ಮುಂಬೈ: ಕನ್ನಡದ ಕೆಲವು ಸಾಧಕರ ಬಗ್ಗೆ ಪರಭಾಷೆಯವರು ಈಗಾಗಲೇ ಸಿನಿಮಾ ಮಾಡಿದ್ದಾರೆ. ಈಗಲೂ ಮಾಡುತ್ತಲೇ ಇದ್ದಾರೆ. ಆದರೆ ಈಗ ಬಾಲಿವುಡ್‍ನಲ್ಲಿ ಕರ್ನಾಟಕದ ಸಾಧಕಿಯ ಸಿನಿಮಾವೊಂದು ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಹೌದು, ಮಾನವ ಕಂಪ್ಯೂಟರ್ ಎಂದೇ ಖ್ಯಾತಿ ಗಳಿಸಿರುವ ಹೆಸರಾಂತ ಗಣಿತಜ್ಞೆ ಶಕುಂತಲಾ ದೇವಿ ಬಗ್ಗೆ ಬಿಟೌನ್‍ನಲ್ಲಿ ಸಿನಿಮಾ ತಯಾರಾಗಿದೆ. ‘ಶಕುಂತಲಾ ದೇವಿ’ ಹೆಸರಿನಲ್ಲಿಯೇ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ನಟಿ ವಿದ್ಯಾಬಾಲನ್ ಶಕುಂತಲಾ ದೇವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನು ಮೆನನ್ ಆ್ಯಕ್ಷನ್ ಕಟ್ ಹೇಳಿದ್ದು, ವಿಕ್ರಂ ಮಲ್ಹೋತ್ರಾ ನಿರ್ಮಾಣ ಮಾಡಿದ್ದಾರೆ. ಹಾಗೆಯೇ ಜಿಶು ಸೇನ್‍ಗುಪ್ತಾ ಶಕುಂತಲಾ ದೇವಿ ಅವರ ಪತಿ ಪಾತ್ರದಲ್ಲಿ ನಟಿಸಿದ್ದಾರೆ.

ಒಂದು ವೇಳೆ ಕೊರೊನಾ ವೈರಸ್ ಭಾರತಕ್ಕೆ ವಕ್ಕರಿಸದೇ ಲಾಕ್‍ಡೌನ್ ಮಾಡಿಲ್ಲವಾಗಿದ್ದರೆ ಈ ವೇಳೆಗೆ ‘ಶಕುಂತಲಾ ದೇವಿ’ ಸಿನಿಮಾ ತೆರೆಕಂಡು ಸಿನಿಪ್ರಿಯರ ಮನ ಗೆಲ್ಲುತ್ತಿತ್ತು. ಆದರೆ ಸದ್ಯ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಚಿತ್ರಮಂದಿರಗಳು ಮುಚ್ಚಿದ್ದು, ಸಿನಿಮಾ ತಂಡ ಚಿತ್ರವನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅಮೆಜಾನ್ ಪ್ರೈಂ ನಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದು, ಸ್ವತಃ ವಿದ್ಯಾ ಬಾಲನ್ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಶಕುಂತಲಾ ದೇವಿ 1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡಿರುವ ಶಕುಂತಲಾ ದೇವಿಗೆ ಗಣಿತ ಎಂದರೆ ಅಚ್ಚುಮೆಚ್ಚು. ಹೀಗಾಗಿ ಗಣಿತದ ಮೇಲೆ ಅವರಿಗೆ ತುಂಬ ಆಸಕ್ತಿ ಹಾಗೂ ಹಿಡಿತವಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಇತರೆ ಮಕ್ಕಳಿಗೆ ಕಬ್ಬಿಣದ ಕಡಲೆಯಂತಿದ್ದ ಕಷ್ಟವಾದ ಲೆಕ್ಕಗಳನ್ನು ಸಲೀಸಾಗಿ ಬಿಡಿಸುತ್ತಿದ್ದರು. ಇವರು ವರ್ಲ್ಡ್ ರೆಕಾರ್ಡ್ ಕೂಡ ಮಾಡಿದ್ದು, ಹಾಳೆ, ಕ್ಯಾಲ್ಕುಲೇಟರ್ ಸಹಾಯವಿಲ್ಲದೆ ಮನಸ್ಸಿನಲ್ಲಿಯೇ ಗಣಿತದ ಲೆಕ್ಕಗಳನ್ನು ಬಿಡಿಸುವ ಮಟ್ಟಿಗೆ ಅದರ ಮೇಲೆ ಶಕುಂತಲಾ ದೇವಿ ಹಿಡಿತ ಇಟ್ಟುಕೊಂಡಿದ್ದಾರೆ.

ಕೊರೊನಾ ಹಾವಾಳಿಯಿಂದ ಚಿತ್ರಮಂದಿರಗಳು ಮುಚ್ಚಿರುವ ಹಿನ್ನೆಲೆ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳನ್ನು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡಗಳು ಮುಂದಾಗಿವೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ‘ಗುಲಾಬೋ ಸಿತಾಬೋ’ ಸಿನಿಮಾವವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

ಈ ಹಿಂದೆ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್‍ನ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡುವುದಾಗಿ ಪುನೀತ್ ರಾಜ್‍ಕುಮಾರ್ ತಿಳಿಸಿದ್ದರು. ಈ ಮೂಲಕ ಕನ್ನಡ ನಿರ್ಮಾಕಪರು ಕೂಡ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.

ರಘು ಸಮರ್ಥ ಚಿತ್ರಕಥೆ ಬರೆದು ನಿರ್ದೇಶಿಸಿದ ‘ಲಾ’ ಸಿನಿಮಾ ಜೂನ್ 26ರಂದು ಅಮೆಜಾನ್ ಪ್ರೈಮ್ ಮೂಲಕ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಪನ್ನಗಾಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಚಿತ್ರವು ಅಮೆಜಾನ್ ಪ್ರೈಮ್‍ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಮಾಹಿತಿ ನೀಡಿತ್ತು.