Tag: vidhan parishad

  • ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    – ಆದರೂ 52 ಕೋಟಿ ಸಾಲಗಾರ

    ಬೆಂಗಳೂರು: ವಿಧಾನ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಮೇಲ್ಮನೆ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಭ್ಯರ್ಥಿಗಳಾದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರು ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಆಸ್ತಿಯನ್ನು ಫೋಷಿಸಿಕೊಂಡಿದ್ದಾರೆ. ಎಂಟಿಬಿ ವಿರುದ್ಧ ಒಂದು ಪೊಲೀಸ್ ದೂರು ಇದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.

    ಎಂಟಿಬಿ ಹೆಸರಲ್ಲಿ ಒಟ್ಟು 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಎಂಟಿಬಿ ಹೆಸರಲ್ಲಿ 461 ಕೋಟಿ ರೂ. ಚರಾಸ್ತಿ, 416 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಲ್ಲಿ 160 ಕೋಟಿ ರೂ. ಚರಾಸ್ತಿ, 179ಕೋಟಿ ರೂ. ಸ್ಥಿರಾಸ್ತಿ ಇದೆ. ಅಲ್ಲದೇ ಎಂಟಿಬಿ 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.

    ಎಂಟಿಬಿ ಆಸ್ತಿ ವಿವರ:
    ಎಂಟಿಬಿ ನಾಗರಾಜ್ ಬಳಿ ನಗದು 32.60 ಲಕ್ಷ ರೂ. ಇದೆ. ಇನ್ನೂ ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ ನಗದು 45.60 ಲಕ್ಷ ರೂ. ಇದೆ. ಅಲ್ಲದೇ ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ. ಇದೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ 144.41 ಕೋಟಿ ರೂ. ಪತ್ನಿ ಬ್ಯಾಂಕ್ ಸೇವಿಂಗ್ಸ್ 11.21 ಕೋಟಿ ರೂ., ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ 34.08 ಕೋಟಿ ರೂ. ಇದೆ.

    ಎಂಟಿಬಿ ಬಾಂಡ್ ಮತ್ತು ಷೇರುಗಳ ಮೊತ್ತ 12 ಕೋಟಿ ರೂ. ಆಗಿದೆ. ಪತ್ನಿ ಹೆಸರಿನಲ್ಲಿರುವ ವಿವಿಧ ಬಾಂಡ್ ಮತ್ತು ಷೇರುಗಳ ಮೊತ್ತ 70 ಕೋಟಿ ರೂ. ಇದೆ. ಅಲ್ಲದೇ ಎಂಟಿಬಿ ಮಾಡಿರುವ ಸಾಲ, ಕೊಟ್ಟಿರುವ ಸಾಲ ಒಟ್ಟು ಸೇರಿ 285 ಕೋಟಿ ರೂ. ಇದೆ. ಪತ್ನಿ ಮಾಡಿದ ಸಾಲ, ಕೊಟ್ಟ ಸಾಲದ ಒಟ್ಟು ಮೊತ್ತ 41 ಕೋಟಿ ರೂ. ಆಗಿದೆ. ಇನ್ನೂ ಎಂಟಿಬಿ 2.48 ಕೋಟಿ ಮೌಲ್ಯದ ವಿವಿಧ ವಾಹನಗಳಿವೆ. ಪತ್ನಿಯು ಕೂಡ 1.72 ಕೋಟಿ ಮೌಲ್ಯದ ವಿವಿಧ ವಾಹನಗಳ ಒಡತಿಯಾಗಿದ್ದಾರೆ.

    ಎಂಟಿಬಿ ಹೊಂದಿರುವ ಕೃಷಿ, ವಿವಿಧ ಕಟ್ಟಡಗಳ ಒಟ್ಟು ಸ್ಥಿರಾಸ್ತಿ ಮೌಲ್ಯ 422.75 ಕೋಟಿ ರೂ. ಆಗಿದೆ. ಪತ್ನಿಯು ಒಟ್ಟು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳ ಒಡತಿ ಆಗಿದ್ದಾರೆ. ಆದರೂ ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ. ಪತ್ನಿ ಮಾಡಿರುವ ಸಾಲ 1.97 ಕೋಟಿ ರೂ. ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

    ಎಂಟಿಬಿ ಪಿತ್ರಾರ್ಜಿತ ಆಸ್ತಿ ಕೇವಲ 6.21 ಕೋಟಿ ರೂ. ಆಗಿದೆ. ಎಂಟಿಬಿ ತಮ್ಮ ಪುತ್ರ ನಿತಿನ್ ಪುರುಷೊತ್ತಮ್‍ಗೆ 129 ಕೋಟಿ ರೂ. ಸಾಲ ನೀಡಿದ್ದಾರೆ. ಎಂಟಿಬಿ ಬಳಿ ಲ್ಯಾಂಡ್ ರೋವರ್, ಮರ್ಸಿಡೀಸ್, ಟೊಯೋಟಾ ಮತ್ತು ಹುಂಡೈ ಕಂಪೆನಿಗಳ ಐಷಾರಾಮಿ ಕಾರುಗಳಿವೆ. ಕಾರುಗಳ ಒಟ್ಟು ಮೌಲ್ಯ 2.48 ಕೋಟಿ ರೂ. ಪತ್ನಿ ಬಳಿ ಇರುವ ಏಕೈಕ ಐಷಾರಾಮಿ ಕಾರು ಪಾರ್ಶ್ (ಪೋರ್ಶೆ), ಬೆಲೆ 1.72 ಕೋಟಿ ರೂ. ಆಗಿದೆ.

    ಇದಲ್ಲದೇ ಎಂಟಿಬಿ ಬಳಿ 54 ಎಕರೆ ಕೃಷಿ ಭೂಮಿ ಇದೆ. ಇದರ ಮಾರುಕಟ್ಟೆ ಮೌಲ್ಯ 29.86 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ, ಇದರ ಮೌಲ್ಯ 26 ಕೋಟಿ ರೂ. ಆಗಿದೆ. ಎಂಟಿಬಿ ಹೆಸರಲ್ಲಿ ಕೃಷಿಯೇತರ ಭೂಮಿ 64.66 ಲಕ್ಷ ಚದರಡಿ, ಮಾರುಕಟ್ಟೆ ಮೌಲ್ಯ 308 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 9.50 ಲಕ್ಷ ಚದರಡಿ ಕೃಷಿಯೇತರ ಭೂಮಿ ಇದೆ. ಇದರ ಮೌಲ್ಯ 94.47 ಕೋಟಿ ರೂ. ಎಂಟಿಬಿ ಬಳಿ 1.87 ಲಕ್ಷ ಚದರಡಿ ವಾಣಿಜ್ಯ ಕಟ್ಟಡಗಳು ಇವೆ. ಇದರ ಮೌಲ್ಯ 45 ಕೋಟಿ ರೂ. ಇದೆ. ಇದೆಲ್ಲವನ್ನು ಸೇರಿ ಒಟ್ಟು ಬರೋಬ್ಬರಿ 1,224 ಕೋಟಿ ಆಸ್ತಿ ಇದೆ ಎಂದು ಎಂಟಿಬಿ ಘೋಷಿಸಿಕೊಂಡಿದ್ದಾರೆ.

  • ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    ತಡರಾತ್ರಿ ಬಿಜೆಪಿ ಮೇಲ್ಮನೆ ಪಟ್ಟಿ ಪ್ರಕಟ-ಟಿಕೆಟ್ ನಿರೀಕ್ಷೆಯಲ್ಲಿದ್ದ ಹಳ್ಳಿಹಕ್ಕಿಗೆ ಬಿಗ್ ಶಾಕ್

    -ಯಾರಿಗೆ ಯಾವ ಕಾರಣಕ್ಕೆ ಟಿಕೆಟ್?

    ಬೆಂಗಳೂರು: ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ.

    ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

    ಹೊಸಕೋಟೆಯ ಉಪಚುನಾವಣೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ವಪಕ್ಷೀಯರಿಂದಲೇ ಸೋಲು ಕಾಣಬೇಕಾಯ್ತು. ಬಿಜೆಪಿಯಿಂದ ಹೊರಬಂದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಹೀಗಾಗಿ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಸಿಕ್ಕಿರುವ ಸಾಧ್ಯತೆಗಳಿವೆ. ಅದರಂತೆ ಆರ್.ಶಂಕರ್ ಉಪಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರವನ್ನು ಬಿಜೆಪಿಯ ಹೈಕಮಾಂಡ್ ಆದೇಶದಂತೆ ಅರುಣ್ ಕುಮಾರ್ ಅವರಿಗೆ ತ್ಯಾಗ ಮಾಡಿದ ಪ್ರತಿಫಲವಾಗಿ ಟಿಕೆಟ್ ಲಭ್ಯವಾಗಿದೆ.

    ಸಿಎಂ ಯಡಿಯೂರಪ್ಪ ಆಪ್ತ ಸುನಿಲ್ ವಲ್ಯಾಪುರೆ ಸಹ ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಗಾಗಿ ಚಿಂಚೋಳಿ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಈ ಹಿನ್ನೆಲೆ ಟಿಕೆಟ್ ಸಿಕ್ಕಿದೆ. ಇತ್ತ ಕೊನೆಯದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪ್ತ, ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ಲಭ್ಯವಾಗಿದೆ. ಪ್ರತಾಪ್ ಸಿಂಹ ನಾಯಕ್ ಆರ್‍ಎಸ್‍ಎಸ್ ಹಿನ್ನೆಲೆ ಹೊಂದಿರುವ ಮುಖಂಡರಾಗಿದ್ದಾರೆ.

  • ವಿಧಾನ ಪರಿಷತ್‍ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ವಿಧಾನ ಪರಿಷತ್‍ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    – ಡಿಕೆಶಿಗೆ ಸಿದ್ದರಾಮಯ್ಯ ಬಣದಿಂದ ಟಕ್ಕರ್

    ಬೆಂಗಳೂರು: ರಾಜ್ಯಸಭೆ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆ ರಂಗೇರುತ್ತಿದ್ದು, ಸದ್ಯ ಕಾಂಗ್ರೆಸ್ ತನ್ನ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ಚುನಾವಣೆಗೆ ನಸೀರ್ ಅಹ್ಮದ್ ಹಾಗೂ ಹರಿಪ್ರಸಾದ್ ಅವರ ಹೆಸರನ್ನು ಅಮತಿಮಗೊಳಿಸಿದೆ. ನಸೀರ್ ಅಹ್ಮದ್ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಯಾಗಿದ್ದರೆ, ಹರಿಪ್ರಸಾದ್ ಹೈ ಕಮಾಂಡ್ ಕ್ಯಾಂಡಿಡೇಟ್ ಎನ್ನಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿವೇದಿತ್ ಆಳ್ವ ಪರವಾಗಿ ಲಾಭಿಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರ ಬಣ್ಣವು ಕೆಪಿಸಿಸಿ ಅಧ್ಯಕ್ಷರಿಗೆ ಟಕ್ಕರ್ ಕೊಟ್ಟು ತಮ್ಮ ಅಭ್ಯರ್ಥಿಗೆ ಟಿಕೆಟ್ ಸಿಗುವಂತೆ ಮಾಡಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಪ್ರಯತ್ನದಲ್ಲೇ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆ ಅನುಭವಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಒಟ್ಟು 7 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿಗೆ 4, ಕಾಂಗ್ರೆಸ್‍ಗೆ 2 ಹಾಗೂ ಜೆಡಿಎಸ್ ಪಕ್ಷಕ್ಕೆ 1 ಸ್ಥಾನಕ್ಕೆ ಸ್ಪರ್ಧೆ ಇರಲಿದೆ. ಗುರುವಾರ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೇ ದಿನ ಆಗಿದೆ.

  • ಪೇಪರ್ ಲೆಸ್ ಅಧಿವೇಶನ: ಸುರೇಶ್ ಕುಮಾರ್ ಪ್ರಸ್ತಾಪ

    ಪೇಪರ್ ಲೆಸ್ ಅಧಿವೇಶನ: ಸುರೇಶ್ ಕುಮಾರ್ ಪ್ರಸ್ತಾಪ

    ಬೆಂಗಳೂರು: ಅಧಿವೇಶನ ಬಂದರೆ ಸಾಕು ಸಾವಿರಾರು ಪುಟಗಳ ಪೇಪರ್ ಬಳಕೆ ಆಗುತ್ತೆ. ಪ್ರಶ್ನೋತ್ತರ, ವಿಧೇಯಕಗಳು ಹೀಗೆ ಸಾವಿರಾರು ಪುಟಗಳ ಪೇಪರ್‍ಗಳು ಅವಶ್ಯಕ ಇವೆ. ಇದರಿಂದಾಗಿ ಲಕ್ಷಾಂತರ ರೂ ನಷ್ಟವಾಗುತ್ತಿದೆ. ಹೀಗಾಗಿ ಪೇಪರ್ ಬಳಕೆಯನ್ನು ನಿಲ್ಲಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಪೇಪರ್ ಲೆಸ್ ಅಧಿವೇಶನದ ವಿಷಯ ಪ್ರಸ್ತಾಪ ಮಾಡಿದರು.

    ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆ ಬೆಂಗಳೂರಿಗೆ ಸಂಬಂಧಿಸಿದ ಪ್ರಶ್ನೆಯನ್ನು ಅರಣ್ಯ ಇಲಾಖೆ ಸಚಿವರಿಗೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಕೇಳಿದರು. ಮಾಹಿತಿ ಕೊಡೋಕೆ ಸಚಿವರು ಉತ್ತರವನ್ನು ಸಿಡಿಯಲ್ಲಿ ಕೊಟ್ಟಿದ್ದರು. ಆದರೆ ಉತ್ತರ ಸಿಡಿಯಲ್ಲಿ ಕೊಟ್ಟಿದ್ದಕ್ಕೆ ಸದಸ್ಯ ರಮೇಶ್ ವಿರೋಧ ವ್ಯಕ್ತಪಡಿಸಿದರು. ಪಿ.ಆರ್.ರಮೇಶ್ ವಿರೋಧಕ್ಕೆ ಉಳಿದ ವಿಪಕ್ಷ ಸದಸ್ಯರು ಧ್ವನಿಗೂಡಿಸಿದರು. ಪ್ರಶ್ನೆ ಕೇಳಿದವರಿಗೆ ಕೇವಲ ಸಿಡಿ ಕೊಡ್ತೀರಾ. ಎಲ್ಲಾ ಸದಸ್ಯರಿಗೂ ಕೊಡಬೇಕು. ಹೀಗೆ ಪ್ರಶ್ನೆ ಕೇಳೋರಿಗೆ ಮಾತ್ರ ಸಿಡಿ ಕೊಡೋದು ಸರಿಯಲ್ಲ. ಇದು ಹೊಸ ಸಂಪ್ರದಾಯಕ್ಕೆ ನಾಂದಿ ಆಗುತ್ತೆ ಎಂದು ಸರ್ಕಾರದ ವಿರುದ್ಧ ಎಸ್.ಆರ್.ಪಾಟೀಲ್, ರೇವಣ್ಣ, ಅಪ್ಪಾಜಿಗೌಡ, ಶರವಣ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಎದ್ದು ನಿಂತ ಸಚಿವ ಸುರೇಶ್ ಕುಮಾರ್ ಉತ್ತರ ಜಾಸ್ತಿ ಇದೆ. ಹೀಗಾಗಿ ಸಿಡಿ ಕೊಟ್ಟಿದ್ದೇವೆ. ಎಲ್ಲರಿಗೂ ಸಿಡಿ ಕೊಡುತ್ತೇವೆ ಎಂದರು. ಆದರೆ ಸಚಿವರ ಮಾತಿಗೆ ಒಪ್ಪದ ಸದಸ್ಯರು ಮತ್ತೆ ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಈ ವೇಳೆ ಮಾತಿನ ಚಕಮಕಿ ನಡೆಯಿತು. ಬಳಿಕ ಸಚಿವ ಆನಂದ್ ಸಿಂಗ್, ಎಲ್ಲ ಸದಸ್ಯರಿಗೆ ಸಿಡಿ ಕೊಡುತ್ತೇವೆ ಎಂದು ಗೊಂದಲಕ್ಕೆ ತೆರೆ ಎಳೆದರು.

    ಈ ಸಂಧರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇಂತಹ ಸಮಸ್ಯೆ ಆಗೋದನ್ನ ತಡೆಯೋಕೆ ಪೇಪರ್ ಲೆಸ್ ಅಧಿವೇಶನ ಮಾಡಬೇಕು. ಇದರಿಂದ ಸಮಯ ಉಳಿಯುತ್ತೆ. ಸದಸ್ಯರಿಗೂ ಬೇಗ ಉತ್ತರ ಸಿಗುತ್ತದೆ. ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯದಲ್ಲಿ ಈಗಾಗಲೇ ಪೇಪರ್ ಲೆಸ್ ಮಾಡಿವೆ. ರಾಜ್ಯದಲ್ಲೂ ಪೇಪರ್ ಲೆಸ್ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

    ಪೇಪರ್ ನಿಂದಾಗಿ ಲಕ್ಷಾಂತರ ರೂಪಾಯಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ಅನೇಕ ಬಾರಿ ಪೇಪರ್ ಲೆಸ್ ಅಧಿವೇಶನದ ಕೂಗು ಕೇಳಿ ಬಂದಿತ್ತು. ಹೀಗಾಗಿ ವಿಧಾನ ಪರಿಷತ್ ಅಧಿವೇಶನ ವೇಳೆ ಸಚಿವ ಸುರೇಶ್ ಕುಮಾರ್ ಇಂದು ಮತ್ತೆ ಪೇಪರ್ ಲೆಸ್ ವಿಷಯ ಪ್ರಸ್ತಾಪ ಮಾಡಿದರು.

  • ಪರಿಷತ್‍ನಲ್ಲಿ ಇವಿಎಂ ಗಲಾಟೆ, ಕೋಲಾಹಲ

    ಪರಿಷತ್‍ನಲ್ಲಿ ಇವಿಎಂ ಗಲಾಟೆ, ಕೋಲಾಹಲ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿಂದು ಇವಿಎಂ ವಿಚಾರವಾಗಿ ದೊಡ್ಡ ಗಲಾಟೆ ಆಯ್ತು. ಇವಿಎಂನಲ್ಲಿ ಅಕ್ರಮ ನಡೆಯುತ್ತೆ. ಇವಿಎಂ ವ್ಯವಸ್ಥೆಯನ್ನೆ ರದ್ದು ಮಾಡಿ ಎಂದು ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ ಮಾತು ಕಲಾಪದಲ್ಲಿ ಗದ್ದಲಕ್ಕೆ ಕಾರಣವಾಯ್ತು. ಇಬ್ರಾಹಿಂ ವಿರುದ್ಧ ಮುಗಿಬಿದ್ದ ಬಿಜೆಪಿ ಸದಸ್ಯರು ಇವಿಎಂನ್ನು ಸಮರ್ಥನೆ ಮಾಡಿಕೊಂಡರು.

    ವಿಧಾನ ಪರಿಷತ್ ನಲ್ಲಿ ಸಂವಿಧಾನ ಮೇಲೆ ಚರ್ಚೆ ಮಾಡುವಾಗ ಮಾತನಾಡಿದ ಸದಸ್ಯ ಸಿಎಂ ಇಬ್ರಾಹಿಂ, ಚುನಾವಣೆ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸಿದರು. ಚುನಾವಣೆ ಆಯೋಗ ಇವತ್ತು ಸಂಪೂರ್ಣವಾಗಿ ಬಲಹೀನವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಇವಿಎಂನಲ್ಲಿ ಗೋಲ್‍ಮಾಲ್ ನಡೆಯುತ್ತಿದೆ ಎಂದು ಆರೋಪ ಮಾಡಿದರು. ವಿಶ್ವದ ಬಹುತೇಕ ಮುಂದುವರೆದ ದೇಶಗಳು ಇವಿಎಂನ್ನು ವಿರೋಧ ಮಾಡಿದ್ದಾರೆ. ಮುಂದುವರೆದ ದೇಶಗಳು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸುತ್ತಿವೆ. ನಮ್ಮ ದೇಶದ ಇವಿಎಂ ವ್ಯವಸ್ಥೆ ಮೇಲೆ ನನಗೆ ಅನುಮಾನ ಇದೆ. ಹೀಗಾಗಿ ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹ ಮಾಡಿದರು.

    ಸಿಎಂ ಇಬ್ರಾಹಿಂ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಇಬ್ರಾಹಿಂ ವಿರುದ್ಧ ಕಿಡಿಕಾರಿದರು. ಇವಿಎಂ ದೇಶಕ್ಕೆ ತಂದೋರು ಕಾಂಗ್ರೆಸ್ಸಿನವರು. ಈಗ ಅವರೇ ವಿರೋಧ ಮಾಡೋದು ದುರಂತ ಎಂದು ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ನವರು ಗೆದ್ದರೆ ಇವಿಎಂ ದೋಷ ಇರುವುದಿಲ್ಲ. ಆದರೆ ಬಿಜೆಪಿ ಗೆದ್ದಾಗ ಮಾತ್ರ ಇವಿಎಂ ದೋಷ ಅಂತೀರಾ ಎಂದು ಇಬ್ರಾಹಿಂ ವಿರುದ್ಧ ಬಿಜೆಪಿ ಸದಸ್ಯರು ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಪಕ್ಷ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಆಯ್ತು.

    ಬಳಿಕ ಮಾತನಾಡಿದ ಸಿಎಂ ಇಬ್ರಾಹಿಂ, ಸೀತೆ ಮೇಲೆ ಅನುಮಾನ ಬಂದಾಗ ರಾಮ ಸೀತೆಯನ್ನು ಕಾಡಿಗೆ ಕಳಿಸಿ ತ್ಯಾಗ ಮಾಡಿದ. ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಇವಿಎಂ ತ್ಯಾಗ ಮಾಡಲು ಆಗುವುದಿಲ್ಲವಾ ಎಂದು ಪ್ರಶ್ನೆ ಮಾಡಿದರು. ಇಬ್ರಾಹಿಂ ಮಾತಿಗೆ ಮತ್ತೆ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು. ಬಳಿಕ ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

  • ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಅಸ್ಪೃಶ್ಯತೆ ಕದನ

    ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಅಸ್ಪೃಶ್ಯತೆ ಕದನ

    ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಅಸ್ಪೃಶ್ಯತೆಯ ಕದನವೇ ನಡೆದು ಹೋಯ್ತು. ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸದಸ್ಯ ಆರ್.ಬಿ ತಿಮ್ಮಾಪುರ್ ಮಾತಿಗೆ ಬಿಜೆಪಿ ಸದಸ್ಯರು ವಾಗ್ಬಾಣಗಳನ್ನ ಬಿಡುವ ಮೂಲಕ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್, ಬಿಜೆಪಿ ಇತಿಹಾಸಗಳ ಜೊತೆ ಅಸ್ಪೃಶ್ಯತೆಯ ಕದನವೇ ಕಲಾಪದಲ್ಲಿ ನಡೆದು ಹೋಯಿತು.

    ವಿಧಾನ ಪರಿಷತ್ತಿನಲ್ಲಿ ಸಂವಿಧಾನದ ಮೇಲೆ ಚರ್ಚೆ ಮುಂದುವರಿಯಿತು. ಕಾಂಗ್ರೆಸ್ ಸದಸ್ಯ ತಿಮ್ಮಾಪುರ್ ಈಗಲೂ ದಲಿತರನ್ನ ಅಸ್ಪೃಶ್ಯರಾಗಿಯೇ ಇಟ್ಟಿದ್ದಾರೆ. ಈಗಲೂ ದಲಿತರ ಮೇಲೆ ಶೋಷಣೆ ಆಗುತ್ತಿದೆ ಅಂತ ಆರೋಪ ಮಾಡಿದರು. ಇದೇ ವೇಳೆ ಬಿಜೆಪಿ ವಿರುದ್ಧ ಗುಡುಗಿದ ಅವರು, ರಾಮಮಂದಿರ ನಿರ್ಮಾಣ ಮಾಡ್ತೀನಿ ಅಂತ ಬಿಜೆಪಿಯವರು ಹೇಳ್ತಿದ್ದಾರೆ. ನಮ್ಮಲ್ಲಿ ದಲಿತರನ್ನ ದೇವಸ್ಥಾನ ಒಳಗೆ ಹೋಗಲು ಬಿಡೋದಿಲ್ಲ. ಇನ್ನು ರಾಮ ಮಂದಿರಕ್ಕೆ ನಮ್ಮನ್ನ ಬಿಡ್ತಾರಾ ಬಿಜೆಪಿ ಅವರು ದಲಿತರನ್ನ ಈಗಲೂ ಅಸ್ಪೃಶ್ಯರಂತೆ ನೋಡ್ತಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

    ತಿಮ್ಮಾಪುರ್ ಮಾತಿಗೆ ಬಿಜೆಪಿ ಪ್ರಾಣೇಶ್ ವಿರೋಧ ವ್ಯಕ್ತಪಡಿಸಿದರು. ಬಾಬು ಜಗಜೀವನರಾಮ್ ಅವರನ್ನ ಪ್ರಧಾನಿ ಮಾಡಲು ಜನತಾ ಪಾರ್ಟಿ, ಬಿಜೆಪಿ ಅವರು ಮುಂದಾದ್ರು. ಆದರೆ ಕಾಂಗ್ರೆಸ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ನಿಜವಾದ ದಲಿತರ ವಿರೋಧಿ ಅಂತ ಕಿಡಿಕಾರಿದರು. ಸಚಿವ ಸುಧಾಕರ್ ಮಾತನಾಡಿ, ಅಂಬೇಡ್ಕರ್ ಗೆ ಭಾರತರತ್ನ ಕಾಂಗ್ರೆಸ್ ಅವರು ಕೊಡಲಿಲ್ಲ. ನೆಹರು ಅವರು ಭಾರತರತ್ನ ತಗೊಂಡ್ರು, ಇಂದಿರಾಗಾಂಧಿ ಭಾರತರತ್ನ ತಗೊಂಡ್ರು. ಆದರೆ ಅಂಬೇಡ್ಕರ್ ಗೆ ಮಾತ್ರ ಭಾರತರತ್ನ ಕೊಡಲಿಲ್ಲ. ಅಂಬೇಡ್ಕರ್ ಗೆ ಭಾರತರತ್ನ ಕೊಟ್ಟಿದ್ದು ವಾಜಪೇಯಿ ಅವರು ಅಂತ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಇಷ್ಟಕ್ಕೆ ಸುಮ್ಮನೆ ಆಗದ ಸಚಿವ ಸುಧಾಕರ್ ಕಾಂಗ್ರೆಸ್ ಸದಸ್ಯರನ್ನ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಹಿಂದುಳಿದ ವ್ಯಕ್ತಿಯೊಬ್ಬರನ್ನ ದೇಶದ ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನ ಬಿಜೆಪಿ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದೆ. ಕಾಂಗ್ರೆಸ್ಸಿನವರು ಹಿಂದುಳಿದ ವರ್ಗದವರನ್ನ ಪ್ರಧಾನಿ ಮಾಡಿದ ಉದಾಹರಣೆ ಇದೆಯಾ ಅಂತ ತಿಮ್ಮಾಪುರ್ ಅವ್ರಿಗೆ ಪ್ರಶ್ನೆ ಮಾಡಿದರು. ಬಿಜೆಪಿ ರವಿಕುಮಾರ್ ಮಾತನಾಡಿ ಅಂಬೇಡ್ಕರ್ ಸತ್ತಾಗ ಬಾಡಿಯನ್ನ ರವಾನೆ ಮಾಡೋಕೆ ಫ್ಲೈಟ್ ಚಾರ್ಜ್ ಕಾಂಗ್ರೆಸ್ ಅವರು ಕೊಟ್ಟಿರಲಿಲ್ಲ ಅಂತ ಕಾಂಗ್ರೆಸ್ ವಿರುದ್ಧ ರವಿಕುಮಾರ್ ವಾಗ್ದಾಳಿ ನಡೆಸಿದರು.

    ಇಷ್ಟಕ್ಕೆ ಸುಮ್ಮನೆ ಆಗದ ತಿಮ್ಮಾಪುರ್ ಅಸ್ಪೃಶ್ಯತೆ ಇನ್ನೂ ಜೀವಂತವಾಗಿಯೇ ಇದೆ. ಬಿಜೆಪಿಯವರು ಅಸ್ಪೃಶ್ಯತೆ ಜೀವಂತವಾಗಿ ಇಟ್ಟಿದ್ದಾರೆ ಕಿಡಿಕಾರಿದರು. ಇಂದು ದೇವಾಲಯಗಳಿಗೆ ನಾಯಿಗಳು ಬೇಕಾದ್ರೂ ಹೋಗುತ್ತವೆ. ಆದರೆ ಮನುಷ್ಯರು ಹೋಗುವಂತಿಲ್ಲ ಅಸಮಾಧಾನ ಹೊರ ಹಾಕಿದರು. ತಿಮ್ಮಾಪುರ್ ಮಾತಿಗೆ ಕಿಡಿಕಾರಿದ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಎಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಹೇಳಿ. ಇಂತಹ ದೇವಸ್ಥಾನ ದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಅಂದ್ರೆ ದೇವಾಲಯದ ಮೇಲೆ ಕ್ರಮ ತೆಗೆದುಕೊಳ್ತೀನಿ ಅಂತ ತಿಳಿಸಿದರು. ಅಸ್ಪೃಶ್ಯತೆ ವಿಚಾರವಾಗಿ ಸುಮಾರು 30 ನಿಮಿಷ ಚರ್ಚೆಯಾಗಿ ಸದನದಲ್ಲಿ ಗದ್ದಲ ಗಲಾಟೆಗೂ ಕಾರಣವಾಯಿತು.

  • ಬೆಂಗ್ಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ- ಸಿಎಂ ಬಿಎಸ್‍ವೈ ಅಂತಿಮ ಮುದ್ರೆ

    ಬೆಂಗ್ಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ- ಸಿಎಂ ಬಿಎಸ್‍ವೈ ಅಂತಿಮ ಮುದ್ರೆ

    ಬೆಂಗಳೂರು: ಚಿತ್ರರಂಗದ ಬಹು ವರ್ಷಗಳ ಕನಸು ಕೊನೆಗೂ ಈಡೇರುವ ಕಾಲ ಸನ್ನಿತವಾಗಿದೆ. ಚಿತ್ರರಂದ ಬಹು ಬೇಡಿಕೆಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಅಂತಿಮ ಮುದ್ರೆ ಒತ್ತಿದ್ದು, ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷವೇ ಫಿಲ್ಮ್ ಸಿಟಿ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡುವ ಭರವಸೆಯನ್ನು ನೀಡಿದ್ದಾರೆ.

    ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ಸಿನ ಸದಸ್ಯೆ ಜಯಮಾಲ ಫಿಲ್ಮ್ ಸಿಟಿ ಬಗ್ಗೆ ಪ್ರಶ್ನೆ ಕೇಳಿದರು. ಅನೇಕ ವರ್ಷಗಳಿಂದ ಫಿಲ್ಮ್ ಸಿಟಿ ಕೇವಲ ಪುಸ್ತಕದಲ್ಲಿ ಇದೆ. ಸಿದ್ದರಾಮಯ್ಯ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ರಾಮನಗರದಲ್ಲಿ ಮಾಡುವುದಾಗಿ ಹೇಳಿದ್ದರು. ಎಲ್ಲವೂ ಕೇವಲ ಘೋಷಣೆ ಆಗಿಯೇ ಉಳಿದಿವೆ. ಯಡಿಯೂರಪ್ಪನವರಾದರೂ ಫಿಲ್ಮ್ ಸಿಟಿ ಕನಸನ್ನು ನನಸು ಮಾಡಿ ಎಂದು ಮನವಿ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಸಂದೇಶ್ ನಾಗರಾಜ್ ಮೈಸೂರಿನಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಅಲ್ಲೇ ಫಿಲ್ಮ್ ಸಿಟಿ ಮಾಡುವಂತೆ ಸಿಎಂ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿದರು.

    ಸದಸ್ಯರ ಪ್ರಶ್ನೆಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕೊಟ್ಟರು. ಫಿಲ್ಮ್ ಸಿಟಿಗಾಗಿ ಈ ಬಜೆಟ್‍ನಲ್ಲಿ 500 ಕೋಟಿ ಹಣ ಇಟ್ಟಿದ್ದೇನೆ. ಬೆಂಗಳೂರಿನಲ್ಲಿ 150 ಎಕರೆ ಜಾಗ ಕೂಡ ಗುರುತಿಸಲಾಗಿದೆ. ನಾವೆಲ್ಲರೂ ಏಪ್ರಿಲ್ ಮೊದಲ ವಾರ ಸ್ಥಳ ಪರಿಶೀಲನೆ ಮಾಡಿ ಜಾಗ ಒಪ್ಪಿಗೆ. ಆದರೆ ಈ ವರ್ಷವೇ ಫಿಲ್ಮ್ ಸಿಟಿ ಕಾಮಗಾರಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ಸಂದೇಶ್ ನಾಗರಾಜ್ ಮನವಿ ತಿರಸ್ಕಾರ ಮಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಸ್ಥಾಪನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಸ್ಪಷ್ಟಪಡಿಸಿದರು.

  • ಕ್ಲಬ್‍ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ

    ಕ್ಲಬ್‍ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ

    ಬೆಂಗಳೂರು: ಬೌರಿಂಗ್ ಕ್ಲಬ್, ಟರ್ಫ್ ಕ್ಲಬ್, ಗಾಲ್ಫ್ ಕ್ಲಬ್ ಸೇರಿದಂತೆ ಬೆಂಗಳೂರಿನ ಕ್ಲಬ್ ಗಳ ಕುರಿತು ಇವತ್ತು ವಿಧಾನ ಪರಿಷತ್ ಕಲಾಪದಲ್ಲಿ ಪಕ್ಷಾತೀತವಾಗಿ ಚರ್ಚೆ ನಡೆಯಿತು. ಕ್ಲಬ್ ಗಳ ವರ್ತನೆಗೆ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ ಸದಸ್ಯರು ಕ್ಲಬ್ ಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆಗೆ ಒತ್ತಾಯ ಮಾಡಿದರು. ಸದಸ್ಯರ ಮನವಿಗೆ ಸ್ಪಂದನೆ ನೀಡಿದ ಸಹಕಾರ ಸಚಿವ ಸೋಮಶೇಖರ್ ಸದನ ಸಮಿತಿ ರಚನೆಯ ಘೋಷಣೆ ಮಾಡಿದರು.

    ಕಾಂಗ್ರೆಸ್ ಸದಸ್ಯ ಎಚ್.ಎಂ ರೇವಣ್ಣ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಬೆಂಗಳೂರಿನ ಕ್ಲಬ್‍ಗಳ ಬಗ್ಗೆ ಸದನದ ರೇವಣ್ಣ ಅವರು ಮಾಹಿತಿ ಬಿಚ್ಚಿಟ್ಟರು. ಬೌರಿಂಗ್ ಕ್ಲಬ್ ಸೇರಿದಂತೆ ಇನ್ನಿತರ ಕ್ಲಬ್‍ನಲ್ಲಿ ಡ್ರೆಸ್ ಕೋಡ್ ಇದೆ. ಸೂಟ್ ಹಾಕಿಕೊಂಡು ಹೋಗಬೇಕಂತೆ. ಬಿಳಿ ಬಟ್ಟೆ ಹಾಕಿಕೊಂಡು ಹೋಗುವ ಆಗಿಲ್ಲ. ಖಾದಿ ಬಟ್ಟೆ ಹಾಕಿಕೊಂಡರೆ ಕ್ಲಬ್ ಎಂಟ್ರಿ ಇಲ್ಲವಂತೆ ಅಂತ ಕ್ಲಬ್ ಗಳ ವರ್ತನೆ ವಿರುದ್ದ ಅಸಮಾಧಾನ ಹೊರ ಹಾಕಿದರು.

    ರೇವಣ್ಣ ಮಾತಿಗೆ ಮತ್ತೊಬ್ಬ ಸದಸ್ಯ ಪ್ರಕಾಶ್ ರಾಥೋಡ್ ಧ್ವನಿಗೂಡಿಸಿದರು. ಐಎಎಸ್ ಅಧಿಕಾರಿಗಳಿಗೆ ಕ್ಲಬ್ ಇದೆ. ಮಹಿಳೆಯರು ಕ್ಲಬ್ ಮಾಡಿಕೊಂಡಿದ್ದಾರೆ. ಶಾಸಕರಿಗೂ ಒಂದು ಕ್ಲಬ್ ಬೇಕು. ನಾವು ವ್ಯಾಯಾಮ ಮಾಡೋದು ಬೇಡವಾ? ನಾವು ರೆಸ್ಟ್ ಮಾಡೋದು ಬೇಡವಾ ಶಾಸಕರಿಗೂ ಕ್ಲಬ್ ಮಾಡಿಕೊಡಿ ಎಂದು ಸಚಿವ ಸೋಮಶೇಖರ್ ಗೆ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದರು.

    ಜೆಡಿಎಸ್ ಶ್ರೀಕಂಠೇಗೌಡ ಮಾತನಾಡಿ ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಪ್ರಾರಂಭ ಮಾಡಿ. ನಾವು ವಾಕಿಂಗ್ ಮಾಡಬೇಕು, ಆಟ ಆಡಬೇಕು, ಊಟ ಮಾಡಬೇಕು.ನಮಗೂ ರಿಲ್ಯಾಕ್ಸ್ ಬೇಕು ಅಲ್ಲವಾ. ಹಿಂದೆ ಗಣೇಶ್ ಕಾರ್ಣಿಕ್ ಕ್ಲಬ್ ಗಾಗಿ ಹಣ ಸಂಗ್ರಹ ಮಾಡಿದರು. ಆದರೆ ಈವರೆಗೂ ಕ್ಲಬ್ ಆಗಿಲ್ಲ. ಶಾಸಕರ ಭವನಕ್ಕೂ ಹತ್ತಿರ ಇದೆ. ಗಾಲ್ಫ್ ಕ್ಲಬ್ ಜಾಗದಲ್ಲಿ ಶಾಸಕರಿಗೆ ಕ್ಲಬ್ ಮಾಡಿಕೊಡಿ ಎಂದು ಮನವಿ ಮಾಡಿದರು.

    ಇದೇ ವೇಳೆ ಜೆಡಿಎಸ್‍ನ ತಿಪ್ಪೇಸ್ವಾಮಿ ಗಾಲ್ಫ್ ಕ್ಲಬ್ ಬಗ್ಗೆ ಪ್ರಸ್ತಾಪ ಮಾಡಿದರು. ಅಧಿಕಾರಿಗಳೇ ಇವುಗಳ ನಿರ್ವಹಣೆ ಮಾಡುತ್ತಿದ್ದಾರೆ. ಬಾಡಿಗೆ ಸರಿಯಾಗಿ ಕೊಡ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದರು. ತಿಪ್ಪೇಸ್ವಾಮಿ ಮಾತಿಗೆ ಅಪ್ಪಾಜಿಗೌಡ, ನಾರಾಯಣಸ್ವಾಮಿ ಸೇರಿ ಹಲವರು ಧ್ವನಿಗೂಡಿಸಿದರು.ಇನ್ನು ಕಾಂಗ್ರೆಸ್ ನ ಸದಸ್ಯ ಇಟಗಿ ರೇಸ್ ಕೋರ್ಸ್ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು.

    ಟರ್ಫ್ ಕ್ಲಬ್ ಲೀಸ್ ಅವಧಿ ಮುಗಿದಿದೆ. ಅದನ್ನು ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದರೆ ಅವರು ಹೈಕೋರ್ಟ್‍ಗೆ ಹೋಗಿದರು. ಹೈಕೋರ್ಟ್ ರಾಜ್ಯದ ಪರ ತೀರ್ಪು ಕೊಟ್ಟಿದೆ. ಅವರು ಸುಪ್ರೀಂಕೋರ್ಟ್‍ಗೆ ಹೋಗಿದ್ದಾರೆ. ನಮ್ಮ ಸರ್ಕಾರದ ವಕೀಲರೇ ಕೇಸ್ ಮುಗಿಯೋವರೆಗೂ ರೇಸ್ ಕೋರ್ಸ್ ಮುಂದುವರಿಸಬಹುದು ಎಂದು ಅಫಿಡವಿಟ್ ಕೊಟ್ಟಿದ್ದಾರೆ ಇದು ನಾಚಿಕೆ ಸಂಗತಿ ಅಂತ ವಿರೋಧ ವ್ಯಕ್ತಪಡಿಸಿದರು.

    ಬೆಂಗಳೂರಿನ ಬಹುತೇಕ ಕ್ಲಬ್ ಗಳು ನಮ್ಮ ಜಾಗ, ನಮ್ಮ ನೀರು, ನಮ್ಮ ವಿದ್ಯುತ್ ತೆಗೆದುಕೊಂಡಿವೆ. ಆದ್ರು ಧಿಮಾಕು ಪ್ರದರ್ಶನ ಮಾಡ್ತೀವಿ ಅಂತ ಸದಸ್ಯರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯರ ಮನವಿ ಸ್ವೀಕಾರ ಮಾಡಿದ ಸಚಿವ ಸೋಮಶೇಖರ್, ನಾನು ಸಚಿವನಾದ ಮೇಲೆ ಕ್ಲಬ್ ನವರೇ ನಮ್ಮ ಬಳಿ ಬಂದು ದೂರು ಕೊಡೋಕೆ ಬರುತ್ತಾರೆ ನೀವು ಸ್ವಲ್ಪ ನೋಡಬೇಕು ಎಂದು ಹೇಳಲು ಬಂದಿದ್ದರು. ಯಾರೇ ನಿಯಮ ಮೀರಿದರೂ ಕ್ರಮ ತಗೆದುಕೊಳ್ಳುತ್ತೇನೆ. ಯಾರನ್ನು ರಕ್ಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಕ್ಲಬ್‍ಗಳ ಮೇಲೆ ಕ್ರಮಕ್ಕಾಗಿ ಸದನ ಸಮಿತಿಗೆ ಸರ್ಕಾರ ಸಿದ್ದ ಎಂದು ಸದನ ಸಮಿತಿ ರಚನೆ ಮಾಡೋದಾಗಿ ಸದನದಲ್ಲಿ ಘೋಷಣೆ ಮಾಡಿದರು.

  • ಪರಿಷತ್ ನಲ್ಲಿ ಕೊರೊನಾ ಎಫೆಕ್ಟ್ – ಸಭಾಂಗಣದ ಎಸಿ ಆಫ್

    ಪರಿಷತ್ ನಲ್ಲಿ ಕೊರೊನಾ ಎಫೆಕ್ಟ್ – ಸಭಾಂಗಣದ ಎಸಿ ಆಫ್

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎಫೆಕ್ಟ್ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ. ಟಿಕ್ ಟಾಕ್ ಟ್ರೆಂಡ್, ಕಾಲರ್ ಟ್ಯೂನ್ ಟ್ರೆಂಡ್ ಹೀಗೆ ಕೊರೊನಾ ಎಫೆಕ್ಟ್‍ಗೆ ಸಿಕ್ಕಾಪಟ್ಟೆ ಪರಿಣಾಮ ಬೀರಿದೆ. ಇವತ್ತು ವಿಧಾನ ಪರಿಷತ್‍ನಲ್ಲೂ ಕೊರೊನಾ ಎಫೆಕ್ಟ್ ಗೆ ಸಖತ್ ಸದ್ದು ಮಾಡಿತು. ಕೊರೊನಾ ಎಫೆಕ್ಟ್ ಗೆ ಪರಿಷತ್ ಎಸಿ ಆಫ್ ಮಾಡಲಾಗಿತ್ತು. ಎಸಿ ಆಫ್ ಆಗಿದ್ದಕ್ಕೆ ಅವಸ್ಥೆ ಪಟ್ಟ ಪರಿಷತ್ ಸದಸ್ಯರು ಶೆಕೆ ತಡೆಯಲಾರದೆ ಎಸಿ ಮತ್ತೆ ಹಾಕಿಸಿಕೊಂಡರು.

    ಕಡಿಮೆ ಉಷ್ಣಾಂಶದಲ್ಲಿ ಕೊರೊನಾ ವೈರಸ್ ಬೇಗ ಹರಡುತ್ತದೆ ಅನ್ನೋ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರದ ಕಲಾಪದಲ್ಲಿ ಸಭಾಪತಿಗಳು ಸಭಾಂಗಣದ ಎಸಿಯನ್ನು ಆಫ್ ಮಾಡಿಸಿದರು. ಎಸಿ ಆಫ್ ಮಧ್ಯೆ ಸದನದಲ್ಲಿ ಚರ್ಚೆ ನಡೆದಿತ್ತು. ಕಲಾಪ ಪ್ರಾರಂಭವಾಗಿ ಒಂದು ಗಂಟೆ ಕಳೆಯುವ ಹೊತ್ತಿಗೆ ಸದಸ್ಯರಿಗೆ ಸೆಕೆ ಆರಂಭವಾಯಿತು. ಸೆಕೆಯನ್ನು ತಡೆಯಲಾರದ ಪರಿಷತ್ ಸದಸ್ಯರು ಸೆಕೆಗೆ ಒದ್ದಾಡಿದರು. ಕೂಡಲೇ ಎದ್ದು ನಿಂತ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ತುಂಬಾ ಸೆಕೆ ಆಗುತ್ತಿದೆ. ಎಸಿ ಆನ್ ಮಾಡಿ ಎಂದು ಉಪ ಸಭಾಪತಿಗಳಿಗೆ ಮನವಿ ಮಾಡಿದರು. ಉಪ ಸಭಾಪತಿಗಳು ಕೂಡಲೇ ಎಸಿ ಆನ್ ಮಾಡಿಸಿದರು.

    ಸದನ ಪ್ರಾರಂಭವಾದ ಕೂಡಲೇ ಸಾಮಾನ್ಯವಾಗಿ ಎಸಿ ಆನ್ ಇರುತ್ತೆ. ಆದರೆ ಇಂದಿನ ಕಲಾಪದಲ್ಲಿ ಮಧ್ಯಾಹ್ನ ಎಸಿ ಆಫ್ ಮಾಡಲಾಗಿತ್ತು. ಆದರೆ ಎಸಿ ಆಫ್ ಮಾಡಿರೋದನ್ನು ಹೇಳಲಾಗದೆ ಪತ್ರಕರ್ತರು ಒದ್ದಾಡುತ್ತಿದ್ದರು. ಕೊನೆಗೆ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರೇ ವಿಷಯ ಪ್ರಸ್ತಾಪ ಮಾಡಿ ಎಸಿ ಪ್ರಸಂಗಕ್ಕೆ ತೆರೆ ಎಳೆದರು.

  • ಮಹಾತ್ಮ ಗಾಂಧೀಜಿ ವಿಶ್ವವಿದ್ಯಾಲಯ ಇದ್ದಂತೆ: ಮಾಧುಸ್ವಾಮಿ

    ಮಹಾತ್ಮ ಗಾಂಧೀಜಿ ವಿಶ್ವವಿದ್ಯಾಲಯ ಇದ್ದಂತೆ: ಮಾಧುಸ್ವಾಮಿ

    ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಮಂಗಳವಾರ ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆಯಿತು. ಸಂವಿಧಾನದ ಚರ್ಚೆ ವೇಳೆ ಗಾಂಧೀಜಿ ಅವರನ್ನ ಸ್ಮರಿಸಿಕೊಂಡು ಚರ್ಚೆ ನಡೆಸಲಾಯಿತು. ಗಾಂಧೀಜಿ ಅಂದರೆ ಒಂದು ವಿಶ್ವವಿದ್ಯಾಲಯ. ಅವರಿಗೆ ಗೊತ್ತಿಲ್ಲದ ವಿಷಯ ಇಲ್ಲ. ಮಹಾತ್ಮ ಗಾಂಧೀಜಿ ನಮ್ಮ ದೇಶದ ರಾಷ್ಟ್ರಪಿತ ಆಗಿದ್ದು ನಮ್ಮದೇಶದ ಹೆಮ್ಮೆ ಅಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟರು.

    ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ತಿಳಿದುಕೊಳ್ಳದ ವಿಷಯವೇ ಇಲ್ಲ. ಶ್ರಮಿಕರ ಬದುಕು, ಮಹಿಳಾ ಸಬಲೀಕರಣ, ಗ್ರಾಮ ಸ್ವರಾಜ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿದ್ದರು. ಮಾನವ ಶಕ್ತಿಯಿಂದ ಯಾಂತ್ರಿಕ ಶಕ್ತಿ ಸೇರಿದಂತೆ ಎಲ್ಲದರ ಬಗ್ಗೆಯೂ ತಿಳಿದಿದ್ದರು. ಗಾಂಧೀಜಿ ಕಂಡ ಕನಸು ಸಾಮಾನ್ಯವಾಗಿ ಇರಲಿಲ್ಲ. ಅವರು ಯಾರೊಬ್ಬರ ಸ್ವತ್ತಲ್ಲ. ಜನಪ್ರಿಯ ಯೋಜನೆಗಳು ಎಂದರೆ ಹುಡುಗಾಟವಲ್ಲ ಅಂತ ಗಾಂಧೀಜಿ ಅವರ ಪರಿಕಲ್ಪನೆ, ಕನಸು ಕುರಿತು ಬೆಳಕು ಚೆಲ್ಲಿದರು ಎಂದು ತಿಳಿಸಿದರು.

    ಇದೇ ವೇಳೆ ಪ್ರತಿಪಕ್ಷದ ಕೆಲ ಸದಸ್ಯರು ತಮ್ಮ ಆಸನದಲ್ಲೇ ಕುಳಿತು ಮಾಧುಸ್ವಾಮಿ ಅವರ ಮಾತನ್ನು ಮುಖಭಾವದಲ್ಲೇ ವ್ಯಂಗ್ಯವಾಡುವುದನ್ನು ಸಚಿವರು ಕಂಡರು. ಇದಕ್ಕೆ ಅಸಮಾಧಾನ ಗೊಂಡ ಸಚಿವರು, ನಾನು ನಾಟಕೀಯವಾಗಿ ಮಾತನಾಡುತ್ತಿಲ್ಲ. ನನ್ನ ಅಭಿಪ್ರಾಯ ನಾನು ವ್ಯಕ್ತಪಡಿಸುತ್ತೇನೆ. ಯಾರು ಏನೇ ಅಂದರೂ ಐ ಆ್ಯಮ್ ನಾಡ್ ಬಾದರ್ಡ್ ಎಬೌಟ್ ಎಂದರು. ಸಚಿವರ ಪದ ಬಳಕೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಮುಖಭಾವ ನೋಡಿದರೆ ಯಾರು ಏನು ಅಂದುಕೊಳ್ಳುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಂವಿಧಾನದ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದನ್ನು ನಾವು ಸ್ವಾಗತಿಸಿ ನಿಮ್ಮ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ. ಹಾಗಿದ್ದರೂ ನೀವು ಬಾದರ್ಡ್ ಪದ ಬಳಸಿದ್ದು ಸರಿಯಲ್ಲ. ನೀವು ಚೆನ್ನಾಗಿ ಮಾತನಾಡುತ್ತಿದ್ದೀರಿ ಮಾತನಾಡಿ ಎಂದರು. ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಿ ಮಾತು ಮುಂದುವರಿಸಿದರು.