Tag: Vidhan Parishad Election

  • ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್- ಕೊಡಗಿನಲ್ಲಿ ಬಿಜೆಪಿ, ಕಾಂಗ್ರೆಸ್ ಫೈಟ್

    ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್- ಕೊಡಗಿನಲ್ಲಿ ಬಿಜೆಪಿ, ಕಾಂಗ್ರೆಸ್ ಫೈಟ್

    ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕೊಡಗಿನ ಚುನಾವಣಾ ಕಣ ರಂಗೇರುತ್ತಿರುವಾಗಲೇ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್ ನಾಮಪತ್ರ ವಾಪಸ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

    ಹೌದು, ಇಂದು ಬೆಳಗ್ಗೆವರೆಗೆ ಚುನಾವಣೆ ಎದುರಿಸುತ್ತೇವೆ ಎಂದು ದೃಢವಾದ ನಿರ್ಧಾರದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಇಸಾಕ್ ಖಾನ್, ನಾಮಪತ್ರ ವಾಪಸ್ ಪಡೆಯುವಂತೆ ನನ್ನ ಮೇಲೆ ಕಾಂಗ್ರೆಸ್ ಮುಖಂಡರು ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತರನ್ನು ಗುರುತಿಸಿ ಟಿಕೆಟ್ ನೀಡಿತ್ತು. ಆದರೆ ಅಲ್ಪಸಂಖ್ಯಾತರ ವೋಟುಗಳನ್ನು ಹಾಳು ಮಾಡುವುದಕ್ಕಾಗಿಯೇ ಜೆಡಿಎಸ್ ಅಭ್ಯರ್ಥಿ ಹಾಕಿದೆ ಎಂದು ಕಾಂಗ್ರೆಸ್ಸಿನವರು ಆರೋಪಿಸಿ ನಮಗೆ ಮಾನಸಿಕ ಒತ್ತಡ ಹಾಕುತ್ತಿದ್ದಾರೆ ಎಂದು ಇಸಾಕ್ ಖಾನ್ ಹೇಳಿದ್ದರು. ಇದನ್ನೂ ಓದಿ: ಯಡಿಯೂರಪ್ಪ ಫೋನ್ ಮಾಡಿ ಬೆಂಬಲ ಕೇಳಿದ್ದಾರೆ: ಎಚ್‍ಡಿಕೆ

    ಮಧ್ಯಾಹ್ನದ ಹೊತ್ತಿಗೆ, ಜೆಡಿಎಸ್ ಹೈಕಮಾಂಡ್‍ನಿಂದ ಸೂಚನೆ ಬಂದಿದೆ. ಹೆಚ್.ಡಿ.ಕುಮಾರಸ್ವಾಮಿ ಅವರೇ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರು. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾಮಪತ್ರ ವಾಪಸ್ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮತ್ತೊಂದೆಡೆ ಕೊಡಗಿನ ಕುಶಾಲನಗರ ಭಾಗದಲ್ಲಿ ಮತಯಾಚನೆ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡರನ್ನು ಕೇಳಿದರೆ, ನಾವು ಯಾವುದೇ ಒತ್ತಡ ಹಾಕಿಲ್ಲ. ಅವರು ನಾಮಪತ್ರ ವಾಪಸ್ ಪಡೆಯುತ್ತಿರುವುದು ನಮಗೆ ಗೊತ್ತಿಲ್ಲ. ಜೆಡಿಎಸ್ ಹೈಕಮಾಂಡ್ ಮನಸ್ಸಿನಲ್ಲಿ ಯಾವ ನಿರ್ಧಾರ ಇತ್ತೋ ಗೊತ್ತಿಲ್ಲ. ಬಹುಶಃ ಕೋಮುವಾದಿಗಳಿಗೆ ಅನುಕೂಲ ಆಗಬಾರದೆಂದು ಅವರ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆಸಿರಬಹುದು. ಅವರು ನಾಮಪತ್ರ ವಾಪಸ್ ಪಡೆದಿರುವುದರಿಂದ ನಾವು ಜೆಡಿಎಸ್ ಮುಖಂಡ ಬೆಂಬಲವನ್ನು ಕೋರುತ್ತೇನೆ. ಬೆಂಬಲ ಕೋರುವುದು ನನ್ನ ಜವಾಬ್ದಾರಿ ಬೆಂಬಲ ಕೊಡುವುದು ಬಿಡುವುದು ಜೆಡಿಎಸ್ ನಾಯಕರಿಗೆ ಬಿಟ್ಟಿದ್ದು. ಆದರೆ ಹಲವು ವರ್ಷಗಳಿಂದ ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಇದರಿಂದ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ ಈ ಬಾರಿ ಬದಲಾವಣೆ ಆಗಲೇಬೇಕೆಂದು ನೇರವಾಗಿ ನಮ್ಮ ಬಳಿ ಹೇಳುತ್ತಿದ್ದಾರೆ. ಹೀಗಾಗಿ ನಾವು ಗೆಲ್ಲುವ ವಿಶ್ವಾಸದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ: ಧ್ರುವನಾರಾಯಣ್

    ಒಟ್ಟಿನಲ್ಲಿ ಕೊಡಗಿನ 103 ಗ್ರಾಮ ಪಂಚಾಯಿತಿಗಳಲ್ಲಿ 1,334 ಮತಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದು, ಬಿರುಸಿನ ಪ್ರಚಾರ ನಡೆಯುತ್ತಿದೆ. ಆದರೆ ಮತದಾರರು ಯಾರ ಕೈ ಹಿಡಿಯುತ್ತಾರೊ ಕಾದು ನೋಡಬೇಕಿದೆ.

  • ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

    ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

    – ಎಂಟಿಬಿ ದಾಖಲೆ ಮುರಿದ ಯೂಸುಫ್‌ ಷರೀಫ್‌
    – ಬಚ್ಚನ್‌ ಅವರಿಂದ ರೋಲ್ಸ್‌ ರಾಯ್ಸ್‌ ಕಾರು ಖರೀದಿ

    ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕೋಲಾರದ ಶ್ರೀಮಂತ ಅಭ್ಯರ್ಥಿಯೊಬ್ಬರು ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

    ‘ಕೆಜಿಎಫ್‌ ಬಾಬು’ ಎಂದೇ ಪ್ರಸಿದ್ಧಿ ಪಡೆದಿರುವ ಯೂಸೂಫ್‌ ಷರೀಫ್‌ ಅವರು ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗೂಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಎಂಟಿಬಿ ಹೆಸರಿನಲ್ಲಿದ್ದ ʼಶ್ರೀಮಂತ ಅಭ್ಯರ್ಥಿʼ ದಾಖಲೆಯನ್ನು ಯೂಸುಫ್‌ ಷರೀಫ್‌ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

    ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರಿಂದ ಯೂಸೂಫ್‌ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದಾರೆ. ಯೂಸೂಫ್‌ ಷರೀಫ್‌ ಅವರಿಗೆ ತಾಜ್‌ ಅಬ್ದುಲ್‌ ರಜಾಕ್‌, ಶಾಜಿಯಾ ತರನ್ನಮ್‌ ಹೆಸರಿನ ಇಬ್ಬರು ಪತ್ನಿಯರಿದ್ದು, ಐದು ಮಕ್ಕಳನ್ನು ಹೊಂದಿದ್ದಾರೆ. ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಆಸ್ತಿ ಎಷ್ಟಿದೆ?
    ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಚರಾಸ್ಥಿ ಹಾಗೂ 1,643.59 ಕೋಟಿ ರೂ. ಸ್ಥಿರಾಸ್ತಿ (ಒಟ್ಟು 1743 ಕೋಟಿ) ಹೊಂದಿರುವುದಾಗಿ ಬಾಬು ನಾಮಪತ್ರ ವೇಳೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಮೊನ್ನೆ 300 ಕೋಟಿ, ಇಂದು 200 ಕೋಟಿ ಅಕ್ರಮ

    ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ:
    ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸೂಫ್‌ ಷರೀಫ್‌ ತಮ್ಮ ಹೆಸರಿನಲ್ಲೇ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಚರಾಸ್ತಿ ಎಷ್ಟಿದೆ?
    4.8 ಕೆ.ಜಿ. ಚಿನ್ನಾಭರಣ ಹಾಗೂ 1.10 ಕೋಟಿ ರೂ. ಮೌಲ್ಯದ ವಾಚ್‌ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ.. ಹೂಡಿಕೆ, 58.10 ಕೋಟಿ ರೂ. ವೈಯಕ್ತಿಕ ಸಾಲ ಮಾಡಿದ್ದಾರೆ.  ಇದನ್ನೂ ಓದಿ: ಖಾಸಗಿ ಕ್ರಿಪ್ಟೋ ಕರೆನ್ಸಿ ಸಂಪೂರ್ಣ ನಿಷೇಧ ಮಸೂದೆ ಮಂಡಿಸಲು ಕೇಂದ್ರ ಚಿಂತನೆ

    2.01 ಕೋಟಿ ರು. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರು. ಮೌಲ್ಯದ ಎರಡು ಫಾರ್ಚೂನರ್‌ ಕಾರು ಅಲ್ಲದೇ 100 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.

    ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆ.ಜಿ. ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆ.ಜಿ. ಚಿನ್ನ ಇರುವುದಾಗಿ ಉಲ್ಲೇಖಿಸಿದ್ದಾರೆ.

    MONEY

    ಬಾಂಡ್‌, ಷೇರುಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ ಯೂಸೂಫ್‌ ಷರೀಫ್‌ ಹಣ ಹೂಡಿಕೆ ಮಾಡಿದ್ದು ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

  • ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಮೋ ಅಥವಾ ಸಿ ಟೀಮೋ?: ಹೆಚ್‍ಡಿಕೆ

    ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಮೋ ಅಥವಾ ಸಿ ಟೀಮೋ?: ಹೆಚ್‍ಡಿಕೆ

    ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಕುಹಕ ಆಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಬಿಜೆಪಿಯ ಬಿ – ಟೀಮ್ ಹಾಗೂ ಸಿ – ಟೀಮ್ ಯಾವ ಪಕ್ಷ ಎನ್ನುವುದು ಜನರಿಗೆ ಈಗ ಚೆನ್ನಾಗಿ ಅರ್ಥವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ದೇವನಹಳ್ಳಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಜವಾದ ಎ ಟೀಮ್, ಬಿ ಟೀಮ್ ಮತ್ತು ಸಿ ಟೀಮ್ ಯಾವುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಗೊತ್ತಾಗುತ್ತದೆ. ಹಾಸನದಲ್ಲಿ ತಂದೆ (ಎ.ಮಂಜು) ಬಿಜೆಪಿ ಅಭ್ಯರ್ಥಿ. ಕೊಡಗಿನಲ್ಲಿ ಅವರ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುವಾರ. ಬಿಜೆಪಿ ಸರ್ಕಾರದಲ್ಲಿ ಸಚಿವರಿಗೆ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ. ಇದು ಏನನ್ನು ಸೂಚಿಸುತ್ತದೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುರುಡು ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಕೊಂಡು ರಾಜಕಾರಣ ಮಾಡ್ತಿವೆ: ಶ್ರೀರಾಮುಲು

    ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮುಖಂಡನನ್ನು ಬಿಜೆಪಿಗೆ ಕಳುಹಿಸಿ ಅಭ್ಯರ್ಥಿ ಮಾಡಿತ್ತು. ಈಗ ಅದೇ ಬಿಜೆಪಿಯು ತನ್ನ ನಾಯಕನ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿ ಕೊಡಗಿನ ಅಭ್ಯರ್ಥಿ ಮಾಡಿದೆ. ಇದು ರಾಷ್ಟ್ರೀಯ ಪಕ್ಷಗಳ ಅಡ್ಜೆಸ್‍ಮೆಂಟ್ ರಾಜಕೀಯ. ಈಗ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಕಳಚಿ ಬಿದ್ದಿದೆ. ಜನರಿಗೂ ಆ ಪಕ್ಷದ ಅಸಲಿ ಸ್ವರೂಪ ಗೊತ್ತಾಗಿದೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಏನು ಹೇಳುತ್ತಾರೆ? ಯಾವ ನಾಲಗೆಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ನಾವು ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಆ ಪೈಕಿ ಕೊನೆಪಕ್ಷ ಆರು ಕಡೆಯಾದರೂ ಗೆಲ್ಲುತ್ತೇವೆ. ಈಗ ನಮ್ಮ ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಾವು ಕಣಕ್ಕಿಳಿದಿರುವ ಕಡೆ ಗೆಲ್ಲಲೇಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

    ಬ್ರೈನ್ ವಾಶ್ ಮಾಡುತ್ತಿದ್ದಾರೆ:
    ಮೈತ್ರಿ ಸರ್ಕಾರವನ್ನು ಪತನ ಮಾಡಿದ ನಂತರ ನಮ್ಮ ಪಕ್ಷವನ್ನು ಮುಗಿಸಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ನಮ್ಮ ನಾಯಕರ ಬ್ರೈನ್ ವಾಶ್ ಮಾಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಷತ್ ಚುನಾವಣೆ ಬಂದಿದೆ. ನಾವು ಕಾರ್ಯಕರ್ತರನ್ನು ನಂಬಿ ಹೋರಾಟ ಮಾಡುತ್ತಿದ್ದೇವೆ. ಪಕ್ಷದಿಂದ ಬೆಳೆದವರು ಪಕ್ಷದ ಬೆನ್ನು ಇರಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದ ನಾಯಕರೇ ಕುತಂತ್ರ ನಡೆಸಿ ಮಾಜಿ ಪ್ರಧಾನಿಗಳ ಸೋಲಿಗೆ ಕಾರಣರಾದರು. ತಡರಾತ್ರಿ 1.30ಕ್ಕೆ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ. ನಮ್ಮ ಪಕ್ಷದ ಶಕ್ತಿಗೆ ತಕ್ಕಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ದೇವೇಗೌಡರನ್ನು ಕಾಂಗ್ರೆಸ್ ನಾಯಕರು ತುಮಕೂರಿನಲ್ಲಿ ಸೋಲಿಸಿದರು. ಯಾವ ಕುತಂತ್ರಕ್ಕೆ ಅಂದು ನಾವು ಬಲಿಯಾದೇವೂ ಅದನ್ನೆ ಈಗ ತೋರಿಸುತ್ತೇವೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದರು. ಇದನ್ನೂ ಓದಿ:   ಕಾಂಗ್ರೆಸ್ ಪಕ್ಷ ಬರ್ಬಾದ್ ಆಗಿ ಹೋಗಿದೆ: ಅಶ್ವತ್ಥ್‌ ನಾರಾಯಣ್

    ಕೂಡಲೇ ರೈತರಿಗೆ ನರವಾಗಬೇಕು:
    ಈಗಾಗಲೇ ಸತತ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಅನ್ನು ಬದಿಗಿಟ್ಟು ರೈತರನ್ನು ಉಳಿಸುವ ಕೆಲಸ ಮಾಡಬೇಕು. ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಕೂಡ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ದೊಡ್ಡದಾಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

    ಮಳೆ ನೆರೆಗೆ ಸರ್ಕಾರಗಳೇ ಹೊಣೆ:
    ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆ ಹಾಗೂ ಒತ್ತುವರಿಯಿಂದ ಬೆಂಗಳೂರಿನಲ್ಲಿ ಮಳೆ ಅನಾಹುತ ಹೆಚ್ಚಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಆಡಳಿತ ನಡೆಸಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಲ್ಲಿ ಹಣಕ್ಕಾಗಿ ಕೆರೆ ಕಟ್ಟೆಗಳನ್ನೇ ನುಂಗಿದರು. ರಾಜಕಾಲುವೆಗಳನ್ನು ನುಂಗಲು ಬೆಂಬಲ ನೀಡಿದವರೇ ಈಗಿನ ಅನಾಹುತಗಳಿಗೆ ಹೊಣೆ ಹೊರಬೇಕು. ಅನೇಕ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಸಿಎಂ, ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹತ್ತು ಲಕ್ಷ ಹೆಕ್ಟೇರ್ ಬೆಳೆ ನಾಶ ಎನ್ನುತ್ತಿದ್ದಾರೆ. ಕೃಷಿ ಸಚಿವರು ಐದು ಲಕ್ಷ ಹೆಕ್ಟೇರ್ ಭೂಮಿ ಬೆಳೆ ನಾಶ ಎನ್ನುತ್ತಿದ್ದಾರೆ. ಯಾರ ಮಾತನ್ನು ನಂಬಬೇಕು. ಸರ್ಕಾರ ಇಂಥ ಹೇಳಿಕೆಗಳನ್ನು ಬಿಟ್ಟು ಕೂಡಲೇ ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ನೆರವಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು. ಇದನ್ನೂ ಓದಿ: ಬಿಜೆಪಿಗೆ ಹೆದರಿ ಪಟೇಲರ ಫೋಟೋಯಿಟ್ಟ ಕಾಂಗ್ರೆಸ್ – ಸಿದ್ದು, ಡಿಕೆ ಗುಸುಗುಸು ಫುಲ್ ವೈರಲ್

    2023ಕ್ಕೆ ಸ್ವತಂತ್ರ ಸರ್ಕಾರ:
    2023ಕ್ಕೆ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಪ್ರಯತ್ನದ ಬಗ್ಗೆ ಕೆಲವರು ತುಂಬಾ ಹಗುರವಾಗಿ ಮಾತಮಾಡುತ್ತಿದ್ದಾರೆ. ಯಾರು ಏನೇ ಹೇಳಲಿ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕಿದೆ. ಯಾವುದೇ ಪಕ್ಷಗಳ ಹಂಗಿಲ್ಲದೆ ಅಧಿಕಾರಕ್ಕೆ ತರಬೇಕಿದೆ. ನಮಗೆ ದೊಡ್ಡ ಮಟ್ಟದ ನಾಯಕರಿಲ್ಲ. ಕಾರ್ಯಕರ್ತರೇ ನಮಗೆ ದೊಡ್ಡ ಶಕ್ತಿ. ಅದೇ ನಮಗೆ ಆತ್ಮವಿಶ್ವಾಸ. ಈ ಚುನಾವಣೆಯಲ್ಲಿ ನಾವು ಗೆಲ್ಲುವ ಮೂಲಕ ಸಂದೇಶ ಕೊಡಬೇಕಿದೆ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ನುಡಿದರು.

  • ಡಿಸೆಂಬರ್ 1 ರಿಂದ ಬೆಳೆಹಾನಿ ಪರಿಹಾರ ವಿತರಣೆ: ಹಾಲಪ್ಪ ಆಚಾರ್

    ಡಿಸೆಂಬರ್ 1 ರಿಂದ ಬೆಳೆಹಾನಿ ಪರಿಹಾರ ವಿತರಣೆ: ಹಾಲಪ್ಪ ಆಚಾರ್

    ರಾಯಚೂರು: ಕಳೆದ ಒಂದು ವಾರದಿಂದ ಸುರಿದ ಮಳೆಗೆ ಹಾನಿಯಾಗಿರುವ ಬೆಳೆ ಸರ್ವೇ ಕಾರ್ಯ ನವೆಂಬರ್ 30ರೊಳಗೆ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿಸೆಂಬರ್ 1 ರಿಂದ ರೈತರಿಗೆ ಪರಿಹಾರ ನೀಡಬೇಕು ಅಂತ ಕಠಿಣವಾಗಿ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

    ಬೆಳೆಹಾನಿ ಪರಿಹಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ನಾಶವಾಗಿದೆ. ಒಟ್ಟು 49,953 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಈ ವರ್ಷ ಮಳೆಯಿಂದಾಗಿ ರೈತರು ಬೆಳೆ ಮುಟ್ಟದಂತಹ ಪರಿಸ್ಥಿತಿಯಿದೆ. ಅದಕ್ಕೆ ಈ ಕುರಿತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಪರಿಹಾರಕ್ಕೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ಬೆಳೆಹಾನಿಯಿಂದಾಗಿ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಮೃತ ರೈತರ ಕುಟುಂಬಗಳನ್ನು ನಾವು ಇಂದು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ. ನಂತರ ಸರ್ಕಾರಿಂದ ಏನೆಲ್ಲಾ ಪರಿಹಾರ ನೀಡಬೇಕು ಅದನ್ನು ಮಾಡುತ್ತೇವೆ ಎಂದು ಹೇಳಿದರು.

    ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, 100ಕ್ಕೆ 100ರಷ್ಟು ನಾವೇ ಗೆಲ್ಲುತ್ತೇವೆ. ಗ್ರಾಮ ಪಂಚಾಯತಿ ಸೇರಿ ಒಟ್ಟು 6 ಸಾವಿರ ಮತದಾರರಿದ್ದಾರೆ. ನಾವು ಸಂಘಟನಾತ್ಮಕವಾಗಿದ್ದೇವೆ. ಅದಕ್ಕೆ ನಮ್ಮ ಅಭ್ಯರ್ಥಿಯೇ ಗೆಲ್ಲುತ್ತಾರೆ. ನಮ್ಮ ನಾಯಕರು ಸೂಚಿಸುವ ಅಭ್ಯರ್ಥಿ ಗೆಲ್ಲಿಸೋದು ನಮ್ಮ ಗುರಿ ಎಂದು ತಿಳಿಸಿದರು.

  • ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    ಪರಿಷತ್‌ ಚುನಾವಣೆ- ಕಾಂಗ್ರೆಸ್‌ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ

    ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್ ಪಕ್ಷವು 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

    ನಾಳೆಯೇ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇಂದು ಅಳೆದು ತೂಗಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

    ಅಭ್ಯರ್ಥಿಗಳ ಪಟ್ಟಿ
    ಶಿವಾನಂದ ಪಾಟೀಲ್‌ ಮರ್ತೂರ್‌                                   ಕಲಬುರಗಿ
    ಚನ್ನರಾಜ ಬಸವರಾಜ ಹತ್ತಿಹೊಳಿ                                   ಬೆಳಗಾವಿ
    ಭೀಮಣ್ಣ ನಾಯಕ್‌                                                     ಉತ್ತರ ಕನ್ನಡ
    ಸಲೀಮ್‌ ಅಹ್ಮದ್‌                                                      ಹುಬ್ಬಳ್ಳಿ-ಧಾರವಾಡ-ಗದಗ್-ಹಾವೇರಿ
    ಶರಣ ಗೌಡ ಅನ್ನದಾನ ಗೌಡ ಪಾಟೀಲ್‌                           ರಾಯಚೂರು
    ಬಿ.ಸೋಮಶೇಖರ್‌                                                    ಚಿತ್ರದುರ್ಗ
    ಆರ್‌.ಪ್ರಸನ್ನ ಕುಮಾರ್‌                                               ಶಿವಮೊಗ್ಗ
    ಮಂಜುನಾಥ್‌ ಭಂಡಾರಿ                                              ದಕ್ಷಿಣ ಕನ್ನಡ
    ಎ.ವಿ.ಗಾಯತ್ರಿ ಶಾಂತೇಗೌಡ                                        ಚಿಕ್ಕಮಗಳೂರು
    ಎಂ.ಶಂಕರ್‌                                                             ಹಾಸನ
    ಆರ್‌.ರಾಜೇಂದ್ರ                                                        ತುಮಕೂರು
    ಎಂ.ಜಿ.ಗೂಳಿ ಗೌಡ                                                     ಮಂಡ್ಯ
    ಎಸ್.ರವಿ                                                                ಬೆಂಗಳೂರು ಗ್ರಾಮಾಂತರ
    ಮಂಥರ್‌ ಗೌಡ                                                         ಕೊಡಗು
    ಸುನಿಲ್‌ ಗೌಡ ಪಾಟೀಲ್‌                                              ವಿಜಯಪುರ-ಬಾಗಲಕೋಟೆ
    ಡಿ.ತಿಮ್ಮಯ್ಯ                                                            ಮೈಸೂರು-ಚಾಮರಾಜನಗರ
    ಕೆ.ಸಿ.ಕೊಂಡಯ್ಯ                                                        ಬಳ್ಳಾರಿ

  • ವಿಧಾನ ಪರಿಷತ್ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಹೆಚ್‌ಡಿಕೆ

    ವಿಧಾನ ಪರಿಷತ್ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ: ಹೆಚ್‌ಡಿಕೆ

    ಬೆಂಗಳೂರು: ವಿಧಾನ ಪರಿಷತ್‌ಗೆ ಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

    VIDHAN SHOUDHA

    ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ ಜನತಾ ಪರ್ವ 1.೦ ರ ಎರಡನೇ ಹಂತದ ಸಂಘಟನಾ ಕಾರ್ಯಾಗಾರ ಜನತಾ ಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಜಮೀರ್ ಅಹಮ್ಮದ್ ಖಾನ್ ಸಹಿ

    ಮೈಸೂರಿನಲ್ಲಿ ಎರಡು ಕ್ಷೇತ್ರಗಳು ಇವೆ. ಮೈಸೂರಿನ ಒಂದು ಕ್ಷೇತ್ರ ಹಾಗೂ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ತುಮಕೂರಿನ ನಾಯಕರ ಸಭೆ ಕೂಡ ಮಂಗಳವಾರ ಮಾಡಿದ್ದೇನೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಇಟ್ಟುಕೊಂಡಿದ್ದೇನೆ. ಅಂತಿಮ ವರದಿ, ಪರಿಶೀಲನೆ ಮುಗಿದ ಮೇಲೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಉಳಿದ ಜಿಲ್ಲೆಗಳ ಸಭೆಯನ್ನೂ ಆದಷ್ಟು ಬೇಗ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೂನ್ನೂರರ ಗಡಿದಾಟಿದ ಕೊರೊನಾ – 328 ಕೇಸ್, 9 ಸಾವು

    ಹಾಸನದ ವಿಚಾರವನ್ನು ಅಂತಿಮವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ರಾಯಚೂರು, ವಿಜಯಪುರ, ಕಲಬುರಗಿಯಲ್ಲೂ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಎಂಬ ಮನವಿ ಇದೆ. ಪರಿಶೀಲನೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

  • 3423 ಚುನಾಯಿತ ಮತದಾರರು ಪರಿಷತ್ ಚುನಾವಣೆಗೆ ವೋಟ್ ಹಾಕಲಿದ್ದಾರೆ: ರಾಮಚಂದ್ರನ್

    3423 ಚುನಾಯಿತ ಮತದಾರರು ಪರಿಷತ್ ಚುನಾವಣೆಗೆ ವೋಟ್ ಹಾಕಲಿದ್ದಾರೆ: ರಾಮಚಂದ್ರನ್

    ಬೀದರ್: 3423 ಚುನಾಯಿತ ಮತದಾರು ಪರಿಷತ್ ಚುನಾವಣೆಗೆ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಮಾಹಿತಿ ನೀಡಿದರು.

    ವಿಧಾನ ಪರಿಷತ್ ಚುನಾವಣೆಯ ದಿನಾಂಕ ಘೋಷಣೆ ಬೆನ್ನಲ್ಲೇ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ತಮ್ಮ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಮಾಡಿದ್ದು, ಈ ಕುರಿತು ಮಾಹಿತಿ ನೀಡಿದರು. ಒಂದು ಸ್ಥಾನಕ್ಕೆ ನಡೆಯಲಿರುವ ಎಂಎಲ್‍ಸಿ ಚುನಾವಣೆಗೆ ಬೀದರ್ ಜಿಲ್ಲೆಯಲ್ಲಿ ಒಟ್ಟು 3,423 ಚುನಾಯಿತ ಮತದಾರು ಮತದಾನ ಮಾಡಲಿದ್ದು, ಒಟ್ಟು 192 ಮತಗಟ್ಟೆಗಳಲ್ಲಿ ಈ ಮತದಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ನೆನಪಿನಲ್ಲಿ ರಾಜ್ಯೋತ್ಸವ ಆಚರಣೆ ಮಾಡಿದ ಕನ್ನಡಾಭಿಮಾನಿಗಳು

    ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ಬೀದರ್ ಜಿಲ್ಲೆಯಲ್ಲಿ ತಕ್ಷಣದಿಂದಲ್ಲೆ ನೀತಿ ಸಂಹಿತೆ ಜಾರಿಯಾಗಿದೆ. ಡಿಸೆಂಬರ್ 10 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

    ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಸದಸ್ಯರ ಸ್ಥಾನ ಮುಗಿದಿದೆ ಎಂದು ಸದಸ್ಯರು ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಫೈನಲ್ ಮತದಾರರ ಅಂಕಿ-ಅಂಶ ನೀಡುತ್ತೇವೆ. ಮಾದರಿ ನೀತಿ ಸಂಹಿತೆಗೆ ಯಾವ ಕಾನೂನುಗಳು ಅನ್ವಯಿಸುತ್ತದೆಯೋ, ಅದು ಎಲ್ಲ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಾಗಿ ಜಾರಿಯಲ್ಲಿರುತ್ತೆ ಎಂದರು. ಇದನ್ನೂ ಓದಿ: ನನ್ನ ನಾಲಿಗೆಯನ್ನು ಪವಿತ್ರವಾಗಿ ಇಟ್ಟುಕೊಂಡಿದ್ದೇನೆ: ಈಶ್ವರಪ್ಪ