Tag: Vidhanasoudha

  • 1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ, ಅನ್ನಭಾಗ್ಯ ಅಕ್ಕಿ ಯಥಾಸ್ಥಿತಿ -ತೈಲ, ವಿದ್ಯುತ್ ಸೆಸ್ ಇಳಿಕೆ ಇಲ್ಲ

    1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ, ಅನ್ನಭಾಗ್ಯ ಅಕ್ಕಿ ಯಥಾಸ್ಥಿತಿ -ತೈಲ, ವಿದ್ಯುತ್ ಸೆಸ್ ಇಳಿಕೆ ಇಲ್ಲ

    ಬೆಂಗಳೂರು: ಬಜೆಟ್ ಹಾಗೂ ಸಾಲಮನ್ನಾ ವಿಚಾರವಾಗಿ ದೋಸ್ತಿಗಳು, ಸ್ವಪಕ್ಷೀಯರು, ಪ್ರತಿಪಕ್ಷ ಹಾಗೂ ರೈತಾಪಿ ವರ್ಗದ ಮನವಿ ಮತ್ತು ಒತ್ತಡಕ್ಕೆ ಸಿಎಂ ಕುಮಾರಸ್ವಾಮಿ ಕೊನೆಗೂ ಮಣಿದಿದ್ದು ಅನ್ನ ಭಾಗ್ಯದ ಅಡಿಯಲ್ಲಿ 7 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದ್ದಾರೆ.

    ಸಂಪೂರ್ಣ ಸಾಲಮನ್ನಾ ಆಗದಿದ್ದರೂ ಇದೀಗ ಸಹಕಾರಿ ಸಂಘಗಳಲ್ಲಿನ 1 ಲಕ್ಷ ರೂಪಾಯಿವರೆಗಿನ `ಚಾಲ್ತಿ ಸಾಲ’ವನ್ನು ಮನ್ನಾ ಮಾಡೋದಾಗಿ ಘೋಷಿಸಿದ್ದಾರೆ. ಈ ಮೂಲಕ, ರೈತರ ಹೊರೆ ಇಳಿಸಿದ್ದಾರೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

    ಸಾಲಮನ್ನಾಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಬ್ಯಾಂಕುಗಳ ಅಧ್ಯಕ್ಷರು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಳಗಾವಿ ವಿಭಾಗದ 9,500 ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ಬೆಂಗಳೂರು ವಿಭಾಗಕ್ಕೆ 6,300 ಕೋಟಿ ಸಾಲಮನ್ನಾ, ಮೈಸೂರು ವಿಭಾಗದ 6,760 ಕೋಟಿ ರೂ ಸಾಲಮನ್ನಾ, ಕಲಬುರ್ಗಿ 5,563 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

    ಬೆಳೆ ಸಾಲ ಇರುವುದು 48 ಸಾವಿರದ 90 ಕೋಟಿ. ಅದಕ್ಕಾಗಿ ಸುಸ್ತಿ ಸಾಲವನ್ನು ಮನ್ನಾ ಮಾಡಿದ್ದೇನೆ. ಎಲ್ಲಾ ಖಾಸಗಿ ಬ್ಯಾಂಕುಗಳಲ್ಲಿ ರೈತರ 41 ಸಾವಿರ ಕೋಟಿ ಸಾಲವಿದೆ. ಒಟ್ಟು 21,000 ಕೋಟಿ ರೂಪಾಯಿ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದಿಂದ 4 ವರ್ಷಗಳಲ್ಲಿ ಕರ್ನಾಟಕಕ್ಕೆ ಹಣ ಬಂದಿಲ್ಲ. ಬೆಂಬಲ ಬೆಲೆಯಡಿ ಕರ್ನಾಟಕಕ್ಕೆ ಹಣ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

    ರೈತರ 43 ಲಕ್ಷದ 56 ಸಾವಿರ ಖಾತೆಗಳಿವೆ. ಎಲ್ಲಾ ರೈತರ ಬೆಳೆಸಾಲ 48 ಸಾವಿರ ಕೋಟಿ. ಸುಸ್ತಿ ಸಾಲಮನ್ನಾದ ಘೋಷಣೆ ಮಾಡಿದ್ದೇನೆ. ಸುಸ್ತಿ ಸಾಲಕ್ಕೆ 22,900 ಕೋಟಿ ರೂಪಾಯಿ, ಪ್ರೋತ್ಸಾಹ ಧನ ಸೇರಿ 29 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ತಿಳಿಸಿದರು.

    ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡ ಅವರು, ಯಡಿಯೂರಪ್ಪ ಸಾಲಮನ್ನಾ ಮಾಡಲು ವ್ಯಾಟ್ ಏರಿಸಿದ್ರು. ಜಿಎಸ್‍ಟಿ ಬಂದ್ಮೇಲೆ ರಾಜ್ಯ ತೆರಿಗೆ ಸಂಗ್ರಹಕ್ಕೆ ಆದಾಯ ಇಲ್ಲದೆ ಸೆಸ್ ಏರಿಕೆ ಮಾಡಿದ್ದೇವೆ. ಇದೇನು ದೊಡ್ಡ ಅಪರಾಧವಲ್ಲವೆಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

    ಬಜೆಟ್ ವಿಚಾರದ ಚರ್ಚೆಗೂ ಮುನ್ನ ಮಾತನಾಡಿದ ಸಿಎಂ ಅವರು ನಮ್ಮ ಬಜೆಟ್ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು, ಇದು ದೊಡ್ಡ ಮಟ್ಟದ ಟೀಕೆಗಳ ಬಜೆಟ್, ಅಪ್ಪ ಮಕ್ಕಳ ಬಜೆಟ್, ಅಣ್ಣತಮ್ಮಂದಿರ ಬಜೆಟ್ ಎಂದು ಪ್ರತಿಪಕ್ಷದವರು ಟೀಕೆ ಮಾಡಿದ್ದೀರಿ, ಅಲ್ಲದೇ ಈ ಬಜೆಟ್ ಅನ್ನು ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಬಜೆಟ್ ಅಂತಾಲೂ ಟೀಕೆ ಮಾಡಿದ್ದೀರ ಈ ಎಲ್ಲಾ ಟೀಕೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ ಬಜೆಟ್ ಬಗ್ಗೆ ಏನೇ ಟೀಕೆ ಬಂದರೂ ನಮ್ಮದು ರೈತ ಪರ ಸರ್ಕಾರ ಅಂತ ಟೀಕಾಕಾರರ ಬಾಯಿ ಮುಚ್ಚಿಸೋ ಯತ್ನ ಮಾಡಿದ್ರು.

    ಸಿಎಂ ಉತ್ತರಕ್ಕೆ ತೃಪ್ತಿಯಾಗದ ಬಿಜೆಪಿ ನಾಯಕರು ಮಧ್ಯೆ ಮಧ್ಯೆ ತಗಾದೆ ಪ್ರಶ್ನಿಸುತ್ತಿದ್ದರು. ಕೊನೆಗೆ ಸಭಾತ್ಯಾಗ ಮಾಡಿದರು. ಇವತ್ತಿಗೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನ ನಾಳೆ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ.

  • ಸಿಎಂ ಸರ್.. ಸಿಎಂ ಸರ್ – ಮಕ್ಕಳ ಕೂಗನ್ನು ಕೇಳಿ ಕಾರಿನಿಂದ ಇಳಿದು ಮನವಿ ಸ್ವೀಕರಿಸಿದ ಎಚ್‍ಡಿಕೆ

    ಸಿಎಂ ಸರ್.. ಸಿಎಂ ಸರ್ – ಮಕ್ಕಳ ಕೂಗನ್ನು ಕೇಳಿ ಕಾರಿನಿಂದ ಇಳಿದು ಮನವಿ ಸ್ವೀಕರಿಸಿದ ಎಚ್‍ಡಿಕೆ

    ಬೆಂಗಳೂರು: ಮಕ್ಕಳ ಕೂಗನ್ನು ಮನ್ನಿಸಿ ಸ್ವತಃ ಸಿಎಂ ಕುಮಾರಸ್ವಾಮಿಯವರು ಕಾರಿನಿಂದ ಇಳಿದು ಬಂದು ಅವರ ಮನವಿಯನ್ನು ಸ್ವೀಕರಿಸಿದ್ದಾರೆ.

    ಚಿತ್ರದುರ್ಗ ತಾಲೂಕಿನ ಆಲಘಟ್ಟದಿಂದ ಭರಮಸಾಗರಕ್ಕೆ ಸ್ಥಳಾಂತರಿಸಿದ್ದನ್ನು ವಿರೋಧಿಸಿ ಪ್ರೌಢಶಾಲೆಯ ಮಕ್ಕಳು ಹಾಗೂ ಕೆಲ ಪೋಷಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಬೆಂಗಳೂಗೆ ಆಗಮಿಸಿದ್ದರು. ಮಕ್ಕಳು ಹಾಗೂ ಪೋಷಕರು ಬೆಳಗ್ಗೆ 6 ಗಂಟೆಯಿಂದ ಸಿಎಂ ಜೆಪಿ ನಗರದ ನಿವಾಸದ ಬಳಿ ಮನವಿಯನ್ನು ನೀಡಲು ಕಾಯುತ್ತಿದ್ದರು. ಆದರೆ ಸಿಎಂ ಮಾತ್ರ ಇವರಿಗೆ ಲಭ್ಯವಾಗಿರಲಿಲ್ಲ.

    ಬೆಳಗ್ಗೆ ಸಿಎಂ ಕುಮಾರಸ್ವಾಮಿ ಮಕ್ಕಳನ್ನು ಲಕ್ಷಿಸದೇ ಕಾರಿನಲ್ಲಿ ಕುಳಿತು ವಿಧಾನಸೌಧಕ್ಕೆ ಹೊರಟುಬಿಟ್ಟರು. ಆಗ ಮಕ್ಕಳು ಸಿಎಂ ಸರ್… ಸಿಎಂ ಸರ್… ಎಂದು ಕೂಗಿದರು. ಮಕ್ಕಳ ಕೂಗನ್ನು ಕೇಳಿದ ಸಿಎಂ ಕುಮಾರಸ್ವಾಮಿ ಕಾರಿನಿಂದ ಇಳಿದು ಮಕ್ಕಳ ಮನವಿಯನ್ನು ಸ್ವೀಕರಿಸಿದರು. ಮನವಿಗೆ ಪ್ರತಿಕ್ರಯಿಸಿದ ಸಿಎಂ ನನಗೆ ಒಂದು ವಾರ ಸಮಯ ಕೊಡಿ ಎಂದು ಕೇಳಿಕೊಂಡರು.

    ಕೂಡಲೇ ಅಧಿಕಾರಿಗಳ ಕಡೆ ತಿರುಗಿ ಇನ್ನೂ ಮಕ್ಕಳ ಸಮಸ್ಯೆ ಆಲಿಸಿಲ್ಲವೇ? ಸ್ವಲ್ಪ ಅರ್ಥಮಾಡಿಕೊಂಡು ಕೆಲಸ ಮಾಡಿ. ನಾನು ಜನರನ್ನೇ ನೋಡುತ್ತ ಕುಳಿತರೆ ಆಡಳಿತ ನಡೆಸುವುದು ಹೇಗೆ? ನಾನು ಇದನ್ನೇ ಮಾಡುತ್ತ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    https://www.youtube.com/watch?v=THa3TgBIWPs

  • ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

    ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

    ಬೆಂಗಳೂರು: ಅಧಿಕಾರಕ್ಕೇರಿದ ಒಂದೇ ತಿಂಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ನಡುವಿನ ಮುಸುಕಿನ ಗುದ್ದಾಟ ತೀವ್ರಗೊಂಡಿದ್ದು ರೈತರ ಸಾಲಮನ್ನಾ ವಿಚಾರವಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಧಾನ ಹೊರಹಾಕಿದರು.

    ನನಗೆ ಸಮ್ಮಿಶ್ರ ಸರ್ಕಾರವನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿದೆ. ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಜನರ ಬಳಿ ಹೇಳಿಕೊಳ್ಳವ ಪರಿಸ್ಥಿತಿಯಲ್ಲಿಲ್ಲ. ಬೇರೆಯವರ ಹಾಗೆ ದುರಹಂಕಾರದಿಂದ ಕೆಲಸ ಮಾಡಿಸಿಕೊಳ್ಳುವ ಸ್ವಭಾವ ನನ್ನದಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಕುಟುಂಬದ ರೀತಿಯಲ್ಲಿ ಅಧಿಕಾರ ನಡೆಸುವ ವ್ಯಕ್ತಿತ್ವ ಹೊಂದಿದ್ದೇನೆ. ನಮ್ಮ ಸರ್ಕಾರ ಎಷ್ಟು ದಿನ ಇರುತ್ತೋ ಅನ್ನುವುದು ಮುಖ್ಯವಲ್ಲ, ನಾನು ನನ್ನ ಜನತೆಗೆ ಏನು ಕೊಡುತ್ತೇನೆ ಅನ್ನೋದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಸಾಲಮನ್ನಾ, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸು: ಆಪ್ತರ ಜೊತೆ ಮಾತನಾಡಿದ್ದು ಏನು? ಆಡಿಯೋ ಕೇಳಿ

    ಸಾಲ ಮನ್ನಾಕ್ಕೆ ಒಪ್ಪಿಕೊಳ್ಳಬೇಡಿ ಅಂತ ಹಣಕಾಸು ಇಲಾಖೆ ಅಧಿಕಾರಿಗಳೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಮಾತುಗಳನ್ನು ಹೇಳುವುದನ್ನು ಮೊದಲು ಬಿಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಸಾಲ ಮನ್ನಾದಿಂದ ನನಗೆ ಯಾವ ಕಮಿಷನ್ ಬರಲ್ಲ, ಕಮಿಷನ್‍ಗಾಗಿ ಕೆಲಸ ಮಾಡುವಂತಹ ವ್ಯಕ್ತಿ ನಾನಲ್ಲ ಹಾಗೂ ಈ ಸರ್ಕಾರದಲ್ಲಿ ಯಾವ ಅಧಿಕಾರಿಗಳಿಗೆ ಎಷ್ಟು ಕಮಿಷನ್ ಹೋಗುತ್ತೆ ಅಂತ ನನಗೆ ಗೊತ್ತು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

  • 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    ಬೆಂಗಳೂರು: ಕರ್ನಾಟಕ ಪ್ರವಾಸಕ್ಕೂ ಹಿಂದಿನ ದಿನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ರೆಡ್ಡಿ, ಯಡಿಯೂರಪ್ಪ ಬಾಣ ಪ್ರಯೋಗಿಸಿದ್ದಾರೆ.

    ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕರ್ನಾಟಕವನ್ನು ಲೂಟಿ ಮಾಡಿದ್ದ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರನ್ನು ನಮ್ಮ ಸರ್ಕಾರ ಶಿಕ್ಷಿಸಿತ್ತು. ಆದ್ರೆ ಮೋದಿ, ಈಗ 8 ಮಂದಿಯನ್ನು ಜೈಲಿನಿಂದ ನೇರವಾಗಿ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ. ಇದು ಪ್ರಾಮಾಣಿಕ ಕನ್ನಡಿಗರು ಮತ್ತು ಬಸವಣ್ಣನವರ ಸಿದ್ಧಾಂತಕ್ಕೆ ಮಾಡಲಾದ ಅವಮಾನ ಅಂತ ಟ್ವೀಟಿಸಿದ್ದಾರೆ.

    ನಿನ್ನೆಯಷ್ಟೇ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಲೇವಡಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ರಾಹುಲ್ ಸವಾಲನ್ನು ಎದುರಿಸಲು ಮೋದಿಗೆ ಧೈರ್ಯವಿಲ್ಲ ಅಂತ ಹೇಳಿದ್ದರು.

  • ವಿಧಾನಸೌಧದಲ್ಲೇ ಸಿಬ್ಬಂದಿಗೆ ಹೃದಯಾಘಾತ- ಆಸ್ಪತ್ರೆಗೆ ಸಾಗಿಸಲು ಪರದಾಟ

    ವಿಧಾನಸೌಧದಲ್ಲೇ ಸಿಬ್ಬಂದಿಗೆ ಹೃದಯಾಘಾತ- ಆಸ್ಪತ್ರೆಗೆ ಸಾಗಿಸಲು ಪರದಾಟ

    ಬೆಂಗಳೂರು: ಸಿಬ್ಬಂದಿಗೆ ವಿಧಾನಸೌಧದಲ್ಲೇ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸಲು ಅಲ್ಲಿನ ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.

    ಸಚಿವಾಲಯ ಸಿಬ್ಬಂದಿ ಅಮ್ಜದ್ ಪಾಶಾ ಅವರು ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದ ವೇಳೆ ವಿಧಾನ ಸೌಧದ ಒಳಗಡೆಯೇ ಅಸ್ವಸ್ಥರಾಗಿ ಬಿದ್ದಿದ್ದಾರೆ. ಆದ್ರೆ ಆ ಕೂಡಲೇ ಅವರಿಗೆ ತುರ್ತು ಚಿಕಿತ್ಸಾ ಸೌಲಭ್ಯವಿಲ್ಲದೇ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.

    ಹೃದಯಾಘಾತ ಸಂಭವಿಸಿ ಪಾಶಾ ಬಿದ್ದಿದ್ದರೂ ಒಂದೆಡೆ ಸ್ಟ್ರೆಚರ್ ವ್ಯವಸ್ಥೆಯೂ ಇರಲಿಲ್ಲ. ಇನ್ನೊಂದೆಡೆ ಆಂಬುಲೆನ್ಸ್ ಕೂಡ ತಡವಾಗಿ ಬಂದಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಕಚೇರಿ ಕುರ್ಚಿಯ ಮೂಲಕವೇ ಅವರನ್ನು ಸಚಿವಾಲಯ ಕಚೇರಿಯಿಂದ ಹೊರಗಡೆ ಕರೆತಂದಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

    ಸದ್ಯ ಪಾಶಾ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದು ತಿಳಿದುಬಂದಿದೆ.

  • ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ತಲೆಗೆ ಹೇರ್ ಡೈ ಹಾಕ್ಕೊಂಡು ಬಾ, ಗೋವಾಗೆ ಹೋಗಿ ಮರಳಲ್ಲಿ ಉರುಳಾಡೋಣ ಎಂದು ಮಹಿಳಾ ಅಧಿಕಾರಿಗೆ ಕಿರುಕುಳ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರು ಜೀವನ ನಡೆಸಲು ಕಷ್ಟವಿದೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಇದೀಗ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಗೆ ಅಲ್ಲಿನ ಅಧೀನ ಕಾರ್ಯದರ್ಶಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.

    ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ತನ್ನ ಮೇಲಿನ ಕಿರುಕುಳ ಬಗ್ಗೆ ಮಹಿಳಾ ಅಧಿಕಾರಿ ಇದೀಗ ಹಿರಿಯ ಅಧಿಕಾರಿ, ಸ್ಪೀಕರ್ ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಏನಿದು ಕಿರುಕುಳ?: ನಾನು ಎಲ್ಲರಿಗಿಂತ ನಿನ್ನನ್ನೇ ಇಷ್ಟಪಡೋದು. ನಾವೆಲ್ಲ ಹೋಗಿ ಗೋವಾಕ್ಕೆ ಹೋಗಿ ಮರಳಿನಲ್ಲಿ ಉರುಳಾಡೋಣ. ನೀನು ತಲೆಗೆ ಹೇರ್ ಡೈ ಮಾಡಿಕೊಂಡು ಬಾ. ಸ್ಮಾರ್ಟ್ ಆಗಿ ಬಾ ನನಗೆ ಎನರ್ಜಿ ಬರಬೇಕು. ನಿನ್ನ ಮಗಳಿಗೆ ಮದುವೆ ಯಾಕೆ ಮಾಡುತ್ತೀಯಾ. ನಿನ್ನ ಬಾಳು ಹಾಳಾದ ಹಾಗೆ ಆಗುತ್ತೆ. ಅವಳಿಗೆ ಮದುವೆ ಮಾಡಬೇಡ. ನೀನು ಎರಡನೇ ಮದುವೆ ಯಾಕೆ ಮಾಡಿಕೊಂಡೆ. 10 ವರ್ಷದ ಹಿಂದೆ ನನಗೆ ಗೊತ್ತಿದ್ದರೆ ನಾನು ನಿನ್ನನ್ನು ಹಾರಿಸಿಕೊಂಡು ಹೋಗುತ್ತಿದ್ದೆ. ನೀನು ಚೆನ್ನಾಗಿದ್ದೀಯ ಅಂತ ನಿನಗೆ ಕೊಬ್ಬಾ. ನಾನು ಹತ್ತು ವರ್ಷ ಇರುತ್ತೀನಿ. ಈ ಹತ್ತು ವರ್ಷದಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದೆಲ್ಲಾ ಕಾರ್ಯದರ್ಶಿ ಮೂರ್ತಿ ಕಿರುಕುಳ ನೀಡಿದ್ದಾನೆ ಅಂತ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

    ಈ ಕುರಿತು ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಂತೆ. ಆ ಬಳಿಕ ಮಹಿಳಾ ಅಧಿಕಾರಿ ಕಾನೂನು ಸಚಿವ ಜಯಚಂದ್ರರಿಗೂ ಈ ಕುರಿತು ನೀಡಿದ್ದರಂತೆ. ಈ ವೇಳೆ ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಆದ್ರೆ ಸಚಿವರ ಅವರ ಮಾತಿಗೆ ಕ್ಯಾರೆ ಎನ್ನದ ಆತ ತನ್ನ ಚಾಳಿ ಮುಂದುವರೆಸಿದ್ದಾನೆ. ಇದರಿಂದ ನೊಂದ ಮಹಿಳಾ ಅಧಿಕಾರಿ ನೇರವಾಗಿಯೇ ಜಯಚಂದ್ರಗೆ ಪತ್ರದ ಮುಖಾಂತರ ದೂರು ನೀಡಿದ್ದಾರೆ. ದೂರಿನಲ್ಲಿ ತಮ್ಮ ಮೇಲಿನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕಾರ್ಯದರ್ಶಿ ಮೂರ್ತಿಯ ಅಕ್ರಮದ ಬಗ್ಗೆ ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರಿಸಲಾಗಿತ್ತು. ಈಗಾಗಲೇ ಈತನ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದನು. ಮೂರ್ತಿ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್ ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಅಂತ ಆರೋಪ ವ್ಯಕ್ತವಾಗಿದೆ.

    ಅಲ್ಲದೇ ಈ ಹಿಂದೆ ಈತನ ಆಡಳಿತಕ್ಕೆ ಬೇಸೆತ್ತು ಮಹಿಳಾ ಅಧಿಕಾರಿಗಳು ವಿಧಾನಸೌಧದಲ್ಲಿ ಪ್ರತಿಭಟನೆ ಕೂಡ ನಡೆಸಿದ್ರು. ಆ ಸಂದರ್ಭದಲ್ಲೂ ಕೂಡ ಎಚ್ಚೆತ್ತುಕೊಳ್ಳದ ಸ್ಪೀಕರ್ ಮೂರ್ತಿಯ ಮೇಲೆ ಅನುಕಂಪ ತೋರಿಸಿ ಮಹಿಳಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು. ಈತನ ಬದಲಾವಣೆಗೆ ಮುಖ್ಯಮಂತ್ರಿ ಕೂಡ ಶಿಫಾರಸ್ಸು ಮಾಡಿದ್ರು. ಆದ್ರೆ ದಲಿತ ಸಂಘಟನೆಗಳನ್ನು ಮುಖ್ಯಮಂತ್ರಿಗಳ ಮನೆಗೆ ಕಳುಹಿಸಿ ಬದಲಾಯಿಸದಂತೆ ಒತ್ತಡ ಹಾಕಿಸಿದ್ದ ಎಂದು ತಿಳಿದುಬಂದಿದೆ.

  • ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಜಾತಿಗಣತಿ, ಸದಾಶಿವ ವರದಿ ಜಾರಿಯಾಗುತ್ತಾ? – ಸಿಎಂ ನೇತೃತ್ವದಲ್ಲಿಂದು ಶಾಸಕಾಂಗ ಸಭೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

    ದಲಿತ ಎಡಗೈ ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸ್ಸು ಮಾಡಲಾಗಿರುವ ಸದಾಶಿವ ಅವರ ವರದಿ ಜಾರಿ ವಿಚಾರ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ನ ಎಡಗೈ ಸಮುದಾಯದ ಶಾಸಕರು ಸದಾಶಿವ ಆಯೋಗದ ವರದಿ ಜಾರಿಯಾದರೆ ರಾಜಕೀಯವಾಗಿ ಲಾಭವಾಗುತ್ತೆ ಅನ್ನೋ ಒತ್ತಡ ತರುತ್ತಿದ್ದರು. ಆದ್ದರಿಂದ ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.

    ಸಾಮಾಜಿಕ ಆರ್ಥಿಕ ಗಣತಿ ಮತ್ತು ಜಾತಿ ಜನಗಣತಿ ವರದಿ ಬಿಡುಗಡೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇದರ ಲಾಭ ನಷ್ಟಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಆಗುವುದರಿಂದ ಆಗುವ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಎರಡು ವಿಚಾರದಲ್ಲಿ ಶಾಸಕರು ವ್ಯಕ್ತಪಡಿಸುವ ಅಭಿಪ್ರಾಯದ ಬಳಿಕ ಮುಂದಿನ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಳ್ಳಲಿದ್ದಾರೆ. ಎರಡು ವರದಿಗಳ ಜಾರಿ ಹಿಂದೆ ದಲಿತ ಪಾಲಿಟಿಕ್ಸ್ ನ ಲಾಭ ನಷ್ಟದ ಲೆಕ್ಜಾಚಾರವಿದೆ ಎನ್ನುವುದು ಸ್ಪಷ್ಟವಾಗಿದೆ.

    ಇನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ರಮೇಶ್ ಕುಮಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸಹಜವಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿ ಆಗದಿದ್ದರೆ ತಾವು ರಾಜೀನಾಮೆಗೂ ಸಿದ್ಧ ಎಂದು ರಮೇಶ್ ಕುಮಾರ್ ಈಗಾಗಲೇ ಸಿಎಂಗೆ ತಿಳಿಸಿದ್ದಾರೆ.

    ಮೌಢ್ಯ ಪ್ರತಿಬಂಧಕ ಕಾಯ್ದೆ ಬಗ್ಗೆಯೂ ಚರ್ಚೆ ನಡೆಯಲಿದೆ. ಸದನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದ್ದು, ಚುನಾವಣೆ ಸಮೀಪ ಬರುತ್ತಿದ್ದಂತೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವಂತೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡುವ ಸಾಧ್ಯತೆ ಇದೆ.

  • ಕರುನಾಡ ಶಕ್ತಿಕೇಂದ್ರ ವಿಧಾನಸೌಧಕ್ಕೆ ವಜ್ರ ಮಹೋತ್ಸವ-ಇವತ್ತು ಏನೇನು ನಡೆಯಲಿದೆ?

    ಕರುನಾಡ ಶಕ್ತಿಕೇಂದ್ರ ವಿಧಾನಸೌಧಕ್ಕೆ ವಜ್ರ ಮಹೋತ್ಸವ-ಇವತ್ತು ಏನೇನು ನಡೆಯಲಿದೆ?

    ಬೆಂಗಳೂರು: ಹೊನ್ನಚರಿತ್ರೆಯ ಸಾರುವ ಕರುನಾಡ ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60 ವರ್ಷ. 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಇವತ್ತು ವಜ್ರ ಮಹೋತ್ಸವ ನಡೆಯುತಿದೆ. ಇದಕ್ಕಾಗಿ ವಿಧಾನಸೌಧ ಅಲಂಕಾರಗೊಂಡಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ಸಾಕ್ಷಿಯಾಗಲಿದೆ.

    ವಿಧಾನಸಭಾ ಇತಿಹಾಸದಲ್ಲೇ ಇದು ಮೂರನೇ ಬಾರಿ ರಾಷ್ಟ್ರಪತಿಗಳು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಇನ್ನು ಈ ಸಾರ್ಥಕ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳನ್ನ ಸ್ಮರಿಸಲಾಗುತ್ತದೆ. ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.

    ಶಾಸಕರು, ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಸುಮಾರು 600 ಮಂದಿಗೆ ಆಹ್ವಾನ ನೀಡಲಾಗಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಮೊದಲಿಗೆ 27 ಕೋಟಿ ಖರ್ಚು, ಜನಪ್ರತಿನಿಧಿಗಳು, ಸಿಬ್ಬಂದಿಗೆ ಚಿನ್ನದ ಬಿಸ್ಕತ್ ಕೊಡುವ ವಿಚಾರವಾಗಿ ಭಾರೀ ವಿವಾದಕ್ಕೆ ಗ್ರಾಸವಾಗಿತ್ತು. ನಂತರ, 10 ಕೋಟಿ ಖರ್ಚಿನಲ್ಲಿ ಈಗ ಒಂದು ದಿನದ ಕಾರ್ಯಕ್ರಮ ಇವತ್ತು ನಡೆಯಲಿದೆ.

    ವಿಧಾನಸೌಧದಕ್ಕೆ ವಿಶೇಷ ಭದ್ರತೆಯನ್ನ ಏರ್ಪಡಿಸಲಾಗಿದ್ದು, ವಜ್ರಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವೆಂಕಟವರ್ದನ್ ಅವರ ತಂಡ ನಿರ್ವಹಿಸುತ್ತಿದೆ. ಅವರ ಡಿಎನ್‍ಎ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ನಿರ್ವಹಿಸುತ್ತಿದೆ. ಅವರ ಡಿಎನ್‍ಎ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ನಿರ್ವಹಿಸುತ್ತಿದೆ. ಈ ಮಧ್ಯೆ ಇವತ್ತು ಮಧ್ಯಾಹ್ನ ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ ಕರೆದಿದಿದ್ದಾರೆ.

    ವಜ್ರ ಮಹೋತ್ಸವದಲ್ಲಿ ಇವತ್ತು ಏನೇನು..?

    * ಬೆಳಗ್ಗೆ 11 ಗಂಟೆ –   ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಕೋವಿಂದ್ ಭಾಷಣ
    * ಮಧ್ಯಾಹ್ನ 12.00 – ವಿಧಾನಪರಿಷತ್ ಸಭಾಂಗಣ ವೀಕ್ಷಿಸಲಿರುವ ರಾಷ್ಟ್ರಪತಿ
    * ಮಧ್ಯಾಹ್ನ 12.15 – ಗಾಂಧಿ ಪ್ರತಿಮೆ ಮುಂದೆ ಶಾಸಕರ ಜೊತೆ ಫೋಟೋ ಶೂಟ್
    * ಮಧ್ಯಾಹ್ನ 12.30 – ವಿಧಾನಸೌಧದಿಂದ ರಾಷ್ಟ್ರಪತಿಗಳ ನಿರ್ಗಮನ
    * ಮಧ್ಯಾಹ್ನ 1.30 –  ಭೋಜನ ವ್ಯವಸ್ಥೆ
    * ಮಧ್ಯಾಹ್ನ 3-5 ಗಂಟೆ – ಬ್ಯಾಂಕ್ವೆಟ್ ಹಾಲ್ ನಲ್ಲಿ ಮೂರು ಸಾಕ್ಷ್ಯ ಚಿತ್ರ ಪ್ರದರ್ಶನ
    * ಸಂಜೆ 5-6 ಗಂಟೆ – ವಿಧಾನಸೌಧದ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ
    * ಸಂಜೆ 6-6.30 – ಮಾಜಿ ಮುಖ್ಯಮಂತ್ರಿಗಳಾದ ಕೆಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಕುಟುಂಬಗಳಿಗೆ ಗೌರವ ಸಮರ್ಪಣೆ
    * ಸಂಜೆ – 6.30ಕ್ಕೆ – ಹಂಸಲೇಖ ತಂಡದಿಂದ ರಸಮಂಜರಿ ಕಾರ್ಯಕ್ರಮ
    ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರದ ಸಾಧನೆಯ 3ಡಿ ಮ್ಯಾಪಿಂಗ್ ಪ್ರದರ್ಶನ

     

     

  • ವಜ್ರಮಹೋತ್ಸವಕ್ಕೆ 5 ದಿನದ ಟಿಎ, ಡಿಎ ಕೊಡಿ – ಶಾಸಕರಿಗೆ ಒಂದೂವರೆ ಕೋಟಿ ರೂ. ಖರ್ಚು

    ವಜ್ರಮಹೋತ್ಸವಕ್ಕೆ 5 ದಿನದ ಟಿಎ, ಡಿಎ ಕೊಡಿ – ಶಾಸಕರಿಗೆ ಒಂದೂವರೆ ಕೋಟಿ ರೂ. ಖರ್ಚು

    ಬೆಂಗಳೂರು: ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ನಡೆಯುವ ವಿಧಾನಸೌಧದ ವಜ್ರಮಹೋತ್ಸವ ಸಮಾರಂಭ ಹೆಜ್ಜೆ ಹೆಜ್ಜೆಗೂ ವಿವಾದಕ್ಕೆ ಗುರಿಯಾಗುತ್ತಿದೆ.

    ಮೊನ್ನೆಯ ತನಕ ಚಿನ್ನದ ಬಿಸ್ಕೆಟ್ ಗಿಫ್ಟ್ ವಿವಾದ ಎದುರಿಸುತ್ತಿದ್ದು ಇದೀಗ ಇತಿಹಾಸ ಸೃಷ್ಟಿ ಮಾಡುವ ಐತಿಹಾಸಿಕ ಅಧಿವೇಶನಕ್ಕೆ ಶಾಸಕರು ಟಿಎ ಮತ್ತು ಡಿಎ ಕೊಡಬೇಕಂತೆ. ಇಲ್ಲಿ ಇಂಟ್ರಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಒಂದು ದಿನ ಅಧಿವೇಶನ ನಡೆದ್ರು 5 ದಿನ ಶಾಸಕರಿಗೆ ಡಿಎ ಕೊಡಬೇಕು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    50 ಸಾವಿರ ರೂಪಾಯಿ ಮೊತ್ತದ ಚಿನ್ನದ ಬಿಸ್ಕೆಟ್ ಬೇಡ ಎಂದ ಶಾಸಕರು, ಅದೇ ಮೊತ್ತದ ಟಿಎ ಮತ್ತು ಡಿಎ ಬೇಕು. ಒಂದು ದಿನದ ಅಧಿವೇಶನಕ್ಕೆ ಬರೋಬ್ಬರಿ 1.20 ಕೋಟಿ ರುಪಾಯಿ ವೆಚ್ಚವಾಗಲಿದಯಂತೆ. ಐತಿಹಾಸಿಕ ಜಂಟಿ ಅಧಿವೇಶನಕ್ಕೂ ಶಾಸಕರು ಟಿಎ, ಡಿಎ ಬೇಕು ಅಂತ ಜೋತು ಬಿದ್ದಿರೋದು ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

    ದುಂದುವೆಚ್ಚಕ್ಕೆ ಸಿಎಂ ಕಡಿವಾಣ: ಇತ್ತೀಚೆಗಷ್ಟೇ ವಿಧಾನ ಸಭೆಯ ಸ್ಪೀಕರ್ ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಸಿಎಂ ಗೆ ವಜ್ರಮಹೋತ್ಸವದ ಖರ್ಚು-ವೆಚ್ಚದ ವಿವರ ನೀಡಲು ಮುಂದಾದ್ರು.

    ಇದನ್ನು ಪರಿಶೀಲಿಸಿದ ಸಿಎಂ ವಜ್ರಮಹೋತ್ಸವಕ್ಕೆ 26 ಕೋಟಿ ತೆಗೆದುಕೊಂಡು ಏನು ಮಾಡುತ್ತೀರಾ?. ನನಗೆ ಯಾವ ವಿವರವನ್ನು ನೀಡುವುದು ಬೇಡ. 26 ಕೋಟಿ ಪ್ರಸ್ತಾವನೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವುದು ಹಾಗೂ ನೌಕರರಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಯಾರಿಗೂ ಯಾವ ದುಬಾರಿ ಗಿಫ್ಟ್ ಬೇಡ. ನಾನು ಕೊಡುವುದು ಹತ್ತು ಕೋಟಿ ಮಾತ್ರ. ಅದರಲ್ಲೇ ಎಲ್ಲವನ್ನೂ ಒಂದೇ ದಿನದಲ್ಲಿ ಕಾರ್ಯಕ್ರಮ ಮುಗಿಸಬೇಕು ಅಂತ ಇದೇ ಮೊದಲ ಬಾರಿಗೆ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

    ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಜ್ರಮಹೋತ್ಸವ ಕಾರ್ಯಕ್ರಮವನ್ನು 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚಿಸಿದ್ದರು. ಈ ಮೂಲಕ ದುಂದು ವೆಚ್ಚದ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದ್ದರು. ಅಲ್ಲದೇ ಇದೇ ತಿಂಗಳ 25, 26ರಂದು ಎರಡು ದಿನ ನಡೆಯಬೇಕಿದ್ದ ಕಾರ್ಯಕ್ರಮವು 25ರಂದು ಒಂದು ದಿನ ಮಾತ್ರ ನಡೆಸುವಂತೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿತ್ತು.

    ಸಾಕ್ಷ್ಯಚಿತ್ರ: ವಜ್ರಮಹೋತ್ಸವ ಸಮಾರಂಭ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ. ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದರು.

    1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    https://www.youtube.com/watch?v=xXietK2yVTY

     

  • ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನೆ

    ಬೆಂಗಳೂರು: ಇಂದು ನಗರದಲ್ಲಿ ವಿಧಾನಸೌಧದ ಎದುರು ಮಲ ಮೂತ್ರ ಮೈ ಮೇಲೆ ಸುರಿದುಕೊಂಡು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.

    ಬೆಂಗಳೂರು ಪೂರ್ವ ತಾಲೂಕಿನ ವೈಟ್‍ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಯಿಂದ ಒತ್ತುವರಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಆಕ್ರೋಶಗೊಂಡ ಪ್ರತಿಭಟನಾ ನಿರತ ಐವರು ವಿಧಾನಸೌಧದ ಗೇಟ್ ಬಳಿ ಮಲ ಮತ್ತು ಮೂತ್ರ ಮೈ ಮೇಲೆ ಸುರಿದುಕೊಂಡಿದ್ದಾರೆ.

    ಬೆಂಗಳೂರಿನ ವೈಟ್ ಫೀಲ್ಡ್ ಬಳಿ ರಾಜಕಾಲುವೆ ಒತ್ತುವರಿ ವಿಚಾರವಾಗಿ ದಲಿತರ ಗುಡಿಸಲುಗಳನ್ನ ನೆಲಸಮ ಮಾಡಲಾಯ್ತು. ಆದ್ರೆ ಆನಂತರ ಖಾಸಗಿ ಕಂಪನಿಯೊಂದು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೂರ್ವ ತಾಲುಕು ತಹಶೀಲ್ದಾರರಿಗೆ ಹಾಗೂ ಜಿಲ್ಲಾಧಾಕಾರಿಗಳಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ. ವೈಟ್ ಫೀಲ್ಡ್ ಅಲ್ಲದೇ ಬೆಂಗಳೂರಿನ ವಿವಿಧೆಡೆ ಖಾಸಗಿ ಕಂಪನಿಯವರು ರಾಜ ಕಾಲುವೆ ಒತ್ತುವರಿ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ತಿಲ್ಲ. ಬಡವರನ್ನ ಮಾತ್ರ ಒತ್ತುವರಿಯಲ್ಲಿ ಟಾರ್ಗೇಟ್ ಮಾಡಲಾಗ್ತಿದೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.