Tag: Vidhana Parishath

  • ಸೋಮವಾರ ಪರಿಷತ್‍ನ ಆರು ಸ್ಥಾನಗಳಿಗೆ ಎಲೆಕ್ಷನ್

    ಸೋಮವಾರ ಪರಿಷತ್‍ನ ಆರು ಸ್ಥಾನಗಳಿಗೆ ಎಲೆಕ್ಷನ್

    ಬೆಂಗಳೂರು: ವಿಧಾನ ಪರಿಷತ್ ನ ಶಿಕ್ಷಕರು ಮತ್ತು ಪದವೀಧರ 6 ಕ್ಷೇತ್ರಗಳಿಗೆ ಸೋಮವಾರ ಚುನಾವಣೆ ನಡೆಯಲಿದೆ.  ಚುನಾವಣೆಗೆ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.

    ಲೋಕಸಭಾ ಚುನಾವಣೆಯಂತೆ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ಪಕ್ಷ ಕಾಂಗ್ರೆಸ್ ಅನ್ನ ಎದುರಿಸುತ್ತಿದೆ. 6 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡ್ತಿದ್ದು, ಬಿಜೆಪಿ 4 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಆಡಳಿತ ಪಕ್ಷಕ್ಕೆ ಸವಾಲ್ ಹಾಕಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಮತದಾನ ಮಾಡುವವರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ ಪೋರ್ಟ್ ಸೇರಿ ಸರ್ಕಾರದ ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದಾಗಿದೆ.

    ವಿಧಾನ ಪರಿಷತ್ ಚುನಾವಣೆ ವಿವರ ಹೀಗಿದೆ:
    ಪದವೀಧರ ಕ್ಷೇತ್ರದಲ್ಲಿ ಒಟ್ಟು 3,63,573 ಮತಗಳಿವೆ. 461 ಒಟ್ಟು ಮತ ಕೇಂದ್ರಗಳಿವೆ. ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 70260 ಮತಗಳಿದ್ದು, 170 ಮತ ಕೇಂದ್ರಗಳಿವೆ. ಒಟ್ಟಾರೆ 78 ಅಭ್ಯರ್ಥಿಗಳಿದ್ದಾರೆ.

    * ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿದ್ದಾರೆ. ಇನ್ನು 1,56,623 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಬಿಜೆಪಿಯಿಂದ ಅಮರನಾಥ ಪಾಟೀಲ್ ಕಣದಲ್ಲಿದ್ದಾರೆ.
    * ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಅಭ್ಯರ್ಥಿಗಳಿದ್ದಾರೆ. 85090 ಒಟ್ಟು ಮತದಾರರಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಆಯನೂರು ಮಂಜುನಾಥ್ ಹಾಗೂ ಬಿಜೆಪಿಯಿಂದ ಧನಂಜಯ ಸರ್ಜಿ ಸ್ಪರ್ಧಿಸುತ್ತಿದ್ದಾರೆ.
    * ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15 ಮಂದಿ ಅಭ್ಯರ್ಥಿಗಳಿದ್ದಾರೆ. 1,21,860 ಒಟ್ಟು ಮತದಾರರಿದ್ದು, ಕಾಂಗ್ರೆಸ್ ನಿಂದ ರಾಮೋಜಿ ಗೌಡ ಹಾಗೂ ಬಿಜೆಪಿಯಿಂದ ಅ. ದೇವೇಗೌಡ ಚುಣವಣಾ ಅಖಾಡದಲ್ಲಿದ್ದಾರೆ.

    * ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳಿದ್ದಾರೆ. 25,309 ಒಟ್ಟು ಮತದಾರರು ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಡಿ.ಟಿ. ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ವೈ.ಎ. ನಾರಾಯಣಸ್ವಾಮಿ ಕಣದಲ್ಲಿದ್ದಾರೆ.
    * ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಮಂದಿ ಅಭ್ಯರ್ಥಿಗಳಿದ್ದು, 23,402 ಮಂದಿ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಕೆ.ಕೆ. ಮಂಜುನಾಥ್ ಸ್ಪರ್ಧಿಸಿದರೆ, ಜೆಡಿಎಸ್‍ನಿಂದ ಭೋಜೇಗೌಡ ಸ್ಪರ್ಧಿಸುತ್ತಿದ್ದಾರೆ.
    * ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳಿದ್ದಾರೆ. 21549 ಮಂದಿ ಒಟ್ಟು ಮತದಾರರಿದ್ದಾರೆ. ಕಾಂಗ್ರೆಸ್‍ನಿಂದ ಮರಿತಿಬ್ಬೇಗೌಡ ಹಾಗೂ ಜೆಡಿಎಸ್‍ನಿಂದ ವಿವೇಕಾನಂದ ಚುನಾವಣಾ ಕಣದಲ್ಲಿದ್ದಾರೆ.

  • ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಕಡೇ ಕ್ಷಣದ ಬದಲಾವಣೆ ಮಧ್ಯೆ ಟಿಕೆಟ್ ಘೋಷಣೆ – ಹೈಡ್ರಾಮಾ ಮೂಲಕ ಕಮಲ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ಬೆಂಗಳೂರು: ವಿಧಾನಪರಿಷತ್ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಡ್ರಾಮವೇ ನಡೆದಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬೆಳಗ್ಗೆ 11 ರವರೆಗೂ ಅಭ್ಯರ್ಥಿಗಳ ಲಿಸ್ಟ್ ಪ್ರಕಟ ಆಗಿರಲೇ ಇಲ್ಲ. ಕೊನೆಗೆ ಲಿಸ್ಟ್ ಪ್ರಕಟವಾದಾಗ ನಡೆದಿದ್ದು, ಮತ್ತೊಂದು ಹೈಡ್ರಾಮಾ.

    ಅಳೆದು ತೂಗಿ ಸಾಕಷ್ಟು ಲೆಕ್ಕಾಚಾರಗಳೊಂದಿಗೆ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಮಾಜಿ ಸಚಿವ ಲಕ್ಷ್ಮಣ ಸವದಿ, ಎಸ್‍ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ್ ಸ್ವಾಮಿ, ರಾಜ್ಯ ಕಾರ್ಯದರ್ಶಿ ಎಸ್.ಕೇಶವ್ ಪ್ರಸಾದ್ ಹಾಗೂ ಕೊಪ್ಪಳದ ಬಿಜೆಪಿ ಮುಖಂಡೆ ಹೇಮಲತಾ ನಾಯಕ್‍ಗೆ ಬಿಜೆಪಿ ಪರಿಷತ್ ಟಿಕೆಟ್ ನೀಡಿದೆ. ಈ ನಾಲ್ವರ ಪೈಕಿ ಲಕ್ಷ್ಮಣ ಸವದಿ ಮತ್ತು ಹೇಮಲತಾ ನಾಯಕ್‍ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡಲಾಯ್ತು. ಇದನ್ನೂ ಓದಿ: ಜಿಲ್ಲಾಧಿಕಾರಿ ಸಭೆಗೆ ಗೈರಾದ ತಾಲೂಕು ವೈದ್ಯಾಧಿಕಾರಿಗಳು ಅಮಾನತು

    ಬೆಳಗ್ಗೆ 11ಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಆಯ್ತು. ಬಳಿಕ ಹೇಮಲತಾ ನಾಯಕ್ ಹೊರತುಪಡಿಸಿ ಉಳಿದ ಮೂವರು ಅಭ್ಯರ್ಥಿಗಳು ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷರಿಂದ ಬಿ ಫಾರಂ ಪಡೆದುಕೊಂಡ್ರು. ಹೇಮಲತಾ ನಾಯಕ್ ಆಯ್ಕೆ ಕೊನೆಯ ಕ್ಷಣದಲ್ಲಿ ಆದ ಹಿನ್ನೆಲೆಯಲ್ಲಿ ಅವರು ಕೊಪ್ಪಳದಿಂದ ಬೆಂಗಳೂರಿಗೆ ಬರುವಲ್ಲಿ ತಡವಾಯ್ತು. ಅಷ್ಟರಲ್ಲಾಗಲೇ ಉಳಿದ ಮೂವರು ಅಭ್ಯರ್ಥಿಗಳು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದ್ರು.

    ಕೊಪ್ಪಳದಿಂದ ತುಮಕೂರಿಗೆ ಬಂದಿದ್ದ ಹೇಮಲತಾ ನಾಯಕ್‍ಗೆ ಬೆಂಗಳೂರಿಗೆ ಬರಲು ಬಿಜೆಪಿ ಕಚೇರಿಯಿಂದ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ನಾಮಪತ್ರಕ್ಕೆ ಮುಕ್ಕಾಲು ಗಂಟೆ ಇದೆ ಅನ್ನುವಾಗ ನಗರದ ಜಕ್ಕೂರಿಗೆ ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ಹೇಮಲತಾ ನಾಯಕ್, ಅಲ್ಲಿಂದ ಎಸ್ಕಾರ್ಟ್ ವಾಹನದ ಸೌಕರ್ಯದೊಂದಿಗೆ ವಿಧಾನಸೌಧಕ್ಕೆ ವೇಗವಾಗಿ ಬಂದು ನಾಮಪತ್ರ ಸಲ್ಲಿಸಬೇಕಾಯ್ತು. ಹೇಮಲತಾ ನಾಯಕ್‍ಗೆ ಹೆಲಿಕಾಪ್ಟರ್ ಮತ್ತು ಎಸ್ಕಾರ್ಟ್ ವ್ಯವಸ್ಥೆ ಒದಗಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    HEMALATHA

    ಆದರೆ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಬಾರಿ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಗೊಂದಲಕಾರಿ ಸನ್ನಿವೇಶಗಳು ನಡೆದವು. ಜೂನ್ 3 ರಂದು ನಡೆಯಲಿರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಇದೆ. ಆದ್ರೆ ಈ ನಾಲ್ಕು ಸ್ಥಾನಗಳಿಗೆ ಟಿಕೆಟ್ ಪಟ್ಟಿ ಘೋಷಣೆ ಮಾಡಲು ಈ ಸಲ ಬಿಜೆಪಿಯಲ್ಲಿ ಸಾಕಷ್ಟು ವಿಳಂಬ ಆಯ್ತು. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನ ಆಗಿದ್ರೂ ಇಂದು ಬೆಳಗ್ಗೆ 11 ಗಂಟೆವರೆಗೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಆಗಿರ್ಲಿಲ್ಲ. ಕೊನೆಗೆ ಬೆಳಗ್ಗೆ 11 ಗಂಟೆಗೆ ಅಂತೂ ಪಟ್ಟಿ ಪ್ರಕಟ ಆದಾಗ ಹಲವರಿಗೆ ಶಾಕ್ ಕಾದಿತ್ತು.

    ಬಿಜೆಪಿಯ ಅಧಿಕೃತ ಪಟ್ಟಿ ಪ್ರಕಟಕ್ಕೂ ಮುನ್ನವೇ ಮೂವರಿಗೆ ಬಿಜೆಪಿಯ ಪ್ರಮುಖ ನಾಯಕರೊಬ್ಬರಿಂದ ಹಿಂದಿನ ರಾತ್ರಿಯೇ ಕರೆ ಹೋಗಿತ್ತು. ದಾಖಲೆ ರೆಡಿ ಮಾಡ್ಕೊಂಡು ಬೆಜೆಪಿ ಕಚೇರಿಗೆ ಬರುವಂತೆ ಲಿಂಗರಾಜ್ ಪಾಟೀಲ್, ಚಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್‍ಗೆ ಆ ನಾಯಕರು ಕರೆ ಮಾಡಿ ತಿಳಿಸಿದ್ರು. ಸಿ.ಮಂಜುಳ ಅವರಿಗೆ ಪಕ್ಷದ ಕಚೇರಿಗೆ ಬರುವಂತೆಯೂ ಸೂಚಿಸಲಾಗಿತ್ತು.

    ಈ ನಾಲ್ವರೂ ತಮಗೆ ಟಿಕೆಟ್ ಫಿಕ್ಸ್ ಎಂದು ಖುಷಿಯಿಂದ ಪಕ್ಷದ ಕಚೇರಿಗೆ ಆಗಮಿಸಿದ್ರು. ಆದ್ರೆ ಅಧಿಕೃತವಾಗಿ ಟಿಕೆಟ್ ಪಟ್ಟಿ ಘೋಷಣೆ ಆದಾಗ, ಲಿಂಗರಾಜ್ ಪಾಟೀಲ್ ಮತ್ತು ಸಿ ಮಂಜುಳಾಗೆ ಶಾಕ್ ಕಾದಿತ್ತು. ಇವರಿಬ್ಬರ ಬದಲಾಗಿ ಹಾಲಿ ಎಮ್ಮೆಲ್ಸಿ ಲಕ್ಷ್ಮಣ ಸವದಿ ಮತ್ತು ಎಸ್ಟಿ ನಾಯಕಿ ಹೇಮಲತಾ ನಾಯಕ್‍ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಬಿ ವೈ ವಿಜಯೇಂದ್ರಗೆ ಟಿಕೆಟ್ ಕೊಡಲ್ಲ ಎಂದು ಮೊನ್ನೆ ರಾತ್ರಿಯೇ ರಾಜ್ಯ ಬಿಜೆಪಿ ಘಟಕಕ್ಕೆ ಸಂದೇಶ ರವಾನಿಸಲಾಗಿತ್ತು. ಇದನ್ನೂ ಓದಿ: ತನ್ನ ಕಥೆಯನ್ನು ಪಠ್ಯದಿಂದ ಕೈ ಬಿಡಿ: ದೇವನೂರು ಮಹಾದೇವ 

    ಒಟ್ಟಿನಲ್ಲಿ ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಘೋಷಣೆಯಲ್ಲಿ ನಡೆದ ಹೈಡ್ರಾಮಾ ಎಲ್ಲರ ಗಮನ ಸೆಳೆಯಿತು. ಈ ಸಲ ಹೈಕಮಾಂಡ್‍ನಿಂದಲೂ ನಿಶ್ಚಿತ ನಿರ್ಧಾರ ಹೊರಹೊಮ್ಮದೇ ಗೊಂದಲ ಸೃಷ್ಟಿಯಾಗಿದ್ದು ಚರ್ಚೆ ಹುಟ್ಟಿಸಿದೆ.

  • ಎಚ್‍ಡಿ ದೇವೇಗೌಡರ ನಡೆಗೆ ಕುಮಾರಸ್ವಾಮಿ ಅಸಮಾಧಾನ!

    ಎಚ್‍ಡಿ ದೇವೇಗೌಡರ ನಡೆಗೆ ಕುಮಾರಸ್ವಾಮಿ ಅಸಮಾಧಾನ!

    ಬೆಂಗಳೂರು: ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಯಿಂದ ದೊಡ್ಡ ಗೌಡರ ಮನೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಸಿಎಂ ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡಿದ್ದಾರಂತೆ.

    ತಮ್ಮ ಆಪ್ತ ಮಾಜಿ ಶಾಸಕ ಕೋನರೆಡ್ಡಿ ಅವರಿಗೆ ಪರಿಷತ್ ಟಿಕೆಟ್ ಕೊಡಲು ಕುಮಾರಸ್ವಾಮಿ ನಿರ್ಧರಿಸಿದ್ದರು. ಅಲ್ಲದೇ ಕೋನರೆಡ್ಡಿಗೆ ನಾಮಪತ್ರ ಸಲ್ಲಿಸಲು ಶಾಸಕರ ಸಹಿಯುಳ್ಳ ನಾಮಪತ್ರವನ್ನೂ ಕೂಡ ಕೊಟ್ಟಿದ್ದರು. ಆದ್ರೆ ಕೊನೆ ಘಳಿಗೆಯಲ್ಲಿ ದೇವೇ ಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದಾರೆ. ದೇವೇಗೌಡರ ಈ ನಡೆಗೆ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಣ್ಣ ರೇವಣ್ಣ ಹಾಗೂ ಕುಟುಂಬದವರ ಹಸ್ತಕ್ಷೇಪದಿಂದ ಕೋನರೆಡ್ಡಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು. ಕುಟುಂಬದ ಒತ್ತಡಕ್ಕೆ ಮಣಿದ ದೇವೇಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದರು. ಇದ್ರೀಂದ ಕೋಪಗೊಂಡಿರೋ ಕುಮಾರಸ್ವಾಮಿ, ನಿವಾಸ ಪದ್ಮನಾಭನಗರಕ್ಕೆ ಹೋಗುತ್ತಿಲ್ಲ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಡಿಕೆ ಮಾತನ್ನು ನಂಬಿ ಗರ್ಭಿಣಿಯಾಗಿದ್ರೆ ಬೀದಿಗೆ ಬರುತ್ತಿದ್ದರು: ಆಯನೂರು ಮಂಜುನಾಥ್

    ಎಚ್‍ಡಿಕೆ ಮಾತನ್ನು ನಂಬಿ ಗರ್ಭಿಣಿಯಾಗಿದ್ರೆ ಬೀದಿಗೆ ಬರುತ್ತಿದ್ದರು: ಆಯನೂರು ಮಂಜುನಾಥ್

    ಬೆಂಗಳೂರು: ಮಹಿಳೆಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಕೇಳಿ ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರವರು ಜೆಡಿಎಸ್ ಪ್ರಣಾಳಿಕೆಗೆ ಟಾಂಗ್ ನೀಡಿದ್ದಾರೆ.

    ಇಂದು ಮಧ್ಯಾಹ್ನದ ವೇಳೆ ಬಜೆಟ್ ಬಗ್ಗೆ ನಡೆದ ಚರ್ಚೆಯಲ್ಲಿ ಅಯನೂರು ಮಂಜುನಾಥ್ ಜೆಡಿಎಸ್ ಪ್ರಣಾಳಿಕೆಯ ಬಗ್ಗೆ ಮಾತನಾಡುತ್ತಾ, ಸಿಎಂ ಕುಮಾರಸ್ವಾಮಿಯವರು ತಮ್ಮ ಜೆಡಿಎಸ್ ಪ್ರಣಾಳಿಕೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 6 ಸಾವಿರ ರುಪಾಯಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಆದರೆ ತಮ್ಮ ಬಜೆಟ್ ನಲ್ಲಿ ಇದಕ್ಕೆ ಮಾತು ತಪ್ಪಿದ್ದಾರೆ. ಒಂದು ವೇಳೆ ಸಿಎಂ ಅವರ ಮಾತನ್ನು ನಂಬಿ ಮಹಿಳೆಯರು ಗರ್ಭಿಣಿಯಾಗಿದ್ದರೆ ಅವರ ಸ್ಥಿತಿ ಹರೋಹರ ಆಗುತಿತ್ತು ಎಂದು ಹೇಳಿದರು.

    ಆಯನೂರು ಬಳಸಿದ ಪದಕ್ಕೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಹಿಳಾ ಮತ್ತು ಕಲ್ಯಾಣ ಖಾತೆಯ ಸಚಿವೆ ಜಯಮಾಲಾ, ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮ್ಮ ಬಾಲರಾಜು, ವೀಣಾ ಅಚ್ಚಯ್ಯ ಅವರು ಮಂಜುನಾಥ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಯಾರು ಯಾರನ್ನು ಕೇಳಿ ಗರ್ಭಿಣಿಯಾಗುವುದಿಲ್ಲ. ನಿಮ್ಮನ್ನು ಹೆರುವಾಗ ನಿಮ್ಮ ತಾಯಿ ಯಾರನ್ನಾದರೂ ಕೇಳಿ ಗರ್ಭಿಣಿಯಾಗಿದ್ದರೆ ಎಂದು ಪ್ರಶ್ನಿಸಿದರು. ಇದರಿಂದ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಉಂಟಾಯಿತು.

    ಈ ವೇಳೆ ಮಧ್ಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ ಅವರು, ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ, ನಿಮ್ಮಲ್ಲೂ ಹೆಣ್ಮಕ್ಕಳು ಇದ್ದಾರೆ ಹೀಗೆಲ್ಲಾ ಮಾತನಾಡಬೇಡಿ ಎಂದು ಆಯನೂರು ಮಂಜುನಾಥ್ ಅವರಿಗೆ ತಿರುಗೇಟು ನೀಡಿದರು.