ಬೆಂಗಳೂರು: ವಿಧಾನಸಭೆಯಲ್ಲಿಂದು ಸಿ.ಡಿ ಪ್ರಕರಣ ಸದ್ದು ಮಾಡುವ ಸಾಧ್ಯತೆ ಇದೆ. ಸಿ.ಡಿ ವಿಚಾರವಾಗಿ ಚರ್ಚೆ ನಡೆಸುವ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ನಿಲುವಳಿ ಸೂಚನೆ ಮಂಡಿಸಲಿದ್ದಾರೆ.
ಸಿ.ಡಿ ಪ್ರಕರಣ ಹಾಗೂ ಆರು ಸಚಿವರ ಕೋರ್ಟ್ ತಡೆ ಸಂಬಂಧ ನಿಯಮ 60 ಅಡಿಯಲ್ಲಿ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಒತ್ತಾಯಿಸಲಿದ್ದಾರೆ. ಈ ಸಂಬಂಧ ಈಗಾಗಲೇ ವಿಧಾನಸಭೆಯ ಕಾರ್ಯದರ್ಶಿಗೆ ಸೂಚನಾ ಪತ್ರವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಎಸ್‍ಐಟಿ ತನಿಖೆ ಪಾರದರ್ಶಕವಾಗಿಲ್ಲ. ಸಂತ್ರಸ್ತೆ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಮಾಡಿದ ಮನವಿಯನ್ನ ಆಧರಿಸಿ ಎಫ್‍ಐಆರ್ ದಾಖಲಾಗಿಲ್ಲ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆರು ಸಚಿವರ ಕೋರ್ಟ್ ವಿಚಾರ ರಾಜ್ಯದ ಮಾನಮರ್ಯಾದೆ ಹರಾಜು ಹಾಕಿದೆ ಎಂದು ನಿಲುವಳಿ ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಚರ್ಚೆಗೆ ಬಂದರೆ ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗೋದು ಫಿಕ್ಸ್. ನಿಲುವಳಿ ಸೂಚನೆ ಮೂಲಕ ಸುದೀರ್ಘ ಚರ್ಚೆಯನ್ನು ನಡೆಸಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡೋದು ಕಾಂಗ್ರೆಸ್ ಪ್ಲಾನ್ ಆಗಿದೆ.
ಬೆಂಗಳೂರು: ಕೊರೊನಾ ವೈರಸ್ ಈಗ ದೇಶದಲ್ಲೆಡೆ ಭೀತಿ ತಂದಿದೆ. ರಾಜ್ಯದಲ್ಲಿದ್ದ ಟೆಕ್ಕಿ ಒಬ್ಬರಿಗೂ ಹರಡಿದ ಸುದ್ದಿ ಎಲ್ಲರನ್ನೂ ಆತಂಕಗೊಳಿಸಿದೆ. ಈ ಬೆನ್ನಲ್ಲೇ ಕೊರೊನಾ ವೈರಸ್ ಬಗ್ಗೆ ಶಾಸಕರಿಗೆ ಭಯ ಶುರುವಾಗಿತ್ತು. ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರು ಮೊಗಸಾಲೆಗಳಲ್ಲಿ ಕೊರೊನಾದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದ್ದರು. ಕೆಲವು ಶಾಸಕರಂತೂ ನಮಗೆ ಕೊರೊನಾ ಬಂದ್ರೆ ಅದೇ ಓಡಿ ಹೋಗುತ್ತೆ ಅಂತಾ ಹಾಸ್ಯ ಮಾಡುತ್ತಿದ್ದ ದೃಶ್ಯಗಳು ಕಂಡುಬಂತು.
ಅಂದಹಾಗೆ ಕಲಾಪ ಆರಂಭಕ್ಕೂ ಮುನ್ನ ಆಡಳಿತ ಪಕ್ಷದ ಸದಸ್ಯರೇ ಹೆಚ್ಚು ಚರ್ಚೆ ಮಾಡುತ್ತಿದ್ದರು. ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕೊರೊನಾ ಬಗ್ಗೆ ಬಿಜೆಪಿ ಶಾಸಕರು ಚರ್ಚಿಸುತ್ತಿದ್ದರು. ಪರಿಸ್ಥಿತಿ ಹೀಗೇ ಮುಂದುವರಿದರೆ ಶಾಸಕರು, ಮಾಧ್ಯಮದವರು ಹಾಗೂ ಸರ್ಕಾರಿ ಸಿಬ್ಬಂದಿ ಕೂಡ ಮಾಸ್ಕ್ ಹಾಕಿಕೊಂಡು ಬರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆಗಮಿಸಿದರು. ಡಾಕ್ಟರ್ ಇಬ್ಬರು, ಸಚಿವರು ಕೂಡ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಅಂತಾ ಬಿಜೆಪಿ ಶಾಸಕರು ಸಲಹೆ ನೀಡಿದ್ರು. ಸಿಎಂ ಯಡಿಯೂರಪ್ಪ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ, ಸಭೆ ನಡೆಸ್ತಾರೆ ಅಂತಾ ಡಿಸಿಎಂ ಭರವಸೆ ನೀಡಿ ತೆರಳಿದರು.
ಇನ್ನು ಮೊಗಸಾಲೆಯಲ್ಲಿ ಮಾಧ್ಯಮದವರನ್ನ ಮಾತನಾಡಿಸುತ್ತಿದ್ದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಕೈ ಕುಲುಕುವಾಗ ಹಾಸ್ಯ ಮಾಡಿದ್ರು. ಸರ್, ಈಗ ಹ್ಯಾಂಡ್ ಶೇಕ್ ಕೂಡ ಮಾಡಬಾರದಂತೆ, ಕೊರೊನಾ ಭಯ ಅಂತಾ ನಕ್ಕರು. ಅಷ್ಟೇ ಅಲ್ಲ ಕೊರೊನಾ ನಮ್ ಶಾಸಕರ ಇರುವ ಕಡೆ ಬರಲ್ಲ ಬಿಡಿ, ಎಲ್ಲವನ್ನೂ ಅರಗಿಸಿಕೊಳ್ಳವರಿಗೆ ಕೊರೊನಾ ಯಾವ ಲೆಕ್ಕ, ಅದೇ ಓಡಿ ಹೋಗುತ್ತೆ ಅಂತಾ ನಗುತ್ತಿದ್ದರು.
ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ಮುಖ್ಯಮಂತ್ರಿಗಳು ವಿಶ್ವಾಸಮತಯಾಚಿಸಲಿದ್ದು, ಅದಕ್ಕೂ ಮುನ್ನವೇ ಕಾಂಗ್ರೆಸ್ ನಾಯಕರು ಕೈ ಚೆಲ್ಲಿ ಕುಳಿತಿದ್ದಾರೆ.
ಮುಂಬೈಗೆ ಹೋಗಿರೋ ಅತೃಪ್ತರನ್ನು ಮನವೊಲಿಸಿ ಕರೆತರೋದು ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೋಗಿರೋರು ಬರಲ್ಲ. ಇದ್ದವರು ಹೋಗಬೇಡ್ರಪ್ಪಾ ಎಂದು ರೆಸಾರ್ಟ್ ನಲ್ಲಿರೋ ಕಾಂಗ್ರೆಸ್ ಶಾಸಕರಿಗೆ ಹಿರಿಯ ನಾಯಕರು ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಾಂಗ್ರೆಸ್ ನಾಯಕರು ಮತ್ತು ಶಾಸಕರಿಗೆ ಈ ಸರ್ಕಾರ ಉಳಿಯೋದು ಕಷ್ಟ ಅನ್ನೋದು ಈಗಾಗಲೇ ಗೊತ್ತಾಗಿದೆ. ಆದರೆ ಜೆಡಿಎಸ್ ನಾಯಕರು ಮಾತ್ರ ಕೊನೆ ಕ್ಷಣದ ಮ್ಯಾಜಿಕ್ ನಿರೀಕ್ಷೆಯಲ್ಲಿದ್ದಾರೆ. ಅತೃಪ್ತರು ವಾಪಸ್ ಬರ್ತಾರೆ, ಸರ್ಕಾರ ಉಳಿಯುತ್ತದೆ ಅನ್ನೋ ನಂಬಿಕೆಯಲ್ಲಿದ್ದಾರೆ. ಇತ್ತ ನಿನ್ನೆ ರಾತ್ರಿ ಜೆಡಿಎಸ್ ಶಾಸಕರು ತಂಗಿರೋ ದೇವನಹಳ್ಳಿಯ ಖಾಸಗಿ ರೆಸಾರ್ಟ್ ಗೆ ಸಿಎಂ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಕಳೆದ 8 ದಿನಗಳಿಂದ ಜೆಡಿಎಸ್ ಶಾಸಕರು ಇದೇ ರೆಸಾರ್ಟ್ ನಲ್ಲಿ ತಂಗಿದ್ದು, ಸಿಎಂ ಐದು ಬಾರಿ ಭೇಟಿ ನೀಡಿದ್ದಾರೆ. ಈ ನಡುವೆ ಮತ್ತಷ್ಟು ಶಾಸಕರು ಕೈಕೊಡುವ ಭೀತಿಯಲ್ಲಿರುವ ದೋಸ್ತಿಗಳು, ತಮ್ಮ ತಮ್ಮ ಶಾಸಕರು ಇರುವ ರೆಸಾರ್ಟ್ ಗಳಿಗೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಸ್ವತಃ ಗೃಹ ಸಚಿವ ಎಂ ಬಿ ಪಾಟೀಲ್, ರೆಸಾರ್ಟ್ ಗಳಿಗೆ ಭೇಟಿ ನೀಡಿ ಪೊಲೀಸ್ ಭದ್ರತೆ ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಮೈತ್ರಿ ಸರ್ಕಾರದ ಅಳಿವು, ಉಳಿವಿನ ಪ್ರಶೆಯಾಗಿರೋ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಸಂಬಂಧಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ನೀಡಲಿದೆ. ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.
ಬೆಂಗಳೂರು: ವಿಧಾಸಭೆಯ ಮೊಗಸಾಲೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಘಟನೆಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಎಸ್ ಮೂರ್ತಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಧಿವೇಶನ ಇಲ್ಲದ ಸಂದರ್ಭದಲ್ಲಿ ಮೊಗಸಾಲೆಯನ್ನು ನೌಕರರು ಬಳಸಿಕೊಳ್ಳುತ್ತಾರೆ. ತಿಳುವಳಿಕೆ ಇಲ್ಲದೇ ಅವರು ಅಲ್ಲಿ ಕೇಕ್ ತಂದು ಇಟ್ಟಿದ್ದರು. ಅಲ್ಲದೇ ಅದಾಗಲೇ ಸುಮಾರು 200 ಮಂದಿ ನೌಕರರು ಸೇರಿದ್ದು, ಭಾವನಾತ್ಮಕವಾಗಿ ನಾನು ಆಚರಿಸಿಕೊಂಡು ತಪ್ಪು ಮಾಡಿದೆ ಅಂತ ಹೇಳಿದ್ರು.
30 ವರ್ಷದಿಂದ ಇಲ್ಲೇ ದುಡಿತಾ ಇದ್ದೀನಿ. ಅವರು ಕೂಡ ನನ್ನ ಜೊತೆ ಬಹಳಷ್ಟು ಕಾಲ ದುಡಿದಿದ್ದಾರೆ. ನನ್ನ ಕರ್ಮ ಭೂಮಿಯಾಗಿರೋ ವಿಧಾನಸಭೆಗೆ ನಾನು ನನ್ನ ತಾಯಿಯ ಸ್ಥಾನ ನೀಡಿದ್ದೇನೆ. ಭಾವನಾತ್ಮಕವಾಗಿ ನಾನು ಅಲ್ಲಿಗೆ ಹೋದೆ ಅಂತ ಅವರು ಹೇಳಿದ್ರು.
ವಿಧಾನಸಭೆಯ ಮೊಗಸಾಲೆಯಲ್ಲಿ ಬರ್ತ್ ಡೇ ಆಚರಣೆ ಬೇಡ ಅಂತ ಹೇಳದ್ದು ನನ್ನಿಂದ ತಪ್ಪಾಗಿದೆ. ಇಷ್ಟು ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು ಪವಿತ್ರ ಸ್ಥಳದ ಬಗ್ಗೆ ಜ್ಞಾನ, ಮಾಹಿತಿ ಹೊಂದಿದ್ದು, ತಿಳಿದು ತಪ್ಪು ಮಾಡಿದೆ. ಆದ್ರೆ ನೌಕರರು ಅಲ್ಲಿ ನೆರೆದಿದ್ದನ್ನು ಕಂಡು ಭಾವನಾತ್ಮಕವಾಗಿ ನಾನು ಅದೇ ಜಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡೆ. 10 ನಿಮಿಷ ಅವರ ಜೊತೆ ಇದ್ದು ನಾನು ಈ ಕಡೆ ಬಂದಿದ್ದೇನೆ. ಏನೇ ಆಗಲಿ ನಾನು ಆ ಸ್ಥಳದಲ್ಲಿ ಇಂತಹ ತಪ್ಪು ಮಾಡಬಾರದು ಅಂತ ತನ್ನ ತಪ್ಪನ್ನು ಒಪ್ಪಿಕೊಂಡರು.
ಇದೇ ವೇಳೆ ತಾರಾ ಅವರು ಕೂಡ ಪಬ್ಲಿಕ್ ಟಿವಿ ಜೊತೆ ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ. ಯಾವುದೋ ಒಂದು ಕೆಲಸದ ನಿಮಿತ್ತ ನಾನು ವಿಧಾನಸಭೆಗೆ ತೆರಳಿದ್ದೆ. ಈ ವೇಳೆ ಮೂರ್ತಿಯವರ ಹುಟ್ಟು ಹಬ್ಬ ಅಂತ ಹೇಳಿದ್ರು. ಹೀಗಾಗಿ ನಾನು ಅವರಿಗೆ ವಿಶ್ ಮಾತಾನಾಡುತ್ತಿದ್ದೆ. ಇದೇ ಸಂದರ್ಭದಲ್ಲಿ ನೌಕರರೆಲ್ಲರೂ ಅಲ್ಲಿಗೆ ಬಂದು ಮೂರ್ತಿಯವರನ್ನು ಕರೆದ್ರು. ಅಲ್ಲದೇ ನನ್ನನ್ನೂ ಕೂಡ ಬರುವಂತೆ ಪ್ರೀತಿಯಿಂದ ಕೇಳಿಕೊಂಡರು. ನಾನೇನು ಕೇಕ್ ತಗೆದುಕೊಂಡು ಹೋಗಿರಲಿಲ್ಲ. ಅಲ್ಲದೇ ನನಗೂ ಅದಕ್ಕೂ ಸಂಬಂಧವಿಲ್ಲ. ಬನ್ನಿ ಅಂತ ಕರೆದಾಗ ಹೋದೆ ಅಷ್ಟೆ ಅಂತ ಅವರು ಹೇಳಿದ್ರು.
ಏನಿದು ಘಟನೆ?:
ಜುಲೈ 17ರಂದು ವಿಧಾನಸಭೆಯ ಮೊಗಸಾಲೆಯಲ್ಲಿಯೇ ಕಾರ್ಯದರ್ಶಿ ಮೂರ್ತಿಯವರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಚಿತ್ರ ನಟಿ ಕಮ್ ಮೇಲ್ಮನೆ ಸದಸ್ಯೆ ತಾರಾ ಸೇರಿ ಹಲವರು ಭಾಗಿಯಾಗಿದ್ದರು. ಪಾರ್ಟಿಯಲ್ಲಿದ್ದ ಅರ್ಧದಷ್ಟು ಮಂದಿ ವಿಧಾನಸೌಧ ಸಿಬ್ಬಂದಿಯೇ ಅಲ್ಲ. ಪಾಸ್ ಇಲ್ಲದೇ ಇವರೆಲ್ಲ ನಿಬರ್ಂಧಿತ ಸ್ಥಳಕ್ಕೆ ಹೇಗೆ ಪ್ರವೇಶ ಪಡೆದ್ರು? ವಿಧಾನಸಭೆ ಸಭಾಂಗಣದ ಮೊಗಸಾಲೆಯಲ್ಲಿ ಬರ್ತ್ ಡೇ ಪಾರ್ಟಿ ಮಾಡಬಹುದಾ? ನಿರ್ಬಂಧಿತ ಸ್ಥಳದಲ್ಲಿ ಬರ್ತ್ ಡೇ ಪಾರ್ಟಿಗೆ ಅನುಮತಿ ಕೊಟ್ಟಿದ್ದು ಯಾರು? ಎಲ್ಲರಿಗೂ ಇದೇ ರೀತಿ ಪಾರ್ಟಿಗೆ ಅವಕಾಶ ಕೊಡುತ್ತೀರಾ? ಅನ್ನೋ ಹಲವಾರು ಪ್ರಶ್ನೆಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿತ್ತು.
ಬೆಂಗಳೂರು: ವಿಧಾನಸಭೆಯ ವಿಪಕ್ಷ ನಾಯಕರ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ಸಿ.ಎಂ.ಉದಾಸಿ ಅವರ ಜತೆ ಕಾಂಗ್ರೆಸ್ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತುಕತೆ ನಡೆಸುತ್ತಿದ್ದಿದ್ದು ಇಂದು ಕಂಡುಬಂತು.
ಶಾಸಕರು ಮಾತನಾಡುತ್ತಿರುವುದನ್ನು ನೋಡಿದ ಬಿಎಸ್ ಯಡಿಯೂರಪ್ಪ ಅವರು ನಗುತ್ತಲೇ, “ಏನ್ರಪ್ಪಾ, ಇಬ್ಬರು ಸೇರಿ ಅವರನ್ನ ಕೂರಿಸಿಕೊಂಡು ಮಾತನಾಡುತ್ತಿದ್ದಿರಾ. ಏನು ವಿಷಯ” ಎಂದು ಕೇಳಿದರು.
ಬಿ.ಎಸ್.ಯಡಿಯೂರಪ್ಪ ಅವರ ಮಧ್ಯ ಪ್ರವೇಶದಿಂದ ಕಸಿವಿಸಿಗೊಂಡ ಶಾಸಕರು ಅಲ್ಲಿಂದ ತೆರಳಿದರು.
ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಬಹಳ ಮುಖ್ಯ ಪಾತ್ರವಹಿಸಿದ್ದ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಹಾಡಿ ಹೊಗಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸದಸ್ಯರು ಅಭಿನಂದನೆ ಸಲ್ಲಿಸಿದ ಬಳಿಕ ಎಚ್‍ಡಿ ಕುಮಾರಸ್ವಾಮಿ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದರು. ಇದಾದ ಬಳಿಕ ಬಿಎಸ್‍ವೈ ತಮ್ಮ ಮಾತಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಡಿಕೆ ಶಿವಕುಮಾರ್ ಅವರ ಕೆಲಸವನ್ನು ಹೊಗಳಿ ಅನುಕಂಪ ವ್ಯಕ್ತಪಡಿಸಿದರು.
ಸ್ವಾಮಿ.. ಶಿವಕುಮಾರ್ ಅವರೇ ನೀವು ನಾಳೆ ಪಶ್ಚಾತ್ತಾಪ ಪಡುವವರಿದ್ದೀರಿ. ಯಾವುದು ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ, ಎಲ್ಲರನ್ನು ರಕ್ಷಣೆ ಮಾಡಿ, ಈ ನಾಡಿನ ಜನರ ನಂಬಿಕೆ, ವಿಶ್ವಾಸ, ದ್ರೋಹ ಮಾಡಿದಂತಹ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಕುಳಿತುಕೊಳ್ಳಲು ರಕ್ಷಣೆ ಕೊಟ್ಟಿದ್ದೀರಿ. ಶಿವಕುಮಾರ್ ಅವರೇ ನಾನಿವತ್ತು ಯಾವುದೇ ಮಾತನ್ನು ಹೇಳುವುದಿಲ್ಲ. ಕಾಲವೇ ಎಲ್ಲವನ್ನೂ ಹೇಳುತ್ತೆ. ಮುಳುಗೋ ದೋಣಿಯಲ್ಲಿ ನೀವು ಈಗ ಕುಳಿತ್ತಿದ್ದೀರಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನನಗೂ ಯಡಿಯೂರಪ್ಪ ಅವರಿಗೂ ಸಂಬಂಧ ಪ್ರೀತಿ, ವಿಶ್ವಾಸ ಇರಬಹುದು. ಆದ್ರೆ ನಾನು ಖಳನಾಯಕ ಅನ್ನಿಸಿಕೊಳ್ಳಲು ತಯಾರಿಲ್ಲ. ಪಕ್ಷ ಹಾಗೂ ರಾಹುಲ್ ಗಾಂಧಿಯವರ ಮಾರ್ಗದರ್ಶನದಂತೆ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಅಷ್ಟೇ ಅಂತ ಅವರು ಹೇಳಿದ್ರು. ಈ ವೇಳೆ ಯಡಿಯೂರಪ್ಪನವರು ಸರಿ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ರು.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ, ಒನ್ ಮ್ಯಾನ್ ಫುಡ್ ಈಸ್ ಅನದರ್ ಮ್ಯಾನ್ಸ್ ಪಾಯಿಸನ್. ಅವರಿಗೆ ವಿಲನ್ ಆದ್ರೆ ಕೆಲವರಿಗೆ ನೀವು ಹೀರೋ ಆಗಿದ್ದೀರಿ. ಆದ್ರೆ ಎಲ್ಲರಿಗೂ ಹೀರೋ ಆಗಲು ಸಾಧ್ಯವಿಲ್ಲ ಅಂತ ಹಾಸ್ಯ ಚಟಾಕಿ ಹಾರಿಸಿದ್ರು. ಸ್ಪೀಕರ್ ಅವರ ಈ ಮಾತಿಗೆ ಇಡೀ ಕಲಾಪವೇ ನಗೆಗಡಲಲ್ಲಿ ತೇಲಿತು.
ಮತ್ತೆ ಮಾತು ಮುಂದುವರಿಸಿದ ಯಡಿಯೂರಪ್ಪ ಅವರು, ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ನಿಮ್ಮನ್ನು ನಾನು ಖಳನಾಯಕ ಅಂತ ಹೇಳ್ತೀನಾ? ಅಷ್ಟೇ ಅಲ್ಲದೇ ಅಲ್ಲಿದ್ದರೆ ನೀವು ಮುಖ್ಯಮಂತ್ರಿ ಆಗ್ತೀರಾ ಎಂದು ಡಿಕೆಶಿಯನ್ನು ಪ್ರಶ್ನಿಸಿದರು.
ಇಲ್ಲಿ ಕೇಳಿ ಶಿವಕುಮಾರ್ ಅವರೇ, ನಿಮ್ಮನ್ನು ಇನ್ನು ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಅನ್ನೋ ಹೆಸರನ್ನ ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದಲ್ಲಿ ನನ್ನನ್ನು ಯಡಿಯೂರಪ್ಪ ಅಂತ ಕರಿಯಬೇಡಿ ಅಂತ ಸವಾಲೆಸೆದು ತಮ್ಮ ಮಾತನ್ನು ಮುಂದುವರಿಸಿದರು. ಬಿಎಸ್‍ವೈ ಈ ರೀತಿಯಾಗಿ ಮಾತನಾಡುತ್ತಿದ್ದರೆ ಡಿಕೆ ಶಿವಕುಮಾರ್ ನಗುಮುಖದಲ್ಲೇ ಭಾಷಣವನ್ನು ಕೇಳುತ್ತಿದ್ದರು.
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಯಿಂದಲೇ ಆರಂಭಿಕ ಪ್ರವಾಸ ಹಮ್ಮಿಕೊಂಡಿದ್ದಾರೆ.
ಇಂದು ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಂಗಳವಾರ ಕುಕ್ಕೆಯಲ್ಲಿ ಬೆಳಗ್ಗೆ 7 ಗಂಟೆಗೆ ಅಮಿತ್ ಶಾ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಅಮಿತ್ ಶಾ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆ. ಬಳಿಕ ಇತ್ತೀಚೆಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸುರತ್ಕಲ್‍ನ ಕಾಟಿಪಳ್ಳದ ದೀಪಕ್ ರಾವ್ ಮನೆಗೆ ಭೇಟಿ ನೀಡಲಿದ್ದಾರೆ.
ಮೈಸೂರಿನಲ್ಲಿ ಮೋದಿ: ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಹಮ್ ಸಫರ್ ರೈಲು ಮತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ್ದಾರೆ. ಭಾನುವಾರ ತಡರಾತ್ರಿ 11 ಗಂಟೆಗೆ ಮೋದಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಶಿಷ್ಠಾಚಾರದ ಅನ್ವಯ ಸ್ವಾಗತ ಕೋರಿದ್ರು. ರಾಜ್ಯಪಾಲ ವಜುಭಾಯಿ ವಾಲಾ ಕೂಡ ಮೋದಿಗೆ ಸ್ವಾಗತ ಕೋರಿದ್ರು. ಬಳಿಕ ಮೋದಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ರು.
ಮೋದಿ ಆಗಮನಕ್ಕೆ ಕಾಯುತ್ತಿದ್ದ ನೂರಾರು ಅಭಿಮಾನಿಗಳು ಮೋದಿ ಆಗಮಿಸ್ತಿದ್ದಂತೆ ಜಯಘೋಷ ಕೂಗಿದರು. ಮೋದಿ ವಿಮಾನ ನಿಲ್ದಾಣದಿಂದ ನಿರ್ಗಮಿಸ್ತಿದ್ದಂತೆ ಸಿಎಂ ಕೂಡ ತೆರಳಲು ವಿಮಾನ ನಿಲ್ದಾಣದಿಂದ ಹೊರ ಬಂದರು. ಆಗಲೂ ಎಲ್ಲರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.
ಬೆಂಗಳೂರು: ಕೊನೆಗೂ ಮುಖ್ಯಮಂತ್ರಿಗಳು ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದ್ದು, ಇದೀಗ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ನೀವು ವಾಣಿಜ್ಯ ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಸಿಎಂ ಪರೋಕ್ಷವಾಗಿಯೇ ಚಾಲೆಂಜ್ ಹಾಕಿದ್ದಾರೆ.
ರೈತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ಸಾಲವನ್ನು ಮನ್ನಾ ಮಾಡಲಾಗುವುದು. 2017ರ ಜೂನ್ 20ಕ್ಕೆ ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
On behalf of our farmers, I request @PMOIndia to consider the acute drought & waive farmer loans from commercial banks. #EmpoweringKtaka