ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಮರು ಹಂಚಿಕೆಯ ಅಸಮಾಧಾನದ ನಡುವೆ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ ಫೆಬ್ರವರಿ ಐದರವರೆಗೂ ಅಧಿವೇಶನ ನಡೆಯಲಿದೆ. ಮೊದಲ ದಿನವಾದ ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯೋ ಸಂಭವ ಇದೆ. ಕೃಷಿ ಕಾಯ್ದೆ ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ, ಅನುದಾನ ವಿಳಂಬ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಪ್ಲಾನ್ ಮಾಡ್ಕೊಂಡಿವೆ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯ ಮಸೂದೆಯನ್ನು ಪರಿಷತ್‍ನಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಬಾರಿ 11 ವಿಧೇಯಕಗಳು ಮಂಡನೆ ಆಗಲಿದೆ. ಕಲಾಪದಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆಯೂ ಚರ್ಚೆ ನಡೆಯಲಿದೆ.

ಈ ಮಧ್ಯೆ, ವಿಧಾನ ಪರಿಷತ್‍ನ ಸಭಾಪತಿ ಸ್ಥಾನಕ್ಕೆ ಹಗ್ಗಜಗ್ಗಾಟ ಶುರುವಾಗಿದೆ. ಪರಿಷತ್‍ನಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟಿರುವ ಜೆಡಿಎಸ್ ಸಭಾಪತಿ ಸ್ಥಾನಕ್ಕೆ ಬೇಡಿಕೆಯಿಟ್ಟಿದೆ. ಆದರೆ ಇದನ್ನು ಬಿಜೆಪಿ ಇನ್ನೂ ಒಪ್ಪಿಲ್ಲ ಎನ್ನಲಾಗಿದೆ. ಇಂದು ಸಂಜೆ ನಡೆದ ಸಭೆಯಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ನಾಳೆ ಮತ್ತೊಮ್ಮೆ ಸಭೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಜನವರಿ 29ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಲಿದ್ದು, ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರಲು ಜೆಡಿಎಸ್ ನಿರ್ಧರಿಸಿದೆ. ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಜೊತೆ ಬಸವರಾಜ ಹೊರಟ್ಟಿ ಸಭೆ ನಡೆಸಿದರು. ಬಳಿಕ ಮಾತಾಡಿದ ಹೊರಟ್ಟಿ, ನಮಗೆ ಸಭಾಪತಿ ಸ್ಥಾನ ಬೇಕೇ ಬೇಕು ಎಂದು ಹೇಳಿದರು.


