Tag: vidhan parishad

  • ಪರಿಷತ್ ನಲ್ಲಿ ಬಿಗ್ ಝೀರೋ ಸ್ವಾರಸ್ಯಕರ ಚರ್ಚೆ

    ಪರಿಷತ್ ನಲ್ಲಿ ಬಿಗ್ ಝೀರೋ ಸ್ವಾರಸ್ಯಕರ ಚರ್ಚೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಝೀರೋ ವಿಷಯದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಝೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ಹಿಂದೇಟು ಹಾಕಿದರು.

    ವಿಧಾನ ಪರಿಷತ್ ಕಲಾಪದಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರ ಶಕ್ತಿಯ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ. ಹಿಂದೆ ಆಳುವ ಪಕ್ಷವಾಗಿದ್ದ ಬಿಜೆಪಿ ಯಡಿಯೂರಪ್ಪ ಪಕ್ಷ ಬಿಟ್ಟ ನಂತರ ವಿರೋಧ ಸ್ಥಾನವೂ ಸಿಗದಂತೆ ಆಗಿತ್ತು. ಹೀಗಾಗಿ ಬಿಜೆಪಿ ಮೈನಸ್ ಯಡಿಯೂರಪ್ಪ ಬಿಗ್ ಝೀರೋ ಅಂತ ಪಾಟೀಲ್ ಹೇಳಿದರು.

    ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್, ಸಿದ್ದರಾಮಯ್ಯ ಮೈನಸ್ ಕಾಂಗ್ರೆಸ್ ಜೀರೋ ಅಂತಾ ಒಪ್ಪಿಕೊಳ್ತೀರಾ? ಯಡಿಯೂರಪ್ಪ ದೈತ್ಯ ಶಕ್ತಿ. ಯಡಿಯೂರಪ್ಪ ಬಿಜೆಪಿ ಜೊತೆ ಇದ್ದರೆ ಸಂಖ್ಯೆಯ ಬಲಗಡೆಯ ಝೀರೋ ಇರಲಿದೆ, ಅವರನ್ನು ಇಳಿಸುವಾಗ ಈ ಕಾಳಜಿ ಇರಲಿಲ್ಲವೇ?. ನಾಯಕರು ಮತ್ತು ಪಕ್ಷ ಸೇರಿದಾಗಲೇ ಪಕ್ಷ ಬಲಗೊಳ್ಳುವುದು, ಸೋನಿಯಾಗಾಂಧಿ, ಕುಮಾರಸ್ವಾಮಿ, ಝೀರೋ ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿ ಮಾಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನ ಬಸವರಾಜ ಹೊರಟ್ಟಿ, ಅದೆಲ್ಲಾ ಬೇಡ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಹೌದೋ ಅಲ್ಲವೋ ಅನ್ನುವುದನ್ನು ಹೇಳಿ ಎಂದರು.

    ಈ ವೇಳೆ ಎದ್ದ ಬಿಜೆಪಿ ಸದಸ್ಯ ಪ್ರಾಣೇಶ್, ನಮ್ಮಲ್ಲಿ ಎಲ್ಲರೂ ನಾಯಕರೇ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ನಮ್ಮ ಹೀರೋ ಆಗಿದ್ದರು. ಈಗ ನರೇಂದ್ರ ಮೊದಿ ನಮ್ಮ ಹೀರೋ ಆಗಿದ್ದಾರೆ. ಹಾಗೆಯೇ ಇಲ್ಲಿಯೂ ಈಗ ಯಡಿಯೂರಪ್ಪ ನಮ್ಮ ಹೀರೋ ನಂತರದಲ್ಲಿ ಮುಂದೆ ಬರುವವರು ನಮ್ಮ ಹೀರೋ. ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ. ಒಂದು ಕುಟುಂಬದವರೇ ಹೀರೋ ಅಲ್ಲ ಎಂದು ತಿರುಗೇಟು ನೀಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ನಾನು ನಮಗೆ ಅನಿಸಿದ್ದು ಹೇಳಿದ್ದೇನೆ ಯಡಿಯೂರಪ್ಪ ಮೈನಸ್ ಬಿಜೆಪಿ ಝೀರೋ ಅಲ್ಲ ಅಂದರೆ ಇಲ್ಲ ಅಂತಾ ಹೇಳಿ ನಮಗೇನು ಅಭ್ಯಂತರ ಇಲ್ಲ ಎಂದು ಬಿಜೆಪಿ ಸದಸ್ಯರ ಕೆರಳಿಸುವ ಪ್ರಯತ್ನ ನಡೆಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಲೆಹರ್ ಸಿಂಗ್, ಕಾಂಗ್ರೆಸ್ ಪಕ್ಷವೇ ಬಿಗ್ ಝೀರೋ ಆಗಿದೆ. ಹಾಗಾಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ತರಹದ ನಾಯಕರು ಅಲ್ಲಿ ಜೀರೋ ಆಗಿದ್ದಾರೆ ಅವರು ಅಲ್ಲಿಂದ ಹೊರ ಬಂದರೆ ನಾಯಕರಾಗುತ್ತಾರೆ ಎಂದರು ಅಂತ ಕಾಂಗ್ರೆಸ್ ಕಾಲೆಳೆದ್ರು. ಲೆಹರ್ ಸಿಂಗ್ ಆರೋಪವನ್ನು ತಳ್ಳಿಹಾಕಿದ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಶೂನ್ಯ ಅಂತಾರೆ ಆದರೆ ಸ್ವಾತಂತ್ರ್ಯ ತಂದ ಪಕ್ಷ ನಮ್ಮದು ಸಂವಿಧಾನ ಕೊಟ್ಟ ಪಕ್ಷ ನಮ್ಮದು ಹಾಗಾಗಿ ನಮಗೆ ನಮ್ಮ ಪಕ್ಷದ ಬಗ್ಗೆ ಹೆಮ್ಮೆ ಇದೆ ಎಂದು ಬಿಗ್ ಜೀರೋ ಚರ್ಚೆಗೆ ತೆರೆ ಎಳೆದರು.

  • ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    – ಸರವಣ ಅವ್ರ ಆರೋಗ್ಯ ತಪಾಸಣೆ ಆಗ್ಲೇ ಬೇಕು

    ಬೆಂಗಳೂರು: ಕಲಾಪಕ್ಕೆ ಮಂಗಳವಾರ ಮಾಸ್ಕ್ ಹಾಕಿಕೊಂಡು ಬಂದ ಉದ್ದೇಶವನ್ನು ವಿಧಾನ ಪರಿಷತ್ ಸದಸ್ಯ ಸರವಣ ರಿವೀಲ್ ಮಾಡಿದ್ದಾರೆ.

    ಕಲಾಪದಲ್ಲಿ ಮಾತನಾಡಿದ ಅವರು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಿನ್ನೆ ಮಾಸ್ಕ್ ಹಾಕಿಕೊಂಡು ಕಲಾಪಕ್ಕೆ ಬಂದಿದ್ದೆ. ಆದರೆ ಕೆಲವರು ನಿಮಗೆ ಕೊರೊನಾ ಬಂದಿದೆಯಾ ಅಂತ ವಿಧಾನ ಪರಿಷತ್‍ನ ಕೆಲ ಸದಸ್ಯರು ರೇಗಿಸಿದರು ಎಂದು ಹೇಳಿದರು. ಆಗ ಬಸವರಾಜ ಹೊರಟ್ಟಿ ಅವರು, ಯಾರಿಗೆ ಕೊರೊನಾ ಬಂದರೂ ಸರವಣಗೆ ಬರಲ್ಲ ಬಿಡಿ ಎಂದು ಗೇಲಿ ಮಾಡಿದರು.

    ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಸರವಣ ಅವರ ಆರೋಗ್ಯ ತಪಾಸಣೆ ಆಗಲೇ ಬೇಕು. ಅನುಮಾನ ನಿವಾರಣೆಯಾಗಲು ತಪಾಸಣೆ ಅಗತ್ಯ ಎಂದು ಹೇಳಿದರು. ಆಗ ಸರವಣ, ನಾನು ಆರೋಗ್ಯವಾಗಿದ್ದೇನೆ. ನೀವು ಕುಳಿತುಕೊಳ್ಳಿ ಎಂದರು.

    ರಾಜ್ಯದ ಜನರು ಕೊರೊನಾ ಬಗ್ಗೆ ಆತಂಕದಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎನ್ನುವುದನ್ನು ಚರ್ಚಿಸಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಆದರೆ ಸದನವನ್ನು ಗಲಾಟೆಗೆ ತಳ್ಳಿದ್ರಿ ಎಂದು ಹೇಳಿದರು.

    ಇದಕ್ಕೂ ಮುನ್ನ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ನಿಮಗೆ ಸ್ವಲ್ಪ ಜಾಸ್ತಿ ಇದೆ ಎಂದು ವಿಪಕ್ಷ ನಾಯಕ ಕಾಲೆಳೆದಿದ್ದರು.

    ಈ ಮಧ್ಯೆ ಎದ್ದು ನಿಂತ ಸಿ.ಸಿ.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟಿದ್ದರು.

  • ‘ಕೈ’ ಪಕ್ಷ ಬಿಟ್ಟೇವಿ, ಹಾಗಾಗಿ ಯಾರಿಗೂ ಕೈ ಕೊಡಲ್ಲ: ಬಿ.ಸಿ.ಪಾಟೀಲ್

    ‘ಕೈ’ ಪಕ್ಷ ಬಿಟ್ಟೇವಿ, ಹಾಗಾಗಿ ಯಾರಿಗೂ ಕೈ ಕೊಡಲ್ಲ: ಬಿ.ಸಿ.ಪಾಟೀಲ್

    – ಪರಿಷತ್ ಕಲಾಪದಲ್ಲೂ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಈ ವಿಚಾರದಲ್ಲಿಯೂ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಪರಸ್ಪರ ಕಾಲೆಳೆದುಕೊಳ್ಳುವ ಕೆಲಸ ಮಾಡಿದರು.

    ಮಾತು ಆರಂಭಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ಆದರೆ ನಿಮಗೆ ಸ್ವಲ್ಪ ಜಾಸ್ತಿ ಆತಂಕ ಇದೆ ಎಂದು ವಿಪಕ್ಷ ನಾಯಕರ ಕಾಲೆಳೆದರು.

    ಈ ಮಧ್ಯೆ ಎದ್ದು ನಿಂತ ಎಸ್.ಆರ್.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟರು.

    ಸಚಿವನಾದ ಬಳಿಕ ನಾನು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಜನರು ಕೈಕುಲುಕಿ ಅಭಿನಂದನೆ ಸಲ್ಲಿಸಲು ಬರುತ್ತಿದ್ದರು. ಆದರೆ ನಾನು ಕೈಮುಗಿದು ಅವರನ್ನು ಮಾತನಾಡಿಸುತ್ತಿದ್ದೆ. ನನಗೆ ಕೊರೊನಾ ಭೀತಿ ಇತ್ತು. ಹೀಗಾಗಿ ಜನರು ತಪ್ಪು ತಿಳಿಯಬಾರದು ಎನ್ನುವ ಕಾರಣಕ್ಕೆ, ನಾನು ‘ಕೈ’ ಪಕ್ಷ ಬಿಟ್ಟಿದ್ದೇನೆ. ಹೀಗಾಗಿ ಕೈ ಕೊಡುವುದಿಲ್ಲ ಅಂತ ಹೇಳಿದ್ದೆ ಎಂದು ಸದನದಲ್ಲಿ ನಗೆ ಹರಿಸಿದರು.

    ಈ ವೇಳೆ ವಿಪಕ್ಷದ ಸದಸ್ಯರೊಬ್ಬರು ‘ಕೈ’ ಪಕ್ಷಕ್ಕೆ ಕೈಕೊಟ್ಟು ಹೋದೆ ಅಂತ ಹೇಳಿ ಎಂದು ಕಾಲೆಳೆದರು. ಆಗ ಬಿ.ಸಿ.ಪಾಟೀಲ್, ನಾನು ಕೈಕೊಟ್ಟು ಹೋಗಿಲ್ಲ. ರಾಜೀನಾಮೆ ಕೊಟ್ಟು, ಜನಾದೇಶ ಪಡೆದು ಬಂದಿದ್ದೇವೆ ಎಂದರು. ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಕೈ ಬಿಟ್ಟವರು ಯಾಕೆ ಕೈ ಕೊಟ್ಟಿದ್ದರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದರು. ತಕ್ಷಣವೇ ಧ್ವನಿ ಏರಿಸಿದ ಬಿ.ಸಿ.ಪಾಟೀಲ್, ನೀವು ಯಾರಿಗೆ ಹೇಗೆ ಕೈಕೊಟ್ರಿ ಅಂತ ಯೋಚನೆ ಮಾಡಿ ಎಂದರು.

  • ಯತ್ನಾಳ್‍ಗಾಗಿ ವಿಧಾನ ಪರಿಷತ್ ಕಲಾಪ ಬಲಿ

    ಯತ್ನಾಳ್‍ಗಾಗಿ ವಿಧಾನ ಪರಿಷತ್ ಕಲಾಪ ಬಲಿ

    ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಇವತ್ತು ಇಡೀ ಪರಿಷತ್ ಕಲಾಪವನ್ನ ನುಂಗಿ ಹಾಕಿತು. ಶಾಸಕ ಯತ್ನಾಳ್, ದೊರೆಸ್ವಾಮಿ ಕ್ಷಮೆ ಕೇಳಬೇಕು ಅಂತ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಸದನ ಬಾವಿಗಿಳಿದು ಹೋರಾಟ ಮಾಡಿತು. ಎರಡು ಬಾರಿ ಸದನ ಮುಂದೂಡಲಾಯ್ತು. ವಿಪಕ್ಷಗಳು ಪ್ರತಿಭಟನೆ ಕೈ ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನ ನಾಳೆಗೆ ಮುಂದೂಡಲಾಯ್ತು.

    ಬೆಳಗ್ಗೆ ಕಲಾಪ ಆರಂಭವಾಗುತ್ತಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚನೆ ಬಳಿಕ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಪ್ರಸ್ತಾಪ ಮಾಡಿದ್ರು. ಸ್ವಾತಂತ್ರ್ಯ ಹೋರಾಟಗಾರಿಗೆ ಶಾಸಕರು ಅಪಮಾನ ಮಾಡಿದ್ದಾರೆ. ಇದು ಗಾಂಧಿಜೀಗೆ ಮಾಡಿದ ಅಪಮಾನ. ಕೂಡಲೇ ಯತ್ನಾಳ್ ದೊರೆಸ್ವಾಮಿ ಅವರ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದ್ರು. ಆದ್ರೆ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಯತ್ನಾಳ್ ಈ ಮನೆಯ ಸದಸ್ಯರಲ್ಲ. ಈ ಬಗ್ಗೆ ಚರ್ಚೆ ಬೇಡ ಅಂತ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು ಸದನದ ಬಾವಿಗಿಳಿದು ಹೋರಾಟ ಮಾಡಿದವು. ಯತ್ನಾಳ್ ವಿರುದ್ಧ ಘೋಷಣೆ ಕೂಗಿದವು. ಪರಸ್ಪರ ಎರಡು ಪಕ್ಷದ ಸದಸ್ಯರು ಭಿತ್ತಿ ಪತ್ರ, ಫೋಟೋಗಳನ್ನ ಹಿಡಿದು ಗಲಾಟೆ ಮಾಡಿದ್ರು.ಗದ್ದಲ ಗಲಾಟೆ ಹಿನ್ನೆಲೆ ಸಭಾಪತಿಗಳು ಕಲಾಪ ಮಧ್ಯಾಹ್ನಕ್ಕೆ ಮುಂದೂಡಿದ್ರು.

    ಮಧ್ಯಾಹ್ನ ಬಳಿಕ ಪ್ರಾರಂಭವಾದ ಕಲಾಪದಲ್ಲೂ ವಿಪಕ್ಷ ಧರಣಿ ಮುಂದುವರಿಸಿತು. ಯತ್ನಾಳ್ ವಿರುದ್ಧ ಪ್ರತಿಭಟನೆ ಮುಂದುವರೀತು. ಮತ್ತೆ ಕಲಾಪವನ್ನ ಸಂಜೆಗೆ ಮುಂದೂಡಲಾಯ್ತು. ಸಂಜೆ ಬಳಿಕ ಮತ್ತೆ ಕಲಾಪ ಆರಂಭವಾದಾಗಲೂ ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ಗದ್ದಲ ಗಲಾಟೆ ಹಿನ್ನೆಲೆಯಲ್ಲಿ ಕಲಾಪವನ್ನ ನಾಳೆಗೆ ಮುಂದೂಡಲಾಯ್ತು.

  • ಡಿಸಿಎಂ ಸವದಿ ಹಾದಿ ಸುಗಮ

    ಡಿಸಿಎಂ ಸವದಿ ಹಾದಿ ಸುಗಮ

    ಬೆಂಗಳೂರು: ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ ಡಿಸಿಎಂ ಲಕ್ಷ್ಮಣ ಸವದಿ ಹಾದಿಗೆ ಎದುರಾಗಿದ್ದ ಸಂಕಷ್ಟ ದೂರವಾಗಿದೆ. ಸವದಿಗೆ ಎದುರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಜೆಡಿಎಸ್ ಜೊತೆ ಸೇರಿ ವಿಧಾನ ಪರಿಷತ್ ಗೆ ಅಭ್ಯರ್ಥಿ ಹಾಕುವ ನಿರ್ಧಾರದಿಂದ ಕಾಂಗ್ರೆಸ್ ಹಿಂದಕ್ಕೆ ಸರಿದಿದೆ.

    ಸೂಕ್ತ ಸಂಖ್ಯಾಬಲ ಇಲ್ಲದ ಕಾರಣಕ್ಕೆ ಸ್ಪರ್ಧೆ ಮಾಡಿ ಮುಖಭಂಗ ಮಾಡಿಕೊಳ್ಳೋದು ಬೇಡ ಎಂದು ಕಾಂಗ್ರೆಸ್ ಹೈ ಕಮಾಂಡ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ತೋರಿದೆ. ಆ ಮೂಲಕ ಜೆಡಿಎಸ್ ಜೊತೆ ಸೇರಿ ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡುವ ನಿರ್ಧಾರದಿಂದ ಕಾಂಗ್ರೆಸ್ ಹಿಂದೆ ಸರಿದಿದೆ. ಆ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ತಿ ಅಗತ್ಯವಿಲ್ಲ ಎಂದು ರಾಜ್ಯ ಕೈ ನಾಯಕರಿಗೆ ಸ್ಪಷ್ಟವಾಗಿ ಸೂಚಿಸಿದೆ ಎಂದು ತಿಳಿದು ಬಂದಿದೆ.

    ಈ ಬೆಳವಣಿಗೆಯಿಂದ ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿಯಾಗಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಗಿದೆ. ಕಾಂಗ್ರೆಸ್ ಬೆಂಬಲ ಇಲ್ಲದೆ ಜೆಡಿಎಸ್ ಸಹಾ ಫೈಟ್ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಜೆಡಿಎಸ್ ಕೈ ಚಾಚಿದ ಮೈತ್ರಿ ಪ್ರಪೋಸಲ್ ಗೆ ಕಾಂಗ್ರೆಸ್ ಒಪ್ಪದೇ ಹಿಂದೆ ಸರಿದಿದೆ. ಡಿಸಿಎಂ ಲಕ್ಷ್ಮಣ ಸವದಿ ವಿಧಾನ ಪರಿಷತ್ ಹಾದಿ ಸುಗಮವಾಗಿದ್ದು ಡಿಸಿಎಂ ಸ್ಥಾನವು ಭದ್ರವಾದಂತಾಗಿದೆ.

  • ಹಳೆ ದೋಸ್ತಿಗಳ ನಡುವೆ ಮತ್ತೆ ಚಿಗುರಿದ ಸ್ನೇಹ

    ಹಳೆ ದೋಸ್ತಿಗಳ ನಡುವೆ ಮತ್ತೆ ಚಿಗುರಿದ ಸ್ನೇಹ

    ಬೆಂಗಳೂರು: ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿ ದಿನ ಸುಮ್ಮನಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರುಗಳು ಏಕಾಏಕಿಯಾಗಿ ಈಗ ಸಕ್ರೀಯವಾಗಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಪರಿಷತ್ ಹಾದಿ ಸುಗಮ ಎಂದುಕೊಂಡಿದ್ದವರಿಗೆ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಅನಿರೀಕ್ಷಿತ ಸವಾಲು ಎಸೆದಿವೆ.

    ಕಾಂಗ್ರೆಸ್ ಮುಖಂಡ ಅನಿಲ್ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಬಿಜೆಪಿಗೆ ಸಡನ್ ಶಾಕ್ ಎದುರಾಗಿದೆ. ಸಂಖ್ಯಾ ಬಲದಲ್ಲಿ ಬಿಜೆಪಿ ಮುಂದಿದೆ. ಆದರೆ ಸಂಪುಟ ಗೊಂದಲದಲ್ಲಿ ಶುರುವಾದ ಸಣ್ಣ ಅಸಮಧಾನ ಭುಗಿಲೆದ್ದರೆ ಎನ್ನುವ ಆತಂಕ ಸಹಜವಾಗಿಯೇ ಕಮಲ ಪಾಳಯದ ನೆಮ್ಮದಿ ಕೆಡಿಸಿದೆ.

    ಸಂಖ್ಯಾ ಬಲದ ಕೊರತೆಯಿಂದ ಸುಮ್ಮನಿದ್ದ ಕಾಂಗ್ರೆಸ್ ಜೆಡಿಎಸ್ ಬಿಜೆಪಿಯ ಅಸಮಧಾನದ ಲಾಭ ಸಿಗಬಹುದು ಎನ್ನುವ ಆಸೆಯಲ್ಲಿ ತೆರೆಮರೆಯಲ್ಲೇ ಕೈ ಜೋಡಿಸಲು ಮುಂದಾಗಿವೆ. ಸಂಪುಟ ವಿಸ್ತರಣೆ, ಮೂಲ ಹಾಗೂ ವಲಸಿಗ ಗಲಾಟೆ ಎಲ್ಲವು ಸೇರಿ ಗೊಂದಲ ಹೆಚ್ಚಾದರೆ ಮುಂದಿನ ದಿನಗಳಲ್ಲಾದರೂ ಅದರ ಲಾಭ ಪಡೆಯಬಹುದು ಎನ್ನುವ ಆಸೆ ಹಳೆ ದೋಸ್ತಿಗಳಲ್ಲಿ ಚಿಗುರಿದಂತಿದೆ.

    ಸಿಕ್ಕ ಅವಕಾಶವನ್ನ ಬಳಸಿಕೊಂಡು ಬಿಜೆಪಿಗೆ ಟಕ್ಕರ್ ನೀಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಪರಿಷತ್ ಅಖಾಡದಲ್ಲಿ ಕೈ ಜೋಡಿಸಲು ಮುಂದಾದಂತಿದೆ. ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಲಾಭ ಸಿಗುತ್ತದೋ ಗೊತ್ತಿಲ್ಲ. ಆದರೆ ತೆರೆ ಮರೆ ಪ್ರಯತ್ನದಲ್ಲಿ ದೋಸ್ತಿಗಳ ನಡುವೆ ಪರಸ್ಪರ ವಿಶ್ವಾಸ ಮೂಡಿದರೆ ಮುಂದಿನ ದಿನಗಳಲ್ಲಿ ಇಬ್ಬರು ಸೇರಿಕೊಂಡು ಪರಿಸ್ಥಿತಿಯ ಲಾಭ ಪಡೆಯಬಹುದು ಎನ್ನುವ ಲೆಕ್ಕಾಚಾರವಂತು ಇದ್ದಂತಿದೆ.

  • ಆಂಧ್ರದಲ್ಲಿ ಪರಿಷತ್ ರದ್ದತಿಗೆ ನಿರ್ಧಾರ – ಕರ್ನಾಟಕದಲ್ಲಿ ರದ್ದಾಗಬೇಕೇ..?

    ಆಂಧ್ರದಲ್ಲಿ ಪರಿಷತ್ ರದ್ದತಿಗೆ ನಿರ್ಧಾರ – ಕರ್ನಾಟಕದಲ್ಲಿ ರದ್ದಾಗಬೇಕೇ..?

    ಬದ್ರುದ್ದೀನ್ ಕೆ ಮಾಣಿ
    ಚಿಂತಕರ ಚಾವಡಿ, ಹಿರಿಯರ ಮನೆ ಎಂದೇ ಕರೆಯಲ್ಪಡುವ `ಮೇಲ್ಮನೆ’ ಅಂದ್ರೆ `ವಿಧಾನಪರಿಷತ್’ನ ಅಗತ್ಯ ಕರ್ನಾಟಕದಲ್ಲಿ ಇದೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ ಆಂಧ್ರಪ್ರದೇಶ ಸರ್ಕಾರದ ನಿರ್ಧಾರ. ಅಲ್ಲಿನ ವಿಧಾನಪರಿಷತ್ ರದ್ದುಗೊಳಿಸಬೇಕೆಂಬ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೈಗೊಂಡ ನಿರ್ಣಯ ಹಲವು ರೀತಿಯ ಚರ್ಚೆಗಳಿಗೆ ಅವಕಾಶ ಕಲ್ಪಿಸಿದೆ. ಜನರಿಂದ ನೇರವಾಗಿ ಚುನಾಯಿತರಾಗುವ ವಿಧಾನಸಭೆಗೆ ಪರ್ಯಾಯವಾಗಿ, ಪರೋಕ್ಷವಾಗಿ ಅಧಿಕಾರದ ಸದನ ವಿಧಾನಪರಿಷತ್ ಅನ್ನೋದು ಗೊತ್ತಿರುವ ವಿಷಯ. ವಿಧಾನಸಭೆ ಕೈಗೊಳ್ಳುವ ನಿರ್ಣಯಗಳು, ಅನುಮೋದಿಸುವ ವಿಧೇಯಕಗಳನ್ನು ಮತ್ತೊಮ್ಮೆ ಪರಾಮರ್ಶಿಸುವ ಸಲುವಾಗಿ ರಚನೆಗೊಂಡಿರುವ ಸದನವಿದು. ವಿವಿಧ ಕ್ಷೇತ್ರಗಳ ಸಾಧಕರು, ಪರಿಣತರು, ತಜ್ಞರನ್ನು ಒಳಗೊಂಡ ಚಿಂತಕರ ಚಾವಡಿ, ಹಿರಿಯರ ಮನೆಯೆಂದೇ ಕರೆಯಲ್ಪಡುವ ಮೇಲ್ಮನೆ, ಇತ್ತೀಚೆಗೆ ರಾಜಕಾರಣಿಗಳ ಪುನರ್ವಸತಿ ಕೇಂದ್ರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿದೆ. `ಬಿಳಿ ಆನೆ’ಯಾಗಿರುವ ಈ ಸದನದ ಔಚಿತ್ಯದ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದ್ದೂ ಇದೆ. ಬಹುತೇಕ ಸಂದರ್ಭ ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಬಹುಮತವಿಲ್ಲದೇ ಇರಿಸು-ಮುರಿಸು ಉಂಟಾದಾಗ ಮಾತ್ರ ಪರಿಷತ್ ಅಗತ್ಯತೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಆ ಕೂಗಿಗೆ ಸೂಕ್ತ ಬೆಂಬಲ ಸಿಗದೆ ಈ ವಿಷಯ ಅಲ್ಲೇ ನಿಂತು ಹೋಗುತ್ತಿತ್ತು. ನೆರೆಯ ಆಂಧ್ರಪ್ರದೇಶ ಸರ್ಕಾರದ `ರದ್ದು’ ನಿರ್ಧಾರ ಮತ್ತೊಮ್ಮೆ ಈ ಚರ್ಚೆಗೆ ಅವಕಾಶ ಕಲ್ಪಿಸಿದೆ.

    ಆಂಧ್ರದಲ್ಲಿ `ವಿಧಾನಪರಿಷತ್’ ರದ್ದಾಗುವುದು ಇದೇ ಮೊದಲಲ್ಲ. 1958ರಿಂದ 1985ರವರೆಗೆ ಅಲ್ಲಿ ಅಸ್ತಿತ್ವದಲ್ಲಿದ್ದ ಪರಿಷತ್, ಅಂದಿನ ರಾಜಕೀಯ ಮೇಲಾಟಗಳಿಗಾಗಿ ರದ್ದಾಗಿತ್ತು. ಆದರೆ ಮತ್ತೆ ವಿಧಾನಪರಿಷತ್ ಅಸ್ತಿತ್ವಕ್ಕೆ ತರುವ ಪ್ರಯತ್ನ ಕೇವಲ 5 ವರ್ಷಗಳಲ್ಲಿ ಆರಂಭವಾಯಿತಾದರೂ, ಅದು ಕೈಗೂಡಲು ಮತ್ತೆ 17 ವರ್ಷಗಳು ಬೇಕಾಯಿತು. ಆಂಧ್ರ ಶಾಸನ ಸಭೆಯಲ್ಲಿ 1990ರಲ್ಲೇ ಮತ್ತೆ ಪರಿಷತ್ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತಾದರೂ, ಅದು ಕೈಗೂಡಲು 2007ರವರೆಗೂ ಕಾಯಬೇಕಾಯಿತು. ಯಾಕೆಂದರೆ 1990ರಲ್ಲಿ ಆಂಧ್ರ ವಿಧಾನಸಭೆ ನಿರ್ಣಯಕ್ಕೆ ರಾಜ್ಯಸಭೆ ಒಪ್ಪಿಗೆ ನೀಡಿತಾದರೂ, ಲೋಕಸಭೆಯಲ್ಲಿ ಒಪ್ಪಿಗೆ ಸಿಗಲಿಲ್ಲ. 1991ರಿಂದ ನಡೆದ ಕೆಲವು ರಾಜಕೀಯ ವಿದ್ಯಮಾನಗಳಿಂದಾಗಿ ಆಂಧ್ರದ ಕೋರಿಗೆ ಮನ್ನಣೆ ಸಿಗಲೇ ಇಲ್ಲ. 2004ರಲ್ಲಿ ಮತ್ತೆ ನಿರ್ಣಯ ಕೈಗೊಂಡ ಆಂಧ್ರ ಸರ್ಕಾರ, 2006ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 2 ಸದನಗಳಲ್ಲಿ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗಾಗಿ 2007ರಲ್ಲಿ ಮತ್ತೆ ಅಸ್ತಿತ್ವಕ್ಕೆ ಬಂದ ಆಂಧ್ರ ವಿಧಾನಪರಿಷತ್ ಈವರೆಗೂ ಕಾರ್ಯನಿರ್ವಹಿಸುತ್ತಿದೆ.

     

    ಇತ್ತೀಚೆಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನೇರಿದ ವೈಎಸ್‍ಆರ್ ಪಕ್ಷದ ಜಗನ್ಮೋಹನ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಅಲ್ಲಿನ ವಿಧಾನಪರಿಷತ್‍ನಲ್ಲಿ ಬಹುಮತವಿಲ್ಲ. ಕೆಲ ದಿನಗಳ ಹಿಂದೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳು ಮತ್ತು ವಿಧೇಯಕಗಳನ್ನು ತೆಲುಗುದೇಶಂ ಪಕ್ಷದ ಬಹುಮತವಿರುವ ಪರಿಷತ್ ತಿರಸ್ಕರಿಸಿತ್ತು. ಇದರಿಂದ ಕೆರಳಿದ ಸಿಎಂ ಜಗನ್ಮೋಹನ ರೆಡ್ಡಿ ವಿಧಾನಪರಿಷತ್ ಅನ್ನೇ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಆರ್ಥಿಕ ಹೊರೆ. ಆದರೆ ಈ ನಿರ್ಣಯಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಅನುಮೋದನೆ ಬೇಕು. ಅದಾದ ಬಳಿಕವಷ್ಟೇ ವಿಧಾನಪರಿಷತ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ.

    ಆದರೆ, ಕರ್ನಾಟಕದ ವಿಧಾನಪರಿಷತ್‍ಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಅದು ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ರಚಿಸಲ್ಪಟ್ಟ ಮೇಲ್ಮನೆ. ರಾಜಾಡಳಿತ ಇರುವಾಗಲೇ ಜನರೊಂದಿಗೆ ನೇರವಾಗಿ ಹೊಂದಿಕೊಂಡಿರುವ ಅನುಭವಿಗಳ ಸದನವನ್ನು ರಚಿಸಿ, ರಾಜರಿಗೆ ಸಲಹೆ ನೀಡುವ ಪದ್ಧತಿ ತರಲಾಯಿತು. 1907ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ವ್ಯವಸ್ಥೆಯನ್ನು ಜಾರಿಗೆ ತಂದರು. 10ಕ್ಕಿಂತ ಕಡಿಮೆಯಿಲ್ಲದೇ 15ಕ್ಕಿಂತ ಹೆಚ್ಚಿರದ ಸದಸ್ಯರನ್ನು ಒಳಗೊಂಡ ಮೇಲ್ಮನೆಯನ್ನು ಅಸ್ತಿತ್ವಕ್ಕೆ ತಂದರು. ಅದರಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು, ಪರಿಣತರು, ಸಮಾಜ ಸುಧಾರಕರು ಇರುತ್ತಿದ್ದರು. ಕಾಲಕ್ರಮೇಣ ಸ್ವಾತಂತ್ರ್ಯ ಸಿಗುವ ವೇಳೆಗೆ ನಾಮನಿರ್ದೇಶಿತ, ಚುನಾಯಿತ ಅಧಿಕಾರೇತರ ಮೇಲ್ಮನೆ ಸದಸ್ಯರ ಸಂಖ್ಯೆ 50 ತಲುಪಿತ್ತು. ಮೈಸೂರು ವಿಧಾನಪರಿಷತ್ ಅಂತಲೇ ಅಸ್ತಿತ್ವದಲ್ಲಿದ್ದ ಈ `ಚಿಂತಕರ ಚಾವಡಿ’ಯ ಸದಸ್ಯರ ಸಂಖ್ಯೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದಾಗ 63ರ ಸದನವಾಗಿತ್ತು. 1987ರಲ್ಲಿ ಕರ್ನಾಟಕ ವಿಧಾನಪರಿಷತ್‍ನ ಸಂಖ್ಯೆ 75ಕ್ಕೇರಿತು.

    ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆ ಮೂರನೇ ಒಂದರಷ್ಟಕ್ಕಿಂತ `ಪರಿಷತ್’ ಸದಸ್ಯರ ಸಂಖ್ಯೆ ಮೀರಬಾರದೆಂಬ ನಿಯಮದಂತೆ ಗರಿಷ್ಟ 75 ಸದಸ್ಯರನ್ನು ಒಳಗೊಂಡಿದೆ ನಮ್ಮ ಮೇಲ್ಮನೆ. ಇಲ್ಲಿ 25 ಸದಸ್ಯರನ್ನು ವಿಧಾನಸಭೆ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇನ್ನು 25 ಸದಸ್ಯರು ಸ್ಥಳೀಯ ಸಂಸ್ಥೆಗಳ ಮೂಲಕ (ಗ್ರಾ.ಪಂ, ತಾ.ಪಂ, ಜಿ.ಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಪಾಲಿಕೆ ಸದಸ್ಯರು) ಚುನಾಯಿಸಲಾಗುತ್ತೆ. 7 ಸದಸ್ಯರು ಪದವೀಧರ ಕ್ಷೇತ್ರದಿಂದ, 7 ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 11 ಸದಸ್ಯರನ್ನು ಅಧಿಕಾರದಲ್ಲಿರುವ ಸರ್ಕಾರಗಳು ನಾಮನಿರ್ದೇಶನ ಮಾಡುತ್ತವೆ. ನಾಮನಿರ್ದೇಶನಗೊಳ್ಳುವವರು ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು, ತಜ್ಞರು, ಸಾಹಿತಿಗಳು, ಕಲಾವಿದರು ಇರಬೇಕೆಂಬುದು ನಿಯಮ. ಆದರೆ ಇತ್ತೀಚೆಗೆ ಇವರ್ಯಾರು ಮೇಲ್ಮನೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಅನ್ನೋದು ವಾಸ್ತವ.

    ರಾಜಕೀಯ ಪಕ್ಷಗಳು ತಮ್ಮ ಪಕ್ಷದ ನಾಯಕರಿಗೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದಾಗ, ಅನಿವಾರ್ಯ ಸಂದರ್ಭದಲ್ಲಿ ಅಧಿಕಾರ ನೀಡಬೇಕಾದರೆ, ಬಂಡಾಯ ಶಮನ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ವಿಧಾನಪರಿಷತ್‍ಗೆ ಚುನಾಯಿಸುವುದು, ನಾಮನಿರ್ದೇಶನ ಮಾಡುವ ಪರಿಪಾಠ ಬಂದಿದೆ. ಸದನದ ಬಹುತೇಕ ಸದಸ್ಯರು ವಿವಿಧ ರಾಜಕೀಯ ಪಕ್ಷಗಳಿಂದ ಅಡ್ಜಸ್ಟ್ ಮೆಂಟ್ ಮೂಲಕ ಬಂದವರೇ ಆಗಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾಯಿಸುವ ಸಂದರ್ಭದಲ್ಲಿ `ಬಲಿಷ್ಠ’ರಾದವರೇ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಂಡಾಯವಾಗಿ, ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಸಭೆ ಸದಸ್ಯರಿಂದ ಅಡ್ಡ ಮತದಾನ ಮಾಡಿಸಿಕೊಂಡು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಲವರು ಸದನ ಪ್ರವೇಶಿಸಿದ್ದೂ ಉಂಟು. ಇತ್ತಿಚೇಗೆ ಮೇಲ್ಮನೆ ಪ್ರವೇಶಿಸಲು ಕೋಟಿಗಟ್ಟಲೆ ದುಡ್ಡು ಚೆಲ್ಲುವ ಪರಿಪಾಠ ಆರಂಭವಾಗಿದೆ. ಹಲವು ನಾಯಕರು `ಸ್ಟೇಟಸ್’ಗೋಸ್ಕರ ಸದನದ ಸದಸ್ಯರಾಗಲು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ನಾಚುವಂತೆ ಹಣ-ಹೆಂಡದ ಪ್ರಭಾವ ನಡೆಯುವುದು ಸಾಮಾನ್ಯವಾಗಿದೆ.

    ಪದವೀಧರರು ಮತ್ತು ಶಿಕ್ಷಕರು ಚುನಾಯಿಸುವ ಕ್ಷೇತ್ರಗಳ ಚುನಾವಣೆಯಂತೂ, ನಾವೆಲ್ಲಾ ತಲೆ ತಗ್ಗಿಸುವಂತೆ ನಡೆಯುತ್ತಿರುವುದು ನಾಚಿಕೆಗೇಡು. ನಾಮನಿರ್ದೇಶನಕ್ಕೆ ವಿವಿಧ ಕ್ಷೇತ್ರಗಳ ಸಾಧನೆ, ಪರಿಣತಿ ಲೆಕ್ಕಕ್ಕೇ ಬರುತ್ತಿಲ್ಲ. ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಮಾಜಸೇವಕರ ಹೆಸರಿನಲ್ಲಿ ಮತ್ತೆ ಅದೇ ರಾಜಕಾರಣಿಗಳು ಮೇಲ್ಮನೆ ಪ್ರವೇಶಿಸುತ್ತಾರೆ. ಹೀಗಾಗಿ, ಚಿಂತಕರ ಚಾವಡಿ, ಹಿರಿಯರ ಮನೆ ಎಂಬ ಹೆಗ್ಗಳಿಕೆಯ ಮೇಲ್ಮನೆ ಅರ್ಥ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮೇಲ್ಮನೆಯೂ ಗಂಭೀರತೆ ಕಳೆದುಕೊಳ್ಳುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಅಲ್ಲಿ ಉತ್ತಮ ಗುಣಮಟ್ಟದ ಚರ್ಚೆಗಳೂ ಆಗುತ್ತಿಲ್ಲ ಎನ್ನುವ ಅಭಿಪ್ರಾಯ ಕೂಡ ಇದೆ. ಮಿತಿಮೀರಿದ ವರ್ತನೆ, ಪರಸ್ಪರ ಬೈದಾಟ, ಕಚ್ಚಾಟ, ಕಿತ್ತಾಟ, ಸರ್ವೆಸಾಮಾನ್ಯವಾಗಿ ಹೋಗಿ ಸದನದ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ಭಾವನೆ ಮೂಡತೊಡಗಿದೆ.

    ವಿಧಾನಸಭೆ ಸದಸ್ಯರ ಮಾದರಿಯಲ್ಲಿ ಎಲ್ಲಾ 75 ಸದಸ್ಯರಿಗೂ ವಾರ್ಷಿಕ ತಲಾ 2 ಕೋಟಿ ರೂಪಾಯಿ ವಿವೇಚನಾನುದಾನವನ್ನು ಸರ್ಕಾರ ನೀಡುತ್ತಿದೆ. ಅದಕ್ಕೆ ಒಟ್ಟು ವಾರ್ಷಿಕ 150 ಕೋಟಿ ರೂಪಾಯಿ ಮೀಸಲಿಡಬೇಕು. ಅದು ಜನರ ಕಲ್ಯಾಣಕ್ಕೆ ವ್ಯಯವಾಗುತ್ತದೆ ಎಂದೇ ಹೇಳೋಣ. ಆದರೆ ಸದನದ ಸದಸ್ಯರ ಖರ್ಚು, ವೆಚ್ಚ, ಸಂಬಳ, ಸಾರಿಗೆ, ಅದು-ಇದೂ ಭತ್ಯೆ ಅಂತಾ ಹೇಳಿ, ವರ್ಷಕ್ಕೆ ಕೋಟಿಗಟ್ಟಲೆ ಖರ್ಚಾಗುತ್ತಿದೆ. ಸದನ ನಡೆಸಲು ಕೂಡ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗುತ್ತಿದೆ. ಗುಣಮಟ್ಟದ ಚರ್ಚೆಗಳಾಗದೇ, ರಾಜ್ಯದ ಕಲ್ಯಾಣಕ್ಕಾಗಿ ಉಪಯುಕ್ತ ಕೊಡುಗೆ ನೀಡಲಾಗದ ಸದನದ ಅಗತ್ಯತೆ ಏನು ಅನ್ನೋ ಪ್ರಶ್ನೆ ಉದ್ಭವವಾಗುವುದು ಸಹಜ. ಯಾರನ್ನೋ ಮೆಚ್ಚಿಸಲು, ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಮೇಲಾಟಕ್ಕೆ ಜನರ ತೆರಿಗೆಯಿಂದ ನೂರಾರು ಕೋಟಿ ವ್ಯಯಿಸಿ ನಡೆಸುವ ಇಂತಹ ವ್ಯವಸ್ಥೆ ಬೇಕೆ..? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಹಾಗಂತ ನಮ್ಮ ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಇಂತಹ ಸದನದ ಅನಿವಾರ್ಯತೆ ಏನೂ ಇಲ್ಲ. ದೇಶದ 6 ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಅಸ್ತಿತ್ವದಲ್ಲಿರೋದು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ವಿಧಾನಪರಿಷತ್ ಇದೆ. ಜಮ್ಮು-ಕಾಶ್ಮೀರದಲ್ಲೂ ಈ ಸದನ ಇತ್ತೀಚೆಗೆ ಅಸ್ತಿತ್ವ ಕಳೆದುಕೊಂಡಿದೆ. ಮೌಲ್ಯ ಕಳೆದುಕೊಳ್ಳುತ್ತಿರುವ `ವಿಧಾನಪರಿಷತ್’ ಬೇಕೇ..? ಅಥವಾ ಹಿರಿಯರ ಮನೆ ಎಂದು ಕರೆಸಿಕೊಳ್ಳುವ `ಮೇಲ್ಮನೆ’ ತನ್ನ ಗೌರವವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬದಲಾಯಿಸಿಕೊಂಡು ಅಸ್ತಿತ್ವದಲ್ಲಿರಬೇಕೇ ಎಂಬುದು ನಮ್ಮ ಮುಂದಿನ ಆಯ್ಕೆ. ನಿಜ, ಅನೇಕ ಗಣ್ಯಾತಿಗಣ್ಯರು, ಸಮಾಜಸುಧಾರಕರು, ತಜ್ಞರು, ಸಾಧಕರು ಪ್ರತಿನಿಧಿಸಿ ನಮ್ಮ ವ್ಯವಸ್ಥೆ ಸುಧಾರಣೆಗೆ ಅಪಾರ ಕೊಡುಗೆ ನೀಡಲು ಕಾರಣೀಭೂತವಾಗಿರುವ `ಚಿಂತಕರ ಚಾವಡಿ’ ಮುಂದುವರಿಯಬೇಕಾದರೆ, ಅದರ ಗೌರವ ಉಳಿಯಬೇಕಾದರೆ ಬದಲಾವಣೆ ಅಗತ್ಯ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಅನ್ನೋದೇ ಪ್ರಶ್ನೆ..?

  • ಟಿಕೆಟ್ ಸಿಗದಿದ್ರೂ ಅನರ್ಹ ಶಾಸಕ  ಶಂಕರ್​ಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್

    ಟಿಕೆಟ್ ಸಿಗದಿದ್ರೂ ಅನರ್ಹ ಶಾಸಕ ಶಂಕರ್​ಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್

    ತುಮಕೂರು: ಅನರ್ಹ ಶಾಸಕ ಶಂಕರ್ ಅವರಿಗೆ ಬಿಜೆಪಿ ಭರ್ಜರಿ ಗಿಫ್ಟ್ ನೀಡಿದೆ. ಶಂಕರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

    ಸೊಗಡು ಶಿವಣ್ಣ ನಿವಾಸದ ಬಳಿ ಮಾಧ್ಯಮಗಳು ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದರೂ ರಾಣಿಬೆನ್ನೂರು ಕ್ಷೇತ್ರದ ಟಿಕೆಟ್ ಇನ್ನೂ ಯಾಕೆ ಹಂಚಿಕೆ ಮಾಡಿಲ್ಲ ಎಂದು ಬಿಎಸ್‍ವೈಯನ್ನು ಪ್ರಶ್ನಿಸಿದ್ದಕ್ಕೆ, ಶಂಕರ್ ಅವರನ್ನು ಪರಿಷತ್‍ಗೆ ಆಯ್ಕೆ ಮಾಡಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಹೇಳಿದ್ದಾರೆ.

    ಈ ವೇಳೆ ಶಿವಾಜಿನಗರದ ನಾಯಕ ರೋಷನ್ ಬೇಗ್ ಬಗ್ಗೆ ಬಿಜೆಪಿ ಸೇರ್ಪಡೆ ಬಗ್ಗೆ ಕೇಳಲಾದ ಪ್ರಶ್ನೆಗೆ, ಇನ್ನೂ ಚರ್ಚೆ ಮಾಡುತ್ತಿದ್ದೇವೆ. ಚರ್ಚೆ ಮಾಡಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

    ಇಂದು ಬಿಜೆಪಿಗೆ 16 ಮಂದಿ ಅನರ್ಹ ಶಾಸಕರು ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ಬೆನ್ನಲ್ಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ಟಿಕೆಟ್ ಗಳನ್ನು ಅನರ್ಹರಿಗೆ ಬಿಜೆಪಿ ಹಂಚಿಕೆ ಮಾಡಿದೆ. ಈ ಮೂಲಕ ಅನರ್ಹರಿಗೆ ನೀಡಿದ ವಚನವನ್ನು ಸಿಎಂ ಈಡೇರಿಸಿದ್ದಾರೆ.

    ರಮೇಶ್ ಜಾರಕಿಹೊಳಿ(ಗೋಕಾಕ್), ಎಂಟಿಬಿ ನಾಗರಾಜ್(ಹೊಸಕೋಟೆ), ಎಚ್. ವಿಶ್ವನಾಥ್(ಹುಣಸೂರು), ಮಹೇಶ್ ಕುಮಟಳ್ಳಿ(ಅಥಣಿ) ಶ್ರೀಮಂತ ಪಾಟೀಲ್(ಕಾಗವಾಡ) ಶಿವರಾಂ ಹೆಬ್ಬಾರ್(ಯಲ್ಲಾಪುರ) ಬಿಸಿ ಪಾಟೀಲ್(ಹಿರೇಕೆರೂರು) ಆನಂದ್ ಸಿಂಗ್ (ವಿಜಯ ನಗರ), ಡಾ.ಸುಧಾಕರ್(ಚಿಕ್ಕಬಳ್ಳಾಪುರ) ಬೈರತಿ ಬಸವರಾಜ್(ಕೆಆರ್ ಪುರ) ಎಸ್‍ಟಿ ಸೋಮಶೇಖರ್(ಯಶವಂತಪುರ), ಗೋಪಾಲಯ್ಯ(ಮಹಾಲಕ್ಷ್ಮಿ ಲೇಔಟ್), ನಾರಾಯಣ ಗೌಡ(ಕೆ.ಆರ್.ಪೇಟೆ) ಅವರಿಗೆ ಟಿಕೆಟ್ ನೀಡಲಾಗಿದೆ.

    ಅನರ್ಹ ಶಾಸಕರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಯಡಿಯೂರಪ್ಪ, ಇದೊಂದು ಐಹಿಹಾಸಿಕ ದಿನ. ಬಹುಶಃ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಈ 17 ಮಂದಿ ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾರಣ. ಅವರು ತಮ್ಮ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಮಗಾಗಿ ಎಲ್ಲಾ ರೀತಿಯ ತ್ಯಾಗವನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ನಂತರ ಅವರೆಲ್ಲರೂ ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಸದಸ್ಯತ್ವವನ್ನು ಪಡೆದು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.

    ರಾಜೀನಾಮೆ ಕೊಟ್ಟು ನಮ್ಮ ಜೊತೆ ಬಂದಂತಹ ವೇದಿಕೆ ಮೇಲಿರುವ ಶಾಸಕರಿಗೆ, ಬೆಂಬಲಿಗರಿಗೆ ಸಿಎಂ ಆಗಿ ನಳಿನ್ ಕುಮಾರ್ ಅವರ ಪರವಾಗಿ ಭರವಸೆ ಕೊಡುತ್ತಿದ್ದೇನೆ. ನಾವೇನು ನಿಮಗೆ ಭರವಸೆ ಮಾತನ್ನು ಕೊಟ್ಟಿದ್ದೀವೋ ಅದನ್ನು ನಾವು ಅಕ್ಷರಶಃ ಪಾಲಿಸುತ್ತೇವೆ. ನಿಮಗೆ ನಂಬಿಕೆದ್ರೋಹ ಅಥವಾ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

    ಬಹುಶಃ ದೇಶದ ರಾಜಕಾರಣದಲ್ಲಿ ಈ ರೀತಿ 17 ಮಂದಿ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ಇವರು ನಮಗಾಗಿ ಎಲ್ಲಾ ರೀತಿಯ ತ್ಯಾಗ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಕೈ ಜೊಡಿಸಿ ಪ್ರಾರ್ಥಿಸುತ್ತೇನೆ, ಇವರ ಗೆಲುವು ನಮ್ಮ ಜವಾಬ್ದಾರಿ. ಉಪಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.

  • ನಾಳೆಯೂ ಸದನದಲ್ಲಿ ಪ್ರತಿಭಟನೆಗೆ ನಿರ್ಧಾರ: ಶ್ರೀನಿವಾಸ ಪೂಜಾರಿ

    ನಾಳೆಯೂ ಸದನದಲ್ಲಿ ಪ್ರತಿಭಟನೆಗೆ ನಿರ್ಧಾರ: ಶ್ರೀನಿವಾಸ ಪೂಜಾರಿ

    ಬೆಂಗಳೂರು: ಆಡಳಿತ ಪಕ್ಷ ಹಾಗೂ ಬಿಜೆಪಿ ನಾಯಕರ ಗಲಾಟೆಯಿಂದಾಗಿ ವಿಧಾನ ಪರಿಷತ್ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

    ಕಲಾಪದಿಂದ ಹೊರಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ಶುದ್ಧ ನೀರಿನ ಘಟಕಗಳ ಅಳವಡಿಕೆಯಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ. ಈ ಕುರಿತು ತನಿಖೆಗೆ ನಡೆಸಲು ಸದನ ಸಮಿತಿಗೆ ಕೊಡದಿದ್ದರೆ ನಾಳೆಯೂ ಸದನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.

    ಶುದ್ಧ ನೀರಿನ ಘಟಕಗಳ ಅವ್ಯವಹಾರದ ಬಗ್ಗೆ ತನಿಖೆಗೆ ಕಲಾಪದಲ್ಲಿ ಬಿಜೆಪಿ ಒತ್ತಾಯಿಸಿದೆ. ಆದರೆ ಸರ್ಕಾರ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾದ ಕೆಲವೇ ದಿನಗಳಲ್ಲಿ ಹಾಳಾಗಿವೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಈ ಕುರಿತು ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಕಲಾಪದಲ್ಲಿ ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ ಅವರು, ಬೆಂಗಳೂರು ಭಾಗದಲ್ಲಿ ಪಂಚಾಯತಿ ಮಟ್ಟದಲ್ಲಿ ನೀರಿನ ಘಟಕಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಬೇರೆ ಜಿಲ್ಲೆಯಲ್ಲಿ ಆಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಏಜೆನ್ಸಿ ಮೂಲಕ ಶುದ್ಧ ನೀರು ಘಟಕ ನಿರ್ವಹಣೆಗೆ ಕ್ರಮವಹಿಸಿದ್ದೇವೆ. ಈ ಕುರಿತು ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಟೆಕ್ನಿಕಲ್ ಕಮಿಟಿ ನೇಮಕ ಮಾಡಲಾಗಿದೆ. ಆ ವರದಿ ಬಂದ ಮೇಲೆ ಮುಂದಿನ ಕ್ರಮಕ್ಕೆ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಬಿಜೆಪಿ ಸದಸ್ಯರು ಇದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಆಡಳಿತ ಪಕ್ಷದ ಸದಸ್ಯರಿಗೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದ ಪ್ರಸಂಗ ವಿಧಾನ ಪರಿಷತ್ ಕಲಾದಪಲ್ಲಿ ನಡೆಯಿತು.

    ಆಪರೇಷನ್ ಆಡಿಯೋ ಪ್ರಕರಣ ವಿಧಾನ ಪರಿಷತ್ ಕಲಾಪದಲ್ಲಿಯೂ ಭಾರೀ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಯಿತು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಇದನ್ನು ಖಂಡಿಸಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಆಡಳಿತ ಪಕ್ಷಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಆಪರೇಷನ್ ಆಡಿಯೋ ವಿಚಾರ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ತಿಳಿ ಹೇಳಿದರು. ಆದರೂ ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಮಧ್ಯೆ ವಾಗ್ದಾಳಿ ನಡೆದೇ ಇತ್ತು. ಹೀಗಾಗಿ 5 ನಿಮಿಷಗಳಂತೆ ಎರಡು ಬಾರಿ ಅಧಿವೇಶನ ಮುಂದಕ್ಕೂಡಿದರೂ ಸದಸ್ಯರು ಪರಸ್ಪರ ವಾಗ್ದಾಳಿ ಮುಂದುವರಿಸಿದ್ದರು.

    ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ಆಪರೇಷನ್ ಆಡಿಯೋ ಬಗ್ಗೆ ನೀವು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಜೋರು ಧ್ವನಿಯಲ್ಲಿ ಗದರಿದರು.

    ಸಭಾಪತಿ ಗದರಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಆದರೆ ಸಭಾಪತಿಗಳು ಮನವಿಯನ್ನು ತಳ್ಳಿ ಹಾಕಿದರು. ಇದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಧರಣಿ ಆರಂಭಿಸಿದರು. ಈ ವೇಳೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದರು.

    ಆಡಳಿತ ಪಕ್ಷದ ಧರಣಿ ಹಾಗೂ ಬಿಜೆಪಿಯ ವಾಗ್ದಾಳಿಯಿಂದಾಗಿ ಸಭಾಪತಿಗಳು ಒಂದು ಗಂಟೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾಗಿದ್ದರೂ ಆಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಇದರಿಂದಾಗಿ ಬಿಜೆಪಿಯ ಸದಸ್ಯರು ಸಭಾತ್ಯಾಗ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv