Tag: vidhana sabha

  • 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    ಅಮರಾವತಿ: ಬರೋಬ್ಬರಿ 31 ತಿಂಗಳ ನಂತರ ಟಿಡಿಪಿಯ (TDP) ಚಂದ್ರಬಾಬು ನಾಯ್ಡು (Chandrababu Naidu) ಮುಖ್ಯಮಂತ್ರಿಯಾಗಿಯೇ ವಿಧಾನಸಭೆ (Vidhana Sabha) ಪ್ರವೇಶಿಸುವ ಮೂಲಕ ಪ್ರತಿಜ್ಞೆ ಈಡೇರಿಸಿದ್ದಾರೆ.

    ವೈಎಸ್‌ಆರ್ ಪಕ್ಷದ ಮುಖಂಡರ ತೀವ್ರ ನಿಂದನೆಯಿಂದ ನೊಂದು ಕಣ್ಣೀರಿಟ್ಟಿದ್ದ ಚಂದ್ರಬಾಬು ನಾಯ್ಡು ಸಿಎಂ ಆಗಿಯೇ ಮತ್ತೆ ಆಂಧ್ರ ಪ್ರದೇಶ (Andhra Pradesh) ವಿಧಾನಸಭೆಗೆ ಕಾಲಿಡುವುದಾಗಿ 2021ರ ನವೆಂಬರ್‌ನಲ್ಲಿ ಶಪಥ ಮಾಡಿದ್ದರು. ಇದನ್ನೂ ಓದಿ: ಚಂದ್ರಬಾಬು ನಾಯ್ಡು ಅವರ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!

    ಇಂದು ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯ ಮೆಟ್ಟಿಲುಗಳಿಗೆ ಸಿಎಂ ಚಂದ್ರಬಾಬು ನಮಸ್ಕಾರ ಮಾಡಿದರು. ಸದನ ಪ್ರವೇಶಿಸುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಎದ್ದು ನಿಂತು ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸತ್ಯ ಗೆದ್ದಿದೆ. ಪ್ರಜಾಪ್ರಭುತ್ವ ಉಳಿದಿದೆ ಎಂದು ಟಿಡಿಪಿ ಶಾಸಕರು ಭಿತ್ತಿಪತ್ರ ಪ್ರದರ್ಶಿಸಿ ಸಂಭ್ರಮಿಸಿದರು.

    ಇನ್ನೊಂದು ಕಡೆ ಮಾಜಿ ಸಿಎಂ ವೈಎಸ್ ಜಗನ್‌ಮೋಹನ್‌ರೆಡ್ಡಿ (Jagan Mohan Reddy) ಹಿಂಬಾಗಿಲ ಮೂಲಕ ವಿಧಾನಸಭೆಗೆ ಕಾಲಿಟ್ಟದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಇಂಡೋ-ಪಾಕ್ ಗಡಿಯಲ್ಲಿ ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು

    2021ರಲ್ಲಿ ಆಗಿದ್ದು ಏನು?
    ನವೆಂಬರ್ 19 ರಂದು ಆಗಿನ ಆಡಳಿತದಲ್ಲಿದ್ದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಸದಸ್ಯರು ತಮ್ಮ ಪತ್ನಿಯ ಬಗ್ಗೆ ಮಾಡಿದ ನಿಂದನೆಯ  ಹೇಳಿಕೆಯಿಂದ ಬೇಸರಗೊಂಡು ಸದನವನ್ನು ತೊರೆದಿದ್ದರು. ಮಹಿಳಾ ಸಬಲೀಕರಣದ ಚರ್ಚೆಯ ವೇಳೆ ವಿಧಾನಸಭೆಯಿಂದ ಹೊರನಡೆಯುವ ಮುನ್ನ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದರು.

    ಇದು ಮಹಾಭಾರತದಲ್ಲಿ ದ್ರೌಪದಿಯನ್ನು ಅವಮಾನಿಸಿದ ಕೌರವರ ಸಭೆ ಎಂದು ಕಣ್ಣೀರು ಹಾಕಿದ್ದ ಚಂದ್ರಬಾಬು ನಾಯ್ಡು ಇನ್ನು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ನಾನು ಮುಖ್ಯಮಂತ್ರಿಯಾದ ನಂತರವೇ ಸದನಕ್ಕೆ ಮರಳುತ್ತೇನೆ ಪ್ರತಿಜ್ಞೆ ಮಾಡಿದ್ದರು.

    ಈ ಬಾರಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಟಿಡಿಪಿ, ಜನಾಸೇನಾ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಒಟ್ಟು 175 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಡಿಪಿ 135, ಜನಸೇನಾ 21, ವೈಎಸ್‌ಆರ್‌ಸಿಪಿ 11, ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಬಹಳಷ್ಟು ಸೊಷಿಯಲಿಸ್ಟ್‌, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದ ಪರಿಣಾಮ ಜಗನ್‌ ನೇತೃತ್ವದ ವೈಎಸ್‌ಅರ್‌ಸಿಪಿ ಕಾಂಗ್ರೆಸ್‌ 151, ಟಿಡಿಪಿ 23, ಜನಸೇನಾ 1 ಸ್ಥಾನವನ್ನು ಗೆದ್ದುಕೊಂಡಿತ್ತು.

     

  • ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಕಾಂಗ್ರೆಸ್ ಧರಣಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಡ್, ತಲೆ ದಿಂಬುಗಳು ಹಾಗೂ ಹೊದಿಕೆ ವ್ಯವಸ್ಥೆ ಮಾಡಲಾಗಿತ್ತು. ಧರಣಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರು ಟ್ರಾಕ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿ ಆಗಮಿಸಿದ್ದರು.

    ಆಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಧರಣಿ ನಿರತ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಊಟ ವ್ಯವಸ್ಥೆ ಮಾಡಿದ್ದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚಿ ಹೋಟೆಲ್‍ನಿಂದ 120 ಜನರಿಗಾಗಿ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಊಟದ ಮೆನು!: ಊಟದಲ್ಲಿ 15 ಬಗೆಯ ಪದಾರ್ಥಗಳಿದ್ದವು. ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ರಸಂ, ಸಾಂಬಾರ್, ತರಕಾರಿ ಸಲಾಡ್, ಪಲ್ಯ, ರೈಸ್ ಬಾತ್, ಮೊಸರು, ಡ್ರೈ ಜಾಮೂನ್ ಸೇರಿದಂತೆ ಒಟ್ಟು 15 ತರಹದ ಪದಾರ್ಥಗಳು ಇಂದಿನ ಊಟದ ಮೆನುವಿನಲ್ಲಿತ್ತು.

    ಸಂಧಾನ ಯತ್ನ!: ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಂಧಾನ ಯತ್ನ ನಡೆಸಿದರು. ಸ್ಪೀಕರ್ ಕಾಗೇರಿ ಅವರ ಸಮ್ಮುಖದಲ್ಲೇ ಸಂಧಾನ ಮಾತುಕತೆ ನಡೆದರೂ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಈಶ್ವರಪ್ಪ ರಾಜೀನಾಮೆ ಪಡೆಯಿರಿ, ಇಲ್ಲ ಅಮಾನತು ಮಾಡಿ ಎಂದು ಕೈ ನಾಯಕರು ಪಟ್ಟು ಹಿಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ರಾತ್ರಿ ಇಲ್ಲಿ ಮಲಗೋದು ಬೇಡ ಅಂದ್ವಿ!: ಸಂಧಾನ ಯತ್ನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಅಶೋಕ್ ಸೇರಿ ಎರಡು ಗಂಟೆಗಳ ಕಾಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ. ರಾತ್ರಿ ಇಲ್ಲಿ ಧರಣಿ ಮಾಡುವುದು ಬೇಡ, ಆ ರೀತಿ ವಿಶೇಷವಾದ ಘಟನೆ ನಡೆದಿಲ್ಲ ಎಂದಿದ್ದೇವೆ. ರಾತ್ರಿ ಮಾತ್ರ ಇಲ್ಲಿ ಮಲಗೋದು ಬೇಡ, ಇದು ಒಳ್ಳೆಯ ಪದ್ಧತಿ ಆಗಲ್ಲ ಎಂದು ಮನವೊಲಿಕೆ ಮಾಡಿದ್ದೇವೆ. ಆದರೆ ಅವರು ಮನಸ್ಸಿನಲ್ಲಿ ತೀರ್ಮಾನ ಮಾಡಿ ಆಗಿದೆ, ರಾತ್ರಿ ಇಲ್ಲೇ ಇರುತ್ತೇವೆ ಎಂದು ಹೇಳಿದರು. ಸ್ಪೀಕರ್ ಕೂಡಾ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ನಾಳೆ ಧರಣಿ ಮುಂದುವರಿಸಿ ಎಂದರೂ ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ನಾಳೆ ಮತ್ತೆ ಮನವೊಲಿಕೆಗೆ ಮಾತನಾಡುತ್ತೇವೆ ಎಂದು ಹೇಳಿದರು.

    ಪರಿಷತ್‍ನಲ್ಲಿ ಕೂಡಾ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಡೆಯುತ್ತಿದೆ. ಪರಿಷತ್‍ನಲ್ಲಿ ಧರಣಿ ನಿರತರನ್ನು ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿಯಾದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನ ಪರಿಷತ್ತಿಗೆ ಭೇಟಿ ನೀಡಿ ವಿಪಕ್ಷ ನಾಯಕ ಹರಿಪ್ರಸಾದ್ ಹಾಗೂ ಧರಣಿ ನಿರತ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಅವನು ನಮ್ಮ ಅಪ್ಪನ ಮೀಟ್ ಮಾಡಬೇಕು ಅಂತಿದಾನೆ, ನಾನೇ ಅವನನ್ನ ಎಲ್ಲಿ, ಹೇಗೆ, ಯಾವಾಗ ಮೀಟ್ ಮಾಡಬೇಕೋ ಮಾಡ್ತೀನಿ!

  • ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

    ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ರೀ-ಎಂಟ್ರಿ!

    ಚಿತ್ರದುರ್ಗ: ಕೋಟೆನಾಡಿನ ರಾಜಕೀಯಕ್ಕೆ ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ರೀ-ಎಂಟ್ರಿಯಾಗಿದ್ದಾರೆ.

    ವಿಧಾನಸಭಾ ಚುನಾವಣೆ ಬಳಿಕ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ರಾಜಕೀಯದಿಂದ ದೂರ ಉಳಿದಿದ್ದ ಶಶಿಕುಮಾರ್ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‍ಟಿ ಮೀಸಲಾತಿ ಕ್ಷೇತ್ರಗಳಾಗಿರೋ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರಗಳತ್ತ ಚಿತ್ತ ವಹಿಸಿದ್ದಾರೆ.

    ನಿನ್ನೆ ಅವರ ಅಭಿಮಾನಿಗಳೊಂದಿಗೆ ಎರಡು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರೋ ಶಶಿಕುಮಾರ್, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮೊಳಕಾಲ್ಮೂರು ತಾಲೂಕಿನ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಶುಭವಾಗುವಂತೆ ಪ್ರಾರ್ಥಿಸಿದರು. ಇದನ್ನೂ ಓದಿ: ಭಾರತವನ್ನು ಪಾಕಿಸ್ತಾನ ಸೋಲಿಸಿದೆ: ಇಮ್ರಾನ್ ಖಾನ್

    ಈ ವೇಳೆ ನೆರೆದಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯದಲ್ಲೇ ಕ್ಷೇತ್ರ ಮತ್ತು ಪಕ್ಷದ ಬಗ್ಗೆ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದರು. ಅಲ್ಲದೆ ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಎರಡು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರು.

    ಚುನಾವಣೆಗೂ ಮುನ್ನವೇ ಕ್ಷೇತ್ರ ಖಾಲಿ ಮಾಡಿದ ಆರೋಪ ಕೇಳಿಬಂದಿತ್ತು. ಅಂದಿನಿಂದ ಈವರೆಗೆ ಎಲ್ಲಾ ಪಕ್ಷಗಳಿಂದ ದೂರ ಉಳಿದಿದ್ದ ಶಶಿಕುಮಾರ್, ಮುಂಬರುವ ಚುನಾವಣೆಗೆ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ. ನಟ ಶಶಿಕುಮಾರ್ ಎಂಟ್ರಿಯಿಂದ ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರಗಳಲ್ಲಿ ರಾಜಕೀಯ ಗರಿಗೆದರಿದೆ. ಇದನ್ನೂ ಓದಿ: ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್

    ನಟ ಶಶಿಕುಮಾರ್ ಅವರು 1999 ರಲ್ಲಿ ಚಿತ್ರದುರ್ಗ ಸಂಸದರಾಗಿದ್ದರು. ಆ ವೇಳೆ ಚಿತ್ರದುರ್ಗದಲ್ಲಿ ನಿರ್ಮಾಣ ಮಾಡಿದ ಬಸ್‍ನಿಲ್ದಾಣ ಹಾಗೂ ನಿರೀನ ಅಭಾವ ನೀಗಿಸಲು ಆರಂಭಿಸಿದ ನೀರಿನ ಟ್ಯಾಂಕರ್ ಗಳು ಇಂದಿಗೂ ಜನರ ಮುಂದೆ ಕೈಗನ್ನಡಿಯಂತಿವೆ. ಹಾಗೆಯೇ 2008 ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ, ಮಾಜಿ ಸಚಿವ ತಿಪ್ಪೇಸ್ವಾಮಿಯವರ ವಿರುದ್ಧ ಅಲ್ಪಮತಗಳಿಂದ ಸೋತಿದ್ದರು.

    ಅಂದಿನಿಂದಲೂ ಚಿತ್ರದುರ್ಗ ಜಿಲ್ಲೆಯ ರಾಜಕೀಯದತ್ತ ಬಾರಿ ಆಸಕ್ತಿ ಹೊಂದಿದ್ದ ಶಶಿಕುಮಾರ್ ಇದೀಗ ಮತ್ತೆ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ಪ್ರವಾಸ ಆರಂಭಿಸಿರೋದು ಸ್ಪರ್ಧಾಕಾಕ್ಷಿಗಳ ನಿದ್ರೆ ಕೆಡಿಸಿದೆ. ಶಶಿಕುಮಾರ್ ಅವರೊಂದಿಗೆ ವಲ್ಲಿ ಪ್ರಕಾಶ್, ಜಾಕೀರ್ ಹುಸೇನ್ ಇದ್ದರು.

  • ಮುತ್ತು ಕೊಟ್ಟರೆ ತುಟಿ ಸುಡುತ್ತೆ – ಸರ್ಕಾರದ ಬಗ್ಗೆಯೇ ಬಿಜೆಪಿಯ ದೊಡ್ಡನಗೌಡ ವ್ಯಂಗ್ಯ

    ಮುತ್ತು ಕೊಟ್ಟರೆ ತುಟಿ ಸುಡುತ್ತೆ – ಸರ್ಕಾರದ ಬಗ್ಗೆಯೇ ಬಿಜೆಪಿಯ ದೊಡ್ಡನಗೌಡ ವ್ಯಂಗ್ಯ

    ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ನೇಕಾರರ ಸಮಸ್ಯೆ ವಿಷಯ ಪ್ರಸ್ತಾಪಿಸಿದ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ನಮ್ಮ ಹತ್ತಿರ ದೀಪ ಇದೆ ಎಂದು ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುತ್ತದೆ ಎಂದು ತಮ್ಮದೇ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ಈ ಬಾರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಕುರಿತು ಚರ್ಚೆಯಾಗುತ್ತಿತ್ತು. ಈ ಸಂದರ್ಭ ಮಾತನಾಡಿದ ದೊಡ್ಡನಗೌಡ, ನೇಕಾರರು ಸಿದ್ಧಪಡಿಸಿದ ಸೀರೆಗಳ ಖರೀದಿ ಆಗುತ್ತಿಲ್ಲ. ಅಧಿಕಾರಿಗಳು ಏನೂ ಸಹಾಯ ಮಾಡುವ ರೀತಿ ಕಾಣಿಸುತ್ತಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಉಪಸಭಾಧ್ಯಕ್ಷ ಆನಂದ್ ಮಾಮನಿ, ನೀವು ಆಡಳಿತ ಪಕ್ಷದವರ ರೀತಿ ಮಾತನಾಡುತ್ತಿಲ್ಲ. ವಿರೋಧ ಪಕ್ಷದವರಿಗೆ ಮಾತನಾಡಲು ವಸ್ತು ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದೀರಿ ಎಂದರು.

    ಆನಂದ್ ಮಾಮನಿಯವರ ಮಾತಿಗೆ ದೊಡ್ಡನಗೌಡ, ದೀಪದ ಕೆಳಗೆ ಇದ್ದೇವೆ. ನಮ್ಮದೇ ಸರ್ಕಾರ ಇದೆ. ದೀಪ ನಮ್ಮದೇ, ನಮ್ಮ ಹತ್ತಿರ ದೀಪ ಇದೆ ಎಂದು ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುವುದಿಲ್ಲವೇ ಎಂದು ಪಶ್ನಿಸಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.

  • ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ – ಲಿಂಬಾವಳಿಗೆ ರಮೇಶ್ ಕುಮಾರ್ ಪ್ರಶ್ನೆ

    ಬೆಂಗಳೂರು: ಅರಣ್ಯಕ್ಕೆ ಹೋಗುವಾಗ ಪತ್ನಿ ಜೊತೆಗೆ ಹೋಗುತ್ತೀರಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಚಿವ ಅರವಿಂದ ಲಿಂಬಾವಳಿಯನ್ನು ಪ್ರಶ್ನಿಸಿದ್ದಾರೆ.

    ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಉತ್ತರ ಕೊಡಲು ಮುಂದಾದಾಗ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿದರು.

    ಅರಣ್ಯಕ್ಕೆ ಪತ್ನಿ ಜೊತೆಗೆ ಹೋಗ್ತೀರಾ ಅಥವಾ ಒಬ್ಬನೇ ಹೋಗುತ್ತೀರಾ ಎಂದು ಪ್ರಶ್ನಿಸುವ ಮೂಲಕ ರಮೇಶ್ ಕುಮಾರ್, ಲಿಂಬಾವಳಿ ಕಾಳೆಲೆದಿದ್ದಾರೆ. ಇದಕ್ಕೆ ಉತ್ತರಿಸಿದ ಲಿಂಬಾವಳಿ, ಪತ್ನಿ ಸಮೇತ ಹೋಗಲ್ಲ, ನಾನೊಬ್ಬನೇ ಹೋಗುತ್ತೇನೆ. ಅರಣ್ಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ. ಇದರಿಂದ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • ಸದನಕ್ಕೆ ಮಾಸ್ಕ್ ಧರಿಸಿ ಬಂದ ಸಿದ್ದರಾಮಯ್ಯ

    ಸದನಕ್ಕೆ ಮಾಸ್ಕ್ ಧರಿಸಿ ಬಂದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಎಲ್ಲರಿಗೂ ಇಂದು ಅಚ್ಚರಿ ಕಾದಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಭಿನ್ನ ಲುಕ್ ನಲ್ಲಿ ಕಲಾಪಕ್ಕೆ ಬಂದಿದ್ರು. ಎಲ್ಲೆಡೆ ಕೊರೊನಾ ಹಬ್ಬಿರುವ ಭೀತಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಬಿಟ್ಟಿಲ್ಲ ಅನ್ಸತ್ತೆ. ಅದಕ್ಕಾಗಿಯೇ ಇಂದಿನಿಂದ ಸಿದ್ದರಾಮಯ್ಯ ಅವರು ಕಲಾಪಕ್ಕೆ ಮಾಸ್ಕ್ ಧರಿಸಿ ಬರಲಾರಂಭಿಸಿದ್ದಾರೆ.

    ಇದೇ ಮೊದಲ ಬಾರಿಗೆ ಮಾಸ್ಕ್ ನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದರಿಂದಲೋ ಏನೋ ಮಾಸ್ಕ್ ಧಾರಿ ಸಿದ್ದರಾಮಯ್ಯರನ್ನು ಕಂಡವರೆಲ್ಲ ಹುಬ್ಬು ಮೇಲಕ್ಕೆತ್ತಿ ಮುಗುಳ್ನಕ್ಕು ಅಚ್ಚರಿ ವ್ಯಕ್ತಪಡಿಸುತ್ತಿದ್ರು. ವಿಧಾನಸೌಧಕ್ಕೆ ಮಾಸ್ಕ್ ಹಾಕಿಕೊಂಡೇ ಆಗಮಿಸಿದ ಸಿದ್ದರಾಮಯ್ಯಗೆ ಪ್ರವೇಶ ದ್ವಾರದಲ್ಲಿ ಎದುರಾದ ಮೊದಲ ವ್ಯಕ್ತಿ ಅವರ ಮಾಜಿ ಮತ್ತು ಹಾಲಿ ಶಿಷ್ಯ ಸಚಿವ ರಮೇಶ್ ಜಾರಕಿಹೊಳಿ. ಈ ವೇಳೆ ಮಾಸ್ಕ್ ಧರಿಸಿದ ಸಿದ್ದರಾಮಯ್ಯ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಸ್ವಾರಸ್ಯಕರ ಸಂಭಾಷಣೆ ಸಹ ನಡೆಯಿತು.

    ಮಾಸ್ಕ್ ಧರಿಸಿ ಬಂದ ಸಿದ್ದರಾಮಯ್ಯಗೆ, “ಏನ್ ಸರ್ ಮಾಸ್ಕ್ ಹಾಕ್ಕೊಂಡು ಬಂದಿದ್ದೀರ” ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯಿಂದ ಕೇಳಿದ್ರು. ಇದಕ್ಕೆ ಸಿದ್ದರಾಮಯ್ಯನವರು, “ವಯಸ್ಸಾಯ್ತಲ್ಲಯ್ಯ, ನನ್ನಿಂದ ಯಾರಿಗೂ ತೊಂದ್ರೆ ಆಗಬಾರದು, ಅದಕ್ಕೆ ಹಾಕಿದ್ದೀನಿ ಕಣಯ್ಯ. ನಿಂಗೆಷ್ಟು ವಯಸ್ಸು? ಅರವತ್ತಾಯ್ತಾ ನಿಂಗೆ?” ಅಂತ ತಮಾಷೆಯಾಗಿ ರಮೇಶ್ ಜಾರಕಿಹೊಳಿಗೆ ಕೇಳಿದ್ರು. ಆಗ ರಮೇಶ್ ಜಾರಕಿಹೊಳಿಯವರು, “ನಿಮಗೆ ಕೊರೊನಾ ಬರಲ್ಲ ಬಿಡಿ ಸರ್” ಎಂದು ಹೇಳಿ ಧೈರ್ಯ ಹೇಳುತ್ತಲೇ ವಿಧಾನಸಭೆ ಒಳಗೆ ಒಟ್ಟಿಗೆ ಹೆಜ್ಜೆ ಹಾಕಿದ್ರು.

  • ರಮೇಶ್ ಕುಮಾರ್ ಪಲಾಯನವಾದಿ- ಕೈ, ಬಿಜೆಪಿ ವಾಕ್ಸಮರಕ್ಕೆ ಕಲಾಪ ಬಲಿ

    ರಮೇಶ್ ಕುಮಾರ್ ಪಲಾಯನವಾದಿ- ಕೈ, ಬಿಜೆಪಿ ವಾಕ್ಸಮರಕ್ಕೆ ಕಲಾಪ ಬಲಿ

    – ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ನೋಟಿಸ್

    ಬೆಂಗಳೂರು: ವಿಧಾನಸಭೆ ಕಲಾಪ ಇಂದು ಬೆಳಗ್ಗೆ ಆರಂಭವಾಗುತ್ತಲೇ ಮತ್ತೆ ರಮೇಶ್ ಕುಮಾರ್ ಮತ್ತು ಸುಧಾಕರ್ ನಿಂದನೆ ವಿಷಯ ಪ್ರಸ್ತಾಪವಾಗಿ ಸದನ 15 ನಿಮಿಷ ಮುಂದೂಡಿಕೆಯಾದ ಪ್ರಸಂಗ ನಡೆಯಿತು.

    ವಿಧಾನಸಭೆ ಕಲಾಪದ ಆರಂಭದಲ್ಲೇ ರಮೇಶ್ ಕುಮಾರ್ ಅಮಾನತಿಗೆ ಸಚಿವ ಈಶ್ವರಪ್ಪ ಸ್ಪೀಕರ್ ಕಾಗೇರಿಗೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ಇತ್ತ ಕಾಂಗ್ರೆಸ್ಸಿನಿಂದಲೂ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೊಟೀಸ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ ಮಂಡಿಸಿದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಸದನ ಸಾಕ್ಷಿಯಾಯ್ತು.

    ಗದ್ದಲದ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎರಡು ಹಕ್ಕುಚ್ಯುತಿ ನೋಟಿಸ್ ಕೊಟ್ಟಿರುವ ಬಗ್ಗೆ ಸ್ಪೀಕರ್ ಕಾಗೇರಿಯವರು ಸದನದ ಗಮನಕ್ಕೆ ತಂದರು. ಸುಧಾಕರ್ ವಿರುದ್ಧ ಕಾಂಗ್ರೆಸ್, ರಮೇಶ್ ಕುಮಾರ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿಗೆ ನೋಟಿಸ್ ಕೊಟ್ಟಿದ್ದಾರೆಂದು ಕಲಾಪದಲ್ಲಿ ಸ್ಪೀಕರ್ ಹೇಳಿದರು. ಈ ನೋಟಿಸ್‍ಗಳ ಮೇಲಿನ ಚರ್ಚೆಗೆ ಪ್ರಶ್ನೋತ್ತರ ವೇಳೆಯ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಹೇಳಿದರು.

    ನಮ್ಮ ನೋಟಿಸ್ ಮೊದಲು ಚರ್ಚೆಯಾಗಬೇಕೆಂದು ಉಭಯ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ನಿಲ್ಲದೇ ಮುಂದುವರಿದಿತ್ತು. ಈ ಮಧ್ಯೆ ರಮೇಶ್ ಕುಮಾರ್ ಸದನಕ್ಕೆ ಬಾರದಿರುವುದನ್ನು ಕಂಡ ಬಿಜೆಪಿ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ರಮೇಶ್ ಕುಮಾರ್ ಪಲಾಯನವಾದಿ. ಹಾಗಾಗಿ ಇಂದು ಅವರು ಸದನಕ್ಕೆ ಬಂದಿಲ್ಲ. ಎಲ್ಲಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಬಿಜೆಪಿಯ ರೇಣುಕಾಚಾರ್ಯ ಮತ್ತಿತರೆ ಸದಸ್ಯರು ಕೂಗಿದರು. ಸದನದಲ್ಲಿ ಕೋಲಾಹಲ ನಿಲ್ಲದ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಬೇಕಾಯಿತು.

  • ನಾನು ಮಾತನಾಡೋ ತನಕ ಹೋಗ್ಬೇಡಿ – ಸಿಎಂರನ್ನು ಕರೆದು ಕೂರಿಸಿದ ಸಿದ್ದರಾಮಯ್ಯ

    ನಾನು ಮಾತನಾಡೋ ತನಕ ಹೋಗ್ಬೇಡಿ – ಸಿಎಂರನ್ನು ಕರೆದು ಕೂರಿಸಿದ ಸಿದ್ದರಾಮಯ್ಯ

    ಬೆಂಗಳೂರು: ಟಿಪ್ಪು ಜಯಂತಿ ರದ್ದು ವಿರೋಧಿಸಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಾಗೇರಿ ಅವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

    ಕಲಾಪ ಆರಂಭಗೊಂಡ ಬಳಿಕ ಸಿಎಂ ಯಡಿಯೂರಪ್ಪ ಅವರು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರ ಚುನಾವಣೆಗೆ ಪ್ರಸ್ತಾವ ಮಂಡಿಸಿದರು. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಆದರೆ ಅದನ್ನು ಲೆಕ್ಕಿಸದೇ ಬಿ.ಎಸ್.ಯಡಿಯೂರಪ್ಪ ಪ್ರಸ್ತಾವನೆ ಓದಿದರು. ಬಳಿಕ ನಾನು ಸಿದ್ಧಾರ್ಥ್ ಅವರ ಅಂತ್ಯಕ್ರಿಯೆಗೆ ಹೋಗಬೇಕಿದೆ. ಸದನದಿಂದ ಹೊರಡುತ್ತೇನೆ ಎಂದು ಸಿಎಂ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಕೇಳಿಕೊಂಡರು.

    ಬಿಎಸ್ ಯಡಿಯೂರಪ್ಪ ಅವರನ್ನು ಎದ್ದು ಹೋಗಲು ಬಿಡದ ಮಾಜಿ ಸಿಎಂ, ನಾನು ಮಾತನಾಡೋ ತನಕ ಹೋಗಬೇಡಿ. ಐದು ನಿಮಿಷ ಕುಳಿತುಕೊಳ್ಳಿ ಆಮೇಲೆ ಎದ್ದು ಹೋಗಿ ಎಂದು ಪಟ್ಟು ಹಿಡಿದರು. ಈ ವೇಳೆ ಬಿಜೆಪಿ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು ವಿಚಾರವಾಗಿ ಸದನದಲ್ಲಿ ಗಲಾಟೆ ಆರಂಭವಾಯಿತು. ಮಾಜಿ ಸಿಎಂ ಮಾತು ಆರಂಭಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಸದನದಿಂದ ಹೊರ ನಡೆದರು.

    ಟಿಪ್ಪು ಜಯಂತಿ ರದ್ದು ವಿಚಾರವಾಗಿ ಕಾಂಗ್ರೆಸ್ ಸದಸ್ಯರಿಂದ ಆಕ್ಷೇಪ ಹಾಗೂ ವಿರೋಧದ ಮಧ್ಯೆಯೇ ಸಿಎಂ ಕಲಾಪದಿಂದ ಹೊರ ನಡೆದರು. ಈ ಮೂಲಕ ಉದ್ಯಮಿ ಸಿದ್ಧಾರ್ಥ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಹೊರಟರು. ಸಿಎಂ ಏಕಾಏಕಿ ಹೊರ ನಡೆದಿದ್ದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಆಗ ಸ್ಪೀಕರ್ ಅವರು ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದರು.

  • ಆಡಳಿತ ಪಕ್ಷದ ನಾಯಕರು ಗದ್ದಲ ಎಬ್ಬಿಸಿದ್ರೂ ಬಿಜೆಪಿ ಮೌನಕ್ಕೆ ಶರಣು

    ಆಡಳಿತ ಪಕ್ಷದ ನಾಯಕರು ಗದ್ದಲ ಎಬ್ಬಿಸಿದ್ರೂ ಬಿಜೆಪಿ ಮೌನಕ್ಕೆ ಶರಣು

    ಬೆಂಗಳೂರು: ವಿಶ್ವಾಸಮತ ಯಾಚನೆಯ ಚರ್ಚೆಯ ವೇಳೆ ವಿರೋಧ ಪಕ್ಷಗಳು ತಮ್ಮ ಕಾಲೆಳೆದರೂ ಬಿಜೆಪಿ ಶಾಸಕರು ಮೌನಕ್ಕೆ ಶರಣಾಗಿದ್ದಾರೆ.

    ಕೋಟಿ ಕೋಟಿಯ ಆಫರ್ ನೀಡಿರುವ ಆರೋಪಗಳ ಸುರಿಮಳೆಗೈದ್ರೂ ಬಿಜೆಪಿಯವರು ಮಾತ್ರ ಯಾವುದಕ್ಕೂ ಅಡ್ಡಿಪಡಿಸದೆದೇ ಮೌನವಾಗಿ ಆಲಿಸಿದ್ದಾರೆ. ಗುರುವಾರ ಸ್ವೀಕರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಮಾಧುಸ್ವಾಮಿಯವರು ಇಂದು ಪ್ರತಿಕ್ರಿಯೆ ನೀಡಲು ಮುಂದಾದಾಗ ಬಿಜೆಪಿ ನಾಯಕರು ಅವರನ್ನು ಸಮಾಧಾನ ಮಾಡಿದರು.

    ನನ್ನನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು. ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರು ಸೇರಿ ನಮ್ಮ ಮನೆಗೆ ನೇರವಾಗಿ 5 ಕೋಟಿ ತಂದು ಕೊಟ್ಟರು. ಆಗ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದು ಶಾಸಕ ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು. ಈ ವೇಳೆ ಕೃಷ್ಣಬೈರೈಗೌಡ ಮಾತನಾಡಿ, ಶಾಸಕರ ಆರೋಪ ಸುಳ್ಳಾದರೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲಿ. ಹಕ್ಕು ಚ್ಯುತಿ ಮಂಡಿಸಲಿ ಎಂದು ಹೇಳಿದಾಗಲೂ ಕಮಲ ಶಾಸಕರು ಮೌನವಾಗಿ ಆಲಿಸುತ್ತಿದ್ದರು.

    ವಿಧಾನಸಭೆಯಲ್ಲಿ ಮಾತು ಆರಂಭಿಸಿದ್ದ ಸಿಎಂ ಅವರು, ತಮ್ಮ ರಾಜಕೀಯ ಜೀವನದ ಬಗ್ಗೆ ಸುಧೀರ್ಘವಾಗಿ ಮಾತಾನಾಡಿದರು. ಮುಖ್ಯಮಂತ್ರಿ ಯಾರಾಗ್ತಾರೋ, ಯಡಿಯೂರಪ್ಪ ಸಿಎಂ ಆಗ್ತಾರೋ ಇದೆಲ್ಲ ಅಪ್ರಸ್ತುತ ಇಲ್ಲಿ. ಆದರೆ ರಾಜಕೀಯ ಅಣಕವಾಗಬಾರದು. ಇತಿಹಾಸದ ಪುಟಗಳಿಗೆ ಸೇರ್ತೀವಿ ನಾವು ಎಂದು ಹೇಳಿದರು.

    ಇದೇ ವೇಳೆ ಶಾಸಕ ರೇಣುಕಾಚಾರ್ಯ ಕಾಲೆಳೆದ ಸಿಎಂ, ಅಲ್ನೋಡಿ ಶಾಸಕರನ್ನು ರೇಣುಕಾಚಾರ್ಯ ಕಾಯುತ್ತಿದ್ದಾರೆ. ಯಾರಾದ್ರೂ ಎಲ್ಲಾದ್ರೂ ಹೋಗುತ್ತಾರೋ ಎಂದು ಇದೇ ರೇಣುಕಾಚಾರ್ಯ ಬಿಎಸ್‍ವೈ ಬಗ್ಗೆ ಎಷ್ಟೆಲ್ಲ ಮಾತಾನಾಡಿಲ್ಲ ಹೇಳಿ ಎಂದು ಕೆಣಕಿದ್ದಾರೆ. ಆದರೂ ಬಿಜೆಪಿಯವರು ಮರು ಮಾತನಾಡದೆ ಸುಮ್ಮನಾಗಿದ್ದರು.

    ರೇಣುಕಾಚಾರ್ಯ ಅವರಿಗೆ ಪದೇ ಪದೇ ಟಾಂಗ್ ಕೊಟ್ಟ ಸಿಎಂ, ರೇವಣ್ಣನಿಗೆ ನಿಂಬೆಹಣ್ಣು, ದೇವಸ್ಥಾನಕ್ಕೆ ಹೋಗ್ತಾರೆ, ಮಾಟಮಂತ್ರ ಮಾಡುತ್ತಾರೆ ಎಂದು ಲೇವಡಿ ಮಾಡುತ್ತಾರೆ. ನಮ್ಮದು ದೇವರು ನಂಬುವ ಕುಟುಂಬ. ಮಾಟ ಮಂತ್ರ ಮಾಡುವ ಕುಟುಂಬವಲ್ಲ. ಆಂಜನೇಯ ದೇವಸ್ಥಾನ ಕ್ಕೆ ಹೋದಾಗ ನಿಂಬೆಹಣ್ಣು ಕೊಡಲ್ವೇ, ಅದನ್ನು ಮಾಟ ಮಂತ್ರ ಅನ್ನೋಕಾಗುತ್ತಾ ಎಂದು ಸಿಎಂ ಬಿಜೆಪಿಯವರಿಗೆ ಪ್ರಶ್ನೆ ಮಾಡಿದರು.

    ನಮ್ಮದು ಆ ವಂಶವಲ್ಲ. ಬಿಜೆಪಿಯವರು ದೇವರ ಹೆಸರು ರಾಮನ ಹೆಸರಿನಲ್ಲಿ ಮತ ಕೇಳ್ತೀರಿ. ನಿಂಬೆಹಣ್ಣು ಮಾಟ ಮಂತ್ರದಿಂದ ಸರ್ಕಾರ ಉಳಿಸೋದಾದ್ರೇ ಚುನಾವಣೆ ಯಾಕೆ ಬೇಕು, ಜನರ ಬಳಿ ಯಾಕೆ ಹೋಗಬೇಕು. ಇಲ್ಲಿಂದಲೇ ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಬಹುದಲ್ಲವೇ ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ.

    ನಾವು ಬರ್ತೀನಿ ಹೋಗುತ್ತೇನೆ. ಸಿಎಂ ಸ್ಥಾನ ಶಾಶ್ವತಲ್ಲ ಎಂದು ಸಿಎಂ ಪದೇ ಪದೇ ಪುನಾರುಚ್ಚರಿಸಿದರು. ಹಳೆ ಬಿಜೆಪಿ ಗಲಾಟೆ, ರೇಣುಕಾಚಾರ್ಯ ವಿರುದ್ಧ ಶಾಸಕರ ಗಲಾಟೆ ಬಗ್ಗೆಯೂ ಸಿಎಂ ಕಿಚಾಯಿಸಿದರು. ಆದರೂ ಬಿಜೆಪಿ ಮಾತ್ರ ತುಟಿಕ್ ಪಿಟಿಕ್ ಅಂದಿಲ್ಲ. ಮೈತ್ರಿ ನಾಯಕರ ಚರ್ಚೆಗಳನ್ನು ಮೌನವಾಗಿಯೇ ಆಲಿಸುತ್ತಿದ್ದಾರೆ.

  • ಅಪ್ಪ, ಮಕ್ಕಳು ಸೇರಿ ಕಾಂಗ್ರೆಸ್ ಹೆಸ್ರಿಲ್ಲದಂತೆ ಮಾಡ್ತಾರೆ- ಬಿಎಸ್‍ವೈ ನುಡಿದಿದ್ದ ಭವಿಷ್ಯ ವೈರಲ್

    ಅಪ್ಪ, ಮಕ್ಕಳು ಸೇರಿ ಕಾಂಗ್ರೆಸ್ ಹೆಸ್ರಿಲ್ಲದಂತೆ ಮಾಡ್ತಾರೆ- ಬಿಎಸ್‍ವೈ ನುಡಿದಿದ್ದ ಭವಿಷ್ಯ ವೈರಲ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಾಣುತ್ತಿರುವ ಬೆನ್ನಲ್ಲೇ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಈ ಹಿಂದೆ ಕಲಾಪದಲ್ಲಿ ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿದೆ.

    ಕಲಾಪದ ವೇಳೆ ಮಾತನಾಡಿದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚತ್ತಾಪ ಪಡುವವರಿದ್ದೀರಿ. ಯಾವುದೋ ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ ಎಲ್ಲರನ್ನು ರಕ್ಷಣೆ ಮಾಡಿ ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ ನೇತೃತ್ವವನ್ನು ವಹಿಸಿದಂತಹ ಖಳನಾಯಕ ನೀವೇ ಆಗಿದ್ದರಿಂದ ನಾನು ಹೇಳುತ್ತಿದ್ದೇನೆ ಎಂದಿದ್ದರು.

    ಇದೇ ವೇಳೆ ರೀ ಸ್ವಾಮಿ ನಿಮ್ಮ ಬಗ್ಗೆ ಗೌರವವಿದೆ. ಇಂದು ನಾನು ಯಾವುದೇ ಮಾತನ್ನು ಹೇಳೋದಿಲ್ಲ. ಕಾಲನೇ ಎಲ್ಲ ಹೇಳುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿಯವರು, ಪಾಪ ನನಗೂ, ಯಡಿಯೂರಪ್ಪ ಅವರಿಗೂ ಸಂಬಂಧ, ಪ್ರೀತಿ, ವಿಶ್ವಾಸ ಇದೆ. ಆದರೆ ನಾನು ಖಳನಾಯಕ ಅನಿಸಿಕೊಳ್ಳಲು ನಾನು ತಯಾರಿಲ್ಲ. ರಾಹುಲ್ ಗಾಂಧಿಯವರ ತತ್ವ, ಆದೇಶದಂತೆ ನಾನು ನನ್ನ ಪಕ್ಷದ ಕಾರ್ಯವನ್ನು ಮಾಡಿದ್ದೇನೆ ಎಂದು ಖಳನಾಯಕ ಪದ ಬಳಕೆಯನ್ನು ಖಂಡಿಸಿದ್ದರು.

    ಇದಕ್ಕೆ ದನಿಗೂಡಿಸಿದ ಬಿಎಸ್‍ವೈ, ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿರುವ ನಿಮ್ಮ ಬಗ್ಗೆ ಖಳನಾಯಕನನ್ನಾಗಿ ಮಾಡಲ. ಅಲ್ಲಿದ್ದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಅದೆಲ್ಲ ಅರ್ಥ ಆಗಬೇಕಲ್ವ. ನಿಮ್ಮನ್ನ ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಅನ್ನುವಂತಹ ಹೆಸರನ್ನು ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಸವಾಲೆಸೆದಿದ್ದರು.

    ವನವಾಸ ಅನುಭವಿಸದಂತಹ ಕುಮಾರಸ್ವಾಮಿಯವರಿಗೆ ಸಿಟ್ಟು, ರೋಷ, ಮತ್ಸರ ಇದೋದು ಸ್ವಾಭಾವಿಕ. ಇವುಗಳು ಯಾವ ಪುರುಷಾರ್ಥಕ್ಕೋ ಏನೋ ಎಂಬೋದು ಅಪ್ಪ-ಮಕ್ಕಳಿಗಷ್ಟೇ ಗೊತ್ತಿರಬೇಕು. ನಾಗರ ಹಾವಿನ ರೋಷಕ್ಕೆ ಶಿವಕುಮಾರ್ ಅವರೇ 12 ವರ್ಷ ಆಯಸ್ಸಂತೆ. ಕುಮಾರಸ್ವಾಮಿಯವರ ರೋಷಕ್ಕೆ ನಾಗರ ಹಾವಿಗಿಂತಲೂ ಹೆಚ್ಚು ದೀರ್ಘಾಯಸ್ಸು ಇದೆ. ದುರ್ಯೋಧನ ಕುಮಾರಸ್ವಾಮಿಯವರ ಮನೆ ದೇವರಾಗಿರಬೇಕು. ಯಾಕಂದ್ರೆ ಆತನ ಲಾಂಛನ ನಾಗರ ಹಾವು. ವಿನಾಶವೇ ದುರ್ಯೋಧನನ ಸಂಕಲ್ಪ. ಅದೇ ರೀತಿ ಕುಮಾರಸ್ವಾಮಿಯವರಿಗೆ ಕೂಡ ವಿನಾಶಕಾರನ ಬಾಯಲ್ಲಿ ವಿಕಾಸದ ಮಂತ್ರಗಳನ್ನು ಕೇಳುವಂತದ್ದು, ಕೊಳ್ಳಿ ದೆವ್ವ ಭಗವದ್ಗೀತೆಯನ್ನು ಪಠಿಸಿದಂತೆ ಅನ್ನೋದು ನನ್ನ ಮಾತಾಗಿದೆ ಎಂದರು.

    ಒಟ್ಟಿನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಬಿಎಸ್‍ವೈ ನುಡಿದ ಭವಿಷ್ಯದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಯಡಿಯೂರಪ್ಪ ತಪ್ಪು ಹೇಳಲ್ಲ ಎಂದು ಬರೆದುಕೊಂಡಿದೆ.