Tag: vidhana sabha election

  • ಕೇರಳದಲ್ಲಿ ಡಿಸಿಎಂ ಫುಲ್ ಬ್ಯುಸಿ – ಸರಣಿ ಸಮಾಲೋಚನೆ ಜೊತೆಗೆ ಬಹಿರಂಗ ಸಭೆ, ರೋಡ್ ಶೋ

    ಕೇರಳದಲ್ಲಿ ಡಿಸಿಎಂ ಫುಲ್ ಬ್ಯುಸಿ – ಸರಣಿ ಸಮಾಲೋಚನೆ ಜೊತೆಗೆ ಬಹಿರಂಗ ಸಭೆ, ರೋಡ್ ಶೋ

    – ಬಲಿಷ್ಠ ಕೇರಳ ನಿರ್ಮಾಣಕ್ಕೆ ಬಿಜೆಪಿಗೆ ಮತಹಾಕಿ ಎಂದ ಅಶ್ವಥ್ ನಾರಾಯಣ್

    ತಿರುವನಂತಪುರ: ಮುಂಬರುವ ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಕರಾರುವಕ್ಕಾದ ರಣವ್ಯೂಹವನ್ನೇ ರಚನೆ ಮಾಡುತ್ತಿದ್ದು, ರಾಜ್ಯ ಬಿಜೆಪಿ ಸಹ ಪ್ರಭಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮೂರು ದಿನಗಳಿಂದ ಆ ರಾಜ್ಯದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

    ಮೂರನೇ ದಿನದಂದು ಬೆಳಗ್ಗೆಯಿಂದಲೇ ತಿರುವನಂತಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ ಡಿಸಿಎಂ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶನ್, ಚುನಾವಣಾ ನಿರ್ವಹಣಾ ಉಸ್ತುವಾರಿ ಜಾರ್ಜ್ ಕುರಿಯನ್ ಮತ್ತಿತರರ ಜತೆ ಚುನಾವಣಾ ವ್ಯೂಹದ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಸಿದರು.

    ರಾಜಧಾನಿ ತಿರುವನಂತಪುರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಅಗತ್ಯವಾದ ಕಾರ್ಯತಂತ್ರ ರೂಪಿಸಲು ಡಾ.ಅಶ್ವಥ್ ನಾರಾಯಣ್ ಹೆಚ್ಚು ಒತ್ತುಕೊಟ್ಟು ಮಾಹಿತಿ ಸಂಗ್ರಹ ಮಾಡಿದರು.

    ಈಗಾಗಲೇ ಪಕ್ಷದ ಎಲ್ಲ ಅಭ್ಯರ್ಥಿಗಳು, ಅವರ ಕ್ಷೇತ್ರದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿರುವ ಡಿಸಿಎಂ, ಅದಕ್ಕೆ ಯುಕ್ತವಾದ ಕಾರ್ಯತಂತ್ರವನ್ನು ರೂಪಿಸಿದ್ದು ಆ ಬಗ್ಗೆ ರಾಜ್ಯ ನಾಯಕರ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಬಹಿರಂಗ ಪ್ರಚಾರದ ಕೊನೆ ದಿನದವರೆಗೂ ನಡೆಸಬೇಕಾದ ಪ್ರಚಾರ ಸಭೆಗಳು, ರೋಡ್ ಶೋಗಳ ಬಗ್ಗೆ ಪ್ಲ್ಯಾನ್ ಮಾಡಲಾಯಿತು.

    ಬಹಿರಂಗ ಪ್ರಚಾರದ ನಂತರ ಮನೆ ಮನೆಯ ಪ್ರಚಾರದ ಜೊತೆಗೆ, ಆಧುನಿಕ ತಂತ್ರಜ್ಞಾನದ ನೆರವಿನಿಂದ ಜನರಿಗೆ ಮತ್ತಷ್ಟು ಹತ್ತಿರವಾಗುವುದು ಹಾಗೂ ಪಕ್ಷದ ವಿಚಾರಗಳನ್ನು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡಿಸುವುದನ್ನು ಮುಖ್ಯವಾಗಿ ಮಾಡಬೇಕು ಎಂದು ನಾಯಕರಿಗೆ ಡಿಸಿಎಂ ಅವರು ಸೂಚಿಸಿದರು.

    ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಇಟ್ಟುಕೊಂಡು ಎಲ್‍ಡಿಎಫ್, ಯುಡಿಎಫ್ ಕೂಟಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಬಲವಾದ ತಿರುಗೇಟು ಕೊಡಬೇಕು. ಪ್ರಚಾರ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ನಾಯಕರಿಗೆ ಸಲಹೆ ನೀಡಿದರು.

    ಬಹಿರಂಗ ಸಭೆ, ರೋಡ್ ಶೋ:
    ಸರಣಿ ಸಭೆಗಳ ನಡುವೆಯೂ ಡಾ.ಅಶ್ವಥ್ ನಾರಾಯಣ್ ಅವರು ತಿರುವನಂತಪುರದ ವಿವಿಧೆಡೆ ಬಹಿರಂಗ ಪ್ರಚಾರ ನಡೆಸಿದರು. ನೇಮಮ್ ವಿಧಾನಸಭೆ ಕ್ಷೇತ್ರದಲ್ಲಿ ಪೂಜಾಪುರದ ಸರಸ್ವತಿ ಮಂದಿರದಲ್ಲಿ ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರ್ ಅವರ ಪರ ಅವರು ಬಿರುಸಿನ ಪ್ರಚಾರ ನಡೆಸಿದರು.

    ಹಾಗೆಯೇ ತಿರುವನಂತಪುರದ ಕಾಹಕುಟ್ಟಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷದ ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ ಅವರ ಪರ ಅಶ್ವತ್ಥನಾರಾಯಣ ಅವರು ಬಹಿರಂಗ ಪ್ರಚಾರ ನಡೆಸಿದರು.

    ಬಿಜೆಪಿಯಿಂದ ಮಾತ್ರ ಬಲಿಷ್ಠ ಕೇರಳ ನಿರ್ಮಾಣ:
    ಸಶಕ್ತ ಕೇರಳ ರಾಜ್ಯವನ್ನು ನಿರ್ಮಾಣ ಮಾಡಬೇಕಾದರೆ ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿ ಉದಯ ಆಗಬೇಕು ಎಂದು ಪ್ರತಿಪಾದಿಸಿದ ಡಿಸಿಎಂ, ಎಲ್‍ಡಿಎಫ್-ಯುಡಿಎಫ್ ಕೂಟಗಳು ಅಪ್ರಸ್ತುತವಾಗಿವೆ. ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ರಾಜಕೀಯ ಪಕ್ಷಗಳಿಗೆ ಮತ್ತೆ ಅವಕಾಶ ನೀಡಬಾರದು ಎಂದು ಜನರಲ್ಲಿ ಮನವಿ ಮಾಡಿದರು.

    ಬಹಿರಂಗ ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಡಿಸಿಎಂ, ‘ಎಪ್ಪತ್ತು ವರ್ಷಗಳಿಂದ ಕೇರಳ ಹಿಂದುಳಿದಿದ್ದು ಸಾಕು. ರಾಜ್ಯವನ್ನು ಹಾಳುಗೆಡವಿದ್ದು ಸಾಕು. ಇನ್ನಾದರೂ ಅಭಿವೃದ್ಧಿಪರ ಏಕೈಕ ಪಕ್ಷವಾದ ಬಿಜೆಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯ ಈಗ ಹೆಚ್ಚಾಗಿದೆ’ ಎಂದು ಬಲವಾಗಿ ಪ್ರತಿಪಾದಿಸಿದರು.

  • ಬಿಹಾರದಲ್ಲಿ ಎನ್‍ಡಿಎ ಗೆಲುವಿಗೆ ಕಾರಣವೇನು..?- ಮಹಾಘಟ್‍ಬಂಧನ್ ಎಡವಿದ್ದೆಲ್ಲಿ..?

    ಬಿಹಾರದಲ್ಲಿ ಎನ್‍ಡಿಎ ಗೆಲುವಿಗೆ ಕಾರಣವೇನು..?- ಮಹಾಘಟ್‍ಬಂಧನ್ ಎಡವಿದ್ದೆಲ್ಲಿ..?

    ಪಾಟ್ನಾ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೊರಬಿದ್ದಿದೆ. ಕೊನೆಗೂ ಎನ್‍ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು.

    ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಎನ್‍ಡಿಎ ಗೆದ್ದುಬೀಗಿದೆ. ಹಾಗಾದ್ರೆ ಎನ್‍ಡಿಎ ಗೆದ್ದಿದ್ದೆಲ್ಲಿ..?. ಮಹಾಘಟ್‍ಬಂಧನ್ ಬಿದ್ದಿದ್ದೆಲ್ಲಿ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

    ಎನ್‍ಡಿಎ ಗೆಲುವಿಗೆ ಕಾರಣ…?
    ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಜೋಡಿಗೆ ಜನ ಮನ್ನಣೆ ನೀಡಿದ್ದಾರೆ. ಮೋದಿ ರ್ಯಾಲಿಗಳು ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಕಂಡಿವೆ. ಕೊರೊನಾ ವ್ಯಾಕ್ಸಿನ್ ಫ್ರೀ ಹಂಚುವ ಭರವಸೆಗೆ ಜನ ಬೆಂಬಲ ಸೂಚಿಸಿದ್ದಾರೆ. ಆರ್‍ಜೆಡಿಗೆ ಅಧಿಕಾರ ಕೊಟ್ಟರೆ ಜಂಗಲ್ ರಾಜ್ ಮಾಡ್ತಾರೆ ಅನ್ನೋ ಮೋದಿ ರಾಜಕೀಯ ಅಸ್ತ್ರ ವರ್ಕೌಟ್ ಆಗಿದೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿರುವುದು ಕೂಡ ಗೆಲುವಿಗೆ ಕಾರಣ. ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್, ಲಾಕ್‍ಡೌನ್ ಅವಧಿಯಲ್ಲಿ ಉಚಿತ ಪಡಿತರ ಸಕ್ಸಸ್ ಕಂಡಿದೆ. ಆರ್‍ಜೆಡಿ ಅಬ್ಬರದ ಪ್ರಚಾರ ಮಾಡ್ತಿದ್ರೆ ಬಿಜೆಪಿ ಮನೆ ಮನೆ ತಲುಪುವ ಕೆಲಸ ಮಾಡಿದ್ದು ಕೂಡ ಇಲ್ಲಿ ಎನ್‍ಡಿಎಗೆ ಲಾಭವಾಗಿದೆ.

    ಎಐಎಂಐಎಂ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಕೂಡ ಲಾಭವಾಗಿದ್ದು, ಲಾಲೂ ಕುಟುಂಬದ ಭ್ರಷ್ಟಾಚಾರ ಹಾಗೂ ತೇಜಸ್ವಿಗೆ ಅನನುಭವ ಹಿನ್ನೆಲೆ ಎನ್‍ಡಿಎಗೆ ಮತದಾರರು ಬೆಂಬಲ ಸೂಚಿಸಿದ್ದಾರೆ. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

    ಮಹಾಘಟಬಂಧನ್ ಹಿನ್ನಡೆಗೆ ಕಾರಣ..?
    ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ನೀಡಿ ತಾನು ಗೆಲ್ಲುವ ಕ್ಷೇತ್ರಗಳನ್ನು ಆರ್‌ಜೆಡಿ ಬಿಟ್ಟುಕೊಟ್ಟಿರುವುದು. ಎಐಎಂಐಎಂ ಮಹಾಘಟಬಂಧನ್‍ಗೆ ಸೇರಿಕೊಳ್ಳದಿರುವುದು. ಎಐಎಂಐಎಂ ಪ್ರತ್ಯೇಕ ಸ್ಪರ್ಧೆಯಿಂದ ಮುಸ್ಲಿಂ ಮತಗಳು ಛಿದ್ರವಾಗಿದ್ದು, ಮಹಾಘಟಬಂಧನ್, ವಿಐಪಿ ಮತ್ತು ಹೆಚ್‍ಎಎಂ ಪಕ್ಷಗಳನ್ನು ಎನ್‍ಡಿಎಗೆ ಬಿಟ್ಟುಕೊಟ್ಟಿದ್ದು ಕೂಡ ಹಿನ್ನಡೆಗೆ ಕಾರಣವಾಗಿದೆ.

    ಇಷ್ಟು ಮಾತ್ರವಲ್ಲದೆ ತೇಜಸ್ವಿ, ರಾಹುಲ್ ರ್ಯಾಲಿಗಳಲ್ಲಿ ಸೇರಿದ ಜನಸಂಖ್ಯೆ ಮತಗಳಾಗಿ ಬದಲಾಗಿಲ್ಲ. ತೇಜಸ್ವಿ ಯಾದವ್ ಕೊಟ್ಟ ಉದ್ಯೋಗ ಸೃಷ್ಟಿ ಭರವಸೆಯನ್ನು ಮತದಾರ ನಂಬದಿರಬಹುದು. ಎನ್‍ಡಿಎ ಸರ್ಕಾರದ ವೈಫಲ್ಯವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸದೇ ಇರುವುದು. ಕೇಂದ್ರದಲ್ಲಿ ಮೋದಿ ಸರ್ಕಾರ ಹಿನ್ನೆಲೆ ಅಭಿವೃದ್ಧಿ ಕಾರಣಕ್ಕೆ ಎನ್‍ಡಿಎಗೆ ಬೆಂಬಲ ಸಾಧ್ಯತೆ ಇದೆ.

    ತೇಜಸ್ವಿ ಯಾದವ್ ವಯಸ್ಸು ಕಡಿಮೆ ಮತ್ತು ಅನನುಭವ ಇರುವುದು ಕೂಡ ಕಾರಣವಾಗಿರಬಹುದು. ರಾಜಕೀಯ ತಂತ್ರಗಳ ಕೊರತೆಯಿಂದ ಮಹಾಘಟಬಂಧನ್ ಒಕ್ಕೂಟಕ್ಕೆ ಹಿನ್ನಡೆ ಹಾಗೂ ಮಹಿಳೆಯರ ಮತಗಳು ಹೆಚ್ಚು ಜೆಡಿಯು ಪಾಲಾಗಿದ್ದು ಮಹಾಘಟಬಂಧನ್ ಸೋಲನುಭವಿಸಲು ಕಾರಣಬಾಗಿರಬಹುದು.

  • ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ – ಮಗನ ಮಾತು ಕೇಳದೇ ಕೆಟ್ಟೆ ಎಂದ್ರಂತೆ ಸಿದ್ದರಾಮಯ್ಯ

    ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ – ಮಗನ ಮಾತು ಕೇಳದೇ ಕೆಟ್ಟೆ ಎಂದ್ರಂತೆ ಸಿದ್ದರಾಮಯ್ಯ

    ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರದಲ್ಲಿ ಎಡವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನಿಲ್ಲದ ನೋವು ಕಾಡುತ್ತಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

    ಯಾಕಂದರೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು 2018 ರ ವಿಧಾನಸಭಾ ಚುನಾವಣೆ ಎದುರಿಸಿದ ಸಿದ್ದರಾಮಯ್ಯರಿಗೆ ಹಿನ್ನಡೆಯ ಸೂಚನೆಯನ್ನು ಪುತ್ರ ಯತೀಂದ್ರ ಮೊದಲೇ ಕೊಟ್ಟಿದ್ದರು. ಈ ಎರಡು ತಪ್ಪು ನೀವು ಮಾಡುತ್ತಿದ್ದೀರಾ ಅದು ಸರಿ ಅಲ್ಲ ಎಂದಿದ್ದರು. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತಮ್ಮ ಪಕ್ಷದ ಮುಖಂಡರ ಬಳಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಈಗ ವರುಣ ಕ್ಷೇತ್ರದ ಶಾಸಕ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯ ಗೊತ್ತಿಲ್ಲದವರು. ಆದರೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ವಿವಾದವಾಗುತ್ತಿದ್ದಂತೆ ಡಾ.ಯಂತೀಂದ್ರ ಅವರೇ ಸಿದ್ದರಾಮಯ್ಯ ಅವರನ್ನು ಮೊದಲು ಎಚ್ಚರಿಸಿದ್ದರು ಎನ್ನಲಾಗಿದೆ.

    ಲಿಂಗಾಯತ ಪ್ರತ್ಯೇಕ ಧರ್ಮ ವಿಷಯಕ್ಕೆ ಕೈ ಹಾಕಬೇಡಿ ಅದು ನಿಮ್ಮ ರಾಜಕೀಯ ಹಿನ್ನಡೆಗೆ ಕಾರಣವಾಗಬಹುದು. ಸುಮ್ಮನಿದ್ದು ಬಿಡಿ ಎಂದು ಪುತ್ರ ಹೇಳಿದ್ದರಂತೆ. ಆಗ ಸಿದ್ದರಾಮಯ್ಯ ಅವರು ರಾಜಕೀಯ ಅನುಭವ ಇಲ್ಲದ ಯತೀಂದ್ರ ಏನೋ ಹೇಳುತ್ತಾನೆ. ನಿನಗೆ ಅದೆಲ್ಲ ಗೊತ್ತಾಗಲ್ಲ ಸುಮ್ಮನಿರು ಎಂದು ಪುತ್ರನಿಗೆ ಹೇಳಿದ್ದರು. ಇನ್ನು ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ವಾಗ್ದಾಳಿ ಮಾಡುವುದಕ್ಕೂ ಯತೀಂದ್ರ ವಿರೋಧ ವ್ಯಕ್ತಪಡಿಸಿದ್ದರು. ಆಗಲೂ ಅದಕ್ಕೆ ಸಮಜಾಯಿಷಿ ನೀಡಿದ್ದ ಸಿದ್ದರಾಮಯ್ಯ, ರಾಜಕಾರಣದಲ್ಲಿ ಅದೆಲ್ಲಾ ಮಾಡಬೇಕಾಗುತ್ತೆ ನಿನಗೆ ಗೊತ್ತಾಗಲ್ಲ ಎಂದಿದ್ದರೆಂದು ತಿಳಿದು ಬಂದಿದೆ.

    ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಯತೀಂದ್ರ, ರಾಜ್ಯದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಎರಡು ಪ್ರಬಲ ಸಮುದಾಯದವರು ಅವರನ್ನ ಎದುರು ಹಾಕಿಕೊಂಡು ಅಧಿಕಾರ ಹಿಡಿಯುವುದು ಕಷ್ಟ. ಅಲ್ಲದೆ ಮೈಸೂರಿನಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರ ಪ್ರಾಬಲ್ಯ ಇರುವುದು ತಮ್ಮ ಗೆಲುವಿಗೂ ತೊಂದರೆ ಆಗಬಹುದು. ಆದ್ದರಿಂದ ಆ ಎರಡು ವಿಷಯಗಳಲ್ಲಿ ಜಾಗೃತೆಯ ಹೆಜ್ಜೆ ಇಡಿ ಎಂದು ಸಿದ್ದರಾಮಯ್ಯಗೆ ಯತೀಂದ್ರ ಹೇಳಿದ್ದರು ಎನ್ನಲಾಗಿದೆ.

    ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಹಾಗೂ ಒಕ್ಕಲಿಗರ ಸಿದ್ದರಾಮಯ್ಯ ಬಗೆಗಿನ ಕೋಪ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುವಂತೆ ಮಾಡಿತ್ತು. ರಾಜ್ಯದಲ್ಲಿ ಇದೇ ಕಾರಣಕ್ಕೆ ಕಾಂಗ್ರೆಸ್ ಗೆ ಹಿನ್ನಡೆ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಆಗುವಂತಾಯ್ತು. ತಂದೆಗೆ ಬುದ್ಧಿ ಹೇಳಿದ್ದ ಡಾ.ಯತೀಂದ್ರ ರಾಜಕೀಯ ಅನುಭವದ ಕೊರತೆ ನಡುವೆಯೂ ವರುಣ ಕ್ಷೇತ್ರದಲ್ಲಿ ಮೊದಲ ಯತ್ನದಲ್ಲೇ ಗೆದ್ದು ಶಾಸಕರಾಗಿದ್ದಾರೆ. ಈ ಎಲ್ಲಾ ಘಟನೆಗಳನ್ನ ತಮ್ಮ ಆಪ್ತರ ಬಳಿ ಇತ್ತೀಚೆಗೆ ಸಾಕಷ್ಟು ಬಾರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಫೆ.14 ಬಿಟ್ಟು ಇಂದು ಹುಟ್ಟು ಹಬ್ಬ ಆಚರಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

    ಫೆ.14 ಬಿಟ್ಟು ಇಂದು ಹುಟ್ಟು ಹಬ್ಬ ಆಚರಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

    ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಾವು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ದಿನವಾದ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಶಾಸಕಿಯಾಗಿ ಆಯ್ಕೆಯಾದ ದಿನ ನನಗೆ ಮರುಜನ್ಮವಾಗಿದ್ದು, ಜನರಿಗೋಸ್ಕರ ಈ ಹುಟ್ಟು ಹಬ್ಬ ಎಂದು ಹೇಳಿ ಇಂದು ಹುಟ್ಟು ಹಬ್ಬವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಆಚರಿಸಿದ್ದಾರೆ. ಈ ಮೂಲಕ ಕ್ಷೇತ್ರದ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನವನ್ನು ಹೆಬ್ಬಾಳ್ಕರ್ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಗಣೇಶ್ ಪುರದಲ್ಲಿರುವ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ ಹೆಬ್ಬಾಳ್ಕರ್ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು.

    ಮಠದ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ, ಫೆ. 14ರಂದು ನನ್ನ ಹುಟ್ಟುಹಬ್ಬ, ಆದರೆ ಇದೇ ಮೊದಲ ಬಾರಿಗೆ ನಾನು ಶಾಸಕಿಯಾಗಿ ಆಯ್ಕೆಯಾಗಿದ್ದು ಇದು ನನ್ನ ಮರುಹುಟ್ಟು. ಹೀಗಾಗಿ ನನ್ನ ಹುಟ್ಟುಹಬ್ಬದ ದಿನವನ್ನು ಮುಂದೂಡಿ ಮೇ 12 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಶಾಸಕಿಯಾಗಿ ಆಯ್ಕೆಯಾಗಿದ್ದು ನನಗೆ ಮರುಜನ್ಮ, ನನ್ನ ಕ್ಷೇತ್ರದ ಜನರಿಗೋಸ್ಕರ ಇವತ್ತು ನನ್ನ ಹುಟ್ಟುಹಬ್ಬ ಎಂದು ಘೋಷಿಸಿಕೊಂಡು ಇಂದು ಆಚರಿಸಿಕೊಂಡಿದ್ದೇನೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

  • ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಬೆಂಗಳೂರು: 15ನೇ ವಿಧಾನಸಭಾ ಚುನಾವಣೆಯೂ ಮುಗಿತು. ಸರ್ಕಾರ ರಚನೆಯೂ ಆಯ್ತು. ಈಗಿನ ರಾಜಕೀಯ ನಾಯಕರಿಗೆನೇ 224 ವಿಧಾನ ಸಭಾ ಕ್ಷೇತ್ರದ ಹೆಸರುಗಳು ನೆನಪಿರೋಲ್ಲ. ಆದ್ರೇ ಇಲ್ಲೊಬ್ಬಳು ಪುಟಾಣಿ ಪೋರಿ 224 ಕ್ಷೇತ್ರದ ಜೊತೆ ಗೆದ್ದ ಅಭ್ಯರ್ಥಿ ಯಾರು ಮತ್ತು ಯಾವ ಪಕ್ಷದವರು ಅಂತಾ ಸಲೀಸಾಗಿ ಹೇಳುತ್ತಾಳೆ.

    ಹೌದು. ಈಗಿನ ಸಮಿಶ್ರ ಸರ್ಕಾರದ ಬಹುತೇಕ ಶಾಸಕರಿಗೆ ಸಡನ್ ಆಗಿ ಕೇಳಿದ್ರೇ, ತಮಗೆ ಬೆಂಬಲ ನೀಡಿರೋ 118 ಶಾಸಕರ ಹೆಸರನ್ನ ಹೇಳೊದಕ್ಕೆ ತಡವರಿಸುತ್ತಾರೆ. ಇನ್ನು 224 ಕ್ಷೇತ್ರದ ಬಗ್ಗೆ ಹೇಳೊದು ಅಂದ್ರೆ ತಮಾಷೆಯ ವಿಷಯವಲ್ಲ. ಆದ್ರೆ 224 ಕ್ಷೇತ್ರದ ಹೆಸರನ್ನ ಮಗ್ಗಿ ಹೇಳೊತರ ಹೇಳಿದ್ದ ಶಿವಮೊಗ್ಗದ ಬಾಲಕ ಇಂದ್ರಜೀತ್ ನ ನೋಡಿದ್ರಿ. ಆದ್ರೇ ಆ ಬಾಲಕನನ್ನ ಕೂಡ ಮೀರಿಸೋ ಪುಟಾಣಿ ಈ ಹುಡುಗಿಯಾಗಿದ್ದು, ಈಕೆ ಈ ಬಾರಿ ಕ್ಷೇತ್ರವಲ್ಲ, ಅಲ್ಲಿ ಗೆದ್ದಿರೋರು ಯಾರು ಮತ್ತು ಯಾವ ಪಕ್ಷದವರು ಅಂತಾ ಹೇಳುತ್ತಾಳೆ.

    ಈ ಪುಟಾಣಿಯ ಹೆಸರು ಸಂಭ್ರಮ. ಬೆಂಗಳೂರಿನ ಸುಂಕದಕಟ್ಟೆಯ ಬಳಿ ಇರೋ ಅಂಜನಾನಗರದ ನಿವಾಸಿಗಳಾದ ಜಾನಕಿ ಮತ್ತು ಶ್ರೀನಿವಾಸ್ ದಂಪತಿಯ ಮುದ್ದಿನ ಮಗಳು. ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರೋ ಈ ಪುಟಾಣಿ ಚತುರೇ ಮುಂದೆ ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿದ್ದಾಳೆ. ತಂದೆ ಶ್ರೀನಿವಾಸ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳಿಗೆ ಇದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಸಂಭ್ರಮಳಾ ಈ ಸಾಧನೆಯ ಬಗ್ಗೆ ಕಾರು ಚಾಲಕನಾಗಿರೋ ತಂದೆ ಸಂಭ್ರಮದಿಂದ ಹೇಳೊದು ಹೀಗೆ, ಬರೀ ಇಷ್ಟೇ ಅಲ್ಲ ನನ್ನ ಮಗಳು 5 ನಿಮಿಷದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಹೇಳುತ್ತಾಳೆ. ಜೊತೆಗೆ 1000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

    ಎಂಟೇ ವರ್ಷದಲ್ಲಿ ಈ ರೀತಿಯ ಸಾಧನೆ ಮಾಡಿರೋ ಈ ಪುಟ್ಟ ಬಾಲಕಿಯ ನೆನಪಿನ ಶಕ್ತಿ ನೋಡಿದ್ರೇ, ಮುಂದೊಂದು ದಿನ ಸಾಧಕಿ ಆಗೊದ್ರಲ್ಲಿ ಅನುಮಾನವಿಲ್ಲ.

  • ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

    ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಅದರ ಜೊತೆಗೆ ಕೆಲ ಪ್ರಮುಖ ನಾಯಕರು ಸಹ ರಾಜ್ಯಾದ್ಯಂತ ಪ್ರವಾಸಕ್ಕೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಬೆಳಗಾವಿಯ ಪ್ರಭಾವಿ ನಾಯಕರೊಬ್ಬರು ಇದೀಗ ಚುನಾವಣೆ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ತರಿಸಿರೋದು ವಿಶೇಷವಾಗಿದೆ.

    ಕುಂದಾ ನಗರಿ ಬೆಳಗಾವಿಯಲ್ಲಿ ಈ ಬಾರಿ ಚುನಾವಣೆಯ ಪ್ರಚಾರದ ಕಾವು ರಂಗೇರಲಿದೆ. ಜಿಲ್ಲೆಯ ಪ್ರಮುಖ ನಾಯಕ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ರಾಜ್ಯಾದ್ಯಂತ ತೆರಳಿ ಪಕ್ಷದ ಸಂಘಟನೆಗಾಗಿ ಹೆಲಿಕಾಪ್ಟರ್ ವೊಂದನ್ನು ಖರೀದಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.

    ಬೆಳಗಾವಿ ನಗರ, ಯಮಕನಮರಡಿ ಕ್ಷೇತ್ರದ 8 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ಮುಂದೆ ಸತೀಶ್ ಜಾರಕಿಹೊಳಿ ಈ ಹೆಲಿಕಾಪ್ಟರ್ ನಲ್ಲಿಯೇ ರಾಜ್ಯ ಪ್ರವಾಸ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಲ್ ಕಂಪೆನಿಯ ಈ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಸಬಹುದಾಗಿದೆ.

    2013ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ಆಗ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ತಂದಿದ್ದರು. ಆದರೆ ಈ ಬಾರಿ ಸ್ವತಃ ಹೆಲಿಕಾಪ್ಟರ್ ಖರೀದಿಸಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.

     

    ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪಕ್ಷದ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸತೀಶ್ ಶ್ರಮಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆಪ್ತರು ಹೇಳಿದ್ದಾರೆ.

    ಸತೀಶ್ ಜಾರಕಿಹೊಳಿ ರಾಜಕೀಯ ಕೆಲಸಗಳ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳಿಗೂ ಹೆಲಿಕಾಪ್ಟರ್ ಬಳಸಲಿದ್ದಾರೆ. ಮೂಢನಂಬಿಕೆ ವಿರುದ್ಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ.