Tag: vidhana parishad

  • ಕಡ್ಡಾಯ ವರ್ಗಾವಣೆಗೆ ತಿಲಾಂಜಲಿ- ರಾಜ್ಯ ಸಿವಿಲ್ ಸೇವೆಗಳ ವಿಧೇಯಕ ಪರಿಷತ್‍ನಲ್ಲಿ ಅಂಗೀಕಾರ

    ಕಡ್ಡಾಯ ವರ್ಗಾವಣೆಗೆ ತಿಲಾಂಜಲಿ- ರಾಜ್ಯ ಸಿವಿಲ್ ಸೇವೆಗಳ ವಿಧೇಯಕ ಪರಿಷತ್‍ನಲ್ಲಿ ಅಂಗೀಕಾರ

    ಬೆಂಗಳೂರು: ಭಾರೀ ಗೊಂದಲ, ವಿವಾದಕ್ಕೆ ಕಾರಣವಾಗಿದ್ದ ಕಡ್ಡಾಯ ವರ್ಗಾವಣೆ ನೀತಿಗೆ ರಾಜ್ಯ ಸರ್ಕಾರ ಕೊನೆಗೂ ತಿಲಾಂಜಲಿ ಹಾಡಿದೆ.

    ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ವಿಧಾನ ಪರಿಷತ್‍ನಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರ ಸಹಿಯೊಂದು ಬಾಕಿ ಇದೆ. ರಾಜ್ಯಪಾಲರ ಸಹಿ ಬಳಿಕ ಬಹಳ ವರ್ಷಗಳ ಶಿಕ್ಷಕರ ವರ್ಗಾವಣೆ ಗೊಂದಲಕ್ಕೆ ತೆರೆ ಬೀಳಲಿದೆ.

    ವಿಧಾನ ಪರಿಷತ್ ನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ 2020ನ್ನ ಮಂಡನೆ ಮಾಡಿದರು. ಕಡ್ಡಾಯ ವರ್ಗಾವಣೆ ಅನ್ನೋದು ದೊಡ್ಡ ಸಮಸ್ಯೆ ಆಗಿದೆ. ನೂರಾರು ಶಿಕ್ಷಕರಿಗೆ ಈ ಕಡ್ಡಾಯ ವರ್ಗಾವಣೆ ಶಿಕ್ಷೆಯಾಗಿ ಪರಿಣಮಿಸಿದೆ. ಕಡ್ಡಾಯ ವರ್ಗಾವಣೆಯಿಂದ ಸಾಕಷ್ಟು ಜನ ನೊಂದಿದ್ದಾರೆ. ಇಂತಹ ವರ್ಗಾವಣೆ ನೀತಿಯನ್ನು ಬದಲಾವಣೆ ಮಾಡಲು ಸರ್ಕಾರ ಈ ವಿಧೇಯಕ ಜಾರಿಗೆ ತರುತ್ತಿದೆ ಅಂತ ವಿಧೇಯಕದ ಬಗ್ಗೆ ಸಚಿವರು ವಿವರಣೆ ನೀಡಿದರು.

    ವಿಧೇಯಕ ಮಂಡನೆ ಬಳಿಕ ಸದಸ್ಯರಾದ ಹೊರಟ್ಟಿ, ಮರಿತಿಬ್ಬೇಗೌಡ, ಮಟ್ಟೂರ್, ಅರುಣ್ ಶಹಾಪುರ, ಸಂಕನೂರು, ತೇಜಸ್ವಿನಿ ರಮೇಶ್ ಸೇರಿದಂತೆ 17 ಜನ ಸದಸ್ಯರು ವಿಧೇಯಕದ ಮೇಲೆ ಚರ್ಚೆ ಮಾಡಿದರು. ಅಲ್ಲದೆ ವಿಧೇಯಕದ ಬಗ್ಗೆ ಅನೇಕ ಸಲಹೆ ಸೂಚನೆ ನೀಡಿದರು. ವಿಧೇಯಕ ಅಂಶಗಳನ್ನ ರಚಿಸುವಾಗ ಸದಸ್ಯರ ಎಲ್ಲಾ ಸಲಹೆ ಸ್ವೀಕಾರ ಮಾಡೋದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸಚಿವರ ಮಾತಿಗೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಚರ್ಚೆ ಬಳಿಕ ವಿಧೇಯಕವನ್ನ ಧ್ವನಿಮತದ ಮೂಲಕ ಸರ್ವಾನುಮತದಿಂದ ವಿಧೇಯಕ ಆಂಗೀಕಾರವಾಯಿತು.

  • ಎಂಪಿ ಕಾಂಗ್ರೆಸ್ ಶಾಸಕರ ಆಪರೇಷನ್: ಎಸ್.ಆರ್ ಪಾಟೀಲ್ ಕಿಡಿ

    ಎಂಪಿ ಕಾಂಗ್ರೆಸ್ ಶಾಸಕರ ಆಪರೇಷನ್: ಎಸ್.ಆರ್ ಪಾಟೀಲ್ ಕಿಡಿ

    ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದು ಮಧ್ಯಪ್ರದೇಶದ ಆಪರೇಷನ್ ಕಮಲದ ರಾಜಕೀಯ ವಿಷಯ ಚರ್ಚೆಯ ವಿಷಯವಾಯ್ತು. ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸಂವಿಧಾನದ ಮೇಲಿನ ಚರ್ಚೆ ವೇಳೆ ಬಿಜೆಪಿ ಅವರ ಆಪರೇಷನ್ ಕಮಲದ ವಿರುದ್ಧ ಕಿಡಿಕಾರಿದರು. ಬಿಜೆಪಿ ಆಪರೇಷನ್ ಪ್ರಜಾಪ್ರಭುತ್ವಕ್ಕೆ ಮಾರಕ ಅಂತ ವಾಗ್ದಾಳಿ ನಡೆಸಿದರು.

    ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಇದ್ದಾರೆ. ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಸರ್ಕಾರವನ್ನು ಬೀಳಿಸಿ ಮತ್ತೊಂದು ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಇವತ್ತು ತಲುಪಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಅಂತ ಕಿಡಿಕಾರಿದರು. ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆಯವರು, ರಿಯಲ್ ಎಸ್ಟೇಟ್ ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಅಂತ ಆತಂಕ ವ್ಯಕ್ತಪಡಿಸಿದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ, ಬಡವನ ಮಗ, ಮರ್ಯಾದಸ್ಥ ರಾಜಕಾರಣಕ್ಕೆ ಬಾರದ ಸ್ಥಿತಿ ಇದೆ. ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ ಅಂತ ಅಸಮಾಧಾನ ಹೊರ ಹಾಕಿದರು. ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜಗನ್ನಾಥರಾವ್ ಜೋಷಿ ಬಳಿ ಚಿಕಿತ್ಸೆಗೆ ಹಣ ಇರಲಿಲ್ಲ ಅಂತ ಉದಾಹರಣೆ ಕೊಟ್ಟರು.

    ಮಾತು ಮುಂದುವರಿಸಿದ ಎಸ್.ಆರ್.ಪಾಟೀಲ್, ಇವತ್ತಿನ ರಾಜಕಾರಣದಲ್ಲಿ ಆಯಾ ರಾಮ್ ಗಯಾ ರಾಮ್ ಹೆಚ್ಚಾಗುತ್ತಿದೆ. ಗೆದ್ದ ಮೇಲೆ ಪಕ್ಷ ಬದಲಾವಣೆ ಮಾಡುತ್ತಾರೆ. ನಮ್ಮ ಕಡೆ ಇದನ್ನು ಗೋಸುಂಬೆ ಅಂತ ಕರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದು ಯಾರಿಗೆ ಪ್ರಯೋಜನ ಆಗಲಿದೆ. ಪಕ್ಷ ಬದಲಾವಣೆ ಮಾಡುತ್ತಿರುವುದರಿಂದ ಜನರಿಗೆ ಪ್ರಜಾಪ್ರಭುತ್ವದ ಮೇಲೆ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಅಂತ ಟೀಕಿಸಿದರು.

    ಮಧ್ಯಪ್ರದೇಶದ ಶಾಸಕರು ಇಲ್ಲಿಗೆ ಬಂದಿದ್ದಾರೆ. ನಮ್ಮವರು ಮುಂಬೈಗೆ ಹೋಗಿದ್ದರು ಎನ್ನುತ್ತಿದ್ದಂತೆ ಗುಜರಾತ್ ನಿಂದಲೂ ಬಂದಿದ್ದರು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಸ್.ಆರ್ ಪಾಟೀಲ್ ಹಣ, ಅಧಿಕಾರದ ಆಸೆಗೆ ಶಾಸಕರು ಬಲಿಯಾಗುತ್ತಿದ್ದಾರೆ. ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಿದ್ದಾರಂತೆ. ಹೀಗೆ ಆದರೆ ಪ್ರಜಾಪ್ರಭುತ್ವ ಉಳಿಯೋದಿಲ್ಲ ಅಂತ ಕಿಡಿಕಾರಿದರು. ನನ್ನನ್ನ ಪ್ರಧಾನಿ ಮಾಡ್ತೀನಿ ಎಂದರೂ ನಾನು ಪಕ್ಷ ಬಿಡೊಲ್ಲ. ಇವರು ಯಾಕೆ ಹೀಗೆ ಮಾಡ್ತಾರೆ ಅಂತ ಪ್ರಶ್ನೆ ಮಾಡಿದರು. ಹಣದ ಆಮಿಷಕ್ಕೆ ಬಲಿಯಾಗೋರಿಗೆ ನಾಚಿಕೆ ಆಗಬೇಕು ಅಂತ ಆಪರೇಷನ್ ಕಮಲದ ವಿರುದ್ಧ ವಾಗ್ದಾಳಿ ನಡೆಸಿದರು.

  • ಬ್ರಿಟಿಷರಿಗೆ ಧನ್ಯವಾದ ಹೇಳಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

    ಬ್ರಿಟಿಷರಿಗೆ ಧನ್ಯವಾದ ಹೇಳಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ

    ಬೆಂಗಳೂರು: ಬ್ರಿಟಿಷರಿಗೆ ಧನ್ಯವಾದ ಹೇಳಿದ ಘಟನೆ ಇಂದು ವಿಧಾನ ಪರಿಷತ್‍ನ ಕಲಾಪದಲ್ಲಿ ನಡೆಯಿತು. ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬ್ರಿಟಿಷರಿಗೆ ಧನ್ಯವಾದ ಹೇಳಿದರು. ಬ್ರಿಟಿಷರ ಕಾಲದಲ್ಲೂ ಒಳ್ಳೆ ಕೆಲಸ ಆಗಿದೆ. ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು ಎಂದು ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಪ್ರಬಲ ವಿರೋಧ ವ್ಯಕ್ತಪಡಿಸಿದರು.

    ಬಿಜೆಪಿಯ ಪ್ರಾಣೇಶ್ ರಮೇಶ್ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ನಮ್ಮ ದೇಶದ ಮೇಲೆ ಬ್ರಿಟಿಷರು ದೌರ್ಜನ್ಯ ಮಾಡಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀರಾ ಅಂತ ರಮೇಶ್ ವಿರುದ್ಧ ಕಿಡಿಕಾರಿದರು. ಹೀಗೆ ಧನ್ಯವಾದ ಹೇಳಲು ಗಾಂಧಿಜೀ ಅವರು ಸ್ವಾತಂತ್ರ್ಯ ತಂದು ಕೊಡಬೇಕಾಯ್ತಾ? ನಾಚಿಕೆ ಆಗಬೇಕು ಅಂತ ಪಿ.ಆರ್ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಾಣೇಶ್ ಮಾತಿಗೆ ಸಚಿವ ಸಿಟಿ ರವಿ ಬೆಂಬಲ ವ್ಯಕ್ತಪಡಿಸಿದರು. ಬ್ರಿಟಿಷರನ್ನ ಹೊಗೊಳೋಕೆ ನಾಚಿಕೆ ಆಗಬೇಕು. ದೇಶವನ್ನು ಲೂಟಿ ಮಾಡಿ, ದಾಸ್ಯದಿಂದ ಭಾರತೀಯರನ್ನ ನಡೆಸಿಕೊಂಡವರು ಬ್ರಿಟಿಷರು. ಬ್ರಿಟಿಷರಿಗೆ ಧನ್ಯವಾದ ಹೇಳೋದಾದ್ರೆ ವಿಧಾನ ಪರಿಷತ್ ನಲ್ಲಿ ಇರೋ ಗಾಂಧಿಜೀ ಫೋಟೋ ತೆಗೆದು ಲಾರ್ಡ್ ಮೆಕಾಲೆ ಫೋಟೋ ಹಾಕಿ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಸದಸ್ಯರು ರಮೇಶ್ ಹೇಳಿದ ಅರ್ಥ ಹಾಗಲ್ಲ. ಅವರು ಹೇಳಿದ್ದು ಬೇರೆ ಅರ್ಥದಲ್ಲಿ ಎಂದ ಕಾಂಗ್ರೆಸ್ ಸದಸ್ಯರು. ಕಾಂಗ್ರೆಸ್ ಸದಸ್ಯರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಪಿ.ಆರ್ ರಮೇಶ್ ಕ್ಷಮೆ ಕೇಳಬೇಕು ಅಂತ ಒತ್ತಾಯ ಮಾಡಿದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

    ಬಿಜೆಪಿ ಸದಸ್ಯರ ವಿರೋಧದ ಬಳಿಕ ತಮ್ಮ ಹೇಳಿಕೆ ಕುರಿತು ಪಿ.ಆರ್ ರಮೇಶ್ ವಿವರಣೆ ನೀಡಿದರು. ಬ್ರಿಟಿಷರು ಹಿಂದೆ ರಾಜರ ಮಧ್ಯೆ ದ್ವೇಷ ತಂದಿಟ್ಟು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅ ಕಾಲದಲ್ಲಿ ಅವ್ರು ವಿಷ ಬೀಜ ಬಿತ್ತಿ ನಂತರ ಸ್ವಾತಂತ್ರ್ಯ ನಮಗೆ ಅಮೃತ ತಂದು ಕೊಟ್ಟಿತ್ತು. ಸ್ವಾತಂತ್ರ್ಯ ಎಂಬ ಅಮೃತ ತಂದು ಕೊಟ್ಟಿದ್ದಕ್ಕೆ ಅವ್ರಿಗೆ ಧನ್ಯವಾದ ಎಂದು ಹೇಳಿದೆ ಅಷ್ಟೆ ಎಂದು ವಿವಾದದ ಮಾತಿಗೆ ರಮೇಶ್ ಅಂತ್ಯ ಹಾಡಿದರು.

  • ಕುಡಿಯುವ ನೀರಿನ ಅನುದಾನ ಅಕ್ರಮದ ತನಿಖೆಗೆ ಸದನ ಸಮಿತಿ ರಚನೆ

    ಕುಡಿಯುವ ನೀರಿನ ಅನುದಾನ ಅಕ್ರಮದ ತನಿಖೆಗೆ ಸದನ ಸಮಿತಿ ರಚನೆ

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರಿನ ಅನುದಾನದಲ್ಲಿ ನಡೆದಿರುವ ಅಕ್ರಮ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿಧಾನ ಪರಿಷತ್ ಸದಸ್ಯರ ಒಕ್ಕೊರಲ ಒತ್ತಾಯಕ್ಕೆ ಮಣಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅಕ್ರಮ ತನಿಖೆಗೆ ಸದನ ಸಮಿತಿ ನೇಮಕ ಮಾಡಲು ಒಪ್ಪಿಗೆ ನೀಡಿದರು.

    ವಿಧಾನ ಪರಿಷತ್ ಇಂದಿನ ಕಲಾಪದ ಪ್ರಶ್ನೋತ್ತರ ಅವಧಿ ವೇಳೆ ಬಿಜೆಪಿ ಸದಸ್ಯ ರಘನಾಥ್ ಮಲ್ಕಾಪುರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ವಿಭಾಗಕ್ಕೆ ಬಿಡುಗಡೆಯಾದ ಅನುದಾನ ಬಳಕೆಯಲ್ಲಿ ಅಕ್ರಮ ಆಗಿದೆ. ಸುಮಾರು 600 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಗಿದೆ ಅಂತ ಆರೋಪ ಮಾಡಿದರು. ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಕ್ರಮ ತನಿಖೆಗೆ ಸದನ ಸಮಿತಿ ನೇಮಕ ಮಾಡಬೇಕು ಅಂತ ಸಚಿವರನ್ನ ಒತ್ತಾಯ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಯಾರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡುವುದಿಲ್ಲ. ಅಧಿಕಾರಿಗಳು ಇಲಾಖೆ ಸೂಚನೆ ನೀಡದೆ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸುಮಾರು 90 ಖಾತೆ ಓಪನ್ ಮಾಡಿದ್ದಾರೆ. ಈಗಾಗಲೇ ಅಕ್ರಮದ ಕುರಿತು ತನಿಖೆ ಕೂಡ ಆಗಿದೆ. 200 ಕೋಟಿ ರೂ.ಗೂ ಅಧಿಕವಾಗಿ ಇದರಲ್ಲಿ ಅಕ್ರಮ ಆಗಿದೆ ಅಂತ ಮಾಹಿತಿ ನೀಡಿದರು. ಸರ್ಕಾರದ ಅನುಮತಿ ಇಲ್ಲದೆ ಖಾತೆ ಪ್ರಾರಂಭ ಆಗಿದೆ. ಡಮ್ಮಿ ಅಕೌಂಟ್ ಅಂತ ಖಾತೆಯಲ್ಲಿ 495 ಕೋಟಿ ರೂ. ಇಟ್ಟಿದ್ದಾರೆ. ಡಮ್ಮಿ ಅಕೌಂಟ್ ಮಾಡಿಡುವುದಕ್ಕೆ ಅನುಮತಿ ಪಡೆದಿಲ್ಲ. ಈ ಬಗ್ಗೆ ತನಿಖೆ ಒಂದು ಸೂಕ್ತ ತನಿಖೆ ಮಾಡಿಸುತ್ತೇವಿ ಅಂತ ತಿಳಿಸಿದರು.

    ಸಚಿವ ಈಶ್ವರಪ್ಪ ಮಾತಿಗೆ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಿಜೆಪಿಯ ರವಿಕುಮಾರ್, ಆಯನೂರು ಮಂಜುನಾಥ್ ಪ್ರಾರಂಭದಲ್ಲೇ ವಿರೋಧ ಮಾಡಿದರು. ಆಯನೂರು ಮಂಜುನಾಥ್ ಮಾತನಾಡಿ, ಅನುಮತಿ ಇಲ್ಲದೆ ಡಮ್ಮಿ ಅಕೌಂಟ್ ಪ್ರಾರಂಭ ಮಾಡುತ್ತಾರೆ ಅಂದ್ರೆ ಇದು ದೊಡ್ಡ ಅಕ್ರಮ. ಬ್ಯಾಂಕ್‍ನವರು ವಿರುದ್ಧವೂ ತನಿಖೆ ಮಾಡಿ ಅಂತ ಒತ್ತಾಯಿಸಿದರು.

    ಆಯನೂರು ಮಂಜುನಾಥ್ ಅವರ ಮಾತಿಗೆ ಇಡೀ ಸದನದ ಸದಸ್ಯರು ಪಕ್ಷಾತೀತವಾಗಿ ಸದನ ಸಮಿತಿ ರಚನೆ ಮಾಡಿವಂತೆ ಒತ್ತಾಯ ಮಾಡಿದರು. ಸದಸ್ಯರ ಮಾತಿಗೆ ಒಪ್ಪಿದ ಸಚಿವ ಈಶ್ವರಪ್ಪ ಅಕ್ರಮ ತನಿಖೆಗಾಗಿ ಸದನ ಸಮಿತಿ ರಚನೆ ಮಾಡುವುದಾಗಿ ಘೋಷಣೆ ಮಾಡಿದರು.

  • ವಿಧಾನ ಪರಿಷತ್‍ನಲ್ಲಿ ಸಂವಿಧಾನ ರಚನೆಯ ಇಂಟ್ರಸ್ಟಿಂಗ್ ವಿಷಯಗಳ ಪ್ರಸ್ತಾಪ

    ವಿಧಾನ ಪರಿಷತ್‍ನಲ್ಲಿ ಸಂವಿಧಾನ ರಚನೆಯ ಇಂಟ್ರಸ್ಟಿಂಗ್ ವಿಷಯಗಳ ಪ್ರಸ್ತಾಪ

    ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಐತಿಹಾಸಿವಾಗಿ ಸಂವಿಧಾನ ಮೇಲೆ ಚರ್ಚೆ ನಡೆಯುತ್ತಿದೆ. ಪ್ರತಿಯೊಬ್ಬ ಶಾಸಕರು ಸಂವಿಧಾನದ ಮೇಲೆ ಅರ್ಥ ಗರ್ಭೀತವಾಗಿ ಚರ್ಚೆ ಮಾಡುತ್ತಿದ್ದಾರೆ. ಸಂವಿಧಾನದ ಚರ್ಚೆಯಲ್ಲಿ ಹೊಸ ಹೊಸ ಇತಿಹಾಸದ ವಿಷಯಗಳ ಬೆಳಕಿಗೆ ಬರುತ್ತಿವೆ. ಇವತ್ತು ಕೂಡ ವಿಧಾನ ಪರಿಷತ್‍ನಲ್ಲಿ ನಡೆದ ಸಂವಿಧಾನದ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ರವಿ ಅವರು ಸಂವಿಧಾನ ರಚನೆಯ ಕುತೂಹಲಕಾರಿ ಅಂಶಗಳನ್ನು ಸದನಕ್ಕೆ ತಿಳಿಸಿದರು.

    ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಯಾರು ಮರೆಯುವಂತಹದ್ದಲ್ಲ. ಸಂವಿಧಾನ ಶಿಲ್ಪ ಅಂಬೇಡ್ಕರ್ ಭಾರತ ಸಂವಿಧಾನದ ಜೀವಾಳ ಇದ್ದಂತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದರ ಜೊತೆ ಜೊತೆಗೆ ಈ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದ ಮೂಲಕ ಬರೆದವರ ಕುತೂಹಲಕಾರಿ ಅಂಶವನ್ನು ಸದಸ್ಯ ರವಿ ಬಿಚ್ಚಿಟ್ಟರು.

    479 ಪುಟಗಳ ಭಾರತ ಸಂವಿಧಾನವನ್ನು ತಮ್ಮ ಸುಂದರವಾದ ಕೈಬರಹದಿಂದ ಬರೆದವರು ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ. ದೆಹಲಿಯ ಸೆಂಟ್ ಸ್ಟೀಫನ್ ಸನ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಅವರ ಸುಂದರ ಬರಹವನ್ನು ಮೆಚ್ಚಿದ್ದ ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರೇ ಸಂವಿಧಾನವನ್ನು ಬರೆದು ಕೊಡುವಂತೆ ಪ್ರೇಮ್ ಬಿಹಾರಿ ಅವರಿಗೆ ಮನವಿ ಮಾಡಿದ್ದರು. ನೆಹರು ಮನವಿಗೆ ಒಪ್ಪಿದ ಪ್ರೇಮ್ ಬಿಹಾರಿ ಅವರು ಸಂವಿಧಾನ ಬರೆದುಕೊಡಲು ಒಪ್ಪಿದರು.

    ಕೈ ಬರಹದ ಮೂಲಕ ಪ್ರೇಮ್ ಬಿಹಾರಿ ನಾರಾಯಣ ರಾಯ್ಜಾದಾ ಸಂವಿಧಾನ ಬರೆಯಲು ಸುಮಾರು 6 ತಿಂಗಳು ಸಮಯ ತೆಗೆದುಕೊಂಡರಂತೆ. ಈ ಸಂವಿಧಾನ ಬರೆಯಲು ಸುಮಾರು 254 ಪೆನ್ ನಿಬ್ಬುಗಳನ್ನ ಬಳಸಲಾಗಿದೆ ಅಂತೆ. ವಿಶೇಷ ಅಂದ್ರೆ ಸಂವಿಧಾನವನ್ನ ಕೈಬರಹದ ಮೂಲಕ ಬರೆದುಕೊಡಲು ಪ್ರೇಮ್ ಬಿಹಾರಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ. ಗೌರವ ಧನ ಸ್ವೀಕಾರ ಮಾಡುವಂತೆ ನೆಹರು ಅವರು ಕೇಳಿದರೂ ಅದಕ್ಕೆ ಪ್ರೇಮ್ ಬಿಹಾರಿ ಬೇಡ ಅಂತ ನಿರಾಕರಿಸಿದ್ದರಂತೆ.

    ಗೌರವ ಧನದ ಬದಲಾಗಿ ಸಂವಿಧಾನದ ಪ್ರತಿ ಪುಟದ ಅಂತ್ಯದಲ್ಲಿ ತಮ್ಮ ಹೆಸರನ್ನು ಹಾಗೂ ಕೊನೆಯ ಪುಟದಲ್ಲಿ ತಮ್ಮ ಹೆಸರು ಜೊತೆ ತಮ್ಮ ತಾತನ ಹೆಸರು ಬರೆಯಲು ಅನುಮತಿ ಕೊಡಿ ಅಂತ ನೆಹರು ಬಳಿ ಕೇಳಿದ್ದರು. ನೆಹರು ಅವರು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಂತೆ.

    ಇನ್ನೊಂದು ಇಂಟ್ರಸ್ಟಿಂಗ್ ವಿಷಯ ಅಂದ್ರೆ ಸಂವಿಧಾನಕ್ಕೆ ಸುಂದರ ಕಲೆ ಸ್ಪರ್ಶ ನೀಡಿದವರು ನಂದಲಾಲ್ ಬೋಸ್ ಅವರು. ರವೀಂದ್ರನಾಥ ಠಾಗೂರ್ ಅವರಿಂದ ಪ್ರೇರಣೆ ಪಡೆದಿದ್ದ ನಂದಲಾಲ್ ಅವರು ಶಾಂತಿನಿಕೇತನದ ಪ್ರಾಂಶುಪಾಲರಾಗಿದ್ದರು. ದೇಶದ ಮಹಾನ್ ಕಲಾವಿದರಲ್ಲಿ ಒಬ್ಬರಾದ ನಂದಲಾಲ್ ಅವರು ತಮ್ಮ ಶಿಷ್ಯರನ್ನ ಒಳಗೂಡಿ ಸಂವಿಧಾನಕ್ಕೆ ಚಿತ್ತಾರ ಮಾಡಿದ್ದರಂತೆ.

  • ಕೊರೊನಾಗೆ ಬ್ರಾಂದಿ ಮದ್ದು- ಪರಿಷತ್‍ನಲ್ಲಿ ಹಾಸ್ಯಭರಿತ ಚರ್ಚೆ

    ಕೊರೊನಾಗೆ ಬ್ರಾಂದಿ ಮದ್ದು- ಪರಿಷತ್‍ನಲ್ಲಿ ಹಾಸ್ಯಭರಿತ ಚರ್ಚೆ

    ಬೆಂಗಳೂರು: ವಿಶ್ವದಾದ್ಯಂತ ಕೋವಿದ್-19(ಕೊರೊನಾ) ತಾಂಡವವಾಡ್ತಿದೆ. ಈಗಾಗಲೇ ಸಾವಿರಾರು ಜನರು ಸಾವನ್ನಪ್ದಿದ್ದಾರೆ. ಕರ್ನಾಟಕದಲ್ಲಿಯೂ ಒಂದು ಸಾವು ಆಗಿದ್ದು 5 ಜನರಲ್ಲಿ ಸೋಂಕು ಕಂಡು ಬಂದಿದೆ. ಈ ಡೆಡ್ಲಿ ಕೊರೊನಾ ವೈರಸ್‍ಗೆ ಮದ್ದು ಅಂದ್ರೆ ಬ್ರಾಂದಿ ಅನ್ನೋ ಹಾಸ್ಯಭರಿತ ಚರ್ಚೆಗಳು ಗುರುವಾರ ಮೇಲ್ಮನೆ ವಿಧಾನ ಪರಿಷತ್‍ನಲ್ಲಿ ನಡೆಯಿತು.

    ಸಂವಿಧಾನ ಮೇಲೆ ಜೆಡಿಎಸ್‍ನ ಮರಿತಿಬ್ಬೇಗೌಡರು ಚರ್ಚೆ ಮಾಡುತ್ತಿದ್ದರು. ಈ ವೇಳೆ ದಿಢೀರ್ ಅಂತ ಕೊರೊನಾ ವೈರಸ್ ಬಗ್ಗೆ ಪ್ರಸ್ತಾಪ ಮಾಡಿದರು. ಕೊರೊನಾ ವಿಶ್ವಕ್ಕೆ ಬಂದು ಜನ ಸಾಯ್ತಿದ್ದಾರೆ. ಮುಕ್ಕೋಟಿ ದೇವರುಗಳು ಎಲ್ಲಿ ಹೋದರು ಅಂತ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಪ್ರಶ್ನೆ ಮಾಡಿದ್ರು. ದೇವರಿಂದಲೂ ಕೊರೊನಾ ಗುಣಪಡಿಸಲು ಸಾಧ್ತವಾಗ್ತಿಲ್ಲ ಅಂತ ಕಳವಳ ವ್ಯಕ್ತಪಡಿಸಿದರು. ಅ ಸಣ್ಣ ವೈರಸ್ ಕೊಲ್ಲಲು ನಮ್ಮಿಂದ ಆಗ್ತಿಲ್ಲ. ಅ ವೈರಸ್ ಸಾಯಿಸೋಕೆ ಬ್ರಾಂದಿ ರಾಮಬಾಣ ಅಂತ ಮರಿತಿಬ್ಬೇಗೌಡ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.

    ಬ್ರಾಂದಿ ಬಳಸೋದ್ರಿಂದ ಕೊರೊನಾ ದೂರ ಓಡಿಸಬಹುದಂತೆ. ಈಗ ಚರ್ಚೆಗಳು ನಡೆಯುತ್ತಿದೆ. ಹೀಗಾಗಿ ಅಬಕಾರಿ ಇಲಾಖೆಗೂ ಈಗ ಭರ್ಜರಿ ವ್ಯಾಪಾರ ಆಗುತ್ತೆ. ಅಬಕಾರಿ ಸಚಿವರು ಇನ್ನು ಸ್ವಲ್ಪ ದಿನ ಕೊರೊನಾ ಉಳಿಸಿಕೊಳ್ಳಬೇಕು. ಇದರಿಂದ ಅಬಕಾರಿ ಇಲಾಖೆಗೆ ಆದಾಯ ಹರಿದು ಬರುತ್ತದೆ ಅಂತ ಹಾಸ್ಯ ಮಾಡಿದ್ರು.

    ಇಷ್ಟಕ್ಕೆ ಸುಮ್ಮನೆ ಆಗದ ಮರಿತಿಬ್ಬೇಗೌಡ ಜ್ಯೋತಿಷ್ಯಿಗಳ ವಿರುದ್ಧವೂ ಕಿಡಿಕಾರಿದ್ರು. ಬೆಳಗ್ಗೆ ಆದ್ರೆ ಸಾಕು ವಿಭೂತಿ ಬಳಿದುಕೊಂಡು ಟಿವಿಯಲ್ಲಿ ಜ್ಯೋತಿಷಿಗಳು ಬರ್ತಾರೆ. ಸಮಸ್ಯೆ ಪರಿಹಾರ ಮಾಡ್ತೀನಿ ಅಂತಾರೆ. ಆದರೆ ಈಗ ಇಡೀ ವಿಶ್ವವೇ ಕೊರೊನಾಗೆ ಗಢ-ಗಢ ಅಂತ ನಡುಗುತ್ತಿದೆ. ಈಗ ಅ ಜ್ಯೋತಿಷಿಗಳು ಎಲ್ಲಿ ಹೋದ್ರು. ಕೊರೊನಾ ತಡೆಯೋಕೆ ಆಗಲ್ವಾ ಅಂತ ಕಿಡಿಕಾರಿದ್ರು.

    ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್, ಹಿಂದೆ ಪ್ಲೇಗ್ ಬಂತು ಅಂತ ಪ್ಲೇಗಮ್ಮ ಅಂತ ದೇವಾಲಯ ಪ್ರಾರಂಭ ಆಯ್ತು. ಈಗ ಕೋವಿಂದಮ್ಮ ಅಂತ ಪ್ರಾರಂಭ ಆಗುತ್ತೆ. ಅಲ್ಲಿ ಬ್ರಾಂದಿನೇ ತೀರ್ಥ ಕೊಡಬೇಕು ಅಂತ ಹಾಸ್ಯ ಚಟಾಕಿ ಹಾರಿಸಿದ್ರು.

    ದೇವಾಲಯಗಳು, ಮಸೀದಿಗಳು, ಚರ್ಚ್ ಗಳು ಕೊರೊನಾಗೆ ಏನೂ ಮಾಡಲು ಸಾಧ್ಯವಿಲ್ಲ. ಅಷ್ಟು ದೇವರು ಇರೋದಾದ್ರೆ ಕೊರೊನಾ ಓಡಿಸಲಿ ನೋಡೋಣ ಅಂತ ದೇವರುಗಳಿಗೆ ಸವಾಲು ಹಾಕಿದ್ರು.

    https://www.facebook.com/339166656101093/videos/532876047430875/

  • ಅಸ್ಪೃಶ್ಯತೆ, ಮತಾಂತರದ ಕುರಿತು ಪರಿಷತ್‍ನಲ್ಲಿ ಚರ್ಚೆ

    ಅಸ್ಪೃಶ್ಯತೆ, ಮತಾಂತರದ ಕುರಿತು ಪರಿಷತ್‍ನಲ್ಲಿ ಚರ್ಚೆ

    ಬೆಂಗಳೂರು: ಅಸ್ಪೃಶ್ಯರ ಸ್ಥಿತಿಗತಿ, ಮತಾಂತರಕ್ಕೆ ಕಾರಣಗಳೇನು. ಸಂವಿಧಾನ ಬದ್ಧ ಹಕ್ಕುಗಳು ಅವಕಾಶಗಳಿಂದ ಅಸ್ಪೃಶ್ಯರು ವಂಚಿತವಾಗುತ್ತಿರುವ ಕುರಿತು ಬೆಳಕು ಚೆಲ್ಲುವ ಅರ್ಥಪೂರ್ಣ ಚರ್ಚೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.

    ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂವಿಧಾನದ ಮೇಲಿನ ಚರ್ಚೆಗೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವಕಾಶ ನೀಡಿದರು. ಕಾಂಗ್ರೆಸ್ ಸದಸ್ಯ ಧರ್ಮಸೇನಾ ಮಾತನಾಡಿ, ಇಂದು ಕೂಡ ಮತಾಂತರ ಆಗುತ್ತಿದೆ. ಯಾಕೆ ಆಗುತ್ತಿದೆ ಎನ್ನುವ ಹಿನ್ನಲೆ ಹುಡುಕಬೇಕಿದೆ ಎಂದರು.

