Tag: video call

  • ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಪೇಜಾವರ ಶ್ರೀಗಳಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ

    ಉಡುಪಿ: ಮಹಾಮಾರಿ ಕೊರೊನಾ ಎಫೆಕ್ಟ್ ನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇನ್ನೂ ದಿನಾಂಕವೇ ಫಿಕ್ಸ್ ಮಾಡೋದಕ್ಕೆ ಆಗುತ್ತಿಲ್ಲ. ಪಿಯುಸಿ ವಿದ್ಯಾರ್ಥಿಗಳ ಒಂದು ಪರೀಕ್ಷೆ ಬಾಕಿಯಾಗಿದೆ. ಆದ್ರೆ ಪೇಜಾವರ ಶ್ರೀಗಳು ಲಾಕ್‍ಡೌನ್ ನಡುವೆಯೇ ಪರೀಕ್ಷೆ ನಡೆಸುತ್ತಿದ್ದಾರೆ.

    ಸ್ಥಗಿತವಾದ ಪರೀಕ್ಷೆಗಳ ಬಗ್ಗೆ ಸಚಿವರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಈ ನಡುವೆ ಪೇಜಾವರ ಮಠ ನಿರಾತಂಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖುದ್ದಾಗಿ ವಾಟ್ಸಪ್‍ನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಸ್ವಾಮೀಜಿ ಮತ್ತು ಪ್ರಾಚಾರ್ಯರು 400 ವಿದ್ಯಾರ್ಥಿಗಳಿಗೆ ಓರಲ್ ಎಕ್ಸಾಂ ಮಾಡುತ್ತಿದ್ದಾರೆ.

    ವಾಟ್ಸಪ್ ವಿಡಿಯೋ ಕಾಲ್ ಮೂಲಕ ಪೇಜಾವರ ಸ್ವಾಮೀಜಿ ಪ್ರಶ್ನೆ ಕೇಳ್ತಾರೆ. ವಿದ್ಯಾರ್ಥಿಗಳು ಅದಕ್ಕೆ ಉತ್ತರ ಕೊಡುತ್ತಾರೆ. ಕಾವ್ಯ-ವ್ಯಾಕರಣ, ವೇದಾಂತ, ನ್ಯಾಯ ಶಾಸ್ತ್ರ, ಮೀಮಾಂಸದ ಪ್ರಶ್ನೆಗಳನ್ನು ಶ್ರೀಗಳು ಮಧ್ಯ ಮಧ್ಯ ಕೇಳುತ್ತಾರೆ. ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಮಾಡಲು ಕನಿಷ್ಟ 2 ಗಂಟೆ ಬೇಕಾಗುತ್ತದೆ. ಬೆಳಗ್ಗೆ 3:30ಕ್ಕೆ ಎದ್ದು, ನಿತ್ಯಕರ್ಮ ಮುಗಿಸುವ ಶ್ರೀಗಳು ಬೆಳಗ್ಗೆ 5ರಿಂದ ಪರೀಕ್ಷೆ ಆರಂಭಿಸುತ್ತಾರೆ. 9 ಗಂಟೆಗೆ ಪೂಜೆ ನೆರವೇರಿಸುತ್ತಾರೆ. ಮಧ್ಯಾಹ್ನ ಮತ್ತೆ ಪರೀಕ್ಷೆ ಆರಂಭಿಸುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.

    ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳು, ದೆಹಲಿ, ಚೆನ್ನೈ, ಹೈದರಾಬಾದ್‍ನಲ್ಲಿರುವ ವಿದ್ಯಾರ್ಥಿಗಳು ಆನ್‍ಲೈನ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ವಿಡಿಯೋ ಕಾಲ್‍ನಲ್ಲಿ ಪರೀಕ್ಷೆ ನಡೆಸುವುದು ಸವಾಲು ಎಂದಿದ್ದಾರೆ.

  • ವಿಡಿಯೋ ಕಾಲ್‍ನಲ್ಲೇ ಮದ್ವೆ – ಧಾರವಾಡದಲ್ಲಿ ವರ, ಕೊಪ್ಪಳದಲ್ಲಿ ವಧು

    ವಿಡಿಯೋ ಕಾಲ್‍ನಲ್ಲೇ ಮದ್ವೆ – ಧಾರವಾಡದಲ್ಲಿ ವರ, ಕೊಪ್ಪಳದಲ್ಲಿ ವಧು

    ಧಾರವಾಡ: ಲಾಕ್‍ಡೌನ್‍ನಿಂದ ಈಗಾಗಲೇ ಅನೇಕ ಮದುವೆ ಸಮಾರಂಭಗಳು ಕ್ಯಾನ್ಸಲ್ ಆಗಿವೆ. ಕೆಲವರು ಸರಳವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸದೆ ಮದುವೆಯಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ.

    ಜಿಲ್ಲೆಯ ಆದರ್ಶ ನಗರದ ವರ ಇಮ್ರಾನ್ ಜೊತೆ ಕೊಪ್ಪಳ ಜಿಲ್ಲೆಯ ವಧು ತಾಜಮಾ ಬೇಗಂ ಮದುವೆ ಆನ್‍ಲೈನ್‍ನಲ್ಲಿ ವಿಡಿಯೋ ಕಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆಯನ್ನು ಏಪ್ರಿಲ್‍ನಲ್ಲಿ ಮಾಡಬೇಕೆಂದು ನಿಶ್ಚಯ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಹೀಗಾಗಿ ಕುಟುಂಬದವರು ಮದುವೆ ಮಾಡಬೇಕೋ ಅಥವಾ ಬೇಡವೋ ಎಂದು ಗೊಂದಲದಲ್ಲಿದ್ದರು.

    ಜಿಲ್ಲಾಧಿಕಾರಿಗಳು ಮದುವೆಗೆ ಕೇವಲ ನಾಲ್ವರು ಮಾತ್ರ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಮದುವೆ ಮಾಡಿಕೊಂಡು ಕೊಪ್ಪಳದಿಂದ ವಾಪಸ್ ಬರಲು ಕೂಡ ಲಾಕ್‍ಡೌನ್‍ನಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವರ ಮತ್ತು ವಧು ಕುಟುಂಬದವರು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.

    ಎರಡು ಕುಟುಂಬಗಳು ಮದುವೆ ಕಾರ್ಡ್ ಕೂಡ ಮಾಡಿಸಿದ್ದರು. ಆದರೆ ಲಾಕ್‍ಡೌನ್ ಇರುವುದರಿಂದ ಇಬ್ಬರ ಕುಟುಂಬದವರು ಒಂದು ನಿರ್ಧಾರ ಕೈಗೊಂಡು ವಿಡಿಯೋ ಕಾಲ್‍ನಲ್ಲಿ ಮದುವೆ ಮಾಡಿಸಿದ್ದಾರೆ. ಇನ್ನೂ ಲಾಕ್‍ಡೌನ್ ಮುಗಿದ ಮೇಲೆ ಆರತಕ್ಷತೆ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.

    ಸದ್ಯ ಮದುವೆ ಆಗಿದ್ದರೂ ಮದುಮಗಳು ಕೊಪ್ಪಳದಲ್ಲಿ ಇರಲಿದ್ದು, ಕೊರೊನಾ ಲಾಕ್‍ಡೌನ್ ಮುಗಿದ ಮೇಲೆ ಪತಿಯ ಮನೆಗೆ ಬರಲಿದ್ದಾಳೆ. ಮದುವೆಯ ಎಲ್ಲ ಪದ್ಧತಿಗಳನ್ನ ಮುಗಿಸಲು ಒಂದು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಲಾಗಿದೆ.

  • ಪೊಲೀಸರ ಕುಟುಂಬಗಳಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಎಸ್ಪಿ

    ಪೊಲೀಸರ ಕುಟುಂಬಗಳಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಎಸ್ಪಿ

    ತುಮಕೂರು: ಕಿಲ್ಲರ್ ಕೊರೊನಾ ಕಾಲಿಟ್ಟಾಗಿನಿಂದ ಪೊಲೀಸರು ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೆ ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬದವರು ದಿನ ನಿತ್ಯ ಆತಂಕದಲ್ಲೇ ದಿನ ದೂಡುತಿದ್ದಾರೆ.

    ಈ ನಡುವೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಅವರ ಕುಟುಂಬದವ ಆತ್ಮಸ್ಥೈರ್ಯ ತುಂಬವ ಕೆಲಸಕ್ಕೆ ಮಾಡಿದ್ದಾರೆ. ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಹಾಗೂ ವಿವಿಧಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕುಟುಂಬದವರಿಗೆ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.

    ತುಮಕೂರು ಎಸ್ಪಿಯ ನೂತನ ಪ್ರಯೋಗಕ್ಕೆ ಕುಟುಂಬದವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಸ್ವತಃ ಎಸ್ಪಿ ವಿಡಿಯೋ ಕಾಲ್ ಮಾಡಿ ತಮ್ಮ ತಮ್ಮ ಕುಟುಂಬದ ಪೊಲೀಸ್ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವು ಕುಟುಂಬದ ಸದಸ್ಯರು ಮನೆಯಲ್ಲೇ ಉಳಿದು ತಮ್ಮವರಿಗೆ ಬೆಂಬಲ ಸೂಚಿಸಿ ಎಂದು ಮನವಿ ಮಾಡಿದ್ದಾರೆ.

  • ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ – ಸಮಾಜಕ್ಕೆ ಮಾದರಿಯಾದ ಕುಟುಂಬ

    ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ – ಸಮಾಜಕ್ಕೆ ಮಾದರಿಯಾದ ಕುಟುಂಬ

    ಚಿಕ್ಕೋಡಿ (ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಸಭೆ ಸಮಾರಂಭ ಮತ್ತು ಮದುವೆಗಳು ರದ್ದಾಗಿವೆ. ಆದರೆ ಬೆಳಗಾವಿಯ ಜೋಡಿಯೊಂದು ಸಾಮಾಜಿಕ ಜಾಲತಾಣದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.

    ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಹಾಗೂ ಶಿಕ್ಷಕರಾಗಿರುವ ಪ್ರಕಾಶ್ ಪಾಟೀಲ್ ಅವರು ತಮ್ಮ ಪುತ್ರಿ ಆಶಾ ಪಾಟೀಲ್ ಅವರ ನಿಶ್ಚಿತಾರ್ಥವನ್ನು ಬಾಗಲಕೋಟೆಯ ಮಹಾಂತೇಶ್ ಜೊತೆಗೆ ನೆರವೇರಿಸಿದರು. ಅತಿ ಸರಳವಾಗಿ ಸಾಮಾಜಿಕ ಜಾಲತಾಣದ ವಾಟ್ಸಪ್ ವಿಡಿಯೋ ಕರೆ ಮೂಲಕ ನೆರವೇರಿಸಿ ಹೀಗೂ ನಿಶ್ಚಿತಾರ್ಥ ಮಾಡಿಕೊಳ್ಳಬಹುದೆಂದು ತೊರಿಸಿಕೊಟ್ಟಿದ್ದಾರೆ.

    ವಧು ಆಶಾ ಅವರು ಮಾಹಿತಿ ತಂತ್ರಜ್ಞಾನ ವಿಭಾಗದ ಉದ್ಯೋಗಿಯಾಗಿದ್ದು, ಎರಡು ತಿಂಗಳ ಹಿಂದೆ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಿತ್ತು. ಆದರೆ ಕೊರೊನಾ ಭೀತಿಯು ಅದ್ದೂರಿ ನಿಶ್ಚಿತಾರ್ಥಕ್ಕೆ ಅಡ್ಡಿಯಾಗಿತ್ತು. ಲಾಕ್‍ಡೌನ ಆದೇಶದಿಂದ ನಿಶ್ಚಿತಾರ್ಥ ಸಮಾರಂಭ ಹೇಗೆ ಮಾಡುವುದು ಎಂದು ಕುಟುಂಸ್ಥರು ಯೋಚಿಸಲು ಆರಂಭಿಸಿದ್ದರು. ಆಗ ಆಶಾ ಅವರಿಗೆ ಯೋಚನೆಗೆ ಬಂದಿದ್ದು, ಆನ್‍ಲೈನ್ ನಿಶ್ಚಿತಾರ್ಥ.

    ಆಶಾ ಅವರ ವಿಚಾರಕ್ಕೆ ಕುಟುಂಬಸ್ಥರು ಒಪ್ಪಿಕೊಂಡು ಸರಳವಾಗಿ ವಾಟ್ಸಪ್ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿ ಕೊವಿಡ್-19 ಹರಡುವುದನ್ನು ತಡೆಯಲು ಕೈ ಜೋಡಿಸಿದ್ದಾರೆ. ಈ ಸರಳ ನಿಶ್ಚಿತಾರ್ಥ ಸಮಾರಂಭಕ್ಕೆ ಪ್ರಕಾಶ್ ಪಾಟೀಲ್ ಅವರ ಕುಟುಂಬದಿಂದ ಕೇವಲ 14 ಸದಸ್ಯರು ಭಾಗಿಯಾಗಿದ್ದು, ಎಲ್ಲರೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಕೊಂಡು ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರೆಗೆ ಬೆಂಬಲ ಸೂಚಿಸಿದ್ದಾರೆ.

    ಕೊವಿಡ್-19 ಹರಡದಂತೆ ಸರ್ಕಾರ ಕೈಗೊಂಡ ಲಾಕ್‍ಡೌನ ಆದೇಶದಿಂದ ಬಹುತೇಕ ಮದುವೆ,ನಿಶ್ಚಿತಾರ್ಥಗಳನ್ನು ಮುಂದೂಡಲಾಗಿದೆ. ಆದರೆ ಸಂಕೇಶ್ವರದ ಪಾಟೀಲ್ ಕುಟುಂಬ ಸರ್ಕಾರದ ಆದೇಶ ಪಾಲನೆಯ ಜೊತೆಗೆ ವಿನೂತನವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

  • ವಿಡಿಯೋ ಕಾಲ್ ಮೂಲಕ ಮೃತದೇಹ ತೋರಿಸಿ ಅಂತ್ಯಸಂಸ್ಕಾರ

    ವಿಡಿಯೋ ಕಾಲ್ ಮೂಲಕ ಮೃತದೇಹ ತೋರಿಸಿ ಅಂತ್ಯಸಂಸ್ಕಾರ

    ತುಮಕೂರು: ಲಾಕ್‍ಡೌನ್‍ನಿಂದಾಗಿ ಸಂಬಂಧಿಕರು ಮೃತಪಟ್ಟರೂ ಅಂತ್ಯಸಂಸ್ಕಾರ ಮಾಡಲು ಹೋಗದ ಪರಿಸ್ಥಿತಿ ಇದೆ. ಈ ರೀತಿ ಇರುವಾಗ ದೂರದ ಊರಿನಲ್ಲಿದ್ದ ಸಂಬಂಧಿಕರು ಮೃತಪಟ್ಟ ತಮ್ಮ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರವನ್ನು ವಿಡಿಯೋ ಕಾಲ್ ಮೂಲಕ ನೋಡಿ ದೂರದಿಂದಲೇ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಅಂದಹಾಗೆ ಈ ಘಟನೆ ನಡೆದದ್ದು ತುಮಕೂರು ನಗರದಲ್ಲಿ. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಕನೈದಾಸ್ ಮೃತಪಟ್ಟಿದ್ದ. ತುಮಕೂರಿನ ಎಂ.ಜಿ ರಸ್ತೆಯಲ್ಲಿ ಕರವಸ್ತ್ರ ಮಾರಿಕೊಂಡು ಜೀವನ ನಡೆಸುತ್ತಿದ್ದ ಕನೈದಾಸ್‍ಗೆ ಏಪ್ರಿಲ್ 2ರಂದು ಹೃದಯಾಘಾತ ಸಂಭವಿಸಿತ್ತು. ಕನೈದಾಸ್ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಸದ್ಯ ಲಾಕ್‍ಡೌನ್ ಇರುವ ಕಾರಣ ಮೃತ ಶರೀರವನ್ನು ಪಶ್ಚಿಮ ಬಂಗಾಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಕುಟುಂಬಸ್ಥರ ಮನವಿ ಮೇರೆಗೆ ಇಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ. ಆದರೆ ಅಂತ್ಯಸಂಸ್ಕಾರಕ್ಕೆ ಆತನ ಸಂಬಂಧಿಕರು ಬಂದಿರಲಿಲ್ಲ. ಹಾಗಾಗಿ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿ ಸಂಬಂಧಿಕರು ಮೃತದೇಹವನ್ನು ವೀಕ್ಷಣೆ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್- ವಿಡಿಯೋ ಕಾನ್ಫರೆನ್ಸ್‌ನಲ್ಲೇ ಮದ್ವೆಯಾದ ಜೋಡಿ

    ಕೊರೊನಾ ಎಫೆಕ್ಟ್- ವಿಡಿಯೋ ಕಾನ್ಫರೆನ್ಸ್‌ನಲ್ಲೇ ಮದ್ವೆಯಾದ ಜೋಡಿ

    ಪಾಟ್ನಾ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಜೋಡಿಯೊಂದು ಈ ಮೊದಲೇ ನಿಗದಿಯಾದ ದಿನಾಂಕದಂದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾರೆ.

    ಮದುಮಗ ಉತ್ತರ ಪ್ರದೇಶದ ಸಾಹಿಬಾಬಾದ್‍ನಲ್ಲಿದ್ದರೆ, ಮದುಮಗಳು ಬಿಹಾರದ ಪಾಟ್ನಾದಲ್ಲಿದ್ದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಖಾಜಿ ಮೊದಲು ಯುವಕನನ್ನು ಮದುವೆಯಾಗಲು ಹುಡುಗಿಯಿಂದ ಅನುಮತಿ ಪಡೆದರು. ನಂತರ ಮದುವೆಯನ್ನು ನೆರವೇರಿಸಿದರು. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ

    ಈ ವಿವಾಹದ 30 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ವಧುವಿನ ಕುಟುಂಬಸ್ಥರು ಟಿವಿ ಮುಂದೆ ಒಟ್ಟುಗೂಡಿ ನಿಂತಿರುತ್ತಾರೆ. ಖಾಜಿ ಕೇಳಿದಾಗ ಯುವಕ ಹಾಗೂ ಯುವತಿ ಇಬ್ಬರೂ ಮದುವೆಯನ್ನು ಒಪ್ಪಿಕೊಂಡರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮದುವೆ ಮಾಡಿಸಿದರು. ಇದನ್ನೂ ಓದಿ: ಕೊರೊನಾಗೆ ತಮಿಳುನಾಡಿನಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಏಪ್ರಿಲ್ 14ರವರೆಗೆ ಸಂಪೂರ್ಣ ಲಾಕ್‍ಡೌನ್:
    ಮಹಾಮಾರಿ ಕೊರೊನಾ ವೈರಸ್‍ನಿಂದಾಗ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಮದುವೆ, ಸಭೆ ಸಮಾರಂಭ ಸೇರಿದಂತೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದರ ಮೇಲೆ ನಿಷೇಧ ಹೇರಲಾಗಿದೆ. ನವ ಜೋಡಿಯ ದಂಪತಿಯ ಕುಟುಂಬಗಳು ಡಿಜಿಟಲ್ ಇಂಡಿಯಾವನ್ನು ಆಯ್ಕೆಮಾಡಿಕೊಂಡು ಕೊರೊನಾ ವಿರುದ್ಧ ಹೋರಾಡುವ ಹೊಸ ಮಾರ್ಗವನ್ನು ಸೂಚಿಸಿವೆ. ಅಷ್ಟೇ ಅಲ್ಲದೆ ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಬಹುದು ಎಂದು ತಿಳಿಸಿಕೊಟ್ಟಿದೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ.

  • ತನ್ನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆ

    ತನ್ನ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನಟಿಯ ಶವ ಪತ್ತೆ

    – ಸಾಯುವ ಮುನ್ನ ಸೋದರಿಗೆ ವಿಡಿಯೋ ಕಾಲ್

    ಚೆನ್ನೈ: ತಮಿಳು ನಟಿಯೊಬ್ಬಳು ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಪಿ.ಪದ್ಮಜಾ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಈಕೆ ಅನೇಕ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಳು. ಆದರೆ ಭಾನುವಾರ ತಿರುವೊಟ್ಟಿಯೂರ್ ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ಪದ್ಮಜಾ ಕಲಾದಿಪೇಟೆಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಈಕೆಗೆ ಪವನ್ (25) ಎಂಬವರ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೆ ಪತಿಯ ಜೊತೆ ಜಗಳ ಮಾಡಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮಗನನ್ನು ಸಂಬಂಧಿಕರ ಮನೆಯಲ್ಲಿ ಬೆಳೆಸಲಾಗುತ್ತಿದೆ. ದಂಪತಿ ವಾರಾಂತ್ಯದಲ್ಲಿ ಮಗನನ್ನು ಭೇಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪದ್ಮಜಾ ಕಳೆದ ತಿಂಗಳು ಪತಿಯಿಂದ ದೂರವಾಗಿದ್ದಳು. ಪತಿ ಪವನ್ ಆಂಧ್ರ ಪ್ರದೇಶಕ್ಕೆ ಶಿಫ್ಟ್ ಆಗಿದ್ದರು. ಸಾಲದ ಕಾರಣದಿಂದಾಗಿ ಪದ್ಮಜಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ ಶನಿವಾರ ತನ್ನ ಸಹೋದರಿಗೆ ವಿಡಿಯೋ ಕಾಲ್ ಮಾಡಿದ್ದಳು. ಈ ವೇಳೆ ಪದ್ಮಜಾ ಆರ್ಥಿಕ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಳು. ಅಲ್ಲದೇ ಸಿನಿಮಾ ಮತ್ತು ಸೀರಿಯಲ್‍ನಲ್ಲಿ ಮುಖ್ಯವಾದ ಪಾತ್ರ ಸಿಗುತ್ತಿಲ್ಲ ಎಂದು ಮಾತನಾಡಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡು ದಿನಗಳಿಂದ ಮನೆ ಲಾಕ್ ಆಗಿರುವುದನ್ನು ನೋಡಿದ ಮನೆಯ ಮಾಲೀಕ ಎಸ್.ಕಾಶಿನಾಥನ್ ಅನುಮಾನಗೊಂಡು ತಿರುವೊಟ್ಟಿಯೂರ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಪದ್ಮಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ಸದ್ಯಕ್ಕೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಆನ್‍ಲೈನ್ ನಿಶ್ಚಿತಾರ್ಥ – ವಿಡಿಯೋ ಕಾಲ್‍ನಲ್ಲಿ ವಧು, ವರ

    ಆನ್‍ಲೈನ್ ನಿಶ್ಚಿತಾರ್ಥ – ವಿಡಿಯೋ ಕಾಲ್‍ನಲ್ಲಿ ವಧು, ವರ

    ಬೆಂಗಳೂರು: ಉತ್ತರ ಭಾರತದ ಜೋಡಿಯೊಂದು ಆನ್‍ಲೈನ್‍ನಲ್ಲಿ ನಿಶ್ಚಿತಾರ್ಥ ಮಾಡಿಸಿಕೊಂಡಿದೆ.

    ಆನ್‍ಲೈನ್‍ನಲ್ಲಿ ಇಂದು ಎಲ್ಲಾ ರೀತಿಯ ವ್ಯಾಪಾರ, ಶಾಪಿಂಗ್, ಊಟ, ಅನೇಕ ಸೇವೆಗಳು ಹಾಗೂ ಹತ್ತು ಹಲವು ವಿಚಾರಗಳು ನಮ್ಮ ಕೈಬೆರಳಿನ ತುದಿಯಲ್ಲಿ ಇಂಟರ್‌ನೆಟ್ ಮೂಲಕ ಮೊಬೈಲ್‍ನಲ್ಲಿ ದೊರೆಯುತ್ತಿದೆ. ಇದಕ್ಕೆ ಈಗ ನಿಶ್ಚಿತಾರ್ಥವೂ ಸೇರ್ಪಡೆಗೊಂಡಿದೆ.

    ವಧು-ವರರು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆ ಮಂದಿಯೆಲ್ಲ ಸೇರಿಕೊಂಡು ಮೊಬೈಲ್‍ನಲ್ಲಿ ವಿಡಿಯೋ ಕಾಲ್‍ನಲ್ಲಿದ್ದ ವಧು-ವರರಿಗೆ ನಿಶ್ಚಿತಾರ್ಥದ ಶಾಸ್ತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಆನ್‍ಲೈನ್ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಇದು ಹೊಸ ಟ್ರೆಂಡ್ ಕೂಡ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    https://www.facebook.com/100002633985035/posts/2593783187386122/

  • ಕಳ್ಳತನ ಮಾಡೋಕೆ ವಿಡಿಯೋ ಕಾಲ್ ಬಳಕೆ

    ಕಳ್ಳತನ ಮಾಡೋಕೆ ವಿಡಿಯೋ ಕಾಲ್ ಬಳಕೆ

    ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

    ನಾಗವಾರ ನಿವಾಸಿ ಮಹಮ್ಮದ್ ಫೈಸಲ್ ಬಂಧಿತ ಕಳ್ಳ. ಲೈವ್ ಬ್ಯಾಂಡ್ ಶೋಕಿಗೆ ಬಿದ್ದಿದ್ದ ಫೈಸಲ್, ಮೊದಲಿಗೆ ತಡರಾತ್ರಿ ಕಳ್ಳತನ ಮಾಡುವ ಜಾಗಕ್ಕೆ ಹೋಗಿ ಸ್ನೇಹಿತ ವಿಕ್ರಮ್ ಗೆ ವಿಡಿಯೋ ಕಾಲ್ ಮಾಡುತ್ತಿದ್ದನು.

    ಅಂಗಡಿ ಮುಂಭಾಗದಲ್ಲಿ ಯಾವ ರೀತಿಯ ಬೀಗ ಇದೆ. ಅಂಗಡಿಯಲ್ಲಿ ಹೇಗೆ ಕಳ್ಳತನ ಮಾಡಬೇಕು, ಎಲ್ಲಿ ಏನೇನು ಇರುತ್ತೆ ಅನ್ನೋದನ್ನು ವಿಡಿಯೋ ಕಾಲ್ ಮೂಲಕ ಸ್ನೇಹಿತ ವಿಕ್ರಮ್‍ಗೆ ತೋರಿಸುತ್ತಿದ್ದನು. ನಂತರ ವಿಕ್ರಮ್ ನೀಡುವ ಸೂಚನೆಯಂತೆ ಬೀಗ ಹೊಡೆದು, ಅಂಗಡಿಗೆ ನುಗ್ಗಿ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದನು.

    ಆರೋಪಿ ಫೈಸಲ್‍ನ ಬಂಧನದಿಂದ 9 ಪ್ರಕರಣಗಳು ಪತ್ತೆಯಾಗಿದ್ದು, ಒಂದು ಲಕ್ಷ ಮೌಲ್ಯದ ವಾಚ್‍ಗಳು ಪತ್ತೆಯಾಗಿವೆ. ಈ ಇಬ್ಬರು ಆರೋಪಿಗಳು ಮತ್ತಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು ತನಿಖೆ ಮುಂದುವರಿದಿದೆ. ಇಬ್ಬರ ವಿಡಿಯೋ ಕಾಲ್ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಅಶೋಕನಗರ ಪೊಲೀಸರು ಆರೋಪಿ ಫೈಸಲ್‍ನನ್ನು ಬಂಧಿಸಿ ಮತ್ತೊಬ್ಬ ಆರೋಪಿ ವಿಕ್ರಮ್‍ಗಾಗಿ ಹುಡುಕಾಟ ನಡೆಸಿದ್ದಾರೆ.

  • ಮಧ್ಯರಾತ್ರಿ ಬೆಂಗ್ಳೂರು ಟೆಕ್ಕಿಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ತೋರಿಸಿದ

    ಮಧ್ಯರಾತ್ರಿ ಬೆಂಗ್ಳೂರು ಟೆಕ್ಕಿಗೆ ವಿಡಿಯೋ ಕಾಲ್ ಮಾಡಿ ಮರ್ಮಾಂಗ ತೋರಿಸಿದ

    ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ರಾನ್ಸ್ ಮೂಲದ ಮಹಿಳಾ ಟೆಕ್ಕಿಗೆ ವಿಡಿಯೋ ಕರೆ ಮಾಡಿ ತನ್ನ ಮರ್ಮಾಂಗವನ್ನು ತೋರಿಸಿ ವ್ಯಕ್ತಿಯೊಬ್ಬ ವಿಲಕ್ಷಣ ವರ್ತನೆ ತೋರಿದ್ದಾನೆ

    ಈ ಕುರಿತು ಫ್ರಂಚ್ ಮೂಲದ 28 ವರ್ಷದ ಟೆಕ್ಕಿ ಮಹಿಳೆ ಬೆಳ್ಳಂದೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

    ಮಹಿಳೆ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಜುಲೈನಲ್ಲಿ ನಗರಕ್ಕೆ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ಆರೋಪಿ ವಾಟ್ಸಪ್ ಮೂಲಕ ಮಹಿಳೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದ. ಆಗಸ್ಟ್ 28ರಂದು ವ್ಯಕ್ತಿ ಮಹಿಳೆಗೆ ನಿಂದನೀಯ ಸಂದೇಶವನ್ನು ಕಳಹಿಸಿದ್ದ. ಅಲ್ಲದೆ ಅಕ್ಟೋಬರ್ 19ರ ಮಧ್ಯರಾತ್ರಿ ಸಹ ಈತ ವಿಡಿಯೋ ಕಾಲ್ ಮಾಡಿದ್ದ ಆದರೆ ಟೆಕ್ಕಿ ಕರೆ ಸ್ವೀಕರಿಸಿರಲಿಲ್ಲ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ.

    ನವೆಂಬರ್ 11ರಂದು ಬೇರೊಂದು ನಂಬರ್ ನಿಂದ ಮತ್ತೆ ನಿಂದನೀಯ ಸಂದೇಶಗಳು ಮಹಿಳೆಗೆ ಕಳುಹಿಸಿದ್ದ. ಅಲ್ಲದೆ ನವೆಂಬರ್ 23ರಂದು ಮಧ್ಯರಾತ್ರಿ 12:50ರ ಸುಮಾರಿಗೆ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ವ್ಯಕ್ತಿ ತನ್ನ ಮರ್ಮಾಂಗವನ್ನು ಪ್ರದರ್ಶಿಸಿದ್ದಾನೆ. 1 ಗಂಟೆಗೆ ಮಹಿಳೆ ಕರೆ ಕಟ್ ಮಾಡಿದ್ದಾರೆ.

    ವ್ಯಕ್ತಿಯ ಕಾಟದಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕುರಿತು ನಮಗೆ ದೂರು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಎರಡೂ ಮೊಬೈಲ್ ಸಂಖ್ಯೆಗಳು ಆಂಧ್ರಪ್ರದೇಶದ ಒಬ್ಬನಿಗೆ ಸೇರಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ನಗರದಲ್ಲಿ ವರದಿಯಾಗಿದ್ದ ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿ ವಿರುದ್ಧ ಪೊಲೀಸರು ಹಲವು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದರು. ತಾನು ನಗರದ ‘ಎರಡನೇ ಶ್ರೀಮಂತ ವ್ಯಕ್ತಿ’ ಎಂದು ಮಹಿಳೆಯರನ್ನು ನಂಬಿಸಿ ಮೋಸ ಮಾಡುತ್ತಿದ್ದನು. ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಪರಾರಿಯಾಗುತ್ತಿದ್ದ.

    30 ವರ್ಷದ ಎಂಬಿಎ ಪದವೀಧರನನ್ನು ಹಲಸೂರು ಪೊಲೀಸರು ಬಂಧಿಸಿದ್ದರು. ಮೂಲತಃ ತಮಿಳುನಾಡಿನವನಾಗಿದ್ದ ಆರೋಪಿ ವಿರುದ್ಧ 376(ಅತ್ಯಾಚಾರ), 420(ಮೋಸ), ಪ್ರಕರಣ ದಾಖಲಿಸಲಾಗಿತ್ತು. ತಮಿಳುನಾಡು ನೋಂದಣಿಯ ಹಲವು ಮೊಬೈಲ್ ಫೋನ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.