Tag: Vidhana Parishat

  • ಸೋನಿಯಾಗಾಂಧಿ ಭೇಟಿಯಾದ ಡಿಕೆಶಿ – ಸಂಜೆ ವೇಳೆಗೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ ಘೋಷಣೆ

    ಸೋನಿಯಾಗಾಂಧಿ ಭೇಟಿಯಾದ ಡಿಕೆಶಿ – ಸಂಜೆ ವೇಳೆಗೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ ಘೋಷಣೆ

    ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಸಂಜೆ ಬಳಿಕ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಿಸಬಹುದು ಎಂದು ಮೂಲಗಳು ಹೇಳಿವೆ.

    ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಿನ್ನೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಭೇಟಿ ಮಾಡಿದ್ದ ಡಿ.ಕೆ ಶಿವಕುಮಾರ್ ಇಂದು ಸೋನಿಯಾಗಾಂಧಿ ಭೇಟಿಯಾಗಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ.

    ಸೋನಿಯಾಗಾಂಧಿ ಭೇಟಿ ವೇಳೆ ಕೋಲಾರ, ಮೈಸೂರು ಮತ್ತು ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇರುವ ಗೊಂದಲಗಳ ಬಗ್ಗೆ ಚರ್ಚಿಸಿದ್ದು ಬಾಕಿ ಉಳಿದ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಒಂದೊಂದು ಹೆಸರುಗಳನ್ನು ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಂಸತ್ ಚುನಾವಣೆ ವೇಳೆ ಜೆಡಿಎಸ್ ಬೆಂಬಲಿಸಿ ತಪ್ಪು ಮಾಡಿದ್ದೇವೆ: MLC ಗೋಪಾಲಸ್ವಾಮಿ

    ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಸೋನಿಯಾ ಗಾಂಧಿ ಭೇಟಿ ಮಾಡಿ ಹಲವು ವಿಷಯ ಚರ್ಚಿಸಿದ್ದೇನೆ, ವಿಧಾನ ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿದೆ. ಅವರು ರಾಜ್ಯ ಉಸ್ತುವಾರಿ ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಪ್ರಕಟಿಸುತ್ತಾರೆ, 2-3 ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಒಂದೇ ಬಾರಿಗೆ ಪ್ರಕಟ ಆಗುತ್ತೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಬಗ್ಗೆ ಮತ್ತು ಪಕ್ಷ ಸಂಘಟನೆ ಬಗ್ಗೆ ಸೋನಿಯಾ ಗಾಂಧಿ ಜೊತೆ ಚರ್ಚಿಸಿದ್ದೇನೆ ಎಂದರು.

    ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರದಿಂದ ಎಸ್.ರವಿ, ಶಿವಮೊಗ್ಗದಿಂದ ಪ್ರಸನ್ನ ಕುಮಾರ್, ಚಿಕ್ಕಮಗಳೂರುನಿಂದ ಗಾಯಿತ್ರಿ ಶಾಂತೇಗೌಡ, ತುಮಕೂರುನಿಂದ ರಾಜೇಂದ್ರ, ಚಿತ್ರದುರ್ಗ ದಾವಣಗೆರೆಯಿಂದ ಸೋಮಶೇಖರ್, ಮಂಡ್ಯದಿಂದ ದಿನೇಶ್ ಗೂಳಿ ಗೌಡ, ಕೊಡಗುನಿಂದ ಮಂಥರ್ ಗೌಡ, ಹಾಸನದಿಂದ ಶಂಕರ್, ಕೊಪ್ಪಳ – ರಾಯಚೂರಿನಿಂದ ಶರಣೇಗೌಡ ಬಯ್ಯಾಪುರ, ಧಾರವಾಡದಿಂದ (ದ್ವಿ ಸದಸ್ಯ ಸ್ಥಾನ) ಸಲೀಂ ಅಹಮ್ಮದ್, ಬೆಳಗಾವಿಯಿಂದ (ದ್ವಿ ಸದಸ್ಯ ಸ್ಥಾನ)ಚನ್ನರಾಜು, ಗದಗನಿಂದ ಆರ್.ಎಸ್ ಪಾಟೀಲ್, ಉತ್ತರ ಕನ್ನಡದಿಂದ ಭೀಮಣ್ಣ ನಾಯಕ ಹೆಸರು ಬಹುತೇಕ ಖಚಿತವಾಗಿದೆ.

  • ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಧ್ರುವನಾರಾಯಣ್‍ಗಾಗಿ ಎಂಎಲ್‍ಸಿ ಸ್ಥಾನ ಬಿಟ್ಟು ಕೊಡಲು ಸಿದ್ಧ: ಧರ್ಮಸೇನಾ

    ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಶುಕ್ರವಾರದಂದು ಹಾಸನದಲ್ಲಿ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಇದೀಗ ಪರಿಷತ್ ಸದಸ್ಯ ಧರ್ಮಸೇನಾ ಅವರು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರಿಗಾಗಿ ತನ್ನ ಸ್ಥಾನವನ್ನು ಬಿಟ್ಟು ಕೊಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧ್ರುವನಾರಾಯಣ್ ಅವರು, ಅಲ್ಪ ಮತಗಳಿಂದ ಸೋಲನ್ನ ಅನುಭವಿಸಿದ್ದಾರೆ. ಇದು ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದರು. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನಾನು ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನು ಯಾರಿಗೂ ಹೇಳಿಲ್ಲ, ಆದರೆ ಈಗ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಿದರು.

    ನನ್ನ ಅವಶ್ಯಕತೆ ಇರಬಹುದು, ಆದರೆ ಅದಕ್ಕಿಂತ ಹೆಚ್ಚು ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ, ಮೈಸೂರು ಚಾಮರಾಜನಗರದ ಜನ ಆರಿಸುವಂತದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕೆಂದು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

    ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು 1,817 ಮತಗಳ ಅಂತರದಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಧ್ರುವನಾರಾಯಣ್ 5,66,720 ಮತಗಳನ್ನು ಗಳಿಸಿದ್ದರೆ, ಬಿಎಸ್‍ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,208 ಮತಗಳನ್ನು ಪಡೆದಿದ್ದಾರೆ.

  • ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಭಾಪತಿಗೆ ದೂರು

    ಹಾಸನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಭಾಪತಿಗೆ ದೂರು

    ಹಾಸನ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿಯವರು ಸಭಾಪತಿ ಶಂಕರಮೂರ್ತಿ ಅವರಿಗೆ ದೂರು ನೀಡಿದ್ದಾರೆ.

    ಹಾಸನಾಂಬ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ರೋಹಿಣಿ ಸಿಂಧೂರಿ ಅವರು ನನ್ನನ್ನು ಆಹ್ವಾನಿಸದೆ, ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಗೋಪಾಲಸ್ವಾಮಿಯವರು ದೂರಿನಲ್ಲಿ ಆರೋಪಿಸಿದ್ದಾರೆ.

    ಸೆಪ್ಟೆಂಬರ್ 27 ಡಿಸಿ ಕಚೇರಿಯಲ್ಲಿ ಹಾಸನಾಂಬ ಜಾತ್ರೆ ಪೂರ್ವಭಾವಿ ಸಭೆಗೆ ಇತರೆ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ. ಆದರೆ ನನ್ನನ್ನು ಉದ್ದೇಶಪೂರ್ವಕವಾಗಿ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಹೀಗಾಗಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಬೇಕೆಂದು ಸಭಾಪತಿ ಅವರಲ್ಲಿ ಮನವಿ ಮಾಡಿಕೊಂಡು ಲಿಖಿತ ದೂರು ನೀಡಿದ್ದಾರೆ.