    1976-77ರಲ್ಲಿ ತಮಿಳುನಾಡಿನ ವೈದ್ಯನಾಥೇಶ್ವರ ಕೋಯಲ್‍ನಲ್ಲಿ ದಲಿತರು ಸಾಮೂಹಿಕ ಮತಾಂತರಕ್ಕೆ ಮುಂದಾಗಿದ್ದರು. ಆಗ ಅಂದಿನ ಪ್ರಧಾನಿ ಇಂದಿರಾಗಾಂಧಿ ಮತಾಂತರ ಬೇಡ ಎಂದು ಕಠಿಣ ಸಂದೇಶ ನೀಡುತ್ತಾರೆ. ಆದರೂ ಅಲ್ಲಿನ ದಲಿತರು ನಾವು ಇಲ್ಲಿ ಉಳಿಯಲ್ಲ. ಬೌದ್ಧ ಧರ್ಮ ಸ್ವೀಕಾರ ಮಾಡುತ್ತೇವೆ ಎಂದಾಗ ವೈದ್ಯನಾಥೇಶ್ವರ ಕೋಯಲ್‍ಗೆ ಬಾಬು ಜಗಜೀವನ್ ರಾಮ್‍ರನ್ನು ಕಳಿಸಿಕೊಟ್ಟರು. ಅವರು ತಿಳಿಹೇಳಿ ಮತಾಂತರ ತಪ್ಪಿಸಿದರು. ಈಗಲೂ ನನ್ನ ಕ್ಷೇತ್ರವಾದ ಟಿ.ನರಸೀಪುರಲ್ಲಿ ಬಹಳ ಜನ ಮತಾಂತರ ಆಗುತ್ತಿದ್ದಾರೆ. ಅಲ್ಲಿ ಯಾರೂ ಕ್ರಿಶ್ಚಿಯನ್ ಇಲ್ಲ. ಕ್ರಿಶ್ಚಿಯನ್‍ಗೆ ಮತಾಂತರದವರೇ ಇದ್ದಾರೆ. ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದ ಕಾರಣಕ್ಕೆ ಹೀಗಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಅಸ್ಪೃಶ್ಯತೆ ನಿವಾರಣೆಗೆ ಕಾಂಗ್ರೆಸ್ ಏನು ಮಾಡಿತು ಎನ್ನುತ್ತಾರೆ. ಅಂದು ಹೋಟೆಲ್ ನಲ್ಲಿ ಅವರ ಲೋಟ ಅವರೇ ತೊಳೆಯಬೇಕಿತ್ತು. ದೇವಾಲಯಕ್ಕೆ ಪ್ರವೇಶ ಇರಲಿಲ್ಲ. ಇದೆಲ್ಲ ಕಾಂಗ್ರೆಸ್ ತೊಡೆದು ಹಾಕಿದೆ ಎಂದರು. ಅಸ್ಪೃಶ್ಯತೆ ನಡೆದಾಗ ಆ ಜವಾಬ್ದಾರಿ ಶಾಸಕರೇಕೆ ತೆಗೆದುಕೊಳ್ಳಲ್ಲ. ಕ್ಷೇತ್ರ ನನ್ನದು ಎನ್ನುವ ಶಾಸಕ, ಡಿಸಿ, ಎಸಿ, ತಹಶೀಲ್ದಾರ್, ಗ್ರಾಮ ಪಂಚಾಯತಿ ಅಧ್ಯಕ್ಷರು ಜವಾಬ್ದಾರಿ ತೆಗೆದುಕೊಳ್ಳಬೇಕು. ಧರ್ಮ ಹಾಗೂ ಸಂವಿಧಾನದಿಂದ ಅಸ್ಪೃಶ್ಯರಿಗೆ ರಕ್ಷಣೆ ಬೇಕಿದೆ. ಸಂವಿಧಾನ ತಿದ್ದುಪಡಿ ಸಾಕಷ್ಟು ಬಾರಿ ಆಗಿದೆ ಅದಕ್ಕೆ ನನ್ನದು ವಿರೋಧ ಇಲ್ಲ. ಆದರೆ ಅಸ್ಪೃಶ್ಯರಿಗೆ ಅನುಕೂಲ ಮಾಡಿಕೊಡಬೇಕು. ಕಾನೂನು ತಿದ್ದುಪಡಿ, ಸಂವಿಧಾನದ ಮೂಲಕವೇ ಒಳಮೀಸಲಾತಿ ತರಬೇಕಿದೆ ಎಂದು ಸದಾಶಿವ ಆಯೋಗ, ಒಳಮೀಸಲಾತಿ ಹೋರಾಟದ ಪ್ರಸ್ತಾಪ ಮಾಡಿದರು.

    ಇಂದು ಕೂಡ ದೇಶದ ಸಂವಿಧಾನ ಮತ್ತು ಧರ್ಮದದಿಂದ ಅಸ್ಪೃಶ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ, ಮೀಸಲಾತಿ ತೆಗೆಯುವ ಚಿಂತನೆ ಬರುತ್ತಿದೆ. ಕೆಲವರು ಈ ಕುರಿತು ಮಾತನಾಡುತ್ತಿದ್ದಾರೆ. ಒಂದು ವೇಳೆ ಮೀಸಲಾತಿ ರದ್ದುಪಡಿಸಿದರೆ ಅಂದೇ ಪ್ರಜಾಪ್ರಭುತ್ವ ಹೊರಟು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಇದಕ್ಕೆ ಪೂರಕವಾಗಿ ಮಾತನಾಡಿದ ತೇಜಸ್ವಿನಿ ರಮೇಶ್ ಮತಾಂತರಕ್ಕೆ ಕೇವಲ ಅಸ್ಪೃಶ್ಯತೆ ಕಾರಣವಲ್ಲ. ಬಡತನ ಹಾಗೂ ಮುಗ್ಧತೆಯ ಕಾರಣಕ್ಕೆ ಮತಾಂತರ ನಡೆಯುತ್ತಿದೆ ಎಂದರು. ಈ ವೇಳೆ ಆರ್.ಬಿ ತಿಮ್ಮಾಪೂರ್, ಮೇಲ್ವರ್ಗದ ರಾಜಕಾರಣಿಗಳು ಇಂದು ಕೂಡ ಜೇಬಿನಲ್ಲಿ ಲೋಟ ಕೊಂಡೊಯ್ದು ಹೋಗಿ ಅಸ್ಪೃಶ್ಯರ ಮನೆಗಳಲ್ಲಿ ಟೀ ಹಾಕಿಸಿಕೊಂಡು ಕುಡಿಯುತ್ತಾರೆ ಅಂತಹ ಪದ್ಧತಿ ಇನ್ನು ಇದೆ ಎಂದರು.

    ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ನಾವು ಯಾವ ಕಾಲದಲ್ಲಿ ಇದ್ದೇವೆ. ನಾಚಿಕೆಯಾಗಬೇಕು. ತಮ್ಮ ಲೋಟ ತೆಗೆದುಕೊಂಡು ಹೋಗಿ ಅಸ್ಪೃಶ್ಯರ ಮನೆಯಲ್ಲಿ ಟೀ ಹಾಕಿಸಿಕೊಳ್ಳುತ್ತಾರೆ ಎಂದರೆ ಖಂಡಿಸಬೇಕು. ಇವರಿಗೆ ಮನುಷ್ಯತ್ವ ಇದೆ ಅನ್ನಬೇಕಾ? ಶಾಸಕ, ಸಂಸದ, ಮಂತ್ರಿ ಯಾರೇ ಆಗಲಿ ಇಂತಹ ಕೆಲಸ ಮಾಡಿದಲ್ಲಿ ಅದು ಖಂಡನೀಯ ಎಂದರು. ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಕೇಳಿ ಬಂತು.

  • ಅಸಾಂವಿಧಾನಿಕ ಪದ ಬಳಸಿ ಪೇಚಿಗೆ ಸಿಲುಕಿದ ಸರವಣ

    ಅಸಾಂವಿಧಾನಿಕ ಪದ ಬಳಸಿ ಪೇಚಿಗೆ ಸಿಲುಕಿದ ಸರವಣ

    ಬೆಂಗಳೂರು: ಜೆಡಿಎಸ್ ಸದಸ್ಯ ಸರವಣ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿರುದ್ಧ ಅಸಾಂವಿಧಾನಿಕ ಪದ ಬಳಸಿ ಬಳಿಕ ಅ ಹೇಳಿಕೆಯನ್ನು ವಾಪಸ್ ಪಡೆದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ನಡೆಯಿತು. ಬಳಿಕ ಸರವಣ ಬಳಸಿದ ಪದವನ್ನು ಸಭಾಪತಿಗಳು ಕಡತದಿಂದಲೇ ತೆಗೆಯುವಂತೆ ಆಯಿತು.

    ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸರವಣ ಸಿಎಎ ತರುವ ಮೊದಲು ಜನರನ್ನು ವಿಶ್ವಾಸಕ್ಕೆ ಪಡೆಯದೇ ತುರ್ತುಪರಿಸ್ಥಿತಿ ತರುವ ರೀತಿ ಜಾರಿಗೆ ತರಲಾಗಿದೆ. ಪ್ರತಿಭಟಿಸುವ ಹಕ್ಕು ಮೊಟಕುಗೊಳಿಸಲಾಗಿದೆ. ಸಿಎಎ ವಿರುದ್ಧ ಹೋರಾಟ ನಡೆಸುವವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಭಟನೆಗೆ ವಿರೋಧವಿಲ್ಲ. ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿದರೆ, ಭಾರತ ವಿರುದ್ಧ ದಿಕ್ಕಾರ ಎನ್ನುವ ಘೋಷಣೆ ಕೂಗಿದರೆ ಸರ್ಕಾರ ಸಹಿಸಲ್ಲ. ಯಾರೇ ಆದರೂ ಅವರನ್ನು ಜೈಲಿಗೆ ಕಳಿಸುತ್ತೇವೆ. ಅವರ ವಿರುದ್ಧ ಕೇಸು ಹಾಕುತ್ತೇವೆ. ಇದು ಹೇಡಿ ಸರ್ಕಾರ ಅಲ್ಲ. ವೋಟಿಗೋಸ್ಕರ ಏನನ್ನು ಬೇಕಾದರೂ ಸಹಿಸುವ ಧೋರಣೆ ನಮ್ಮದ್ದಲ್ಲ ಎಂದು ಎಚ್ಚರಿಕೆ ಕೊಟ್ಟರು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದರು.

    ಬಳಿಕ ಮಾತು ಮುಂದುವರಿಸಿದ ಸರವಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಮುಸ್ಲಿಂ ಜನರಿಗೆ ಅಭಿವೃದ್ಧಿ ಕೆಲಸ ಮಾಡಲ್ಲ ಎನ್ನುತ್ತಾರೆ. ಅವರೇನು ಹಣವನ್ನು ಅವರ ಅಪ್ಪನ ಮನೆಯಿಂದ ತರುತ್ತಾರಾ ಎಂದು ಅಸಾಂವಿಧಾನಿಕ ಪದ ಬಳಕೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪದ ಬಳಕೆ ಬಗ್ಗೆ ಹಿಡಿತವಿರಲಿ ಏನು ಮಾತನಾಡುತ್ತಿದ್ದೀರಾ? ನಾವೂ ನಿಮಗೆ ಹಾಗೇ ಅಂದರೆ ಸಹಿಸುತ್ತೀರಾ ಎಂದು ಸರವಣ ವಿರುದ್ಧ ವಾಗ್ದಾಳಿ ನಡೆಸಿದರು.

    ಆಗ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಸರವಣ ಬಳಸಿದ ಪದ ತಪ್ಪು. ಹಾಗೆ ಮಾತನಾಡಿದ್ದು ಸರಿಯಲ್ಲ. ಪದ ವಾಪಸ್ ಪಡೆಯಿರಿ ಎಂದು ಸಲಹೆ ನೀಡಿದರು. ಹೊರಟ್ಟಿ ಮಾತಿನ ನಂತರ ನನ್ನ ಹೇಳಿಕೆ ವಾಪಸ್ ಪಡೆಯುತ್ತಿದ್ದೇನೆ ಎಂದು ಸರವಣ ಹೇಳಿದರು. ವಾಪಸ್ ಪಡೆದ ನಂತರ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅಸಾಂವಿಧಾನಿಕ ಪದವನ್ನು ಕಡತದಿಂದ ತೆಗೆಯುವಂತೆ ರೂಲಿಂಗ್ ನೀಡಿದರು.

    ಇಷ್ಟಾದರೂ ಸದನದಲ್ಲಿ ಜೆಡಿಎಸ್, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಿನಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಸರವಣ ಬಿಜೆಪಿಯ ಪ್ರಾಣೇಶ್ ವಿರುದ್ಧ ಹರಿಹಾಯ್ದರು. ನನ್ನ ಬಗ್ಗೆ ಮಾತಾಡುವ ನೈತಿಕತೆ ನಿನಗೂ ಇಲ್ಲ, ನಿನಗೆ ಮಾತನಾಡಲು ಬರಲ್ಲ ಎಂದು ಏಕವಚನದಲ್ಲಿ ಬೈದಾಡಿಕೊಂಡರು. ನಂತರ ಸಭಾಪತಿ ಸೂಚನೆಯಂತೆ ಮಾತು ಮುಂದುವರಿಸಿದ ಸರವಣ, ನೊಂದು ಅಂತಹ ಪದ ಬಳಸಿದೆ, ಯಾವುದೇ ಬೇರೆ ಉದ್ದೇಶವಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.

  • ‘ಚಿಣಿಮಿಣಿ’ ಉಲ್ಲೇಖಿಸಿದ ನಾರಾಯಣಸ್ವಾಮಿ – ನಗೆಗಡಲಲ್ಲಿ ತೇಲಿದ ಸದಸ್ಯರು

    ‘ಚಿಣಿಮಿಣಿ’ ಉಲ್ಲೇಖಿಸಿದ ನಾರಾಯಣಸ್ವಾಮಿ – ನಗೆಗಡಲಲ್ಲಿ ತೇಲಿದ ಸದಸ್ಯರು

    ಬೆಂಗಳೂರು: ಒಂದೊಂದು ಸಾರಿ ಒಂದೊಂದು ಪದಗಳು ಸಿಕ್ಕಾಪಟ್ಟೆ ಹೆಸರು ಮಾಡಿ ಬಿಡುತ್ತವೆ. ಆ ಹೆಸರು ಮಾಡಿದ ಪದಗಳು ಹೊಸ ಹೊಸ ಪದಗಳ ಸೃಷ್ಟಿಗೂ ಕಾರಣವಾಗಿ ಬಿಡುತ್ತವೆ. ಇತ್ತೀಚೆಗೆ ಫೇಮಸ್ ಆಗಿದ್ದ ಪದದಿಂದ ಈಗ ಹೊಸ ಪದವೊಂದು ಸೃಷ್ಟಿಯಾಗಿ ಪ್ರಚಾರ ಆಗ್ತಿದೆ. ಈ ಹೊಸ ಪದ ಸೃಷ್ಟಿಯಾಗಿದ್ದು, ವಿಧಾನ ಪರಿಷತ್ ನ ಕಲಾಪದಲ್ಲಿ.

    ಕಲಾಪದಲ್ಲಿ ಮಂಗಳೂರು ಬಾಂಬ್ ಪ್ರಕರಣವನ್ನು ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಪ್ರಸ್ತಾಪ ಮಾಡಿದ್ರು. ವಿಮಾನ ನಿಲ್ದಾಣದಲ್ಲಿ ಇರಿಸಲಾಗಿದ್ದು ಬಾಂಬ್ ಮಾದರಿಯ ವಸ್ತುವಿನಲ್ಲಿ ‘ಚಿಣಿಮಿಣಿ’ ಪದಾರ್ಥ ಇತ್ತು ಎಂದ ನಾರಾಯಣಸ್ವಾಮಿ ಚರ್ಚೆ ವೇಳೆ ಹೇಳಿದ್ರು. ಈ ಪದ ಕೇಳಿದ ಕೂಡಲೇ ಸದನ ನಗೆಗಡಲಲ್ಲಿ ತೇಲಿತು.

    ಅಷ್ಟಕ್ಕೂ ಅ ಹೊಸ ಪದ ಸೃಷ್ಟಿ ಆಗಲು ಕೋರ್ಟ್ ಆದೇಶವೇ ಕಾರಣ. ಭಾರೀ ಟ್ರೋಲ್ ಆಗುತ್ತಿದ್ದ ಆ ಪದವನ್ನು ಬಳಕೆ ಮಾಡಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

    ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಸದನದಲ್ಲೂ ಕೂಡಾ ಆ ಪದವನ್ನು ಬಳಸಲು ನಾರಾಯಣಸ್ವಾಮಿ ಹಿಂದೇಟು ಹಾಕಿದರು. ಆ ಪದಕ್ಕೆ ಬದಲಾಗಿ ಚಿಣಿಮಿಣಿ ರೀತಿಯ ಪದಾರ್ಥ ಇತ್ತು ಅಂತ ಬಳಕೆ ಮಾಡಿದರು.

  • ಪರಿಷತ್ ಕಲಾಪದಲ್ಲಿ ‘ಅನರ್ಹ-ಅರ್ಹರ’ ಗಲಾಟೆ

    ಪರಿಷತ್ ಕಲಾಪದಲ್ಲಿ ‘ಅನರ್ಹ-ಅರ್ಹರ’ ಗಲಾಟೆ

    ಬೆಂಗಳೂರು: 17 ಜನ ಶಾಸಕರನ್ನ ಸುಪ್ರೀಂಕೋರ್ಟ್ ಅನರ್ಹ ಮಾಡಿದ್ದು ಆಯ್ತು. ಅದರಲ್ಲಿ 11 ಜನ ಮತ್ತೆ ಚುನಾವಣೆಯಲ್ಲಿ ಗೆದ್ದು ಅರ್ಹರಾಗಿ ಸಚಿವರಾಗಿಯೂ ಆಯ್ತು. ಈಗ ಅನರ್ಹ ಅನ್ನೋ ಪದ ದೊಡ್ಡ ಗಲಾಟೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಚರ್ಚೆ ವೇಳೆ ಆಡಿದ ಆ ಒಂದು ಪದದಿಂದ ಕಲಾಪದಲ್ಲಿ ಗದ್ದಲ ಗಲಾಟೆ ಉಂಟಾಯ್ತು.

    ವಿಧಾನ ಪರಿಷತ್‍ನಲ್ಲಿ ಇಂದು ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಆಗುತ್ತಿತ್ತು. ಈ ವೇಳೆ ಮಾತನಾಡುತ್ತಿದ್ದ ಕಾಂಗ್ರೆಸ್ಸಿನ ಶಾಸಕ ತಿಮ್ಮಾಪುರ ಗೋಲಿಬಾರ್ ಮಾಡಿದ ಯಾವುದೇ ಸರ್ಕಾರಗಳು ಉಳಿದಿಲ್ಲ ಅಂತ ಹಿಂದಿನ ಹಲವು ಉದಾಹರಣೆ ಕೊಟ್ಟರು. ಕೂಡಲೇ ಎದ್ದು ನಿಂತ ಕಾಂಗ್ರೆಸ್ಸಿನ ಐವಾನ್ ಡಿಸೋಜಾ ಈ ಸರ್ಕಾರನೂ ಉಳಿಯೊಲ್ಲ ಅಂತ ಲೇವಡಿ ಮಾಡಿದ್ರು. ಅದಕ್ಕೆ ಯಾಕೆ ಉಳಿಯೊಲ್ಲ ಅಂತ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ರು. ಇದಕ್ಕೆ ಕೂಡಲೇ ಎದ್ದುನಿಂತ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಇದು ಅನರ್ಹ ಸರ್ಕಾರ ಎಂದು ಬಿಟ್ಟರು. ಇದಕ್ಕೆ ಆಕ್ರೋಶಗೊಂಡ ಸಚಿವರಾದ ಬಿಸಿ ಪಾಟೀಲ್, ಸೋಮಶೇಖರ್, ಕಾಂಗ್ರೆಸ್ ಸದಸ್ಯರ ಮೇಲೆ ಮುಗಿಬಿದ್ದರು. ನಾವು ಅನರ್ಹರಲ್ಲ ಅರ್ಹರು. ನಾವು ಜನರಿಂದ ಆಯ್ಕೆ ಆಗಿದ್ದೇವೆ. ಬಾಯಿಗೆ ಬಂದಂತೆ ಮಾತಾಡಬೇಡಿ ಎಂದು ಬಿಸಿ ಪಾಟೀಲ್, ಸೋಮಶೇಖರ್ ವಾಗ್ದಾಳಿ ನಡೆಸಿದ್ರು. ಈ ವೇಳೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೀತು. ಸದನದಲ್ಲಿ ಗದ್ದಲ ಗಲಾಟೆ ಆಯ್ತು.

    ಇಷ್ಟಕ್ಕೆ ಸುಮ್ಮನೆ ಆಗದ ಬಿಸಿ ಪಾಟೀಲ್ ಹಾಗೂ ಸೋಮಶೇಖರ್, ಕೋರ್ಟ್ ಆದೇಶದಂತೆ ನಾವು ಗೆದ್ದಿದ್ದೇವೆ. ನೀವು ಯಾರು ನಮ್ಮನ್ನ ಅನರ್ಹರು ಎನ್ನಲು ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ಇಷ್ಟಕ್ಕೆ ಸುಮ್ಮನೆ ಆಗದ ಕಾಂಗ್ರೆಸ್ ನಾಯಕರು ಮತ್ತೆ ನೀವು ಅನರ್ಹರೇ ಎಂದು ಕೂಗಿದರು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಈ ವೇಳೆ ಎದ್ದುನಿಂತ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳೇ 17 ಜನರ ಶಾಸಕರನ್ನ ವೈರಸ್ ಎಂದಿದ್ದಾರೆ ಅಂತ ಆರೋಪ ಮಾಡಿದರು. ಈ ಮಾತಿಗೆ ಮತ್ತೆ ಗಲಾಟೆ ಪ್ರಾರಂಭ ಆಯ್ತು. ಪಿ.ಆರ್.ರಮೇಶ್ ಗೆ ತಿರುಗೇಟು ಕೊಟ್ಟ ಸೋಮಶೇಖರ್ ವೈರಸ್ ಆಗಲಿ ಏನೇ ಆಗಲಿ ನಿಮಗೇಕೆ ಸುಮ್ಮನಿರಿ ಅಂತ ಕಿಡಿಕಾರಿದರು. ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು. ಕೂಡಲೇ ಕಾಂಗ್ರೆಸ್ ನಾರಾಯಣಸ್ವಾಮಿ ನಾವು ನಿಮ್ಮ ಸ್ನೇಹಿತರು ಅದಕ್ಕೆ ಹೇಳ್ತಿದ್ದೇವೆ ಅಂದರು. ಅದಕ್ಕೆ ಸಿಟ್ಟಾದ ಸೋಮಶೇಖರ್ ಮತ್ತು ಬಿಸಿ ಪಾಟೀಲ್, ನೀವು ಸ್ನೇಹತರಲ್ಲ ದುಷ್ಮನ್ ಗಳು ಎಂದು ಆಕ್ರೋಶ ಹೊರ ಹಾಕಿದ್ರು. ನಿಮ್ಮ ಸಹವಾಸ ಬೇಡ ಅಂತಾನೆ ನಿಮ್ಮನ್ನ ಬಿಟ್ಟು ಬಂದಿದ್ದೇವೆ ಎಂದ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದರು. ಮತ್ತೆ ಸದನದಲ್ಲಿ ಗಲಾಟೆ ಆದಾಗ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಪರಿಸ್ಥಿತಿ ಶಾಂತಗೊಳಿಸಿದರು.