Tag: victoria hospitals

  • ಗಮನಿಸಿ, ವೈರಲ್‌ ಆಗಿರುವ ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ

    ಗಮನಿಸಿ, ವೈರಲ್‌ ಆಗಿರುವ ವಿಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ

    – ವಿಡಿಯೋ ಪ್ರಕಟಿಸಿದವರ ವಿರುದ್ಧ ಕೇಸ್‌ ದಾಖಲು

    ಬೆಂಗಳೂರು: “ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಸಿಗುವುದು ಕಷ್ಟವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮುಂದೆ ನಿಂತಿರುವ ರೋಗಿಗಳನ್ನು ನೋಡಿ” ಎಂದು ಬರೆಯಲಾಗಿರುವ ಸುಳ್ಳು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಕ್ಟೋರಿಯಾ ಆಸ್ಪತ್ರೆ ಬಳಿ ಸೋಂಕು ಪರೀಕ್ಷೆ ಮಾಡಿಸಲು ಜನ ಕ್ಯೂ ನಿಂತಿದ್ದಾರೆ. ಅಲ್ಲದೆ ನೂರಾರು ಜನರಿಂದ ವೈದ್ಯರಿಗೆ ತೊಂದರೆಯಾಗುತ್ತಿದೆ ಎಂದು ಬರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಭಾರತದ ಯಾವುದೋ ಆಸ್ಪತ್ರೆಯ ಒಪಿಡಿ ವಿಭಾಗದ ವಿಡಿಯೋ ಆಗಿದ್ದು, ವಿಕ್ಟೋರಿಯಾ ಆಸ್ಪತ್ರೆಯದ್ದಲ್ಲ. ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಹಿಂದಿಯಲ್ಲಿ ವೈದ್ಯರು ಸೂಚನೆ ನೀಡುತ್ತಿರುವುದು ಕೇಳಿಸುತ್ತದೆ.

    ಈ ವಿಡಿಯೋವನ್ನು ಪರಿಶೀಲಿಸಿದ ಸಿಸಿಬಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋವನ್ನು ಪ್ರಕಟಿಸಿದ ಕಿಡಿಗೇಡಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್‌ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಆಸ್ಪತ್ರೆಗೆ ಸಂಬಂಧಿಸಿದೆ ಎಂದು ವಿಡಿಯೋ ಹರಿಬಿಟ್ಟವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರ, ಸಮಾಜ ಕೋವಿಡ್‌ 19 ವಿರುದ್ಧ ಹೋರಾಟ ಮಾಡುತ್ತಿದ್ದರೆ ಕೆಲವರು ಸಮಾಜ ಭಯ ಪಡುವಂತಹ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.