Tag: vijay mallya

  • ಬಿಜೆಪಿ ಅಭಿವೃದ್ಧಿಯ ರಾಯಭಾರಿ ವಿಜಯ್ ಮಲ್ಯ: ಶಿವಸೇನೆ

    ಬಿಜೆಪಿ ಅಭಿವೃದ್ಧಿಯ ರಾಯಭಾರಿ ವಿಜಯ್ ಮಲ್ಯ: ಶಿವಸೇನೆ

    ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯ ಬಿಜೆಪಿ ಅಭಿವೃದ್ಧಿಯ ರಾಯಭಾರಿ ಎಂದು ಶಿವಸೇನೆ ಟೀಕಿಸಿದೆ.

    ಕೆಲವು ದಿನಗಳ ಹಿಂದೆ ಕೇಂದ್ರ ಸಚಿವರಾದ ಜುವಾಲ್ ಒರಾಮ್ ನವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ ವಿಜಯ್ ಮಲ್ಯ ಓರ್ವ ಚತುರ, ಜಾಣ್ಮೆಯ ಉದ್ಯಮಿ. ಅವರಲ್ಲಿರುವ ಕೌಶಲ್ಯಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಲೇಖನದಲ್ಲಿ ಬಿಜೆಪಿ ತನ್ನ ನಾಯಕರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದು, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಈ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದು ಹೇಳಿದೆ.

    ಸಚಿವರ ಪ್ರಕಾರ ಕಷ್ಟಪಟ್ಟು ದುಡಿಯೋದು ತಪ್ಪು ಎಂದು ಅರ್ಥವಾಗುತ್ತದೆ. ಬಿಜೆಪಿಯ ‘ಸ್ಟಾರ್ಟ್ ಅಪ್ ಇಂಡಿಯಾ’ ಮತ್ತು ‘ಮೇಕ್ ಇನ್ ಇಂಡಿಯಾ’ದ ರಾಯಭಾರಿಯಾಗಿ ವಿಜಯ್ ಮಲ್ಯರನ್ನು ನೇಮಿಸಬಹುದು. ಕಾರಣ ಸಚಿವರ ಯಶಸ್ವಿ ಉದ್ಯಮಿಯಾಗಲು ಸ್ಮಾರ್ಟ್ ಇದ್ರೆ ಸಾಕು ಅಂತಾ ಹೇಳಿದ್ದಾರೆ. ಮುಂದೊಂದು ದಿನ ಬಿಜೆಪಿ ನಾಯಕರು ದಾವೂದ್ ಇಬ್ರಾಹಿಂ ಓರ್ವ ಧೈರ್ಯವಂತ ವ್ಯಕ್ತಿ ಎಂದು ಹೇಳಿದ್ರೂ ಅಚ್ಚರಿಪಡಬೇಕಿಲ್ಲ ಎಂದು ಕಟು ಪದಗಳಿಂದ ಟೀಕಿಸಿದೆ. ಇದನ್ನೂ ಓದಿ: ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

    ಕೇಂದ್ರ ಸಚಿವ ಜುವಾಲ್ ಒರಾಮ್, 2018ರ ರಾಷ್ಟ್ರೀಯ ಆದಿವಾಸಿಗಳ ಉದ್ಯಮ ಸಮ್ಮೇಳನದಲ್ಲಿ ಮಾತನಾಡುತ್ತಾ, ನೀವೆಲ್ಲರೂ ವಿಜಯ್ ಮಲ್ಯರನ್ನು ಬೈಯುತ್ತೀರಿ. ವಿಜಯ್ ಮಲ್ಯ ಓರ್ವ ಸ್ಮಾರ್ಟ್ ಉದ್ಯಮಿಯಾಗಿದ್ದು, ಕೆಲವು ಜಾಣರನ್ನು ತನ್ನ ಬಳಿ ಕೆಲಸಕ್ಕೆ ನೇಮಿಸಿಕೊಂಡು ಸರ್ಕಾರ, ರಾಜಕಾರಣಿ ಮತ್ತು ಬ್ಯಾಂಕ್ ಗ ವಿಶ್ವಾಸ ಪಡೆದುಕೊಂಡು ಸಾಲ ಮಾಡಿದ್ದರು. ವಿಜಯ್ ಮಲ್ಯರ ಉದ್ಯಮ ಕೌಶಲ್ಯತೆ, ವ್ಯವಹಾರದ ಜ್ಞಾನ, ಮಾರುಕಟ್ಟೆಯ ಯೋಜನೆಯನ್ನು ಕಲಿಯಬೇಕಿದೆ ಎಂದು ಹೇಳಿದ್ದರು.

    ಇತ್ತ ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ, ಸಮ್ಮೇಳನದಲ್ಲಿ ನಾನು ವಿಜಯ್ ಮಲ್ಯರ ಹೆಸರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಾರದಿತ್ತು ಎಂದು ಜುವಾಲ್ ಒರಾಮ್ ಸ್ಪಷ್ಟನೆ ನೀಡಿದ್ದರು.

  • ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

    ಕಷ್ಟಪಟ್ಟು ದುಡಿದ್ರೆ ಸಾಲಲ್ಲ, ಮಲ್ಯನ ರೀತಿ ಸ್ಮಾರ್ಟ್ ಆಗಿ: ನವ ಉದ್ಯಮಿಗಳಿಗೆ ಕೇಂದ್ರ ಸಚಿವರ ಉಪದೇಶ

    ಹೈದರಾಬಾದ್: ಕೇವಲ ಕಷ್ಟಪಟ್ಟು ದುಡಿದರೆ ಸಾಲಲ್ಲ, ಮದ್ಯದ ದೊರೆ ವಿಜಯ್ ಮಲ್ಯನ ರೀತಿ ಸ್ಮಾರ್ಟ್ ಆಗಬೇಕು ಎಂದು ಕೇಂದ್ರ ಸಚಿವ ಜುವಾಲ್ ಒರಾಮ್ ಆದಿವಾಸಿ ಜನಾಂಗದ ನವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

    2018ರ ರಾಷ್ಟ್ರೀಯ ಆದಿವಾಸಿ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಜುವಾಲ್ ಒರಾಮ್, ನೀವೆಲ್ಲರೂ ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಬೇಕು. ಕೇವಲ ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ವಿಯಾಗಲ್ಲ. ಕೆಲಸದೊಂದಿಗೆ ಬುದ್ದಿವಂತಿಕೆ, ಜಾಣ್ಮೆಯಿಂದ ಎಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ನೀವೆಲ್ಲ ವಿಜಯ್ ಮಲ್ಯರನ್ನು ಬೈಯುತ್ತೀರಿ, ಅವರ ಹಾಗೆಯೇ ನೀವು ಸ್ಮಾರ್ಟ್ ಆಗಬೇಕು ಎಂದು ಉಚಿತ ಸಲಹೆಯನ್ನು ನೀಡಿದ್ದಾರೆ.

    ವಿಜಯ್ ಮಲ್ಯ ಓರ್ವ ಸ್ಟಾರ್ಟ್ ಉದ್ಯಮಿಯಾಗಿದ್ದು, ಕೆಲವು ಬುದ್ಧಿವಂತರನ್ನು ತನ್ನ ಬಳಿ ಕೆಲಸಕ್ಕೆ ನೇಮಿಸಿಕೊಂಡು ಬ್ಯಾಂಕ್, ರಾಜಕಾರಣಿಗಳನ್ನು ಮತ್ತು ಸರ್ಕಾರಗಳ ಮೇಲೆ ಪ್ರಭಾವ ಬೀರಿದರು. ವಿಜಯ್ ಮಲ್ಯ ದಿವಾಳಿಯಾಗುವ ಮುನ್ನ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು. ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಅವರಲ್ಲಿಯ ಚಾಕಚಕ್ಯತೆ, ನೈಪುಣ್ಯತೆ, ಜಾಣ್ಮೆ, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉಪದೇಶ ನೀಡಿದ್ದಾರೆ.

    ಇತ್ತ ಸಮ್ಮೇಳನದಲ್ಲಿ ಯಶಸ್ವಿ ಉದ್ಯಮಿಯ ಉದಾಹರಣೆಗಾಗಿ ವಿಜಯ್ ಮಲ್ಯರ ಹೆಸರು ಪ್ರಸ್ತಾಪಿಸಿದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ನಾಯಕರಿಂದ ವಿರೋಧ ವ್ಯಕ್ತವಾಗಿದೆ.

    ತಮ್ಮ ಹೇಳಿಕೆ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಜುವಾಲ್ ಒರಾಮ್, ನಾನು ಮಾತನಾಡುವ ಭರದಲ್ಲಿ ವಿಜಯ್ ಮಲ್ಯ ಹೆಸರನ್ನು ತೆಗೆದುಕೊಂಡಿದ್ದೇನೆ. ನಾನು ಬೇರೊಬ್ಬ ಯಶಸ್ವಿ ಉದ್ಯಮಿಯ ಹೆಸರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕಿತ್ತು. ವಿಜಯ್ ಮಲ್ಯ ಹೆಸರು ಬಳಸಿದ್ದು ನನ್ನ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ.

  • ಕೊನೆಗೂ ಮಲ್ಯ ಖಾಸಗಿ ಐಷಾರಾಮಿ ವಿಮಾನ ಸೇಲ್ ಆಯ್ತು!

    ಕೊನೆಗೂ ಮಲ್ಯ ಖಾಸಗಿ ಐಷಾರಾಮಿ ವಿಮಾನ ಸೇಲ್ ಆಯ್ತು!

    ಬೆಂಗಳೂರು: ದೇಶದ ಹಲವು ಬ್ಯಾಂಕ್‍ಗಳಲ್ಲಿ ಸಾಲಮಾಡಿ ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ವಿಟಿ-ವಿಜೆಎಂ ನೋಂದಣಿ ಸಂಖ್ಯೆಯ ಐಷಾರಾಮಿ ಜೆಟ್ ಶುಕ್ರವಾರ ಮಾರಾಟವಾಗಿದೆ.

    ಈ ಹಿಂದೆ ಮೂರು ಬಾರಿ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಲು ವಿಫಲವಾಗಿದ್ದ ಜೆಟ್ ಕೊನೆಗೂ ಮಾರಾಟವಾಗಿದ್ದು, ಅಮೆರಿಕದ ಮೂಲದ ಖಾಸಗಿ ಸಂಸ್ಥೆಯೊಂದು ಹರಾಜು ಪ್ರಕ್ರಿಯೆಯಲ್ಲಿ ಪಡೆದುಕೊಂಡಿದೆ. 100 ಮಿಲಿಯನ್ ಅಮೆರಿಕನ್ ಡಾಲರ್(ಅಂದಾಜು 6,84,45,00,000 ರೂ.) ಬೆಲೆಯ ಈ ವಿಮಾನ ಕೇವಲ 5.5 ಮಿಲಿಯನ್ ಡಾಲರ್(ಅಂದಾಜು 35 ಕೋಟಿ ರೂ.) ಗೆ ಮಾರಾಟವಾಗಿದೆ.

    ಈ ಹಿಂದೆ ಮೂರು ಬಾರಿ ವಿಮಾನ ಮಾರಾಟಕ್ಕೆ ಬಿಡ್ ಕರೆಯಲಾಗಿತ್ತು. ಈ ವೇಳೆ ಯಾವುದೇ ಸಂಸ್ಥೆ ವಿಮಾನವನ್ನು ಖರೀದಿಸಲು ಆಸಕ್ತಿ ವಹಿಸಿರಲಿಲ್ಲ.

    ಜೆಟ್ ವಿಶೇಷತೆ ಏನು?
    ಅಂದಹಾಗೇ ಐಶಾರಾಮಿ ವಿಮಾನವು 100 ಮಿಲಿಯನ್ ಯುಎಸ್ ಡಾಲರ್ (ಅಂದಾಜು 6,84,45,00,000 ರೂ.) ಬೆಲೆ ಹೊಂದಿದ್ದರೂ ಕಳೆದ 5 ವರ್ಷಗಳಿಂದ ಜೆಟ್ ನಿರ್ವಹಣೆ ಮಾಡದ ಕಾರಣ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೆಟ್‍ನಲ್ಲಿ ಸುಮಾರು 25 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳು ಪ್ರಯಾಣಿಸಬಹುದಾಗಿದ್ದು, ಬೆಡ್ ರೂಮ್, ಬಾತ್ ರೂಮ್, ಬಾರ್, ಸಭಾಂಗಣ ಸೇರಿ ಇತರೇ ವ್ಯವಸ್ಥೆ ಒಳಗೊಂಡಿದೆ.

    ಹರಾಜು ಮಾಡಿದ್ದು ಏಕೆ?
    ಕಳೆದ ಐದು ವರ್ಷಗಳಿಂದ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಲಾಗಿದ್ದ ವಿಮಾನವನ್ನು ಮಾರಾಟ ಮಾಡಲು ಅನುಮತಿ ಕೋರಿ ಅಧಿಕಾರಿಗಳು ಮುಂಬೈ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಲು ಸಲಹೆ ನೀಡಿತ್ತು. ಕೋರ್ಟ್ ಸಲಹೆಯ ಮೇರೆಗೆ ಅಧಿಕಾರಿಗಳು ಮನವಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಿರುವುದರಿಂದ ಸ್ಥಳಾವಕಾಶ ಸಮಸ್ಯೆ ಉಂಟಾಗಿದ್ದು, ಪ್ರತಿ ಗಂಟೆಗೆ ಸಂಸ್ಥೆಗೆ 13,000 ರೂ. ನಿಂದ 15,000 ರೂ. ಗಳು ವ್ಯರ್ಥವಾಗುತ್ತಿದೆ ಎಂದು ಮನವರಿಕೆ ಮಾಡಿದ್ದರು. ಬಳಿಕ ನ್ಯಾಯಾಲಯ ಏಪ್ರಿಲ್ 2018 ರಲ್ಲಿ ಜೆಟ್ ವಿಮಾನದ ಹರಾಜಿಗೆ ಅನುಮತಿ ನೀಡಿತ್ತು.

  • ಮಲ್ಯ ಲಂಡನ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅನುಮತಿ

    ಮಲ್ಯ ಲಂಡನ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅನುಮತಿ

    ಲಂಡನ್: ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ಮುಟ್ಟುಗೋಲು ಹಾಕಿಕೊಳ್ಳಲು ಲಂಡನ್ ನ್ಯಾಯಾಲಯ ಅನುಮತಿ ನೀಡಿದೆ.

    10 ಸಾವಿರ ಕೋಟಿ ರೂಪಾಯಿ ಸಾಲವನ್ನು ಹಿಂದಿರುಗಿಸದ ಮಲ್ಯ ವಿರುದ್ಧ ಭಾರತೀಯ 13 ಬ್ಯಾಂಕ್ ಗಳು ಲಂಡನ್ ಹೈ ಕೋರ್ಟ್ ನಲ್ಲಿ ಆಸ್ತಿ ಮುಟ್ಟುಗೋಲಿಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದವು.

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ಬ್ಯಾಂಕ್ ಗಳು 10 ಸಾವಿರ ಕೋಟಿ ರೂಪಾಯಿ ಗಳಷ್ಟು ಹಣವನ್ನು ವಾಪಸ್ ಪಡೆಯುವುದಕ್ಕೆ ಅರ್ಹತೆ ಹೊಂದಿವೆ. ಲಂಡನ್ ನಲ್ಲಿರುವ ಮಲ್ಯ ಆಸ್ತಿಯಲ್ಲಿ ತಮಗೆ ಬರಬೇಕಿರುವ ಸಾಲದ ಮೊತ್ತದಷ್ಟನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶ ನೀಡಿದೆ.

    ಬ್ಯಾಂಕ್ ಗಳ ಪರ ವಕೀಲರು ನ್ಯಾಯಾಲಯದ ಆದೇಶದ ಅನುಸಾರ ಭಾರತದ ಸಾಲ ವಸೂಲಾತಿ ಟ್ರಿಬ್ಯೂನಲ್ ಗೆ ಆದಷ್ಟು ಬೇಗ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸಲು ಸೂಚಿಸಬಹುದಾಗಿದೆ.

    ಉದ್ಯಮಿ ವಿಜಯ್ ಮಲ್ಯ ಸಾಲ ಪಾವತಿಸದೇ ಲಂಡನ್‍ನಲ್ಲಿ ಇದ್ದುಕೊಂಡು ತಮ್ಮ ವಿರುದ್ಧದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಖಾತೆಗಳನ್ನು ಮುಟ್ಟುಗೋಲು ಹಾಕಿದ ಪರಿಣಾಮ ಈ ಹಿಂದೆ ಕೋರ್ಟ್ ವಾರಕ್ಕೆ 5 ಸಾವಿರ ಪೌಂಡ್(ಅಂದಾಜು 4.5 ಲಕ್ಷ ರೂ.) ಖರ್ಚು ಮಾಡಲು ಅನುಮತಿ ನೀಡಿತ್ತು. ನಂತರ ಮಲ್ಯ ಪರ ವಕೀಲರು ವಾದಿಸಿ 20 ಸಾವಿರ ಪೌಂಡ್(ಅಂದಾಜು 18.2 ಲಕ್ಷ ರೂ.) ಖರ್ಚು ಮಾಡಲು ಕೋರ್ಟ್ ಅನಮತಿ ನೀಡಿತ್ತು.

     

  • ವಿಜಯ್ ಮಲ್ಯಗೆ ಮೂರನೇ ಮದುವೆ – ಗಗನಸಖಿಯನ್ನು ವರಿಸಲಿದ್ದಾರೆ ಮದ್ಯದ ದೊರೆ

    ವಿಜಯ್ ಮಲ್ಯಗೆ ಮೂರನೇ ಮದುವೆ – ಗಗನಸಖಿಯನ್ನು ವರಿಸಲಿದ್ದಾರೆ ಮದ್ಯದ ದೊರೆ

    ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮೂರನೇ ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ವಾಹಿನಿಯೊಂದು ವರದಿ ಮಾಡಿದೆ.

    62 ವರ್ಷದ ವಿಜಯ್ ಮಲ್ಯ, ಕಿಂಗ್‍ಫಿಶರ್ ನ ಮಾಜಿ ಗಗನಸಖಿ ಪಿಂಕಿ ಲಾಲ್ವಾನಿಯವರನ್ನ ಲಂಡನ್ ನಲ್ಲಿ ಮದುವೆಯಾಗಲಿದ್ದಾರೆಂದು ಕೇಳಿಬಂದಿದೆ.

    ಯಾರು ಈ ಪಿಂಕಿ ಲಾಲ್ವಾನಿ?
    2011 ರಲ್ಲಿ ವಿಜಯ್ ಮಲ್ಯ ಲಾಲ್ವಾನಿಯವರನ್ನ ತನ್ನ ಕಿಂಗ್‍ಫಿಶರ್ ಏರ್ ಲೈನ್ಸ್ ಗೆ ಗಗನಸಖಿಯಾಗಲು ಆಫರ್ ಮಾಡಿದ್ದರು. ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಾಲ್ವಾನಿ ಮಲ್ಯರ ಜೊತೆ ಸುತ್ತಾಡಲು ಶುರುಮಾಡಿದ್ದರು. ಇಬ್ಬರು ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಲಾಲ್ವಾನಿ ಮಲ್ಯ ಇಬ್ಬರು ಲಿವಿಂಗ್ ರಿಲೇಷನ್‍ಶಿಪ್ ನಲ್ಲಿ ಇದ್ದಾರೆ ಎಂದು ವರದಿಯಾಗಿದೆ.

    ವಿಜಯ ಮಲ್ಯರ ಮಾಜಿ ಪತ್ನಿ ಸಮೀರ್ ತ್ಯಾಬ್ಜಿ ಅವರು ಒಂಟಿಯಾಗಿದ್ದಾರೆ. ಇವರಿಗೆ ಮಗ ಸಿದ್ದಾರ್ಥ ಮತ್ತು ಲಿಯಾನ್ನಾ ಮತ್ತು ತಾನ್ಯಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಇಬ್ಬರಿಗೂ ಮದುವೆ ಕೂಡ ಆಗಿದೆ.

    2016 ಮತ್ತು 2017 ರಲ್ಲಿ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಯಾದ ವಿಜಯ್ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿ, ರಾಷ್ಟ್ರಿಕೃತ ಬ್ಯಾಂಕ್ ಗಳಿಗೆ ಬರೋಬ್ಬರಿ 9,000 ಕೋಟಿ ರೂ. ವಂಚನೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಮಲ್ಯ ಭಾರತವನ್ನ ತೊರೆದು ಲಂಡನ್ ನಲ್ಲಿ ವಾಸಿಸುತ್ತಿದ್ದು, ವಾರಕ್ಕೆ 16 ಲಕ್ಷ ರೂ. ಭತ್ಯೆಯನ್ನ ಪಡೆದುಕೊಂಡು ಐಷರಾಮಿ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ವಿಡಿಯೋ: ಕ್ರಿಕೆಟ್ ನೋಡಲು ಬಂದ ಮಲ್ಯಗೆ ಕಳ್ಳ… ಕಳ್ಳ… ಎಂದು ಕೂಗಿದ ಜನ

    ವಿಡಿಯೋ: ಕ್ರಿಕೆಟ್ ನೋಡಲು ಬಂದ ಮಲ್ಯಗೆ ಕಳ್ಳ… ಕಳ್ಳ… ಎಂದು ಕೂಗಿದ ಜನ

    ಲಂಡನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಬಂದ ವಿಜಯ ಮಲ್ಯರನ್ನು ಕ್ರಿಕೆಟ್ ಅಭಿಮಾನಿಗಳು ಕಳ್ಳ…. ಕಳ್ಳ…. ಎಂದು ಕರೆದಿದ್ದಾರೆ.

    ಭಾನುವಾರದಂದು ಲಂಡನ್‍ನ ಓವಲ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದ ವೇಳೆ ಗಣ್ಯರ ಪ್ರವೇಶದ್ವಾರದ ಸರ್ ಜ್ಯಾಕ್ ಹಾಬ್ಸ್ ಗೇಟ್ ಮೂಲಕ ಒಳ ಪ್ರವೇಶಿಸುತ್ತಿದ್ದಾಗ ಅಲ್ಲಿದ್ದ ಕೆಲವು ಜನರು ಚೋರ್ ಗಯಾ ಚೋರ್(ಕಳ್ಳ ಹೋಗ್ತಿದ್ದಾನೆ) ಚೋರ್… ಚೋರ್… (ಕಳ್ಳ..ಕಳ್ಳ) ಎಂದು ಕೂಗಿದ್ರು. ಮೊಬೈಲ್ ತೆಗೆದು ವಿಡಿಯೋ ಮಾಡತೊಡಗಿದ್ರು. ಆದ್ರೆ ಮಲ್ಯ ಇದ್ಯಾವುದಕ್ಕೂ ಕಿವಿಗೊಡದಂತೆ ಒಳಗೆ ಹೋದ್ರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ವಿವಿಧ ಬ್ಯಾಂಕ್‍ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದಿರುವ ಮಲ್ಯ, ಕಳೆದ ವರ್ಷ ಮಾರ್ಚ್‍ನಲ್ಲಿ ಲಂಡನ್‍ಗೆ ಹೋಗಿ ನೆಲೆಸಿದ್ದಾರೆ.

    ಇತ್ತೀಚೆಗೆ ವಿರಾಟ್ ಕೊಹ್ಲಿ ಫೌಂಡೇಷನ್ ವಿಶೇಷ ಭೋಜನ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಮಲ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಈ ಮುಜಗುರದ ಸನ್ನಿವೇಶದ ನಂತರ ಈಗ ಮತ್ತೊಂದು ಅಂತಹದ್ದೇ ಘಟನೆಯಾಗಿದೆ.

    https://www.youtube.com/watch?v=LB6Jr7B1odI

  • ವಿಚಾರಣೆಗೆ ಹಾಜರಾಗಿ: ಸುಪ್ರೀಂನಿಂದ ಲಂಡನ್‍ನಲ್ಲಿರೋ ಮಲ್ಯಗೆ ಸಮನ್ಸ್

    ವಿಚಾರಣೆಗೆ ಹಾಜರಾಗಿ: ಸುಪ್ರೀಂನಿಂದ ಲಂಡನ್‍ನಲ್ಲಿರೋ ಮಲ್ಯಗೆ ಸಮನ್ಸ್

    ನವದೆಹಲಿ: ನ್ಯಾಯಾಂಗ ನಿಂದನೆ ಹಿನ್ನಲೆಯಲ್ಲಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    9 ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ಪ್ರಕರಣದಲ್ಲಿ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ತಪ್ಪಿತಸ್ಥ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ಜುಲೈ 10ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲಂಡನ್‍ನಲ್ಲಿರೋ ಮಲ್ಯಗೆ ಸಮನ್ಸ್ ಜಾರಿ ಮಾಡಿದೆ.

    ಮಲ್ಯರನ್ನು ಲಂಡನ್‍ನಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಒಂದು ವೇಳೆ ಜುಲೈ 10 ರಂದು ವಿಚಾರಣೆಗೆ ಹಾಜರಾಗದಿದ್ದರೆ ವಿಜಯ್ ಮಲ್ಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‍ಗೆ ಅಧಿಕಾರವಿದೆ. ಮಲ್ಯಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆ ಇದೆ.

    ಮಲ್ಯರಿಂದ 9 ಸಾವಿರ ಕೋಟಿ ರೂ. ಸಾಲ ಹಿಂಪಡೆಯಲು ಯತ್ನಿಸುತ್ತಿರುವ ಬ್ಯಾಂಕ್‍ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಅರ್ಜಿಯನ್ನ ಸಲ್ಲಿಸಿತ್ತು. ಮಲ್ಯ ಡಿಯಾಜಿಯೋ ಕಂಪೆನಿಯಿಂದ ಸುಮಾರು 258 ಕೋಟಿ ರೂ.(40 ಮಿಲಿಯನ್ ಡಾಲರ್) ಪಡೆದಿದ್ದಾರೆ. ಆದ್ರೆ ಈ ಹಣದಲ್ಲಿ ಸಾಲ ತೀರಿಸುವ ಬದಲು ತಮ್ಮ ಮಕ್ಕಳ ಬ್ಯಾಂಕ್ ಖಾತೆಗೆ ವರ್ಗಾಯಿಸಿ ನ್ಯಾಯಾಲಯದ ಆದೇಶಗಳ ಉಲ್ಲಂಘನೆ ಮಾಡಿದ್ದಾರೆಂದು ಅರ್ಜಿಯಲ್ಲಿ ಆರೋಪಿಸಿತ್ತು.

    ಕಳೆದ ತಿಂಗಳು ಮಲ್ಯರನ್ನ ಲಂಡನ್‍ನಲ್ಲಿ ಬಂಧಿಸಲಾಗಿತ್ತು. ಆದ್ರೆ ಬಂಧನವಾದ ಮೂರೇ ಗಂಟೆಗಳಲ್ಲಿ ಮಲ್ಯ ಜಾಮೀನು ಪಡೆದು ಹೊರಬಂದಿದ್ರು.

  • ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು

    ಅರೆಸ್ಟ್ ಆದ ಮೂರೇ ಗಂಟೆಗಳಲ್ಲಿ ಮಲ್ಯಗೆ ಜಾಮೀನು

    ಲಂಡನ್: ಮದ್ಯ ದೊರೆ ವಿಜಯ್ ಮಲ್ಯ ಇಂದು ಬೆಳಿಗ್ಗೆ ಲಂಡನ್‍ನಲ್ಲಿ ಬಂಧನವಾದ ಮೂರೇ ಗಂಟೆಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.

    ಗಡೀಪಾರು ವಾರೆಂಟ್ ಮೇಲೆ ಲಂಡನ್‍ನ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9.30ರ ವೇಳೆಗೆ ಮಲ್ಯರನ್ನು ಬಂಧಿಸಲಾಗಿತ್ತು. ನಂತರ ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರುಪಡಿಸಲಾಗಿದ್ದು, ಮಲ್ಯಗೆ ಜಾಮೀನು ಸಿಕ್ಕಿದೆ.

    ಜಾಮೀನು ಸಿಕ್ಕ ಬಳಿಕ ಮಲ್ಯ ಟ್ವೀಟ್ ಮಾಡಿದ್ದು, ಇದು ಎಂದಿನ ಭಾರತೀಯ ಮಾಧ್ಯಮಗಳ ಹೈಪ್. ಅಂದುಕೊಂಡಂತೆ ಕೋರ್ಟ್‍ನಲ್ಲಿ ಗಡೀಪಾರು ವಿಚಾರಣೆ ಇಂದು ಆರಂಭವಾಗಿದೆ ಎಂದು ಹೇಳಿದ್ದಾರೆ.

    ಮಲ್ಯ ಬಂಧನದ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಲಂಡನ್‍ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗಡೀಪಾರು ಮಾಡ್ತಾರಾ?: ಇಂಗ್ಲೆಂಡಿನ ಮ್ಯೂಚುವಲ್ ಲೀಗಲ್ ಅಸಿಸ್ಟೆನ್ಸ್ ಟ್ರೀಟಿಯ ಪ್ರಕಾರ ಮಲ್ಯರನ್ನ ಭಾರತಕ್ಕೆ ಗಡೀಪಾರು ಮಡಲಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಭಾರತಕ್ಕೆ ಕರೆತಂದ ನಂತರ ಪ್ರವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್ ಅಡಿ ಮಲ್ಯ ವಿಚಾರಣೆ ನಡೆಯಲಿದೆ.

    ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.

  • ಕೊನೆಗೂ ವಿಜಯ್ ಮಲ್ಯ ಬಂಧನ

    ಕೊನೆಗೂ ವಿಜಯ್ ಮಲ್ಯ ಬಂಧನ

    ಲಂಡನ್: ಮದ್ಯ ದೊರೆ ವಿಜಯ್ ಮಲ್ಯಾರನ್ನ ಕೊನೆಗೂ ಲಂಡನ್ ನಲ್ಲಿ ಬಂಧಿಸಲಾಗಿದೆ.

    ಲಂಡನ್ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ 9.30ರ ವೇಳೆಗೆ ಮಲ್ಯ ಬಂಧನವಾಗಿದೆ ಎಂದು ಹೇಳಲಾಗಿದೆ. ಮಲ್ಯ ಬಂಧನದ ವಿಷಯವನ್ನ ಇಂಗ್ಲೆಂಡ್ ಸರ್ಕಾರ ಸ್ಪಷ್ಟಪಡಿಸಿದೆ.

    ಕೆಲವೇ ಕ್ಷಣಗಳಲ್ಲಿ ವೆಸ್ಟ್ ಮಿನಿಸ್ಟರ್ ಕೋರ್ಟ್‍ಗೆ ಮಲ್ಯರನ್ನ ಪೊಲೀಸರು ಕರೆದೊಯ್ಯಲಿದ್ದಾರೆ. ಮಲ್ಯ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಲಂಡನ್‍ಗೆ ತೆರಳಲಿದೆ.

    ಮಲ್ಯ ಪಾಸ್‍ಪೋರ್ಟ್ ರದ್ದು ಮಾಡಿದ್ದ ಭಾರತ, ಇಂಗ್ಲೆಂಡ್ ಸರ್ಕಾರಕ್ಕೆ ಮಲ್ಯರನ್ನು ಗಡೀಪಾರು ಮಾಡುವಂತೆ ಕೇಳಿತ್ತು. ಆದ್ರೆ ಇಂಗ್ಲೆಂಡ್‍ನಲ್ಲಿ ಪಾಸ್‍ಪೋರ್ಟ್ ಮಾನ್ಯತೆ ಕಳೆದುಕೊಂಡಿದ್ದರೂ ಕೂಡ ಆ ವ್ಯಕ್ತಿ ಅಲ್ಲೇ ನೆಲೆಸಲು ಅವಕಾಶವಿರುವುದರಿಂದ ಭಾರತದ ಗಡೀಪಾರು ಮನವಿ ಇಂಗ್ಲೆಂಡ್ ಕಾನೂನುಗಳ ಅಡಿ ಬರುವುದಿಲ್ಲ ಎಂದು ಹೇಳಿತ್ತು.

    ಕಳೆದ ವಾರ ದೆಹಲಿ ಕೋರ್ಟ್ ಫಾರಿನ್ ಎಕ್ಸ್ ಚೇಂಜ್ ರೆಗ್ಯುಲೇಷನ್ ಆ್ಯಕ್ಟ್(FERA) ಉಲ್ಲಂಘನೆ ಆರೋಪದ ಮೇಲೆ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

    ವಿಜಯ್ ಮಲ್ಯ 17 ಬ್ಯಾಂಕ್‍ಗಳ ಒಕ್ಕೂಟಕ್ಕೆ ಸುಮಾರು 9 ಸಾವಿರ ಕೋಟಿ ರೂ. ಸಾಲ ಹಿಂದಿರುಗಿಸಬೇಕಿದ್ದು, ಕಳೆದ ವರ್ಷ ಮಾರ್ಚ್ 2ರಂದು ಭಾರತ ತೊರೆದು ಲಂಡನ್‍ಗೆ ಹೋಗಿ ನೆಲೆಸಿದ್ದರು.

    ಇದನ್ನೂ ಓದಿ: ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ 

  • ವಿಜಯ್ ಮಲ್ಯಗೆ ಅರುಣ್ ಜೇಟ್ಲಿಯಿಂದ ಶಾಕ್!

    ನವದೆಹಲಿ: ಇಂದಿನ ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ಥಿಕ ಅಪರಾಧಿಗಳ ದಂಡನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಘೋಷಸಿದ್ದು, ಸಾಲ ಮಾಡಿ ಕಾನೂನು ಕಣ್ತಪ್ಪಿಸಿ ದೇಶ ಬಿಟ್ಟು ಹೋದವರ ಆಸ್ತಿ ಪಾಸ್ತಿ ಜಪ್ತಿಗೆ ಸರ್ಕಾರ ಹೊಸ ಕಾನೂನು ತರಲಿದೆ ಎಂದು ಹೇಳಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಗೆ ದೊಡ್ಡ ಶಾಕ್ ಸಿಕ್ಕಿದೆ.

    ವಿದೇಶದಲ್ಲಿರುವ ಮಲ್ಯರಿಂದ ಸಾಲ ಹಿಂಪಡೆಯಲು ಬ್ಯಾಂಕ್‍ಗಳು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಕಾನೂನಿನ ಕಣ್ತಪ್ಪಿಸಿ ಕೆಲವರು ದೇಶ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಹೀಗಾಗಿ ಸರ್ಕಾರ ಇಂತಹ ವ್ಯಕ್ತಿಗಳ ಆಸ್ತಿ ಜಪ್ತಿ ಮಾಡಲು ಕಾನೂನು ರೂಪಿಸಲಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡನೆ ವೇಳೆ ಹೇಳಿದ್ರು.

    ಉದ್ಯಮಿ ವಿಜಯ ಮಲ್ಯ ಕಳೆದ ವರ್ಷ ಮಾರ್ಚ್‍ನಲ್ಲಿ ವಿದೇಶಕ್ಕೆ ಹಾರಿದ್ರು. ಹಲವು ಬ್ಯಾಂಕ್‍ಗಳು ಮಲ್ಯಾರಿಂದ 9 ಸಾವಿರ ಕೋಟಿ ರೂ. ಆಸ್ತಿ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮಲ್ಯರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಲ್ಯ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿದೆ.