Tag: vice president

  • ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಗ್ರಾಮ ಪಂಚಾಯತ್‌ನಲ್ಲಿ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

    ಹುಬ್ಬಳ್ಳಿ: ಗ್ರಾಮ ಪಂಚಾಯತವೊಂದರಲ್ಲಿ ಪತ್ನಿ ಅಧ್ಯಕ್ಷೆಯಾಗಿ ಪತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಬರೆದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮ ಪಂಚಾಯತಿಯ ಸದಸ್ಯರಾಗಿ ದಂಪತಿ ಆಯ್ಕೆಯಾಗಿದ್ದರು. ಇದೀಗ ಅಧ್ಯಕ್ಷೆಯಾಗಿ ಪತ್ನಿ, ಉಪಾಧ್ಯಕ್ಷ ಸ್ಥಾನದಲ್ಲಿ ಪತಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ವಿಶಾಲಾಕ್ಷಿ ಚೆನ್ನಬಸನಗೌಡ ಹನಮಂತಗೌಡ್ರ ಅಧ್ಯಕ್ಷೆಯಾಗಿಯೂ, ಇವರ ಪತಿ ಚೆನ್ನಬಸಬನಗೌಡ ಹನಮಂತಗೌಡ್ರ ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ದಂಪತಿ ಆಯ್ಕೆ ಮಾಡಲು ವರೂರು ಹಾಗೂ ಕಂಪ್ಲಿಕೊಪ್ಪ ಗ್ರಾಮದ ಸ್ಥಳೀಯರು ಶ್ರಮಿಸಿದ್ದು, ಯಾವುದೇ ರೀತಿಯ ತೊಂದರೆಗಳಿಲ್ಲದೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಪಂಚಾಯತಿಗೆ ಆಯ್ಕೆಯಾದ ನೂತನ ಸದಸ್ಯರು ಹಾಗೂ ಗ್ರಾಮಸ್ಥರು ಪಕ್ಷಾತೀತವಾಗಿ ಪತಿ- ಪತ್ನಿಯನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ದಂಪತಿಯಿಂದ ಆಶಿಸುತ್ತಿದ್ದಾರೆ.

  • ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ

    ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ

    ಚೆನ್ನೈ: ಇತ್ತೀಚೆಗಷ್ಟೆ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ಶನಿವಾರ ನೇಮಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಸೇರಲೆಂದೇ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ರಾ – ಹಲವು ಪ್ರಶ್ನೆಗಳಿಗೆ ಅಣ್ಣಾಮಲೈ ಉತ್ತರ

    ರಾಜ್ಯ ಘಟಕದ ಅಧ್ಯಕ್ಷ ಎಲ್.ಮುರುಗನ್ ಪ್ರತಿಕಾ ಪ್ರಕಟಣೆ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ಮುಂದಿನ ಭವಿಷ್ಯ ಯಶಸ್ವಿಯಾಗಿರಲಿ” ಎಂದು ಶುಭ ಹಾರೈಸಿದ್ದಾರೆ.

    ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ತಮ್ಮ ಖಡಕ್ ನಿರ್ಧಾರಗಳು ಮತ್ತು ಅಡಳಿತದಿಂದ ‘ಸಿಂಗಂ’ ಎಂಬ ಹೆಸರು ಪಡೆದುಕೊಂಡಿದ್ದರು. ನಂತರ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರು ತಮಿಳುನಾಡಿಗೆ ಹೋಗಿದ್ದರು. ಇದನ್ನೂ ಓದಿ: ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ- ಅಣ್ಣಾಮಲೈ

    ಆಗಸ್ಟ್ 25 ರಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

  • ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    ಆಶಾ ಕಾರ್ಯಕರ್ತೆ, ಆಟೋ ಚಾಲಕಿಗೆ ಉಪರಾಷ್ಟ್ರಪತಿ ಶ್ಲಾಘನೆ

    – ಕನ್ನಡದಲ್ಲೇ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು

    ನವದೆಹಲಿ: ಬೆಳಗ್ಗಿನ ಜಾವ 3ಕ್ಕೆ ಕರೆ ಮಾಡಿದರೂ ನಿರ್ಲಕ್ಷ್ಯ ಮಾಡದೆ ತಾವೇ ಆಟೋ ಚಲಾಯಿಸಿಕೊಂಡು ಹೆರಿಗೆಗಾಗಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ದ ಮಹಿಳೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಕರ್ನಾಟಕದ ಉಡುಪಿಯಲ್ಲಿ ಬೆಳಗ್ಗಿನ ಜಾವ 3 ಗಂಟೆಯಲ್ಲಿ ಗರ್ಭಿಣಿ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ  ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ ಎಂದಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಆಶಾ ಕಾರ್ಯಕರ್ತೆ, ಮಧ್ಯಾಹ್ನ ನಂತರ ಆಟೋ ಚಾಲಕಿ

    ಇಂದು ಬೆಳಗ್ಗಿನ ಜಾವ 3.15ಕ್ಕೆ ಮಹಿಳೆಯೊಬ್ಬರು ರಾಜೀವಿ ಅವರಿಗೆ ಕರೆ ಮಾಡಿ ಹೆರಿಗೆ ನೋವು ಆಸ್ಪತ್ರೆಗೆ ಹೋಗಬೇಕು ಎಂದಿದಾರೆ. ತಕ್ಷಣವೇ ಎಚ್ಚೆತ್ತ ರಾಜೀವಿ ಅವರು, ಮಹಿಳೆಯನ್ನು ಕರೆದುಕೊಂಡು ಉಡುಪಿಯ ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ಇಬ್ಬರ ಜೀವವನ್ನು ಉಳಿಸಿದ್ದಾರೆ. ಈ ಕುರಿತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಸ್ವತಃ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿಯಿಂದ ಯೋಗಾಸನ

    ಹುಬ್ಬಳ್ಳಿ: ಇಲ್ಲಿನ ರೇಲ್ವೆ ಮೈದಾನದಲ್ಲಿ ನಡೆಯುತ್ತಿರುವ ಯೋಗಗುರು ಬಾಬಾ ರಾಮ್ ದೇವ್ ಅವರ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾಗವಹಿಸಿ ಸ್ವತಃ ತಾಡಾಸನ ಪ್ರದರ್ಶಿಸಿದರು.

    ಉಪರಾಷ್ಟ್ರಪತಿಗಳ ಸಮ್ಮುಖದಲ್ಲಿ ಬಾಬಾ ರಾಮ್ ದೇವ್ ಅವರು ವೃಕ್ಷಾಸನ, ತ್ರಿಕೋನಾಸನ, ಉಷ್ಟ್ರಾಸನ, ವಜ್ರಾಸನ, ಮಂಡೂಕಾಸನ, ಧನುರಾಸನ, ಮರ್ಕಟಾಸನ, ಭುಜಂಗಾಸನ ಮತ್ತಿತರ ಯೋಗಾಸನಗಳನ್ನು ಪ್ರದರ್ಶಿಸಿದರು.

    ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ವಿಆರ್‍ಎಲ್ ಸಮೂಹ ಸಂಸ್ಥೆಗಳ ಎಂ.ಡಿ ಆನಂದ್ ಸಂಕೇಶ್ವರ, ಪತಂಜಲಿ ಯೋಗ ಸಮಿತಿಯ ಭವರಲಾಲ ಆರ್ಯ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.

  • ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳು

    ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳು

    ಹುಬ್ಬಳ್ಳಿ: ನಗರದಲ್ಲಿ ನಡೆಯಲಿರುವ ದೇಶಪಾಂಡೆ ಫೌಂಡೇಶನ್ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಬಿ.ಆರ್.ಟಿ.ಎಸ್ ಸಾರಿಗೆ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಭಾರತೀಯ ವಾಯು ಸೇನೆಯ ವಿಶೇಷ ವಿಮಾನದ ಮೂಲಕ ಇಂದು ಸಂಜೆ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

    ಹುಬ್ಬಳ್ಳಿಗೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವರಾದ ಪ್ರಹ್ಲಾದ್ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪುಸ್ತಕಗಳು, ಶಾಲು ಮತ್ತು ಹೂ ಮಾಲೆ ನೀಡಿ ಬರಮಾಡಿಕೊಂಡಿದ್ದಾರೆ.

    ಈ ವೇಳೆ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ಶಾಸಕ ಅರವಿಂದ ಬೆಲ್ಲದ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಉಪರಾಷ್ಟ್ರಪತಿಗಳಿಂದ ಬಿಆರ್‌ಟಿಸಿ ಲೋಕಾರ್ಪಣೆ!

    ಉಪರಾಷ್ಟ್ರಪತಿಗಳಿಂದ ಬಿಆರ್‌ಟಿಸಿ ಲೋಕಾರ್ಪಣೆ!

    -ನವನಗರದಲ್ಲಿ ಹೈಟೆಕ್ ವ್ಯವಸ್ಥೆ

    ಹುಬ್ಬಳ್ಳಿ: ಮಹಾನಗರಗಳಲ್ಲಿ ಸುಸ್ಥಿರ ನಗರ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ, ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಹೆಚ್.ಡಿ.ಬಿ.ಆರ್.ಟಿ.ಎಸ್. ಹುಬ್ಬಳ್ಳಿ ಧಾರವಾಡ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್‌ಟಿಸಿ) ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ.

    ಉಪರಾಷ್ಟ್ರಪತಿಯವರಾದ ಎಂ.ವೆಂಕಯ್ಯನಾಯ್ಡು ಫೆ.02 ರಂದು ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹಲವು ವಿಶೇಷತೆಗಳಿಂದ ಕೂಡಿರುವ ತ್ವರಿತ ಬಸ್ ಸೇವೆ ಸಾರ್ವಜನಿಕ ವಲಯದ ಮೊದಲ ಅತ್ಯುತ್ತಮ ಪರಿಸರಸ್ನೇಹಿ ಹಾಗೂ ಜನಸ್ನೇಹಿ ವ್ಯವಸ್ಥೆ ಎಂಬ ಹೆಮ್ಮೆಯನ್ನು ತನ್ನದಾಗಿಸಿಕೊಂಡಿದೆ.

    ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ತ್ವರಿತ ಬಸ್ ಸೇವೆಯನ್ನು ಅನುಷ್ಠಾನಗೊಳಿಸುತ್ತಿರುವುದು ಇದೇ ಮೊದಲು. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಸುಸ್ಥಿರ ನಗರ ಸಾರಿಗೆ ಯೋಜನೆ ಹಾಗೂ ಜಾಗತಿಕ ಪರಿಸರ ಸೌಲಭ್ಯ ಮತ್ತು ವಿಶ್ವ ಬ್ಯಾಂಕ್ ಜಂಟಿ ಯೋಜನೆಯಾಗಿ ಸುಮಾರು 970.87 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರದ 624.06 ಕೋಟಿ, ವಿಶ್ವ ಬ್ಯಾಂಕ್ ಸಾಲ 324.32 ಕೋಟಿ, 24.49ಕೋಟಿ ಜಿ.ಇ.ಎಫ್ ಅನುದಾನ ಒಳಗೊಂಡಿದೆ.

    ಯೋಜನೆಯ ದೊಡ್ಡ ಪಾಲಾಗಿ 445.59 ಕೋಟಿ ರೂಪಾಯಿಗಳನ್ನು ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಳಸಲಾಗಿದೆ. 356.82 ಕೋಟಿ ರೂಪಾಯಿಗಳನ್ನು ಭೂ ಸ್ವಾಧೀನ ಹಾಗೂ ಪುನರ್ವಸತಿ ಕಾರ್ಯಕ್ಕೆ ವಿನಿಯೋಗಿಸಲಾಗಿದೆ. 147.97 ಮತ್ತು 24.49 ಕೋಟಿ ರೂಪಾಯಿಗಳನ್ನು ಕ್ರಮವಾಗಿ ಸರಕು ಮತ್ತು ಯಂತ್ರಗಳ ಖರೀದಿ ಮತ್ತು ಸಲಹಾ ಸೇವೆಗಳಿಗೆ ವೆಚ್ಚ ಮಾಡಲಾಗಿದೆ.

    ಹೆಚ್.ಡಿ.ಬಿ.ಆರ್.ಟಿಎಸ್ ಕಂಪನಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (JNURM) ಅಡಿ 100 ಹವಾನಿಯಂತ್ರಿತ ಬಸ್ ಖರೀದಿಸಲಾಗಿದೆ. ಅವಳಿ ನಗರಗಳ ಮಧ್ಯ 32 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೂ 6 ಪಾದಚಾರಿ ಮೇಲು ಸೇತುವೆಗಳು, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇಲ್ಲಿ ಇಂಟರ್ ಚೇಂಜ್, ಬಸ್ ಡಿಪೋ, ಕಚೇರಿ ಮತ್ತು ನಿಯಂತ್ರಣ ಕೇಂದ್ರಗಳಿವೆ. 2.5 ಎಕರೆ ಪ್ರದೇಶದಲ್ಲಿ ಉಪನಗರ ಸಾರಿಗೆ ಸೇವೆ ಒದಗಿಸಲು ಯೋಜಿಸಲಾಗಿದೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ 40 ಬಸ್ ಸಾಮರ್ಥ್ಯದ ಡಿಪೋ ಹಾಗೂ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ 113 ಬಸ್ ಸಾಮರ್ಥ್ಯದ ಡಿಪೋ ನಿರ್ಮಿಸಲಾಗಿದೆ.

    ಐಟಿಎಸ್: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಜಾರಿಗೊಳಿಸಿದೆ. ಸ್ವಯಂಚಾಲಿತ ಟಿಕೆಟ್ ಸಂಗ್ರಹ, ಪ್ರಯಾಣಿಕರಿಗೆ ಬಸ್ ಸಂಚಾರದ ಕುರಿತಾದ ಮಾಹಿತಿ ವ್ಯವಸ್ಥೆ, ಸಿಸಿಟಿವಿ ವಿಡಿಯೋ ವಾಲ್‍ಗಳ ಬೃಹತ್ ಜಾಲ ಹೊಂದಿದೆ.

    ಹಸಿರು ಹೆಚ್.ಡಿ.ಬಿ.ಅರ್.ಟಿ.ಎಸ್: ಯೋಜನೆ ಅನುಷ್ಠಾನಕ್ಕೆ ಸಾವಿರಾರು ಗಿಡಗಳನ್ನು ತೆರವುಗೊಳಿಸಿರುವುದಕ್ಕೆ ಬದಲಾಗಿ ಅವಳಿ ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 25 ಸಾವಿರಕ್ಕೂ ಅಧಿಕ ಗಿಡಗಳನ್ನು ಐದು ವರ್ಷದಲ್ಲಿ ಬೆಳೆಸುವ ಗುರಿ ಹೊಂದಿದೆ. ಈಗಾಗಲೇ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯ ಅನುಷ್ಠಾನಗೊಂಡಿದೆ.

    ಕಾರ್ಯಾಚರಣೆ: ಹೆಚ್.ಡಿ.ಬಿ.ಆರ್.ಟಿ.ಎಸ್ ಯೋಜನೆಯು 2018 ಅಕ್ಟೋಬರ್ 2 ರಿಂದ ಪ್ರಾಯೋಗಿಕವಾಗಿ ಜನರಿಗೆ ಸೇವೆ ಒದಗಿಸುತ್ತಿದೆ. ಹಂತ ಹಂತವಾಗಿ ನೂರು ಬಸ್‍ಗಳು ಪ್ರತಿನಿತ್ಯ 1,204 ಟ್ರಿಪ್‍ಗಳಲ್ಲಿ ಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿರುವುದರಿಂದ ನಗರದ ಸಂಚಾರ ದಟ್ಟಣೆ ತಗ್ಗಿದೆ. ಇದರಿಂದ ಪರಿಸರಕ್ಕೆ ಸಾಕಷ್ಟು ಲಾಭವಾಗುತ್ತಿದೆ. ಇಂಧನ ಬಳಕೆ ಇಳಿಮುಖವಾಗಿದೆ. ಈ ಸೇವೆಯಿಂದ ಸಾರ್ವಜನಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಪತ್ರಿನಿತ್ಯ ಟಿಕೆಟ್ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.

    ಮೆಟ್ರೋಗಿಂತ ಕಡಿಮೆ ವೆಚ್ಚ: ಬಿ.ಆರ್.ಟಿ.ಎಸ್. ಹಲವು ವಿಚಾರದಲ್ಲಿ ಮೆಟ್ರೋ ಸೇವೆಗಿಂತ ಅತ್ಯಂತ ಕಡಿಮೆ ಖರ್ಚಿನದಾಗಿದೆ. ಮೆಟ್ರೋ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ರಿಂದ 400 ಕೋಟಿ ರೂ. ವೆಚ್ಚ ತಗುಲಿದರೆ, ಬಿ.ಆರ್.ಟಿ.ಎಸ್ ನಲ್ಲಿ ಈ ವೆಚ್ಚ ಪ್ರತಿ ಕಿ.ಮೀ.ಗೆ 25 ರಿಂದ 30 ಕೋಟಿ ರೂಪಾಯಿಗಳಾಗುತ್ತಿದೆ. ನಿರ್ವಹಣಾ ವೆಚ್ಚವೂ ಮೆಟ್ರೋಗಿಂತ ಶೇ.90 ರಷ್ಟು ಕಡಿಮೆ. ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಲಕ್ನೋ ನಗರದ ಬಿ.ಆರ್.ಟಿ.ಎಸ್. ಪ್ರತಿನಿತ್ಯ 60 ರಿಂದ 70 ಸಾವಿರ ಜನರಿಗೆ ಸೇವೆ ನೀಡುತ್ತಿದ್ದರೆ, ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್ 1 ಲಕ್ಷ ಜನರಿಗೆ ಸೇವೆ ಒದಗಿಸುತ್ತಿದೆ.

    ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆಯನ್ನು ಬಿ.ಆರ್.ಟಿ.ಎಸ್ ಮೂಲಕ ಜನರಿಗೆ ನೀಡಲಾಗುತ್ತಿದೆ. ಬಿ.ಎಂ.ಟಿ.ಸಿ ನಗರ ಸಾರಿಗೆಯಲ್ಲಿ ಎ.ಸಿ. ಬಸ್‍ಗಳಲ್ಲಿ ಪ್ರತಿ ಕಿ.ಮೀ.ಗೆ 3 ರೂಪಾಯಿ 72 ಪೈಸೆ ದರ ವಿಧಿಸಲಾಗುತ್ತಿದೆ. ಬಿ.ಆರ್.ಟಿ.ಎಸ್‍ನಲ್ಲಿ ಪ್ರತಿ ಕಿ.ಮೀ. 1 ರೂಪಾಯಿ 18 ಪೈಸೆ ದರ ನಿಗದಿ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ಲಭಿಸುತ್ತಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಯಾವುದೇ ನಷ್ಟ ಹಾಗೂ ಲಾಭಗಳಿಲ್ಲದೆ ನಡೆಸಲಾಗುತ್ತಿದೆ.

  • ವಿಧಾನಸಭೆ ಆಯ್ತು ಈಗ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲೂ ಟಗರುಗಳ ಕಾಳಗ

    ವಿಧಾನಸಭೆ ಆಯ್ತು ಈಗ ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲೂ ಟಗರುಗಳ ಕಾಳಗ

    – ಜಿ.ಪಂ ಅಧ್ಯಕ್ಷೆ, ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಗೆ ನಿರ್ಧಾರ

    ತುಮಕೂರು: ವಿಧಾನಸಭೆ ಒಳಗೆ ಮತ್ತು ಹೊರಗೆ ಒಂದೇ ಸಮುದಾಯಕ್ಕೆ ಸೇರಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಶಾಸಕ ಹೆಚ್.ವಿಶ್ವನಾಥ್ ನಡುವಿನ ಮಾತಿನ ಸಮರ ಒಂದು ರೀತಿ ಟಗರು ಕಾಳಗದಂತಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ಇತ್ತ ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿರುವ ಕುರುಬ ಸಮುದಾಯದ ಲತಾ ರವಿ ಕುಮಾರ್ ವಿರುದ್ಧ ಅವರ ಸಮುದಾಯದ ಸದಸ್ಯರೇ ತಿರುಗಿ ಬಿದ್ದಿದ್ದು, ಇದು ಕೂಡ ಒಂದು ರೀತಿ ಟಗರು ಕಾಳಗದಂತೆ ಪರಿಣಮಿಸಿದೆ.

    ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಐದು ವರ್ಷಗಳ ಕಾಲ ಬದಲಾಗದಂತೆ ನಿಯಮ ರೂಪಿಸಲಾಗಿದೆ. ಆದರೆ ಸ್ಥಳೀಯವಾಗಿ ಉಭಯ ಪಕ್ಷಗಳ ಮುಖಂಡರ ಒಪ್ಪಂದದಂತೆ ಅಧಿಕಾರವನ್ನ ಅನುಕೂಲಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗುತ್ತಿದೆ. ಅದರಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿ ತುಮಕೂರು ಜಿಲ್ಲಾಪಂಚಾಯ್ತಿ ಅಧಿಕಾರವನ್ನ ಹಿಡಿದಿವೆ. ಬಿಸಿಎಂ(ಎ)ಗೆ ಮೀಸಲಾಗಿದ್ದ ತುಮಕೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನ ಕುರುಬ ಸಮುದಾಯದ ತಾವರೇಕೆರೆ ಕ್ಷೇತ್ರದ ಜೆಡಿಎಸ್‍ನ ಲತಾ ರವಿಕುಮಾರ್ ಅವರಿಗೆ ನೀಡಲಾಗಿದೆ. ಎಸ್‍ಸಿ ಮೀಸಲಾತಿಯ ಉಪಾಧ್ಯಕ್ಷ ಸ್ಥಾನವನ್ನ ಹೆಗ್ಗೆರೆ ಕ್ಷೇತ್ರದ ಬಿಜೆಪಿಯ ಶಾರದ ನರಸಿಂಹ ಮೂರ್ತಿಗೆ ನೀಡಲಾಗಿದ್ದು, ಇಬ್ಬರೂ ನಾಲ್ಕು ವರ್ಷ ಪೂರೈಸಿದ್ದಾರೆ. ಇನ್ನುಳಿದ ಒಂದು ವರ್ಷಕ್ಕಾದರೂ ಬೇರೆಯವರಿಗೆ ಅಧಿಕಾರ ಸಿಗಲೆಂದು ಉಭಯ ಪಕ್ಷಗಳ ಕೆಲ ಸದಸ್ಯರು ಪಕ್ಷಾತೀತವಾಗಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ.

    ಕುರುಬ ಸಮುದಾಯದ ಸದಸ್ಯರಿಂದಲೇ ಸಹಿ ಸಂಗ್ರಹ:
    ಅಧ್ಯಕ್ಷ ಉಪಾಧ್ಯಕ್ಷರ ವಿರುದ್ದದ ಅವಿಶ್ವಾಸ ನಿರ್ಣಯದ ಪತ್ರಕ್ಕೆ ಸಹಿ ಸಂಗ್ರಹ ಮಾಡಲಾಗುತ್ತಿದೆ. ಈ ಸಹಿ ಸಂಗ್ರಹದ ನೇತೃತ್ವವನ್ನ ಕುರುಬ ಸಮುದಾಯ ಸದಸ್ಯರೇ ವಹಿಸಿದ್ದಾರೆ. ಪುರವರ ಕ್ಷೇತ್ರದ ತಿಮ್ಮಣ್ಣ, ಹುಳಿಯಾರು ಕ್ಷೇತ್ರದ ವೈ.ಸಿ ಸಿದ್ದರಾಮಣ್ಣ, ಹೊನ್ನವಳ್ಳಿ ಕ್ಷೇತ್ರದ ನಾರಾಯಣ್ ಇತರೇ ಅತೃಪ್ತ ಸದಸ್ಯರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ್ದ ಹನ್ನೊಂದು ಮಂದಿ ಸದಸ್ಯರು ಈ ಬಾರಿಯಾದರೂ ಅವಿಶ್ವಾಸ ಮಂಡನೆ ಮಾಡಿ ಉಳಿದ ಒಂದು ವರ್ಷದ ಅವಧಿಗೆ ಬೇರೆಯವರನ್ನ ಆಯ್ಕೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದು ಸಹಿ ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗದಿದ್ದರೂ ಎರಡೂ ಸ್ಥಾನಗಳನ್ನ ಮಹಿಳಾ ಸದಸ್ಯರಿಗೆ ನೀಡಿರೋದು ಇತರೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಈ ಹಿಂದೆ ಎರಡು ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧಾರ ಮಾಡಿದ್ದರು. ಈಗ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಸದಸ್ಯರ ಜೊತೆ ವಿಶ್ವಾಸದಿಂದ ಇಲ್ಲ ಎಂಬ ನೆಪವೊಡ್ಡಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದು, ಜೆಡಿಎಸ್‍ನ 13 ಮಂದಿ ಬಿಜೆಪಿಯ 5, ಕಾಂಗ್ರೆಸ್ಸಿನ ಇಬ್ಬರು ಸದಸ್ಯರು ಸಹಿ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಗುರುವಾರ ಸಾಮಾನ್ಯ ಸಭೆ ಕರೆಯಲಾಗಿದ್ದು, ಬಹುತೇಕ ಸದಸ್ಯರು ಸಭೆಯನ್ನ ಬಹಿಷ್ಕರಿಸಲಿದ್ದಾರೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರ ಪತನದ ಬಳಿಕ ರಾಜ್ಯ ಮಟ್ಟದಲ್ಲಿ ಉಭಯ ಪಕ್ಷಗಳ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನ ಜಿಲ್ಲಾ ನಾಯಕತ್ವ ವಹಿಸಿಕೊಂಡಿದ್ದ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಆ್ಯಂಡ್ ಟೀಂ ಈಗಾಗಲೇ ಜೆಡಿಎಸ್‍ನಿಂದ ಒಂದು ಹೆಜ್ಜೆ ಹೊರಗಿಟ್ಟಿದೆ. ಬಿಜೆಪಿ ನಾಯಕರಲ್ಲೂ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಸದಸ್ಯರುಗಳೇ ಈ ನಿರ್ಧಾರಕ್ಕೆ ಬಂದಿದ್ದಾರೆ.

    ಮೂಲಗಳ ಪ್ರಕಾರ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿಯೇ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ಮಂಡನೆಗೆ ಸಾಥ್ ನೀಡುತ್ತಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಗೊಂದಲ, ಗದ್ದಲಕ್ಕೆ ಉಭಯ ಪಕ್ಷಗಳ ವರಿಷ್ಠರೇ ತೆರೆ ಎಳೆಯುತ್ತಾರಾ ಅಥವ ಹೈಕಮಾಂಡ್‍ಗೆ ಸೆಡ್ಡು ಹೊಡೆದು ಅತೃಪ್ತ ಸದಸ್ಯರು ತಮ್ಮ ಗುರಿ ಸಾಧಿಸುತ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ.

  • ಮಾತೃ ಭೂಮಿ, ಭಾಷೆ ಮರೆಯಬೇಡಿ- ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಕರೆ

    ಮಾತೃ ಭೂಮಿ, ಭಾಷೆ ಮರೆಯಬೇಡಿ- ವಿದ್ಯಾರ್ಥಿಗಳಿಗೆ ವೆಂಕಯ್ಯನಾಯ್ಡು ಕರೆ

    – ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಉಪರಾಷ್ಟ್ರಪತಿ

    ಮೈಸೂರು/ಮಂಗಳೂರು: ಜೆ.ಎಸ್.ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಕನ್ನಡದಲ್ಲೇ ಭಾಷಣ ಆರಂಭಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಹೆಚ್ಚು ಸಂತಸ ತಂದಿದೆ ಎಂದರು. ಅಲ್ಲದೇ ಮೊದಲು ಶಿಕ್ಷಣ ಮುಗಿಸಿ ದೇಶದಲ್ಲೇ ಸೇವೆ ಸಲ್ಲಿಸಿ ಎಂದು ಹೇಳುತ್ತಿದ್ದೇವು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಈಗ ನೀವು ಬೇಕಾದರೆ ಬೇರೆ ಬೇರೆ ದೇಶದಲ್ಲಿ ಕೆಲಸ ಮಾಡಿ. ಆದರೆ ಮಾತೃ ಭೂಮಿ, ಮಾತೃಭಾಷೆ ಮಾತ್ರ ಮರೆಯಬೇಡಿ. ವಿದೇಶಗಳಿಗೆ ತೆರಳಿ ಸಾಧನೆ ಮಾಡಿ ಮತ್ತೆ ದೇಶಕ್ಕೆ ಬಂದು ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.

    ಇದಕ್ಕೂ ಮುನ್ನ ಮಂಗಳೂರಿನ ಸುರತ್ಕಲ್ ಎನ್‌ಟಿಕೆ ಇಂಜಿನಿಯರಿಂಗ್ ಕಾಲೇಜಿನ 17ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದೆಲ್ಲೆಡೆ ಹಿಂದಿ ಹೇರಿಕೆ ವಿಚಾರ ರಾದ್ಧಾಂತ ಸೃಷ್ಟಿಸಿರುವಾಗಲೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾತೃಭಾಷೆಯ ಪರವಾಗಿ ಬ್ಯಾಟಿಂಗ್ ಮಾಡಿದರು. ನಾವು ಎಷ್ಟೇ ಎತ್ತರಕ್ಕೆ ಮುಟ್ಟಿದರೂ, ತಾಯಿಭಾಷೆ ಮರೆಯಬಾರದು. ಮನೆಯಲ್ಲಿ ಹಾಗೂ ನೆರೆಹೊರೆಯವರಲ್ಲಿ ಮಾತೃಭಾಷೆಯಲ್ಲೇ ಮಾತಾಡಬೇಕು. ಮಾತೃಭಾಷೆ ನಮ್ಮ ಕಣ್ಣಿನ ದೃಷ್ಟಿಯಿದ್ದಂತೆ. ಪರಭಾಷೆ ಕನ್ನಡಕ ಇದ್ದಂತೆ ಎಂದು ಹೇಳಿದರು.

    ಹೈಸ್ಕೂಲ್ ವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು. ಯಾವುದೇ ಭಾಷೆ ಇರಲಿ, ಕೀಳರಿಮೆ ಬೇಡ. ಹಾಗೆಯೇ ಇತರ ಭಾಷೆಗಳ ಬಗ್ಗೆ ತೆಗಳಿಕೆಯನ್ನೂ ಇಟ್ಟುಕೊಳ್ಳದಿರಿ. ಜ್ಞಾನ ಎಲ್ಲೆಡೆಯಿಂದ ಬರಲಿ ಎನ್ನುವಂತೆ ವ್ಯವಹಾರಕ್ಕಷ್ಟೇ ಇತರ ಭಾಷೆಗಳಿರಲಿ ಎಂದು ಸಲಹೆ ನೀಡಿದರು. ಇನ್ನು ಯುವಕರು ದೈಹಿಕವಾಗಿಯೂ ಸದೃಢರಾಗಬೇಕು. ನನಗೆ 70 ವರ್ಷ ಆದರೂ ಈಗಲೂ ಒಂದು ಗಂಟೆ  ಬ್ಯಾಡ್ಮಿಂಟನ್ ಆಡುತ್ತೇನೆ ಎಂದು ತಮ್ಮ ಫಿಟ್ನೆಸ್ ಗುಟ್ಟನ್ನು ಬಿಚ್ಚಿಟ್ಟರು.

  • ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

    ಶಂಕಿತ ಉಗ್ರರ ಗುಂಡಿನ ದಾಳಿಗೆ ಬಿಜೆಪಿ ಹಿರಿಯ ಮುಖಂಡ ಬಲಿ

    ಶ್ರೀನಗರ: ಶನಿವಾರ ಮೂರು ಜನ ಶಂಕಿತ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಬಿಜೆಪಿ ಹಿರಿಯ ಮುಖಂಡ ಗುಲ್ ಮಹಮ್ಮದ್ ಮಿರ್ ಬಲಿಯಾಗಿದ್ದಾರೆ.

    ಅನಂತ್ ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿದ್ದ ಗುಲ್ ಮಹಮ್ಮದ್ ಮಿರ್ ಅವರನ್ನು ಕಾರು ಕೀ ಕೇಳುವ ನೆಪದಲ್ಲಿ ಮನೆಗೆ ಬಂದ 3 ಜನ ಶಂಕಿತ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಎದೆಗೆ ಗುಂಡು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಕಾಶ್ಮೀರದಲ್ಲಿ “ಅಟಲ್” ಎಂದೆ ಖ್ಯಾತಿಯಾಗಿದ್ದ ಗುಲ್ ಅವರಿಗೆ ಭದ್ರತೆಯನ್ನು ನೀಡಲಾಗಿತ್ತು. ಅದರೆ ಕೆಲವು ದಿನಗಳ ಹಿಂದೆ ಅವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ನೇತೃತ್ವದ ರಾಜ್ಯ ಆಡಳಿತ ಹಿಂಪಡೆದಿತ್ತು. ಹೀಗೆ ಹಿಂಪಡೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು ರಾಜ್ಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಗುಲ್ ಮಹಮ್ಮದ್ ಕುಟುಂಬದವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುತ್ತಿರುವ ಮತ್ತು ಮುಗ್ಧ ಜನರನ್ನು ಕೊಲ್ಲುತಿರುವ ಉಗ್ರರನ್ನು ಹತ್ಯೆಮಾಡಬೇಕು ಎಂದು ಅಗ್ರಹಿಸಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಪ್ರಧಾನಿ ಮೋದಿ ಅವರು, ಹಿರಿಯ ಬಿಜೆಪಿ ನಾಯಕನ ಕೊಲೆಯನ್ನು ಖಂಡಿಸಿದ್ದಾರೆ. ಇಂತಹ ಹಿಂಸೆಗೆ ನಮ್ಮ ದೇಶದಲ್ಲಿ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ.

    ಪಿಡಿಪಿ ಮುಖ್ಯಸ್ಥೆ ಮೆಹಬೂಬ್ ಮಫ್ತಿಯವರು ಹಿರಿಯ ಬಿಜೆಪಿ ಮುಖಂಡ ಗುಲ್ ಮಹಮ್ಮದ್ ಮಿರ್ ಅವರ ಹತ್ಯೆಯನ್ನು ನಾನು ಖಂಡಿಸುತ್ತೇನೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಕೊಡಲಿ ಎಂದು ಸಂತಾಪ ಸೂಚಿಸಿದ್ದಾರೆ.

  • ಬಿಜೆಪಿ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್‍ಕುಮಾರ್ ಆಯ್ಕೆ

    ಬಿಜೆಪಿ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್‍ಕುಮಾರ್ ಆಯ್ಕೆ

    ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ನೀಡುವ ಮೂಲಕ ಭಿನ್ನಮತ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ.

    ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲು ನನಗೆ ಬಹಳ ಸಂತೋಷವಾಗುತ್ತದೆ. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಕೈ ತಪ್ಪಿದ ಟಿಕೆಟ್:
    ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ದಕ್ಕಿತ್ತು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿನಿ ಅನಂತ್ ಕುಮಾರ್, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಾವು ನಿಂತಿದ್ದೇವೆ. ದೇಶ ಮೊದಲು, ಪಕ್ಷ ನಂತರ ಹಾಗೂ ನಮ್ಮ ಸ್ವಂತ ಹಿತಾಶಕ್ತಿಗಳು ಕೊನೆಯಲ್ಲಿ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ. ನಾವು ಮದುವೆಯಾದಗಿನಿಂದ ಪಕ್ಷ ಕಟ್ಟುವ ಕೆಲಸದಲ್ಲಿ ನಿರತಗಳಾಗಿದ್ದೇನೆ. ಒಂದೊಂದು ಸಲ ನಮಗೆ ಅಸಮಾಧಾನ ಆಗಿರುತ್ತದೆ. ಆದರೆ ಈಗ ನಮ್ಮ ಪ್ರಬುದ್ಧತೆಯನ್ನು ತೋರಿಸುವ ಸಮಯ ಬಂದಿದೆ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದಾಗ ಸಹಜವಾಗಿ ಎಲ್ಲರಲ್ಲೂ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕಿಂತ ಪಕ್ಷದ ಮುಖಂಡರ ತೀರ್ಮಾನವೇ ದೊಡ್ಡದಾಗಿದೆ. ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕಾರ್ಯಕರ್ತರು ಕೂಡ ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದ್ದರು.

    ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದಿದ್ದರು.