Tag: vidhanasabha election 2023

  • ಬಿಜೆಪಿ 2 ನೇ ಪಟ್ಟಿ ರಿಲೀಸ್-‌ 23 ಅಭ್ಯರ್ಥಿಗಳ ಹೆಸರು ಬಿಡುಗಡೆ

    ಬಿಜೆಪಿ 2 ನೇ ಪಟ್ಟಿ ರಿಲೀಸ್-‌ 23 ಅಭ್ಯರ್ಥಿಗಳ ಹೆಸರು ಬಿಡುಗಡೆ

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಸಂಬಂಧ ಮಂಗಳವಾರವಷ್ಟೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಹೈಕಮಾಂಡ್‌  (BJP HighCommand) ಇಂದು (ಬುಧವಾರ) ಮತ್ತೆ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಯಾರಿಗೆಲ್ಲ ಟಿಕೆಟ್..?: ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌ ಲಲಿತಾ ಅನಾಪುರ್‌, ಬೀದರ್-‌ ಈಶ್ವರ್‌ ಸಿಂಗ್‌ ಠಾಕೂರ್‌, ಭಾಲ್ಕಿ- ಪ್ರಕಾಶ್‌ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ- ನಾಗರಾಜ್‌ ಛಬ್ಬಿ, ಹಾನಗಲ್-‌ ಶಿವರಾಜ್‌ ಸಜ್ಜನರ್‌, ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್‌, ಹರಪ್ಪನಹಳ್ಳಿ- ಕರುಣಾಕರ್‌ ರೆಡ್ಡಿ, ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್‌, ದಾವಣಗೆರೆ ದಕ್ಷಿಣ- ಅಜಯ್‌ ಕುಮಾರ್‌, ಮಾಯಕೊಂಡ (ಎಸ್‌ಸಿ)- ಬಸವರಾಜ್‌ ನಾಯ್ಕ್‌, ಚನ್ನಗಿರಿ- ಶಿವಕುಮಾರ್‌, ಬೈಂದೂರು- ಗುರುರಾಜ್‌ ಗಂಟಿಹೊಳೆ, ಮೂಡಿಗೆರೆ (ಎಸ್‌ಸಿ)- ದೀಪಕ್‌ ದೊಡ್ಡಯ್ಯ, ಗುಬ್ಬಿ- ಎಸ್‌ಡಿ ದಿಲೀಪ್‌ ಕುಮಾರ್‌, ಶಿಡ್ಲಘಟ್ಟ- ರಾಮಚಂದ್ರ ಗೌಡ, ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ಅಶ್ವಿನಿ ಸಂಪಂಗಿ, ಶ್ರವಣ ಬೆಳಗೊಳ- ಚಿದಾನಂದ, ಅರಸೀಕರೆ- ಜಿವಿ ಬಸವರಾಜ್‌ ಹಾಗೂ ಹೆಗಡಗಡ ದೇವನ ಕೋಟೆ (ಎಸ್‌ಟಿ)- ಕೃಷ್ಣ ನಾಯ್ಕ್‌. ಇದನ್ನೂ ಓದಿ: ಕೊನೆಗೂ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ – 189 ಮಂದಿಗೆ ಟಿಕೆಟ್

    ಯಾರಿಗೆ ಟಿಕೆಟ್‌ ಮಿಸ್?: ಹಾವೇರಿ ಶಾಸಕ ನೆಹರು ಓಲೇಕಾರ್‌, ಮಾಯಕೊಂಡ ಶಾಸಕ ಲಿಂಗಣ್ಣ, ಮೂಡಿಗೇರೆ ಶಾಸಕ ಕುಮಾರ್ ಸ್ವಾಮಿ, ಅರಸೀಕರೆ ಆಕಾಂಕ್ಷಿ ಎನ್ ಆರ್ ಸಂತೋಷ್‌, ಚನ್ನಗಿರಿ ಮಾಡಾಳ್, ಬೈಂದೂರು ಸುಕುಮಾರ್ ಶೆಟ್ಟಿ ಹೀಗೆ 2ನೇ ಪಟ್ಟಿಯಲ್ಲಿ ಐವರು ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌ ಆಗಿದೆ. ಈ ಮೂಲಕ ಇಲ್ಲಿವರೆಗೆ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಬೆಂಗಳೂರಿನ ಗೋವಿಂದ ರಾಜನಗರ, ಹೆಬ್ಬಾಳ, ಮಹದೇವಪುರ‌ ಈ ಮೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಒಟ್ಟಿನಲ್ಲಿ ಇನ್ನೂ 12 ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.

     

  • ನನಗೆ ಟಿಕೆಟ್ ಮಿಸ್ ಆಗಿದ್ರಿಂದ ಇಲ್ಲಿವರೆಗೆ ಬೆಂಬಲಿಗರು ಊಟನೂ ಮಾಡಿಲ್ಲ: ದೊಡ್ಡಪ್ಪಗೌಡ ನರಿಬೋಳ್

    ನನಗೆ ಟಿಕೆಟ್ ಮಿಸ್ ಆಗಿದ್ರಿಂದ ಇಲ್ಲಿವರೆಗೆ ಬೆಂಬಲಿಗರು ಊಟನೂ ಮಾಡಿಲ್ಲ: ದೊಡ್ಡಪ್ಪಗೌಡ ನರಿಬೋಳ್

    ಕಲಬುರಗಿ: ನನಗೆ ಟಿಕೆಟ್ ಮಿಸ್ ಆಗಿದ್ದರಿಂದ ಇಲ್ಲಿವರೆಗೆ ಬೆಂಬಲಿಗರು ಊಟ ಸಹ ಮಾಡಿಲ್ಲ. ಕಳೆದ ರಾತ್ರಿಯಿಂದ ಇಲ್ಲಿಯವರೆಗೆ ಬೆಂಬಲಿಗರು/ಅಭಿಮಾನಿಗಳು ಸ್ವಯಂಪ್ರೇರಿತವಾಗಿ ನೆರೆದಿದ್ದಾರೆ ಎಂದು ಜೇವರ್ಗಿ ಕ್ಷೇತ್ರ (Jevargi Constituency) ದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ (Doddappa Gowda Patil Naribol) ಹೇಳಿದ್ದಾರೆ.

    ಟಿಕೆಟ್ ಮಿಸ್ ಆಗಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೀವು ಮುನ್ನುಗ್ಗಿ ಗೌಡ್ರೆ. ನಾವು ನಿಮ್ ಜೊತೆ ಇದ್ದೀವಿ ಅಂತಾ ಭರವಸೆ ನೀಡಿದ್ದಾರೆ. 23 ವರ್ಷಗಳ ಕಾಲ ಜನಸಾಮಾನ್ಯರ ನ್ಯಾಯಾಕ್ಕಾಗಿ ನಮ್ಮ ಕುಟುಂಬ ಹೋರಾಡಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಕ್ಷೇತ್ರದ ಸೇವಕನಾಗಿ ಕೆಲಸ ಮಾಡುವ ಅವಕಾಶ ತಪ್ಪಿಸಲು ಕೆಲ ಕುತಂತ್ರಿಗಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಗೆ ಗುಡ್‍ಬೈ: 21 ವರ್ಷಗಳ ಕಾಲ ಜೇವರ್ಗಿ ಕ್ಷೇತ್ರದಲ್ಲಿ ಪಕ್ಷವನ್ನ ಕಟ್ಟಿ ಬೆಳೆಸಿದ್ದೇನೆ. ಕಾರ್ಯಕರ್ತರೊಡನೆ ಪಕ್ಷವನ್ನ ಬೇರುಮಟ್ಟದಿಂದ ಪಕ್ಷವನ್ನ ಕಟ್ಟಿದ್ದೇನೆ. ಕಾರ್ಯಕರ್ತರಿಗೆ ನೋವಾದಾಗ ನಾನು ಯಾಕೆ ಪಕ್ಷದಲ್ಲಿ ಇರಬೇಕು?. ಆದ್ದರಿಂದ ನಾನು ಬಿಜೆಪಿ (BJP) ಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಜನರು ತೋರಿಸಿದ ಮಾರ್ಗದಲ್ಲಿ ನಾನು ಮುನ್ನುಗ್ಗುತ್ತೇನೆ ಎಂದು ಸಾವಿರಾರು ಜನರ ಸಮ್ಮುಖದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ಎಸ್.ಅಂಗಾರ ನಿವೃತ್ತಿ ಘೋಷಣೆ

    ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಜೇವರ್ಗಿ ಕ್ಷೇತ್ರದಲ್ಲೂ ಸಹ ಬಿಜೆಪಿ ಬಂಡಾಯದ ಬಾವುಟ ಹಾರುತ್ತಿದ್ದು, ಜೇವರ್ಗಿ ಕ್ಷೇತ್ರಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ ಹೆಸರು ಘೋಷಣೆ ಬೆನ್ನಲ್ಲೆ ಭಿನ್ನಮತ ಸ್ಫೋಟವಾಗಿದೆ.

  • ಕೊನೆಗೂ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ – 189  ಮಂದಿಗೆ ಟಿಕೆಟ್

    ಕೊನೆಗೂ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ – 189 ಮಂದಿಗೆ ಟಿಕೆಟ್

    ನವದೆಹಲಿ: ಕೊನೆಗೆ ಸರಣಿ ಸಭೆಯ ಬಳಿಕ ಕರ್ನಾಟಕ ಚುನಾವಣೆಗೆ (Karnataka Election 2023) ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 35 ಕ್ಷೇತ್ರಗಳನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.

    ಕಳೆದ ಮೂರು ದಿನಗಳಿಂದ ಬಿಜೆಪಿ ಹೈಕಮಾಂಡ್ (BJP High Command) ಸರಣಿ ಸಭೆ ನಡೆಸುತ್ತಿತ್ತು. ಈ ಬಾರಿ ಬಿಜೆಪಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ನಾಯಕರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ.

    ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಹಾಗೂ  ಅರುಣ್‌ ಸಿಂಗ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಜಾಪ್ರಭುತ್ವ ಪಕ್ಷವಾಗಿ ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. 31 ಜಿಲ್ಲೆಯಲ್ಲೂ ಅಭಿಪ್ರಾಯ ಪಡೆದಿದೆ. 25,೦೦೦ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಜಿಲ್ಲಾ ನಾಯಕರಿಂದಲೂ ಅಭಿಪ್ರಾಯ ಪಡೆಯಲಾಗಿದೆ. ಎಲ್ಲ ರಾಷ್ಟ್ರೀಯ ಪ್ರಮುಖ ನಾಯಕರ ಇನ್ ಪುಟ್ ಪಡೆದುಕೊಂಡಿದೆ ಎಂದರು.

    189 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತಿದ್ದೇವೆ. ಯುವ, ಹೊಸತನ, ಹೊಸ ಯೋಚನೆ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆಯಾಗಿದೆ. ಹೊಸ ಪೀಳಿಗೆಯನ್ನು ವಿಧಾನಸಭೆ ಸಭೆಯಲ್ಲಿ ನೋಡುವ ಪ್ರಯತ್ನ ಬಿಜೆಪಿ ಮಾಡಿದೆ  ಎಂದು ಹೇಳಿದರು.

    ಸುರೇಶ್ ಕುಮಾರ್ ಹಾಗೂ ರವಿ ಸುಬ್ರಹ್ಮಣ್ಯ ಗೂ ಟಿಕೆಟ್ ನೀಡಲಾಗಿದೆ. 52 ಹೊಸ ಮುಖಗಳಿಗೆ ಮಣೆ ಹಾಕಿದ್ದು, ಹಳೆ ನಾಯಕರೊಂದಿಗೆ ಸಮನ್ವಯ ಮಾಡಿದೆ. ಓಬಿಸಿಗೆ 32, 30 SC, 16 ST, 9 ಡಾಕ್ಟರ್, ಓರ್ವ ನಿವೃತ ಐಎಎಸ್‌ ಅಧಿಕಾರಿ, 1 ನಿವೃತ್ತ ಐಪಿಎಸ್‌ ಐವರು ವಕೀಲರು, ಮೂರು ಶೈಕ್ಷಣಿಕ ಹಿನ್ನೆಲೆ, 8 ಮಂದಿ ಮಹಿಳೆಯರು ಟಿಕೆಟ್ ನೀಡಲಾಗಿದೆ.

    ಭಾನುವಾರ ಮೈಸೂರಿನ ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳಿದ ಬಳಿಕ ಪ್ರಧಾನಿ ಮೋದಿ, ಜೆಪಿ ನಡ್ಡಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಭೆ ನಡೆದಿತ್ತು. ಈ ವೇಳೆ ರಾಜ್ಯ ನಾಯಕರು ತಂದ ಸಮೀಕ್ಷಾ ವರದಿ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ನೋಡಿ ಮೋದಿ ಅಸಮಾಧಾನಗೊಂಡಿದ್ದರು. ಇದನ್ನೂ ಓದಿ: ರಾಜೀನಾಮೆ ವದಂತಿಗೆ ಜಗದೀಶ್ ಶೆಟ್ಟರ್ ಸ್ಪಷ್ಟನೆ

    ಹಲವು ನಾಯಕರು ಪುತ್ರರಿಗೆ ಟಿಕೆಟ್ ಕೇಳಿದ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಪುತ್ರರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ನಾಯಕರ ನಡೆಯನ್ನು ಕಂಡು ಅಸಮಾಧಾನಗೊಂಡ ಮೋದಿ (PM Narendra Modi), ಕುಟುಂಬ ರಾಜಕಾರಣ ವಿರುದ್ಧ ಮಾತನಾಡುವ ನಾವೇ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿದರೆ ಹೇಗೆ ಖಾರವಾಗಿ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ನೀವು ಮಾಡಿದ ಎಲ್ಲಾ ಸಮೀಕ್ಷೆಗಳು ಪ್ರಮುಖ ನಾಯಕರ ಪರವೇ ಯಾಕಿದೆ ಎಂದು ಕೇಳಿದ್ದರು.

    ಕುಟುಂಬದ ವ್ಯಕ್ತಿಗಳಿಗೆ ಯಾಕೆ ಟಿಕೆಟ್ ನೀಡಬೇಕು? ಆ ಕ್ಷೇತ್ರದಲ್ಲಿ ಬೇರೆ ಸಮರ್ಥ ವ್ಯಕ್ತಿಗಳು ಇಲ್ಲವೇ ಎಂದು ನಾಯಕರನ್ನು ಪ್ರಶ್ನಿಸಿದ್ದರು. ಅಂತಿಮವಾಗಿ ಪ್ರಮುಖ ನಾಯಕರು ಮಕ್ಕಳಿಗಾಗಿ ಕೇಳಿದ ಕ್ಷೇತ್ರಗಳು ಸೇರಿ ಹಲವು ಕ್ಷೇತ್ರಗಳನ್ನು ಮರುಪರಿಶೀಲಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ತನ್ನಿ ಎಂದು ಸೂಚನೆ ನೀಡಿದ್ದರು.

    ಮೋದಿ ಸೂಚನೆಯ ಬೆನ್ನಲ್ಲೇ ಸೋಮವಾರ ರಾಜ್ಯ ನಾಯಕರು ಇಡೀ ದಿನ ಕ್ಷೇತ್ರದಲ್ಲಿರುವ ಬೇರೆ ನಾಯಕರ ಹೆಸರು ಇರುವ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ಪಟ್ಟಿ ಹೈಕಮಾಂಡ್ ನಾಯಕರಿಗೆ ಮೆಚ್ಚುಗೆಯಾಗಿದ್ದು ಇಂದು ಮೊದಲ ಪಟ್ಟಿ ಬಿಡುಗಡೆಯಾಗಿದೆ.

  • ಉಡುಪಿಯಲ್ಲಿ ಐವರ ಪೈಕಿ ನಾಲ್ವರಿಗೆ ಕೊಕ್ ಸಾಧ್ಯತೆ – ಜಾತಿ ಲೆಕ್ಕಾಚಾರದಂತೆ ಟಿಕೆಟ್ ಹಂಚಿಕೆ

    ಉಡುಪಿಯಲ್ಲಿ ಐವರ ಪೈಕಿ ನಾಲ್ವರಿಗೆ ಕೊಕ್ ಸಾಧ್ಯತೆ – ಜಾತಿ ಲೆಕ್ಕಾಚಾರದಂತೆ ಟಿಕೆಟ್ ಹಂಚಿಕೆ

    ಉಡುಪಿ: ಕರ್ನಾಟಕ ಕುರುಕ್ಷೇತ್ರಕ್ಕೆ ಒಂದು ತಿಂಗಳು ಬಾಕಿ ಇದೆ. ಕಾಂಗ್ರೆಸ್ (Congress) ಎರಡು ಪಟ್ಟಿ ಬಿಡುಗಡೆ ಮಾಡಿದರೂ ಬಿಜೆಪಿ (BJP) ಯ ಪಟ್ಟಿ ಇನ್ನೂ ಹೊರಬಿದ್ದಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಯುಪಿ ಗುಜರಾತ್ ಮಾಡೆಲ್ (Gujrat Model) ಅನುಕರಣೆ ಮಾಡುತ್ತಾ ಎಂಬ ಚರ್ಚೆ ಶುರುವಾಗಿದೆ. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎಂಬುದು ಈಗ ದೊಡ್ಡ ಚರ್ಚೆಯ ವಿಚಾರವಾಗಿದೆ.

    ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ (Vidhanasabha Constituency) ದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಪಾರುಪತ್ಯವಿದೆ. ಈ ಬಾರಿ ಮತ್ತೆ ಕ್ಲೀನ್ ಸ್ವಿಪ್ ಮಾಡುವ ಇರಾದೆ ಬಿಜೆಪಿಯದ್ದು. ಆದರೆ ಇತ್ತೀಚೆಗೆ ಗೆಲ್ಲುವ ಕುದುರೆ ಹಾಲಾಡಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಇಡೀ ಜಿಲ್ಲೆಯ ಬಿಜೆಪಿ ಲೆಕ್ಕಾಚಾರ ತಲೆಕೆಳಗೆ ಮಾಡಿದೆ. ಉಡುಪಿ ಜಿಲ್ಲೆಯ 5 ಕ್ಷೇತ್ರಗಳಾದ ಕಾಪು, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಉಡುಪಿಯಲ್ಲಿ ಬಿಜೆಪಿ ಕಳೆದ 5 ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿದೆ. ಈ ಬಾರಿ ಐವರು ಶಾಸಕರಲ್ಲಿ ನಾಲ್ವರಿಗೆ ಕೊಕ್ ಕೊಟ್ಟು ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಹೊಸ ಲೆಕ್ಕಾಚಾರ ಹಾಕಿದಂತಿದೆ.

    ಯಾರ ಹೆಸರು ಫೈನಲ್..!?
    ಕ್ಷೇತ್ರ: ಉಡುಪಿ
    ಆಕಾಂಕ್ಷಿಗಳು: ಪ್ರಮೋದ್ ಮಧ್ವರಾಜ್/ಯಶ್‍ಪಾಲ್ ಸುವರ್ಣ
    ಸಮುದಾಯ: ಮೊಗವೀರ (ಹಾಲಿ ಶಾಸಕ ರಘುಪತಿ ಭಟ್)

    ಕ್ಷೇತ್ರ : ಕುಂದಾಪುರ
    ಆಕಾಂಕ್ಷಿ : ಕಿರಣ್ ಕುಮಾರ್ ಕೊಡ್ಗಿ
    ಸಮುದಾಯ: ಬ್ರಾಹ್ಮಣ (ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ್‍ಶೆಟ್ಟಿ – ಕಿರಣ್ ಹಾಲಾಡಿ ಆಪ್ತ)

    ಕ್ಷೇತ್ರ: ಕಾಪು
    ಆಕಾಂಕ್ಷಿ: ಗುರ್ಮೆ ಸುರೇಶ್ ಶೆಟ್ಟಿ
    ಸಮುದಾಯ: ಬಂಟ (ಹಾಲಿ ಶಾಸಕ ಲಾಲಾಜಿ ಮೆಂಡನ್)

    ಕ್ಷೇತ್ರ: ಬೈಂದೂರು
    ಆಕಾಂಕ್ಷಿಗಳು: ಸುಕುಮಾರ ಶೆಟ್ಟಿ/ ಗುರುರಾಜ್ ಗಂಟಿಹೊಳೆ
    ಸಮುದಾಯ: ಬಂಟ (ಸುಕುಮಾರ್ ಶೆಟ್ಟಿ ಹಾಲಿ ಶಾಸಕ- ಯಡಿಯೂರಪ್ಪ ಆಪ್ತ)

    ಕ್ಷೇತ್ರ: ಕಾರ್ಕಳ
    ಆಕಾಂಕ್ಷಿ: ಸುನೀಲ್ ಕುಮಾರ್
    ಸಮುದಾಯ: ಬಿಲ್ಲವ/ ಪೂಜಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

    ಒಟ್ಟಿನಲ್ಲಿ ಹಾಲಾಡಿ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಅವರ ಆಪ್ತರಾದ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವ ವಿಚಾರದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಗೆ ಕಾರಣವಾಗಿದೆ. ಈ ಬಾರಿ ಇಬ್ಬರು ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಾರೋ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇನ್ನುಳಿದಂತೆ ಮೊಗವೀರ ಬಿಲ್ಲವ ಮತ್ತು ಬಂಟ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಅನಿವಾರ್ಯತೆ ಇದೆ. ಇದನ್ನೂ ಓದಿ: ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಮೊಮ್ಮಗ ಶಶಿಭೂಷಣ್ ಹೆಗಡೆ ಬಿಜೆಪಿ ಸೇರ್ಪಡೆ

    ಉಡುಪಿ ವಿಧಾನಸಭಾ ಕ್ಷೇತ್ರ (Udupi Vidhanasabha Constituency) ದ ಹಾಲಿ ಶಾಸಕ ರಘುಪತಿ ಭಟ್‍ಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಾಕಷ್ಟು ವದಂತಿಗಳು ಕೇಳಿಬಂದಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಘುಪತಿ ಭಟ್ (Raghupathi Bhat) ಅವರಿಗೆ ಈ ಬಾರಿ ಟಿಕೆಟ್ ನೀಡುವುದಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ, ಉಡುಪಿಯಲ್ಲಿ ಹೊಸ ಪ್ರಯೋಗಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು.. ಏನಾಗಲಿದೆ ಎಂಬುದು ಕಾದುನೋಡಬೇಕಿದೆ.