Tag: Vidhan soudha

  • ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    – ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಮೇಲೆ ರಾಜ್ಯಪಾಲರು, ಗಣ್ಯರಿಂದ ಯೋಗ
    – ಯೋಗ ಮಾಡಿ ನಿರೋಗಿ ಆಗಿ – ರಾಜ್ಯಪಾಲರಿಂದ ಕಿವಿಮಾತು

    ಬೆಂಗಳೂರು: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ. ಹೀಗಾಗಿ ಕರ್ನಾಟವೂ ಈ ಆಚರಣೆಯಿಂದ ಹೊರತಾಗಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಂದು ಸಾವಿರಾರು ಯೋಗಪಟುಗಳಿಂದ ಯೋಗಭಾಸ್ಯ ನಡೆಯಿತು. ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.

    ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಎನ್ನುವ ಧ್ಯೇಯವಾಕ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಶುರುವಾಗಿ 8:30ರ ವರೆಗೆ ಯೋಗ ಪ್ರದರ್ಶನ ನಡೆಯಿತು. ಹಿರಿಯ ರಾಜಕೀಯ ನಾಯಕರೂ ಸೇರಿ ವಿವಿಧ ಸಂಸ್ಥೆಯ ಯೋಗಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.

    ಬಳಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಕನ್ನಡದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಭಾಷಣ ಶುರು ಮಾಡಿದರು.

    ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ಎಲ್ಲರ ಕಲ್ಯಾಣ ಮಾಡೋ ಭಾವನೆ ಆಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಯೋಗ ದಿನ ಉತ್ತಮವಾಗಿ ಆಚರಣೆ ‌ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ. ಯೋಗ ಜೀವನವನ್ನ ಪರಿಪೂರ್ಣ ಮಾಡುತ್ತದೆ. ʻಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗʼ ಅನ್ನೋ ಘೋಷ ವಾಕ್ಯ ಉತ್ತಮವಾಗಿದೆ ಎಂದರಲ್ಲದೇ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.

    ಯೋಗದಿಂದ ಶಾಂತಿ ಸಿಗಲಿದೆ. ನಾನು ಚಿಕ್ಕವನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡ್ತೀನಿ. ಜನರಿಗೆ ಮನವಿ ಮಾಡ್ತೀನಿ. ಎಲ್ಲರು ನಿತ್ಯ ಯೋಗಾಭ್ಯಾಸ ‌ಮಾಡಿ. ಯೋಗ ಜೀವನದ ಭಾಗವಾಗಿ ಸ್ವೀಕಾರ ಮಾಡೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡುವಂತೆ ಕರೆ ಕೊಟ್ಟರು.

  • ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

    ಮೇ 21 ರಂದು ವಿಧಾನಸೌಧದ ಮುಂದೆ ಆಂಧ್ರಕ್ಕೆ ಆನೆಗಳ ಹಸ್ತಾಂತರ

    – ಪವನ್ ಕಲ್ಯಾಣ್‌ಗೆ ಕುಮ್ಕಿ ಆನೆ ಹಸ್ತಾಂತರಿಸಲಿರುವ ಸಿಎಂ, ಡಿಸಿಎಂ

    ಬೆಂಗಳೂರು: ನೆರೆಯ ಆಂಧ್ರಪ್ರದೇಶಕ್ಕೆ ಮೇ 21 ರಂದು ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗುತ್ತಿದ್ದು, ಇದು ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwara Khandre) ತಿಳಿಸಿದ್ದಾರೆ.

    ವಿಧಾನಸೌಧದ (Vidhan Soudha) ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿರುವ ವಿಧ್ಯುಕ್ತ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ (Pawan Kalyan) ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡುವರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನ ಕೆಲ ಅಯೋಗ್ಯರು ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ – ಬಿವೈ ವಿಜಯೇಂದ್ರ ಕಿಡಿ

    ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಆನೆ-ಮಾನವ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ವೇಳೆ ಕರ್ನಾಟಕ- ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಆಗಿರುವ ಉತ್ತಮ ರೂಢಿಗಳ ವಿನಿಮಯ ಒಪ್ಪಂದದ ಭಾಗವಾಗಿ ಈ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದೂ ಖಂಡ್ರೆ ತಿಳಿಸಿದ್ದಾರೆ.

    ಕಳೆದ ವರ್ಷ ಆಗಸ್ಟ್ 8ರಂದು ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿ ತಮ್ಮನ್ನು ಭೇಟಿ ಮಾಡಿ ಆಂಧ್ರದಲ್ಲಿ ಹೆಚ್ಚುತ್ತಿರುವ ಪುಂಡಾನೆಗಳ ಸೆರೆಗೆ ಕುಮ್ಕಿ ಆನೆ ನೀಡುವಂತೆ ಮತ್ತು ತಮ್ಮ ರಾಜ್ಯದ ಮಾವುತರು ಮತ್ತು ಅರಣ್ಯ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆಯ ತರಬೇತಿ ನೀಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ 27ರಂದು ತಮ್ಮ ನೇತೃತ್ವದ ನಿಯೋಗ ವಿಜಯವಾಡಕ್ಕೆ ಭೇಟಿ ನೀಡಿದ್ದ ವೇಳೆ ಈ ಸಂಬಂಧ ಎರಡೂ ರಾಜ್ಯಗಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೇ 21ರಂದು ಈ ಆನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ – ಎಲ್ಲೆಲ್ಲಿ?

    ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ:
    ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ನೆರೆಯ ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರದಿಂದ ರಾಜ್ಯಕ್ಕೂ ಪರೋಕ್ಷವಾಗಿ ಲಾಭವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

    ದಸರಾ ಆನೆ ಹಸ್ತಾಂತರ ಇಲ್ಲ:
    ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎಂದೂ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

  • ವಿಧಾನಸೌಧ ಒಳಗೆ ಹೋಗಿ ನೋಡ್ಬೇಕಾ? – ಆನ್‌ಲೈನ್ ಬುಕ್ಕಿಂಗ್ ಮಾಡಿ ಟಿಕೆಟ್ ಖರೀದಿಸಿ ರೌಂಡ್ಸ್ ಹಾಕಿ

    ವಿಧಾನಸೌಧ ಒಳಗೆ ಹೋಗಿ ನೋಡ್ಬೇಕಾ? – ಆನ್‌ಲೈನ್ ಬುಕ್ಕಿಂಗ್ ಮಾಡಿ ಟಿಕೆಟ್ ಖರೀದಿಸಿ ರೌಂಡ್ಸ್ ಹಾಕಿ

    ಬೆಂಗಳೂರು: ವಿಧಾನಸೌಧ (Vidhan Soudha) ಒಳಗೆ ಹೋಗಿ ನೋಡ್ಬೇಕಾ? ಹಣ ಕಟ್ಟಿ ನೋಡ್ಕೊಂಡು ರೌಂಡ್ ಹಾಕಿ ಬನ್ನಿ. ಇನ್ಮುಂದೆ ವಿಧಾನಸೌಧದ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಲಾಗ್ತಿದೆ.

    ರಾಷ್ಟ್ರಪತಿ ಭವನ ಮಾದರಿಯಲ್ಲಿ ಗೈಡೆಡ್ ಟೂರ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ರಜಾ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 6 ಗಂಟೆ ತನಕ ವಿಧಾನಸೌಧದೊಳಗೆ ಹೋಗಿ ನೋಡಬಹುದು. ಆನ್‌ಲೈನ್ ಮೂಲಕ ಬುಕ್ ಮಾಡಿ, ದುಡ್ಡು ಕಟ್ಟಿ ವಿಧಾನಸೌಧ ರೌಂಡ್ ಹಾಕಬಹುದು. ಇದೇ ಮೊದಲ ಬಾರಿಗೆ Guided Tour ವ್ಯವಸ್ಥೆ ತರುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ ಡಿಪಿಎಆರ್ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಆನ್‌ಲೈನ್ ಬುಕ್ಕಿಂಗ್, ಆನ್‌ಲೈನ್ ಟಿಕೆಟ್ ಖರೀದಿ ಮಾಡಬಹುದು. ತಲಾ 30 ಜನರ ಟೀಂ ಮಾಡಿಕೊಂಡು ಹೋಗಬಹುದು. ಪ್ರವಾಸೋದ್ಯಮ ಇಲಾಖೆಯಿಂದಲೇ ಟೂರಿಸ್ಟ್ ಆಫೀಸರ್ ನೇಮಕ‌ ಮಾಡಿರುತ್ತಾರೆ. ಆಯಾ ದಿನವೇ ವಿಧಾನಸೌಧ ಭದ್ರತಾ ಸಿಬ್ಬಂದಿ ವಿಭಾಗಕ್ಕೆ ಪ್ರವಾಸಿಗರ ಭೇಟಿ, ಸಂಖ್ಯೆ ವಿವರ ಸಲ್ಲಿಸಬೇಕು.

    ಪ್ರವಾಸಿಗರ ಗುರುತಿನ ಚೀಟಿ ಚೆಕ್ ಮಾಡಿ, ಆನ್‌ಲೈನ್ ಟಿಕೆಟ್ ಇದ್ದವರಿಗೆ ವಿಧಾನಸೌಧಕ್ಕೆ ಪ್ರವೇಶಕ್ಕೆ ಅವಕಾಶ ಇರಲಿದೆ. ಪ್ರವೇಶ ಶುಲ್ಕವನ್ನ ನಿಗದಿ ಮಾಡಲಿರುವ ಪ್ರವಾಸೋದ್ಯಮ ಇಲಾಖೆ, ಯಾವಾಗಿನಿಂದ ಜಾರಿ, ಯಾವ ಪೋರ್ಟಲ್ ಮೂಲಕ ಟಿಕೆಟ್ ಪಡೆಯಬೇಕೆಂಬ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ. ಇದನ್ನೂ ಓದಿ: ರಾಜ್ಯಪಾಲರ ನಡೆ ಅಸಾಂವಿಧಾನಿಕ, ಕಾನೂನಿನ ಉಲ್ಲಂಘನೆ – ತಮಿಳುನಾಡು ಗವರ್ನರ್‌ ವಿರುದ್ಧ ಸುಪ್ರೀಂ ಆದೇಶ

  • ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?

    ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್‌, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?

    ಬೆಂಗಳೂರು: ಮಂಗಳವಾರದಿಂದ ವಿಧಾನಸೌಧದ (Vidhana Soudha) ಲಾಂಜ್‌ನಲ್ಲಿ ಶಾಸಕರಿಗೆ 17 ಆರಾಮ ಆಸನಗಳ ಸೌಲಭ್ಯ ಸಿಗಲಿದೆ.

    ಸ್ಪೀಕರ್‌ ಯುಟಿ ಖಾದರ್‌ (Speaker UT Khader) ಆದೇಶದಂತೆ ವಿಧಾನಸಭೆಯ ಮೊಗಸಾಲೆಯಲ್ಲಿ 15 ರಿಕ್ಲೈನರ್‌ (Recliner Chair) ಮತ್ತು 2 ಮಸಾಜ್ ಚೇರ್‌ಗಳನ್ನು (Massage Chair) ವಿಧಾನಸಭೆ ಸಚಿವಾಲಯ ಅಳವಡಿಸಿದೆ.

    ಈ ಚೇರ್‌ಗಳನ್ನು ಬಾಡಿಗೆಗೆ ತರಲಾಗಿದೆ. 1 ರಿಕ್ಲೈನರ್‌ ಚೇರ್‌ಗೆ ದಿನಕ್ಕೆ 1,200 ರೂ. ಇದ್ದರೆ 1 ಮಸಾಜ್ ಚೇರ್‌ಗೆ 10 ಸಾವಿರ ರೂ. ದರ ನಿಗದಿ ಮಾಡಲಾಗಿದೆ. 15 ದಿನದಲ್ಲಿ ಇದಕ್ಕೆಂದು 5.70 ಲಕ್ಷ ರೂಪಾಯಿ ವೆಚ್ಚ ಮಾಡಲಿದೆ. ಇದನ್ನೂ ಓದಿ: ಶಾಸಕರ ಸಂಬಳ ಹೆಚ್ಚಳಕ್ಕೆ ತೀರ್ಮಾನ – ಈಗ ಎಷ್ಟಿದೆ? ಎಷ್ಟು ಏರಿಕೆ ಆಗುತ್ತೆ?

     

    ವಿಧಾನಭೆಯ ಸ್ಪೀಕರ್‌ ಯುಟಿ ಖಾದರ್‌ ಅವರು ವಿಧಾನಸಭೆ ಅಧಿವೇಶನದಲ್ಲಿ ಮಧ್ಯಾಹ್ನದ ಬಳಿಕ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ಅವರು ಕೆಲ ಕಾಲ ವಿಶ್ರಾಂತಿ ಪಡೆದು ಕಲಾಪಕ್ಕೆ ಹಾಜರಾಗಿ ಸದನಕ್ಕೆ ಹಾಜರಾಗುವಂತೆ ಮಾಡಲು ರಿಕ್ಲೈನರ್‌ ಕುರ್ಚಿಗಳನ್ನು ಬಾಡಿಗೆ ಪಡೆಯುವ ತೀರ್ಮಾನವನ್ನು ಕೈಗೊಂಡಿದ್ದರು.

    ಈ ಬಗ್ಗೆ ಖಾದರ್‌ ಪ್ರತಿಕ್ರಿಯಿಸಿ, ಶಾಸಕರಾಗಿ ಶಾಸಕರಿಗೆ ಸೌಲಭ್ಯಗಳನ್ನು ಒದಗಿಸುವುದು ನನ್ನ ಜವಾಬ್ದಾರಿ. ರೆಕ್ಲೈನರ್ ಕುರ್ಚಿ ಐಷಾರಾಮಿ ಅಲ್ಲ, ಅದು ಅವಶ್ಯಕತೆಯಾಗಿದೆ. ಎಲ್ಲಾ ಶಾಸಕರು ಚಿಕ್ಕವರಲ್ಲ ಮತ್ತು ಎಲ್ಲರೂ ಆರೋಗ್ಯವಂತರಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಟೀಕಿಸುವವರು ಶಾಸಕರು ಅಥವಾ ಸಂಸದರನ್ನು ಶತ್ರುಗಳಂತೆ ನೋಡಬಾರದು, ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು. ಬಿಜೆಪಿ ಶಾಸಕರಿಂದಲೂ ಈ ಬೇಡಿಕೆ ಬಂದಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

     

  • ಇಂದಿನಿಂದ ಕಲಾಪ – ಸಾಲು ಸಾಲು ಪ್ರತಿಭಟನೆಗೆ ಪ್ಲ್ಯಾನ್‌, ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

    ಇಂದಿನಿಂದ ಕಲಾಪ – ಸಾಲು ಸಾಲು ಪ್ರತಿಭಟನೆಗೆ ಪ್ಲ್ಯಾನ್‌, ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ

    ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶ (Budget Session 2025) ನಡೆಯುತ್ತಿರುವ ಹಿನ್ನೆಲೆ ಸಾಲು ಸಾಲು ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗಿದೆ ಎನ್ನಲಾಗಿದೆ.

