Tag: Vidhanasoudha

  • ವಿಧಾನಸೌಧ ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಭರ್ಜರಿ ಬಾಡೂಟ

    ವಿಧಾನಸೌಧ ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಭರ್ಜರಿ ಬಾಡೂಟ

    ಬೆಂಗಳೂರು: ಸದಾ ವಿವಾದಗಳಿಗೆ ಹೆಸರು ಮಾಡಿರೋ ವಿಧಾನಸೌಧ ಈಗ ಮತ್ತೊಂದು ವಿವಾದ ಸೃಷ್ಟಿ ಮಾಡಿದೆ. ಉಪ ಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಕೊಠಡಿಯನ್ನ ದುರ್ಬಳಕೆ ಮಾಡಿಕೊಂಡಿರೋ ವಿಧಾನಸಭೆ ಸಿಬ್ಬಂದಿ ಮಧ್ಯಾಹ್ನ ಭರ್ಜರಿ ಬಾಡೂಟ ಮಾಡಿ ಬೇಜಾಬ್ದಾರಿ ಮೆರೆದಿದ್ದಾರೆ.

    ಇತ್ತೀಚೆಗೆ ಕರ್ನಾಟಕ ವಿಧಾನ ಮಂಡಲ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅನಂತ್ ಟೀಂ ಗೆಲುವು ಸಾಧಿಸಿತ್ತು. ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸಿಬ್ಬಂದಿಗೆ ಖುದ್ದು ಅನಂತ್ ಬಾಡೂಟ ಆಯೋಜನೆ ಮಾಡಿದ್ದಾರೆ ಎನ್ನಲಾಗ್ತಿದೆ. ಚಿಕನ್, ಮಟನ್, ಕಬಾಬ್, ಮೊಟ್ಟೆ ಸೇರಿ ಭರ್ಜರಿ ಬಾಡೂಟ ಮಾಡಿರೋ ಸಿಬ್ಬಂದಿ ಉಪ ಸಭಾಧ್ಯಕ್ಷರ ಕೊಠಡಿಯನ್ನೆ ದುರುಪಯೋಗ ಮಾಡಿಕೊಂಡಿದ್ದಾರೆ.

    ಉಪ ಸಭಾಧ್ಯಕ್ಷರು ಇಲ್ಲದ ಸಮಯದಲ್ಲಿ ಸಿಬ್ಬಂದಿ ಹೋಟೆಲಿನಿಂದ ಬಾಡೂಟ ತರಿಸಿಕೊಂಡು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಉಪ ಸಭಾಧ್ಯಕ್ಷರ ಕೊಠಡಿಯಲ್ಲಿ ಬಾಡೂಟ ಮಾಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಉಪ ಸಭಾಧ್ಯಕ್ಷರು ಸಿಬ್ಬಂದಿ ಮೇಲೆ ಏನು ಕ್ರಮ ತೆಗೆದುಕೊಳ್ತಾರೆ ಕಾದು ನೋಡಬೇಕಿದೆ.

  • ವಿಧಾನಸೌಧ ಸುತ್ತಮುತ್ತ ಮೂರು ದಿನ ನಿಷೇಧಾಜ್ಞೆ ಜಾರಿ – ಸಂಘಟನೆಗಳಿಂದ ಮುತ್ತಿಗೆ ಸಾಧ್ಯತೆ

    ವಿಧಾನಸೌಧ ಸುತ್ತಮುತ್ತ ಮೂರು ದಿನ ನಿಷೇಧಾಜ್ಞೆ ಜಾರಿ – ಸಂಘಟನೆಗಳಿಂದ ಮುತ್ತಿಗೆ ಸಾಧ್ಯತೆ

    ಬೆಂಗಳೂರು: ವಿಧಾನಸೌಧದಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಸಿಎಎ ಮತ್ತು ಕರ್ನಾಟಕ ಬಂದ್, ಕಳಸ ಬಂಡೂರಿ, ಸರೋಜಿನಿ ಮಹಿಷಿ ವರದಿ, ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆದಿತ್ತು. ವಿಧಾನಸೌಧದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಕೆಲ ಸಂಘಟನೆಗಳು ಅಧಿವೇಶನ ಸಮಯದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.

    ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಧಾನಸೌಧದ ಸುತ್ತಮುತ್ತಲಿನ 2 ಕಿ.ಮೀವರೆಗೂ ನಿಷೇಧ ಹೇರಲಾಗಿದೆ. ಜನವರಿ 20ರ ರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ಜೊತೆಗೆ ನಗರ ಪೊಲೀಸರು ವಿಧಾನಸೌಧ ಸುತ್ತಮುತ್ತ ಎಂದಿನಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

    ಸಿಬ್ಬಂದಿ, ರಾಜಕೀಯ ನಾಯಕರು, ವಿಧಾನಸೌಧಕ್ಕೆ ಸಂಬಂಧಪಡದ ವ್ಯಕ್ತಿಗಳ ಮೇಲೆ ಪೊಲೀಸ್ ಕಣ್ಣಿಟ್ಟಿದ್ದಾರೆ. ಇಷ್ಟೆಲ್ಲಾ ಪೊಲೀಸರ ಭದ್ರತೆಯ ನಡುವೆಯೂ ಹಲವು ಸಂಘಟನೆಗಳು ವಿಧಾನಸೌಧದ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಯಿದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

  • ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ-ಇಂದು ರೈತರ ಪ್ರತಿಭಟನೆ

    ಬೆಂಗ್ಳೂರಿಗೆ ಟ್ರಾಫಿಕ್ ಬಿಸಿ-ಇಂದು ರೈತರ ಪ್ರತಿಭಟನೆ

    -ರೈತರ ಬೇಡಿಕೆಗಳೇನು?
    -ಮಾರ್ಗ ಬದಲಾವಣೆ ಹೀಗಿದೆ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ರೈತರು ಉತ್ತರ ಕರ್ನಾಟಕಕ್ಕೆ ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಬೀದಿಗೆ ಇಳಿಯಲಿದ್ದಾರೆ. ಇನ್ನೊಂದಡೆ ಜೆಡಿಎಸ್ ಕೂಡ ಪ್ರತಿಭಟನೆ ನಡೆಸಲಿದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ರೈತರು ಇಂದು ಹನ್ನೊಂದು ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ.

    ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹನ್ನೊಂದು ಗಂಟೆಗೆ ಜೆಪಿ ಭವನದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆ ಎಫೆಕ್ಟ್ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ 2 ಕಿ.ಮೀ. ನಿಷೇದಾಜ್ಞೆಯೂ ಜಾರಿಯಾಗಲಿದೆ.

    ಇಲ್ಲಿ ಟ್ರಾಫಿಕ್ ಜಾಮ್:
    1. ಮಂತ್ರಿಮಾಲ್ ರಸ್ತೆ,
    2. ಶೇಷಾದ್ರಿಪುರಂ ರೋಡ್
    3. ಮಜೆಸ್ಟಿಕ್ ಸುತ್ತಾಮುತ್ತ ರಸ್ತೆ
    4. ಕಾರ್ಪೋರೇಷನ್ ಸರ್ಕಲ್
    5. ವಿಧಾನಸೌಧ ಸುತ್ತಾಮುತ್ತ ರಸ್ತೆ
    6. ಆನಂದ್ ರಾವ್ ಸರ್ಕಲ್ ಬಳಿ ಟ್ರಾಫಿಕ್ ಬಿಸಿ ಇರಲಿದೆ.

    ಮಾರ್ಗ ಬದಲಾವಣೆ
    * ಶೇಷಾದ್ರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ
    * ಆನಂದ ರಾವ್ ಫ್ಲೈಓವರ್ ಬಳಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆ ಕಡೆ ಸಂಚಾರಿಸಲು ಮಾರ್ಗ ಬದಲು
    * ಸಿಐಡಿ ಜಂಕ್ಷನ್, ಪ್ಯಾಲೇಸ್ ರಸ್ತೆ ಮೂಲಕ ಕೆ ಆರ್ ಸರ್ಕಲ್ ಪ್ರವೇಶಿಸಲು ಸೂಚನೆ

    ರೈತರ ಬೇಡಿಕೆಗಳೇನು?
    1. ಉತ್ತರ ಕರ್ನಾಟಕದ ಪ್ರವಾಹ ದಲ್ಲಿ ಮನೆ ಕಳಕೊಂಡವರಿಗೆ ಹತ್ತು ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು.
    2. ಎಕರೆಗೆ ಇಪ್ಪತ್ತೈದು ಸಾವಿರದಂತೆ ಪರಿಹಾರ ಕೊಡಬೇಕು
    3. ಪ್ರವಾಹದಲ್ಲಿ ಪ್ರಾಣ ಕಳಕೊಂಡವರಿಗೆ 25 ಲಕ್ಷ ಪರಿಹಾರ ಕೊಡಬೇಕು.
    4. ನಷ್ಟವಾದ ಕೃಷಿ ಭೂಮಿಗೆ ಪರಿಹಾರ ಕೊಡಬೇಕು, ಪರ್ಯಾಯ ಭೂಮಿ ಕೊಡಬೇಕು.
    5. ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು.
    6. ಬ್ಯಾಂಕ್ ಗಳು ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಸಾಲದ ನೋಟಿಸ್ ನೀಡೋದನ್ನು ನಿಲ್ಲಿಸಬೇಕು.

  • ಉಗ್ರರಿಂದ ದಾಳಿ ಭೀತಿ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ

    ಉಗ್ರರಿಂದ ದಾಳಿ ಭೀತಿ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ

    ಬೆಂಗಳೂರು: ಉಗ್ರರರಿಂದ ದಾಳಿ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ ಒದಗಿಸಲಾಗಿದೆ.

