ನವದೆಹಲಿ: 2 ವಿಧಾನಸಭೆ ಚುನಾವಣೆಗಳನ್ನು ಜಯಿಸುವುದರೊಂದಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಈ ಮೊದಲು ಬಿಜೆಪಿ ಸ್ವಂತ ಬಲ ಮತ್ತು ಮಿತ್ರ ಪಕ್ಷಗಳ ಜೊತೆ ಸೇರಿ 17 ರಾಜ್ಯಗಳಲ್ಲಿ ಆಡಳಿತದಲ್ಲಿತ್ತು. ಆದರೆ ಈಗ ಅಸ್ಸಾಂ ಉಳಿಸಿಕೊಳ್ಳುವುದರ ಜೊತೆ ಪುದುಚೇರಿಯಲ್ಲೂ ಕಮಲ ಕಮಾಲ್ ಮಾಡಿದ್ದು, ಹೊಸದಾಗಿ ಸೇರ್ಪಡೆಯಾಗಿದೆ.
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ಹಠ ಹಿಡಿದಿತ್ತು. ಆದರೆ ಫಲಿತಾಂಶದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಸೋಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿರಲಿಲ್ಲ. ಈ ಬಾರಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.
ಎಲ್ಲೆಲ್ಲಿ ಅಧಿಕಾರ?
ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಪುದುಚೇರಿ, ಕರ್ನಾಟಕ, ಮಧ್ಯಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಉತ್ತರ ಪ್ರದೇಶ, ಮಣಿಪುರ, ಮೇಘಾಲಯ.
ಬೆಂಗಳೂರು: ನಾಳೆಯಿಂದ ಇದೇ 15 ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಉಭಯ ಸದನಗಳ ಕಲಾಪಗಳಲ್ಲೂ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ವಾಕ್ಸಮರ ನಡೆಯಲಿದೆ.
ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲಿನ ವೈಫಲ್ಯ, ಕೇಂದ್ರದಿಂದ ಪರಿಹಾರ ಬಿಡುಗಡೆಯಲ್ಲಿನ ತಾರತಮ್ಯ, ರೈತರ ಸಮಸ್ಯೆಗಳು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ ವಿಷಯಗಳನ್ನಿಟ್ಟುಕೊಂಡು ಸರ್ಕಾರವನ್ನ ಇಕ್ಕಟ್ಟಿನಲ್ಲಿ ಸಿಲುಕಿಸಲು ಕೈ ಪಡೆ ಸಜ್ಜಾಗಿದೆ.
ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಂದ ಆಡಳಿತದ ಮೇಲೆ ಆಗಿರುವ ಪರಿಣಾಮಗಳು, ನಾಯಕತ್ವ ಬದಲಾವಣೆಯ ಚರ್ಚೆ, ಬಿಜೆಪಿಯಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳು ಈ ಎಲ್ಲವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್ ಪ್ಲಾನ್. ಜೆಡಿಎಸ್ ಸಹ ತನ್ನ ವ್ಯಾಪ್ತಿಯಲ್ಲಿ ಸರ್ಕಾರದ ವೈಫಲ್ಯ ಬಯಲಿಗೆಳೆಯಲು ಸಿದ್ಧವಾಗಿದೆ.
ಪ್ರತಿಪಕ್ಷಗಳಿಗೆ ಚರ್ಚೆ, ಅಂಕಿ ಅಂಶಗಳ ಮೂಲಕ ತಕ್ಕ ಉತ್ತರ ಕೊಡಲು ಬಿಜೆಪಿಯೂ ಪ್ರತ್ಯಾಸ್ತ್ರ ಹೂಡಲಿದೆ. ಈ ಅಧಿವೇಶನದಲ್ಲಿ ಗೋಹತ್ಯೆ ತಡೆ ಮತ್ತು ಲವ್ ಜಿಹಾದ್ ತಡೆ ವಿಧೇಯಕಗಳು ಮಂಡನೆಗೂ ಬಿಜೆಪಿ ಪ್ಲಾನ್ ರೂಪಿಸುತ್ತಿದೆ. ಈ ಎರಡೂ ವಿಧೇಯಕಗಳೂ ಕಲಾಪಗಳಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಲಿವೆ. ಸರ್ಕಾರ ಲವ್ ಜಿಹಾದ್ ತಡೆ ಮತ್ತು ಗೋಹತ್ಯೆ ನಿಷೇಧ ಸೇರಿದಂತೆ 10 ಮಸೂದೆಗಳನ್ನು ಮಂಡಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಗೋಹತ್ಯೆ ಮತ್ತು ಲವ್ ಜಿಹಾದ್ ತಡೆ ಮಸೂದೆಗಳಿಗೆ ಕಾಂಗ್ರೆಸ್ ಈಗಾಗಲೇ ವಿರೋಧ ವ್ಯಕ್ತಪಡಿಸಿರುವುದರಿಂದ ಅಧಿವೇಶನದಲ್ಲಿ ಕೋಲಾಹಲ, ಗದ್ದಲಗಳು ಸೃಷ್ಟಿಯಾಗೋದು ಬಹುತೇಕ ಖಚಿತವಾಗಿದೆ.
ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದೆ. ಈಗಾಗಲೇ ಈ ಸಂಬಂಧ ಪರಿಷತ್ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ. ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಲಿದ್ದಾರೆ.
ಸಭಾಪತಿ ಬದಲಾವಣೆಗೆ 38 ಸದಸ್ಯ ಸ್ಥಾನಗಳ ಅಗತ್ಯವಿದೆ. ಆದರೆ ಬಿಜೆಪಿ ಪರಿಷತ್ ನಲ್ಲಿ ಅತಿ ದೊಡ್ಡ ಪಕ್ಷವಾಗಿದ್ರೂ ಸಭಾಪತಿ ಬದಲಿಸಲು ಇನ್ನೂ 7 ಸದಸ್ಯ ಸ್ಥಾನಗಳು ಬೇಕಿದೆ. ಜೆಡಿಎಸ್ ಬೆಂಬಲ ಪಡೆಯಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಸದ್ಯ ಸಭಾಪತಿ ಸ್ಥಾನಕ್ಕೆ ಬಿಜೆಪಿಯಿಂದ ಕೋಟಾ ಶ್ರೀನಿವಾಸ್ ಪೂಜಾರಿ, ಮಹಾಂತೇಶ ಕವಟಗಿಮಠ, ಸುಶೀಲ್ ನಮೋಶಿ, ಅರುಣ್ ಶಹಾಪೂರ ಹೆಸರುಗಳು ಕೇಳಿ ಬರ್ತಿವೆ. ಜೆಡಿಎಸ್, ಬಸವರಾಜ ಹೊರಟ್ಟಿಗೆ ಮತ್ತೊಮ್ಮೆ ಸಭಾಪತಿ ಸ್ಥಾನ ನೀಡಿದ್ರೆ ಬೆಂಬಲ ಕೊಡುವುದಾಗಿ ಬಿಜೆಪಿ ಬಳಿ ಬೇಡಿಕೆ ಇಟ್ಟಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಬಡವರಿಗೆ ಹೊರೆ ಆಗದೇ ಇರಲು ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಪ್ರಕಟಿಸಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ 2 ತಿಂಗಳ ಪಡಿತರ ಮುಂಚಿತವಾಗಿ ಕೊಡುತ್ತಿದ್ದೇವೆ. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡವಾಗಿ ಕೊಡುತ್ತೇವೆ. ನರೇಗಾ ಕೂಲಿಕಾರರಿಗೆ ಎರಡು ತಿಂಗಳ ಮುಂಗಡ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೈರಾಣು ನಿಯಂತ್ರಣಕ್ಕೆ ಸರ್ಕಾರವು ಶಕ್ತಿ ಮೀರಿ ಶ್ರಮಿಸುತ್ತಿದೆ. ಕೊರೊನಾಗೆ ದೇಶದಲ್ಲಿ ಮೊದಲ ಸಾವು ಕರ್ನಾಟಕದಲ್ಲೇ ಆಗಿದ್ದರೂ ಸೋಂಕು ಹರಡದಂತೆ ತಡೆದಿದ್ದೇವೆ. ನಮ್ಮ ಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜನರು ಇಂತಹ ಪರಿಸ್ಥಿತಿಯಿಂದ ಬಹುಬೇಗ ಗುಣಮುಖರಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ವಿಪಕ್ಷಗಳ ಸಹಕಾರ ಬೇಕಿತ್ತು. ಇಂದು ಅನಿವಾರ್ಯ ಕಾರಣದಿಂದ ಅವರು ಸದನದಿಂದ ಹೊರಗೆ ಇದ್ದಾರೆ. ಇದು ನೋವಿನ ಸಂಗತಿ. ನಾನು ಹಸಿರು ಟವಲ್ ಹಾಕಿ ಕೃಷಿ ಬಜೆಟ್ ಮಂಡಿಸಿ, ಕೇಸರಿ ಶಾಲು ಹಾಕಿ ಹೊರಗೆ ಓಡಾಡ್ತೀನಿ ಎಂದು ಟೀಕೆ ಮಾಡಿದ್ದಾರೆ. ಕೇಸರಿ ತ್ಯಾಗದ ಸಂಕೇತ ಎನ್ನುವುದು ಅವರಿಗೆ ಗೊತ್ತಿರಲಿ ಎಂದು ಸಿಎಂ ತಿಳಿಸಿದರು.
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ. ಕಡಿತವಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದರು.
ಸಮಸ್ತ ನಾಗರಿಕ ಬಂಧುಗಳ ಗಮನಕ್ಕೆ
ಬೆಂಗಳೂರಿನಲ್ಲಿ ಕೆಲವೆಡೆ ಎಂದಿನಂತೆ ಜನಸಂದಣಿ ಅನಗತ್ಯವಾಗಿ ಸೇರುತ್ತಿರುವುದು ಸರಿಯಲ್ಲ. ಇದು ಸೋಂಕು ಹರಡುವುದನ್ನು ತಡೆಯುವ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ.
ಅತ್ಯಂತ ಅಗತ್ಯ ವಸ್ತುಗಳನ್ನು ಕೊಳ್ಳಲು ಹಾಗೂ ಇತರ ಅತ್ಯಗತ್ಯ ಸಂದರ್ಭದಲ್ಲಿ ಮಾತ್ರ ಜನತೆ ಹೊರಗಡೆ ಬರಬೇಕು. 1/2
ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಾಯರ್‌ಗಿರಿ ಬಗ್ಗೆ ನಡೆದ ಚರ್ಚೆಗೆ ಇಡೀ ಸದನ ನಗೆಗಡಲಲ್ಲಿ ತೇಲಿತು. ನಾನು ಪೂರ್ಣವಾಗಿ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಚರ್ಚೆಯ ದಿಕ್ಕೇ ಬದಲಾಗಿಹೋಯಿತು.
ವಿಧಾನಸಭೆಯಲ್ಲಿ ಸಚಿವ ಸುಧಾಕರ್ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಹಕ್ಕುಚ್ಯುತಿ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಮಾತನಾಡಿದರು. ಸುಪ್ರಿಂಕೋರ್ಟ್ ತೀರ್ಪಿನಲ್ಲಿ ಹಾಗೆಂದು ಹೇಳಲಾಗಿದೆ ಎಂದು ಸುಧಾಕರ್ ಹೇಳಿದರು ಎಂಬ ಅಂಶವನ್ನು ಬಿಟ್ಟು ಸಿದ್ದರಾಮಯ್ಯ ಹಿಂದಿನ ಸುಧಾಕರ್ ಹೇಳಿಕೆಯನ್ನ ಉಲ್ಲೇಖಿಸಿದು. ಇದಕ್ಕೆ ಸಚಿವ ಡಾ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದಾಗ ಮೊದಲು ಆ ವಾಕ್ಯವೇ ನನ್ನ ಪುಟದಲ್ಲಿ ಇಲ್ಲ ಎಂದ ಸಿದ್ದರಾಮಯ್ಯ, ಬಳಿಕ ಸ್ಪೀಕರ್ ಈ ವಾಕ್ಯ ನಿಮ್ಮ ದಾಖಲೆಯಲ್ಲಿಯೂ ಇದೆ ಓದಿ ಎಂದರು. ಆಗ ಜಾಣತನ ಮೆರೆದ ಸಿದ್ದರಾಮಯ್ಯ, ವಿಧಾನಸಭೆ ಕಡತದ ದಾಖಲೆಯಲ್ಲಿ ಇಂಗ್ಲೀಷ್‍ಗೂ ಮೊದಲು ಕನ್ನಡದಲ್ಲಿ ಇದ್ದಿದ್ದರಿಂದ ತಾವು ನೋಡಲಿಲ್ಲ, ಉದ್ದೇಶಪೂರ್ವಕವಾಗಿ ಆ ಸಾಲು ಬಿಟ್ಟು ಓದಿಲ್ಲ ಎಂದರು.
ಈ ವೇಳೆ ಜಗದೀಶ್ ಶೆಟ್ಟರ್ ಮಧ್ಯಪ್ರವೇಶ ಮಾಡಿ ನೀವು ಗುಡ್ ಲಾಯರ್ ಚೆನ್ನಾಗಿ ಡಿಫೆನ್ಸ್ ಮಾಡ್ತೀರಿ ಅಂತ ಕೆಣಕಿದರು. ಅಯ್ಯೋ ಶೆಟ್ರೆ, ನಾನು ಪೂರ್ಣ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕಾರಣ, ಅರ್ಧ ಲಾಯರ್ ಕೆಲಸ ಆಗಿತ್ತು. ಬೆಳಗ್ಗೆ ತಾಲೂಕು ಆಫೀಸ್‍ಗೆ ಹೋಗೋದು, ಮಧ್ಯಾಹ್ನ ಲಾಯರ್ ಕೆಲಸ ಮಾಡೋದು ಆಗಿತ್ತು. ನಾನು ಲಾಯರ್ ಆಗಿದ್ದಿದ್ದರೆ ಜೀವನ ಬೇರೆಯ ರೀತಿಯೇ ಆಗಿರುತ್ತಿತ್ತು ಎಂದು ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.
ಈ ನಡುವೆ ಸಂಡೆಮಂಡೆ ಲಾಯರ್ ಎಂಬ ಪದ ಬಳಕೆಗೆ ಮಾಜಿ ಸ್ಪೀಕರ್ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಲಾಯರ್ ವೃತ್ತಿ ಗೌರವಯುತ ವೃತ್ತಿ. ಹಾಗೆ ಹೇಳಬಾರದು ಎಂದರು. ಇದು ನನಗೆ ನಾನೇ ಹೇಳಿಕೊಂಡಿದ್ದು. ನಾನು ಸಂಡೆಮಂಡೆ ಲಾಯರ್ರೇ ಆಗಿದ್ದು. ಈಗ ಲಾಯರ್ ಆಗಿ ಉಳಿದಿಲ್ಲ, ಮುಖ್ಯಮಂತ್ರಿ ಆದ ಮೇಲೆ ಆ ಸನ್ನದನ್ನೇ ರದ್ದು ಮಾಡಿಸಿದ್ದೆ. ಆದರೂ ಅವರ ಖುಷಿಗಾಗಿ ಸಂಡೆ ಮಂಡೆ ಲಾಯರ್ ಎಂಬ ಶಬ್ದ ಕಡತದಿಂದ ತೆಗೆದು ಹಾಕಿ ಎಂದು ಸಿದ್ದರಾಮಯ್ಯ ಮಾಡಿದರು.
ಇದೇ ವೇಳೆ ಬೋಪಯ್ಯ ಮಾತಿಗೆ ಬಿ.ಸಿ.ಪಾಟೀಲ್ ಧ್ವನಿಗೂಡಿಸುತ್ತಿದ್ದಾಗ ಏಯ್, ನೀನು ಲಾಯರ್ ಅಲ್ಲ. ಸುಮ್ನಿರಪ್ಪ ನೀನು ಪೊಲೀಸ್ ಅಷ್ಟೇ, ಲಾಯರ್ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸರ್, ನಾನು ಪೊಲೀಸ್ ಆಗಿದ್ದೆ. ಆಗ ನನಗೆ ಲಾಯರ್ ಗಳ ಒಡನಾಟ ಇತ್ತು. ಸಂಡೆ ಲಾಯರ್ ಅಂತ ಮಾತ್ರ ಹೇಳುತ್ತಾರೆ. ಆದರೆ ಸಂಡೇ ಮಂಡೇ ಲಾಯರ್ ಅಂತ ಹೇಳಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಬೆಂಗಳೂರು: ಅಂತೂ ಇಂತೂ ಸದನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಹಕ್ಕು ಚ್ಯುತಿ ಕದನಕ್ಕೆ ತೆರೆ ಬಿದ್ದಿದೆ. ಮೊನ್ನೆಯ ಮಾತುಗಳಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರ ಒಪ್ಪಿಗೆ ಮೇರೆಗೆ ಎರಡೂ ಹಕ್ಕುಚ್ಯುತಿ ಪ್ರಕರಣಗಳನ್ನು ಸ್ಪೀಕರ್ ಕೈಬಿಟ್ಟಿದ್ದಾರೆ.
ಬುಧವಾರ ಸದನಕ್ಕೆ ಗೈರಾಗಿದ್ದ ರಮೇಶ್ ಕುಮಾರ್ ಅವರು ಇಂದು ಕಲಾಪಕ್ಕೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಈ ಸಾರ್ವಜನಿಕ ಕ್ಷೇತ್ರಕ್ಕೆ ಅರ್ಹನಲ್ಲ. ಸಚಿವ ಡಾ.ಸುಧಾಕರ್ ವಿರುದ್ಧ ನಾನು ಯಾವುದೇ ಕೆಟ್ಟ ಶಬ್ಧ ಬಳಸಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ಸುಳ್ಳು ಹೇಳಿ ರಾಜಕಾರಣ ಮಾಡುವವನು ನಾನಲ್ಲ. ಆ ಥರಾ ಪದ ನಾನು ಹೇಳಿದ್ದೀನಿ ಎನ್ನುವುದಾದರೆವಿಷಾದ ವ್ಯಕ್ತಪಡಿಸುತ್ತೇನೆ. ಇದರಿಂದ ನನ್ನ ವ್ಯಕ್ತಿತ್ವ ಕಡಿಮೆ ಆಗಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸುಧಾಕರ್, ನೀವೆ ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದ್ವು ಅಂತ ಸ್ಪೀಕರ್ ಕುರ್ಚಿಯಲ್ಲಿ ಕುಳಿತು ರಮೇಶ್ ಕುಮಾರ್ ಹೇಳಿದ್ದನ್ನು ನೆನಪಿಸಿ ವಾಗ್ದಾಳಿ ನಡೆಸಿದರು. ಆಗ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, ರಮೇಶ್ ಕುಮಾರ್ ಸರಿಯಾಗೇ ಹೇಳಿದ್ದಾರೆ ಅಂತ ಸುಧಾಕರ್‍ಗೆ ತಿರುಗೇಟು ಕೊಟ್ಟರು.
ಈ ಮಧ್ಯೆ ರಮೇಶ್ ಕುಮಾರ್ ಅವರು, ನಾನು ಅಂದು ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಮಾತನಾಡಿದ ಮಾತಿಗೆ ಇವತ್ತು ಬದ್ಧ ಅಂತ ಹೇಳಿದರು. ಸ್ಪೀಕರ್ ಆಗಿದ್ದವರು, ಆ ಕುರ್ಚಿಯಲ್ಲಿ ಕುಳಿತು ಮಾತನಾಡಬಹುದಾ? ಅವರು ನಮ್ಮ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದರು ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಸುಧಾಕರ್ ಪ್ರಶ್ನೆ ಮಾಡಿದರು. ಇದರಿಂದಾಗಿ ಸದನದಲ್ಲಿ ಒಂದಿಷ್ಟು ಗದ್ದಲ ನಡೆಯಿತು.
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡುವಿನ ಸದನದ ಗಲಾಟೆ ವಿಚಾರವಾಗಿ ವಿಪಕ್ಷ ಮತ್ತು ಆಡಳಿತ ಪಕ್ಷಗಳು ಪರಸ್ಪರ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿವೆ. ಆದರೆ ಇದರ ಹಿಂದೆ ತಾಂತ್ರಿಕ ಅಂಶದ ಲೆಕ್ಕಾಚಾರ ಇಟ್ಟುಕೊಂಡು ಪರಸ್ಪರ ಒಬ್ಬರನೊಬ್ಬರು ಇಕ್ಕಟ್ಟಿಗೆ ಸಿಲುಕಿಸುವ ಹಠಕ್ಕೆ ಬಿದ್ದಿದ್ದಾರೆ.
ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಯ ಹಿಂದೆ ತಾಂತ್ರಿಕ ಲೆಕ್ಕಾಚಾರವಿದೆ. ರಮೇಶ್ ಕುಮಾರ್ ಅವಾಚ್ಯ ಪದ ಬಳಸಿದ್ದು ಸದನದ ಬಾವಿಯಲ್ಲಿ ನಿಂತು. ಸುಧಾಕರ್ ಅವಾಚ್ಯ ಪದ ಬಳಸಿದ್ದು ಸದನದಲ್ಲಿರುವ ತಮ್ಮ ಸ್ಥಳದಲ್ಲಿ ನಿಂತು. ಬಾವಿಗಿಳಿದು ಆಡಿದ ಮಾತು ಸದನದಲ್ಲಿ ಕಡತಕ್ಕೆ ಹೋಗಲ್ಲ. ಆದ್ದರಿಂದ ರಮೇಶ್ ಕುಮಾರ್ ಮಾತನಾಡಿದ್ದಕ್ಕೆ ಸದನದಲ್ಲಿ ಯಾವುದೇ ದಾಖಲೆ ಇಲ್ಲ. ಆದರೆ ಸುಧಾಕರ್ ಮಾತು ಕಡತಕ್ಕೆ ಎಂಟ್ರಿಯಾಗಿದೆ.
ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆಗೆ ನೈಜವಾದ ಕಾರಣ ಇದೆ ಮತ್ತು ದಾಖಲೆಯು ಇದೆ. ಆದ್ದರಿಂದ ಕಾಂಗ್ರೆಸ್ ಪಟ್ಟು ಹಿಡಿದು ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಿದೆ. ಹೀಗಾಗಿ ಬಿಜೆಪಿ ಸದನದಲ್ಲಿ ಗದ್ದಲ ಎಬ್ಬಿಸಿದೆ. ಸುಧಾಕರ್ ಹಕ್ಕುಚ್ಯುತಿ ಮಂಡಿಸಬಹುದು. ಆದರೆ ಅವರ ಹಕ್ಕುಚ್ಯುತಿ ಮಂಡನೆಗೆ ಸದನದ ನಿಯಮದ ಪ್ರಕಾರ ದಾಖಲೆ ಸಿಗಲ್ಲ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಬಿಜೆಪಿ ಪಾಳಯದ ಲೆಕ್ಕಾಚಾರವೇ ಬೇರೆ ಇದೆ. ರಮೇಶ್ ಕುಮಾರ್ ಮೊದಲು ಅವಾಚ್ಯ ಪದ ಬಳಸಿದ್ದು ಬಾವಿಗಿ ಇಳಿಯುವ ಮುನ್ನ. ಅವಾಚ್ಯ ಪದ ಬಳಕೆ ಮಾಡಿದ ನಂತರ ಅವರು ಸದನದ ಬಾವಿಗೆ ಬಂದಿದ್ದಾರೆ. ಆ ಮೂಲಕ ರಮೇಶ್ ಕುಮಾರ್ ಆಡಿದ ಮಾತು ಸಹ ಸದನದಲ್ಲಿ ದಾಖಲಾಗಿರುತ್ತದೆ. ಆದ್ದರಿಂದ ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಸಹ ಹಕ್ಕುಚ್ಯುತಿ ಮಂಡನೆಗೆ ತೀರ್ಮಾನ ಮಾಡಿದ್ದಾರೆ. ಹೀಗೆ ರಮೇಶ್ ಕುಮಾರ್ ಹಾಗೂ ಸುಧಾಕರ್ ಇಬ್ಬರು ಪರಸ್ಪರ ತಾಂತ್ರಿಕ ಅಂಶವನ್ನು ಮುಂದಿಟ್ಟುಕೊಂಡು ಹಕ್ಕುಚ್ಯುತಿ ಅಸ್ತ್ರ ಬಳಕೆಗೆ ಮುಂದಾಗಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಹುಕಾರ ಅನ್ನೋ ಬೇಜಾನ್ ಸುದ್ದಿ ಮಾಡಿತ್ತು. ಅದೇ ಸಾಹುಕಾರ ಇವತ್ತು ವಿಧಾನಸಭೆಯಲ್ಲೂ ಎಲ್ಲರ ಗಮನ ಸೆಳೆದರು. ಡಿಕೆಶಿ ಎದುರು ಚಾಲೆಂಜ್ ಹಾಕಿ ಗೆದ್ದು ಬಂದ ರಮೇಶ್ ಜಾರಕಿಹೊಳಿಯತ್ತ ಬಹುತೇಕ ಶಾಸಕರ ಕಣ್ಣು. ಬಹಳಷ್ಟು ಶಾಸಕರು ಪಕ್ಷಬೇಧ ಮರೆತು ರಮೇಶ್ ಜಾರಕಿಹೊಳಿ ಬಳಿ ತೆರಳಿ ಕೈಕುಲುಕಿದ್ರು. ಅಷ್ಟೇ ಅಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಬಿಟ್ಟು ಬೆಳಗಾವಿಯ ಬಹುತೇಕ ಶಾಸಕರು ವಿಶ್ ಮಾಡಿದ್ರು. ಆದ್ರೆ ಸಾಹುಕಾರನ ಗೆಲುವಿನ ನಗು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಡೆ ತಲುಪಲೇ ಇಲ್ಲ.
ಅಂದಹಾಗೆ ವಿಧಾನಸಭೆಯಲ್ಲಿ ಇವತ್ತು ರಾಜ್ಯಪಾಲರ ಭಾಷಣದ ಬಳಿಕ ವಿರಾಮದ ವೇಳೆಯಲ್ಲಿ ಕೆಲವೊಂದು ಗಮನ ಸೆಳೆಯುವ ಘಟನೆಗಳು ನಡೆದವು. ಇದರಲ್ಲಿ ನೂತನ ಸಚಿವರ ನಡವಳಿಕೆಗಳ ಬಗ್ಗೆಯೇ ಹೆಚ್ಚು ಗಮನ ಹೋಗಿತ್ತು ಅಂದ್ರೂ ತಪ್ಪಾಗಲಾರದು. ಅದರಲ್ಲೂ ಸ್ಟಾರ್ ಆಫ್ ಆಟ್ರ್ಯಾಕ್ಷನ್ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ.
ವಿಧಾನಸಭೆ ಸಭಾಂಗಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊರಗೆ ಹೋದ ಮೇಲೆ ರಮೇಶ್ ಜಾರಕಿಹೊಳಿ ವಿರೋಧ ಪಕ್ಷದ ಕಡೆ ಬಂದ್ರು. ಸೀದಾ ಬಂದವರು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಪಕ್ಕ ಹೆಚ್‍ಡಿಕೆ ಸೀಟು ಖಾಲಿ ಇದ್ದ ಕಡೆ ಹೋಗಿ ಕುಳಿತ್ರು. ಸುಮಾರು ಎರಡ್ಮೂರು ನಿಮಿಷಗಳ ಕಾಲ ಮಾತನಾಡಿದ್ರು. ಆದ್ರೆ ಮೊದಲ ಸಾಲಿನಲ್ಲೇ ಕುಳಿತಿದ್ದ ತುಸು ಹತ್ತಿರವೇ ಇದ್ದ ಡಿಕೆಶಿ, ಸಿದ್ದರಾಮಯ್ಯ ಅವರನ್ನ ಕ್ಯಾರೇ ಅನ್ನಲಿಲ್ಲ ಸಾಹುಕಾರ. ಆ ಇಬ್ಬರು ನಾಯಕರ ಹತ್ತಿರ ಹೋಗಿ ವಿಶ್ ಕೂಡ ಮಾಡದೇ ತಮ್ಮ ಆಸನದತ್ತ ರಮೇಶ್ ಜಾರಕಿಹೊಳಿ ತೆರಳಿದ್ರು.
ಡಿಕೆಶಿ ಎದುರು ಚಾಲೆಂಜ್ ಹಾಕಿ ಗೆದ್ದ ಸಾಹುಕಾರ ಇನ್ನೂ ಸವಾಲಿನ ಗುದ್ದಾಟ ಮರೆತಿಲ್ಲವಾ ಅನ್ನೋ ಪ್ರಶ್ನೆ ಮೂಡುತ್ತೆ. ಇದರ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೂಡ ಸಿದ್ದರಾಮಯ್ಯ, ಡಿಕೆಶಿ, ಹೆಚ್‍ಡಿಕೆ ಅವರನ್ನ ಮಾತನಾಡಿಸಲು ಹೋಗಲೇ ಇಲ್ಲ. ಆನಂದ್ ಸಿಂಗ್, ಶ್ರೀಮಂತಪಾಟೀಲ್ ಕೂಡ ಯಾರನ್ನೂ ಮಾತನಾಡಿಸದೇ ಇದ್ದದ್ದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓಧಿ: ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್ಗೆ ಕೋಪನಾ?
ಬೆಂಗಳೂರು: ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ಪಿ ನಾಯಕನ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ವಾಪಸ್ ಪಡೆಯಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದುವರೆಗೆ ರಾಜೀನಾಮೆ ವಾಪಸ್ ಪಡೆಯಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೂಟರ್ನ್ ಹೊಡೆದಿದ್ದಾರೆ.
ದೆಹಲಿಗೆ ತಲುಪಿದ ನಂತರ ಕೊನೆಯ ಅಭಿಪ್ರಾಯ ಕೇಳಲು ಸಿದ್ದರಾಮಯ್ಯ ಅವರಿಗೆ ಮಧುಸೂದನ್ ಮಿಸ್ತ್ರಿ ಕರೆ ಮಾಡಿದ್ದಾರೆ. 10 ದಿನದಲ್ಲಿ ಅಂತಿಮ ತೀರ್ಮಾನ ಹೇಳುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ವೇಳೆ 10 ದಿನ ಅಲ್ಲ 1 ಗಂಟೆಯಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮಧುಸೂದನ್ ಮಿಸ್ತ್ರಿ ಹೇಳಿದಾಗ, ನಾನು ದೆಹಲಿಗೆ ಬಂದು ಹೈಕಮಾಂಡ್ ಭೇಟಿ ಮಾಡುತ್ತೇನೆ. ಹೈಕಮಾಂಡ್ ಸೂಚನೆ ಕೊಟ್ಟರೆ ವಿಪಕ್ಷ ಹಾಗೂ ಸಿಎಲ್‍ಪಿಯಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ.
ಈ ಮೂಲಕ ವಿಪಕ್ಷ ಹಾಗೂ ಸಿಎಲ್ಪಿ ನಾಯಕನ ಸ್ಥಾನದಲ್ಲಿ ಮುಂದುವರಿಯುವ ಇಚ್ಚೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಕಡೆ ಗಳಿಗೆಯಲ್ಲಿ ಯೂಟರ್ನ್ ಹೊಡೆದಿದ್ದಾರೆ.
– ಸದನದಲ್ಲಿ ಮತ್ತೆ ನಿಂಬೆಹಣ್ಣಿನ ಬಗ್ಗೆ ಮಾತು
– ರಾಜನಾಥ್ ಸಿಂಗ್‍ಗೆ ನಿಂಬೆ ಕೊಟ್ಟೆ ಎಂದ ರೇವಣ್ಣ
ಬೆಂಗಳೂರು: ವಿಧಾನಸಭಾ ಕಲಾಪದ ಮೊದಲ ದಿನವೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗಿ ಸದನವನ್ನು ಕೆಲ ಹೊತ್ತು ನಗೆಗಡಲಲ್ಲಿ ತೇಲಿಸಿತು.
ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಪ್ರವಾಹ ವಿಚಾರವಾಗಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ಚರ್ಚೆ ನಡೆದಿತ್ತು. ಕೇಂದ್ರ ಹಾಗೂ ರಾಜದಲ್ಲಿ ನಿಮ್ಮ ಸರ್ಕಾರವಿದೆ. ಆದಷ್ಟು ಬೇಗ ಕೊಡಗು ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಿ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಕೆ.ಜಿ. ಬೋಪಯ್ಯನವರು, ನೀವು ವಿಪಕ್ಷ ನಾಯಕರನ್ನು ಬುಧವಾರ ಆಯ್ಕೆ ಮಾಡಿದ್ದೀರಿ. ನೀವು ಅವರು ಎಲ್ಲರೂ ಒಂದೇ ರೀತಿ ಎಂದು ಹೇಳಿದರು.
ಬೋಪಯ್ಯ ಅವರ ಮಾತಿಗೆ ತಕ್ಷಣವೇ ಉತ್ತರ ಕೊಟ್ಟ ವಿರೋಧ ಪಕ್ಷದ ಶಾಸಕರೊಬ್ಬರು, ನಿಮ್ಮ ಮಂತ್ರಿ ಮಂಡಲ ರಚನೆಯಾಗಲು ಒಂದು ತಿಂಗಳೇ ಬೇಕಾಯಿತು ಎಂದರು. ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನಾನು ವಿಪಕ್ಷ ನಾಯಕನಾಗಿದ್ದೇನೆ. ಬಿಜೆಪಿಯಲ್ಲಿ ನಿಮ್ಮ ಪರಿಸ್ಥಿತಿ ಈಗ ಹೇಗಿದೆ ಬೋಪಯ್ಯನವರೇ? ಸಚಿವ ಪಟ್ಟಿಯಿಂದ ನಿಮ್ಮನ್ನ ತೆಗೆದು ಹಾಕಿದರು. ಸುಮ್ಮನೆ ಇರಿ ಸಾಕು ನಿಮ್ಮ ಮಾತು ಎಂದರು.
ನಿಮ್ಮನ್ನ ಸಭಾಪತಿ ಮಾಡುತ್ತಾರೆ ಎನ್ನುವ ಸುದ್ದಿ ನನಗೆ ಬಂದಿತ್ತು. ಸಚಿವ ಸ್ಥಾನದ ಆಕಾಂಕ್ಷೆಯಿಂದ ಬಿಟ್ಟುಕೊಟ್ರಿ ಎಂದು ಸಿದ್ದರಾಮಯ್ಯ ಕಾಲೆಳೆದರು. ಇದರಿಂದ ಮತ್ತಷ್ಟು ಮುಜುಗರಕ್ಕೆ ಒಳಗಾದ ಬೋಪಯ್ಯ, ನೀವು ವಿಪಕ್ಷ ನಾಯಕರಾಗಲು ಒಂದು ತಿಂಗಳು ತಗೊಂಡ್ರಿ ಎಂದು ತಿರುಗೇಟು ನೀಡಿದರು. ಆಗ ಸಿದ್ದರಾಮಯ್ಯ ಅವರು, ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ನಾಯಕ ನಿಮಗೆ ಗೊತ್ತಾ ಬೋಪಯ್ಯನವರೇ? ನಾನು ಸಿಎಲ್‍ಪಿ ನಾಯಕ ಆಗಿದ್ದು ಯಾವಾಗ ಅಂತ ನಿಮಗೆ ಗೊತ್ತಾ ಎಂದು ಮರು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸದನದ ಸದಸ್ಯರೊಬ್ಬರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಕೇಳಿ ಎಂದು ಉತ್ತರ ತೂರಿ ಬಿಟ್ಟರು. ಆಗ ಸಿದ್ದರಾಮಯ್ಯ, ರೇವಣ್ಣ ನಿಂಬೆಹಣ್ಣು ಬಿಟ್ಟಿದ್ದರೆ ಕಷ್ಟ ಎಂದು ಕಾಲೆಳೆದರು. ನಿಂಬೆಹಣ್ಣು ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ರೇವಣ್ಣ ಮಾತನಾಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಅವರು, ನಿಂಬೆಹಣ್ಣು ತಂದಿಯಾ ಎಂದು ಕೇಳಿ ಸದನದಲ್ಲಿ ನಗೆ ಹರಿಸಿದರು.
ಧ್ವನಿ ಏರಿಸಿದ ರೇವಣ್ಣ ಅವರು ನಮ್ಮ ನಿಂಬೆಹಣ್ಣನ್ನು ಕೇಂದ್ರ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಅವರಿಗೆ ಕೊಟ್ಟಿದ್ದೇವೆ. ಅದನ್ನ ಅವರು ರಫೇಲ್ ಯುದ್ಧ ವಿಮಾನದ ಮೇಲೆ ಇಟ್ಟರು ಎಂದು ನಕ್ಕರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಯೋ.. ರೇವಣ್ಣ ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೇದಾಗ್ಲಿ ಎಂದು ಕಿಚಾಯಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮಗೆ ರೇವಣ್ಣ ಅವರೇ ನಿಂಬೆಹಣ್ಣು ಕೊಟ್ಟಿದ್ದರು ಎನ್ನುವ ಸುದ್ದಿ ನನಗೆ ಬಂದಿತ್ತು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡುತ್ತಿದ್ದಂತೆ ಮತ್ತೆ ಮಾತು ಮುಂದುವರಿಸಿದ ಸ್ಪೀಕರ್, ನನಗೆ ನಿಮ್ಮ ಮನೆ ಬಿಟ್ಟುಕೊಟ್ಟರೆ ಸಾಕು. ನೀವು ಅದನ್ನು ಬಿಡುತ್ತಿಲ್ಲ ಎಂದು ನಗೆ ಬೀರಿದರು. ಆಗ ರೇವಣ್ಣ ಅವರು, ನಾನು ಎರಡು ತಿಂಗಳಲ್ಲೆ ಮನೆ ಬಿಟ್ಟುಕೊಟ್ಟೆ ಎಂದರು. ತಕ್ಷಣವೇ ಸಿದ್ದರಾಮಯ್ಯ ಅವರು, ಸದನವನ್ನು ಮತ್ತೊಂದು ವಿಚಾರಕ್ಕೆ ತೆಗೆದುಕೊಂಡು ಹೋಗುವುದು ಬೇಡ. ಸದನದಲ್ಲಿ ಎಲ್ಲರೂ ಸ್ವಲ್ಪ ಖುಷಿಯಾಗಿ ಇರಲಿ ಅಂತ ಹೀಗೆ ಮಾತನಾಡಿದೆ ಎಂದರು.
ಬೆಂಗಳೂರು: ಉಪ ಚುನಾವಣೆಯ ಮೈತ್ರಿಯು ಕಾಂಗ್ರೆಸ್ ನಿರ್ಧಾರದ ಮೇಲೆ ನಿಂತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರ ರಾಜೀನಾಮೆಯಿಂದ 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಪೈಕಿ ಜೆಡಿಎಸ್ 3 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಹೀಗಾಗಿ ದೋಸ್ತಿ ಸಂಬಂಧ ಮಾತನಾಡಲು ಕಾಂಗ್ರೆಸ್ ನಾಯಕರು ಬಂದಿದ್ದರು. ಒಟ್ಟಾಗಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆ ಮಾಡಿದ್ದೇವೆ. ಸುದೀರ್ಘ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲಾಯಿತು. ಕಳೆದ ಚುನಾವಣೆ, ಮುಂದಿನ ಯಾವುದೇ ಚುನಾವಣೆ ಬಂದರೂ ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು ಎಂಬ ಚರ್ಚೆಯಾಗಿದೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಬೇಡ. ಲೋಕಸಭೆ ಚುನಾವಣೆಯಲ್ಲೂ ನಮಗೆ ಇದರ ಅನುಭವ ಆಗಿದೆ. ರಾಜ್ಯ ಮಟ್ಟದಲ್ಲಿ ನೀವು ಒಂದಾಗಿದ್ದೀರಿ. ಆದರೆ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಿಲ್ಲ. ಇದೇ ಸೋಲಿಗೆ ಕಾರಣ ಅಂತ ಸೋತವರು ತಿಳಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡ ಅವರು ಹೇಳಿದರು.
ಪಕ್ಷದ ಮೂವರು ಶಾಸಕರ ಅನರ್ಹತೆ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅಭ್ಯರ್ಥಿಗಳನ್ನು ನೀವೇ ನಿರ್ಧಾರ ಮಾಡಿ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆ 3 ತಿಂಗಳಿಗೆ ಬರುತ್ತೋ 6 ತಿಂಗಳಿಗೆ ಬರುತ್ತೋ ಗೊತ್ತಿಲ್ಲ. ಎಲ್ಲದ್ದಕ್ಕೂ ಸಿದ್ಧರಾಗಿ ಅಂತ ಸಲಹೆ ನೀಡಲಾಗಿದೆ ಎಂದರು.
ಹಳೇ ಮೈಸೂರು ಭಾಗ ಮಾತ್ರ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಬೇಕು. ಕುಮಾರಸ್ವಾಮಿ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ವಿಧಾನಸಭೆ ಚುನಾವಣೆಗೆ ತಳ ಮಟ್ಟದಿಂದ ಪಕ್ಷ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲು ಮುಖಂಡರು ನನಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಿರಿಯ ನಾಯಕರು ನಾಳೆ ಸಭೆ ಮಾಡುತ್ತಿದ್ದಾರೆ. ಕೋರ್ ಕಮಿಟಿ, ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ನೇಮಕಾತಿಯನ್ನು ಆಗಸ್ಟ್ 6, 7ರಂದು ಮಾಡುತ್ತೇವೆ. ಆಗಸ್ಟ್ 7ರಿಂದ 10ರೊಳಗೆ ಜಿಲ್ಲಾ ಸಮಿತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ನಾರಾಯಣ ಗೌಡ, ಗೋಪಾಲಯ್ಯ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದೇವೆ ಎಂದು ಹೇಳಿದರು.