Tag: Vidhanasoudha Chalo Rally

  • ‘ಬಜೆಟ್‍ನಲ್ಲಿ ಅನುದಾನ ನೀಡಿದ್ರೆ ಸಾಲದು ಕಾರ್ಯರೂಪಕ್ಕೆ ತನ್ನಿ’- ಜ. 28ಕ್ಕೆ ವಿಧಾನಸೌಧ ಚಲೋ ರ‌್ಯಾಲಿ

    ‘ಬಜೆಟ್‍ನಲ್ಲಿ ಅನುದಾನ ನೀಡಿದ್ರೆ ಸಾಲದು ಕಾರ್ಯರೂಪಕ್ಕೆ ತನ್ನಿ’- ಜ. 28ಕ್ಕೆ ವಿಧಾನಸೌಧ ಚಲೋ ರ‌್ಯಾಲಿ

    ಬೆಂಗಳೂರು: ಜ. 28ಕ್ಕೆ ದಲಿತ ಹಕ್ಕುಗಳ ಸಮಿತಿ ವಿಧಾನಸೌಧ ಚಲೋ ರ‌್ಯಾಲಿಯನ್ನ ಆಯೋಜಿಸಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯನ್ನು ಜಾರಿಗೆ ಆಗ್ರಹಿಸಿ ವಿಧಾನಸೌಧ ಚಲೋ ರ‌್ಯಾಲಿಯನ್ನ ಆಯೋಜಿಸಲಾಗಿದೆ.

    ಜ. 28ಕ್ಕೆ ನಗರದ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುತ್ತದೆ. ಈ ಪ್ರತಿಭಟನೆಯಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ಪ್ರತಿ ಬಜೆಟ್‍ನಲ್ಲಿಯೂ ದಲಿತರ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಅನುದಾನ ಮೀಸಲಿಡುತ್ತದೆ. ಆದರೆ ಆ ಅನುದಾನದ ಪ್ರಯೋಜನ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹೇಳಿದರು.

    ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಸ್ಮಶಾನ ಭೂಮಿ ಯೋಜನೆ, ವಸತಿ ಯೋಜನೆಗಳಿಗೆ 2015-16ನೇ ಸಾಲಿನಲ್ಲಿ 16 ಸಾವಿರ ಕೋಟಿ ರೂಪಾಯಿ, 16-17ನೇ ಸಾಲಿನಲ್ಲಿ 29.54 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಬಜೆಟ್‍ನಲ್ಲಿ ಮೀಸಲಿಟ್ಟಿತ್ತು. ಆದರೆ ಈ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಗೋಪಾಲಕೃಷ್ಣ ದೂರಿದರು.