    ಮೆಟ್ರೋ ಪ್ರವೇಶಿಸುವ ಪ್ರತಿ ಪ್ರಯಾಣಿಕರಿಗೂ ಮೆಟ್ರೋ ಸೆಕ್ಯೂರಿಟಿ ಸಿಬ್ಬಂದಿ ಪ್ರತ್ಯೇಕ ತಪಾಸಣೆ ಮಾಡುತ್ತಿದ್ದಾರೆ. ಪ್ರಯಾಣಿಕರ ಮೊಬೈಲ್, ಪರ್ಸ್‍ಗಳನ್ನು ಚೆಕ್ ಮಾಡಿ ಬಳಿಕ ಒಳಗೆ ಪ್ರವೇಶ ನೀಡುತ್ತಿದ್ದಾರೆ. ಜೊತೆಗೆ ಮರಳಿನ ಮೂಟೆಯಿಂದ ಸೆಕ್ಯೂರಿಟಿ ವಾಲ್‍ಗಳನ್ನು ಕೂಡ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿದೆ.

    ಇತ್ತ ವಿಧಾನಸೌಧಕ್ಕೂ ಕೂಡ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ವಿಧಾನಸೌಧದ ಎಲ್ಲಾ ಗೇಟ್‍ಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದೆ. ವಿಧಾನಸೌಧದ ಒಳಗೆ ಹೋಗುವವರ ತಪಾಸಣೆ ಮಾಡಿ ಬಳಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸದ್ಯ ಖಾಕಿ ಸರ್ಪಗಾವಲಿನಲ್ಲಿ ವಿಧಾನಸೌಧ ಇದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನ ಪ್ರವೇಶ ದ್ವಾರದ ಮುಂದೆಯೇ ನಿಲ್ಲಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಹಾಗೆಯೇ ವಿಧಾನಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರನ್ನೂ ತಪಾಸಣೆ ಮಾಡಿಯೇ ಭದ್ರತಾ ಸಿಬ್ಬಂದಿ ಒಳಗೆ ಕಳುಹಿಸುತ್ತಿದ್ದಾರೆ.

    ಬೆಂಗಳೂರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ತಪಾಸಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಪಿಜಿ, ಹಾಸ್ಟೆಲ್‍ಗಳ ಮೇಲೆ ಕೂಡ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.  ಎಲ್ಲಾ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಹಲವು ದಿನಗಳಿಂದ ನಿಂತಲ್ಲೇ ನಿಂತಿರೋ ವಾಹನಗಳ ತೆರವುಗೊಳಿಸಲಾಗಿದೆ. ಹಾಗೆಯೇ ದೇವಸ್ಥಾನ, ಮಸೀದಿ, ಮಾಲ್, ಹಾಸ್ಪಿಟಲ್, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೂ ನಿಗಾವಹಿಸಲಾಗಿದೆ. ಅಲ್ಲದೆ ನಗರದ ಲಾಡ್ಜ್‍ಗಳಲ್ಲಿ ದಾಖಲೆಗಳನ್ನ ನೀಡದೆ ತಂಗಿರುವವರ ವಿಚಾರಣೆ ಮಾಡಲಾಗುತ್ತಿದೆ.

    ತಡರಾತ್ರಿವರೆಗೆ ಪೊಲೀಸರಿಂದ ನಾಕಾಬಂದಿ ಹಾಕಿ ಕಾರ್ಯಾಚರಣೆ ನಡೆದಿದ್ದು, ಅಪರಿಚಿತ ಕಾರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೂರು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ರಾತ್ರಿ ಇಂದಿರಾನಗರದ ಬಳಿ ಪೊಲೀಸರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಪ್ರವೀಣ್, ಸಂತೋಷ್, ಸಂಜಯ್‍ರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಐ.ಬಿ. ಅಧಿಕಾರಿಗಳಿಂದಲೂ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.

    ವಿಚಾರಣೆ ವೇಳೆ ಕೋಲಾರ ತಾಲೂಕಿನ ಕೈವಾರದಲ್ಲಿ ಅಪಘಾತ ಮಾಡಿ ಬೆಂಗಳೂರಿಗೆ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೂರ್ವ, ಕೇಂದ್ರ ವಿಭಾಗದ ಡಿಸಿಪಿಗಳಿಂದ ವಿಚಾರಣೆ ಮುಂದುವರಿದಿದೆ.

    ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಬಹುದು ಎಂಬ ಆತಂಕ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ನಗರಗಳನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ರಾಜಧಾನಿಯಲ್ಲಿ, ಪೊಲೀಸರು ಅಲರ್ಟ್ ಆಗಿರುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ರಾಜಧಾನಿಯ ರೈಲ್ವೆ, ಬಸ್ ನಿಲ್ದಾಣ, ಮೆಟ್ರೋ, ಮಾಲ್, ಮಾರುಕಟ್ಟೆ, ದೇವಸ್ಥಾನ, ಮಸೀದಿ, ವಿಧಾನಸೌಧ, ವಿಕಾಸಸೌಧ, ಹೈಕೋಟ್9, ಸೇರಿ ಹಲವಡೆ ಖಾಕಿ ಕಟ್ಟೆಚ್ಚರ ವಹಿಸಿದೆ.

  • ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಬೆಂಗಳೂರು: ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ, ನಿಗದಿಯಾಗಿದ್ದ ಸಮಯಕ್ಕೆ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಆಗಮಿಸದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ವೇಳೆ ಅಧಿಕಾರಿಗಳು ಇನ್ನೂ ಆಗಮಿಸಿರಲಿಲ್ಲ. ತಡವಾದರೂ ಆಗಮಿಸದ ಸಿಬ್ಬಂದಿಯ ವರ್ತನೆಗೆ ಸಿಎಂ ಕೆಂಡಾಮಂಡಲರಾಗಿದ್ದು, ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ಇಲ್ಲವಾದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಮೇಲಧಿಕಾರಿಗಳಿಗೂ ಸಿಎಂ ವಾರ್ನ್ ಮಾಡಿದ್ದಾರೆ. ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ. ನಿಗದಿಯಾಗಿದ್ದ ಸಮಯಕ್ಕೆ ನಾನು ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಸಮಯ ಹಾಗೂ ಶಿಸ್ತು ಪಾಲಿಸುವುದು ಕಡ್ಡಾಯ. ನಿಮ್ಮ ಕೆಳ ಸಿಬ್ಬಂದಿಗೂ ಈ ಕುರಿತು ಎಚ್ಚರಿಕೆ ನೀಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಗುಡುಗಿದ್ದಾರೆ.

    ಆರ್ಥಿಕ ಇಲಾಖೆ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ವಿಧಾನಸೌಧ, ರಾಜಭವನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್- ಅಲೋಕ್ ಕುಮಾರ್ ರೌಂಡ್ಸ್

    ವಿಧಾನಸೌಧ, ರಾಜಭವನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್- ಅಲೋಕ್ ಕುಮಾರ್ ರೌಂಡ್ಸ್

    ಬೆಂಗಳೂರು: ರಾಜ್ಯಪಾಲರ ಭೇಟಿಗೆ ಸಿಎಂ ಕಾಲಾವಕಾಶ ಕೇಳಿದ ಬೆನ್ನಲ್ಲೇ ರಾಜಭವನ ಹಾಗೂ ವಿಧಾನಸೌಧದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸ್ವತಃ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ವಿಧಾನಸೌಧದ ಸುತ್ತ ಭದ್ರತೆಯನ್ನು ಪರಿಶೀಲಿಸಿದ್ದಾರೆ.

    ಸಿಎಂ ಇಂದೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಆದರೆ ಸ್ಪೀಕರ್ ಇಂದೇ ಪ್ರಕ್ರಿಯೆ ನಡೆಸಲೇಬೇಕೆಂದು ದೋಸ್ತಿ ನಾಯಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಇಂದೇ ಮತದಾನ ನಡೆಯುವ ಸಾಧ್ಯತೆ ಹೆಚ್ಚಿದೆ.

    ಮಧ್ಯಾಹ್ನದಿಂದ ಸಿಎಂ ಕಲಾಪಕ್ಕೆ ಗೈರಾಗಿದ್ದಾರೆ. ಇಂದು ದೋಸ್ತಿ ಪಕ್ಷದ ಒಟ್ಟು 100 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು. ಹೀಗಾಗಿ ಬಹುಮತಕ್ಕೆ 103 ಶಾಸಕರ ಬೆಂಬಲ ಬೇಕಿದೆ.

  • ಬಿರಿಯಾನಿ ಕಥೆ ಹೇಳಿದ ಸಿಟಿ ರವಿ- ಖಡಕ್ ಉತ್ತರ ಕೊಟ್ಟ ಸಿಎಂ

    ಬಿರಿಯಾನಿ ಕಥೆ ಹೇಳಿದ ಸಿಟಿ ರವಿ- ಖಡಕ್ ಉತ್ತರ ಕೊಟ್ಟ ಸಿಎಂ

    ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಬಿಜೆಪಿ ಶಾಸಕ ಸಿಟಿರವಿ ಅವರು ಬಿರಿಯಾನಿ ಕಥೆಯನ್ನು ಪ್ರಸ್ತಾಪ ಮಾಡಿದರು. ಈ ವೇಳೆ ಶಾಸಕರ ಕಥೆಗೆ ಸಿಎಂ ಅವರು ಖಡಕ್ ಉತ್ತರ ನೀಡಿದ ಪ್ರಸಂಗ ನಡೆಯಿತು.

    ಐಎಂಎ ಕಂಪನಿ ಬಗ್ಗೆ ಈ ಹಿಂದೆಯೇ ಕಂಪ್ಲೆಂಟ್ ಬಂದಿರುತ್ತದೆ. ಆಗ ತನಿಖೆಯೂ ನಡೆಯುತ್ತದೆ. ಆ ತನಿಖೆಗೆ ಕ್ಲೀನ್ ಚಿಟ್ ಕಳುಹಿಸಿದ್ದಾರೆ. ಆ ಕ್ಲೀನ್ ಚಿಟ್ ಕೊಟ್ಟವನು ಇಂದು ಜೈಲಿನಲ್ಲಿದ್ದಾರೆ. ಆದರೆ ಯಾರ ಬಳಿ ಆಡಳಿತ ಇತ್ತೋ, ಇಂಟಲಿಜೆನ್ಸ್ ಇತ್ತೋ ಅವರೇ ಅವರನ್ನು ಯಾರು ರಕ್ಷಣೆ ಮಾಡಿದ್ದಾರೆ ಎಂದು ಸಿಟಿ ರವಿ ಪ್ರಸ್ತಾಪ ಮಾಡಿದರು.

    46 ಸಾವಿರ ಬಡ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ ಪಾಪದ ಹೊಣೆ ಅವರ ಜೊತೆ ಕೂತು ಬಿರಿಯಾನಿ ತಿಂದವರ ಮೇಲಿದೆ. ಆ ಬಿರಿಯಾನಿ ತಿಂದಿದ್ದು ಯಾರು ಅನ್ನೋದನ್ನು ಅವರು ಬಾಯಿ ಬಿಟ್ಟು ಹೇಳಿದರೆ ರಾಜ್ಯ ಹಾಗೂ ದೇಶಕ್ಕೆ ಗೊತ್ತಾಗುತ್ತದೆ. ಅಂಥವರನ್ನು ತೆಗೆದುಕೊಂಡು ಹೋಗಿ ನೇಣು ಹಾಕಬೇಕು ಎಂದು ಶಾಸಕರು ಕಿಡಿಕಾರಿದರು.

    ರಕ್ಷಣೆ ಮಾಡುತ್ತೇವೆ ಎಂದು ಹೇಳಬೇಕಾಗಿದ್ದು, ಆ 46 ಸಾವಿರ ಬಡ ಕುಟುಂಬವನ್ನೇ ಹೊರತು ಒಬ್ಬ ಕಳ್ಳನನ್ನು ಅಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಹೇಳಿದವರು ಯಾರು? ಅವರು ಯಾವ ಧೈರ್ಯದ ಮೇಲೆ ಹೇಳಿದ್ರು? ಸತ್ಯ ಗೊತ್ತಾಗಬೇಕಿದೆ ಎಂದು ಇದೇ ವೇಳೆ ಸಿಟಿ ರವಿ ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಟಿ ರವಿ ಅವರು ಬಿರಿಯಾನಿ ಕಥೆಯನ್ನು ನನಗೆ ಹೇಳಿದ್ದು ಅನ್ನೋದು ಗೊತ್ತು. ಹೊರಗಡೆ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಹಾಗೂ ಆ ಬಿರಿಯಾನಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಓದಿದ್ದೇನೆ. ಐಎಂಎ ಪ್ರಕರಣದ ಇಂದಿನ ಈ ತನಿಖೆಯಲ್ಲಿ ಎಸ್‍ಐಟಿಯನ್ನು ನಾವೇ ರಚನೆ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯಂತ ಉತ್ತಮವಾದ ಕೆಲಸ ಮಾಡಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ ಎಂದರು.

    ಬಿರಿಯಾನಿ ಕಥೆಗೆ ವಿವರಣೆ ನೀಡಿದ ಸಿಎಂ, ನನಗೆ ಐಎಂಎ ವ್ಯವಸ್ಥಾಕರ ಪರಿಚಯವಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ಕೃಷ್ಣಾ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ವೇಳೆ ಸಿಟಿ ರವಿ ಪ್ರಸ್ತಾಪ ಮಾಡಿದ ಶಾಸಕರು ಬಂದು ಇಫ್ತಿಯಾರ್ ಗೆ ದಯವಿಟ್ಟು ಬರಬೇಕು ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. ನಾನು ಮೊದಲನೇ ಬಾರಿಗೆ ಆ ಕಚೇರಿಗೆ ಹೋಗಿದ್ದು, ಹಾಗೆಯೇ ವ್ಯವಸ್ಥಾಪಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ನಾನೇನು ಬಿರಿಯಾನಿ ತಿಂದಿಲ್ಲ. ಯಾಕೆಂದರೆ ನನಗೆ ಎರಡನೇ ಬಾರಿಗೆ ಹೃದಯದ ಚಿಕಿತ್ಸೆ ಆದ ಬಳಿಕ ನಾನು ನಾನ್ ವೆಜ್ ತಿನ್ನೋದನ್ನು ಬಿಟ್ಟಿದ್ದೇನೆ. ಹೀಗಾಗಿ ನಾನು ಅಲ್ಲಿಗೆ ಬಿರಿಯಾನಿ ತಿನ್ನಲು ಹೋಗಿಲ್ಲ. ಅವರು ರಂಜಾನ್ ಹಬ್ಬಕ್ಕೆ ಕರೆದ್ರಲ್ವಾ ಎಂದು ಹೋಗಿ ಖರ್ಜೂರ ಬಾಯಿಗೆ ಹಾಕಿದಾಗ ಅದರ ಫೋಟೋ ತೆಗೆದಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ವಿವರಣೆ ನೀಡಿದರು.

    ನನಗೆ ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿ ಸರಿಯಾದ ರೀತಿಯ ತನಿಖೆಗಳು ಆಗುತ್ತಿಲ್ಲ ಎಂಬ ವರದಿ ಬಂದ ಬಳಿಕ ನಾನೇ ನಮ್ಮ ಡಿಜಿಯವರನ್ನು ಕರೆದು ಅದರ ಬಗ್ಗೆ ತನಿಖೆ ಆಗಬೇಕು ಎಂದು ನಿರ್ದೇಶನ ಕೊಟ್ಟೆ. ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಕಂಪನಿ ಬಂದಿದ್ದಲ್ಲ, ಅದಕ್ಕಿಂತಲೂ ಮೊದಲೇ ಈ ಕಂಪನಿ ಇತ್ತು ಎಂದರು.

    ವ್ಯವಸ್ಥಾಪಕ ಕಚೇರಿಯಲ್ಲಿ ದೇಶದ ಗೌರವಾನ್ವಿತ ಪ್ರಧಾನಿಗಳ ಫೋಟೋವನ್ನು ಕೂಡ ಹಾಕಿಕೊಂಡಿದ್ದರು. ಆದಾಯ ತೆರಿಗೆ ಇಲಾಖೆಯವರು ನೀಡಿದ್ದ ಫೋಟೋವನ್ನೂ ಹಾಕಿಕೊಂಡಿದ್ದರು. ಇಂದು ನಮ್ಮ ಅಧಿಕಾರಿಗಳೇ ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್ ಮಾಡಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಕೂರಿಸುವ ಬದಲು ಇಡಿಯವರು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

    ಇಲ್ಲಿ ಬಿರಿಯಾನಿ ಕಥೆ ಯಾವುದು ನಡೆದಿಲ್ಲ. ಬಡವರ ದುಡ್ಡನ್ನು ನುಂಗಿ ಹಾಕಿದವರಿಗೆ ರಕ್ಷಣೆ ಕೊಡಲು ಈ ಸರ್ಕಾರದಲ್ಲಿ ಸಾಧ್ಯವಿಲ್ಲ. ಈ ಸಂಬಂಧ ಯಾವ ರಾಜಿನೂ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

    ಇದೇ ವೇಳೆ ಸಿಎಂ ಮಾತಿಗೆ ದನಿಗೂಡಿಸಿ ಸ್ಪೀಕರ್ ನಾನು ವೆಜ್ ತಿನ್ನೋದನ್ನು ಬಿಡಬೇಡಿ. ನಮ್ಮ ರಕ್ಷಣೆಗೆ ಬನ್ನಿ ನೀವು ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ರು.

  • ಸಿಎಲ್‍ಪಿ ಸಭೆಗೆ ಗೈರು- ಶಾಸಕ ಸುಧಾಕರ್,  ತುಕಾರಾಂಗೆ  ಜ್ವರವಂತೆ

    ಸಿಎಲ್‍ಪಿ ಸಭೆಗೆ ಗೈರು- ಶಾಸಕ ಸುಧಾಕರ್, ತುಕಾರಾಂಗೆ ಜ್ವರವಂತೆ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಇಂದು ವಿಧಾನಸೌಧದಲ್ಲಿ ನಡೆಯುತ್ತಿದ್ದು, ಕೆಲ ಶಾಸಕರು ಸಭೆಗೆ ಗೈರಾಗಿದ್ದಾರೆ.

    ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಸಂಡೂರು ಶಾಸಕ ತುಕಾರಾಂ ಅವರು ಸಭೆಗೆ ಗೈರಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕಾರಣ ನೀಡಿದ್ದಾರೆ. ನಮಗೆ ವೈರಲ್ ಜ್ವರ ಇದೆ. ಹೀಗಾಗಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇತ್ತ ಖಾನಾಪುರ ಅಂಜಲಿ ನಿಂಬಾಳ್ಕರ್ ಕೂಡ ಸಭೆಗೆ ಗೈರಾಗಿದ್ದಾರೆ. ಇದೀಗ ಇವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಇವರು ಸಭೆಗೆ ಹಾಜರಾಗುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಇವರು ಇಂದು ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ.

    ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಅನಾರೋಗ್ಯದ ಕಾರಣ ಗೈರು ಎಂದು ಪತ್ರ ಬರೆದು ತಮ್ಮ ಬೆಂಬಲಿಗನ ಮೂಲಕ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಕೊಟ್ಟವರು ಹಾಗೂ ರೋಶನ್ ಬೇಗ್ ರನ್ನ ಹೊರತುಪಡಿಸಿ ಅನುಮತಿ ಪಡೆದವರು ಹಾಗೂ ಮಾಹಿತಿ ನೀಡದವರು ಸೇರಿ ಒಟ್ಟು 8 ಮಂದಿ ಶಾಸಕರು ಸಭೆಗೆ ಗೈರಾಗಿದ್ದಾರೆ.

    ನಾಗೇಂದ್ರ ತಡವಾಗಿ ಬರುವುದಾಗಿ ಸಿದ್ದರಾಮಯ್ಯಗೆ ಕರೆ ಮಾಡಿ ತಿಳಿಸಿದ್ದಾರೆ. ಈಗಾಗಲೇ ಸಮ್ಮಿಶ್ರ ಸರ್ಕಾರದ 15 ಮಂದಿ ರಾಜೀನಾಮೆ ನೀಡಿದ್ದು, ಇಂದು ಮತ್ತಷ್ಟು ಶಾಸಕರು ರಾಜೀನಾಮೆ ನಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಕಾಂಗ್ರೆಸ್ ನಿಂದ ಸಿಎಲ್‍ಪಿ ಸಭೆ ಕರೆಯಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ಶಾಸಕಾಂಗ ಸಭೆ ನಡೆಯುತ್ತಿದೆ.

  • ಇದು ಸಾವಲ್ಲ ಬಲಿದಾನ – ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನಕ್ಕೂ ಮುನ್ನ ಸಿಎಂಗೆ ಪತ್ರ

    ಇದು ಸಾವಲ್ಲ ಬಲಿದಾನ – ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನಕ್ಕೂ ಮುನ್ನ ಸಿಎಂಗೆ ಪತ್ರ

    – ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನ
    – ಮೆಟಲ್ ಡಿಟೆಕ್ಟರ್ ಇದ್ದರೂ ಭದ್ರತಾ ಲೋಪ

    ಬೆಂಗಳೂರು: ಸುಮಾರು 6 ಸಾವಿರ ಗ್ರಂಥಪಾಲಕರನ್ನು ಖಾಯಂಗೊಳಿಸಲು ಚಿಕ್ಕಬಳ್ಳಾಪುರ ಮೂಲದ ರೇವಣ್ಣ ಕುಮಾರ್ ಅವರು ವಿಧಾನಸೌಧದ ಶೌಚಾಲಯದಲ್ಲಿ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ರೇವಣ್ಣ ಕುಮಾರ್ ಅನೂರಿನಲ್ಲಿರುವ ಲೈಬ್ರೆರಿಯಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಉದ್ಯೋಗ ಖಾಯಂ ಆಗದ ಕಾರಣ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾರೆ. ಸದ್ಯ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿದ ಸ್ಥಳಕ್ಕೆ ಡಿಸಿಪಿ ದೇವರಾಜು ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮಧ್ಯಾಹ್ನ 1.30ರ ವೇಳೆಗೆ ರೇವಣ್ಣ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್ ನಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಘಟನೆಯಿಂದ ಕೈ ಮತ್ತು ಕುತ್ತಿಗೆ ಮೇಲೆ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ತಿಳಿಸಿದ್ದಾರೆ.

    ಆತ್ಮಹತ್ಯೆ ಯತ್ನ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಹರಿತವಾದ ಆಯುಧ ಸಿಕ್ಕಿಲ್ಲ. ಸ್ಥಳದಲ್ಲಿ ಆಧಾರ್ ಕಾರ್ಡ್, ಗುರುತಿನ ಚೀಟಿ ಸಿಕ್ಕಿದೆ. ಉದ್ಯೋಗ ನೇಮಕಾತಿ ಪತ್ರ ಕೂಡ ಸ್ಥಳದಲ್ಲಿ ದೊರಕಿದೆ. 6 ಸಾವಿರ ಜನ ತಾತ್ಕಾಲಿಕ ಲೈಬ್ರೇರಿಯನ್ ಗಳಿಗೆ ಕನಿಷ್ಠ ವೇತನ ನಿಗದಿ ಮಾಡುವ ಬಗ್ಗೆಯೂ ಮನವಿ ಪತ್ರ ಸಿಕ್ಕಿದೆ. ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿ ಪ್ರಕರಣ ದಾಖಲು ದಾಖಲಾಗಿದೆ. ತನಿಖೆ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದು ಹೇಳಿದ್ದಾರೆ.

    ರೇವಣ್ಣ ಬೇಡಿಕೆ ಏನು?
    ಆತ್ಮಹತ್ಯೆ ಯತ್ನಕ್ಕೂ ಮುನ್ನ ರೇವಣ್ಣ ಕುಮಾರ್ ಡೆತ್ ನೋಟ್ ಬರೆದಿದ್ದು, ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ದಯಮಾಡಿ ಹಂಗಾಮಿ ನೌಕರನನ್ನು ಖಾತ್ರಿ ಪಡಿಸಿಕೊಳ್ಳಿ. ಉದ್ಯೋಗಿಯಾಗೋದು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ಗಮನ ಸೆಳೆಯಲು ರೇವಣ್ಣ ಈ ಆತ್ಮಹತ್ಯೆ ಯತ್ನ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ರೇವಣ್ಣ ಸಾಕಷ್ಟು ದಿನದಿಂದ ಉದ್ಯೋಗ ಖಾತ್ರಿಗೆ ಓಡಾಡುತ್ತಾ ಇದ್ದರು. ಪ್ರಧಾನಮಂತ್ರಿಯಿಂದ ರಾಷ್ಟ್ರಪತಿ ವರೆಗೂ ಸಂಪರ್ಕ ಮಾಡಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ನೀವಾದ್ರು ನ್ಯಾಯ ಕೊಡಿಸಿ ಎಂದು ಸಿಎಂ ಗೆ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ನನ್ನ ಬಗ್ಗೆ ತಪ್ಪು ತಿಳಿಯಬೇಡಿ. 6 ಸಾವಿರ ಲೈಬ್ರರಿ ನೌಕರರ ಪ್ರತೀಕವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆ ಅಲ್ಲ. ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಅನ್ಯತಾ ಭಾವಿಸಬಾರದು. ನಾವು ಎಷ್ಟೇ ಹೋರಾಟ ಮಾಡಿದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನೀವಾದ್ರೂ ನ್ಯಾಯ ಕೊಡಿಸಿ. ಇದು ಸಾವಲ್ಲ ಬಲಿದಾನ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಮೆಟಲ್ ಡಿಟೆಕ್ಟರ್:
    ವಿಧಾನಸೌಧದ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಭಾರೀ ಅನುಮಾನಕ್ಕೀಡು ಮಾಡಿದೆ. ಯಾಕೆಂದರೆ ಕಳೆದ ಬಾರಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಕಚೇರಿಯೊಳಗಡೆಯೇ ಚಾಕು ಇರಿಯಲಾಗಿತ್ತು. ಆ ಬಳಿಕ ಸರ್ಕಾರಿ ಕಚೇರಿಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಅಲ್ಲದೆ ಪೊಲೀಸರ ಭದ್ರತೆಯನ್ನೂ ನಿಯೋಜಿಸಲಾಗಿತ್ತು. ಆದರೆ ಇದೀಗ ಶಾಸಕರು ಹಾಗೂ ಸಚಿವರು ಓಡಾಡುತ್ತಿರುವ ವಿಧಾನಸೌಧದಲ್ಲಿ ಇಷ್ಟೆಲ್ಲಾ ಭದ್ರತೆ ಇದ್ದರೂ ರೇವಣ್ಣ ಕುಮಾರ್ ಬ್ಲೇಡ್ ಕೊಂಡೊಯ್ದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.

    ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕಚೇರಿ ಸಮೀಪದಲ್ಲಿರುವ ಟಾಯ್ಲೆಟ್‍ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇವಣ್ಣ ಅವರನ್ನು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

  • ವಿಧಾನಸೌಧದ ಶೌಚಾಲಯದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

    ವಿಧಾನಸೌಧದ ಶೌಚಾಲಯದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

    45 ವರ್ಷದ ರೇವಣ್ಣ ಕುಮಾರ್ ಎಂದು ಗುರುತಿಸಲಾಗಿದ್ದು, ಚಿಕ್ಕಬಳ್ಳಾಪುರದ ಆನೂರು ನಿವಾಸಿ ಎನ್ನಲಾಗಿದೆ. ಮೂರನೇ ಮಹಡಿ ಶೌಚಾಲಯ ಕೊಠಡಿ ಸಂಖ್ಯೆ 332 ರಲ್ಲಿ ಈ ಘಟನೆ ನಡೆದಿದೆ.

    ಮಾಹಿತಿ ಪ್ರಕಾರ ರೇವಣ್ಣಕುಮಾರ್ ಓರ್ವ ಸಾರ್ವಜನಿಕನಾಗಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ರೇವಣ್ಣ ಕುಮಾರ್ ಅವರು ಪ್ಲಾಸ್ಟಿಕ್ ಕವರ್ ನಲ್ಲಿ ಹಲವು ದಾಖಲೆ ಪತ್ರಗಳನ್ನು ತಂದಿದ್ದರು. ಸದ್ಯ ಘಟನಾ ಸ್ಥಳಕ್ಕೆ ಕೇಂದ್ರವಲಯ ಡಿಸಿಪಿ ದೇವರಾಜ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ.