದಿರುವುದು ಸಾರ್ವಜನಿಕ ಹಣ. ಹೀಗಾಗಿ ಶೇ.100 ರಷ್ಟು ಸಾಲವನ್ನು ಮರು ಪಾವತಿ ಮಾಡುತ್ತೇನೆಂದು ಹೇಳಿ, ರಾಜಕಾರಣಿಗಳು ಹಾಗೂ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿದ್ದರು.
ಟ್ವೀಟ್‍ನಲ್ಲಿ ಏನಿತ್ತು?
ನಾನು ಸಾರ್ವಜನಿಕರ ಹಣವನ್ನು ದೋಚಿ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಹಾಗೂ ಮಾಧ್ಯಮಗಳು ನನ್ನ ವಿರುದ್ಧ ಜೋರಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣವಿರುವಾಗಲೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.

ಕಿಂಗ್‍ಫಿಶರ್ ಅದ್ಭುತ ವಿಮಾನಯಾನ ಸಂಸ್ಥೆಯಾಗಿತ್ತು. ಆದರೆ ವಿಮಾನಕ್ಕೆ ಬಳಸುವ ಇಂಧನದ ಬೆಲೆಯು ಪ್ರತಿ ಬ್ಯಾರೆಲ್‍ಗೆ 140 ಅಮೆರಿಕನ್ ಡಾಲರ್ ಹೆಚ್ಚಾಗಿತ್ತು. ಇದನ್ನು ಸಂಸ್ಥೆ ಎದುರಿಸುವಲ್ಲಿ ವಿಫಲವಾಗಿತ್ತು. ಇದರಿಂದಾಗಿ ಬ್ಯಾಂಕ್ ಹಣವೆಲ್ಲವೂ ಅಲ್ಲಿ ಹೋಗಿತ್ತು. ನಾನು ಶೇಕಡಾ 100ರಷ್ಟು ಹಣ ಮರು ಪಾವತಿ ಮಾಡಲು ಸಿದ್ಧವಾಗಿದ್ದೇನೆ. ದಯವಿಟ್ಟು ಸ್ವೀಕರಿಸಿ.
ಕಳೆದ ಮೂರು ದಶಕಗಳಿಂದ ಕಿಂಗ್‍ಫಿಶರ್ ಮದ್ಯದ ಕಂಪನಿ ಉತ್ತಮ ಪ್ರಗತಿಯಲ್ಲಿದೆ. ಆದರೆ ವಿಮಾನ ಯಾನದಿಂದ ನಷ್ಟಕ್ಕೆ ಒಳಗಾಗಬೇಕಾಯಿತು. ಅನೇಕ ರಾಜ್ಯಗಳ ಪ್ರಗತಿಗೆ ಹಣವನ್ನು ನೀಡಿರುವೆ. ಎಂದಿಗೂ ಬ್ಯಾಂಕ್‍ಗೆ ಮೋಸ ಮಾಡುವುದಿಲ್ಲ. ಎಲ್ಲ ಹಣವನ್ನು ಪಾವತಿ ಮಾಡುತ್ತೇನೆಂದು ಹೇಳಿದ್ದರು.
ಏನಿದು ಪ್ರಕರಣ?
ಭಾರತದ ವಿವಿಧ ಬ್ಯಾಂಕ್ ಗಳಿಗೆ ಮಲ್ಯ 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ಇಂಗ್ಲೆಂಡ್ ಗೆ ಪಲಾಯನ ಮಾಡಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿತ್ತು. ಅಲ್ಲದೇ ಇಂಗ್ಲೆಂಡಿನಿಂದ ಗಡಿಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೂ ಮನವಿ ಮಾಡಿಕೊಂಡಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಸೆಪ್ಟೆಂಬರ್ 3ರಂದು ಮಲ್ಯರಿಗೆ ನೋಟಿಸ್ ಜಾರಿ ಮಾಡಿ 1 ವಾರದೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಆದರೂ ಸಹ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಈ ಹಿಂದೆ ಭಾರತಕ್ಕೆ ಮಲ್ಯರನ್ನು ಗಡಿಪಾರು ಮಾಡುವ ಕುರಿತು ಲಂಡನ್ ನ್ಯಾಯಾಲಯ ಮುಂಬೈ ಜೈಲಿನ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿತ್ತು. ನ್ಯಾಯಾಲಯದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ಮುಂಬೈ ಆರ್ಥರ್ ರೋಡ್ ಜೈಲಿನ ವಿಡಿಯೋವನ್ನು ಸಲ್ಲಿಸಿದ್ದರು. ಆದರೆ ಮಲ್ಯ ಭಾರತದ ಜೈಲುಗಳು ಅಮಾನವೀಯವಾಗಿದೆ, ಅಲ್ಲಿ ಬೆಳಕು ಸರಿ ಇಲ್ಲ ಎಂದು ಮಲ್ಯ ಪರ ವಕೀಲರು ದೂರಿದ್ದರು. ಸಿಬಿಐ ಪರ ವಕೀಲರು ಎಲ್ಲಾ ವ್ಯವಸ್ಥೆಗಳು ಸರಿಯಾಗಿಯೇ ಇವೆ. ಎಲ್ಲವನ್ನು ಸರಿಮಾಡಿದ್ದೇವೆಂದು ಕೋರ್ಟ್ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv