Tag: vidhana parishad

  • ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

    ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

    ಬೆಂಗಳೂರು: ಶಿವಮೊಗ್ಗದಲ್ಲಿ ಯುವಕನ ಕೊಲೆ ಮಾಡಿಸಿರುವುದೇ ಕೆ.ಎಸ್ ಈಶ್ವರಪ್ಪ. ತನ್ನ ಕುರ್ಚಿ ಉಳಿಸಿಕೊಳ್ಳಲು ಈ ಕೊಲೆ ಮಾಡಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

    ಪರಿಷತ್ ನಲ್ಲಿ ಇಂದು ಮಾತನಾಡಿದ ಅವರು, ಶಿವಮೊಗ್ಗ ಕೊಲೆ ಪ್ರಕರಣ ಸಂಬಂಧ ಮಾತನಾಡುತ್ತಾ ಪರೋಕ್ಷವಾಗಿ ಈಶ್ವರಪ್ಪನವರೇ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ತಮ್ಮ ಸ್ಥಾನ ಉಳಿಸಿಕೊಳ್ಳಲು ಈಶ್ವರಪ್ಪ ಕೊಲೆ ಮಾಡಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಇದನ್ನೂ ಓದಿ: ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ, ಬಿಜೆಪಿಗೆ ಹೊಸದಲ್ಲ: ಬಿ.ಕೆ ಹರಿಪ್ರಸಾದ್

    ನಿನ್ನೆ ಶಿವಮೊಗ್ಗದಲ್ಲಿ ನಿನ್ನೆ ಒಂದು ಘಟನೆ ಆಗಿದೆ. ಕೊಲೆ ಆದ ಯುವಕನ ತಾಯಿ, ತನ್ನ ಮಗ ಎರಡು ವರ್ಷಗಳಿಂದ ಭಜರಂಗದಳದಲ್ಲಿ ಇಲ್ಲ ಅಂತ ಹೇಳಿದ್ದಾರೆ. ಇತ್ತ ಈಶ್ವರಪ್ಪ ಇದು ಮುಸ್ಲಿಂ ಗೂಂಡಾಗಳಿಂದ ಕೊಲೆ ಆಗಿದೆ ಅಂತಾರೆ. ಗೃಹ ಸಚಿವರು ಇದ್ದಾಗ ಇವರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಈ ಕೊಲೆಯನ್ನು ಈಶ್ವರಪ್ಪನೇ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರ್ಷ ಮೃತದೇಹ ಮೆರವಣಿಗೆ ವೇಳೆ ಕೇಸರಿ ಧ್ವಜ ಹಿಡಿದು ಕಲ್ಲು ತೂರಾಟ

    ಈಶ್ವರಪ್ಪ ಪರೋಕ್ಷವಾಗಿ ಈ ಕೊಲೆ ಮಾಡಿಸಿದ್ದಾರೆ. ಪೊಲೀಸರ ತನಿಖೆ ಮುನ್ನ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳುತ್ತಾ ಪೆರೆಸ್ ಮೆಸ್ತಾ ವಿಷಯವನ್ನು ಹರಿಪ್ರಸಾದ್ ಪ್ರಸ್ತಾಪ ಮಾಡಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆದಿದ್ದು, ಹರಿಪ್ರಸಾದ್ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ

  • ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಕಾಂಗ್ರೆಸ್ ಧರಣಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಡ್, ತಲೆ ದಿಂಬುಗಳು ಹಾಗೂ ಹೊದಿಕೆ ವ್ಯವಸ್ಥೆ ಮಾಡಲಾಗಿತ್ತು. ಧರಣಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರು ಟ್ರಾಕ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿ ಆಗಮಿಸಿದ್ದರು.

    ಆಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಧರಣಿ ನಿರತ ಕಾಂಗ್ರೆಸ್ ನಾಯಕರು ಹಾಗೂ ಶಾಸಕರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಊಟ ವ್ಯವಸ್ಥೆ ಮಾಡಿದ್ದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸೌತ್ ರುಚಿ ಹೋಟೆಲ್‍ನಿಂದ 120 ಜನರಿಗಾಗಿ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಊಟದ ಮೆನು!: ಊಟದಲ್ಲಿ 15 ಬಗೆಯ ಪದಾರ್ಥಗಳಿದ್ದವು. ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ರಸಂ, ಸಾಂಬಾರ್, ತರಕಾರಿ ಸಲಾಡ್, ಪಲ್ಯ, ರೈಸ್ ಬಾತ್, ಮೊಸರು, ಡ್ರೈ ಜಾಮೂನ್ ಸೇರಿದಂತೆ ಒಟ್ಟು 15 ತರಹದ ಪದಾರ್ಥಗಳು ಇಂದಿನ ಊಟದ ಮೆನುವಿನಲ್ಲಿತ್ತು.

    ಸಂಧಾನ ಯತ್ನ!: ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಸಂಧಾನ ಯತ್ನ ನಡೆಸಿದರು. ಸ್ಪೀಕರ್ ಕಾಗೇರಿ ಅವರ ಸಮ್ಮುಖದಲ್ಲೇ ಸಂಧಾನ ಮಾತುಕತೆ ನಡೆದರೂ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಈಶ್ವರಪ್ಪ ರಾಜೀನಾಮೆ ಪಡೆಯಿರಿ, ಇಲ್ಲ ಅಮಾನತು ಮಾಡಿ ಎಂದು ಕೈ ನಾಯಕರು ಪಟ್ಟು ಹಿಡಿದರು. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗಕ್ಕೆ ಸಮಿತಿ ರಚನೆ: ಬೊಮ್ಮಾಯಿ

    ರಾತ್ರಿ ಇಲ್ಲಿ ಮಲಗೋದು ಬೇಡ ಅಂದ್ವಿ!: ಸಂಧಾನ ಯತ್ನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಅಶೋಕ್ ಸೇರಿ ಎರಡು ಗಂಟೆಗಳ ಕಾಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ. ರಾತ್ರಿ ಇಲ್ಲಿ ಧರಣಿ ಮಾಡುವುದು ಬೇಡ, ಆ ರೀತಿ ವಿಶೇಷವಾದ ಘಟನೆ ನಡೆದಿಲ್ಲ ಎಂದಿದ್ದೇವೆ. ರಾತ್ರಿ ಮಾತ್ರ ಇಲ್ಲಿ ಮಲಗೋದು ಬೇಡ, ಇದು ಒಳ್ಳೆಯ ಪದ್ಧತಿ ಆಗಲ್ಲ ಎಂದು ಮನವೊಲಿಕೆ ಮಾಡಿದ್ದೇವೆ. ಆದರೆ ಅವರು ಮನಸ್ಸಿನಲ್ಲಿ ತೀರ್ಮಾನ ಮಾಡಿ ಆಗಿದೆ, ರಾತ್ರಿ ಇಲ್ಲೇ ಇರುತ್ತೇವೆ ಎಂದು ಹೇಳಿದರು. ಸ್ಪೀಕರ್ ಕೂಡಾ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ. ನಾಳೆ ಧರಣಿ ಮುಂದುವರಿಸಿ ಎಂದರೂ ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ನಾಳೆ ಮತ್ತೆ ಮನವೊಲಿಕೆಗೆ ಮಾತನಾಡುತ್ತೇವೆ ಎಂದು ಹೇಳಿದರು.

    ಪರಿಷತ್‍ನಲ್ಲಿ ಕೂಡಾ ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ ನಡೆಯುತ್ತಿದೆ. ಪರಿಷತ್‍ನಲ್ಲಿ ಧರಣಿ ನಿರತರನ್ನು ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿಯಾದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ರಾಮಲಿಂಗರೆಡ್ಡಿ ಅವರು ವಿಧಾನ ಪರಿಷತ್ತಿಗೆ ಭೇಟಿ ನೀಡಿ ವಿಪಕ್ಷ ನಾಯಕ ಹರಿಪ್ರಸಾದ್ ಹಾಗೂ ಧರಣಿ ನಿರತ ಸದಸ್ಯರ ಜೊತೆ ಮಾತುಕತೆ ನಡೆಸಿದರು. ಇದನ್ನೂ ಓದಿ: ಅವನು ನಮ್ಮ ಅಪ್ಪನ ಮೀಟ್ ಮಾಡಬೇಕು ಅಂತಿದಾನೆ, ನಾನೇ ಅವನನ್ನ ಎಲ್ಲಿ, ಹೇಗೆ, ಯಾವಾಗ ಮೀಟ್ ಮಾಡಬೇಕೋ ಮಾಡ್ತೀನಿ!

  • ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!

    ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!

    ಬೆಂಗಳೂರು: ಎಷ್ಟು ದಿನ ಸದನದಲ್ಲಿ ನಾನು ಸದನದಲ್ಲಿ ಇರ್ತೀನೋ ಗೊತ್ತಿಲ್ಲ. ನನಗೆ ಮಾತಾಡಲು ಅವಕಾಶ ಕೊಡಿ ಅಂತ ಕಾಂಗ್ರೆಸ್‍ನ ರೆಬೆಲ್ ಸದಸ್ಯ ಸಿ.ಎಂ. ಇಬ್ರಾಹಿಂ ಸದನದಲ್ಲಿ ಪಟ್ಟು ಹಿಡಿದ ಘಟನೆ ಇಂದು ನಡೀತು.

    ಶೂನ್ಯ ವೇಳೆ ಮುಗಿದ ಕೂಡಲೇ ಎದ್ದು ನಿಂತ ಇಬ್ರಾಹಿಂ, ಇಲ್ಲಿ ಎಷ್ಟು ದಿನ ನಾನು ಇಲ್ಲಿಯೇ ಇರ್ತೀನೋ ನನಗೆ ಗೊತ್ತಿಲ್ಲ. ನನಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ನೀನು ಜಮೀರ್ ಥರಾ ಆಡ್ತೀಯಲ್ಲೋ – ರೇಣುಕಾಚಾರ್ಯಗೆ ಮಾತಿನಿಂದ ತಿವಿದ ಬಿಎಸ್‍ವೈ

    ಹಿಜಬ್ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಲು ಸಿಎಂ ಇಬ್ರಾಹಿಂ ಮುಂದಾಗಿದ್ದರು. ಆದರೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ಕೊಡಲಿಲ್ಲ. ಇದಕ್ಕೆ ಸಿಟ್ಟಿಗೆದ್ದು ಸಿಡಿಮಿಡಿಗೊಂಡ ಸಿಎಂ ಇಬ್ರಾಹಿಂ, ಯಾಕೆ ಈ ತರಹ ತಾರತಮ್ಯ ಮಾಡ್ತಿದ್ದೀರಿ..? ಯಾವಾಗ ನನಗೆ ಅವಕಾಶ ಕೊಡ್ತೀರಿ ಎಂದು ಪ್ರಶ್ನೆ ಮಾಡಿದರು.

    ನನ್ನ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಆಗುತ್ತೆ ಅಂತ ನನಗೆ ಶೂನ್ಯವೇಳೆ ಅವಕಾಶ ಕೊಡ್ತಿಲ್ವಾ? ನಾಳೆ ಕೊಡ್ತೀರೋ, ನಾಡಿದ್ದು ಕೊಡ್ತೀರೋ ಹೇಳಿ. ಇಲ್ಲಿ ಇದ್ದಾಗಲೇ ನಾನು ಮಾತಾಡಬೇಕು ಎಂದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಇವತ್ತು ಅಜೆಂಡಾದಲ್ಲಿ ಸೇರಿಸಿಲ್ಲ, ಅವಕಾಶ ಇಲ್ಲ ಅಂತಾ ತಿಳಿಸಿದರು. ಸಭಾಪತಿಗಳ ಮಾತಿನಿಂದ ಸಿಟ್ಟಿಗೆದ್ದು ಇಬ್ರಾಹಿಂ ಕಲಾಪದಿಂದ ಹೊರ ನಡೆದರು.

  • ಮೇಲ್ಮನೆ ಕಾಂಗ್ರೆಸ್ ಟಿಕೆಟ್‍ನಲ್ಲಿ ಡಿಕೆಶಿ ಆಪ್ತರಿಗೆ ಮಣೆ- ಎಸ್.ಆರ್. ಪಾಟೀಲ್ ಸ್ಪರ್ಧಿಸೋದು ಅನುಮಾನ

    ಮೇಲ್ಮನೆ ಕಾಂಗ್ರೆಸ್ ಟಿಕೆಟ್‍ನಲ್ಲಿ ಡಿಕೆಶಿ ಆಪ್ತರಿಗೆ ಮಣೆ- ಎಸ್.ಆರ್. ಪಾಟೀಲ್ ಸ್ಪರ್ಧಿಸೋದು ಅನುಮಾನ

    ಬೆಂಗಳೂರು: ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನ. ಇಂದು ಅಳೆದುತೂಗಿ ಕಾಂಗ್ರೆಸ್ 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಮೇಲ್ಮನೆ ವಿಪಕ್ಷ ನಾಯಕರಾಗಿದ್ದ ಎಸ್‍ಆರ್ ಪಾಟೀಲ್‍ಗೆ ವಿಜಯಪುರ-ಬಾಗಲಕೋಟೆ ಅವಳಿ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಇಲ್ಲಿ ಎಂಬಿ ಪಾಟೀಲ್ ಮೇಲುಗೈ ಸಾಧಿಸಿದ್ದಾರೆ. ಸಹೋದರ ಸುನೀಲ್ ಗೌಡ ಪಾಟೀಲ್‍ಗೆ ಟಿಕೆಟ್ ಸಿಕ್ಕಿದೆ.

    ಇತ್ತ ನಿರೀಕ್ಷೆಯಂತೆ ಲಕ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿ ಹೋಳಿಗೆ ಟಿಕೆಟ್ ನೀಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಹಾಸನದ ಬಿಜೆಪಿ ಮುಖಂಡ ಎ ಮಂಜು ಪುತ್ರ ಮಂಥರ್‍ಗೌಡಗೆ ಕಾಂಗ್ರೆಸ್ ಮಡಿಕೇರಿ ಟಿಕೆಟ್ ನೀಡಿದೆ. ಸಚಿವ ಎಸ್.ಟಿ.ಸೋಮಶೇಖರ್ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡಗೂ ಕಾಂಗ್ರೆಸ್ ಮಣೆ ಹಾಕಿದೆ. ಬಳ್ಳಾರಿಯ ಸ್ಥಳೀಯ ಶಾಸಕರ ವಿರೋಧದ ನಡ್ವೆಯೂ ಕೆಸಿ ಕೊಂಡಯ್ಯ ಟಿಕೆಟ್ ಸಂಪಾದಿಸಿದ್ದಾರೆ. ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸಿದ್ದಾರೆ. ಇದನ್ನೂ ಓದಿ: ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    SALEEM AHMED

    ಮೈಸೂರಲ್ಲಿ ಧರ್ಮಸೇನಾಗೆ ಟಿಕೆಟ್ ತಪ್ಪಿದ್ದು, ಡಿಕೆಶಿ ಆಪ್ತ ತಿಮ್ಮಯ್ಯಗೆ ಟಿಕೆಟ್ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ದಕ್ಷಿಣ ಕನ್ನಡದಿಂದ ಮಂಜುನಾಥ ಭಂಡಾರಿ, ಉತ್ತರ ಕನ್ನಡದಿಂದ ಭೀಮಣ್ಣ ನಾಯ್ಕ್, ಚಿತ್ರದುರ್ಗದಿಂದ ಬಿ ಸೋಮಶೇಖರ್, ಶಿವಮೊಗ್ಗದಿಂದ ಪ್ರಸನ್ನಕುಮಾರ್, ತುಮಕೂರಿನಿಂದ ಆರ್ ರಾಜೇಂದ್ರ, ಚಿಕ್ಕಮಗಳೂರಿನಿಂದ ಗಾಯತ್ರಿ ಶಾಂತೆಗೌಡ, ಬೆಂಗಳೂರು ಗ್ರಾಮಾಂತರದಿಂದ ಡಿಕೆಶಿ ಸಂಬಂಧಿ ಎಸ್ ರವಿಗೆ ಟಿಕೆಟ್ ನೀಡಲಾಗಿದೆ.  ಇದನ್ನೂ ಓದಿ: ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಅಲ್ಲ, ಕೇವಲ ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವ: ಕಿಮ್ಮನೆ ರತ್ನಾಕರ್

    ಸದ್ಯ ಬೆಂಗಳೂರು ನಗರ, ಬೀದರ್ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ಆಗಬೇಕಿದೆ. ಐದು ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತಾಡಿ, ಯಾರಾದ್ರು ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ, ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಾರ್ವಜನಿಕರು ಕೈ ಜೋಡಿಸಬೇಕು: ಆರಗ ಜ್ಞಾನೇಂದ್ರ

    ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಾರ್ವಜನಿಕರು ಕೈ ಜೋಡಿಸಬೇಕು: ಆರಗ ಜ್ಞಾನೇಂದ್ರ

    ಬೆಂಗಳೂರು: ಯುವಜನರನ್ನು ಗುರಿಯಾಗಿಸಿ ಸಮಾಜ ಘಾತುಕ ಕೃತ್ಯ ನಡೆಸುವ ಡ್ರಗ್ಸ್ ಮಾಫಿಯಾವನ್ನು ರಾಜ್ಯದಲ್ಲಿ ಬಗ್ಗು ಬಡಿಯಲು ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರೂ ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಕೈ ಜೋಡಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ.

    ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ, ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪೊಲೀಸರು, ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಕಟಿಬದ್ಧರಾಗಿದ್ದು, ಈಗಾಗಲೇ, ದಾಖಲೆಯ ಪ್ರಮಾಣದಲ್ಲಿ ಅಕ್ರಮ ಡ್ರಗ್ಸ್ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಮಾಫಿಯಾ ಜಾಲವನ್ನು ನಿರ್ಮೂಲನೆ ಮಾಡಲು ಹಾಗೂ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ, ಬಂಧಿಸಲು ಅನುಕೂಲವಾಗುವಂತೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದ ಸಚಿವರು ಪೊಲೀಸರಿಗೆ ಅಗತ್ಯ ಮಾಹಿತಿ ಒದಗಿಸಿದರೆ ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತುಹಾಕಬಹುದು ಎಂದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಪ್ರಸ್ತಾಪಿಸಿದ ಹೆಣ್ಣು ಶಿಶು ಮಕ್ಕಳ ಮಾರಾಟ ಜಾಲದ ಬಗ್ಗೆ, ಸಚಿವರು, ವಿಜಯಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

  • ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ

    ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ

    – ಇನ್ಮುಂದೆ ಗೋವು ಕೊಂದ್ರೆ ಜೈಲು ಜೊತೆ ದಂಡ

    ಬೆಂಗಳೂರು: ಬಿಜೆಪಿ ಸರ್ಕಾರ ಕೊನೆಗೂ ವಿವಾದಿತ ಗೋಹತ್ಯೆ ನಿಷೇಧ ಮಸೂದೆಯನ್ನು ಎರಡು ಮನೆಯಲ್ಲೂ ಅಂಗೀಕಾರ ಮಾಡಿಕೊಳ್ಳುವಲ್ಲಿ ಸಕ್ಸಸ್ ಆಗಿದೆ. ವಿಧಾನ ಪರಿಷತ್‍ನಲ್ಲಿ ಸೋಮವಾರ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಹೈಡ್ರಾಮಾದ ನಡುವೆಯೇ ಬಿಲ್ ಪಾಸ್ ಆಗಿದ್ದು, ರಾಜ್ಯಪಾಲರ ಸಹಿ ಬಳಿಕ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರೋದಷ್ಟೇ ಬಾಕಿ ಇದೆ.

    ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿವಾದಿತ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ವಿಧಾನಪರಿಷತ್‍ನಲ್ಲೂ ಗ್ರೀನ್‍ಸಿಗ್ನಲ್ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭಾರೀ ವಿರೋಧದ ನಡುವೆಯೂ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರಗೊಂಡಿದೆ.

    ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪ್ರಬಲ ವಿರೋಧವಿತ್ತು. ಅಲ್ಲದೇ ಅನೇಕ ಅಂಶಗಳನ್ನ ತಿದ್ದುಪಡಿ ಮಾಡಲು ಸರ್ಕಾರಕ್ಕೆ ಸಲಹೆಗಳನ್ನು ಕೂಡಾ ನೀಡಲಾಗಿತ್ತು. ಇದಲ್ಲದೆ ವಿಧೇಯಕ ವಾಪಸ್ ಪಡೆಯುವಂತೆ ಕಾಂಗ್ರೆಸ್-ಜೆಡಿಎಸ್ ಆಗ್ರಹಿಸಿದವು. ವಿಧೇಯಕದ ಮೇಲೆ ಸತತ 3 ಗಂಟೆ ಚರ್ಚೆ ಕೂಡಾ ಆಯ್ತು. ಈ ವೇಳೆ ವಿಪಕ್ಷಗಳು ಚರ್ಚೆಗೆ ಇನ್ನಷ್ಟು ಸಮಯ ಬೇಕು ಅಂತ ಸಭಾಪತಿಗಳಿಗೆ ಮನವಿ ಮಾಡಿ ಗದ್ದಲ ಪ್ರಾರಂಭ ಮಾಡಿದವು. ಕೂಡಲೇ ಸಭಾಪತಿಗಳು ವಿಧೇಯಕ ಅಂಗೀಕಾರ ಪ್ರಕ್ರಿಯೆ ಪ್ರಾರಂಭ ಮಾಡಿದ್ರು. ಸರ್ಕಾರ ವಿಧೇಯಕ ಚರ್ಚೆಗೆ ಉತ್ತರ ನೀಡದೇ ವಿಧೇಯಕ ಅಂಗೀಕಾರ ಪ್ರಕ್ರಿಯೆ ನಡೀತು. ಸಭಾಪತಿಗಳ ನಡೆ ಮತ್ತು ಕಾಯ್ದೆ ವಿರೋಧಿಸಿ ಜೆಡಿಎಸ್ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಪ್ರತಿಭಟನೆ ನಡೆಸಿದ್ರು. ಕಾಂಗ್ರೆಸ್ಸಿನ ನಾರಾಯಣಸ್ವಾಮಿ, ಆರ್.ಬಿ. ತಿಮ್ಮಾಪುರ್ ವಿಧೇಯಕ ಪ್ರತಿ ಹರಿದು ಹಾಕಿದ್ರೆ, ಕಾಂಗ್ರೆಸ್‍ನ ನಜೀರ್ ಅಹಮ್ಮದ್ ವಿಧೇಯಕದ ಪ್ರತಿಯನ್ನ ಸಭಾಪತಿಗಳ ಮುಂದೆ ಎಡೆದ್ರು. ಗದ್ದಲ ಗಲಾಟೆಗಳ ನಡುವೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರ ಆಯ್ತು.

    ಗೋಹತ್ಯೆ ಮಾಡಿದ್ರೆ ಜೈಲು..!
    13 ವರ್ಷ ಕೆಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆ ನಿಷೇಧ. 13 ವರ್ಷ ಮೇಲ್ಪಟ್ಟ ದನ, ಹಸು ವಧೆಗೆ ಅವಕಾಶ. ಗೋಹತ್ಯೆ ಮಾಡಿದ್ರೆ 3-7 ವರ್ಷದವರೆಗೆ ಜೈಲು ಶಿಕ್ಷೆ. ಪ್ರತೀ ಗೋಹತ್ಯೆಗೆ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ. ದಂಡ. ಪುನರಾವರ್ತಿತ ಅಪರಾಧಕ್ಕೆ 1-10 ಲಕ್ಷದವರೆಗೆ ದಂಡ, 7 ವರ್ಷ ಜೈಲು. ಗೋ ಹತ್ಯೆ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನಿಲ್ಲ. ಅಂತಾರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟಕ್ಕೆ ನಿಷೇಧ ಹೇರಲಾಗಿದೆ. ಗೋಹತ್ಯೆ ತಡೆ, ಸಾಗಾಟ ತಡೆ ನಿರ್ವಹಣೆಗೆ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ.

    ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು. ನಿಯಮ ಉಲ್ಲಂಘಿಸಿದ್ರೆ 3-5 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಎಸ್‍ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಮುಟ್ಟುಗೋಲು ಹಾಕಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‍ಗೆ ವರದಿ ಮಾಡಬೇಕು. ಗೋ ಸಾಗಾಟದ ವಾಹನ ಆರೋಪಿಗೆ ಹಿಂತಿರುಗಿಸಲು ಬ್ಯಾಂಕ್ ಗ್ಯಾರೆಂಟಿ ಅಗತ್ಯವಾಗಿದೆ. ಗೋಹತ್ಯೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬಹುದು.

    ಕಾಯ್ದೆಯಲ್ಲಿ ಯಾವುದಕ್ಕೆ ವಿನಾಯ್ತಿ?
    ಸಂಶೋಧನೆಗೆ ಬಳಸುವ ಗೋವುಗಳಿಗೆ ಕಾನೂನಿನಿಂದ ವಿನಾಯಿತಿ. ಪಶು ವೈಧ್ಯಾಧಿಕಾರಿ ದೃಢೀಕರಿಸಿದರೆ ಗೋಹತ್ಯೆ ಮಾಡಲು ಅವಕಾಶ ನೀಡಲಾಗುತ್ತದೆ. ಪಶುವೈದ್ಯಾಧಿಕಾರಿಗಳು ದೃಢೀಕರಿಸಿದ, ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಮಾತ್ರ ಅವಕಾಶ ಇದೆ.

    ಕಾಯ್ದೆಯಲ್ಲಿ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಗೋಹತ್ಯೆ ತಡೆ ಕಾಯ್ದೆಯ ಕಠಿಣ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ್ದ ಕಾಯ್ದೆಯನ್ನು ಮತ್ತಷ್ಟು ಪರಿಷ್ಕರಿಸಿ ಹೊಸ ಮಸೂದೆ ರೂಪಿಸಲಾಗಿದೆ. ಒಟ್ಟಾರೆ ಗೋಹತ್ಯೆ ನಿಷೇಧ ಕಾಯ್ದೆ ಎರಡು ಮನೆಯಲ್ಲೂ ಅಂಗೀಕಾರವಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತವಾಗಿ ಕಾಯ್ದೆ ಜಾರಿಗೆ ಬರಲಿದೆ.

  • ಸಜ್ಜನ ಕೋಟಾ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ ಎಂಬುದೇ ನನ್ನ ಹಾರೈಕೆ: ಶರವಣ

    ಸಜ್ಜನ ಕೋಟಾ ಶ್ರೀನಿವಾಸ ಪೂಜಾರಿ ಸಿಎಂ ಆಗಲಿ ಎಂಬುದೇ ನನ್ನ ಹಾರೈಕೆ: ಶರವಣ

    –  ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಿಎಂ ಗೈರು

    ಬೆಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಹಳ ಸಜ್ಜನರು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ ಎಂದು ಟಿ.ಎ ಶರವಣ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಅವಧಿ ಪೂರ್ಣಗೊಳಿಸಿದ 15 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್ ಪಾಟೀಲ್, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದಾರೆ. ಅಲ್ಲದೆ ಶರವಣ, ಜಯಮಾಲ, ಜಯಮ್ಮ, ರೇವಣ್ಣ, ಶರಣಪ್ಪ ಮಟ್ಟೂರು, ಬೋಸರಾಜು ಸೇರಿ ಹಲವು ನಿವೃತ್ತಿ ಹೊಂದಿದ ಪರಿಷತ್ ಸದಸ್ಯರು ಕೂಡ ಪಾಲ್ಗೊಂಡಿದ್ದಾರೆ.

    ಶರವಣ ಮಾತನಾಡಿ, ನಾನು ಮತ್ತೆ ಪುನರಾಯ್ಕೆ ಆಗುತ್ತೇನೆಂಬ ನಿರೀಕ್ಷೆ ಇತ್ತು. ಆದರೆ ನಿರಾಸೆ ಆಗಿದೆ. ಕೇವಲ ಮುನ್ನೂರು ಜನ ಮಾತ್ರ ಶಾಸಕರು ಎಂದು ಕರೆಸಿಕೊಳ್ಳುತ್ತಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೆ ಅನ್ನೋದೇ ಸಂತೋಷದ ವಿಚಾರ. ಕೋಟಾ ಶ್ರೀನಿವಾಸ ಪೂಜಾರಿ ಅವರು ಬಹಳ ಸಜ್ಜನರು. ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಪಕ್ಷಾತೀತವಾಗಿ ಧನ್ಯವಾದಗಳು ಎಂದು ತಿಳಿಸಿದರು.

    ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ರಿ. ನನಗೆ ತಂದೆ ಇಲ್ಲ. ಸಭಾಪತಿಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ ಎಂದು ಹೇಳುತ್ತಾ ತಿಪ್ಪಣ್ಣ ಕಮಕನೂರು ಭಾವುಕರಾದರು. ಜಯಮಾಲ, ತಿಪ್ಪಣ್ಣ ಕಮಕನೂರು, ಶರಣಪ್ಪ ಮಟ್ಟೂರು, ಜಯಮ್ಮ, ಬೋಸರಾಜ್, ಎಚ್.ಎಂ.ರೇವಣ್ಣ, ಟಿಎ ಶರವಣ, ಎಂಸಿ ವೇಣುಗೋಪಾಲ್‍ಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿದ ಬೀಳ್ಕೊಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ 8 ಮಂದಿ ನಿವೃತ್ತ ಪರಿಷತ್ ಸದಸ್ಯರು ಮಾತ್ರ ಇದ್ದರು. ಉಳಿದ 8 ಜನರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

    ಕಾರ್ಯಕ್ರಮಕ್ಕೆ ಸಿಎಂ ಗೈರು:
    ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗೈರಾಗಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಸಿಎಂ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

  • ವಿಧಾನಪರಿಷತ್‍ಗೆ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆ

    ವಿಧಾನಪರಿಷತ್‍ಗೆ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆ

    ಬೆಂಗಳೂರು: ವಿಧಾನಪರಿಷತ್‍ಗೆ ಸ್ಪರ್ಧಿಸಿದ್ದ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ಎಂಟಿಬಿ ನಾಗರಾಜ್, ಆರ್ ಶಂಕರ್, ಸುನಿಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್‍ನ ಹರಿಪ್ರಸಾದ್, ನಸೀರ್ ಅಹ್ಮದ್ ಮತ್ತು ಜೆಡಿಎಸ್‍ನ ಗೋವಿಂದರಾಜು ಅವಿರೋಧ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು.

    ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಏಳು ಮಂದಿಯಷ್ಟೇ ಕಣದಲ್ಲಿ ಇದ್ದ ಕಾರಣ ಎಲ್ಲರೂ ಅವಿರೋಧ ಆಯ್ಕೆ ಆಗಿದ್ದಾರೆ.

  • ಷರಿಷತ್ ಚುನಾವಣೆ ದಿನಾಂಕ ಪ್ರಕಟ – ಯಾವ ಪಕ್ಷದಲ್ಲಿ ಯಾರು ಆಕಾಂಕ್ಷಿ?

    ಷರಿಷತ್ ಚುನಾವಣೆ ದಿನಾಂಕ ಪ್ರಕಟ – ಯಾವ ಪಕ್ಷದಲ್ಲಿ ಯಾರು ಆಕಾಂಕ್ಷಿ?

    ನವದೆಹಲಿ: ರಾಜ್ಯಸಭೆ ಬೆನ್ನಲ್ಲೇ ವಿಧಾನ ಪರಿಷತ್ ಗೂ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದ ಏಳು ಸ್ಥಾನಗಳ ಅವಧಿ ಮುಕ್ತಾಯವಾಗುವ ಹಿನ್ನಲೆಯಲ್ಲಿ ಚುನಾವಣೆ ಘೋಷಿಸಿದೆ.

    ಪರಿಷತ್ ಸದಸ್ಯರಾದ ನಾಸೀರ್ ಅಹಮದ್, ಜಯಮ್ಮ, ಹೆಚ್.ಎಂ ರೇವಣ್ಣ, ವೇಣುಗೋಪಾಲ್, ಡಿ.ಯು ಮಲ್ಲಿಕಾರ್ಜುನ್, ಟಿ.ಎ. ಶರವಣ ಅವರ ಅವಧಿ ಜೂನ್ 30ಕ್ಕೆ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಜೂನ್ 29 ರಂದು ಚುನಾವಣೆ ದಿನಾಂಕ ಘೋಷಿಸಲಾಗಿದೆ.

    ಜೂನ್ 11ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಜೂಜ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಜೂನ್19 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಜೂನ್ 22 ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕ. ಜೂನ್ 29 ರಂದು ಬೆಳಗ್ಗೆ ಒಂಭತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ಮತದಾನ ನಡೆಯಲಿದ್ದು ನಾಲ್ಕು ಗಂಟೆ ಬಳಿಕ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಲಿದೆ.

    ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಗೆಲ್ಲಬಹುದಾಗಿದ್ದು ರಾಜ್ಯಸಭೆ ಟಿಕೆಟ್ ಕಸರತ್ತಿನ ಬಳಿಕ ವಿಧಾನಸಭೆಗೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ನಲ್ಲಿ ಎರಡು ಸ್ಥಾನಗಳಿಗೆ ನಿವೇದಿತಾ ಅಳ್ವಾ, ಉಗ್ರಪ್ಪ, ಸುದರ್ಶನ್, ಐವಾನ್ ಡಿಸೋಜಾ ಪೈಪೋಟಿ ನಡೆಸುತ್ತಿದ್ದರೆ ಹೆಚ್.ಎಂ.ರೇವಣ್ಣ ನಾಸೀರ್ ಅಹಮದ್ ಮರು ಆಯ್ಕೆ ಬಯಸಿದ್ದಾರೆ. ಇನ್ನು ಭಾರತಿ ಶಂಕರ್, ರಾಣಿ ಸತೀಶ್ ಕೂಡ ರೇಸ್ ನಲ್ಲಿದ್ದಾರೆ

    ಬಿಜೆಪಿಯಲ್ಲಿ ನಾಲ್ಕು ಸ್ಥಾನಗಳಿಗೆ ಪೈಪೋಟಿ ಇದ್ದು ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಹೆಚ್.ವಿಶ್ವನಾಥ್, ಶಂಕರಪ್ಪ, ಮಾಲೀಕಯ್ಯ ಗುತ್ತೇದಾರ್, ನಿರ್ಮಲ ಕುಮಾರ್ ಸುರಾನಾ ನಡುವೆ ಫೈಟ್ ಏರ್ಪಟ್ಟಿದೆ.

    ಜೆಡಿಎಸ್ ನಿಂದ ಒಂದು ಸ್ಥಾನ ಸಿಗಲಿದ್ದು ಕೋನರೆಡ್ಡಿ, ಬಿ.ಬಿ.ನಿಂಗಯ್ಯ, ಜವರಾಯಿಗೌಡ, ಶರವಣ, ಕುಪೇಂದ್ರ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ. ರಾಜ್ಯಸಭೆಯಿಂದ ಶುರುವಾಗಿದ್ದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಬಿರುಸುಗೊಳ್ಳಲಿದೆ.

    https://www.facebook.com/publictv/posts/4369546059729779

     

  • ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಪ್ರತಿ ಪಕ್ಷ ಧರಣಿ- ಸಿಎಂ ಉತ್ತರಕ್ಕೆ ಬಿಗಿಪಟ್ಟು

    ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಪ್ರತಿ ಪಕ್ಷ ಧರಣಿ- ಸಿಎಂ ಉತ್ತರಕ್ಕೆ ಬಿಗಿಪಟ್ಟು

    ಬೆಂಗಳೂರು: ಗೋವಾದಲ್ಲಿ ಇರುವ ಕನ್ನಡಿಗರ ಸಮಸ್ಯೆ ವಿಧಾನ ಪರಿಷತ್ ನಲ್ಲಿಂದು ಪ್ರತಿ ಧ್ವನಿಸಿತು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಮುಖ್ಯಮಂತ್ರಿಗಳು ಉತ್ತರ ನೀಡುವಂತೆ ವಿಪಕ್ಷಗಳು ಒತ್ತಾಯ ಮಾಡಿದರು. ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಸೃಷ್ಟಿಯಾಗಿದ್ದರಿಂದ ಕಲಾಪವನ್ನು ಮುಂದೂಡಿದ ಘಟನೆ ಕೂಡ ನಡೀತು.

    ವಿಧಾನ ಪರಿಷತ್ ಶೂನ್ಯವೇಳೆ ಕಲಾಪದಲ್ಲಿ ಗೋವಾದಲ್ಲಿ ಪೊಗೊ ಕಾಯಿದೆಯಿಂದ ಸಾವಿರಾರು ಕನ್ನಡಿಗರು ಆತಂಕದಲ್ಲಿ ಇದ್ದಾರೆ ಎಂದು ಬಸವರಾಜ ಹೊರಟ್ಟಿ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಸಿ.ಟಿ ರವಿ, ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ. ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ಧವಾಗಿದೆ. ಗೋವಾದಲ್ಲಿ ನಮ್ಮದೇ ಸರ್ಕಾರ ಇದೆ. ಆದರೆ ಈ ಅಭಿಯಾನ ಸರ್ಕಾರ ಬೆಂಬಲ ಕೊಟ್ಟಿಲ್ಲ. ನಮ್ಮ ಪಕ್ಷದವರಲ್ಲದ ಕೆಲವರು ಮತ ವಿಭಜನೆ ಹಾಗೂ ರಾಜಕೀಯಕ್ಕೆ ಮಾತ್ರ ಪೊಗೊ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗೋವಾ ಸಿಎಂ ಪ್ರಮೋದ್ ಸಾವಂತ್ ಜೊತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಕನ್ನಡಿಗರ ಹಿತ ಕಾಪಾಡಲು ಸರ್ಕಾರ ಬದ್ಧ ಅಂತ ತಿಳಿಸಿದರು.

    ಸಚಿವರ ಉತ್ತರಕ್ಕೆ ಅಸಮಾಧಾನಗೊಂಡ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಗಂಭೀರ ವಿಚಾರವನ್ನು ಸರ್ಕಾರ ತೀರ ಹಗುರವಾಗಿ ತೆಗೆದುಕೊಂಡಂತೆ ಇದೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಕಿಡಿಕಾರಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರ ಉತ್ತರದಿಂದ ತೃಪ್ತರಾಗದೆ ಬಾವಿಗೆ ಇಳಿದ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಧರಣಿ ನಡೆಸಿದರು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಘೋಷಣೆ ಕೂಗಿ ಸಿಎಂ ಉತ್ತರ ನೀಡಲು ಬಿಗಿಪಟ್ಟು ಹಿಡಿದರು. ಈ ವೇಳೆ ಆಡಳಿತ ಪಕ್ಷ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ತೀವ್ರ ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು. ಸದನ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಸಭಾಪತಿಗಳು ಮುಂದೂಡಿದರು.

    20 ನಿಮಿಷದ ಬಳಿಕ ಪರಿಷತ್ ಕಲಾಪ ಮತ್ತೆ ಶುರುವಾಯಿತು. ಸಚಿವ ಸಿಟಿ ರವಿ ಮಾತನಾಡಿ, ಸರ್ಕಾರ ಮತ್ತು ವಿಪಕ್ಷ ಸದಸ್ಯರ ಅಭಿಪ್ರಾಯ ಒಂದೇ ಆಗಿದೆ. ಗೋವಾದಲ್ಲಿ ಕನ್ನಡಿಗರಿಗೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳಲು ಬದ್ಧ. ಧರಣಿ ವಾಪಸ್ ಪಡೆಯುವಂತೆ ಸಚಿವ ಸಿ.ಟಿ ರವಿ ಮನವಿ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಮಾತನಾಡಿ, ಗೋವಾದಲ್ಲಿ 4 ಲಕ್ಷ ಕನ್ನಡಿಗರ ಬದುಕು ಅತಂತ್ರವಾಗಿದೆ. ಜೆಸಿಬಿ ತಂದು ಅವರ ಶೆಡ್ ಗಳನ್ನು ಒಡೆದು ಹಾಕಿದ್ದಾರೆ. ಕನ್ನಡಿಗರ ಮೇಲೆ ಹಲ್ಲೆ ಆಗಿದೆ. ಪೊಲೀಸರು ಈ ಬಗ್ಗೆ ದೂರು ದಾಖಲು ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಒಬ್ಬ ಸಚಿವರ ನೇತೃತ್ವದಲ್ಲಿ ಗೋವಾ ಸಿಎಂ ಬಳಿ ನಿಯೋಗ ಹೋಗಬೇಕು ಎಂದು ಎಸ್.ಆರ್ ಪಾಟೀಲ್ ಒತ್ತಾಯ ಮಾಡಿದರು.

    ವಿಪಕ್ಷ ನಾಯಕರ ಸಲಹೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸಿ.ಟಿ.ರವಿ, ಈ ವಿಷಯವನ್ನು ಸಿಎಂಗೆ ಮನವರಿಕೆ ಮಾಡುತ್ತೇವೆ. ಮುಖ್ಯಮಂತ್ರಿ ಗಳೇ ಈ ಬಗ್ಗೆ ಪರಿಷತ್ ನಲ್ಲಿ ಸೋಮವಾರ ಹೇಳಿಕೆ ನೀಡ್ತಾರೆ ಎಂದ ತಿಳಿಸಿದರು. ಬಳಿಕ ವಿಪಕ್ಷಗಳು ಧರಣಿ ವಾಪಸ್ ಪಡೆದರು.