    ಈ ಹಿನ್ನೆಲೆ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ವಿಧಾನಸೌಧದ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಹಕ್ಕಿ ಜ್ವರದ ಆತಂಕ – ಮಟನ್‌, ಫಿಶ್‌ ಮೊರೆಹೋದ ಚಿಕನ್‌ ಪ್ರಿಯರು

    ಜೆಡಿಎಸ್ ಕಾರ್ಯಕರ್ತರು ಗೃಹಲಕ್ಷ್ಮಿ ಹಣ ಬಿಡುಗಡೆಗೆ ದಿನಾಂಕ ನಿಗದಿಪಡಿಸುವಂತೆ ಆಗ್ರಹಿಸಿ ಕ್ಯಾಲೆಂಡರ್ ಹಿಡಿದು ವಿಧಾನಸೌದ ಮುತ್ತಿಗೆ ಹಾಕಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಕ್ಯಾಲೆಂಡರ್ ಹಿಡಿದು ಪ್ರತಿಭಟನೆಗೆ ಅವಕಾಶ ಕೊಡದೇ ಇರೊದಕ್ಕೆ ಖಾಕಿ ಪ್ಲ್ಯಾನ್‌ ಮಾಡಿಕೊಂಡಿದೆ. ಇದನ್ನೂ ಓದಿ: ಇಂದಿನಿಂದ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮೈತ್ರಿ ಸಜ್ಜು

    ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಕಾರಣ ವಿಧಾನಸೌಧದ ಸುತ್ತಮುತ್ತ ಖಾಕಿ ಕಣ್ಗಾವಲು ಇಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಭದ್ರತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಪೊಲೀಸರು ಹಾಗೂ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಷೇರುಪೇಟೆ ವಂಚನೆ: ಸೆಬಿ ಮಾಜಿ ಅಧ್ಯಕ್ಷೆ ಬುಚ್‌ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ 

  • ವಿಧಾನಸಭೆ ಲಾಂಜ್‌ನಲ್ಲಿ ಶಾಸಕರ ವಿಶ್ರಾಂತಿಗೆ recliner chair ವ್ಯವಸ್ಥೆ: ಸ್ಪೀಕರ್ ಹೊಸ ಐಡಿಯಾ

    ವಿಧಾನಸಭೆ ಲಾಂಜ್‌ನಲ್ಲಿ ಶಾಸಕರ ವಿಶ್ರಾಂತಿಗೆ recliner chair ವ್ಯವಸ್ಥೆ: ಸ್ಪೀಕರ್ ಹೊಸ ಐಡಿಯಾ

    ಬೆಂಗಳೂರು: ತಿಂಡಿ ವ್ಯವಸ್ಥೆ ಆಯ್ತು.. ಊಟದ ವ್ಯವಸ್ಥೆ ಆಯ್ತು.. ಈಗ ಮಲಗಲು ವ್ಯವಸ್ಥೆ ಅಂತೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ವಿಶ್ರಾಂತಿ ಮಾಡಲು ಸ್ಪೀಕರ್ ಯು.ಟಿ.ಖಾದರ್ ಹೊಸ ಐಡಿಯಾ ಮಾಡಿದ್ದಾರೆ. ಲಾಂಜ್‌ನಲ್ಲಿ recliner chair ಹಾಕಿಸಿದ್ದು, ಅದರ ಪ್ರಯೋಜನ ಪಡೆಯುವಂತೆ ಸ್ಪೀಕರ್ ಖಾದರ್ (U.T.Khadar) ಸೂಚಿಸಿದ್ದಾರೆ.

    ವಿಧಾನಸಭೆಯಲ್ಲಿ ಇವತ್ತು ಘೋಷಣೆ ಮಾಡಿದ ಸ್ಪೀಕರ್, ತಿಂಡಿ, ಊಟ ವ್ಯವಸ್ಥೆ ಮಾಡಿದ್ವಿ. ಈಗ ಕೆಲ ಶಾಸಕರು ಊಟ ಮಾಡಿ ಮಲಗಲು ಎಲ್‌ಹೆಚ್‌ಗೆ ಹೋಗಿ ಬರುತ್ತೇವೆ ಅಂತೇಳಿ ಹೋಗ್ತಿದ್ದಾರೆ. ಕೆಲವರು ಬರುವುದೇ ಇಲ್ಲ. ಹಾಗಾಗಿ ಶಾಸಕರು ವಿಶ್ರಾಂತಿ ಮಾಡಲು ಲಾಂಜ್‌ನಲ್ಲಿ recliner chair ಹಾಕಿಸಿದ್ದೇವೆ. ಇಲ್ಲೇ ಮಲಗಿ, ಬೇಕಾದಾಗ ಕರೆಯುತ್ತೇವೆ ಎಂದು ಖಾದರ್ ಹೇಳಿದರು. ಇದನ್ನೂ ಓದಿ: ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅನ್ನೋ ಸಿದ್ದರಾಮಯ್ಯ ಮಾತನ್ನ ಯಾರೂ ನಂಬಲ್ಲ: ಸಿ.ಟಿ ರವಿ

    ಇನ್ನು ಇದೇ ವೇಳೆ ಶಾಸಕರು ಪಿಎಗಳನ್ನ ವಿಧಾನಸಭೆ ಲಾಂಜ್‌ಗೆ ಕರೆದುಕೊಂಡು ಬರಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್‌ಗಳ ಜೊತೆ ವಾಗ್ವಾದ ಮಾಡಬೇಡಿ ಎಂದು ಸ್ಪೀಕರ್ ಸೂಚಿಸಿದರು.

  • ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್

    ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್

    – ವಿಧಾನಸೌಧದಲ್ಲಿ ಆಗಿದ್ದೇನು? ವಿವಾದ ಹುಟ್ಟಿಕೊಂಡದ್ದು ಹೇಗೆ? ಇಲ್ಲಿದೆ ವಿವರ

    ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಆರೋಪ ಮೇಲೆ ಮೂವರನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ದೆಹಲಿ ಮೂಲದ ಇಲ್ತಾಜ್, ಆರ್.ಟಿ ನಗರದ ಮುನಾವರ್ ಹಾಗೂ ಬ್ಯಾಡಗಿಯ ಮೊಹಮದ್ ಶಫಿ ನಾಶಿಪುಡಿ ಎಂಬ ಆರೋಪಿಗಳನ್ನು ಆರೋಪಿಗಳನ್ನು ಬಂಧಿಸಿದ್ದಾರೆ.

    ಈಗಾಗಲೇ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಿಸಿದ್ದು, ಕೋರಮಂಗಲದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸಖಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಕರ್ತವ್ಯ ಲೋಪ ಎಸಗಿದ ಪೊಲೀಸರನ್ನೂ ಸಸ್ಪೆಂಡ್‌ ಮಾಡಿ: ಅಶೋಕ್‌ ಆಗ್ರಹ

    ಪ್ರಕರಣದ ಹಾದಿ ಹೀಗಿದೆ:
    ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದರು. ಗೆದ್ದ ಬೆನ್ನಲ್ಲೇ ನಾಸೀರ್‌ ಹುಸೇನ್‌ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದು ಕಂಡುಬಂದಿತ್ತು. ಈ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಅವರನ್ನು `ಪಬ್ಲಿಕ್ ಟಿವಿ’ ವರದಿಗಾರರು ಮಾತನಾಡಿಸಲು ಮುಂದಾಗಿದ್ದರು. ಈ ವೇಳೆ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದರು. ಈ ಬಗ್ಗೆ ಪ್ರಶ್ನೆ ನಾಸೀರ್‌ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ, ಪಾಕಿಸ್ತಾನ ಜಿಂದಾಬಾದ್ ಅಂದಿದ್ದು ನನಗೆ ಗೊತ್ತಿಲ್ಲ ಎಂದು ನಾಸೀರ್ ಹುಸೇನ್ ಉತ್ತರಿಸಿದ್ದರು. ಇದನ್ನೂ ಓದಿ: ಪಾಕಿಸ್ತಾನ ಪರ ಘೋಷಣೆ – ಎಫ್‍ಎಸ್‍ಎಲ್ ವರದಿ ಬಹಿರಂಗಕ್ಕೆ ಬಿಜೆಪಿ ನಿಯೋಗ ಮನವಿ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. 153ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ನೀಡಿದ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಅಡಿ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಧಾನಸೌಧ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ನಂತರ ಮಾಧ್ಯಮಗಳಿಂದ ಖಚಿತ Raw footage ಪಡೆದು ಪರಿಶೀಲನೆ ನಡೆಸಿದ್ದ ಪೊಲೀಸರು ಎಫ್‌ಎಸ್‌ಎಲ್‌ಗೆ ಕಳಿಸಿಕೊಟ್ಟಿದ್ದರು.

    ಆರೋಪಿಗಳ ಪತ್ತೆಗೆ ಭಾರೀ ಕಸರತ್ತು:
    ಪೊಲೀಸರಿಂದ ವೀಡಿಯೋ ಆಧಾರಗಳನ್ನು ಪಡೆದಿದ್ದ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಆರೋಪಿಗಳ ಪತ್ತೆಗೆ ಭಾರೀ ಕಸರತ್ತು ನಡೆಸಿತ್ತು. 15 ಧ್ವನಿ ಮಾದರಿಗಳನ್ನ ಸಂಗ್ರಹಿಸಿತ್ತು. ಪ್ರತಿಯೊಂದು ಧ್ವನಿಗಳನ್ನು ಆಲಿಸುವ ಮೂಲಕ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿತ್ತು. ಕೊನೆಗೆ 15 ಜನರಲ್ಲಿ ಮೂವರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬುದನ್ನು ವರದಿಯಲ್ಲಿ ದೃಢಪಡಿಸಿತು. ಈ ಬೆನ್ನಲ್ಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ- ಮೂವರ ಬಂಧನ

  • ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

    ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

    ಬೆಂಗಳೂರು: ಖಾಸಗಿ ಫೋರೆನ್ಸಿಕ್ ವರದಿ (FSL) ತರಿಸಿ ಬಹಿರಂಗ ಪಡಿಸಿದ ಬಿಜೆಪಿಯ ನಡೆ ದೇಶದ್ರೋಹದ ಕೆಲಸ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಖಾಸಗಿ ಸಂಸ್ಥೆಗಳನ್ನಿಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು (Private FSL Report) ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಇದು ಸಾಮಾನ್ಯ ಪ್ರಕರಣ ಅಲ್ಲ. ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ. ಅದಕ್ಕೆ ಸರ್ಕಾರವೇ ಉತ್ತರ ಕೊಡಬೇಕು. ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲ, ಇದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

    ರಾ ಫೂಟೇಜ್ ಎಲ್ಲಿಂದ ಸಿಕ್ತು?: ಕ್ಲೂ ಫಾರ್‌ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ, ಆ ಸಂಸ್ಥೆಗೆ ಸರ್ಕಾರದ ಪ್ರಮಾಣೀಕೃತ ಇದೆಯೇ ಅಥವಾ ತರಬೇತಿ ಇದೆಯೇ ನನಗೆ ಗೊತ್ತಿಲ್ಲ. ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತು. ಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು. ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್‌ಗೆ ಕೊಟ್ಟಿರುವ ಫೂಟೇಜ್ ಯಾವುದು? ಇಂಟರ್ನೆಟ್‌ನಲ್ಲಿ ವೀಡಿಯೋ ಕ್ವಾಲಿಟಿ ಸಪ್ರೆಸ್‌ ಆಗೇ ಆಗುತ್ತದೆ. ಯಾವ ಫೂಟೇಜ್ ಕೊಟ್ಟಿದ್ದಾರೆ? ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ಎಲ್ಲಿಂದ ಸಿಕ್ತು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್‌ಎಸ್‌ಎಲ್‌ ವರದಿಗೆ ಪರಮೇಶ್ವರ್‌ ಗರಂ

    ಸಂವಾದ RSS ಭಜನೆ ಮಾಡುವ ಸಂಸ್ಥೆ: ಸಂವಾದ ಫೌಂಡೇಶನ್‌ಗೆ ಈ ಕೇಸ್‌ನಲ್ಲಿ ಏನು ಆಸಕ್ತಿ? ಸಂವಾದ ಆರ್‌ಎಸ್‌ಎಸ್‌ ನವರು ಭಜನೆ ಮಾಡುವ ಸಂಸ್ಥೆ. ಇದು ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೂಟೇಜ್‌ ಕೊಡೋದಕ್ಕೆ, ಲ್ಯಾಬ್‌ ಟೆಸ್ಟ್‌ ಮಾಡೋದಕ್ಕೆ ಅವರು ಯಾರು? ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ರಿಪೋರ್ಟ್ ತೆಗೆದುಕೊಂಡಿದ್ದೇನೆ. ನಾನೂ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬಹುದಲ್ಲ? ಆದ್ರೆ ಆ ಕೆಲಸ ನಾನು ಮಾಡಿಲ್ಲ. ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ. ಬಿಜೆಪಿಯವರು ಮಾಡಿದ್ದು ನಿಜವಾದ ದೇಶದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಇವರು ಯಾಕೆ ಬಯಸುತ್ತಿದ್ದಾರೆ? ಸಂವಾದ ಫೌಂಡೇಷನ್ ರಿಪೋರ್ಟ್ ತೆಗೆದುಕೊಳ್ಳೋದಕ್ಕೆ ಇವರ್ಯಾರು? ಅವರಿಗೇನು ಆಸಕ್ತಿ? ಸರ್ಕಾರ ಪದೇ-ಪದೇ ಎಫ್ಎಸ್ಎಲ್ ವರದಿ ಪರಿಶೀಲನೆ ಮಾಡೋದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ. ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ. ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿಯುತ್ತಾರಲ್ಲ ಇವರಿಗೆ ನಾಚಿಕೆ ಆಗಲ್ಲವೇ ಎಂದು ಕಿಡಿ ಕಾರಿದ್ದಾರೆ.

    ನಮಗೂ ಸೈಬರ್ ಕಂಪನಿಗಳು ಗೊತ್ತಿವೆ: ಅಂದು ಮಂಡ್ಯದಲ್ಲಿ ಬಿಜೆಪಿಯವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರು. ಅವರ ಮೇಲೆ ನಾವೂ ಕೇಸ್ ಹಾಕಬಹುದು. ಇವರು ಕೊಟ್ಟ ವರದಿಯಲ್ಲಿ ಹೈಲಿ ಪ್ರೊಬ್ಯಾಬಲ್‌ ಅಂತ (ಹೆಚ್ಚು ಸಂಭವನೀಯ) ಇದೆ. ಹಣ ಕೊಟ್ಟರೆ ಯಾರು ಬೇಕಾದರೂ ವರದಿ ಕೊಡ್ತಾರೆ. ಸಂವಾದ ರಿಪೋರ್ಟ್ ನಲ್ಲಿ ಗೃಹ ಸಚಿವರು ಹೇಳಿದ್ದು ಸರಿಯಾಗಿದೆ. ನಮಗೂ ಸೈಬರ್ ಕಂಪನಿಗಳು, ಅನಿಮೇಷನ್‌ ಕಂಪನಿಗಳು ಗೊತ್ತಿದೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಮಾಡಿಸಿದ ವರದಿ ಬಹಿರಂಗ ಮಾಡಿದ್ದೀನಾ? ಖಾಸಗಿ ಸಂಸ್ಥೆ, ಫೌಂಡೇಷನ್ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಿತ್ತು. ಇದೇ ಪ್ರೊಬ್ಯಾಬಲ್ ವರದಿಗೆ ಬಿಜೆಪಿ ಇಷ್ಟೆಲ್ಲ ಕುಣಿಯಬೇಕಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

    ಇವರ ಉದ್ದೇಶ ಬಹಳ ಸ್ಪಷ್ಟವಾಗಿದೆ. ಸಮಾಜದಲ್ಲಿ ಆತಂಕ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯವಾಗಿ ಲಾಭ ಆಗಿದೆ ಅನ್ನೋ ವರದಿ ಇದೆ. ಸಮಾಜದಲ್ಲಿ ಗೊಂದಲ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯ ಲಾಭ ಆಗುತ್ತದೆ. ಸಂವಾದ ಯಾವತ್ತೂ ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿದೆ. ಆ ರಿಪೋರ್ಟ್ ಇಟ್ಟುಕೊಂಡು ಕುಣಿಯುತ್ತಿದ್ದಾರೆ. ಕೇಶವ ಕುಂಜ ಹಾಗೂ ಕೇಶವ ಕೃಪಾಗೆ ತೋರಿಸಬೇಕು. ನಾವು ಬದುಕಿದ್ದೇವೆ, ಇನ್ನೂ ಸತ್ತಿಲ್ಲ ಅಂತ ಮೋದಿ, ಅಮಿತ್‌ ಶಾಗೆ ತೋರಿಸಬೇಕು. ಅದಕ್ಕೆ ಅವರ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ, ಆರ್‌ಎಸ್‌ಎಸ್‌ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ ಅದನ್ನು ಮಾತ್ರ ಹೇಳ್ತಿದ್ದಾರೆ. ಬಜೆಟ್ ಬಗ್ಗೆ ಮಾತನಾಡಿ ಅಂದ್ರೆ, ಜಮೀರ್‌ ಬಜೆಟ್ ಅಂತಾರೆ ಇವರ ಉದ್ದೇಶ ಅಂಕಿ ಅಂಶದ ಮೇಲೆ ಚರ್ಚೆ ಮಾಡೋದಲ್ಲ. ಸಂವಾದ ಸಂಸ್ಥೆಯ ತಾಳಕ್ಕೆ ಅವರು ಕುಣಿಯಲಿ, ಸರ್ಕಾರ ಅವರ ಮಾತನ್ನು ಕೇಳೋದಕ್ಕೆ ರೆಡಿಯಿಲ್ಲ ಎಂದಿದ್ದಾರೆ.

  • ವಿಧಾನಸೌಧದ ಮೇಲೆ ಗುಂಬಜ್‌ ಬರುತ್ತೆ, ಲೌಡ್‌ಸ್ಪೀಕರ್‌ನಲ್ಲಿ ಆಜಾನ್‌ ಕೂಗುತ್ತೆ: ಪ್ರತಾಪ್‌ ಸಿಂಹ

    ವಿಧಾನಸೌಧದ ಮೇಲೆ ಗುಂಬಜ್‌ ಬರುತ್ತೆ, ಲೌಡ್‌ಸ್ಪೀಕರ್‌ನಲ್ಲಿ ಆಜಾನ್‌ ಕೂಗುತ್ತೆ: ಪ್ರತಾಪ್‌ ಸಿಂಹ

    – ತಾಲಿಬಾನ್‌ ಸರ್ಕಾರ ಆಗುತ್ತೆ ಅಂತ ಮೊದಲೇ ಹೇಳಿದ್ದೆ ಎಂದ ಸಂಸದ

    ಮಡಿಕೇರಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಟ್ರೈಲರ್‌ ಅಷ್ಟೇ. ಮುಂದಿನ ದಿನಗಳಲ್ಲಿ ವಿಧಾನಸೌಧದ (Vidhan Soudha) ಮೇಲೆ ಗುಂಬಜ್‌ ಬರುತ್ತೆ. ಅದರ ಮೇಲೊಂದು ಲೌಡ್ ಸ್ಪೀಕರ್ ಬಂದು ಆಜಾನ್‌ ಕೇಳುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಮುಂದುವರಿದರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಕಿಡಿ ಕಾರಿದ್ದಾರೆ.

    ರಾಜ್ಯಸಭಾ ಚುನಾವಣೆ (Rajya Sabha Election) ಫಲಿತಾಂಶದ ವೇಳೆ ಗೆಲುವು ಸಾಧಿಸಿದ ನಂತರ ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸತತವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶೇಖ್ ಷಹಜಹಾನ್ 6 ವರ್ಷ ಪಕ್ಷದಿಂದ ಅಮಾನತು – ಬ್ರಿಜ್ ಭೂಷಣ್ ವಿರುದ್ಧ ಕ್ರಮ ಯಾವಾಗ ಬಿಜೆಪಿಗೆ ಟಿಎಂಸಿ ಪ್ರಶ್ನೆ

    ಕೊಡಗಿನ ವಿರಾಜಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಬಳಿಕ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ, ಪಾಕಿಸ್ತಾನ ಪರ ಘೋಷಣೆ ಕೂಗಿರೋದು ಟ್ರೈಲರ್‌ ಅಷ್ಟೆ, ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: 1993ರ ಸರಣಿ ಬಾಂಬ್‌ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ `ಡಾ. ಬಾಂಬ್’ ಖುಲಾಸೆ

    ಕಾಂಗ್ರೆಸ್‌ಗೆ ವೋಟು ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ ಅಂತ ನಾನು ವಿಧಾನಸಭಾ ಚುನಾವಣಾ ಸಂದರ್ಭದಲ್ಲೇ ಹೇಳಿದ್ದೆ. ಅದು ಕನ್ನಡಿಗರ ಸರ್ಕಾರ ಆಗಿರೊಲ್ಲ, ಬದಲಾಗಿ ತಾಲಿಬಾನ್ ಸರ್ಕಾರ ಆಗಿರುತ್ತೆ ಅಂತ ಹೇಳಿದ್ದೆ. ಈಗ ನನ್ನ ಮಾತು ನಿಜವಾಗಿದೆ. ಮೊನ್ನೆ ವಿಧಾನಸೌಧದಲ್ಲಿ ಘೊಷಣೆ ಕೂಗಿರುವುದು ಕೇವಲ ಟ್ರೈಲರ್‌ ಅಷ್ಟೆ. ಮುಂದಿನ ದಿನಗಳಲ್ಲಿ ವಿಧಾನಸೌಧದ ಮೇಲಿರುವ ಗೋಪುರ ಗುಂಬಜ್ ಆಗುತ್ತದೆ. ಅದರ ಮೇಲೆ ಒಂದು ಲೌಡ್ ಸ್ಪೀಕರ್ ಬಂದು ಆಜಾನ್ ಕೇಳುತ್ತದೆ. ಕಾಂಗ್ರೆಸ್ ಸರ್ಕಾರ ಮುಂದುವರಿಯಲು ಬಿಟ್ಟರೆ ತಾಲಿಬಾನ್ ಸರ್ಕಾರ ಮಾಡುವ ಎಲ್ಲಾ ಅನಾಚಾರಗಳನ್ನು ಮಾಡುತ್ತದೆ ಎಂದು ಲೇವಡಿ ಮಾಡಿದ್ದಾರೆ.

    ಇನ್ನೂ ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಸೋತಿರುವುದಕ್ಕೆ ಬಿಜೆಪಿ ಹೀಗೊಂದು ವಿವಾದ ಸೃಷ್ಟಿಸಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಶುದ್ಧ ಸುಳ್ಳು. ದೇಶದಲ್ಲೇ ರಾಜ್ಯಸಭೆಯಲ್ಲಿ ಬಿಜೆಪಿ ಮೆಜಾರಿಟಿ ಪಡೆದಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಮಾಧ್ಯಮಗಳು ಪ್ರಪಂಚಕ್ಕೆ ತೋರಿಸಿವೆ. ಕೂಗಿರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮೋದಿ ಸಾಧನೆ ಬಗ್ಗೆ ಮಾತಾಡೋದನ್ನ ಸಹಿಸೋಕಾಗದೆ ಕಾರ್ಯಕ್ರಮ ಕ್ಯಾನ್ಸಲ್: ಸೂಲಿಬೆಲೆ ಕಿಡಿ

  • ಸಂವಿಧಾನ ವಿರೋಧಿ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ: ಬೊಮ್ಮಾಯಿ

    ಸಂವಿಧಾನ ವಿರೋಧಿ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ: ಬೊಮ್ಮಾಯಿ

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಸಂವಿಧಾನ ಪ್ರಕಾರ ನಡೆದುಕೊಳ್ಳುತ್ತಿಲ್ಲ. ದೇಶವಿರೋಧಿಗಳ ರಕ್ಷಣೆ ಮಾಡುತ್ತಿದೆ. ಈ ಸರ್ಕಾರ ವಜಾವನ್ನು ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡುತ್ತಿರುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ (Protest) ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ‌ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿರುವ ಬಜೆಟ್ ಸತ್ಯಕ್ಕೆ ದೂರವಾಗಿದೆ. ಈಗ ಪಾಕಿಸ್ತಾನ‌ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾ ನೈತಿಕವಾಗಿಯೂ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ‌ ಎಂದು ಆರೋಪಿಸಿದ್ದಾರೆ.

    ವಿಧಾನ ಸೌಧದಲ್ಲಿಯೇ (Vidhan Soudha) ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಇದು ಆಪತ್ತಿದೆ‌. ಅಧಿವೇಶವನ ಮುಗಿದ ತಕ್ಷಣ ಇದೆಲ್ಲ ಮರೆತು ಹೋಗುತ್ತಾರೆ ಅಂತ ಕಾಂಗ್ರೆಸ್‌ನವರು ಅಂದುಕೊಂಡಿದ್ದಾರೆ. ಆದ್ರೆ ಇದನ್ನು ರಾಜ್ಯದ ಜನ ಮರೆಯುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಶುಸಂಗೋಪನಾ ಇಲಾಖೆಯ 2 ಎಕರೆ ಜಮೀನು ಅಲ್ಪಸಂಖ್ಯಾತರಿಗೆ – ಸರ್ಕಾರದ ನಡೆಗೆ ವಿರೋಧ

    ಪಾಕ್ ಪರವಾಗಿ ಸರ್ಕಾರ ನಿಲ್ಲುತ್ತದೆ ಅಂದರೆ, ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಈ ಸರ್ಕಾರ ಎಷ್ಟು ಬೇಗ ತೊಲಗುತ್ತದೆ ರಾಜ್ಯಕ್ಕೆ ಅಷ್ಟು ಒಳ್ಳೆಯದಾಗುತ್ತದೆ. ಪಾಕಿಸ್ತಾನದ ಪರ ಘೊಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್‌ಎಸ್‌ಎಲ್‌ ವರದಿ ಕತೆ ಏಕೆ ಹೇಳುತ್ತಿದ್ದಾರೆ? ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.

    ಘಟನೆ ನಡೆದು 48 ಗಂಟೆ ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದಾಗ ಎಫ್‌ಎಸ್‌ಎಲ್‌ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿದ್ದರು. ಇದರಲ್ಲಿ ಏನೂ ಇಲ್ಲ ಅಂದರೆ ಪೊಲಿಸರು ಏಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ರಾಜ್ಯದ ಜನರು ಪಾಕಿಸ್ತಾನ ಪರವಾದವನ್ನು ಆಯ್ಕೆ ಮಾಡಿಲ್ಲ. ಇದು ಕನ್ನಡಿಗರ ಹಾಗೂ ಭಾರತೀಯರ ಹಾಗೂ ಸಂವಿಧಾನ ವಿರೋಧಿ ಸರ್ಕಾರ ಈ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಬೆಳಗಾವಿಯಲ್ಲಿ ಮತ್ತೊಂದು ಘಟನೆ- ಮಹಿಳೆಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ಆರೋಪ