Tag: vidhana parishad

  • ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    – ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ
    – ಹಳೆಯದನ್ನು ನೆನೆದು ಭಾವುಕರಾದ ಸಿಎಂ ಇಬ್ರಾಹಿಂ

    ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು, ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಧರ್ಮರಾಯರ ರೀತಿ ಕೆಲಸ ನಿರ್ವಹಣೆ ಮಾಡಬೇಕು. ಸಭಾಪತಿ, ಉಪಸಭಾಪತಿ, ಸ್ಪೀಕರ್ ಹುದ್ದೆಯನ್ನು ಧರ್ಮರಾಯನ ರೀತಿ ನಿರ್ವಹಿಸಿ ಧರ್ಮ ಪಾಲನೆ ಮಾಡುವ ಕೆಲಸವಾಗಬೇಕು. ಧರ್ಮರಾಯನ ಮಾತನ್ನು ಸಭೆಯ ಎಲ್ಲರೂ ಕೇಳಬೇಕು ಎಂದು ಹೇಳಿದರು.

    ಜಯಮಾಲಾ ಅವರು ಮಾತು ಮುಗಿಸುತ್ತಿದ್ದಂತೆ ಧ್ವನಿಗೂಡಿಸಿದ ಸದಸ್ಯ ಶರಣಪ್ಪ ಮಟ್ಟೂರು ಅವರು, ಪರಿಷತ್‍ನ ವಿಪಕ್ಷ ನಾಯಕ, ಸಭಾನಾಯಕಿ, ಉಪಸಭಾಪತಿ, ಸಭಾಪತಿ ಸ್ಥಾನ ಮಲೆನಾಡಿಗೆ ಹೋಗಿದೆ. ನಾವು ಈಗ ಏನೇ ಕೇಳಬೇಕಾದರೂ ಇವರನ್ನು ಕೇಳಬೇಕು ಎಂದು ನಗೆಬೀರಿದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ನಾನು ಹುಟ್ಟಿದ್ದು ಮಂಗಳೂರು, ಬೆಳೆದಿದ್ದು ಚಿಕ್ಕಮಗಳೂರು. ಕೆಲಸ ಮಾಡಿದ್ದು ಬೆಂಗಳೂರು. ನಾನು ಬಾಲ್ಯದ ದಿನಗಳನ್ನು ಕಳೆದಿದ್ದು ಚಿಕ್ಕಮಗಳೂರಿನಲ್ಲಿ. ನಾವು ಕಲಾವಿದರು. ಎಲ್ಲರೂ ನಮ್ಮವರು ಅಂತ ನೋಡುತ್ತೇವೆ. ಆದರೆ ಕರ್ನಾಟಕ ಒಂದೇ ಎಂಬ ಆಸೆ ನಮ್ಮದು ಎಂದು ಹೇಳಿದರು.

    ಈ ಚರ್ಚೆಯ ನಡುವೆ ಪ್ರವೇಶ ಮಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಭೋಜೇಗೌಡ ಇಲ್ಲೇ ಇದ್ದಾರೆ, ಅರ್ಜುನನ ರೀತಿ. ಅವರು ಧರ್ಮರಾಯನ ಮಾತು ಕೇಳೊಲ್ಲ. ಭೋಜೇಗೌಡ ಅವರನ್ನು ಕಟ್ಟಿ ಹಾಕಬೇಕು ಅಂತ ಹಾಸ್ಯ ಮಾಡಿದರು. ಇದಕ್ಕೆ ಮತ್ತಷ್ಟು ನಗೆ ಸೇರಿಸಿದ ಜಯಮಾಲ ಅವರು, ಮಹಾಭಾರತದಲ್ಲಿ ಅರ್ಜುನ ಧರ್ಮರಾಯನ ಮಾತು ಕೇಳುತ್ತಿರಲಿಲ್ಲ. ಆದರೆ ಇಲ್ಲಿ ಧರ್ಮರಾಯನ ಮಾತು ಕೇಳಬೇಕು ಅಂತ ಭೋಜೇಗೌಡರಿಗೆ ಹೇಳಿದರು.

    ಲೆಹರ್ ಸಿಂಗ್ ಮಾತನಾಡಿ, ಧರ್ಮರಾಯನ ಮಾತು ಎಲ್ಲರೂ ಕೇಳುತ್ತಾರೆ. ಆದರೆ ದುರ್ಯೋಧನ ಕೇಳುವುದಿಲ್ಲ. ಈ ಸದನದಲ್ಲಿ ದುರ್ಯೋಧನ ಯಾರು ಮೊದಲು ಹುಡುಕಿ ಅಂತ ಹಾಸ್ಯ ಮಾಡಿದರು. ತಕ್ಷಣವೇ ಭಾವನಾತ್ಮಕರಾದ ಸಿಎಂ ಇಬ್ರಾಹಿಂ, 22 ವರ್ಷದ ಬಳಿಕ ನನಗೆ ಸಮಾಧಾನ ಆಗಿದೆ. ನಾನು ಜನತಾದಳದಲ್ಲಿ ಇದ್ದಾಗ ಧರ್ಮೇಗೌಡ ಅವರ ತಂದೆಯನ್ನು ಮಂತ್ರಿ ಮಾಡಲು ನಾನು ತುಂಬ ಪ್ರಯತ್ನ ಪಟ್ಟಿದ್ದೆ. ಆದರೆ ಅದು ಆಗಿರಲಿಲ್ಲ. ಇಂದು ನೀವು ಉಪ ಸಭಾಪತಿ ಆಗಿರುವುದು ನನಗೆ ನೆಮ್ಮದಿ. ಈ ವಿಚಾರವಾಗಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಪರವಾದ ಕೆಲಸ ಮಾಡಲಿ ಎಂದು ಹಳೇ ನೆನಪು ನೆನಪಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸಭೆಯಲ್ಲಿಂದು ಸಾಲಮನ್ನಾ ಚರ್ಚೆ – ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜು

    ವಿಧಾನಸಭೆಯಲ್ಲಿಂದು ಸಾಲಮನ್ನಾ ಚರ್ಚೆ – ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜು

    ಬೆಂಗಳೂರು: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಇಂದು ವಿಧಾನಸಭೆ ಕಲಾಪದಲ್ಲಿ ರೈತರ ಸಾಲಮನ್ನಾ ವಿಚಾರದ ಕುರಿತು ಚರ್ಚೆ ನಡೆಯಲಿದೆ.

    ಈ ವೇಳೆ ರೈತರ ಸಾಲಮನ್ನಾ ವಿಚಾರದಲ್ಲಿನ ಗೊಂದಲಗಳನ್ನಿಟ್ಟುಕೊಂಡೇ ದೋಸ್ತಿ ಸರ್ಕಾರದ ಮೇಲೆ ಬಿಜೆಪಿ ಪ್ರಹಾರಕ್ಕೆ ಸಜ್ಜಾಗಿದೆ. ಈ ವೇಳೆ ಸದನದಲ್ಲಿ ಕಾವೇರುವ ಚರ್ಚೆ ನಡೆಯಲಿದ್ದು, ಪರಸ್ಪರ ಕಾದಾಟ ಜೋರಾಗುವ ಸಾಧ್ಯತೆ ಇದೆ. ಜೊತೆಗೆ ಬರದ ಮೇಲಿನ ಚರ್ಚೆಗೆ ಇಂದು ಸರ್ಕಾರ ಉತ್ತರ ನೀಡಲಿದೆ. ಸರ್ಕಾರದಿಂದ ಸಮರ್ಪಕ ಉತ್ತರ ದೊರೆಯದಿದ್ದರೆ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಭಾತ್ಯಾಗ ಮಾಡುವ ಸಾಧ್ಯತೆಯೂ ಇದೆ.

    ಇತ್ತ ಪರಿಷತ್‍ನಲ್ಲಿ ನಾಲ್ಕನೇ ದಿನವಾದ ಇಂದು ಬರದ ಬಗ್ಗೆ ಚರ್ಚೆ ನಡೆಯಲಿದೆ. ಮಂಗಳವಾರ ಸಭಾಪತಿ ಚುನಾವಣೆ ಹಿನ್ನೆಲೆಯಲ್ಲಿ ಸಮಯದ ಅಭಾವದಿಂದ ಚರ್ಚೆ ನಡೆದಿರಲಿಲ್ಲ. ಹೀಗಾಗಿ ಇಂದು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾದಿಯಾಗಿ ಬಿಜೆಪಿ ಸದಸ್ಯರು ನಿಯಮ 68 ರ ಅಡಿ ಚರ್ಚೆ ನಡೆಸಲಿದ್ದು, ಬರ ನಿರ್ವಹಣೆಯಲ್ಲಿ ಸರ್ಕಾರದ ವಿಫಲತೆ ವಿರುದ್ಧ ವಿಪಕ್ಷ ತರಾಟೆಗೆ ತೆಗೆದುಕೊಳ್ಳಲಿದೆ.

    ಅಲ್ಲದೇ ಮೂರು ದಿನಗಳ ಕಲಾಪದ ಬಳಿಕ ಇಂದು ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಪರಿಷತ್ ಗೆ ಆಗಮಿಸುತ್ತಿದ್ದು, ಎನ್.ಪಿ. ಎಸ್, ಕಾಲ್ಪನಿಕ ವೇತನ ಕುರಿತು ಉತ್ತರ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಸಿಎಂ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ.

    ಎನ್ ಪಿಎಸ್ ವಿಚಾರವಾಗಿ ಸಿಎಂರಿಂದ ಉತ್ತರ ಕೊಡಿಸೋದಾಗಿ ಸಭಾ ನಾಯಕರು ಹೇಳಿದ್ರು. ಆದ್ರೆ ಸಿಎಂ ಉತ್ತರ ಕೊಡುವ ಮೊದಲೇ ಎನ್ ಪಿಎಸ್ ಸಂಬಂಧ ಸಮಿತಿ ರಚಿಸಿದ್ದು, ಈ ವಿಚಾರ ನಿನ್ನೆ ಸದನದಲ್ಲಿ ಪ್ರತಿಧ್ವನಿಸಿದೆ. ಹೀಗಾಗಿ ಇಂದು ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ, ನಿಯಮ 72, 330 ಅಡಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಸರೆಂಡರ್!

    ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಸರೆಂಡರ್!

    ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಅತಿ ದೊಡ್ಡ ಹೊಂದಾಣಿಕೆ ನಡೆದಿದ್ದು, ಮೈತ್ರಿ ಸೂತ್ರ ಪಾಲಿಸಲು ಕಾಂಗ್ರೆಸ್ ಒಂದು ವಿಚಾರದಲ್ಲಿ ಇದೀಗ ಜೆಡಿಎಸ್‍ಗೆ ಸರೆಂಡರ್ ಆಗಿದೆ.

    ಈ ಮೂಲಕ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ ಅನಿವಾರ್ಯವಾಗಿ ಸೈಲೆಂಟಾಯ್ತಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ. ಸಂಖ್ಯಾಬಲದ ಪ್ರಕಾರ ಸಭಾಪತಿ ಸ್ಥಾನ ಕಾಂಗ್ರೆಸ್ ವಶವಾಗಬೇಕಿತ್ತು. ಹೀಗಾಗಿ ಇದೇ ವಾದವನ್ನು ಮುಂದಿಟ್ಟು ಕೈ ಸದಸ್ಯರು ಸಭಾಪತಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರು. ಆದರೆ ಈಗ ಎಲ್ಲಾ ನಾಯಕರು ಫುಲ್ ಸೈಲೆಂಟ್ ಆಗಿದ್ದು, ಇದರಿಂದ ದೋಸ್ತಿಗಳ ನಡುವೆ ದೊಡ್ಡ ಹೊಂದಾಣಿಕೆ ನಡೆದು ಹೋಯ್ತಾ ಎಂಬ ಕುತೂಹಲವೊಂದು ಮೂಡಿದೆ.


