Tag: video conference

  • ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ವಿಶ್ವ ಆರ್ಥಿಕ ವೇದಿಕೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ

    ನವದೆಹಲಿ: ವಿಶ್ವ ಆರ್ಥಿಕ ವೇದಿಕೆಯ (ಡಬ್ಲೂಇಎಫ್) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟೇಟ್ ಆಫ್ ದಿ ವರ್ಲ್ಡ್ ಕುರಿತು ಇಂದು ರಾತ್ರಿ 8:30 ವೀಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಭಾಷಣ ಮಾಡಲಿದ್ದಾರೆ.

    ಈ ವರ್ಚುವಲ್ ಕಾರ್ಯಕ್ರಮವೂ ಜ. 17 ರಿಂದ 21ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುವಾ ವಾನ್ ಡೆರ್ ಲೇಯೆನ್, ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಇಸ್ರೇಲಿ ಪ್ರಧಾನಿ ಸೇರಿದಂತೆ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಮಾತನಾಡಲಿದ್ದಾರೆ.

    ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ನಾಗರಿಕ ಸಮಾಜದ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಗತ್ತಿಗೆ ಎದುರಾಗಿರುವ ಸವಾಲುಗಳು ಹಾಗೂ ಅವುಗಳನ್ನು ಹೇಗೆ ಪರಿಹರಿಸಬೇಕು ಎನ್ನುವುದರ ಕುರಿತು ಚರ್ಚೆ ನಡೆಯಲಿದೆ.

    modi

    ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ವಿಶೇಷ ಭಾಷಣದೊಂದಿಗೆ ಶೃಂಗಸಭೆ ಆರಂಭವಾಗಲಿದೆ. ಪ್ರಧಾನಿ ಮೋದಿ ಇಂದು ಸಂಜೆ ವಿಶೇಷ ಭಾಷಣವನ್ನು ಮಾಡಲಿದ್ದು, ನಂತರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಭಾಷಣ ನಡೆಯಲಿದೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?

    ಡಬ್ಲೂಇಎಫ್ ಕಳೆದ 50 ವರ್ಷಗಳಿಂದ ವಾರ್ಷಿಕ ಸಭೆಯನ್ನು ಆಯೋಜಿಸುತ್ತಿದೆ. ಆದರೆ ಕೋವಿಡ್‍ನಿಂದಾಗಿ ಕಳೆದ ವರ್ಷ ಉನ್ನತ ಮಟ್ಟದ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷವೂ ಕಾರ್ಯಕ್ರಮವನ್ನು ಬೇಸಿಗೆಯ ಆರಂಭದವರೆಗೆ ಮುಂದೂಡಿದ್ದರು. ಇದನ್ನೂ ಓದಿ: ದೇಶದಲ್ಲಿ ಒತ್ತಾಯದಿಂದ ಯಾರಿಗೂ Corona Vaccine ನೀಡಲ್ಲ: ಕೇಂದ್ರ ಸರ್ಕಾರ

  • ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ- ಸಿಎಂ ಸೂಚನೆ

    ದಕ್ಷಿಣ ಕನ್ನಡದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ- ಸಿಎಂ ಸೂಚನೆ

    ಮಂಗಳೂರು: ಕೊರೊನಾ ಸೋಂಕು ನಿರ್ವಹಣೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಉಪಯುಕ್ತ ಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರನ್ನು ಅಭಿನಂದಿಸಿದರು.

    ಕೋವಿಡ್‍ಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅತ್ಯಂತ ಅಗತ್ಯವಿರುವ ಪ್ರಾಣವಾಯು ವೈದ್ಯಕೀಯ ಆಮ್ಲಜನಕದ 17 ಘಟಕಗಳು ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿದ್ದು, ಅವುಗಳಲ್ಲಿ ಈಗಾಗಲೇ 8 ಆಮ್ಲಜನಕ ಘಟಕಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ. ಉಳಿದ ಘಟಕಗಳನ್ನು ಮುಂದಿನ 2 ವಾರಗಳಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಡಿಸಿ ಡಾ.ರಾಜೇಂದ್ರ ಅವರ ಕೆಲಸಕ್ಕೆ ಅತೀವ ಶ್ಲಾಘನೆ ವ್ಯಕ್ತಪಡಿಸಿದರು.

    ಕೊರೊನಾ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಸವಾಲಿನ ಕೆಲಸವೇ ಆಗಿದೆ. ನೆರೆಯ ಕೇರಳದಲ್ಲಿ ಇದೀಗ ಕೋವಿಡ್ ಸೋಂಕಿನ ಪ್ರಕರಣಗಳೂ ವ್ಯಾಪಕವಾಗಿವೆ. ಅಲ್ಲಿಂದ ಪ್ರತಿನಿತ್ಯ ಹಲವು ಕಾರ್ಯಗಳಿಗೆ ರಸ್ತೆಯ ಮೂಲಕ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚು. ಆದ ಕಾರಣ ಸೋಂಕು ನಿಯಂತ್ರಿಸಲು ಮುಂಬರುವ 15 ದಿನಗಳ ಕಾಲ ಕಠಿಣಾತಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿಗಳು, ಜಿಲ್ಲೆಯ ಗಡಿ ಭಾಗಗಳಲ್ಲಿ ತೆರೆಯಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಬೇಕು. ಅದಕ್ಕಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸುವಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ನಿರ್ದೇಶನ ನೀಡಿದರು.

    ಗಡಿ ದಾಟುವ ಪ್ರತಿಯೊಬ್ಬರಲ್ಲಿಯೂ ನೆಗೆಟಿವ್ ವರದಿ ಇರಬೇಕು. ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು ಹಾಗೂ ಅವರ ಸಂಪರ್ಕವನ್ನು ಪತ್ತೆ ಹಚ್ಚಬೇಕು. ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಆಗಮಿಸುವವರಿಗೆ ಪ್ರತಿ 7 ದಿನಕ್ಕೊಮ್ಮೆ ಕಡ್ಡಾಯವಾಗಿ ಕೋವಿಡ್ ತಪಾಸಣಾ ಫಲಿತಾಂಶವನ್ನು ಪರಿಶೀಲಿಸಬೇಕು. ಪ್ರಮುಖವಾಗಿ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆ ಮಾಡಬೇಕು. ಅಲ್ಲಿ ರಾಪಿಡ್ ಟೆಸ್ಟ್ ಮಾಡಬೇಕು, ಹೆಚ್ಚು ಜನರು ರೈಲಿನ ಮೂಲಕ ಬರುವ ಕಾರಣ ಅಲ್ಲಿ ಕೋವಿಡ್ ಟೆಸ್ಟ್ ಮಾಡುವ ಕೌಂಟರುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೋವಿಡ್ ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದದ್ರೇ ದಂಡ ವಿಧಿಸಬೇಕು. ಮಾಸ್ಕ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗಡಿ ಭಾಗದ ತಪಾಸಣೆಗೆ ಪ್ರವಾಸ ಕೈಗೊಂಡು ಸ್ಥಿತಿ-ಗತಿಗಳನ್ನು ಅವಲೋಕಿಸುವುದಾಗಿಯೂ ಅವರು ಹೇಳಿದರು.

    ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿರುವ ವೀಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬರುವ ಒಂದು ವಾರ ಕೇರಳ ರಾಜ್ಯದ ಕಾಸರಗೋಡಿಗೆ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ಅಲ್ಲಿಂದ ಬಂದಂತಹ ವಿದ್ಯಾರ್ಥಿಗಳನ್ನು ಒಂದು ವಾರ ಕ್ವಾರಂಟೈನ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಗಡಿ ಭಾಗದಲ್ಲಿ 12 ಕಡೆ ಚೆಕ್‍ಪೋಸ್ಟ್ ರಚಿಸಲಾಗಿದೆ. ಅದರಲ್ಲಿ 6 ರಸ್ತೆ ಹಾಗೂ 6 ರೈಲ್ವೇ ಸ್ಟೇಷನ್‍ಗಳಲ್ಲಿ, ಅವುಗಳಲ್ಲಿ ತಲಪಾಡಿ ಚೆಕ್‍ಪೋಸ್ಟ್ ಅತಿ ಮುಖ್ಯವಾದದ್ದಾಗಿದೆ. ಅಲ್ಲಿ 24*7 ಕಾಲ ತಪಾಸಣೆ ಮಾಡಲಾಗುತ್ತಿದೆ. ವೈದ್ಯಕೀಯ ತುರ್ತು ಸೇವೆಗೆ ಹೊರತು ಪಡಿಸಿ ಇತರೆ ಸಂಚಾರವನ್ನು ನಿಷೇಧಿಸಲಾಗುತ್ತಿದೆ ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‍ನಲ್ಲಿದ್ದರು.

  • ದ.ಕ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಎನ್‌ಆರ್‌ಐಗಳಿಗೆ ಲಸಿಕೆ ನೀಡಲು ಡಿಸಿ ಆದೇಶ

    ದ.ಕ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಎನ್‌ಆರ್‌ಐಗಳಿಗೆ ಲಸಿಕೆ ನೀಡಲು ಡಿಸಿ ಆದೇಶ

    ಮಂಗಳೂರು: ಮೇ 30 ರಂದು ದ.ಕ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಆಯೋಜಿಸಲ್ಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ಅನಿವಾಸಿ ಕನ್ನಡಿಗರ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಹಲವು ಅನಿವಾಸಿ ಕನ್ನಡಿಗರು, ಸಂಘಟನೆಗಳು ಪಾಲ್ಗೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರರವರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಕ್ತ ಸ್ಥಿತಿಗತಿ ಹಾಗೂ ಅನಿವಾಸಿಗಳ ಸಮಸ್ಯೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.

    ವೀಡಿಯೋ ಸಂವಾದದಲ್ಲಿ ಬಹುಮುಖ್ಯವಾಗಿ ಚರ್ಚೆಯಾದ ವಿಷಯ ಅನಿವಾಸಿಗಳಿಗೆ ತುರ್ತು ಲಸಿಕೆ ನೀಡುವ ಕುರಿತಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಜನರು ವಿದೇಶದಲ್ಲಿ, ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ರಜೆ ನಿಮ್ಮಿತ ಊರಿಗೆ ತೆರಳಿರುವ ಅನೇಕರಿಗೆ ಮರಳಿ ಬರಲು ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಿದರೆ ನೂರಾರು ಮಂದಿ ಲಸಿಕೆ ಪಡೆಯದೇ ಕ್ಲಪ್ತ ಸಮಯದಲ್ಲಿ ವಾಪಾಸಾಗಲೂ ಆಗದೇ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ ಎಂದು ಅನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ: ಸಿಎಂ

    ಸಂವಾದ ಕಾರ್ಯಕ್ರಮ ಮುಕ್ತಾಯವಾದ ಕೂಡಲೇ ಈ ಕುರಿತು ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿಯವರು, ಅನಿವಾಸಿಗಳಿಗೆ ಲಸಿಕೆ ಪಡೆಯಲು ಹೆಸರು ನೊಂದಾಯಿಸಲು ಸೂಚಿಸಿ, ನೊಂದಾಯಿಸಿದ 402 ಜನರಿಗೆ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಪ್ರಥಮ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದರು. ಹೊಸದಾಗಿ ನೊಂದಾಯಿಸಿದ 500 ಜನರಿಗೆ ಜುಲೈ 11ರಂದು ಲಸಿಕೆ ನೀಡಲು ವ್ಯವಸ್ಥೆ ಮಾಡಲಾಯಿತು. ಇದೀಗ, ಜೂನ್ 14ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ವಿದೇಶಕ್ಕೆ ತೆರಳಿರುವ ಅನಿವಾಸಿಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಸೋಮವಾರದಿಂದ ಲಾಕ್ ಓಪನ್ – ನೈಟ್, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶ

    ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಈ ಆದೇಶವನ್ನು ಅನಿವಾಸಿ ಕನ್ನಡಿಗರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ‘ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ’ಯ ಯತೀಶ್ ಬೈಕಂಪಾಡಿರವರ ಕಾಳಜಿಗೆ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ಒಮಾನ್ ಪ್ರವಾಸಿ ಕನ್ನಡಿಗರ ಸೇವಾ ವೇದಿಕೆಯ ಶಶಿಧರ್ ಶೆಟ್ಟಿ, ದುಬೈ ಅಡ್ವೊಕೇಟ್ ಸುನೀಲ್ ಎ ಆರ್, ಕತಾರ್ ಅನಿವಾಸಿ ಸಂಘಟಕರಾದ ಅಬ್ದುಲ್ಲಾ ಮೋನು, ಬಂಟ್ ಸಂಘ ಕತಾರ್ ಸ್ಥಾಪಕಾಧ್ಯಕ್ಷ ರವಿ ಶೆಟ್ಟಿ, ಸಲೀಂ ಅಲ್ತಾಫ್, ಬ್ಯಾರೀಸ್ ವೆಲ್ಫೇರ್ ಫಾರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ, ಕರ್ನಾಟಕ ಸಂಘ ದುಬೈ ಪ್ರಧಾನ ಕಾರ್ಯದರ್ಶಿ ದಯಾ ಕಿರೋಡಿಯನ್ ಹಾಗೂ ಇತರ ಸಂಘ ಸಂಸ್ಥೆಗಳು ಧನ್ಯವಾದ ವ್ಯಕ್ತಪಡಿಸಿದ್ದಾರೆ.

  • ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ – ರೇವಣ್ಣ ಕಿಡಿ

    ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ – ರೇವಣ್ಣ ಕಿಡಿ

    ಹಾಸನ: ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ ಎಮದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಜಿಲ್ಲಾಧಿಕಾರಿಗಳನ್ನು ಕೂರಿಸಿಕೊಂಡು ಅವಮಾನ ಮಾಡಿದ್ದೀರಿ. ಯಾವ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೀರಿ. ದಯಮಾಡಿ ಪ್ರಧಾನಿಗಳು ಕೆಳಮಟ್ಟಕ್ಕೆ ಇಳಿಯಬೇಡಿ. ಪ್ರಧಾನಿಗಳು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಬೇಕಿತ್ತು. ಪ್ರಧಾನಿ ಸಭೆ ಮಾಡಿ ಈ ರಾಜ್ಯದ ಬಗ್ಗೆ ಏನು ತಿಳಿದುಕೊಂಡ್ರು ಎಂದು ಪ್ರಶ್ನಿಸಿದರು.

    ಆ ಗೌರವ್‍ಗುಪ್ತಾ ಅವರ ಜೊತೆ ಮಾತನಾಡಿದ್ದಾರೆ. ಅವರಿಗೆ ಎಷ್ಟು ಫೋನ್ ಮಾಡಿದ್ರು ರಿಸೀವ್ ಮಾಡಲ್ಲ. ಅವರು ಫೋನ್ ರಿಸೀವ್ ಮಾಡಿದ್ರೆ ರಾಜಕೀಯ ನಿವೃತ್ತಿ ತಗೋತೀನಿ ಎಂದು ಚಾಲೆಂಜ್ ಹಾಕಿದ್ರು.

    ಎರಡು ತಿಂಗಳು ತೆಗೆದುಕೊಂಡು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 20 ಸಾವಿರ ರೈತರು ಅಂತಾರೆ. ಹಾಗಾದ್ರೆ ಅವರನ್ನು ಗುರುತಿಸಿರೋರು ಯಾರು..? ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ಇದು ಟೆಂಪ್ರವರಿ ಪ್ಯಾಕೇಜ್. ಒಬ್ಬರಿಗೆ ತಿಂಗಳಿಗೆ ಕನಿಷ್ಟ 5 ಸಾವಿರದಂತೆ ಪ್ಯಾಕೇಜ್ ಕೊಡಬೇಕಿತ್ತು. ಸ್ವಲ್ಪ ಮಂತ್ರಿಗಳು ಲೂಟಿ ಮಾಡೋದು ನಿಲ್ಲಿಸಬೇಕಿತ್ತು ಎಂದು ತಿಳಿಸಿದರು.

    ಒಂದು ತಿಂಗಳ ಕಾಲ ಲಾಕ್‍ಡೌನ್ ಮಾಡಬೇಕು. ಬಡವರಿಗೆ ಲೂಟಿ ಮಾಡುವುದರಲ್ಲಿ ಶೇ.10ರಷ್ಟು ಕೊಡಿ. ಬಡವರಿಗೆ ಒಂದು ತಿಂಗಳು ಏನೆಲ್ಲ ಸಹಾಯ ಮಾಡಬೇಕು ಎಂದು ಹೇಳಿದರು.

  • ಪ್ರವಾಹ ಪೀಡಿತ ರಾಜ್ಯಗಳ ಜೊತೆ ಇಂದು ಮೋದಿ ಮೀಟಿಂಗ್

    ಪ್ರವಾಹ ಪೀಡಿತ ರಾಜ್ಯಗಳ ಜೊತೆ ಇಂದು ಮೋದಿ ಮೀಟಿಂಗ್

    ನವದೆಹಲಿ: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಜನರು ತತ್ತರಿಸಿದ್ದಾರೆ. ಈ ನಡುವೆ ಇಂದು ರಾಜ್ಯ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಎಲ್ಲ ಮಾಹಿತಿ ಪಡೆದುಕೊಳ್ಳಲಿದ್ದಾರೆ.

    ರಾಜ್ಯ ಏಕ ಕಾಲದಲ್ಲಿ ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ರಾಜ್ಯದ ಸಚಿವರ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಸಭೆಗೆ ಗೈರಾಗಲಿದ್ದು, ಸಿಎಂ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಲಿದ್ದಾರೆ.

    ಬೆಳಗ್ಗೆ 11:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಪ್ರವಾಹದಿಂದ ಸೃಷ್ಟಿಯಾಗಿರುವ ಅನಾಹುತ, ನಷ್ಟ ಪರಿಹಾರ ಕಾರ್ಯಗಳ ಮಾಹಿತಿ ಪಡೆದುಕೊಳ್ಳಿದ್ದಾರೆ. ಇದರ ಜೊತೆಗೆ ಕೊರೊನಾ ನಿಯಂತ್ರಣ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಪಿಎಂ ಜೊತೆಗಿನ ಸಭೆ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್ ಈಗಾಗಲೇ ಎಲ್ಲ ಪ್ರವಾಹ ಪೀಡಿತ ಹಾಗೂ ಅತಿ ಹೆಚ್ಚು ಕೊರೊನಾ ಕಾಣಿಸಿಕೊಂಡ ರಾಜ್ಯಗಳಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಈ ಎಲ್ಲ ಮಾಹಿತಿಯನ್ನ ಪಿಎಂ ಮೋದಿ ಮುಂದೆ ಪ್ರಸುತ್ತ ಪಡಿಸಲಿದ್ದಾರೆ.

    ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಹಾಗೂ ಕೇರಳದ ಸಿಎಂ ಜೊತೆಗೆ ಪ್ರಧಾನಿ ಮೋದಿ ಮಾತನಾಡಲಿದ್ದು, ಇದಕ್ಕೆ ಪ್ರತ್ಯೇಕ ಸಮಯ ಮೀಸಲಿಡಲಾಗಿದೆ. ಪ್ರಧಾನಿ ಮೋದಿ ಸಭೆಯಿಂದ ರಾಜ್ಯದ ಪರಿಸ್ಥಿತಿ ಸರ್ಕಾರದ ಗಮನಕ್ಕೆ ಬಂದಲ್ಲಿ ಮುಂದೆ ರಾಜ್ಯಕ್ಕೆ ಹೆಚ್ಚು ಪರಿಹಾರ ಸಿಗುವ ನಿಟ್ಟಿನಲ್ಲೂ ಸಹಕಾರಿಯಾಗಲಿದೆ. ಸಚಿವರು ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಬೇಕಿದೆ.

  • SSLC ಪರೀಕ್ಷೆ ದಿನಾಂಕ ಸೋಮವಾರ ನಿಗದಿ ಸಾಧ್ಯತೆ

    SSLC ಪರೀಕ್ಷೆ ದಿನಾಂಕ ಸೋಮವಾರ ನಿಗದಿ ಸಾಧ್ಯತೆ

    ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದು, ಸೋಮವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಗೊಳಿಸುವ ಸಾಧ್ಯತೆ ಇದೆ ಎಂದಿದ್ದಾರೆ.

    ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೆ ನಮ್ಮ ನಾಡಿನ ಹಿರಿಯರೊಂದಿಗೆ ಚರ್ಚೆ ನಡೆಸಲಾಗಿದೆ. ಕೊರೊನಾ ಹೆಮ್ಮಾರಿಯಿಂದ ಶಿಕ್ಷಣ ಇಲಾಖೆಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ತರಗತಿಗಳು ಹೇಗಿರಬೇಕು ಅಂತಾ ಚರ್ಚೆ ನಡೆಸುತ್ತಿದ್ದೇವೆ. ನಾಳೆ ಶಿಕ್ಷಕರ ಮತ್ತು ಪದವೀದರ ಕ್ಷೇತ್ರದ ಪರಿಷತ್ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದೇನೆ ಎಂದರು.

    ವಿಡಿಯೋ ಕಾನ್ಫರೆನ್ಸ್ ನಲ್ಲಿ ಎಲ್ಲರ ಸಲಹೆಗಳನ್ನು ಪಡೆದು ಪರೀಕ್ಷೆ ನಡೆಸಬೇಕೋ? ಬೇಡವೋ? ಅನ್ನೋದು ನಿರ್ಧಾರವಾಗಲಿದೆ. ಬಹುತೇಕ ಮಂದಿ ಪರೀಕ್ಷೆ ನಡೆಸಿ ಅಂತಿದ್ದಾರೆ. ಪರೀಕ್ಷೆ ಕೇಂದ್ರಗಳನ್ನು ಹೆಚ್ಚು ಮಾಡುವ ಕುರಿತು ತೀರ್ಮಾನ ಕೂಡ ಮಾಡಲಾಗಿದೆ. ಸೋಮವಾರ ಎಲ್ಲಾ ಸಾಧಕ ಬಾದಕಗಳ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ತೇವೆ ಎಂದು ಮಾಹಿತಿ ನೀಡಿದರು.

  • ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

    ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

    ನವದೆಹಲಿ: ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.

    ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಧಾನಿ ಮೋದಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಿದ್ದ ಅವರು, ನಿಯಮಗಳ ಪಾಲನೆ ಸಂಬಂಧ ದೂರುಗಳು ಬರುತ್ತಿದ್ದು ನಿಯಮಗಳನ್ನು ಕಠಿಣವಾಗಿ ಜಾರಿ ಮಾಡುವಂತೆ ಎಲ್ಲ ಸಿಎಂಗಳಿಗೆ ಸೂಚನೆ ನೀಡಿದರು.

    ಸಿಎಂಗಳ ಸಭೆಯಲ್ಲಿ ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಎಲ್ಲ ಮುಖ್ಯಮಂತ್ರಿಗಳು ಮಾಡುತ್ತಿರುವ ಕೆಲಸಗಳನ್ನು ಅಮಿತ್ ಶಾ ಶ್ಲಾಘಿಸಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುನ್ನಲೆಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.

    ಅಂತಾರಾಷ್ಟ್ರೀಯ ಗಡಿಗಳಲ್ಲಿ ಜಾಗರೂಕತೆ ವಹಿಸುವ ಅಗತ್ಯತೆಯ ಬಗ್ಗೆ ಮತ್ತು ಆರ್ಥಿಕ ಸವಾಲುಗಳು ನಿಭಾಯಿಸುವುದು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಅಮಿತ್ ಶಾ ಸಭೆಯಲ್ಲಿ ಮಾತನಾಡಿದರು.

  • ಪ್ರಧಾನಿ ಜೊತೆ ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂವಾದ

    ಪ್ರಧಾನಿ ಜೊತೆ ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂವಾದ

    – ಕೊರೊನಾ ವೈರಸ್ ತಡೆ ಬಗ್ಗೆ ಚರ್ಚೆ

    ಚಿಕ್ಕಬಳ್ಳಾಪುರ: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದರು.

    ಅಂದಹಾಗೆ ಪ್ರಧಾನಮಂತ್ರಿಗಳ ಜೊತೆ ರಾಜ್ಯದ ಇಬ್ಬರು ಗ್ರಾಮಪಂಚಾಯ್ತಿ ಅಧ್ಯಕ್ಷರು ಅಯ್ಕೆಯಾಗಿದ್ದರು ಎನ್ನಲಾಗಿದೆ. ಇದರಲ್ಲಿ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯ ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್ ಸಹ ಒಬ್ಬರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿಯವರ ಜೊತೆ ಸಂವಾದ ನಡೆಸಿದರು.

    ಸಂವಾದದಲ್ಲಿ ಕೊರೊನಾ ವೈರಸ್ ತಡೆಯುವ ಸಲುವಾಗಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನಂ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೇರಿದಂತೆ ಕೆಲ ಜಿಲ್ಲಾ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಸಂವಾದದ ನಂತರ ಪ್ರತಿಕ್ರಿಯಿಸಿದ ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್, ನಾನು ಕನಸು ಮನಸ್ಸಿನಲ್ಲಿಯೂ ಪ್ರಧಾನಿ ಮೋದಿಯವರ ಜೊತೆ ಮಾತನಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ಮಾತನಾಡಿರೋದು ಬಹಳ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಸಿಇಓ ಫೌಜಿಯಾ ತರನಂ ಮಾತನಾಡಿ ಮೋದಿ ಅವರು 4-5 ನಿಮಿಷಗಳ ಕಾಲ ನಮ್ಮ ಜಿಲ್ಲೆಯ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಜೊತೆ ಮಾತನಾಡಿದರು, ಕೊರೊನಾ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೆಗೆದುಕೊಂಡ ಕ್ರಮಗಳು. ಮನೆ ಮನೆಗೆ ಪಡಿತರ ವಿತರಣೆ ಮಾಡಿದ್ದು, ವಲಸಿಗರಿಗೆ ಸೂಕ್ತ ವಸತಿ ಊಟ ವ್ಯವಸ್ಥೆ ಹಾಗೂ ಔಷಧಿಗಳ ವಿತರಣೆ ಮಾಡಿದರ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಹಿತಿ ನೀಡಿದ ನಂತರ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನ ಸಲ್ಲಿಸಿದರು ಎಂದು ತಿಳಿಸಿದರು.

  • ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಕೊರೊನಾ ವೈರಸ್ ಸೋಂಕು ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಚರ್ಚೆ ಮಾಡಲಿದ್ದಾರೆ. ಈ ಹಿಂದೆ ಲಾಕ್‍ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯ ವಿಚಾರವಾಗಿ ಎರಡು ಬಾರಿ ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಮೊದಲ ಬಾರಿಗೆ ಮಾರ್ಚ್ 20ರಂದು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದು ಮಾರ್ಚ್ 24ರಂದು ದೇಶಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಯ್ತು.

    ಮಾಚ್ 24ರ ಬಳಿಕ 21 ದಿನಗಳ ಲಾಕ್‍ಡೌನ್ ಮುಕ್ತಾಯವಾಗುವುದಕ್ಕೂ ಮುನ್ನವೇ ಎರಡನೇ ವಿಡಿಯೋ ಕಾನ್ಫರೆನ್ಸ್ ಅನ್ನು ಏಪ್ರಿಲ್ 11ರಂದು ನಡೆಸಿ, ಏಪ್ರಿಲ್ 14ಕ್ಕೆ ಮುಗಿಯಬೇಕಿದ್ದ ಲಾಕ್‍ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಯಿತು.

    ಸದ್ಯ ಏಪ್ರಿಲ್ 20ರ ಬಳಿಕ ಕೇಂದ್ರದ ನಿರ್ದೇಶನದ ಪ್ರಕಾರವೇ ಕೆಲವು ರಾಜ್ಯಗಳು ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿವೆ. ಹೀಗಾಗಿ ಈ ಬಗ್ಗೆ ಚರ್ಚೆ, ಮಾಹಿತಿ ಪಡೆಯಲು ಏಪ್ರಿಲ್ 27ರಂದು ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

    ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,486 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 49 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈವರೆಗೆ ಭಾರತದಲ್ಲಿ 20,471 ಮಂದಿಗೆ ಸೋಂಕು ತಗುಲಿದ್ದು, 3,960 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 652 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

  • ಕೊಹ್ಲಿ, ಸಚಿನ್, ಗಂಗೂಲಿ ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಸಭೆ

    ಕೊಹ್ಲಿ, ಸಚಿನ್, ಗಂಗೂಲಿ ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಸಭೆ

    – ಕ್ರೀಡಾಪಟುಗಳ ಕೆಲಸವನ್ನು ಹಾಡಿಹೊಗಳಿದ ಪಿಎಂ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸುಮಾರು 40 ಜನ ಕ್ರೀಡಾಪುಟಗಳ ಜೊತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಜಾರಿಗೊಳಿಸಿದ ನಂತರ ಮೋದಿ ಅವರು ಕ್ರೀಡಾಪಟುಗಳ ಜೊತೆ ಇದೇ ಮೊದಲ ಬಾರಿಗೆ ಸಂವಹನ ನಡೆಸಿದ್ದಾರೆ. ಈ ಸಭೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದ ಪರಿಸ್ಥಿತಿ ಮತ್ತು ಲಾಕ್‍ಡೌನ್‍ನಿಂದ ಆಗಿರುವ ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳ ಜೊತೆ ಚರ್ಚೆ ಮಾಡಿದ್ದಾರೆ.

    ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಕೊಹ್ಲಿ, ಸಚಿನ್ ಮತ್ತು ಗಂಗೂಲಿಯವರ ಜೊತೆ, ಓಟಾಗಾರ್ತಿ ಪಿಟಿ ಉಷಾ, ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲಾ ಗೋಪಿಚಂದ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್, ರನ್ನರ್ ಹಿಮಾ ದಾಸ್, ಕುಸ್ತಿಪಟು ಭಜರಂಗ್ ಪುನಿಯಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪೂಜಾರ ಇತರ ಪ್ರಮುಖ ಕ್ರೀಡಾಪಟುಗಳು ಇದ್ದರು.

    ಈ ಸಮಯದಲ್ಲಿ ಕ್ರೀಡಾಪಡುಗಳು ರಾಷ್ಟ್ರಕ್ಕಾಗಿ ಮೈದಾನದಲ್ಲಿ ಪಡುವ ಕಷ್ಟವನ್ನು ಮೋದಿ ಅವರು ಶ್ಲಾಘಿಸಿದ್ದಾರೆ. ಇದರ ಜೊತೆಗೆ ಕ್ರೀಡಾಪಟುಗಳು ಈಗ ದೇಶದಲ್ಲಿ ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಮತ್ತು ಈಗಿನ ಪರಿಸ್ಥಿತಿಯ ಬಗ್ಗೆ ತಿಳಿ ಹೇಳುವ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಮಾಡಿರುವ ನಿಯಮಗಳನ್ನು ಜನರು ಪಾಲಿಸುವಂತೆ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ಕೇಳಿಕೊಂಡಿದ್ದಾರೆ.

    ಕೊರೊನಾ ವೈರಸ್ ನಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಿ ನಂತರ ಟ್ವೀಟ್ ಮಾಡಿರುವ ಮೋದಿ ಅವರು, ಕ್ರೀಡೆಗಳಲ್ಲಿ ಸ್ವಯಂ-ಶಿಸ್ತು, ಸ್ಥಿರತೆ, ತಂಡದ ಕೆಲಸ ಮತ್ತು ಹೋರಾಟದ ಮನೋಭಾವ ಬೇಕು. ಹಾಗೇಯೆ ಕೊರೊನಾ ವೈರಸ್ ಅನ್ನು ಸೋಲಿಸಲು ಇವುಗಳ ಅಗತ್ಯ ನಮಗಿದೆ ಎಂದಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಮೋದಿ, ಫಿಟ್‍ನೆಸ್‍ನ ಮಹತ್ವವನ್ನು ಸಾರುವ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ, ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಿಂದ, ಸಾಮಾಜಿಕ ಅಂತರಕ್ಕೆ ಒತ್ತು ನೀಡಿ ಜೊತೆಗೆ ಪಿಎಂ ಕೇರ್ಸ್ ನಂತಹ ಪ್ರಯತ್ನಗಳಿಗೆ ಸಹಕರಿಸಿ ನಮ್ಮ ಕ್ರೀಡಾಪಟುಗಳು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.