    ಜೆಡಿಎಸ್‍ಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದ್ದು, ಬಸವರಾಜ್ ಹೊರಟ್ಟಿಗೆ ಪರಿಷತ್ ಸಭಾಪತಿ ಸ್ಥಾನ ಬಿಟ್ಟುಕೊಡಲು `ಕೈ’ ಸಮ್ಮತಿಸಿದೆ. ಯಾರ ಬೆಂಬಲವಿಲ್ಲದೆ ಸಭಾಪತಿ ಸ್ಥಾನ ಪಡೆಯಲು ಕಾಂಗ್ರೆಸ್ ಸಮರ್ಥವಿದೆ. ಕಾಂಗ್ರೆಸ್ ಪರಿಷತ್ ಸದಸ್ಯರ ಅಭಿಪ್ರಾಯವು ಇದೇ ಆಗಿತ್ತು. ಆದರೆ 7 ನೇ ಬಾರಿ ಪರಿಷತ್ ಸದಸ್ಯರಾಗಿರುವ 38 ವರ್ಷ ಸದನದ ಸದಸ್ಯರಾಗಿರುವ ಹೊರಟ್ಟಿಯವರಂತಹ ಹಿರಿಯರ ಹಿರಿತನಕ್ಕೆ ಗೌರವ ನೀಡಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಹೊರಟ್ಟಿಯವರನ್ನೇ ಅಧಿಕೃತ ಪರಿಷತ್ ಸಭಾಪತಿಯನ್ನಾಗಿ ಮುಂದುವರಿಸಲು ಸಮ್ಮತಿ ಸೂಚಿಸಿದ್ದು, ಇಂದು ಸಭಾಪತಿ ಸ್ಥಾನದ ಚುನಾವಣೆಯ ಅಧಿಸೂಚನೆ ಹೊರ ಬೀಳಲಿದೆ.

    ಹೀಗೆ ಸಭಾಪತಿ ಸ್ಥಾನಕ್ಕಾಗಿ ಕುಸ್ತಿ ಆಡುತ್ತಿದ್ದ ಮೈತ್ರಿ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸೂತ್ರಕ್ಕೆ ಮೊರೆಹೋಗಿವೆ. ಒಟ್ಟಿನಲ್ಲಿ ಹಿರಿತನದ ಗೌರವದೊಂದಿಗೆ ಬಸವರಾಜ ಹೊರಟ್ಟಿ ಸಭಾಪತಿಯಾಗುವುದು ಖಚಿತವಾಗಿದೆ.

  • 11 ಕಾಂಗ್ರೆಸ್ ಶಾಸಕರಿಂದ ಉಗ್ರಪ್ಪ ವಿರುದ್ಧ ಪರಮೇಶ್ವರ್‍ಗೆ ದೂರು

    11 ಕಾಂಗ್ರೆಸ್ ಶಾಸಕರಿಂದ ಉಗ್ರಪ್ಪ ವಿರುದ್ಧ ಪರಮೇಶ್ವರ್‍ಗೆ ದೂರು

    ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಉಗ್ರಪ್ಪ ವಿರುದ್ಧ ಕೈ ಶಾಸಕರು ಕೆಂಡಾಮಂಡಲರಾಗಿದ್ದಾರೆ.

    ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ 11 ಕಾಂಗ್ರೆಸ್ ಶಾಸಕರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿ ವಿರುದ್ಧ ಕೆಲವರು ಚಿತಾವಣೆಯಿಂದ ಅವಿಶ್ವಾಸ ನಿರ್ಣಯ ಮಂಡಿಸಿದ್ರು. ಇದಕ್ಕೆ ಮೂಲ ಕಾರಣರಾಗಿರುವ ಉಗ್ರಪ್ಪ, ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಎನ್.ರಾಜಣ್ಣ, ಶಿವಮೂರ್ತಿ ನಾಯಕ್, ಶಾಂತನಗೌಡ ಸೇರಿದಂತೆ 11 ಮಂದಿಯಿಂದ ದೂರು ನೀಡಲಾಗಿದೆ.

     ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ನಿರ್ಣಯದ ಪರವಾಗಿ 36 ಮತಗಳು ಬಿದ್ದಿದ್ದರೆ, ನಿರ್ಣಯದ ವಿರುದ್ಧವಾಗಿ 37 ಮತಗಳು ಬಿದ್ದ ಪರಿಣಾಮ ಸಭಾಪತಿ ವಿರುದ್ಧ ಕಾಂಗ್ರೆಸ್‍ನ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ. ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬೆಂಬಲಿಸದ ಕಾರಣ ಶಂಕರಮೂರ್ತಿ ಸಭಾಪತಿಗಳಾಗಿ ಮುಂದುವರೆದಿದ್ದಾರೆ.

  • ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧಾರ- ಕುತೂಹಲ ಮೂಡಿಸಿದೆ ಜೆಡಿಎಸ್ ನಡೆ

    ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧಾರ- ಕುತೂಹಲ ಮೂಡಿಸಿದೆ ಜೆಡಿಎಸ್ ನಡೆ

    ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯದ ಕ್ಲೈಮ್ಯಾಕ್ಸ್ ಇಂದು ನಡೆಯಲಿದ್ದು, ಕ್ಷಣಕ್ಷಣಕ್ಕೂ ರಾಜಕೀಯ ಲೆಕ್ಕಾಚಾರ ಬದಲಾಗ್ತಿದೆ. ಮುಖಭಂಗದಿಂದ ಪಾರಾಗಲು ಕಾಂಗ್ರೆಸ್ ಪಾಳಯದಿಂದ ಹೊಸ ದಾಳ ಉರುಳಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ನೀಡಲು ಕಾಂಗ್ರೆಸ್ ಮುಂದಾಗಿದ್ದು, ಬಸವರಾಜ ಹೊರಟ್ಟಿಗೆ ನೀಡಲು ಸಮ್ಮತಿಸಿದೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ಕರೆಮಾಡಿ ಸಭಾಪತಿ ಶಂಕರಮೂರ್ತಿ ಅವರನ್ನ ಕೆಳಗಿಳಿಸಲು ಜೆಡಿಎಸ್ ಬೆಂಬಲ ಕೋರಿದ್ದಾರೆ. ಕಾಂಗ್ರೆಸ್ ನಿರ್ಣಯವನ್ನು ಬೆಂಬಲಿಸುವಂತೆ ಜೆಡಿಎಸ್‍ಗೆ ಸಚಿವ ಪರಮೇಶ್ವರ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಿರ್ಣಯ ಏನು? ಎಂಬ ಕುತೂಹಲ ಮೂಡಿಸಿದೆ

    ಜೆಡಿಎಸ್ ಬೆಂಬಲ ನಮಗೇ ಇದೇ ಎಂದು ಸಭಾಪತಿ ಡಿಹೆಚ್ ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಬೆಂಬಲ ಬಿಜೆಪಿಗೆ ಎಂದು ಕುಮಾರಸ್ವಾಮಿಯವರೇ ಹೇಳಿರುವಾಗ ಗೊಂದಲ ಏಕೆ ಎಂದು ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಸ್‍ಗೆ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ

    ಕಾಂಗ್ರೆಸ್ ಸದಸ್ಯರ ಅವಿಶ್ವಾಸ ನಿರ್ಣಯದ ಬಳಿಕ ಮತದಾನ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಮೂರು ಪಕ್ಷಗಳು ಸದನದಲ್ಲಿ ಕಡ್ಡಾಯವಾಗಿ ಇಂದು ಹಾಜರಿರುವಂತೆ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಈವರೆಗೂ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಜೆಡಿಎಸ್ ಶಾಸಕರಿಗೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೂಚಿಸಿಲ್ಲ. ಹೀಗಾಗಿ ಇಂದು ಪರಿಷತ್ ನಲ್ಲಿ ಬೇರೆ ಹೈಡ್ರಾಮಾ ನಡೆದರೂ ಅಚ್ಚರಿ ಪಡಬೇಕಿಲ್ಲ. ಸಂಖ್ಯಾಬಲದ ಪ್ರಕಾರ ಬಿಜೆಪಿ- ಜೆಡಿಎಸ್ ದೋಸ್ತಿ ಮುಂದುವರೆದ್ರೆ ಬಿಜೆಪಿಗೆ ಯಾವುದೇ ಆತಂಕವಿಲ್ಲ. ಒಂದು ವೇಳೆ ಜೆಡಿಎಸ್ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದರೆ ಬಿಜೆಪಿಯಿಂದ ಸಭಾಪತಿ ಸ್ಥಾನ ಕೈ ತಪ್ಪಲಿದೆ.

    ಇವತ್ತಿನ ಪರಿಷತ್ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಿಂಗ್ ಮೇಕರ್. ಸದ್ಯ 5 ಪಕ್ಷೇತರರ ಪೈಕಿ ಮೂರು ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು, ಇಬ್ಬರು ಬಿಜೆಪಿ ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಇಬ್ಬರಲ್ಲಿ ಒಬ್ಬರು ಹಿಂದೆ ಸರಿದರೂ ಬಿಜೆಪಿಗೆ ಸಭಾಪತಿ ಸ್ಥಾನ ಮಿಸ್ ಆಗಲಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳು ಇಂದಿನ ಮತದಾನದಲ್ಲಿ ಕಿಂಗ್ ಮೇಕರ್ ಸ್ಥಾನ ಅಲಂಕರಿಸಿದ್ದಾರೆ.

    ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33 , ಬಿಜೆಪಿ 22, ಜೆಡಿಎಸ್ 13 ,ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ. ಇನ್ನು ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರಿಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಲಿದೆ.

  • ಸಭಾಪತಿ ಚುನಾವಣೆ: ಕಾಂಗ್ರೆಸ್‍ನತ್ತ ದೇವೇಗೌಡರ ಒಲವು- ಬಿಜೆಪಿಗೆ ಬೆಂಬಲ ಅಂದ್ರು ಹೆಚ್‍ಡಿಕೆ

    ಸಭಾಪತಿ ಚುನಾವಣೆ: ಕಾಂಗ್ರೆಸ್‍ನತ್ತ ದೇವೇಗೌಡರ ಒಲವು- ಬಿಜೆಪಿಗೆ ಬೆಂಬಲ ಅಂದ್ರು ಹೆಚ್‍ಡಿಕೆ

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳಷ್ಟೇ ಬಾಕಿ ಇರುವಂತೆ ಪರಿಷತ್ ಸಭಾಪತಿ ಬಿಜೆಪಿಯ ಡಿಹೆಚ್ ಶಂಕರಮೂರ್ತಿಯವರನ್ನು ಕೆಳಗಿಳಿಸುವ ಕಾಂಗ್ರೆಸ್ ತಂತ್ರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    ಸಭಾಪತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೆಡಿಎಸ್ ಮೇಲ್ಮನೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಬೇಕೇ ಅಥವಾ ಕಾಂಗ್ರೆಸ್‍ನೊಂದಿಗೆ ಕೈ ಜೋಡಿಸಬೇಕೇ ಅನ್ನೋ ಗೊಂದಲದಲ್ಲಿದೆ.

    ಸಭಾಪತಿ ಚುನಾವಣೆ ಸಂಬಂಧ ಪರಿಷತ್ ಸದಸ್ಯರ ಜೊತೆಗೆ ತಡರಾತ್ರಿ ಸಭೆ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ನಂತರ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದರು. ದೇವೇಗೌಡರು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಒಲುವು ತೋರಿದ್ದರೆ ಕುಮಾರಸ್ವಾಮಿ ಮನಸ್ಸು ಬಿಜೆಪಿಯತ್ತ ವಾಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ದೇವೇಗೌಡರ ವಿವೇಚನೆಗೆ ಬಿಡಲಾಗಿದೆ.

    ಸಭಾಪತಿ ಸ್ಥಾನ ಬಿಟ್ಟುಕೊಡುವ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಯೋಚಿಸುತ್ತಿದೆ. ಮಂಗಳವಾರದಂದು ಕೆಪಿಸಿಸಿ ಅಧ್ಯಕ್ಷ ಗೃಹ ಸಚಿವ ಪರಮೇಶ್ವರ್ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಪಾಲಿಕೆಯಲ್ಲಿನ ಮೈತ್ರಿಯಂತೆ ಪರಿಷತ್‍ನಲ್ಲೂ ಕೈ ಜೋಡಿಸೋಣ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪರಮೇಶ್ವರ್. ಇತ್ತ ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

    ವಿಧಾನ ಪರಿಷತ್‍ನ ಸಂಖ್ಯಾಬಲದ ಡಿಟೇಲ್ಸ್ ಹೀಗಿದೆ:
    * ಒಟ್ಟು ಸದಸ್ಯರ ಸಂಖ್ಯೆ -75
    * ಪ್ರಸ್ತುತ ಸದಸ್ಯರ ಸಂಖ್ಯೆ – 74 (ವಿಮಲಾ ಗೌಡ ನಿಧನದಿಂದ 1 ಸ್ಥಾನ ಖಾಲಿ)
    * ಬಹುಮತಕ್ಕೆ- 38
    * ಕಾಂಗ್ರೆಸ್ – 33
    * ಜೆಡಿಎಸ್ – 13
    * ಬಿಜೆಪಿ – 22
    * ಪಕ್ಷೇತರ – 05
    * ಸಭಾಪತಿ – 01

    ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ.

    ಸಂಖ್ಯಾಬಲದ ಪ್ರಕಾರ ಪೂರ್ಣ ಬಹುಮತ ಪಡೆಯಲು ಕಾಂಗ್ರೆಸ್‍ಗೆ 2 ಸ್ಥಾನಗಳ ಕೊರತೆಯಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33, ಬಿಜೆಪಿ 22, ಜೆಡಿಎಸ್ 13, ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ.

    ಬಿಜೆಪಿ-ಜೆಡಿಎಸ್ ದೋಸ್ತಿ ಮುಂದುವರೆಸಿದ್ರೆ ಸರಳ ಬಹುಮತದೊಂದಿಗೆ ಹಾಲಿ ಸಭಾಪತಿಗಳೇ ಮುಂದುವರೆಯುತ್ತಾರೆ. ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರೀಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಬಹುದಾಗಿದೆ.

  • ಬೆಂಗ್ಳೂರಲ್ಲಿ 9 ಕೋಟಿ ರೂ. ಹಳೇ ನೋಟು ವಶ – ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಅರೆಸ್ಟ್

    ಬೆಂಗ್ಳೂರಲ್ಲಿ 9 ಕೋಟಿ ರೂ. ಹಳೇ ನೋಟು ವಶ – ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಅರೆಸ್ಟ್

    ಬೆಂಗಳೂರು: ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಅಳಿಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಸೇರಿದಂತೆ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. 4 ದಿನಗಳ ಹಿಂದೆ 5 ಕೋಟಿ ರೂ. ಹಳೆಯ ನೋಟ್‍ಗಳನ್ನ ಜಪ್ತಿ ಮಾಡಿ ಐವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ ನಂತರ ಸಿಕ್ಕ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಿ ಇದೀಗ ಪ್ರವೀಣ್ ಕುಮಾರ್ ಸೇರಿದಂತೆ 14 ಆರೋಪಿಗಳನ್ನ ಬಂಧಿಸಲಾಗಿದೆ.

    ರಿಯಲ್ ಎಸ್ಟೆಟ್ ಉದ್ಯಮಿ ಉಮೇಶ್ ಎಂಬವರಿಂದ ಹಣ ತಂದು ವೈಟ್ ಮಾಡಿಕೊಡುವುದಾಗಿ ಆರೋಪಿ ಪ್ರವೀಣ್ ಕುಮಾರ್ ಒಪ್ಪಿಕೊಂಡಿದ್ದರು. ಪ್ರವೀಣ್ ಕುಮಾರ್ ಜೊತೆ 14 ಜನ ಭಾಗಿಯಾಗಿದ್ರು ಎನ್ನಲಾಗಿದೆ.

    ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ನಾಗರಬಾವಿ ನಿವಾಸಿಯಾಗಿದ್ದು, ನಾಗರಬಾವಿಯಲ್ಲಿ ಒಂದೂವರೆ ಎಕರೆ ಆಸ್ತಿಯನ್ನು ಹೊಂದಿದ್ದಾರೆ. ಆಸ್ತಿ ಮಾರಾಟ ಮಾಡುವ ವಿಚಾರಕ್ಕೆ ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆಗೆ ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ.

    ಶನಿವಾರ ರಾತ್ರಿ ನಾಗರಬಾವಿಯ ಬೆಸ್ಕಾಂ ಲೇಔಟ್‍ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 9 ಕೋಟಿ 10 ಲಕ್ಷ ರೂ. ಹಳೇ ನೊಟುಗಳನ್ನ ಜಪ್ತಿ ಮಾಡಿದ್ದಾರೆ. 25 ಕೋಟಿ ರೂ. ಹಳೆಯ ನೋಟಿನ ಜೊತೆ ಇನ್ನೊಂದು ಗ್ಯಾಂಗ್ ಪರಾರಿಯಾಗಿದೆ.

    14 ಜನ ಆರೋಪಿಗಳಲ್ಲಿ ಮಂಜುನಾಥ್ ಎಂಬ ಆರೋಪಿ ಬಿಎಂಟಿಸಿ ಉದ್ಯೋಗಿಯಾಗಿದ್ದು, ಉಳಿದ 13 ಜನರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ.